ಶಕ್ತಿ ಸ್ವರೂಪಿಣಿಯರು (ಭಾಗ-೧)

ನನ್ನ ಚಿಕ್ಕಪ್ಪನ ಮಡದಿ. ವಯಸ್ಸು ಕೇವಲ 58. ಇಷ್ಟು ವಯಸ್ಸಿನ ವರೆಗೆ ಸುಮಾರು 5 ಆಪರೇಷನ್ ಆಗಿದೆ. ಸೋಲನ್ನೊಪ್ಪಿಕೊಳ್ಳದ ಛಲಗಾರ್ತಿ ಪ್ರೇಮಾ ಪರಮೇಶ್ವರ ಹೆಗಡೆ. ಅವರ ಸಾಧನೆಯ ಹೆಜ್ಜೆಯನ್ನು ಮಾಲತಿ ಗಣೇಶ್ ಭಟ್ ಅವರ ‘ಶಕ್ತಿ ಸ್ವರೂಪಿಣಿಯರು’ ಅಂಕಣದಲ್ಲಿ ತಪ್ಪದೆ ಓದಿ…

ಶ್ರೀಮದ್ ಜಗದ್ಗುರು ಆದಿ ಶಂಕರರು ಪ್ರತಿಷ್ಠಾಪನೆ ಮಾಡಿದ ಹದಿನೆಂಟು ಶಕ್ತಿಪೀಠಗಳನ್ನು ದರ್ಶನ ಮಾಡಬೇಕೆಂಬ ದೈವಿಕ ಸಂಕಲ್ಪ ಹೊತ್ತು, ನನ್ನ ಚಿಕ್ಕಮ್ಮಂದಿರು ಪ್ರಾರಂಭ ಮಾಡಿದ ಶಕ್ತಿಪೀಠ ದರ್ಶನ ಯಾತ್ರೆಯ ಅನುಭವ ಕಥನವನ್ನು ಟಿಪ್ಪಣಿ ಮಾಡುವ ಮಹದಾಸೆಯಿಂದ ಬರೆಯಲು ಕುಳಿತಿದ್ದೇನೆ. ಶಕ್ತಿಪೀಠಗಳ ಜೊತೆಗೆ ದ್ವಾದಶ ಜ್ಯೋತಿರ್ಲಿಂಗಗಳು ಮತ್ತು ಅವುಗಳ ಜೊತೆ ಜೊತೆಗೆ ಆಯಾ ಪ್ರದೇಶದಲ್ಲಿ ನೋಡಲು ಸಿಕ್ಕ ಪುಣ್ಯಕ್ಷೇತ್ರಗಳನ್ನೂ ದರ್ಶನ ಮಾಡುತ್ತಾ ಹೊರಟ ಈ ಮಾತೆಯರು ತಮ್ಮ ಯಾತ್ರೆ ಪ್ರಾರಂಭ ಮಾಡಿ ಎರಡು ವರ್ಷಗಳಾಗುತ್ತಾ ಬಂತು. ನನ್ನ ಇಬ್ಬರು ಚಿಕ್ಕಮ್ಮಂದಿರ ಜೊತೆ, ನೆಂಟರು ಇಷ್ಟರು ಅಂತ ಇನ್ನೂ ಮೂರು ಮಾತೆಯರೂ ಹಲವು ಕ್ಷೇತ್ರಗಳ ದರ್ಶನ ಭಾಗ್ಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೀವನದ ಒಂದು ಹಂತದ ಜವಾಬ್ದಾರಿಗಳನ್ನು ಮುಗಿಸಿಕೊಂಡು ದೇವಸ್ಥಾನಗಳ ದರ್ಶನ ಮಾಡಬೇಕು ಎಂಬ ಆಸೆಯಿಂದ ಇವರುಗಳು ಮೊದಲು ಪ್ರಾರಂಭ ಮಾಡಿದ್ದು ಮಹಾರಾಷ್ಟ್ರದಲ್ಲಿರುವ ಅಷ್ಟ ವಿನಾಯಕನ ದರ್ಶನ ಮಾಡುವ ಮೂಲಕ. ಬಯಸದೇ ಬಂದ ಭಾಗ್ಯ ಎನ್ನುವಂತೆ ವಿಘ್ನನಿವಾರಕ ವಿಘ್ನೇಶ್ವರ ಮೊದಲು ಪೂಜೆ ಸ್ವೀಕಾರ ಮಾಡಿದರು. ಹೀಗೆ ಅಷ್ಟ ವಿನಾಯಕನ ಯಾತ್ರೆಗೆ ಹೊರಟ ಸಂದರ್ಭದಲ್ಲಿ ಇಬ್ಬರ ಮನಸ್ಸಿನಲ್ಲಿ ಮೂಡಿತು ಈ ಶಕ್ತಿ ಪೀಠ ದರ್ಶನದ ಮಹದಾಸೆ.

ವಿನಾಯಕನ ದರ್ಶನ ಪಡೆದು ಕೋಲ್ಹಾಪುರದ ಮಹಾಲಕ್ಷ್ಮಿಯ ದರ್ಶನಕ್ಕೆಂದು ಬಂದ ಈ ಮಾತೆಯರು ಆ ತಾಯಿಯ ಆಶೀರ್ವಾದ ಪಡೆದು ಅಲ್ಲಿಯೇ ಸಂಕಲ್ಪ ಮಾಡಿ ಬಿಟ್ಟರು. ಕೋಲ್ಹಾಪುರ್ ಕೂಡಾ ಒಂದು ಶಕ್ತಿ ಪೀಠ.

ಅಬ್ಬಾ!! ಇದು ಸುಲಭದ ಸಂಕಲ್ಪವೇ? ಅಲ್ಲವೇ ಅಲ್ಲ. ದೈಹಿಕ, ಮಾನಸಿಕ ತಯಾರಿಯ ಜೊತೆಗೆ ಹಣಕಾಸಿನ ತಯಾರಿ ಕೂಡಾ ಬೇಕಾದ ಯಾತ್ರೆ ಇದು. ಯಾಕೆಂದರೆ ಈ ಶಕ್ತಿ ಪೀಠಗಳು ಭಾರತದ ಉತ್ತರದಿಂದ – ದಕ್ಷಿಣ, ಪೂರ್ವದಿಂದ – ಪಶ್ಚಿಮಕ್ಕೆ ಹರಡಿಕೊಂಡಿದ್ದಲ್ಲದೇ, ಶ್ರೀಲಂಕಾ, ನೇಪಾಳ, ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ನೆಲೆಗೊಂಡಿವೆ. ಹಣಕಾಸಿನ ಯೋಚನೆಯಂತೂ ಅವರುಗಳಿಗೆ ಇರಲಿಲ್ಲ. ಮಾನಸಿಕವಾಗಿ ದೃಢ ನಿರ್ಧಾರ ಅವರಲ್ಲಿತ್ತು. ಆದರೆ ದೈಹಿಕ ಸಾಮರ್ಥ್ಯ?? ಅದೇನೋ ಹೇಳ್ತಾರಲ್ಲ ‘ಮನಸ್ಸಿದ್ದರೆ ಮಾರ್ಗ’ ಅಂತ. ನಿರ್ಧಾರ ಗಟ್ಟಿಯಾಗಿದ್ರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇವರುಗಳೇ ಸಾಕ್ಷಿ.

ಹಲವು ಕ್ಷೇತ್ರಗಳ ದರ್ಶನ ಮುಗಿಸಿ, ಇಂದು ಗುಜರಾತಿನ ಗಿರ್ನಾರ್ ಬೆಟ್ಟವನ್ನು ಹತ್ತಿ, ಗುರು ದತ್ತಾತ್ರೇಯರ ಧ್ಯಾನ ಸ್ಥಳದ ಬಳಿ ಕುಳಿತ ನನ್ನ ಚಿಕ್ಕಮ್ಮ ಒಮ್ಮೆ ತನ್ನ ದೈಹಿಕ ಸಾಮರ್ಥ್ಯವನ್ನ ನೆನಪು ಮಾಡಿಕೊಂಡರು. ಪ್ರೇಮಾ ಪರಮೇಶ್ವರ ಹೆಗಡೆ. ನನ್ನ ತಂದೆಯವರ ತಮ್ಮ, ನನ್ನ ಚಿಕ್ಕಪ್ಪನ ಮಡದಿ. ವಯಸ್ಸು ಕೇವಲ 58. ಇಷ್ಟು ವಯಸ್ಸಿನ ವರೆಗೆ ಸುಮಾರು 5 ಆಪರೇಷನ್ ಆಗಿದೆ. ಈಗ್ಗೆ ಸುಮಾರು 6ವರ್ಷಗಳ ಕೆಳಗೆ ಈ ಪ್ರಪಂಚದ ತಿಳುವಳಿಕೆನೇ ಇಲ್ಲದೇ ಆಸ್ಪತ್ರೆಯಲ್ಲಿ ವಾರಗಳ ಕಾಲ ಮಲಗಿದವರು. ಆಮೇಲೆ ಫೀನಿಕ್ಸ್ ನಂತೆ ಎದ್ದು ಬಂದು, ತಮಗೆ ಸಿಕ್ಕ ಮರುಜನ್ಮವನ್ನ ಸಾರ್ಥಕ ಮಾಡಿಕೊಳ್ಳುತ್ತಿರುವವರು. ನಿತ್ಯವೂ ಎರಡರಿಂದ ಮೂರು ಗಂಟೆಗಳ ಕಾಲ ಗುರು ಚರಿತ್ರೆ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ.. ಹೀಗೆ ಎಲ್ಲವನ್ನೂ ಓದುತ್ತಿರುವವರು. ಆ ಭಕ್ತಿ, ಆ ಪ್ರೀತಿ, ಆ ದೃಢ ನಿರ್ಧಾರ, ಆ ಶಿಸ್ತು.

ಭಗವಂತ ಒಲಿಯಲು ಇನ್ನೇನು ಬೇಕು ಅಲ್ವಾ? ಛಲಗಾರ್ತಿ. ಗಿರ್ನಾರ್ ಪರ್ವತದ 9000 ಮೆಟ್ಟಿಲುಗಳನ್ನು ಹತ್ತಿಳಿದು ಸಾಹಸ ಮಾಡಿದ್ದು ಮಾಸುವ ಮುನ್ನ ಕಠಿಣವಾದ ಅಮರನಾಥ ಯಾತ್ರೆಯನ್ನೂ ಪೂರೈಸಿದ ಸೌಭಾಗ್ಯ ಇವರದು. ಇವರ ಜೊತೆಗೆ ನನ್ನ ಇನ್ನೊಬ್ಬ ಚಿಕ್ಕಪ್ಪನ ಮಡದಿ ಸವಿತಾ ರಾಮದಾಸ ಹೆಗಡೆ. 55ರ ವಯಸ್ಸಿನಲ್ಲೂ workout ಮಾಡುತ್ತಾ fitness ಕಾಯ್ದುಕೊಂಡಿರುವ ಚೆಲುವೆ. ಸಾಹಸಿ ಹೆಣ್ಣು. ಕೋಲ್ಹಾಪುರ ತಾಯಿಯ ಪರಮ ಭಕ್ತೆ. ಸಂಬಂಧದಲ್ಲಿ ವಾರಗಿತ್ತಿಯರು… ಆದರೆ ವಾರ್ ಗಿತ್ತಿಯರಲ್ಲ… ಅಕ್ಕ ತಂಗಿಯರು.. ನಮ್ಮ ಚಿಕ್ಕಮ್ಮಂದಿರು. ಅಷ್ಟ ವಿನಾಯಕರ ದರ್ಶನ ಮಾಡಲೇಬೇಕೆಂಬ ಸಂಕಲ್ಪದಿಂದ ಹೊರಟವರು. ಅಷ್ಟ ವಿನಾಯಕ ಶಕ್ತಿಪೀಠಗಳ ದರ್ಶನ ಭಾಗ್ಯವನ್ನು ಅನುಗ್ರಹಿಸಿದ. ಈ ಇಬ್ಬರ ಜೊತೆ ಧನಲಕ್ಷ್ಮೀ ಮೋಕಾಶಿ, ಗೀತಾ ಹೆಗಡೆ ಮತ್ತು ಇಂದು ಹೆಗಡೆ ಇವರುಗಳು ಸಾಥ್ ನೀಡಿದವರು.

ಇನ್ನೇನು ಅವರ ಸಂಕಲ್ಪ ಸಿದ್ಧಿಯಾಗುವ ಕಾಲ ತುಂಬಾ ದೂರವಿಲ್ಲ. ಇವರುಗಳ ಈ ಪ್ರವಾಸದ ಕುರಿತು, ಅವರ ಅನುಭವ ಕಥನಕ್ಕೆ ಅಕ್ಷರ ರೂಪ ಕೊಡಲು ಬಯಸಿ, ಅವರಿಂದ ಕೇಳಿ ತಿಳಿದು ಬರೆಯಲು ಪ್ರಾರಂಭ ಮಾಡಿರುತ್ತೇನೆ.

ಮೊದಲು ಈ ಹದಿನೆಂಟು ಶಕ್ತಿ ಪೀಠಗಳು ಮತ್ತು ದ್ವಾದಶ ಜ್ಯೋತಿರ್ಲಿಂಗಗಳು ಯಾವವು ಎಂಬುದನ್ನು ತಿಳಿದು ಕೊಳ್ಳೋಣ.

18 ಶಕ್ತಿ ಪೀಠಗಳು :

  • ವೈಷ್ಣೋದೇವಿ ಜಾಲಾಜಿ, ಹಿಮಾಚಲ ಪ್ರದೇಶ
  • ಮಂಗಳಾಗೌರಿ ದೇವಿ, ಗಯಾ
  • ಗಿರಿಜಾ ದೇವಿ ಜಾಜಾಪುರ, ಓಡಿಶಾ
  • ಮಾಣಿಕ್ಯಾ ದೇವಿ ಲಾಕ್ಷರಾಮ, ಆಂದ್ರ
  • ವಿಶಾಲಾಕ್ಷೀ ದೇವಿ, ವಾರಣಾಸಿ
  • ಸರಸ್ವತಿ ದೇವಿ ಶಾರದಾ ಪೀಠ, ಕಾಶ್ಮೀರ
  • ಮಹಾಕಾಳಿ ದೇವಿ, ಉಜ್ಜಯನಿ
  • ಪುರುಹುಟಿಕಾ ದೇವಿ ಪೀಠ(peeta)ಪುರ, ಆಂದ್ರ
  • ಜೋಗುಳಂಬಾ ದೇವಿ, ಅಲಂಪುರ ತೆಲಂಗಾಣ
  • ಭ್ರಮರಾಂಬಿಕೆ ದೇವಿ, ಶ್ರೀಶೈಲ
  •  ಶಂಕರಾದೇವಿ, ಶ್ರೀಂಕೋಮಳಿ, ಶ್ರೀಲಂಕಾ
  • ಕಾಮಾಕ್ಷಿ ದೇವಿ, ಕಂಚಿ ತಮಿಳುನಾಡು
  • ಶ್ರಂಖಲಾ ದೇವಿ, ಪಾಂಡುವಾ, ವೆಸ್ಟ್ ಬೆಂಗಾಲ್
  • ಚಾಮುಂಡಿ ದೇವಿ ಮೈಸೂರು, ಕರ್ನಾಟಕ
  • ಮಹಾಲಕ್ಷ್ಮಿ ದೇವಿ, ಕೋಲ್ಹಾಪುರ
  • ಏಕವೀರಾ ದೇವಿ, ಮಹುರ್, ಮಹಾರಾಷ್ಟ್ರ
  • ಕಾಮರೂಪ ದೇವಿ, ಗುವಾಹಟಿ, ಅಸ್ಸಾಂ
  • ಮಾಧವೇಶ್ವರಿ ದೇವಿ, ಪ್ರಯಾಗರಾಜ್, ಉತ್ತರ ಪ್ರದೇಶ

ದ್ವಾದಶ ಜ್ಯೋತಿರ್ಲಿಂಗಗಳು :

  •  ಸೋಮನಾಥ ಜ್ಯೋತಿರ್ಲಿಂಗ – ಪ್ರಭಾಸ ಪಟನ್, ವೇರಾವಳ್, ಸೌರಾಷ್ಟ್ರ, ಗುಜರಾತ್
  • ಮಲ್ಲಿಕಾರ್ಜುನ ಜ್ಯೋತಿರ್ಲಿಂಗ – ಶ್ರೀಶೈಲ, ಆಂಧ್ರಪ್ರದೇಶ
  • ಮಹಾಕಾಳೇಶ್ವರ ಜ್ಯೋತಿರ್ಲಿಂಗ – ಉಜ್ಜಯಿನಿ, ಮಧ್ಯಪ್ರದೇಶ
  • ಓಂಕಾರೇಶ್ವರ ಜ್ಯೋತಿರ್ಲಿಂಗ – ಮಾಂಧಾತಗಿರಿ / ಖಾಂಡ್ವಾ, ಮಧ್ಯಪ್ರದೇಶ
  • ಕೇದಾರನಾಥ ಜ್ಯೋತಿರ್ಲಿಂಗ – ರುದ್ರಪ್ರಯಾಗ, ಉತ್ತರಾಖಂಡ
  • ಭೀಮಶಂಕರ ಜ್ಯೋತಿರ್ಲಿಂಗ – ಪುಣೆ, ಮಹಾರಾಷ್ಟ್ರ
  • ಕಾಶೀ ವಿಶ್ವನಾಥ ಜ್ಯೋತಿರ್ಲಿಂಗ – ವಾರಣಾಸಿ, ಉತ್ತರ ಪ್ರದೇಶ
  • ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ – ನಾಶಿಕ್, ಮಹಾರಾಷ್ಟ್ರ
  • ವೈದ್ಯನಾಥ (ಬೈದ್ಯನಾಥ) ಜ್ಯೋತಿರ್ಲಿಂಗ – ದೇವಘರ್, ಜಾರ್ಖಂಡ್
  • ನಾಗೇಶ್ವರ ಜ್ಯೋತಿರ್ಲಿಂಗ – ದ್ವಾರಕಾ, ಗುಜರಾತ್
  • ರಾಮೇಶ್ವರ ಜ್ಯೋತಿರ್ಲಿಂಗ – ರಾಮೇಶ್ವರಂ, ತಮಿಳುನಾಡು
  • ಘೃಷ್ಣೇಶ್ವರ ಜ್ಯೋತಿರ್ಲಿಂಗ – ಎಲ್ಲೋರಾ.

  • ಮಾಲತಿ ಗಣೇಶ್ ಭಟ್

Leave a Reply

Home
Search
Menu
Recent
About
×