ಋಷಿಗಳು, ಗಂಧರ್ವರು, ಕಿನ್ನರು ಪಿತೃಗಳು ಎಲ್ಲರೂ ಪರಮಾತ್ಮನಿಂದ ಹುಟ್ಟಿರುವರು. ಇದು ವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ಹದಿನೆಂಟನೆಯ ಶ್ಲೋಕದಲ್ಲಿ ಬಂದಿದೆ. ಹೀಗೆ ಪರಮ ಪುರುಷೋತ್ತಮನು ತನ್ನ ಪರಿವಾರದಲ್ಲಿ ನೆಲೆಸಿ ಅವರಿಂದ ಕಾರ್ಯ ಕಾರಣನಾಗಿ ಮಾಡಿಸುತ್ತಾನೆ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಾಹಂ ಕರ್ತಾ ಹರಿ: ಕರ್ತಾ.
ಶ್ರೀ ಗುರುಭ್ಯೋ ನಮಃ ಶ್ರೀ ಹರಿ ಓಂ.
ಹಿಂದಿನ ಸಂಚಿಕೆಯಲ್ಲಿ ಅಪಾರವಾದ ಪರಮಾತ್ಮನ ಪರಿವಾರ ತಿಳಿದಿದೆ.ಅದರಲ್ಲಿ ಭೂತವಾಯುವಿಗೆ ಆವಾಂತರಾಭಿಮಾನಿಯೂ ವಿದಿಕ್ಕಿಗೆ ಅಭಿಮಾನಿಯಾದ, ತಪಸ್ವಿಯಾದ ವಾಯು ಪುತ್ರನೆನಿಸಿದ ಮರೀಚಿ ಮುನಿ, ಇಂದ್ರ ಪುತ್ರನಾದ ಜಯಂತ ಇವರು ವಿಷಯವಾಸನಾದಲ್ಲಿ ಕಾತರ ಹುಟ್ಟಿಸದೆ ವೀತಭಯನೆನಿಸಿದ ಶ್ರೀ ಹರಿಯಲ್ಲಿ ಮಿಥ್ಯಾ ಜ್ಞಾನವನ್ನು ನೀಡದೆ ಪಾಲಿಸುವ ದೇವತೆಗಳು.
ಪ್ರಲ್ಹಾದ ಬಾಲಕನಾದರೂ ನವವಿಧ ಭಕ್ತಿಯನ್ನು ವಶಮಾಡಿ ಕೊಂಡವನು. ಕಾರಣ ಅವನು ಶ್ರೀ ನಿಧಿಯನ್ನು ಹೊಂದಿರುವ ಶ್ರೀಮಂತನು. ತಂದೆಯಾದ ಹಿರಣ್ಯಕಶಿಪು ದೈತ್ಯರ ಕಾಂತಿ ತುಂಬಿದ, ಇಂದ್ರಿಯ ಸಾಮರ್ಥ್ಯ ಹೊಂದಿರುವ ಸಾವನ್ನೆ ಗೆದ್ದವನೆಂಬ ಭ್ರಮೆಯಲ್ಲಿದ್ದ ದೈತ್ಯನ ಅಜ್ಞಾನದ ಅಹಂಕಾರಕ್ಕೆ ಶಿಕ್ಷಿಸಿ ಮುಕ್ತಿ ನೀಡಿದನು. ಆದರೆ ಪ್ರಲ್ಹಾದನಿಗೆ ವಿಷ್ಣುಸಹಸ್ರನಾಮದಲ್ಲಿ ಬಂದ “ಶ್ರೀದ:” ಎಂದರೆ ಸಂಪತ್ಕರನಾದ ನರಹರಿ.
ನರಸಿಂಹ ರೂಪದಿಂದ ಪ್ರತ್ಯಕ್ಷನಾಗಿ ಒಂದು ಮನ್ವಂತರಕಾಲದ ಆಧಿಪತ್ಯವನ್ನು ಮುಂದೆ ಮುಕ್ತಿಯನ್ನು ಕರುಣಿಸಿದನು. (ಶ್ರೀದ:ಶ್ರೀಶ: ಶ್ರೀನಿವಾಸ:) ವಿಷ್ಣು ಸಹಸ್ರನಾಮದ ಅರವತೈದನೆಯ ಶ್ಲೋಕದ ನಾಮಗಳೇ ನರಸಿಂಹನವತಾರದ ಅದ್ಭುತ ಕಾರ್ಯದ ನಾಮಗಳು. ಸಪ್ತೇಂದ್ರಿಯರು ಬಲಿ, ಶಂಭು, ವಿಧೃತಿ, ಋತುಧಾಮ, ನಿಷ್ಕಲುಷ, ದಿವಸ್ಪತಿ ಶುಚಿ ಇವರು ಕರ್ಮಜ ದೇವತೆಗಳೆನಿಸುವರು. ಇನ್ನು, ಕಾರ್ತವೀರಾರ್ಜುನ, ನಹುಷ, ಶಶಬಿಂಧು, ಮಾಂಧಾತ ಪ್ರಿಯವೃತ, ಪರೀಕ್ಷಿತ ಅಂಬರೀಷ್ ಎಲ್ಲ ಚಕ್ರವರ್ತಿಗಳು ಕರ್ಮಜರು ಇವರನ್ನು ನಿತ್ಯ ಮಂಗಳಾಷ್ಟಕದಲ್ಲಿ ನಿತ್ಯ ಪಠಿಸುವರು.

ಋಷಿಗಳು, ಗಂಧರ್ವರು, ಕಿನ್ನರು ಪಿತೃಗಳು ಎಲ್ಲರೂ ಪರಮಾತ್ಮನಿಂದ ಹುಟ್ಟಿರುವರು. ಇದು ವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ಹದಿನೆಂಟನೆಯ ಶ್ಲೋಕದಲ್ಲಿ ಬಂದಿದೆ. ಹೀಗೆ ಪರಮ ಪುರುಷೋತ್ತಮನು ತನ್ನ ಪರಿವಾರದಲ್ಲಿ ನೆಲೆಸಿ ಅವರಿಂದ ಕಾರ್ಯ ಕಾರಣನಾಗಿ ಮಾಡಿಸುತ್ತಾನೆ. ಎಲ್ಲ ದೇವತೆಗಳು, ಅಭಿಮಾನಿಗಳು ನಮ್ಮ ದೇಹದ ಒಳಗೂ ಹೊರಗೂ ಬ್ರಹ್ಮಾಂಡದ ಒಳಗೂ ಹೊರಗೂ ಇರುವರು. ಪರಮಾತ್ಮನು ತನ್ನ ಸ್ವ ಇಚ್ಛೆಯಿಂದಲೇ ಕಾರ್ಯ ಮಾಡಿಸಿ ರಕ್ಷಿಸುವನು. ವಿಷ್ಣುಸಹಸ್ರನಾಮದಲ್ಲಿ (“ಭೂತ ಭವ್ಯ ಭವತ್ಪ್ರಭು”) ಎಂದು ಕರೆಯಿಸಿಕೊಂಡಿರುವನು.
ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲುಗಳು ಅವನ ಇಚ್ಛೆಯಂತೆ ನಡೆಯುವವು ಕಾರಣ ಋತು ಎನಿಸಿದ್ದಾನೆ. ಕಾಲರೂಪಕನಾದ ವಿಷ್ಣುವಿನ ತೋಟದಲ್ಲಿ ಪ್ರತಿದಿನ ಹೊಸ ಹೂವು ಅರಳುವುದು. ಯಾವ ರೂಪದಲ್ಲೋ ಯಾರ ಆವೇಶದಲ್ಲೋ ಗೋತ್ತಿಲ್ಲ. ಅದಕ್ಕೆ ಗುಣಾತ್ಮಕತೆಯಿಂದ ನೀರು ಎರೆದರೆ ಜಗತ್ತೇ ಅರಳುವುದು. ಅದನ್ನು ನೋಡಿ ಆನಂದಿಸಬಹುದಲ್ವಾ? ತಾಳ್ಮೆ, ಸಹನೆ, ಗುರಿ ಕಾರ್ಯ ಇವು ಅಹಿಂಸೆಯ ತತ್ವದಲ್ಲಿದ್ದರೆ ಧರ್ಮ ಸಾಧನೆ ಆಗುವುದು. ವಿಷ್ಣುಸಹಸ್ರನಾಮದಲ್ಲಿ ಬರುವ ಆದಿತ್ಯ ಮುಂತಾದ ಕೆಲವು ನಾಮಗಳು ಭೌತಿಕ ವಸ್ತುಗಳನ್ನು ಸೂಚಿಸಿದರೂ ಭಗವಂತನಿಂದ ಭಿನ್ನವಲ್ಲ ಅವನ ವಿಭೂತಿಯಾಗಿದೆ.
ನಿತ್ಯ ಎಲ್ಲರೂ ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥಿಸಿ ನಮಸ್ಕರಿಸುತ್ತಾರೆ. ಈ ದೀಪದಲ್ಲಿ ಶ್ರೀಹರಿಯ ಹದಿಮೂರು ರೂಪಗಳಿವೆ ಎಂದು ಜ್ಞಾನಿಗಳು ತಿಳಿಸುತ್ತಾರೆ. ದೀಪದ ಪಾತ್ರೆಯಲ್ಲಿ ಬ್ರಹ್ಮ, ಎಣ್ಣೆಯಲ್ಲಿ ಲಕ್ಷ್ಮೀ ದೇವಿ, ಬತ್ತಿಯಲ್ಲಿ ವಾಸುದೇವ, ದೀಪದ ಕುಡಿಯಲ್ಲಿರುವ ಕಪ್ಪು ಬಣ್ಣದಲ್ಲಿ ರುದ್ರದೇವರು, ಕೆಂಪು ಬಣ್ಣ ಇಂದ್ರ, ಸ್ತಂಭದಲ್ಲಿ ನಕ್ಷತ್ರ, ನಾಳದಲ್ಲಿ ವಾಸುಕಿ, ಬೆಳಕಿನಲ್ಲಿ ಭೂ, ಸೂರ್ಯ, ಚಂದ್ರ, ವರುಣ, ವಾಯು ದೇವರ ಸಹಿತ ಜ್ಞಾನ ಸ್ವರೂಪನಾದ ನಾರಾಯಣ ಈ ಹದಿಮೂರು ರೂಪಗಳಿಂದ ಇರುವನು.
ಹತ್ತಿಯು ಒಂದು ವಿಶಿಷ್ಟವಾದ ವಸ್ತು. ಯಾಕೆಂದರೆ ಗಿಡದಲ್ಲಿರುವ ಹತ್ತಿಯಲ್ಲಿ ವಾಸುದೇವ, ಕಾಳು ತೆಗೆದ ಹತ್ತಿಯಲ್ಲಿ ಸಂಕರ್ಷಣ, ಎಳೆಯಲ್ಲಿ ಪ್ರದ್ಯುಮ್ನ, ಬಟ್ಟೆಯಲ್ಲಿ ಅನಿರುದ್ಧ, ಈ ನಾಲ್ಕು ನಾಮರೂಪಗಳಿಂದ ಇದ್ದು ತಯಾರಿಸಿರುವವರಲ್ಲಿ ಕರ್ಮನಿಯಾಮಕ ನಾರಾಯಣನು ಓತಪ್ರೋತವಾಗಿ ಲಕ್ಷ್ಮೀ ಸಹಿತ ನೆಲೆಸಿ ಚಳಿ ಬಿಸಿಲು, ಮಳೆಯಿಂದ ರಕ್ಷಿಸಿ ಜ್ಞಾನವೆಂಬ ಮಾನದಿಂದ ಒಂದು ಘಳಿಗೆಯೂ ಬಿಡದೆ ಕಾಯುವನು. ಇದನ್ನು ಸುಬುದ್ಧಿಯಿಂದ ಶಾಂತಿಯಿಂದ ತಿಳಿಯುತ್ತ ಕೃತಿಗಳನ್ನು ಮಾಡುತ್ತ ಹೋದರೆ ಜಯ ಸಿಗುವುದು ಖಚಿತ. ಮಾಯಾ ಪತಿ ವಾಸುದೇವನು ದ್ವಂದ್ವ ಕೃತಿಗಳನ್ನು ಮಾಡಿಸುವನು. ಅವನಿಗೆ ಯಾವ ಲಾಭವೂ ಇಲ್ಲ ನಷ್ಟವೂ ಇಲ್ಲ ದೋಷವರ್ಜಿತನು. ಮಾನ ರಕ್ಷಣೆಯಲ್ಲಿ,ದೇಹ ರಕ್ಷಣೆಯಲ್ಲಿ ಪರಮಾತ್ಮನೆ ಸಮರ್ಥನು. ಎಣ್ಣೆ ಇದ್ದಷ್ಟು ಬತ್ತಿ ಚೆನ್ನಾಗಿ ಬೆಳಗುತ್ತದೆ. ಅದಕ್ಕೆ ವಿಜಯ ದಾಸರು ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ ಎಂದು ಪ್ರಾರ್ಥಿಸಿದ್ದಾರೆ. ಈ ರೀತಿ ಅನುಸಂಧಾನವಿದ್ದಲ್ಲಿ ಜ್ಞಾನ ಯೋಗಿ ಎನಿಸುವನು. ಹೀಗೆ ಜ್ಞಾನದಿಂದ ನಾರಾಯಣ ಪರಮಾತ್ಮನನ್ನು ಸ್ಮರಿಸುತ್ತಿದ್ದರೆ ಹತ್ತಿಯಲ್ಲಿ ಒಂದು ಬೆಂಕಿಯ ಕಿಡಿ ಬಿದ್ದರೆ ಗೊತ್ತಾಗದೇ ಅಷ್ಟೂ ಹತ್ತಿ ಸುಟ್ಟು ಬೂದಿ ಆಗುವ ರೀತಿ ಪಾಪಗಳು ನಾಶವಾಗುತ್ತವೆ. ಇದನ್ನೆ ವಿಷ್ಣು ಸಹಸ್ರನಾಮದಲ್ಲಿ “(ಅಮಾನಿ ಮಾನದೋ ಮಾನ್ಯೋ”) ಎಂಬ ಶ್ಲೋಕದಲ್ಲಿ ಬಂದಿರುವಂತೆ ಅನಾತ್ಮವಾದ ವಸ್ತುಗಳಲ್ಲಿ ಆತ್ಮಾಭಿಮಾನ ಇಲ್ಲದಿರುವುದರಿಂದ ಅಮಾನಿ ಎನಿಸಿರುವ ಪರಮಾತ್ಮನು ಮಾನದನು ಆದ ಪರಮಾತ್ಮನು ತತ್ವಜೀವಿಗಳಿಗೆ ಗೌರವ ಕೊಟ್ಟು ಅವರ ಆತ್ಮಾಭಿಮಾನ ಕಳೆದು ಮಾನ್ಯದನನ್ನಾಗಿ ಮಾಡಿ ಅವರನ್ನು ಸಂಸಾರ ಬಂಧನದಿಂದ ಬಿಡುಗಡೆ ಮಾಡಿ ಆನಂದ ಕೊಡುವನು.ಇಷ್ಟೆಲ್ಲ ವ್ಯಾಪ್ತನಾದ ಪರಮಾತ್ಮನು ನಿಂತು ಎಲ್ಲ ಕೊಟ್ಟು ಸಲಹುತ್ತಿದ್ದಾಗ ನಾನು ನನ್ನದು ಎಂಬ ಮೋಹ ಬಿಟ್ಟು ಪರಮಾತ್ಮನಿಗೆ ಕೃತಜ್ಞನಾಗಿರಬೇಕೆಂಬುದೆ ಸಾಂಶರ ಸಂದೇಶವಾಗಿದೆ.
ಕುಮಾರವ್ಯಾಸ ರಚಿಸಿದ ಭಾರತದ ಮಂಗಳಾಚರಣವೆ ತಿಳಿಸುತ್ತದೆ ಆತ್ಮ ಸ್ವರೂಪದಲ್ಲಿ ಅಕ್ಷರ ಪುರುಷಳಾದ ಪತಿಯನ್ನು ಮೆಚ್ಚಿಸಿದರೆ ನಮಗೆ ಯಾವ ಭಯವಿಲ್ಲ. ಶ್ರೀ ವನಿತೆಯರಸನೆ
ವಿಮಲ ರಾ -/
ಜೀವ ಪೀಠನ ಪಿತನೆ ಜಗಕತಿ/
ಪಾವನನೆ ಸನಕಾದಿ ಸಜ್ಜನನಿಕರದಾತರ/
ರಾವಣಾಸುರ ಮಥನ ಶ್ರವಣ ಸು -/
ಧಾವಿನೂತನ ಕಥನ ಕಾರಣ/ಕಾವುದಾನತ ಜನವ ಗದುಗಿನ ವೀರನಾರಾಯಣ//
ಎಷ್ಟು ಸುಂದರ ಸಂದೇಶ. ಆರು ಗುಣಗಳನ್ನು ಆದಷ್ಟು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಪರಮಾತ್ಮನು ಜೀವನ ಮೌಲ್ಯಗಳನ್ನು ಕೊಡುತ್ತಾನೆ. ಶ್ರೀರಮಣನೆ ಜೀವನ ಸಾರಾಮೃತವನು ಎಲ್ಲರಿಗೂ ಕರುಣಿಸಲಿ.
ಏನು ಸುಖವಯ್ಯ ನಿನ್ನ ಮಹಿಮೆ
ಎಂಥಾ ಆನಂದವಯ್ಯ ನಾಮದ ಮಹಿಮೆ
ಏನು ಸುಖವಯ್ಯ ಎಂಥಾ ಆನಂದವಯ್ಯ
ವರ್ಣಿಸಲಾರದಂಥ ಅದ್ಭುತ ಕಾರ್ಯವಯ್ಯ
ನಿನ್ನೊಳು ನಾನೋ ನನ್ನೊಳು ನೀನೊ
ಏನೊಂದು ತಿಳಿಯೆನೋ ನಾ
ಮನ್ನಿಸಿ ಸುಂದರ ರೂಪವ ತೋರೋ
ಕರುಣಿಸಿ ನನ್ನ ಮನದಿ ನೀಬಾರೋ
ನಿನ್ನ ದಾಸರ ದಾಸ್ಯವ ಕೊಡು ಎನಗೆ
ನಿನ್ನಲ್ಲಿ ಭಕ್ತಿ ಜ್ಞಾನ ನೀಡೆನಗೆ
ಅನಾದಿ ಕಾಲದ ಋಣಾನುಬಂಧ
ಮನವು ನಿನ್ನಲ್ಲಿರಲಿ ಆನಂದ
ಮಾತರಿಶ್ವಾಂತರ್ಗತ ಶ್ರೀ ಹರಿಯೆ
ದೋಷ ಪರಿಹರಿಸಿ ಕಾಯೊ ನರಹರಿ
ಕಾದುಕೊ ಬಿಡದೆ ನಿನ್ನವನೆಂದು
ಆದರದಿ ಪಾಡುವೆ ನೀನೆಗತಿಯೆಂದು
ಶ್ರೀಕೃಷ್ಣಾರ್ಪಣ ಮಸ್ತು.
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
