ಬಸವಣ್ಣನವರು ನಿಜವಾದ ಭಕ್ತಿ ಎಂದರೆ ದೂರದ ದೊಡ್ಡ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದಲ್ಲ, ಮನುಷ್ಯ ಮನುಷ್ಯನನ್ನು ಪೂಜಿಸುವುದು, ಜ್ಞಾನದ ಬೆಳಕನ್ನು ಪಸರಿಸುವುದು ಎಂದು ತಿಳಿಸಿದರು. ಅದಕ್ಕಾಗಿಯೇ 12ನೇ ಶತಮಾನದ ಶರಣರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ಕೊಟ್ಟರು. ದಾಸೋಹ ತತ್ವಗಳ ಕುರಿತು ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
೧೨ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ವಚನ ಕ್ರಾಂತಿಯನ್ನೇ ಸೃಷ್ಟಿಸಿದ ಬಸವಾದಿ ಶರಣರ ವಚನಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿವೆ. ಅಂತಹ ವಚನಗಳಲ್ಲಿ ಬಸವಣ್ಣನವರ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ಸಾಲು ಕೇವಲ ಒಂದು ವಾಕ್ಯವಲ್ಲ, ಇಡೀ ಮಾನವಕುಲಕ್ಕೆ ನೀಡಿದ ಅಮೂಲ್ಯವಾದ ಜೀವನ ಸಂದೇಶವಾಗಿದೆ.
ಉಳ್ಳವರು ಶಿವಾಲಯ
ಮಾಡುವರು
ನಾನೇನು ಮಾಡಲಿ
ಬಡವನಯ್ಯ
ಎನ್ನ ಕಾಲೇ ಕಂಬ,
ದೇಹವೇ ದೇಗುಲ
ಶಿರವೇ ಹೊನ್ನ
ಕಳಶವಯ್ಯ
ಕೂಡಲಸಂಗಮದೇವ
ಕೇಳಯ್ಯ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ಆ ಕಾಲದಲ್ಲಿ ಶ್ರೀಮಂತರು, ರಾಜ ಮಹಾರಾಜರು ತಮ್ಮ ಪ್ರತಿಷ್ಠೆ ಮತ್ತು ಪುಣ್ಯ ಸಂಪಾದನೆಗಾಗಿ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿ, ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುತ್ತಿದ್ದರು. ಆದರೆ ಅಲ್ಲಿ ಸಾಮಾನ್ಯ ಜನರಿಗೆ, ಬಡವರಿಗೆ ಪ್ರವೇಶವಿರಲಿಲ್ಲ. ಅದನ್ನು ಕಂಡ ಬಸವಣ್ಣನವರು ದೇವಾಲಯದ ಮೂರ್ತಿ ಪೂಜೆ, ಗುಡಿ ಸಂಪ್ರದಾಯದ ಬಡವ-ಶ್ರೀಮಂತ ಭೇದವನ್ನು ಖಂಡಿಸಿ, ಬಡವರ ಪರವಾಗಿ, ಶೋಷಿತರ ಪರವಾಗಿ ನಿಂತು ಈ ವಚನವನ್ನು ರಚಿಸಿದರು.
ಈ ವಚನದಲ್ಲಿ ಬರುವ ಸ್ಥಾವರ ಮತ್ತು ಜಂಗಮ ಎಂಬ ಎರಡು ಪದಗಳಿಗೆ ಅತ್ಯಂತ ಆಳವಾದ ಅರ್ಥವಿದೆ.
ಸ್ಥಾವರ ಎಂದರೆ ಒಂದೇ ಕಡೆ ನಿಂತಿರುವುದು, ಚಲನೆಯ ಶಕ್ತಿ ಇಲ್ಲದಿರುವುದು, ಜಡವಾದದ್ದು. ಇಲ್ಲಿ ಬಸವಣ್ಣನವರು ಕಲ್ಲು, ಮಣ್ಣು, ಇಟ್ಟಿಗೆಯಿಂದ ಕಟ್ಟಿದ ಭವ್ಯ ದೇವಾಲಯಗಳನ್ನು, ಅಲ್ಲಿರುವ ದೇವರ ಮೂರ್ತಿಯನ್ನು ಸ್ಥಾವರಕ್ಕೆ ಹೋಲಿಸಿದ್ದಾರೆ.
ಜಂಗಮ ಎಂದರೆ ಸದಾ ಚಲನೆಯುಕ್ತವಾದದ್ದು, ಜೀವಂತವಾಗಿರುವುದು, ನಿರಂತರವಾಗಿ ಹರಿಯುವುದು.
ಎಷ್ಟೇ ಭವ್ಯವಾದ ದೇವಾಲಯವಾದರೂ ಅದು ಒಂದು ದಿನ ನಶಿಸಲೇಬೇಕು. ಒಂದೇ ಕಡೆ ನಿಂತ ನೀರು ಕೊಳೆಯುವಂತೆ, ಒಂದೇ ಚೌಕಟ್ಟಿನಲ್ಲಿ ಬಂಧಿಯಾದ ಆಚಾರ-ವಿಚಾರಗಳು, ಸಂಪ್ರದಾಯಗಳು, ಕಟ್ಟುಪಾಡುಗಳೂ ಕಾಲಕ್ರಮೇಣ ಮಂಕಾಗುತ್ತವೆ.
ಆದರೆ ಜಂಗಮ ಎಂದರೆ ಕೇವಲ ಒಂದು ಜಾತಿ ಅಥವಾ ಪಂಗಡವಲ್ಲ. ಅದು ಚಲನಶೀಲ ಚೈತನ್ಯ. ನುಡಿದಂತೆ ನಡೆಯುವ, ಸಮಾಜದ ಒಳಿತಿಗಾಗಿ ಜ್ಞಾನದ, ಅರಿವಿನ ಬೆಳಕನ್ನು ಹಂಚುತ್ತ ಸಂಚರಿಸುವ ಪ್ರತಿಯೊಬ್ಬ ವ್ಯಕ್ತಿಯೂ ಜಂಗಮನೇ. ಈ ಜೀವಪರ, ಜನಪರ ಚೈತನ್ಯಕ್ಕೆ ಸಾವಿಲ್ಲ, ಅದು ಸದಾಕಾಲ ಶಾಶ್ವತವಾಗಿ ಇರುತ್ತದೆ ಎಂದು ಬಸವಣ್ಣನವರು ವಚನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಎಂಬ ಮಾತಿನಂತೆ, ಬಸವಣ್ಣನವರು ದೇವರನ್ನು ಅಲ್ಲಿ ಇಲ್ಲಿ ಹುಡುಕಬೇಡ, ನಿನ್ನ ದೇವರು ನಿನ್ನಲ್ಲೇ ಇದ್ದಾನೆ ಎಂದು ಹೇಳಿದರು. ನಿನ್ನ ಕಾಲುಗಳೇ ದೇವಾಲಯದ ಕಂಬಗಳು, ನಿನ್ನ ತಲೆಯೇ ದೇವಾಲಯದ ಹೊನ್ನ ಕಳಶ. ಇಡೀ ಮನುಷ್ಯನ ದೇಹವೇ ದೇವಾಲಯ, ನಿನ್ನಲ್ಲಿರುವ ಆತ್ಮ ಚೈತನ್ಯವೇ ದೇವರ ಸ್ವರೂಪ.
ಮನುಷ್ಯ ದೇಹವನ್ನು ಮಲಿನ, ಮಾಯೆ, ಪಾಪದ ಕೂಪವೆಂದು ಬಿಂಬಿಸಲಾಗುತ್ತಿದ್ದ ಕಾಲದಲ್ಲಿ, ಅದೇ ದೇಹವನ್ನು ಬಸವಣ್ಣನವರು ದೇವಾಲಯವೆಂದು ಎತ್ತಿ ಹಿಡಿದರು. ದೇಹ ದೇವಾಲಯವಾಗಬೇಕಾದರೆ ಅದು ಪರಿಶುದ್ಧವಾಗಿರಬೇಕು. ನಾವು ತಿನ್ನುವ ಆಹಾರ ಸಾತ್ವಿಕವಾಗಿ, ಶುದ್ಧವಾಗಿರಬೇಕು. ನುಡಿ-ನಡೆ ಶುದ್ಧವಾಗಿರಬೇಕು. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಅವರು ಪ್ರತಿಪಾದಿಸಿದರು.
“ಉಳ್ಳವರು ಶಿವಾಲಯ ಮಾಡುವರು” ಎಂಬ ವಚನ ಕೇವಲ ಭಕ್ತಿಯ ವಚನವಲ್ಲ, ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಬಿಂಬಿಸುವ ವಚನವೂ ಹೌದು. ಉಳ್ಳವರು ದೇವಾಲಯ ಕಟ್ಟಬಹುದು, ಆದರೆ ಬಡವನ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವೇ? ಭಕ್ತಿಯಲ್ಲಿ ಬಡವ-ಬಲ್ಲಿದ ಎಂಬ ಜಾತಿ ಭೇದದ ಅಳತೆಗೋಲಿಲ್ಲ. ಇಲ್ಲಿ ಭಕ್ತಿಯೊಂದೇ ಅಳತೆಗೋಲು. ಅದುವೇ ಪರಿಶುದ್ಧ, ಪ್ರಾಮಾಣಿಕ ಕಾಯಕ ಮತ್ತು ದಾಸೋಹ ತತ್ವ.
ಅದಕ್ಕಾಗಿಯೇ ಕಲ್ಯಾಣ ನಾಡಿನ ಮಾದಿಗ, ಹಾರುವ, ಬ್ರಾಹ್ಮಣ, ಮಡಿವಾಳ, ಅಂಬಿಗ ಮುಂತಾದ ಶರಣರು ಯಾವುದೇ ಜಾತಿ ಭೇದವಿಲ್ಲದೆ ತಮ್ಮ ತಮ್ಮ ಕಾಯಕ-ದಾಸೋಹ ಮಾಡುತ್ತ, ಅನುಭವ ಮಂಟಪದಲ್ಲಿ ಕುಳಿತು ಅನುಭಾವ ನೀಡುವ ಮೂಲಕ ಸಾಮಾಜಿಕ, ಧಾರ್ಮಿಕ ಚಿಂತನೆ ಮಾಡುತ್ತಿದ್ದರು.
ಆತ್ಮೀಯರೇ, ನಾವು ಇಂದು ಸ್ಥಾವರ ಯುಗದಲ್ಲಿದ್ದೇವೆ. ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಸುತ್ತಿದ್ದೇವೆ, ಆಡಂಬರದ ಜೀವನಶೈಲಿಗೆ ಒಗ್ಗಿಕೊಂಡು ವಿನಾಕಾರಣ ದುಂದು ವೆಚ್ಚ ಮಾಡುತ್ತಿದ್ದೇವೆ, ದೂರದ ದೊಡ್ಡ ಪ್ರಖ್ಯಾತ ದೇವಾಲಯಗಳಿಗೆ ಹೋಗುವುದನ್ನೇ ಭಕ್ತಿ ಎಂದು, ಅದೇ ನಮ್ಮ ಧರ್ಮವೆಂದು ತಿಳಿದುಕೊಂಡು ಮತಿಹೀನರಾಗಿದ್ದೇವೆ.
ಇದನ್ನೆಲ್ಲ ಮನಗಂಡ ಬಸವಣ್ಣನವರು ನಿಜವಾದ ಭಕ್ತಿ ಎಂದರೆ ದೂರದ ದೊಡ್ಡ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದಲ್ಲ, ಮನುಷ್ಯ ಮನುಷ್ಯನನ್ನು ಪೂಜಿಸುವುದು, ಜ್ಞಾನದ ಬೆಳಕನ್ನು ಪಸರಿಸುವುದು ಎಂದು ತಿಳಿಸಿದರು. ಅದಕ್ಕಾಗಿಯೇ 12ನೇ ಶತಮಾನದ ಶರಣರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ಕೊಟ್ಟರು.
ನಮ್ಮ ಮನೆ, ಶಾಲೆ, ಸರ್ಕಾರಿ ಕಚೇರಿಗಳು ಸ್ಥಾವರಗಳಾಗಿವೆ. ಅವುಗಳಿಗೆ ಜೀವ ತುಂಬಬೇಕಾದರೆ ನಮ್ಮ ಮನೆ ದೊಡ್ಡದಾಗಿದ್ದರೆ ಸಾಲದು, ಕುಟುಂಬದ ಎಲ್ಲರ ಮನಸು ದೊಡ್ಡದಾಗಿರಬೇಕು, ಹೊಂದಿಕೊಂಡು ಹೋಗುವ ಸಂಸ್ಕಾರವಿರಬೇಕು. ನಮ್ಮ ಶಾಲೆಗಳಲ್ಲಿ ಪಾಠ ಹೇಳುವ ಗುರುಗಳು ಮಕ್ಕಳ ವಿದ್ಯೆಗೆ, ಸಂಸ್ಕಾರಕ್ಕೆ ಒಳ್ಳೆಯ ಅಡಿಪಾಯ ಹಾಕಿದರೆ ಮುಂದೆ ಮಕ್ಕಳು ಭಾರತದ ಒಳ್ಳೆಯ ಪ್ರಜೆಗಳಾಗಲು ಸಾಧ್ಯ. ಅದೇ ರೀತಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರಾಮಾಣಿಕತೆಯಿಂದ, ಜನಸ್ನೇಹಿಯಾಗಿ ಸೇವೆ ಮಾಡಿದರೆ ಜನಮಾನಸದಲ್ಲಿ ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ. ಈ ರೀತಿಯ ನಡೆ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ.
ಬಸವಣ್ಣನವರ ದೃಷ್ಟಿಯಲ್ಲಿ ಜಂಗಮ ತತ್ವ ಎಂದರೆ ಪ್ರಾಮಾಣಿಕತೆಯಿಂದ ಕಾಯಕದಲ್ಲಿ ತೊಡಗಿಸಿಕೊಳ್ಳುವುದು, “ಕಾಗೆ ಒಂದಗುಳ ಕಂಡರೆ ಕರೆಯುವುದು ತನ್ನ ಬಳಗವನ್ನೆಲ್ಲ” ಎಂಬಂತೆ ಬಂದ ಆದಾಯದಲ್ಲಿ ಒಂದಿಷ್ಟು ಬಡವರಲ್ಲಿ, ಹಸಿದವರಲ್ಲಿ ಹಂಚಿ ತಿನ್ನುವುದು. ಅದು ಹರಿಯುವ ನೀರಿನಂತೆ ಶಾಶ್ವತವಾಗಿರುತ್ತದೆ.
ಹಾಗಾಗಿ ನಾವು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ವಚನದ ತಿರುಳನ್ನು ಅರಿತು, ಸ್ಥಾವರಗಳ ಹಿಂದೆ ಓಡುವ ಬದಲು ಜಂಗಮ ತತ್ವವನ್ನು ಅರಿಯೋಣ. ಒಂದೇ ಜಾಗದಲ್ಲಿ ನಿಂತ ನೀರಿನಂತೆ ಕೊಳೆಯಾಗದೆ, ಚಲಿಸುವ ಬೆಳಕಿನಂತೆ, ಹರಿಯುವ ನದಿಯಾಗೋಣ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
