‘ಹತ್ಯೆದಳ’ ಕೃತಿ ಪರಿಚಯ

ನಾಗೇಶ್ ಕುಮಾರ್ ಸಿ.ಎಸ್. ಅವರ ‘ಹತ್ಯೆದಳ’ ಕೃತಿಯು “ಅಸ್ಯಾಸಿನೇಷನ್ ಬ್ರಿಗೇಡ್” (Assassination Brigade) ಎಂಬ ಆಂಗ್ಲ ಥ್ರಿಲ್ಲರ್ ಕಾದಂಬರಿಯ ಕನ್ನಡ ಭಾವಾನುವಾದವಾಗಿದೆ. ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…

ಪುಸ್ತಕ : ಹತ್ಯೆದಳ (ಅಂತರಾಷ್ಟ್ರೀಯ ಗೂಢಚಾರ ನಿಕ್ ಕಾರ್ಟರ್ ಸಾಹಸ ಅಸ್ಯಾಸಿನೇಷನ್ ಬ್ರಿಗೇಡ್)
ಲೇಖಕರು: ನಾಗೇಶ್ ಕುಮಾರ್ ಸಿ.ಎಸ್. (ಕನ್ನಡಕ್ಕೆ ಭಾವಾನುವಾದ)
ಪ್ರಕಾಶಕರು: ಸಾಹಿತ್ಯ ಲೋಕ ಅಪ್ಲಿಕೇಶನ್
ಮುದ್ರಣ: 2026
ಪುಟಗಳು: ೧೪೪
ಬೆಲೆ: ೧೮೫

‘ಹತ್ಯೆದಳ’ – ಅಂತರರಾಷ್ಟ್ರೀಯ ಸಂಚು ಮತ್ತು ರೋಚಕ ಪತ್ತೆದಾರಿಕೆಯ ಕಥನ

ನಾಗೇಶ್ ಕುಮಾರ್ ಸಿ.ಎಸ್. ಅವರ ‘ಹತ್ಯೆದಳ’ ಕೃತಿಯು “ಅಸ್ಯಾಸಿನೇಷನ್ ಬ್ರಿಗೇಡ್” (Assassination Brigade) ಎಂಬ ಆಂಗ್ಲ ಥ್ರಿಲ್ಲರ್ ಕಾದಂಬರಿಯ ಕನ್ನಡ ಭಾವಾನುವಾದವಾಗಿದೆ. ಅಂತರರಾಷ್ಟ್ರೀಯ ಪತ್ತೆದಾರಿ ಸಾಹಸಗಳ ಹಿನ್ನೆಲೆಯನ್ನು ಹೊಂದಿರುವ ಈ ಪುಸ್ತಕವು ಓದುಗರಲ್ಲಿ ಮೊದಲಿನಿಂದಲೂ ತೀವ್ರ ಕುತೂಹಲವನ್ನು ಮೂಡಿಸುತ್ತದೆ. ಅಪರಾಧ ಜಗತ್ತು ಮತ್ತು ರಹಸ್ಯ ಪತ್ತೆದಾರಿಕೆಯ ಸುತ್ತ ಈ ಇಡೀ ಕಥೆಯನ್ನು ರೋಚಕವಾಗಿ ಹೆಣೆಯಲಾಗಿದೆ.

ಇಂಗ್ಲೆಂಡ್, ಚೀನಾ, ಫ್ರಾನ್ಸ್, ಜಪಾನ್ ಮತ್ತು ಜರ್ಮನಿ ಸೇರಿದಂತೆ ಜಗತ್ತಿನ ಹಲವು ಪ್ರಮುಖ ದೇಶಗಳ ನಾಯಕರನ್ನು, ಅವರ ಅತ್ಯಂತ ಆತ್ಮೀಯರಾಗಿರುವ ವ್ಯಕ್ತಿಗಳೇ ಹತ್ಯೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಹತ್ಯೆಯ ಪ್ರಯತ್ನದ ಕೊನೆಯಲ್ಲಿ ಆ ವ್ಯಕ್ತಿಗಳೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಸರಣಿ ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಇವೆಲ್ಲದರ ಹಿಂದೆ ವ್ಯವಸ್ಥಿತವಾದ ಅಂತರರಾಷ್ಟ್ರೀಯ ಸಂಚು ಅಡಗಿದೆ ಎಂಬ ಬಲವಾದ ಅನುಮಾನ ಮೂಡುತ್ತದೆ.

ಅಮೆರಿಕದ ಅಧ್ಯಕ್ಷರಿಗೂ ಇದೇ ರೀತಿಯ ಅಪಾಯ ಎದುರಾಗಬಹುದೆಂಬ ಆತಂಕದಿಂದ ಈ ಪ್ರಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹಾಗಾಗಿ ಅಮೆರಿಕದ ‘AXE’ ಎಂಬ ರಹಸ್ಯ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಹಾಕ್, ಈ ಪ್ರಕರಣದ ತನಿಖೆಯನ್ನು ದಕ್ಷ ಏಜೆಂಟ್ ನಿಕ್ ಕಾರ್ಟರ್‌ಗೆ ವಹಿಸುತ್ತಾನೆ.

ತನಿಖೆಯ ಹಾದಿಯಲ್ಲಿ ನಿಕ್ ಕಾರ್ಟರ್‌ಗೆ ವಾನ್ ಆಲ್ಡರ್ ಕುಟುಂಬದ ಮಾರಿಯಾ, ಹೆಲ್ಗಾ ಮತ್ತು ಎಲ್ಸಾ ಎಂಬ ಒಂದೇ ರೀತಿಯ ರೂಪ ಹೊಂದಿರುವ ಮೂವರು ತ್ರಿವಳಿ ಸಹೋದರಿಯರ ಪರಿಚಯವಾಗುತ್ತದೆ. ನಂತರ ಈ ತ್ರಿವಳಿ ಸಹೋದರಿಯರು ಈ ಪ್ರಕರಣದ ಮುಖ್ಯ ಸುಳಿವುಗಳಾಗುತ್ತಾರೆ. ಇವರೊಂದಿಗೆ ಸಂಬಂಧ ಹೊಂದಿದ್ದ ಕೆಲವು ವ್ಯಕ್ತಿಗಳೂ ಈ ವಿಚಿತ್ರ ಘಟನೆಗಳಲ್ಲಿ ಭಾಗಿಯಾಗಿರುವುದು ತನಿಖೆಗೆ ಹೊಸ ಆಯಾಮವನ್ನು ನೀಡುತ್ತದೆ.

ನಿಕ್ ಕಾರ್ಟರ್ ತನ್ನ ನಿಜವಾದ ಗುರುತನ್ನು ಮರೆಮಾಚಿ, ಟೋನಿ ಡಾವ್ಸ್ ಎಂಬ ಶ್ರೀಮಂತ ಉದ್ಯಮಿಯ ವೇಷದಲ್ಲಿ ತನಿಖೆ ಆರಂಭಿಸುತ್ತಾನೆ. ಈ ಮೂಲಕ ವಾನ್ ಆಲ್ಡರ್ ಸಹೋದರಿಯರ ವಲಯಕ್ಕೆ ಪ್ರವೇಶಿಸಿ, ಘಟನೆಗಳ ಹಿಂದಿರುವ ರಹಸ್ಯವನ್ನು ಭೇದಿಸಲು ಪ್ರಯತ್ನಿಸುತ್ತಾನೆ.

ತನಿಖೆಯ ಮತ್ತೊಂದು ಹಂತದಲ್ಲಿ ಕಳುವಾಗಿರುವ ಅಣ್ವಸ್ತ್ರ ಕ್ಷಿಪಣಿಯ ವಿಚಾರವೂ ಬೆಳಕಿಗೆ ಬರುತ್ತದೆ. ವಿವಿಧ ದೇಶಗಳಲ್ಲಿ ನಡೆಯುತ್ತಿರುವ ವಿದ್ಯುತ್ ವ್ಯತ್ಯಯಗಳು, ವಿಶ್ವನಾಯಕರ ಮೇಲಿನ ಅಪಾಯಗಳು ಮತ್ತು ರಹಸ್ಯ ಚಟುವಟಿಕೆಗಳ ನಡುವೆ ಆಳವಾದ ಸಂಬಂಧವಿರುವುದು ನಿಧಾನವಾಗಿ ಸ್ಪಷ್ಟವಾಗತೊಡಗುತ್ತದೆ.

ಜಗತ್ತಿನ ಶಾಂತಿಗೆ ದೊಡ್ಡ ಸವಾಲಾಗಿರುವ ಈ ಬೃಹತ್ ಸಂಚಿನ ಹಿಂದಿರುವ ಶಕ್ತಿಯನ್ನು ತನ್ನ ಪ್ರಾಣವನ್ನೂ ಲೆಕ್ಕಿಸದೆ, ಸಾಹಸದಿಂದ ಪತ್ತೆಹಚ್ಚುವುದು ನಿಕ್ ಕಾರ್ಟರ್‌ನ ಮುಖ್ಯ ಧ್ಯೇಯವಾಗುತ್ತದೆ. ಇಷ್ಟೆಲ್ಲಾ ಜಟಿಲ ಸಮಸ್ಯೆಗಳನ್ನು ಮತ್ತು ಅಪಾಯಗಳನ್ನು ನಿಕ್ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎಂಬುದನ್ನು ಈ ಪುಸ್ತಕವನ್ನು ಓದಿ ತಿಳಿಯಬೇಕು.


  •  ಚೇತನ ಭಾರ್ಗವ –ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×