‘ಗುರುಮಾರ್ಗದಲ್ಲಿ ಡಾ.ನಳಿನಾಕ್ಷಿ ಸಣ್ಣಪ್ಪ’ ಅನಿತಾ. ಪಿ.ತಾಕೊಡೆ

ಮೂರುವರ್ಷಗಳ ಹಿಂದೆ ಪ್ರಕಟವಾದ ಲಕ್ಷ್ಮಣ ಕೊಡಸೆ ಅವರ ‘ಗುರುಮಾರ್ಗದಲ್ಲಿ ಡಾ.ನಳಿನಾಕ್ಷಿ ಸಣ್ಣಪ್ಪ’ ವ್ಯಕ್ತಿಚಿತ್ರದ ಕೃತಿಯ ಕುರಿತು ಮುಂಬೈ ಲೇಖಕಿ ಅನಿತಾ ಪಿ.ತಾಕೊಡೆ ದೀರ್ಘವಾದ ಪ್ರತಿಕ್ರಿಯೆ ನೀಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…

ಪುಸ್ತಕ : ಗುರುಮಾರ್ಗದಲ್ಲಿ ಡಾ.ನಳಿನಾಕ್ಷಿ ಸಣ್ಣಪ್ಪ
ಲೇಖಕರು : ಲಕ್ಷ್ಮಣ ಕೊಡಸೆ 
ಪ್ರಕಾಶಕರು : ಸ್ವರ ಪ್ರಕಾಶನ
ಪುಟ : 176
ಬೆಲೆ : 215.00

ಡಾ. ನಳಿನಾಕ್ಷಿ ಸಣ್ಣಪ್ಪ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಬೆಂಗಳೂರಿನ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಪತ್ರಕರ್ತರ ಸಂಘ ಈಚೆಗೆ ವಿ.ಪಿ.ಸಿಂಗ್ ಪ್ರಶಸ್ತಿಯನ್ನು ಪ್ರಕಟಿಸಿದೆ. ಅನಿತಾ ಪಿ.ತಾಕೊಡೆ ಅವರ ಪ್ರತಿಕ್ರಿಯೆ ಇಲ್ಲಿದೆ:

ಗುರುತತ್ವಗಳ ಪರಿಪಾಲಕಿ ಡಾ.ನಳಿನಾಕ್ಷಿ ಸಣ್ಣಪ್ಪ

ಸಾಹಿತಿ ಮತ್ತು ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ತೊಡಗಿಸಿಕೊಂಡವರು. ನಾಡಿನ ಹೆಸರಾಂತ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕ, ವರದಿಗಾರ, ಮುಖ್ಯ ವರದಿಗಾರ ಹಾಗೂ ಸುದ್ಧಿ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಇವರು ಈವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಕನರ್ಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿಯೂ ಕೆಲವು ಕೃತಿಗಳನ್ನು ಸಿದ್ದಪಡಿಸಿದ ಹಿರಿಮೆ ಇವರದು. ಸಮಾಜಕ್ಕೆ ವಿಶೇಷ ಕೊಡುಗೆಯನ್ನು ನೀಡಿದವರನ್ನು ಗುರುತಿಸಿ, ಕೆಲವರ ವ್ಯಕ್ತಿಚಿತ್ರಣವನ್ನೂ ಬರೆದಿದ್ದಾರೆ. ಅದರಲ್ಲಿ ‘ಗುರುಮಾರ್ಗದಲ್ಲಿ ಡಾ.ನಳಿನಾಕ್ಷಿ ಸಣ್ಣಪ್ಪ’ ಒಂದು ಮಹತ್ವದ ಕೃತಿಯಾಗಿದೆ.

ಈ ಕೃತಿ ಮಹಿಳಾ ಸಬಲೀಕರಣದ ಸಾಧಕಿ ನಳಿನಾಕ್ಷಿಯವರ ಜೀವನಕಥನವನ್ನಾಧರಿಸಿದೆ. 2022ರಲ್ಲಿ ಸ್ವರ ಪ್ರಕಾಶನದಲ್ಲಿ ಪ್ರಕಟಿತವಾದ ಈ ಕೃತಿಗೆ ಮುನ್ನುಡಿಯನ್ನು ಪ್ರೊ.ಓಂಕಾರ ಕಾಕಡೆ ಮತ್ತು ಬೆನ್ನುಡಿಯನ್ನು ಎಚ್.ಎಲ್.ಶಿವಾನಂದ ಅವರು ಬರೆದಿದ್ದಾರೆ. ಅಪೂರ್ವ ಮಹಿಳೆ ನಳಿನಾಕ್ಷಿ ಸಣ್ಣಪ್ಪನವರ ವ್ಯಕ್ತಿಚಿತ್ರವನ್ನು ಲಕ್ಷ್ಮಣ ಕೊಡಸೆಯವರು ಒಟ್ಟು ಒಂಬತ್ತು ಅಧ್ಯಾಯಗಳಲ್ಲಿ ಸತ್ವಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ಅಧ್ಯಾಯದಲ್ಲಿ ಸ್ವಾತಂತ್ರ್ಯಪೂರ್ವಕಾಲದ ಜನಜೀವನ, ಸಮುದಾಯದ ಪೂರ್ವಾಪರ ಸಂಗತಿಗಳು, ನಾರಾಯಣ ಗುರುಗಳ ಪ್ರಭಾವ, ನಳಿನಾಕ್ಷಿಯವರ ಕೌಟುಂಬಿಕ ಹಿನ್ನೆಲೆಯನ್ನು ಹೇಳಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಕರಾವಳಿಯಿಂದ ಘಟ್ಟದ ಮೇಲಿನವರೆಗಿನ ಭೌಗೋಳಿಕ ಹಿನ್ನೆಲೆ, ತುಳುನಾಡಿನ ಚರಿತ್ರೆಯ ಹಲವು ಮಜಲುಗಳನ್ನು ವಿಶ್ಲೇಷಿಸಿದ್ದಾರೆ. ಈ ಎರಡು ಅಧ್ಯಾಯಗಳಲ್ಲಿಯೂ ಲೇಖಕರ ಐತಿಹಾಸಿಕ ಪ್ರಜ್ಞೆಯನ್ನು ಗುರುತಿಸಬಹುದಾಗಿದೆ.

ನಳಿನಾಕ್ಷಿ ಅವರ ಕೌಟುಂಬಿಕ ಹಿನ್ನೆಲೆ ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಮೂಡಲು ಅವರಿಗೆ ಮನೆಯಿಂದ ದತ್ತವಾಗಿ ಬಂದಿರುವ ಸಂಸ್ಕಾರದ ಹಿನ್ನೆಲೆಯನ್ನು ಲೇಖಕರು ಆರಂಭದಲ್ಲಿಯೇ ವಿಶ್ಲೇಷಿಸಿದ್ದಾರೆ. ನಳಿನಾಕ್ಷಿಯವರ ತಂದೆ ರಂಗ ಅವರು ಹಲವು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಹೊಲಿಗೆ ತರಬೇತಿ, ಅಡುಗೆ, ನೃತ್ಯ ಚಿತ್ರಕಲೆ ಹೀಗೆ ಎಲ್ಲಾ ಬಗೆಯ ತರಬೇತಿಗಳನ್ನು ಕೊಡಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಮಕ್ಕಳಿಗೆ ಮಾರ್ಗದರ್ಶಿಯಾಗುವಂತಹ ರೀತಿಯಲ್ಲಿ ಬದುಕಿದ್ದರು. ಹಾಗಾಗಿ ಸಮಾಜ ಸೇವೆ ಎನ್ನುವುದು ನಳಿನಾಕ್ಷಿಯವರಿಗೆ ರಕ್ತಗತವಾಗಿ ಬಂದಿದೆಯೆಂದು ತಿಳಿದುಬರುತ್ತದೆ.

ನಳಿನಾಕ್ಷಿಯವರು ಮಂಗಳೂರಿನವರಾದರೆ ಅವರ ಪತಿ ಡಾ. ಸಣ್ಣಪ್ಪ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನವರು. ವೈದ್ಯಕೀಯ ವೃತ್ತಿಯಲ್ಲಿರುವ ತನ್ನ ಪತಿಗೆ ವರ್ಗಾವಣೆಯಾದಾಗಲೆಲ್ಲ ಈ ದಂಪತಿ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಸಬೇಕಾಯಿತು. ಅಲ್ಲಿನ ಭಾಷೆ ಮತ್ತು ಜನರೊಂದಿಗೆ ಹೊಂದಿಕೊಳ್ಳಬೇಕಾಯಿತು. ಆದರೂ ನಳಿನಾಕ್ಷಿಯವರು ತಮ್ಮ ಜೀವನವನ್ನು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸಲಿಲ್ಲ. ಊರಿನ ಸ್ಥಳೀಯ ಮಹಿಳೆಯರನ್ನು ಸಂಪರ್ಕಿಸಿ ಅವರಿಗೆ ಹೊಲಿಗೆ ತರಬೇತಿ, ವಿಧವಿಧದ ಅಡುಗೆ ಮಾಡುವುದು, ನೃತ್ಯ, ಸಂಗೀತ ಹೀಗೆ ನಾನಾ ಬಗೆಯ ಚಟುವಟಿಕೆಗಳನ್ನು ಕಲಿಸಿಕೊಡಲಾರಂಭಿಸಿದರು. ಸಾಂಸ್ಕೃತಿಕ ಮನೋಭಾವವನ್ನು ಜಾಗ್ರತಗೊಳಿಸಿ ಗ್ರಾಮೀಣ ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿದರು. ಮಹಿಳೆಯರನ್ನು ಸಬಲಗೊಳಿಸುವುದು. ಸ್ವತಂತ್ರ ಅಸ್ತಿತ್ವವನ್ನು ಕಂಡುಕೊಳ್ಳಲು, ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲು ಪ್ರೇರೇಪಿಸುವುದು.
ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಯಲು ಅವಕಾಶ ಕಲ್ಪಿಸಿಕೊಡುವುದು ಇವರ ಮುಖ್ಯ ಗುರಿಯಾಗಿತ್ತು.

ಮದುವೆಯ ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಬಿ.ಎ. ಪದವಿಯನ್ನು ಪಡೆದ ನಳಿನಾಕ್ಷಿ ಮಾಡಿದ ಸೇವೆ ಅಪಾರ. ಯಲ್ದೂರು, ಅಮೃತೂರು, ನಲ್ಲೂರು, ಮಂಗಳೂರು, ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೀಗೆ ನಳಿನಾಕ್ಷಿಯವರು ಹೋದೆಡೆಯೆಲ್ಲ ಸಂಘಟನೆಯ ಮನೋಭಾವವನ್ನು ಸ್ಥಳೀಯರಲ್ಲಿ ಮೂಡಿಸಿದರು. ಬೆಂಗಳೂರಿನಲ್ಲಿ ಈಡಿಗ ಸಂಘದ ಮುಖಂಡರುಗಳನ್ನು ಸಂಪರ್ಕಿಸಿ ಪ್ರತಿ ಮನೆಗಳಿಗೆ ಹೋಗಿ ಅವರ ಪತ್ನಿಯರನ್ನು ಸಂಘದಲ್ಲಿ ತೊಡಗಿಸಿಕೊಳ್ಳಲು ವಿನಂತಿಸಿದರು. 26 ಜಾತಿಗಳ ಮಹಿಳೆಯರನ್ನು ಒಳಗೊಂಡ ಕರ್ನಾಟಕ ಈಡಿಗ ಮಹಿಳಾ ಸಂಘವನ್ನು ಸ್ಥಾಪಿಸಿದರು.

ನಳಿನಾಕ್ಷಿಯವರು ಭರಮಸಾಗರದಲ್ಲಿ 1971ರಲ್ಲಿಯೇ ವನಿತಾ ಮಹಿಳಾ ಸಂಘ ಮತ್ತು ಶಿಶು ವಿಹಾರವನ್ನು ಅಸ್ತಿತ್ವಕ್ಕೆ ತಂದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಬೆಂಗಳೂರಿನಲ್ಲಿ 1983ರಲ್ಲಿ ಮದರ್ಸ್ ಟಚ್ ಹೆಸರಿನಲ್ಲಿ ನರ್ಸರಿ ಶಾಲೆ ಆರಂಭಿಸಿದರು. 1994ರ ಹೊತ್ತಿಗೆ ಶಿಕ್ಷಣ ಇಲಾಖೆಯ ಅನುಮತಿ ದೊರೆತ ಮೇಲೆ ಪ್ರೈಮರಿ, ಪ್ರೌಢಶಾಲೆಯೂ ಆರಂಭವಾಯಿತು. ಇವರೇ ಈ ಶಾಲೆಯ ಪ್ರಾಂಶುಪಾಲರಾದರು. 1992ರ ಹೊತ್ತಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿನಿ ನಿಲಯದ ಸ್ಥಾಪನೆಗೆ ಕಾರಣರಾದರು. ವಿವಾಹ ವೇದಿಕೆಯನ್ನು ಅಸ್ತಿತ್ವಕ್ಕೆ ತಂದರು. ಶಿವಮೊಗ್ಗ, ಹಾಸನ, ಸಾಗರ, ಹುಣಸೂರು ಮೊದಲಾದ ಕಡೆಗಳಲ್ಲಿ ಇದರ ಶಾಖೆಗಳು ತೆರೆದು ಕೊಂಡವು. ಬೆಂಗಳೂರು ನಗರದ ವಿವಿಧೋದ್ದೇಶ ಸಹಕಾರ ಸಂಘ ಅಸ್ತಿತ್ವಕ್ಕೆ ತರುವಲ್ಲಿ ಅವರ ಪರಿಶ್ರಮ ಅಪಾರ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದುರ್ಬಲ ವರ್ಗದವರಿಗೆ, ಕೊಳೆಗೇರಿ ವಾಸಿಗಳಲ್ಲಿ ಅರ್ಹ ಮಹಿಳೆಯರಿಗೆ ಹೆಣ್ಣುಮಕ್ಕಳ ಮದುವೆಗೂ ನೆರವಾಗುತ್ತಿದ್ದರು. ಇವೆಲ್ಲ ಸಾಧನೆಗಳನ್ನೂ ಸರಕಾರದ ದೇಣಿಗೆ ಮತ್ತು ಜನಾಂಗದ ಬಂಧುಗಳ ದೇಣಿಗೆಯನ್ನು ಸಂಗ್ರಹಿಸುವ ಮೂಲಕ (ಸುರಗಂಗೆ',ಶಮಿ’, ರೇಣುಕಾ'ಬೆಳ್ಳಿ ಹೆಜ್ಜೆ’ ಇವು ಅವರು ಹೊರತಂದ ಸ್ಮರಣ ಸಂಚಿಕೆಗಳು) ಮೂಲಕ ಮಾಡಿದ್ದಾರೆ. ಹೀಗೆ ನಳಿನಾಕ್ಷಿಯವರು ಬೆಂಗಳೂರು ಹೊರತಾಗಿ ರಾಜ್ಯದ ಹಲವು ಕಡೆಗಳಲ್ಲಿ ಈಡಿಗ ಮಹಿಳಾ ಸಂಘದ ಚಟುವಟಿಕೆಗಳನ್ನು ವಿಸ್ತರಿಸಿರುವುದರ ಕುರಿತು ಲೇಖಕರು ಕೂಲಂಕಷವಾಗಿ ವಿವರಿಸಿದ್ದಾರೆ.

ನಳಿನಾಕ್ಷಿಯವರು ತಮ್ಮ ಮಕ್ಕಳನ್ನೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ಸಮಾಜಸೇವೆಗೆ ಸ್ಫೂರ್ತಿಯಾಗಿದ್ದ ಪತಿ ಸಣ್ಣಪ್ಪನವರೂ ಸಾರ್ವಜನಿಕರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು. ಇವರು ಬೆಂಗಳೂರು ಮಹಾನಗರ ಪಾಲಿಕೆಗೆ ವಲಯ ಆರೋಗ್ಯ ಅಧಿಕಾರಿಯಾಗಿದ್ದರು. ಕರ್ನಾಟಕ ಸರಕಾರದಿಂದ ಚಿನ್ನದ ಪದಕ ಗೌರವ ಪಡೆದಿದ್ದ ಸಣ್ಣಪ್ಪನವರು ಕೊಳಗೇರಿ ನಿವಾಸಿಗಳಿಗೆ ಕುಟುಂಬ ವೈದ್ಯರಂತಿದ್ದರು. ನಿವೃತ್ತರಾದ ಮೇಲೂ ಜನಸೇವೆಯನ್ನು ಮುಂದುವರಿಸಿದ್ದರು. ಈಡಿಗ ಸಮಾಜದ ಚಟುವಟಿಕೆ, ಬೆಂಗಳೂರು ಬಿಲ್ಲವ ಸಂಘದಲ್ಲಿ ಸಕ್ರಿಯರಾಗಿದ್ದ ಇವರು ಈಡಿಗರ ಹಾಸ್ಟೆಲ್ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಅಸ್ತಿತ್ವಕ್ಕೆ ತಂದರು. ಇವರ ಕುರಿತು ವಿಸ್ತೃತ ಮಾಹಿತಿಯನ್ನು ಲೇಖಕರು ದಾಖಲಿಸಿದ್ದಾರೆ. ಕೃತಿಯ ಕೊನೆಯ ಭಾಗದಲ್ಲಿ ಆಪ್ತರ ಅಭಿಪ್ರಾಯಗಳು ನಳಿನಾಕ್ಷಿ ಸಣ್ಣಪ್ಪನವರ ಮೇರು ಮಟ್ಟದ ವ್ಯಕ್ತಿತ್ವಕ್ಕೆ ಕನ್ನಡಿಯಂತಿವೆ.

ಹಿಂದುಳಿದ ವರ್ಗಗಳ ಏಳಿಗೆಗಾಗಿ ತೊಡಗಿಸಿಕೊಂಡಿರುವ ನಳಿನಾಕ್ಷಿ ಅವರ ಜೀವನ ಶೈಲಿಯೇ ಒಂದು ವಿಶೇಷ. ಮಹಿಳಾ ಸಂಘಟನೆಯಲ್ಲಿ ಇವರು ಬಹುದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಇವರ ಅಪ್ರತಿಮ ಸಮಾಜ ಸೇವೆಯನ್ನು ನಾಯಕತ್ವದ ಗುಣವನ್ನು ಗುರುತಿಸಿ ತಮಿಳುನಾಡಿನ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ. ನಳಿನಾಕ್ಷಿಯವರ ಇಷ್ಟೆಲ್ಲ ಸಾಧನೆಯ ಹಿಂದೆ ಸಾಕಷ್ಟು ಅಡೆತಡೆಗಳನ್ನು ಎದುರಿಸಿರಬಹುದು. ಓರ್ವ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ನಳಿನಾಕ್ಷಿ ಅವರು ಮಾದರಿಯಾಗಿದ್ದಾರೆ. ಇವರು ನಿಜವಾದ ಅರ್ಥದಲ್ಲಿ ನಾರಾಯಣ ಗುರುಗಳ ಪರಮ ಆರಾಧಕರಾಗಿ ಅವರ ತತ್ವಗಳ ಪರಿಪಾಲಕರಾಗಿ ನಮ್ಮ ಕಣ್ಣೆದುರು ನಿಲ್ಲುತ್ತಾರೆ. ಇಳಿವಯಸ್ಸಿನಲ್ಲೂ (ಈಗ ಅವರಿಗೆ 80 ಮೀರಿದೆ) ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುವ ಇವರ ಮನೋಗುಣ ಮೆಚ್ಚುವಂಥದ್ದು. ಇಂಥ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ನಾಳಿನಾಕ್ಷಿ ಅವರ ಸಮಾಜ ಸೇವಾ ಕಾರ್ಯಗಳು ಹಲವರಿಗೆ ಪ್ರೇರಣೆ ನೀಡಲಿ ಎಂಬ ಸದಾಶಯದೊಂದಿಗೆ ಲಕ್ಷ್ಮಣ ಕೊಡಸೆ ಅವರು ಈ ಕೃತಿಯನ್ನು ಅರ್ಥಪೂರ್ಣವಾಗಿ ರಚಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಕೊಡಸೆಯವರಿಂದ ಇನ್ನಷ್ಟು ಮೌಲ್ಯಯುತ ಕೃತಿಗಳು ಬೆಳಕು ಕಾಣಲಿ ಎಂಬ ಹಾರೈಕೆ.


  • ಅನಿತಾ ಪಿ.ತಾಕೊಡೆ –  ಲೇಖಕರು, ಉಪನ್ಯಾಸಕರು, ಮುಂಬಯಿ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading