ಲೇಖಕರಾದ ಕೆ.ಸತ್ಯನಾರಾಯಣ ಅವರ ‘ರೂಪಕಗಳಿಗೆ ಕೊರತೆಯಿಲ್ಲ’ ಸಂಕಲನದಲ್ಲಿ ೩೯ ಕಥೆಗಳಿದ್ದು, ಎಲ್ಲ ಕತೆಗಳು ಹೊಸ ಲೋಕವನ್ನು ತೆರೆದಿಡುತ್ತವೆ. ಈ ಕೃತಿಯ ಕುರಿತು ಪಾರ್ವತಿ ಜಿ.ಐತಾಳ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ರೂಪಕಗಳಿಗೆ ಕೊರತೆಯಿಲ್ಲ
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾರ : ಕಥಾಸಂಕಲನ
ಕಥಾ ಪರಂಪರೆಯನ್ನು ಮುರಿದು ಸಾಗುವ ಕಥೆಗಳು
ಕಥೆಗಾರ ಕೆ.ಸತ್ಯನಾರಾಯಣ ಅವರ ‘ರೂಪಕಗಳಿಗೆ ಕೊರತೆಯಿಲ್ಲ’ ಓದುಗನಿಗೆ ಅಚ್ಚರಿ ಹುಟ್ಟಿಸುವ ಶಕ್ತಿಯುಳ್ಳ ಹೊಸ ಶೈಲಿಯ ಕಥೆಗಳು. ನಮ್ಮ ಕಥಾ ಪರಂಪರೆಯನ್ನು ಮುರಿದು ಕಟ್ಟುವ ಪ್ರಾಯೋಗಿಕ ಕಥೆಗಳು. ಕಥೆಗಾರರು ಕಥೆಗೆ ಬೇಕಾದ ವಸ್ತುಗಳಿಗೆ ಹುಡುಕಾಟವೇ ನಡೆಸದೆ ಕೈಗೆ ಸಿಕ್ಕಿದ, ಕಣ್ಣಿಗೆ ಕಾಣಿಸಿದ ವಿದ್ಯಮಾನಗಳನ್ನು ಕಥಾವಸ್ತುಗಳಾಗಿ ಆಯ್ದುಕೊಳ್ಳುವುದೇ ಇಲ್ಲಿನ ಕಥೆಗಳ ವೈಶಿಷ್ಟ್ಯ.
ಇಲ್ಲಿ ಸೃಷ್ಟಿಯಾದ ಜಗತ್ತು ಕೆಲವೊಮ್ಮೆ ಯಾವುದೋ ಜಗತ್ತನ್ನು ಪ್ರವೇಶಿಸಿ ಸುತ್ತಾಡುವ ಅನುಭವ ನೀಡುತ್ತದೆ. ಕಲ್ಪನೆಗಳಿಗಾಗಲಿ ಭಾವನೆಗಳಿಗಾಗಲಿ ಸ್ವಲ್ಪವೂ ಎಡೆಯಿಲ್ಲ. ಎಲ್ಲವೂ ನಿಗಿ ನಿಗಿ ವಾಸ್ತವ. ತಾವು ಆಯ್ದುಕೊಂಡ ವಸ್ತುವಿನ ಸುತ್ತ ಅತ್ಯಂತ ಅಚ್ಚುಕಟ್ಟಾಗಿ, ಕೆಲವೊಮ್ಮೆ ಹಾಸ್ಯ- ವ್ಯಂಗ್ಯ-ವಿಡಂಬನೆಗಳನ್ನು ಸೇರಿಸಿಕೊಂಡು ಕುತೂಹಲ ಹುಟ್ಟಿಸುತ್ತ ಹೋಗುವ ರೀತಿಯಲ್ಲಿ ಕಥೆಗಳನ್ನು ಕಟ್ಟಿಕೊಡುತ್ತಾರೆ. ಪಾತ್ರಗಳು ಮತ್ತು ಘಟನೆಗಳು ನಿಜವಾಗಿ ನಡೆದಂಥವೇ. ಒಳಗಿನ ಹೂರಣವಷ್ಟೇ ಅವರದ್ದು. ಹೆಚ್ಚಿನ ಕಥೆಗಳಿಗೆ ನಿಶ್ಚಿತವಾದ ಅಂತ್ಯವೇ ಇರುವುದಿಲ್ಲ. ಅಂತ್ಯವನ್ನು ಓದುಗರ ಗ್ರಹಿಕೆಗೆ ಬಿಟ್ಟು ಬಿಡುತ್ತಾರೆ.

ಮೊದಲ ಕಥೆಯ ಶೀರ್ಷಿಕೆ ‘ವಿಶ್ವಸಂಸ್ಥೆ ಮತ್ತು ದಾಂಪತ್ಯದ ಪ್ರಶ್ನೆ’. ಹೌದು. ದಾಂಪತ್ಯವು ಜಗದಗಲ ವ್ಯಾಪಿಸಿಕೊಂಡಿರುವ ಸಮಸ್ಯೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಡಳಿತ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಶಿವರಾಂ ಎಂಬ ತಮ್ಮ ಊರಿನವರ ಬಗ್ಗೆ ಹೆಮ್ಮೆ ಪಡುತ್ತ ಈ ಕಥೆಯ ನಿರೂಪಕರು ಮಾತನಾಡುವುದರೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಜಯಮ್ಮ ಎಂಬ ಒಬ್ಬ ಮೇಕಪ್ ಮ್ಯಾನ್ ನ ಮಗಳನ್ನು ಪ್ರೀತಿಸಿ ವಿವಾಹವಾಗಿದ್ದ ಶಿವರಾಂ. ಆದರೆ ವಿಪರೀತ ಕಾಮಾಸಕ್ತಿ ಹೊಂದಿದ್ದು ರಾಜಕಾರಣದಲ್ಲಿ ವಿಪರೀತವಾಗಿ ಸೇರಿಕೊಳ್ಳುತ್ತ ಹೆಂಡತಿಯ ಮಾತುಗಳಿಗೆ ಕಿಲುಬುಕಾಸಿನ ಬೆಲೆಯನ್ನೂ ಕೊಡದ ಶಿವರಾಂ ಬಗ್ಗೆ ಬೇಸರ ಹೊಂದಿ ಜಯಮ್ಮ ವಿಚ್ಛೇದನ ತೆಗೆದುಕೊಂಡಿದ್ದಳು.ಅವಳು ಅನಂತರ ಸಣ್ಣ ಪುಟ್ಟ ವ್ಯವಹಾರಗಳನ್ನು ಮಾಡುತ್ತ ಆರಾಮವಾಗಿದ್ದಳು.. ಶಿವರಾಂ ಊರು ಬಿಟ್ಟು ಡೆಲ್ಲಿಗೆ ಹೋದಾಗ ಬೇಸರವಾಗಿದ್ದು ನಿರೂಪಕ ಮತ್ತು ಆತನ ಗೆಳೆಯರಿಗೆ. ಯಾಕೆಂದರೆ ಇನ್ನು ಮುಂದೆ ಆತನನ್ನು ತಮ್ಮ ಏರಿಯಾದವನು ಎಂದು ಹೇಳಿಕೊಳ್ಳುವ ಹಾಗಿಲ್ಲವಲ್ಲ..? ಕಥೆ ಇಲ್ಲಿಗೆ ಮುಗಿಯುತ್ತದೆ.
‘ವಾರಾನ್ನದ ಅರೆ ಆತ್ಮಚರಿತ್ರೆ’ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಇದು ಇತಿಹಾಸದಲ್ಲಿ ಅಗಿ ಹೋದ ಕಥೆ. ಹಿಂದೆ ಬಡ ಬಾಲಕರಿಗೆ ಓದುವ ಆಸೆಯಿದ್ದಾಗ ಮನೆಯಿಂದ ದೂರ ವಿದ್ಯಾಸಂಸ್ಥೆ ಇದ್ದಾಗ ವಾರದ ಎಲ್ಲಾ ದಿನಗಳಲ್ಲಿ ಬೇರೆ ಬೇರೆ ಮನೆಗಳಲ್ಲಿ ಮಕ್ಕಳಿಗೆ ಊಟ-ತಿಂಡಿಗಳ ವ್ಯವಸ್ಥೆ. ಅದರೆ ಆ ಮನೆಗಳಲ್ಲಿ ಮಕ್ಕಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಅವಮಾನ ಮಾಡುತ್ರಿದ್ದರು. ನಿರೂಪಕನ ತಂದೆಯಾಗಲಿ ದೊಡ್ಡಪ್ಪನಾಗಲಿ ಆ ಬಗ್ಗೆ ಮಾತನಾಡಲಿಕ್ಕೇ ಹಿಂಜರಿಯುವಷ್ಟು ಅವರ ಮನಸ್ಸಿನಲ್ಲಿ ನೋವಿನ ನೆನಪುಗಳಿದ್ದವು. ಇಂಥ ಕರುಳು ಹಿಂಡುವ ಕಥೆಯನ್ನು ಹೇಳುವುದಷ್ಟೇ ಈ ಕಥೆಯ ಉದ್ದೇಶ.
ಮಾರ್ಕ್ ಟುಲಿ ಎಂಬ ವಿದೇಶೀ ವ್ಯಕ್ತಿಗೆ ಪ್ರವಾಸಿ ಸ್ಥಳಗಳನ್ನೂ ಧಾರ್ಮಿಕ ವ್ಯಕ್ತಿಗಳನ್ನೂ ತೋರಿಸುವ ಕೆಲಸ ನಿರೂಪಕನಿಗೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಾಮಾಣಿಕತೆಯಿಲ್ಲದ ಮತ್ತು ಕೇವಲ ಪ್ರಚಾರಕ್ಕಾಗಿ ಹಂಬಲಿಸುವ ಭಾರತೀಯ ಧಾರ್ಮಿಕ ವ್ಯಕ್ತಿಗಳಲ್ಲಿ ತುಂಬಿದ ಆಷಾಢಭೂತಿತನವನ್ನು ನೋಡಿ ಮಾರ್ಕ್ ಟುಲಿ ವ್ಯಂಗ್ಯದ ನಗೆ ನಕ್ಕರೆ ನಿರೂಪಕ ಮೂಕನಾಗುತ್ತಾನೆ. ‘ದೀಕ್ಷಿತರ ಫೋಟೋ’ ದಲ್ಲಿ ಆಗರ್ಭ ಶ್ರೀಮಂತನೂ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯೂ ಆದ ಚಿಗರೀಗೌಡನ ಕರಾಳ ಹಿನ್ನೆಲೆಯನ್ನು ತೆರೆದಿಡುವ ಕಥೆಯಿದೆ.
‘ಸಲಿಂಗಿ’ ಅನ್ನುವುದು ಸ್ಪೆಯಿನಿನ ಮಾಡ್ರಿಡ್ ನಗರದಲ್ಲಿ ನಡೆಯುವ ಕಥೆ. ಸಾಮಾಜಿಕ ಬದುಕಿನಲ್ಲಿ ನಿಧಾನವಾಗಿ ಆಗುತ್ತಿರುವ ಸ್ಥಿತ್ಯಂತರ ಇಲ್ಲಿನ ವಸ್ತು. ನಿರೂಪಕರಿರುವ ಬಡಾವಣೆಯಲ್ಲಿ ಪಂಚಕೇಶವದಾಸರ ಒಡೆತನದ ವ್ಯವಹಾರಗಳೇ ಮುಖ್ಯ. ಆದ್ದರಿಂದ ರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಅಲ್ಲಿಗೆ ಬಂದು ಹೋಗುತ್ತಾರೆ. ಹಾಗೆ ಬಡಾವಣೆಗೆ ಅವರ ದೇಣಿಗೆ ದೊಡ್ಡದು. ಪಂಚಕೇಶವದಾಸರ ಮಗ ಜಯಕುಮಾರದಾಸ ಮಾಡ್ರಿಡ್ ನಲ್ಲಿ ಓದುತ್ತಿದ್ದ. ಅಲ್ಲಿ ವಿಲಿಯಂ ಕ್ಲಿಫ್ ಎಂಬವನ ಜತೆಗೆ ಸಲಿಂಗ ವಿವಾಹ ಆಗುತ್ತೇನೆಂದು ಹಠ ಹಿಡಿದು ಅವನನ್ನು ಊರಿಗೆ ಕರಡತರುತ್ತಾನೆ. ತಾನು ಅವನೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾಗಲು ಬೇಕಾದ ತಯಾರಿ ನಡೆಸಿ ಎಂದು ಹೇಳುತ್ತಾನೆ. ಮನೆಯವರು ಬೆರೆ ದಾರಿ ಕಾಣದೆ ಎಲ್ಲ ತಯಾರಿ ನಡೆಸಿ ಅದು ಕೇವಲ ಒಂದು ಸಂತೋಷಕೂಟವೆಂದು ಬಂಧುಗಳಿಗೆ ಸುಳ್ಳು ಹೇಳುತ್ತಾರೆ. ಆದರೆ ಮಗ ತಾನು ಮ್ಯಾಡ್ರಿಡ್ ನಿಂದ ತಂದ ಕಾಲುಂಗುರ ಮತ್ತು ಸೊಂಟದ ಡಾಬುಗಳನ್ನು ಎಲ್ಲರ ಮುಂದೆ ತೆಗೆದು ತೋರಿಸುವಲ್ಲಿಗೆ ಕಥೆ ಮುಗಿಯುತ್ತದೆ.
‘ನೆರೆಹೊರೆ ಮಧ್ಯಪ್ರಾಚ್ಯ’ ಎಂಬ ಕಥೆ ನೆರೆಹೊರೆಯವರೊಂದಿಗೆ ನಾವು ಯಾವ ರೀತಿಯ ಸಂಬಂಧವಿಟ್ಟುಕೊಳ್ಳುತ್ತೇವೆಯೋ ಅದೇ ರೀತಿ ಈ ಜಗತ್ತಿನಲ್ಲಿ ದೇಶ-ದೇಶಗಳ ನಡುವ ಸಂಬಂಧ ಕೂಡಾ ಇರುತ್ತದೆ ಎನ್ನುತ್ತದೆ. ನಾವು ಪಕ್ಕದ ಮನೆಯಲ್ಲಿ ಏನೇನು ನಡೆಯುತ್ತದೆಂದು ತಿಳಿಯಲು ಇಣಿಕಿ ನೋಡುತ್ತೇವೆ. ಅಥವಾ ನಮ್ಮ ಮಕ್ಕಳನ್ನು ನಮ್ಮ ಕಾಂಪೌಂಡ್ ಗೋಡೆಗೆ ಏಣಿಯನ್ನು ಒರಗಿಸಿಟ್ಟು ಹತ್ತಿಸಿ ಆಚೆ ಬದಿಗೆ ನೋಡಿ ವರದಿ ಮಾಡಲು ಹೇಳುತ್ತೇವೆ. ಹಿರಿಯರನ್ನು ತೃಪ್ತಿಪಡಿಸಲು ಮಕ್ಕಳು ಕೆಲವೊಮ್ಮೆ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳಿ ಹೇಳಿ ಅವರು ಅದರಲ್ಲೇ ನೈಪುಣ್ಯ ಸಾಧಿಸುತ್ತಾರೆ. ನಿರೂಪಕನ ಮಗನಿಗೆ ಮುಂದೆ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಸಿಕ್ಕಿದಾಗ ಈ ನೈಪುಣ್ಯವನ್ನು ಅವನು ಬಳಸಿಕೊಳ್ಳುವುದು ಇಲ್ಲಿನ ವ್ಯಂಗ್ಯ.

ಬಾಲ್ಯದಲ್ಲಿ ಆಟಕ್ಕೆಂದು ಗೆಳೆಯನನ್ನು ಅಪ್ಪಿಕೊಂಡು ಚುಂಬಿಸಿದ್ದು ನೆನಪಾಗಿ ನಿರೂಪಕನ ಗೆಳೆಯ ಅದೇ ವಿಷಯವನ್ನು ಅವನ ಹೆಂಡತಿಯ ಮುಂದೆ ಹೇಳಿದ್ದು ಗಂಡ-ಹೆಂಡತಿಯರ ನಡುವಣ ವೈಮನಸ್ಸಿಗೆ ಕಾರಣವಾಗುವುದು ಪರಿಸ್ಥಿತಿಯ ಬಹುದೊಡ್ಡ ವ್ಯಂಗ್ಯ. ಇದು ಸಲಿಂಗಕಾಮದ ಭಾವನೆಗಳು ಸುಪ್ತಮನಸ್ಸಿನೊಳಗೆ ಇದ್ದರೂ ಚಿಕ್ಕವರಾಗಿದ್ದಾಗ ಅದನ್ನು ನಿಸ್ಸಂಕೋಚವಾಗಿ ಪ್ರಕಟಿಸಿ ದೊಡ್ಡವರಾದ ಮೇಲೆ ಅದುಮಿಡುವ ಸಾಧ್ಯತೆಯನ್ನು ಸೂಚ್ಯವಾಗಿ ಹೇಳುತ್ತದೆ.
‘ಹೆಣ್ಣು ತೋರಿಸಿದರು’ ಕಥೆಯಲ್ಲಿ ಸ್ವಂತ ಅಪ್ಪನೇ ಮಗ ಒಪ್ಪಿದ ಹೆಣ್ಣನ್ನು ಮದುವೆಯಾಗುವಲ್ಲಿ ಹೀಗೆ ಅಡ್ಡಿಯೊಡ್ಡ ಬಹುದೇ, ಇಷ್ಟೊಂದು ಅಮಾನುಷವಾಗಿ ವರ್ತಿಸಬಹುದೇ ಎಂದು ದುಃಖವಾಗುತ್ತದೆ. ಆದರೆ ಏನಾಯಿತು ಎಂಬುದನ್ನು ಲೇಖಕರು ಸ್ಪಷ್ಟವಾಗಿ ಕಾಣಿಸುವುದಿಲ್ಲ. ‘ಪ್ರೊ.ಹೂವಯ್ಯ’ ಕಥೆಯಲ್ಲಿ ಹೂವಯ್ಯನೊಬ್ಬ ಪ್ರೊಫೆಸರ್ ಆದರೂ ಕುವೆಂಪು ಸಾಹಿತ್ಯದ ಬಗೆಗಿನ ಆತನ ಕುರುಡು ನಂಬಿಕೆ ಎಷ್ಟು ದೃಢವಾಗಿದೆಯೆಂದರೆ ಕುವೆಂಪು ಈ ಜಗತ್ತಿನಲ್ಲಿರುವ ಎಲ್ಲಾ ವಿಷಯಗಳನ್ನು ಕವರ್ ಮಾಡಿ ಕಾವ್ಯ ರಚನೆ ಮಾಡಿಯಾಗಿದೆ, ನಾವು ಬರೆಯಲು ಏನೂ ಉಳಿಸಿಲ್ಲ ಎನ್ನುತ್ತಾರೆ.
ಸಮುದ್ರದಲ್ಲಿ ಜಲಗಡಿ ಕಾಯುವ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಭಯೋತ್ಪಾದಕರು ದೇಶದೊಳಗೆ ನುಗ್ಗಿ ಎಲ್ಲವನ್ನೂ ಕೊಳ್ಳೆ ಹೊಡೆದು ನಾಶ ಮಾಡಿದ ನಂತರ ತಮ್ಮ ತಪ್ಪಿಗೆ ತಾವೇ ನೊಂದುಕೊಂಡು ಪ್ರಾಯಶ್ಚಿತ್ತವಾಗಿ ನೀರಿಗೆ ಹಾರಿ ಸಾಯುವ ಕಥೆ ‘ದೇಶಪ್ರೇಮದ ಗುಂಪು ಆತ್ಮಹತ್ಯೆ’. ಉದ್ಯಮಿಯಾದ ಏಕೈಕ ಪುತ್ರ ಹಣದ ಹಿಂದೆ ಹೋಗಿ ಅನುರೂಪಳಾದ ಪತ್ನಿಯಿದ್ದರೂ ಹಣಸಂಪಾದನೆಯಲ್ಲೇ ಕಾಲಹರಣ ಮಾಡುತ್ತ ಮಕ್ಕಳು ಮಾಡಿಕೊಳ್ಳುವುದನ್ನು ಮುಂದೆ ದೂಡಿ ಆಕಸ್ಮಿಕವಾಗಿ ಹೃದಯಾಘಾತದಿಂದ ಸಾವಿಗೀಡಾದಾಗ ಅಪ್ಪನಿಗೆ ಬುದ್ಧಿಭ್ರಮಣೆಯಾಗಿ ಅನಂತರದ ದಿನಗಳಲ್ಲಿ ಅವರು ಯುವಜೋಡಿಗಳಿಗೆ ಸರಿಯಾದ ಸಮಯದಲ್ಲಿ ಮಕ್ಕಳು ಮಾಡಿಕೊಳ್ಳಲು ಉಪದೇಶ ನೀಡುವುದೇ ‘ಆರತಕ್ಷತೆಯಲ್ಲಿ ಒತ್ತಾಯಿಸಿದ ವಾಗ್ದಾನ’.
ಅಮೆರಿಕದಲ್ಲಿ ನಿಜವಾಗಿ ಇರುವುದು ೫೦ ರಾಜ್ಯಗಳೇ ಆದರೂ ಭಾರತದಲ್ಲಿನ ಪಾರ್ಕುಗಳಲ್ಲಿಭೇಟಿಯಾಗುವ ಭಾರತೀಯರು ಅಮೆರಿಕಾ ಜೀವನದ ವೈಭವದ ಬಗ್ಗೆ ಮಾತನಾಡುತ್ತ ಕಳೆಯುವುದು ನಿರೂಪಕ ಆ ಪಾರ್ಕನ್ನೇ ಅಮೆರಿಕಾದ ೫೧ನೇ ರಾಜ್ಯವೆಂದು ಕರೆಯುವುದು ಭಾರತೀಯರ ಸ್ವಾಭಿಮಾನಶೂನ್ಯತೆಗೆ ಮತ್ತು ಗುಲಾಮೀ ಮನೋಭಾವಕ್ಕೆ ಹಿಡಿದ ಕನ್ನಡಿ. ಕಥೆಯ ನಡುವೆ ಅಮೆರಿಕಾದಲ್ಲಿ ಭಾರತೀಯರ ಬದುಕು ಎಂಥ ಅಪಾಯಕ್ಕೆ ಸಿಲುಕದೆ ಅನ್ನುವುದರ ಬಗ್ಗೆ ವಿವರಗಳಿವೆ.
ಲೇಖಕರು ತಮ್ಮ ಕಥೆಗಳಿಗೆ ಕೊಡುವ ಶೀರ್ಷಿಕೆಗಳೂ ಬಹಳ ವಿಶಿಷ್ಟವಾಗಿವೆ. ಕಥೆಯ ಒಳಧ್ವನಿ ಗಂಭೀರವಾಗಿದ್ದರೂ ಕಥೆಗಳು ಇನ್ನೇನನ್ನೋ ಸೂಚ್ಯವಾಗಿ ಹೇಳುವ ರೂಪಕಗಳಾಗಿದ್ದರೂ ಶೀರ್ಷಿಕೆ ಮಾತ್ರ ಕಥೆಯೊಳಗೆ ಏನೂ ಇಲ್ಲವೇ ಏನೋ ಅನ್ನುವ ಹಾಗೆ ನಿರ್ಲಿಪ್ತವಾಗಿ ತೀರಾ ಸಾಮಾನ್ಯವೂ ಹಗುರವೂ ಸರಳವೂ ಆಗಿರುತ್ತದೆ. ‘ಪ್ರೊ.ಹೂವಯ್ಯ ನುಡಿದ ಭವಿಷ್ಯ’, ‘ ಭಲೇ ಸ್ವಾಮೀಜಿ ಎಂದ ಮಾರ್ಕ್ ಟುಲಿ’, ‘ಆರತಕ್ಷತೆಯಲ್ಲಿ ಒತ್ತಾಯಿಸಿದ ವಾಗ್ದಾನ’ ‘ಬ್ರಹ್ಮದ್ವೇಷಿಗಳ ಮನೆಯಲ್ಲಿ ದೀಕ್ಷಿತರ ಫೋಟೋ’ ಇತ್ಯಾದಿ..
ಸಂಕಲನದಲ್ಲಿ ಇರುವ ೩೯ ಕಥೆಗಳೂ ನಮಗೊಂದು ಹೊಸ ಲೋಕವನ್ನು ತೆರೆದಿಡುತ್ತವೆ. ನಾವು ಪ್ರತಿದಿನ ಅಲ್ಲಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಕಾಣುವ ವಿದ್ಯಮಾನಗಳ ಮೇಲೆ ಹೀಗೂ ಕಥೆ ಬರೆಯಬಹುದೇ ಅನ್ನಿಸುವಂತೆ ಮಾಡುತ್ತವೆ. ಆದ್ದರಿಂದಲೇ ಸತ್ಯನಾರಾಯಣ ಅವರುಹೊಸ ಹಾದಿಯಲ್ಲಿ ಸಾಗುತ್ತಿರುವ ಕಥೆಗಾರರು ಎಂದು ಹೇಳಬಹುದಾಗಿದೆ.
- ಡಾ.ಪಾರ್ವತಿ ಜಿ.ಐತಾಳ್ – ನಿವೃತ್ತ ಇಂಗ್ಲಿಷ್ ಉಪನ್ಯಾಸಕರು, ಲೇಖಕರು.
