ಲೇಖಕರಾದ ವಿಠಲ್ ಶೆಣೈ ಅವರ ಸ್ಯಮಂತಕ ಅನ್ವೇಷಣಾ ಕಾದಂಬರಿಯಾಗಿದ್ದು, ಈ ಕಾದಂಬರಿಯ ಕುರಿತು ಪತ್ತೇದಾರಿ ಕಾದಂಬರಿಕಾರರಾದ ನಾಗೇಶ ಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಪೂರ್ತಿಯಾಗಿ ಓದಿ…
ಪುಸ್ತಕ: ಸ್ಯಮಂತಕ
ಲೇಖಕರು : ವಿಠಲ್ ಶೆಣೈ
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಶನ್
ಬೆಲೆ : ೨೨೫.೦೦
ಒಂದು ವಜ್ರ, ಹಲವು ಸಾಮ್ರಾಜ್ಯ ಮತ್ತು ಬೆನ್ನಟ್ಟಿ ಬಂದ ದುರಂತಗಳ ಚರಿತ್ರೆ ಮತ್ತದರ ತಾರ್ಕಿಕ ಅಂತ್ಯ, ಇದುವೇ ವಿಠಲ್ ಶೆಣೈ ಅವರ ಹೊಸ ಅನ್ವೇಷಣಾ ಕಾದಂಬರಿ ಸ್ಯಮಂತಕ.
ಶ್ರೀ ಕೃಷ್ಣನ ಕಾಲದ್ದೆನ್ನಲಾದ ಸ್ಯಮಂತಕ ಮಣಿ/( ಶ್ಯಮಂತಕ ಅಲ್ಲವೆನ್ನುತ್ತಾರೆ ಲೇಖಕರು) ವಜ್ರದ ಚರಿತ್ರೆಯನ್ನು ಬಹಳ ವಿಸ್ತೃತವಾಗಿ ಮತ್ತು ಲಭ್ಯವಿರುವ ಅಧಿಕೃತ/ ಪೌರಾಣಿಕ ನೆಲೆಯ ಮಾಹಿತಿ ಆಧರಿಸಿ ವಿಠಲ್ ಈ ಕಾದಂಬರಿ ಬರೆದಿದ್ದಾರೆ.

ಅವರ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕತೆ ಕಥೆಯ ವಿಸ್ತಾರದಲ್ಲಿ ಎದ್ದು ಕಾಣುತ್ತದೆ. ತಕ್ಕ ಉಲ್ಲೇಖಗಳನ್ನು ಕೊನೆಯ ಪುಟದಲ್ಲಿ ನೀಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಕೊಹಿನೂರ್ ಎಂದೇ ಪ್ರಸಿಧ್ದವಾದ ವಜ್ರ ತನ್ನ ಒಡೆತನ ಇದ್ದ ರಾಜ ಮಹಾರಾಜರಿಗೂ, ರಾಜ್ಯಗಳಿಗೂ ದುಃಖಕರ ವಿಪತ್ತು, ದುರದೃಷ್ಟ ತರುತ್ತಲೇ ಹೋಗುತ್ತದೆ. ಆದರೂ ಆ ಅಮೂಲ್ಯ ವಜ್ರವನ್ನು ತಮ್ಮದಾಗಿಸಿಕೊಳ್ಳಲು ಚರಿತ್ರೆಯ ಎಲ್ಲ ನಾಯಕರೂ ಮುಗಿಬೀಳುತ್ತಾರೆ. ರಕ್ತಸಿಕ್ತ ಚರಿತ್ರೆಯ ಈ ವಜ್ರವನ್ನು ವಾಪಸು ಅದರ ತವರಾದ ಭಾರತಕ್ಕೆ ತರಲು ಸರಕಾರ ಯೋಜಿಸುತ್ತದೆ.
ಅದರ ನಂತರ ರಾಜಕೀಯ ಒಳಸುಳಿಗಳು, ತಂತ್ರ ಕುತಂತ್ರಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ.

ಅಂತರದೇಶೀಯ ಕೇಸು ದಾಖಲಾಗುತ್ತದೆ. ಅವೆಲ್ಲ ಬಹಳ ಕುತೂಹಲಕಾರಿಯಾಗಿದೆ. ಅಂತ್ಯದಲ್ಲಿ ಸ್ವಲ್ಪ ನಂಬಲು ಕಷ್ಟವಾದರೂ ವಿಸ್ಮಯಕಾರಿಯಾದ ಒಂದು ‘ವೈಜ್ಞಾನಿಕ ಸೂತ್ರ ಮತ್ತು ವಿಧಾನ ‘ ಬಳಸಿ ಕಥೆಯನ್ನು ಚುರುಕಾಗಿ ಪೂರ್ಣಗೊಳಿಸಿದ್ದಾರೆ. ಇದಕ್ಕಿಂತ ಹೆಚ್ಚು ಕಥೆಯ ಬಗ್ಗೆ ಹೇಳಿದರೆ ಆಸಕ್ತಿ ಭಂಗವಾಗಿ ಗುಟ್ಟು ರಟ್ಟಾದೀತು! ಒಂದು ಭಾರತೀಯ ಮಿಸ್ಟರಿ ವಜ್ರದ ಈ ಕಥೆಯನ್ನು ಖಂಡಿತಾ ಓದುಗರೆಲ್ಲ ಪ್ರೋತ್ಸಾಹಿಸಿ ಓದಿ.
ನಿಮ್ಮ ಸಮಯ ಮತ್ತು ಅದಕ್ಕೆ ನೀಡುವ ನ್ಯಾಯ ಬೆಲೆಗೆ ಮೋಸವಾಗದು. ಒಟ್ಟಾರೆ ಮನರಂಜನೀಯವಾಗಿದೆ.
ಅಭಿನಂದನೆಗಳು ವಿಠಲ್…
- ನಾಗೇಶ ಕುಮಾರ್ – ಪತ್ತೇದಾರಿ ಕಾದಂಬರಿಕಾರರು, ಬೆಂಗಳೂರು.
