ಲೇಖಕರಾದ ಟಿ.ಜಿ.ಹರೀಶ ಅವರ ‘ಚಂದನವ ಕಡಿದು ತೇದೊಡೆ’ ಅವರ ಕೃತಿಯ ಕುರಿತು ಕೆ. ಆರ್.ಉಮಾದೇವಿ ಉರಾಳ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಲೇಖಕರು : ಟಿ. ಜಿ. ಹರೀಶ
ಪುಸ್ತಕ : ಚಂದನವ ಕಡಿದು ತೇದೊಡೆ
ಖರೀದಿಗಾಗಿ : 9606474289
ಲೇಖಕ ಟಿ.ಜಿ.ಹರೀಶರ ಕಿರುಪರಿಚಯ :
ಇವರು ತೀರ್ಥಹಳ್ಳಿ ಸಮೀಪದ ವಡ್ಡಿನ ಬೈಲು ಎಂಬಲ್ಲಿ ಜನಿಸಿದವರು. ಕವನ ಸಂಕಲನಗಳು, ಕಥಾಸಂಕಲನಗಳು, ಜೀವನ ಕಥನ, ಅಂಕಣ ಬರಹಗಳ ಸಂಕಲನ, ಲಲಿತ ಪ್ರಬಂಧ, ವಿಮರ್ಶಾ ಸಂಕಲನ ಬರೆದಿರುವರು ಹಲವಾರು ಸಾಹಿತ್ಯಿಕ ಪ್ರಶಸ್ತಿಗಳು ಬಂದಿವೆ. ಪ್ರಸ್ತುತ ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಬದುಕಿನ ಕಷ್ಟ ಸುಖಗಳು ಸಂತೃಪ್ತಿ ವ್ಯಾಕುಲತೆಗಳು ಏಳು ಬೀಳುಗಳನ್ನು, ಸನ್ನಡತೆ ದುರ್ನಡತೆಗಳನ್ನು, ಕೌಟುಂಬಿಕ ವಿದ್ರೋಹ ಸಾಮರಸ್ಯಗಳನ್ನು ಮಲೆನಾಡಿನ ಪರಿಸರದ ಹಿನ್ನೆಲೆಯಲ್ಲಿ ಆಪ್ತವಾದ ಶೈಲಿಯಲ್ಲಿ ನಿರೂಪಿಸಿರುವ 11 ಕಥೆಗಳ 156 ಪುಟಗಳ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ಟಿ.ಜಿ. ಹರೀಶರ ಹೊಸ ಕಥಾ ಸಂಕಲನ “ಚಂದನವ ಕಡಿದು ತೇದೊಡೆ…”. ಇದು ಇತ್ತೀಚೆಗೆ ಆಗಸ್ಟ್ ನಲ್ಲಿ ತೀರ್ಥಹಳ್ಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಲೋಕಾರ್ಪಣೆಗೊಂಡಿದೆ. ಕಥೆಗಾರ ಅಲಕಾ ತೀರ್ಥಹಳ್ಳಿ ಯವರಿಂದ ಮುನ್ನುಡಿ ಹಾಗೂ ಲೇಖಕಿ ದಿವ್ಯಾ ಶ್ರೀಧರ್ ರವರ ಬೆನ್ನುಡಿಯ ಅಚ್ಚುಕಟ್ಟಾದ ವಿನ್ಯಾಸದಲ್ಲಿ ಮುದ್ರಣಗೊಂಡಿದೆ. ಮಲೆನಾಡಿನಲ್ಲಿ ತಾವು ಕಳೆದ ಸಮೃದ್ಧ ಬಾಲ್ಯವನ್ನು ಇಲ್ಲಿನ ಪರಿಸರ, ವ್ಯಕ್ತಿಗಳು, ನಾಲ್ಕೈದು ದಶಕಗಳ ಹಿಂದಿನ ಸಾಮಾಜಿಕ ಕೌಟುಂಬಿಕ ಸನ್ನಿವೇಶಗಳು, ಕೃಷಿ, ಇಲ್ಲಿನ ಊರು ಗುಡ್ಡ ಬೆಟ್ಟ ಕಾಡು ಹೂ ಹಣ್ಣು ಹಂಪಲುಗಳು, ಬದಲಾವಣೆಗಳಿಗೆ ಒಡ್ಡಿಕೊಂಡಿರುವ ಇಂದಿನ ಮಲೆನಾಡಿನ ಸ್ಥಿತಿಗತಿಗಳು ಎಂದು ಮಲೆನಾಡಿನ ಆಡು ಭಾಷೆಯೊಂದಿಗೆ ಶ್ರೀಮಂತವಾಗಿ ಕಟ್ಟಿಕೊಟ್ಟಿರುವ ಕಥೆಗಳು ಇವು. ಒಂದು ರೀತಿಯಲ್ಲಿ ಈ ಕಥೆಗಳು ಮಲೆನಾಡ ಬದುಕಿನ ದಾಖಲೀಕರಣ ಮಾಡಿವೆ ಎನ್ನಬಹುದು.
ಶೀರ್ಷಿಕೆಯ ಕಥೆ ನಾಲ್ಕೈದು ದಶಕಗಳ ಹಿಂದಿನ ಕಾರ್ಪಣ್ಯದ ಬಡ ಕುಟುಂಬವೊಂದು ಕಷ್ಟದಲ್ಲಿ ಬದುಕು ಅರಳಿಸಿಕೊಳ್ಳುವ ಜೀವನ ಕಲೆ ಮೈಗೂಡಿಸಿಕೊಂಡಿದ್ದ ಕುಟುಂಬ ಒಂದರ ಕಥೆ. ಕಡುಬಡತನದಲ್ಲಿ ಕೃಷಿ ಕೂಲಿಯಾಗಿ ಬದುಕು ಆರಂಭಿಸಿದ್ದ ಗುಂಡಯ್ಯ ತನ್ನ ಮಕ್ಕಳಾದರೂ ವಿದ್ಯಾವಂತರಾಗಲಿ ಎಂದು ಹಂಬಲಿಸುತ್ತಿದ್ದಾರೆ. ಹಿರಿಯ ಮಗ 16 ವರ್ಷದ ಶೀನಿ ತಾನು ಹೋಟೆಲ್ ಸೇರಿ ತಂದೆಯ ಹೆಗಲಿಗಾಸರೆಯಾಗ ಬಯಸುತ್ತಾನೆ. ಶಾಲೆಗೆ ಹೋಗುವಾಗಲೂ ಕೆಲಸ ಮಾಡುತ್ತಾ ಸಂಪಾದಿಸಿದ ಪುಡಿಗಾಸುಗಳನ್ನೂ ತಂದೆಯ ಕೈಗೇ ಇಡುತ್ತಿದ್ದವನು. ಹೋಟೆಲ್ ಸೇರಿ ತನ್ನ ಪ್ರಾಮಾಣಿಕತೆ ಶ್ರದ್ಧಾವಂತ ನಡವಳಿಕೆಯಿಂದ ಉನ್ನತಿಗೇರಿದ ಶೀನಿಯಿಂದ ಗುಂಡಯ್ಯನ ಕುಟುಂಬ ಸುಖ ಶಾಂತಿ ಹೊಂದುತ್ತದೆ. ಮನೆಯ ಎಲ್ಲರ ಬದುಕೂ ಸುರಳೀತ ಆಯಿತೆನ್ನುವಾಗ ಶೀನಿಯ ಆರೋಗ್ಯ ಹದಗೆಟ್ಟು ದುಡಿಯಲಾರದವನಾಗುತ್ತಾನೆ. ಅದುವರೆಗೆ ದುಡಿದದ್ದನ್ನೆಲ್ಲ ಕುಟುಂಬಕ್ಕಾಗಿ ಸುರಿದು ಬರಿಗೈಯವನಾಗಿದ್ದ ಶೀನಿಗೆ ಅವನಿಂದ ಎತ್ತರಕ್ಕೇರಿದ ತಮ್ಮ ತಂಗಿಯರು ಆಸರೆಯಾಗುತ್ತಾರೆ ಹಾಗೂ ಬದುಕಿನ ಲೆಕ್ಕಾಚಾರದಲ್ಲಿ ಏಳು ಬೀಳುಗಳು ಕಷ್ಟ ಸುಖಗಳದು ಸಮಪಾಲು ಎಂಬ ಸಂದೇಶದ ಈ ಕಥೆ ಕೌಟುಂಬಿಕ ಸಾಮರಸ್ಯ, ಭಾವ ಬಂಧ, ಹೊಣೆಗಾರಿಕೆಯ ಸುಂದರ ಸಮ್ಮಿಲನದಿಂದ ಮನವನ್ನು ಆರ್ದ್ರ ವಾಗಿಸುವ ಕಥೆ. ಇಷ್ಟೇ ಮಾರ್ದವ ಶೈಲಿಯಲ್ಲಿ ಕೌಟುಂಬಿಕ ವಿದ್ರೋಹವನ್ನು ಕಟ್ಟಿ ಕೊಡುವ ಕಥೆ “ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ”. ನಿರೂಪಕ ಬಾಲ್ಯ ಕಳೆದ ತಾಯಿಯ ತವರು ಮನೆ “ನಂದನವನ” ಹೆಸರಿಗೆ ತಕ್ಕಂತೆ ಬರಿಯ ಸಂತಸವೇ ತುಂಬಿರುವ ಭವ್ಯ ನಿವಾಸ. ಮಕ್ಕಳ ಸಾಮೂಹಿಕ ಸ್ನಾನ, ಭಜನೆ, ಎಲಡಿಕೆ ತಿಂಡಿ ತೀರ್ಥ, ಸಂತೃಪ್ತ ಭೋಜನ, ಹಿರಿಯರ ತಿಳಿವಳಿಕೆಯ ಮಾತುಗಳಿಗೆ ಅಣ್ಣ-ತಮ್ಮಂದಿರದು ಪೂರಕ ನಡವಳಿಕೆ. ಆದರೆ ಮಕ್ಕಳು ದೊಡ್ಡವರಾದಂತೆ ಪರಸ್ಪರ ಹಗೆತನ ಹೊಗೆಯಾಡುತ್ತದೆ. ಹಿರಿಯ ಮಗ ಪ್ರಭಾಕರನ ಪಾಲಿಗೆ ಬೃಹತ್ ಮನೆ ಕುಟುಂಬದ ಹೊಣೆಗಾರಿಕೆಗಳ ನಿರ್ವಹಣೆಗಾಗಿ ಬಂದರೆ ಅದನ್ನೂ ಸಹಿಸದ ಒಡಹುಟ್ಟಿದವರಿಂದಾಗಿ ಅದು ಹತ್ತು ಪಾಲಾಗುತ್ತದೆ. ಕುಟುಂಬದ್ರೋಹ ಬಗೆದ ಪ್ರಭಾಕರನ ಸೋದರರಿಗಾದರೂ ನೆಮ್ಮದಿ ಮರೀಚಿಕೆಯಾಗಿರುವ ಸನ್ನಿವೇಶ. ಪ್ರಭಾಕರನೇ ಹಿರಿತನ ತೋರಿ ಮೊದಲು ಸೋತು ನಂತರ ಗೆಲ್ಲಲು ನಿರೂಪಕ ಸಲಹೆ ನೀಡುವುದರೊಂದಿಗೆ ಕಥೆ ಅಂತ್ಯವಾಗುತ್ತದೆ.

“ಕೆಂಜಳಿಲು” ಕಥೆಯಲ್ಲಿ ಬಹಳ ಸುಂದರ ಕೆಂಜಳಿಲನ್ನು ಪ್ರತಿಮೆಯಾಗಿಸಿಕೊಂಡು “ಮಲೆನಾಡಿನ ಶ್ವಾಸನಾಳಕ್ಕೇ ಅಡ್ಡಡ್ಡ ಉದ್ದುದ್ದ ಸಿಕ್ಕಿಬಿದ್ದಿರುವ ಸಮಸ್ಯೆಗಳು ಮಲೆನಾಡಿನ ಚಹರೆಯನ್ನೇ ಬದಲಾಯಿಸಿಬಿಟ್ಟಿರುವುದನ್ನು” ಮಿಡಿವ ಅಂತಃಕರಣದಿಂದ ನಿರೂಪಿಸಿದ್ದಾರೆ. ಪಾರ್ಥೇನಿಯಂ ಲಂಟಾನ, ಚಿರತೆ ಕಾಡುಕೋಣಗಳ ಉಪಟಳ, ಜಾನುವಾರು ಸಾಕಣೆ ನಿಂತಿರುವುದು, ತೋಟಕ್ಕೆ ರಾಸಾಯನಿಕಗಳ ಬಳಕೆ, ಅಕೇಷಿಯಾದ ಕೃತಕ ಅರಣ್ಯಗಳು, ಕೃಷಿ ಕಾರ್ಮಿಕರ ಸಮಸ್ಯೆ_ ಹೀಗೆ ಮಲೆನಾಡು ತನ್ನ ಮೂಲ ಸ್ವರೂಪದಿಂದ ಮೊಗದಿರುಹಿರುವುದರ ಚಿತ್ರಣವಿದೆ. ಒಂದಾನೊಂದು ಕಾಲದ ಭಾರೀ ಮನೆಯ ಈಗಿನ ನಿವಾಸಿಗಳಾದ ಕಾಂತು_ ಜಯಲಕ್ಷ್ಮಿ ಪೇಟೆ ಸೇರಬೇಕೆಂದು ಆಲೋಚಿಸುತ್ತಾರೆ. ಮೂಳೆ ಸವೆತದ ಜಯಲಕ್ಷ್ಮಿ ತಲೆಕೆಳಗೆ ಹಾಕಿ ಉಪ್ಪರಿಗೆ ಇಳಿಯುವಾಗ ಮರದಿಂದ ತಲೆಕೆಳಗಾಗಿ ಇಳಿಯುವ ಕೆಂಜಳಿಲ ತರಹ ಕಾಣುತ್ತಾ “ಬೀಳ್ತಾಳೇನೋ ಅಂತನ್ನಿಸಿ ಗಾಬರಿಯಾಗುತ್ತದೆ” ಎನ್ನುತ್ತಾ ಮಲೆನಾಡನ್ನು ಬರಡು ನಾಡಾಗಿಸುತ್ತಿರುವ ಬದಲಾವಣೆಯ ಪ್ರಕ್ರಿಯೆಗಳನ್ನು ಸಮಗ್ರವಾಗಿ ಬಿಚ್ಚಿಟ್ಟಿರುವ ಈ ಕಥೆ ಸ್ವಲ್ಪಮಟ್ಟಿಗೆ ಪ್ರಬಂಧದ ಸ್ವರೂಪದೆಡೆಗೆ ವಾಲುತ್ತದಾರೂ ಮಲೆನಾಡಿನ ಅನಪೇಕ್ಷಿತ ಬದಲಾವಣೆಗಳಿಗಾಗಿ ಮನ ಮರುಗುತ್ತದೆ.
ತಾತ್ಕಾಲಿಕ ಉಪನ್ಯಾಸಕ ಹುದ್ದೆ ಹೊಂದಿ ಆರ್ಥಿಕ ಪಡಿಪಾಟಲುಗಳ ಬವಣೆಗಳಿಗೊಳಗಾದ ವಸ್ತುವಿನ ಕುರಿತ ಕಥೆಗಳು “ಬಂಡಾಯ” ಮತ್ತು “ದಶಾವತಾರಿ”. “ವಕ್ರ ಸುಂಟಿ”ಯ ನರಸಿಂಹಮೂರ್ತಿ ಯದು ಬಾಹ್ಯವಾಗಿ ಸಂಪತ್ ಸಮೃದ್ಧ ಬದುಕಾದರೂ ಆಂತರಂಗಿಕವಾಗಿ ಭಾವನಾಶೂನ್ಯತೆಯ ದಾರಿದ್ರ್ಯ. ವಿಘ್ನ ಸಂತೋಷಿಯಾದ ವಿಕ್ಷಿಪ್ತ ವ್ಯಕ್ತಿತ್ವದವನು. ಕೊನೆಗೆ ಬರಿಗೈಯವನಾಗಿ ದಿಕ್ಕಿಲ್ಲದವನಾಗುತ್ತಾನೆ. ಆದರೆ “ಅಡಿಕೆಗೆ ಹೋದ ಮಾನ” ಕಥೆಯ ಗೋಪಾಲಯ್ಯ ದಂಪತಿಗಳೆಂದರೆ ಇಡೀ ಊರೇ ಗೌರವಿಸುತ್ತಿದ್ದ ವ್ಯಕ್ತಿತ್ವದವರು. ಆದರೆ ಇಂತಹವರಿಗೆ ಕುಲಕಂಠಕ ಪುತ್ರ ಪ್ರಕಾಶ. ಬೆವರು ಹರಿಸಿ ತಂದೆ ಮಾಡಿದ ಅಡಿಕೆ ತೋಟವನ್ನು ನಿಕೃಷ್ಟವಾಗಿ ಕಾಣುತ್ತಿದ್ದವನು. ಕೃಷಿಯ ಪರಿಶ್ರಮ ಬೇಡ, ಅದಕ್ಕಿಂತ ಮಿಗಿಲಾದ ಆದಾಯ ಬೇಕು ಎನ್ನುತ್ತಾ ತಾನು ಅಡಿಕೆ ಸುಲಿಯುವ ಮಿಷನ್ ನಿಂದ ಮಹತ್ತಾದುದನ್ನು ಸಾಧಿಸುವೆನು ಎಂಬ ಭ್ರಮೆಗೊಳಾಗುತ್ತಾನೆ . ಕೊನೆಗೆ ಈ ಉದ್ಯಮದಿಂದ ಸಂಪೂರ್ಣ ನೆಲಕಚ್ಚಿ ಗೌರವಾನ್ವಿತ ತಂದೆ ತಾಯಿಯರನ್ನು ಬೀದಿಪಾಲಾಗಿಸುತ್ತಾನೆ.
ಹರೀಶರವರ ಕಥೆಯ ಅಂತಃಸತ್ವವೇ ಇವರು ಬಳಸುವ ಮಲೆನಾಡ ಸೊಗಡಿನ ಭಾಷೆ. “ಬರ್ತೀಯನೋ ಅಂದ, ಬರ್ಲನೋ ಅಂದೆ, ಬಾ ಹಂಗಾರೆ ಅಂದಿದಾನೆ”. “ಕುಯ್ಯೋದು ಹೆರಕೋದು ಸುಲಿಯೋದು ಬೇಯಿಸೋದು ಹರಗೋದು ಆರ್ಸೋದು ತೂಗೋದು ತುಂಬೋದು” ಹೀಗೆ ಕೃಷಿ ಕಾರ್ಯಗಳ ವರ್ಣನೆ. ಎಲಡಿಕೆ ಹಾಕುವ ಪ್ರಕ್ರಿಯೆ, ಪತ್ರೊಡೆ ಮುಳ್ಕ ತಿಮಿರೇ ತಂಬುಳಿ ಮುಂತಾದ ಮಲೆನಾಡ ಅಡುಗೆ ಪ್ರಸ್ತಾಪ, ಕಾಡ ಹಣ್ಣುಗಳು ಹೂಗಳು, ಕತ್ತಿಗೆ ಕಂಠಿ ಕಿವಿಗೆ ಪತಂಗ ಮುಂತಾದ ಮರೆಯಾಗುತ್ತಿರುವ ಒಡವೆಗಳು, ಉಪ್ರಿಗೆ, ಧಾಳಾಧೂಳಿ ಎಂಬಂತಹ ಆಡು ಮಾತುಗಳು, ಚಿಲ್ಪಟ್ ಅಡಕೆ, ಬಲಕಾಯಿಸು, ಚಿಪ್ಳ ಹಿಡಿ ಮುಂತಾದ ಅಪರೂಪದ ಪ್ರಯೋಗಗಳು ಧಾರಾಳವಾಗಿವೆ. ಈ ಕಥೆಗಳೆಲ್ಲದರ ಪ್ರಾದೇಶಿಕ ನೆಲೆ ತೀರ್ಥಹಳ್ಳಿ ತಾಲ್ಲೂಕ್ ಆದುದರಿಂದ ಇಲ್ಲಿನ ಹಲವಾರು ಊರುಗಳ ನದಿ ಹಳ್ಳ ಗುಡ್ಡ ಬೆಟ್ಟಗಳ ಪ್ರಸ್ತಾಪವಿದೆ. “ಚಂದನವ ಕಡಿದು ತೇದೊಡೆ…” ಮಲೆನಾಡಿನ ಜೀವನ ವಿಧಾನ ವೈಶಿಷ್ಟ್ಯತೆ ಕೃಷಿ ಆಧುನಿಕ ಬದಲಾವಣೆಗಳು ಎಲ್ಲವನ್ನೂ ಸೋಪಜ್ಞತೆಯಿಂದ ದಾಖಲಿಸಿರುವ ಒಂದು ಗಮನಾರ್ಹ ಕೃತಿ.
- ಕೆ. ಆರ್. ಉಮಾದೇವಿ ಉರಾಳ
