‘ದೇವಿ ಕುರುಬತಿ’ ಕೃತಿ ಪರಿಚಯ

ಜನರ ಮನಗೆದ್ದ ರಾಣಿ ʼದೇವಿ ಕುರುಬತಿʼಯೆಂದೇ ಪ್ರಸಿದ್ಧವಾದ ಐಗುಪ್ತದ ರಾಣಿ ಅನೆಪ್‌ ಕುರಿತು ಬರೆದ ಡಾ.ಶುಭದಾ ಎಚ್.ಎನ್‌ ರವರ ʼದೇವಿ ಕುರುಬತಿʼ ಕಾದಂಬರಿಯ ಕೃತಿಯ ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ದೇವಿ ಕುರುಬತಿ
ಲೇಖಕರು : ಡಾ.ಶುಭದಾ ಎಚ್.ಎನ್‌
ಬೆಲೆ:೨೬೦
ಪುಟ:೧೯೨+೪+೧೬
ಪ್ರಕಾಶನ: ದೇಸಿ ಪುಸ್ತಕ

ರಾಜ ರಾಣಿಯೆಂದರೆ ಐಷಾರಾಮದ ಬದುಕಿನಲ್ಲಿ ಬದುಕಿ,ಹೂವಿನ ಹಾದಿಯಲ್ಲಿ ನಡೆದು,ಹೂವಿನ ಹಾಸಿಗೆಯಲ್ಲಿ ಮಲಗಿ,ಬಂಗಾರದ ತಟ್ಟೆಯಲ್ಲಿ ಊಟ ಮಾಡಿ,ಹಾಯಾಗಿರುವವವರು ಎಂದು ಭಾವಿಸುವವರಿಗೆ ಅಪವಾದವಾಗಿ ಜನರಿಗೋಸ್ಕರ ಬದುಕಿ, ಜನರೊಡನೆ ಒಡನಾಡಿ,ಸರಳಜೀವನ ನಡೆಸಿ ಜನರ ಒಳಿತಿಗಾಗಿ ಶ್ರಮಿಸಿ, ಜನರ ಮನಗೆದ್ದ ರಾಣಿ ʼದೇವಿ ಕುರುಬತಿʼಯೆಂದೇ ಪ್ರಸಿದ್ಧವಾದ ಐಗುಪ್ತದ ರಾಣಿ ಅನೆಪ್‌ ಕುರಿತು ಬರೆದ ಡಾ.ಶುಭದಾ ಎಚ್.ಎನ್‌ ರವರ ʼದೇವಿ ಕುರುಬತಿʼ ಕಾದಂಬರಿ ಈ ಸದ್ಯ ಓದಿದೆ.

ಐಗುಪ್ತದಲ್ಲಿ ಶುದ್ಧ ರಕ್ತದ ಸಂತಾನ ಬಯಸಿ ತನ್ನ ಮಲಸೋದರಿ,ಮಗಳು ಇವರನ್ನು ಮದುವೆಯಾಗಿ ಪಟ್ಟದರಾಣಿಯ ಪಟ್ಟ ನೀಡುವ ಪೆರೋದೊರೆ ,ಅವಳ ಹೊಟ್ಟೆಯಲ್ಲಿ ಜನಿಸಿದ ಗಂಡು ಮಗುವಿಗೆ ಮುಂದಿನ ದೊರೆಯಾಗುವ ಪಟ್ಟ.ಊರಿನ ಜನತೆಯಂತೂ ಅವನನ್ನು ನಡೆದಾಡುವ ದೇವರು,ರಾ ದೇವರ ಅಂಶವೆಂದೇ ಭಾವಿಸಿ ರಾಜರ ಉನ್ನತಿಗಾಗಿ ಬಯಸಿದರೆ,ರಾಜರಿಗೆ ಸಂತೃಪ್ತಿಯಾದರೆ,ನೀಲ ನದಿ ತುಂಬಿ ತುಳುಕಿ,ಅವರ ಹೊಲಗಳು ಫಲಭರಿತವಾಗಿಯೂ,ಕುರಿ,ಇತ್ಯಾದಿ ಪ್ರಾಣಿಸಂಕುಲದ ವೃದ್ಧಿಯೂ ಆಗಿ ಅವರ ರಾಜ್ಯ ಸಂಪದ್ಭರಿತವಾಗಿರುತ್ತದೆ ಎಂಬ ನಂಬಿಕೆ ಅವರದು.

ರಾಣಿ ಅನೆಪ್‌ ತನ್ನ ಮಲಸೋದರ ಪೆರೋಪೇಪಿಯನ್ನು ಮದುವೆಯಾಗಿ ಬಂದಾಗ ಮಲಸೋದರನೊಂದಿಗೆ ಒಡನಾಡಲು ಏನೋ ಸಂಕೋಚ,ಅವನಲ್ಲೂ ಅದೇ ರೀತಿಯ ಭಾವನೆಯೇನೋ.ಅವನಂತೂ ಬಹುಪತ್ನಿತ್ವವನ್ನು ಪಾಲಿಸಿ ಅವನೊಂದಿಗಿರುವ ಉಪಪತ್ನಿಯರೊಂದಿಗೆ,ಗೆಳೆಯರೊಂದಿಗೆ,ಆಟ,ಮೋಜು-ಮಸ್ತಿಯಲ್ಲೇ ದಿನಕಳೆದರೆ ಪ್ರಜೆಗಳ ರಕ್ಷಣೆಯ ಭಾರ ಮಹಾಅರ್ಚಕ,ಅಮಾತ್ಯ,ಇತರೇ ಅಧಿಕಾರಿಗಳು ನಿಷ್ಠೆಯಿಂದ ರಾಜ್ಯಸೇವೆ ಮಾಡುವರು,ರಾಜ್ಯಭಾರ ನೋಡಿಕೊಳ್ಳುವರು.

ಮದುವೆಯಾದ ನಂತರ ರಾಜನೊಂದಿಗೆ ಕಾಲಕಳೆದು ಹಾಯಗಿರುವ ಬದಲು,ಅವಳು ಅತ್ತೆಯಲ್ಲಿ ಕೇಳುವುದು ʼನನಗೆ ಈ ರಾಜ್ಯದ ತುಂಬಾ ಸಂಚರಿಸಿ,ಸಾಮಾನ್ಯ ಜನರೊಡನೆ ಒಡನಾಡಬೇಕೆಂದುʼ.ಯಾವ ಅತ್ತೆ ಇದಕ್ಕೆ ಒಪ್ಪಿಗೆ ನೀಡುತ್ತಾಳೆ?.ನನ್ನ ಕೈಯ್ಯಲ್ಲಿ ಮೊಮ್ಮಗುವನ್ನು ಕೊಟ್ಟು ನೀನು ಎಲ್ಲಿಗಾದರೂ ಹೋಗು ಎಂದು ಹೇಳುತ್ತಾಳಷ್ಟೇ.ಆದರೆ ಅನೆಪ್‌ ಅದೃಷ್ಟವಂತೆ,ಪರೋಕ್ಷವಾಗಿ ಹಾಗೇ ಹೇಳಿದರೂ,ಅವಳ ಸಂಚಾರಕ್ಕೆ ಅತ್ತೆ ತಯಾರಿ ಮಾಡಿಕೊಡುತ್ತಾಳೆ.

ಮುಂದೆ ಪೆರೋಪೇಪಿಯನ್ನು ಕಳೆದುಕೊಂಡು ರಾಜನ ಸಿಂಹಾಸನ ಅನಾಥವಾಗದಂತೆ,ಇತರೇ ಶತ್ರುಗಳ ಪಾಲಿಗೋ,ಅಧಿಕಾರಿಗಳ ಪಾಲಾಗದಂತೆ ಅನೆಪ್ ಳ ಅತ್ತೆ ತೆಗದುಕೊಳ್ಳುವ ರಾಜಕೀಯ ನಿರ್ಧಾರ,ಅವಳು ಮಹಾಭಾರತದ ಯುಧಿಷ್ಠಿರ ಒಂದು ಪ್ರಿಯವಾದ ಸುಳ್ಳುಹೇಳಿ ದ್ರೋಣನ ಹತ್ಯೆಯಾಗುವಂತೆ ನೋಡಿಕೊಳ್ಳುವ ಕಾರ್ಯದಂತೆ ಮಹಾಅರ್ಚಕರ ಮುಂದೆ ನನ್ನ ಕನಸಿನಲ್ಲಿ ಅನೆಪ್‌ ವಿಧವೆಯಾದರೂ ರಾಜ್ಯಭಾರಹೊರಬೇಕೆಂಬ ರಾ ದೇವನ ಆದೇಶವಾಗಿದೆ.ಅದನ್ನೇ ಪಾಲಿಸೋಣ ಎಂದು ಹೇಳಿದ ಸಣ್ಣ ಸುಳ್ಳಿನಿಂದ ಅನೆಪ್‌ ರಾಜ್ಯಭಾರ ಹೊತ್ತರೆ ಪ್ರಜೆಗಳಿಗೆ ದೇವಿಯೇ ರಾಜ್ಯಭಾರಹೊತ್ತಿರುವಾಗ ನಮ್ಮ ಭವಿಷ್ಯ ಉಜ್ವಲವಾಗುವುದು ಎಂಬ ಹೊಂಗನಸು.

ರಾಣಿಯಾಗಿ ಅಂತಃಪುರದಲ್ಲಿದ್ದುಕೊಂಡು ಹಾಯಾಗಿರುವ ಬದಲು,ಅವಳು ನೇಕಾರರು,ಕುರುಬರನ್ನು,ಇತರೇ ಕಾರ್ಮಿಕ,ರೈತ ವರ್ಗದವರನ್ನು ಕರೆದು,ಅವರ ಕುಶಲತೆ ವಿಚಾರಿಸಿ,ಅವರ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳುವ ಕ್ರಮಗಳು ಪ್ರಜೆಗಳನ್ನು ದಂಗುಬಡಿಸುವಂತೆ ಮಾಡುತ್ತವೆ.ಪಟ್ಟಕ್ಕೇರಿದ ತಕ್ಷಣ ಪ್ರತಿ ರಾಜರು ತಮ್ಮಗೋರಿಗಳನ್ನು ಬೃಹತ್‌ ಆವರಣದಲ್ಲಿ ಕಟ್ಟಿ ಸತ್ತನಂತರ ೩ ಸಾವಿರ ವರ್ಷಗಳ ಕಾಲ ಅದರಲ್ಲಿ ಬಾಳಬೇಕೆಂದು ಅದನ್ನು ಅಲಂಕೃತಗೊಳಿಸಿಕೊಂಡು ಪ್ರಜೆಗಳು ನೀಡಿದ ತೆರಿಗೆಗಳನ್ನೆಲ್ಲ ಅದಕ್ಕಾಗೇ ವ್ಯಯಿಸಿ,ಪ್ರಜೆಗಳ ಯೋಗಕ್ಷೇಮದ ಜವಾಬ್ದಾರಿಯನ್ನು ಮರೆತುಬಿಡುವ ರಾಜರಕ್ರಮಕ್ಕೂ,ಅನೆಪ್‌ ತನ್ನ ಗೋರಿ ಸಾಮಾನ್ಯವಾಗಿದ್ದು ಯಾವುದೇ ಹುಲ್ಲುಗಾವಲುಗಳನ್ನು ನಾಶಪಡಿಸದೇ,ಅತ್ಯಂತ ಕಡಿಮೆ ಖರ್ಚಿನಲ್ಲಿ ಕಟ್ಟುವಂತಹದ್ದಾಗಿರಬೇಕು.ಗೋರಿ ಕಟ್ಟುವ ಶ್ರಮಿಕವರ್ಗದವರ ಏಳಿಗೆಗಾಗಿ ಅವರ ಉತ್ತಮವೇತನ,ಸೌಲಭ್ಯಗಳನ್ನು ನೀಡಿ ರಾಣಿಯೆಂದರೆ ಹೀಗಿರಬೇಕು ಎಂದು ಜನಬಯಸುವಷ್ಟು ಮಟ್ಟಿಗೆ ಉತ್ತಮವಾಗಿ ರಾಜ್ಯಭಾರ ನಡೆಸಿದವಳು.ತಾನೇ ಸ್ವತಃ ಮಗನೊಂದಿಗೆ ಕುಂಚ ಹಿಡಿದು ಅದರ ಅಲಂಕಾರಮಾಡಿದಳೆಂದರೆ ಅವಳ ಸರಳತೆಯನ್ನು ಊಹಿಸಿ.

ಕರಕುಶಲ ಕೈಗಾರಿಕೆಗಳಿಗೆ,ನೇಕಾರರಿಗೆ ಸಹಾಯವಾಗುವಂತೆ ಅವರಿಗೆ ವಿದೇಶದಲ್ಲಿ ಮಾರುಕಟ್ಟೆ ಒದಗಿಸಿ ರಫ್ತು ಜಾಸ್ತಿಯಾಗುವಂತೆ ಅದರ ಕುರಿತು ಜಾಗೃತಿ ಮೂಡಿಸಿ,ದೇಶದಲ್ಲಿ ಕಡಿಮೆಬೆಲೆಗೆ ಆ ಸರಕುಗಳು ದೊರೆಯುವಂತೆ ಅಲ್ಪಕರ ವಿಧಿಸಿ,ವಿದೇಶಕ್ಕೆ ಕಳಿಸುವಾಗ ಅದರ ಮೇಲೆ ಜಾಸ್ತಿಸುಂಕ ವಿಧಿಸಿ,ನೇಕಾರರೆಲ್ಲ ಒಟ್ಟಿಗೆ ಸೇರಿ ಒಂದೇ ಕಡೆ ಕೆಲಸ ಮಾಡಿದಾಗ,ಹೆಂಗಸರಿಗೂ ಅಲ್ಪಸ್ವಲ್ಪ ಕಲೆಯ ಪರಿಚಯ ಮಾಡಿಸಿದಾಗ,ದುಡಿಮೆ ಹೆಚ್ಚಿ ದೇಶದಲ್ಲಿ ಉತ್ಪಾದನೆ ಹೆಚ್ಚಾಗಿ,ಜನರ ಜೀವನ ಮಟ್ಟವೂ ಸುಧಾರಿಸುವುದು ಎಂಬ ಕಾರ್ಮಿಕರ ಕುರಿತ ಅವಳ ಚಿಂತನೆ ಕ್ರಾಂತಿಯನ್ನೇ ಮೂಡಿಸಿತು.

ರಾಜಕೀಯಕ್ಕಾಗಿ ಅಂದು ಕೈಕೇಯಿ ಮಂಥರೆಯ ಮಾತಿಗೆ ಕಿವಿಗೊಟ್ಟು,ದಶರಥನ ಬಳಿ ಬಂದಳು.ಮಹಾಭಾರತದಲ್ಲೂ ಕರ್ಣನನ್ನು ಪಾಂಡವರ ಪರವಹಿಸಲು ಕುಂತಿ ಕೇಳಿಬಂದಳು.ಅದೇ ರೀತಿ ತನ್ನ ಪಟ್ಟ ಉಳಿಸಿಕೊಳ್ಳಲು ರಾಣಿಯು ಒಬ್ಬನನ್ನು ಕೊಲ್ಲಬೇಕಾದಂತ ಪರಿಸ್ಥಿತಿ ಬಂದರೆ,ಅತ್ತೆ ನುಕಿಯ ಮಹಾಅರ್ಚಕ ಮತ್ತು ಅನೆಪ್‌ ಳ ತಾಯಿಯ ನಡುವೆ ಸಂಬಂಧವಿರುವುದ ತಿಳಿದು ಯಾರಿಗೂ ತಿಳಿಯದಂತೆ ಅವರಿಗೆ ನೀಡುವ ಶಿಕ್ಷೆ,ಬಹಿರಂಗವಾಗದೇ ಜನರಿಗೆ ನಿಗೂಢವಾಗಿ ಉಳಿದ ಸತ್ಯಗಳಾದವು.

ಅಣೆಕಟ್ಟು ಕಟ್ಟಿ ನೀಲನದಿಯ ನೀರು ಬರಡುಪ್ರದೇಶಕ್ಕೂ ಹರಿಯುವಂತಾಗಬೇಕು,ಅಲ್ಲಿಯೂ ಕೂಡ ಬೆಳೆ ಬೆಳೆಯಬೇಕು ಎಂದು ಕನಸು ಕಂಡು,ಹಣದ ಅಡಚಣೆಯಾದಾಗ ಅತ್ತೆಯ ಬಳಿ ತನ್ನ ಆಭರಣಗಳ ಹರಾಜಿಗೆ ಅನುಮತಿ ಬೇಡಿ,ಅವಳನ್ನು ಒಪ್ಪಿಸುವ ಪರಿ ನಮ್ಮನ್ನು ಆಕರ್ಷಿಸುತ್ತದೆ. ಮುಂದೆ ಅವಳ ಕಾಲಾನಂತರ ಪ್ರಜೆಗಳೆಲ್ಲ ತಮ್ಮ ಆಭರಣಗಳನ್ನು ಮಾರಿ ಬಂದ ಹಣದಲ್ಲಿ ಅವಳಿಗೊಂದು ದೇವಾಲಯ ಕಟ್ಟಿದರೆಂದರೆ ಅವಳ ಪ್ರಜಾಪ್ರೀತಿಯ ಮಟ್ಟ ಎಷ್ಟು ಮಟ್ಟದಿರಬೇಕು ಒಮ್ಮೆ ಊಹಿಸಿ.


  • ಸಾವಿತ್ರಿ ಶ್ಯಾನುಭಾಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading