‘ಅಯಾಲಿಕ್ ಮತ್ತು ಸ್ಪೇರ್ ಕೋವ್ ‘ ಎಂಬ ಎರಡು ಗ್ಲೇಷಿಯರ್ ಪರ್ವತದಲ್ಲಿ ಸುರಿವ ತುಂತುರು ಮಳೆ, ಮೂಳೆ ಕೊರೆಯುವ ಚಳಿ, ಸುತ್ತುವರಿದ ಮಂಜಿನ ಬೆಟ್ಟಗಳು ನೀರಿನ ಮೇಲೆ ತೇಲುತ್ತಿದ್ದ ಮಂಜಿನ ಹೆಬ್ಬಂಡೆಗಳು. ಈ ಅಲಾಸ್ಕಾ ಅನುಭವದ ಕುರಿತು ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೆನಾಯ್ ಫಿಯೋರ್ಡ್ಸ್ ಗ್ಲೇಷಿಯರ್ ನ್ಯಾಷನಲ್ ಪಾರ್ಕ್
ಆಗಸ್ಟ್ 24 ರ ಸಂಜೆ ಆ್ಯಂಖರೇಜ್ ನ ವೈಲ್ಡ್ ಲೈಫ್ ಸೆಂಟರ್ ನಿಂದ ಹೊರಟ ನಾವು ‘ಸೀವಾರ್ಡ್’ ಎಂಬ ಊರಿನ ‘ಸ್ಪ್ರೂಜ್ ಲಾಡ್ಜ್’ ತಲಪುವವೇಳೆಗೆ ರಾತ್ರಿ ಒಂಬತ್ತಾಗಿತ್ತು. ಕೆನ್ಹಾಯ್ ಐಲ್ಯಾಂಡ್ಸ್ ವೀಕ್ಷಣೆಗಾಗಿ ಮಾರನೆಯ ಬೆಳಿಗ್ಗೆಯೇ ಎಂಟೂವರೆಯ ಹೊತ್ತಿಗೆ ಹೊಟೆಲ್ ಚೆಕೌಟ್ ಮಾಡಿ ಪೋರ್ಟ್ ಬಳಿಗೆ ತಲಪಿದೆವು. ಅದಕ್ಕೆ ಕೆನಾಯ್ ಫಿಯೋರ್ಡ್ಸ್ ನ್ಯಾಷನಲ್ ಪಾರ್ಕ್ ಎಂದು ಹೆಸರು. ಫಿಯೋರ್ಡ್ಸ್ ಎಂದರೆ ಸಮುದ್ರದ ನಡುವೆ, ಪ್ರಾಚೀನ ಹಿಮಗಲ್ಲುಗಳು ಕೊರೆದ U ಆಕಾರದ ಕಣಿವೆಗಳು. ‘ರಿಸರಕ್ಷನ್ ಬೇ’ ಯಿಂದ ಹೊರಟ ನಮ್ಮ ಬೋಟು
ಇಂತಹ ಅನೇಕ ಕಣಿವೆಗಳಲ್ಲಿ ಚಲಸಿಲು ಸಜ್ಜಾಯಿತು.
ಸುಮಾರು ಏಳೂವರೆ ತಾಸಿನವರೆಗೆ ಸಮುದ್ರದ ಮೇಲೆ ಪ್ರಯಾಣ. ‘ಗ್ಲೇಷಿಯರ್ ಎಕ್ಸೆಪ್ರೆಸ್’ ಸುಮಾರು ಮುನ್ನೂರು ಜನ ಪ್ರಯಾಣಿಕರನ್ನು ಹೊತ್ತು ಚಲಿಸಬಲ್ಲ ಹಡಗಿನಂತಿರುವ ಬೋಟ್. ಪ್ರತಿ ನಾಲ್ಕು ಪ್ರಯಾಣಿಕರಿಗೆ ಒಂದು ಟೇಬಲ್ ಮತ್ತು ಸುಸಜ್ಜಿತ ಸುಖಾಸೀನಗಳು. ಅಲ್ಲಿಯೇ ಕ್ಯಾಂಟೀನ್. ಬೇಕಾದಾಗಲೆಲ್ಲ ಕುಡಿಯಲು ಕಾಫೀ ವ್ಯವಸ್ಥೆ. ನಮ್ಮ ಹಡಗಿನ ಕ್ಯಾಪ್ಟನ್ ಮಾರ್ಚಲ್ ಒಬ್ಬಳು ಹುಡುಗಿ.

‘ಕೆನಾಯ್ ‘, ಹಿಮಗಲ್ಲು ಬೆಟ್ಟಗಳ ಒಂದು ದಟ್ಟ ಕಾಡು. ಇಲ್ಲಿ ಹಂಬಕ್,ಕಿಲ್ಲರ್ ವೇಲ್, ಡಾಲ್ಸ್ ಪೊರ್ಪೀಯಿಸ್ ಮುಂತಾದ ತಿಮಿಂಗಲುಗಳು ಇವೆ, ನಡುವೆ ಹಾಯುವ ಹಸಿರು ಬೆಟ್ಟಗಳಲ್ಲಿ ಕಪ್ಪು ಮತ್ತು ಬಿಳಿ ಕರಡಿಗಳೂ ಇವೆ. ಸೀಲ್ ಮತ್ತು ಓಟರ್ ಗಳು ಕಡಲ ಸಿಂಹಗಳು, ಹಾಗೂ ಪಾರಿವಾಳ ಹದ್ದುಗಳೇ ಅಲ್ಲದೆ ಪಫಿನ್ ಎಂದು ಕರೆಯಲಾಗುವ ಪುಟ್ಟ ಹಕ್ಕಿಗಳೂ ಇವೆ. ನಮಗೆ ಕಂಡದ್ದು ದೂರದಲ್ಲಿ ಕುಪ್ಪಳಿಸುತ್ತಾ ಬಾಯಿಂದ ನೀರನ್ನು ಫುರ್ ಮಾಡುತ್ತಾ ಸಾಗಿದ ಒಂದು ಪ್ರಜಾತಿಯ ತಿಮಿಂಗಿಲವಷ್ಟೇ. ( ಓರ್ಕಾ) . ನಾವು ಬಹಳ ಕಾಯುತ್ತಿದ್ದ ‘ಹಂಬಗ್’ ನಮಗೆ ದರ್ಶನ ಕೊಡಲೇ ಇಲ್ಲ. ಪಫಿನ್ ಪುಟ್ಟ ಹಕ್ಕಿಗಳು ಕಡಲ ಮೇಲೆ ಹಾರಿ ಡುಬಕ್ಕನೆ ನೀರಿಗೆ ಮುಳುಗಿ ಮೀನುಗಳನ್ನು ಹೊತ್ತು ಮೇಲೇರಿ ಬರುತ್ತಿದ್ದವು. ಅಲ್ಲಲ್ಲಿ ಕಡಲ ಸಿಂಹಗಳೂ, ಓಟರ್ ಗಳೂ ಕಂಡವು. ನಡು ನಡುವೆ ಚೂಪಾದ ಕೋನಾಕಾರದ ವಿವಿಧ ಆಕೃತಿಯ ನಡುಗಡ್ಡೆಗಳು -ನೀರು ಕೊರೆದ ಅಸಂಖ್ಯ ಕಲಾಕೃತಿಗಳು ಎದುರಾದವು. ಇದ್ದಕ್ಕಿದ್ದಂತೆ ಜೋರಾಗಿ ಗಡ ಗಡ ಶಬ್ದ ಕೇಳಿಸಿತು. ಹಡುಗು ಹಿಮಗಲ್ಲುಗಳನ್ನು ಸೀಳಿಕೊಂಡು ಹೋಗುತ್ತಿತ್ತು. ಹಡಗು ನಿಂತಿತು. ಎದುರಿಗೇ ಧುತ್ತೆಂದು ನಿಂತ ಒಂದು ಭೂಮಾಕೃತಿಯ ಹಿಮಗಲ್ಲಿನ ಬೆಟ್ಟ.! ಬೋಟಿನ ಹೊರಗೆ ಬಾಲ್ಕನಿಯಲ್ಲಿ ನಿಂತಾಗ ನಾವು ಅನಾಮತ್ತಾಗಿ ಹಿಮಯುಗಕ್ಕೆ ( ICE AGE) ಎಸೆಯಲ್ಪಟ್ಟಿದ್ದೆವು.

ಯಾರೋ ಕೆತ್ತಿ ಕೆತ್ತಿ ಎಸೆದಂತೆ ನೀರಿನ ಮೇಲೆಲ್ಲ ತೇಲುವ ಮಂಜಿನ ಹಲಗೆಗಳು, ಗಡ್ಡೆಗಳು. ಬಿಳಿ ಬೆಟ್ಟಗಳಲ್ಲಿ ಅನೇಕ ಕೊರಕಲುಗಳು ಒಂದು ಅಪೂರ್ವ ಕಲಾಕೃತಿಯಂತೆ ಕಂಡವು. ಯಾವ ಪ್ರಾಣಿ ಅಲ್ಲಡಗಿರಬಹುದು?
ಯಾವ ಕ್ಯಾಮರಾ ಹಿಡಿಯಬಲ್ಲುದು ಇಂತಹ ಅಗಾಧತೆಯನ್ನು? ಹಿಡಿಯಬೇಕೆನ್ನುವ ನಮ್ಮ ಪ್ರಯತ್ನ ಅಹಂಕಾರವಷ್ಟೇ! ನಮ್ಮ ಕಣ್ಣ ಅಳತೆಗೂ ಮೀರಿದ ಈ ಭವ್ಯತೆಯನ್ನು ಅಭಿವ್ಯಕ್ತಿಸಲು ಪದಗಳು ಸೋಲುತ್ತಿವೆ!ಪ್ರತ್ಯಕ್ಷ ಅನುಭವ ಆರ್ದ್ರ ವಾಗಿ ಹಿಮದಂತೆ ಕರಗುತ್ತಿದೆ.

ನಮ್ಮ ಪ್ರಯಾಣದಲ್ಲಿ ‘ಅಯಾಲಿಕ್ ಮತ್ತು ಸ್ಪೇರ್ ಕೋವ್ ‘ ಎಂಬ ಎರಡು ಗ್ಲೇಷಿಯರ್ ಪರ್ವತಗಳನ್ನು ಕಂಡೆವು. ಸುರಿವ ತುಂತುರು ಮಳೆ, ಮೂಳೆ ಕೊರೆಯುವ ಚಳಿ, ಸುತ್ತುವರಿದ ಮಂಜಿನ ಬೆಟ್ಟಗಳು ನೀರಿನ ಮೇಲೆ ತೇಲುತ್ತಿದ್ದ ಮಂಜಿನ ಹೆಬ್ಬಂಡೆಗಳು. ಈ ರುದ್ರ ರಮಣೀಯ ಸನ್ನಿವೇಷದಲ್ಲೂ ಬೋಟಿನ ಚಾಲಕಿ ಬಹಳ ಆನಂದದಿಂದ ಹಾ …ಹೋ ..ಉದ್ಗಾರದಿಂದ ನಿರೂಪಿಸುತ್ತಿದ್ದಳು. ಬೋಟು ತಿರುಗಿತು. ಇಲ್ಲಿಯವರೆಗೆ ಅತ್ತಿಂದಿತ್ತ ಇತ್ತಿಂದತ್ತ, ಮೇಲೆ ಕೆಳಗೆ ಎಂದು ಉತ್ಸಾಹ ಉನ್ಮಾದಗಳಿಂದ ಓಡಾಡಿದ ಮಕ್ಕಳೂ ಮುದುಕರೂ ಮೋಟರೂ ಆದಿಯಾಗಿ ಎಲ್ಲರೂ ಸುಸ್ತಾಗಿ ಕುಳಿತರು. ಮದ್ಯೆ ಮದ್ಯೆ ಕಾಫಿ ಪಾನೀಯ, ಎಂತೆಂಥದೋ ಹೆಸರು ಗೊತ್ತಿಲ್ಲದ ಸ್ಯಾಂಡ್ ವಿಚ್ ಬರ್ಗರ್ಗಳು ಪ್ರಯಾಣಿಕರ ರುಚಿಗೆ ಅನುಗುಣವಾಗಿ ಪೂರೈಕೆಯಾದವು.

ಹಡಗಿನಂತಹ ಬೋಟು ICE AGE ಗೆ ಮುಖ ತಿರುವಿ ಹೊರಟಿತು. ಸತತ ಏಳೂವರೆ ಗಂಟೆಗಳ ಕಾಲ ಒಂದು ಮಾಯಾ ಪ್ರಪಂಚದ ವಶಕ್ಕೆ ಸಿಕ್ಕಿದ ನಾವೂ ಹೊರ ಬಂದೆವು. ಬೋಟು ಇಳಿದು ನಾವು ನಮ್ಮ ಗಾಡಿ ನಿಲ್ಲಿಸಿದ್ದ ಪಾರ್ಕಿಂಗ್ ಕಡೆಗೆ ನಡೆದೆವು. ನಮ್ಮ ಕಾರು ಈಗ ದೆನಾಲಿಯ ಕಡೆಗೆ ಧಾವಿಸಿತು.
ಹಿಂದಿನ ಸಂಚಿಕೆಗಳು :
- ಡಾ. ಗಿರಿಜಾ ಶಾಸ್ತ್ರಿ – ಲೇಖಕರು, ಬೆಂಗಳೂರು






