ಕೆಲವರಿಗೆ ಯಾರೂ ಮನೆಗೆ ಬರೋದು ಇಷ್ಟ ಇರಲ್ಲ. ಅವರಿಗೆ ಯಾರೂ ಬೇಕಾಗೂ ಇರಲ್ಲ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮನೆಗೆ ಹೇಳದೆ ಬಂದ ಅತಿಥಿ’ ತಪ್ಪದೆ ಮುಂದೆ ಓದಿ…
ರತ್ನಳಿಗೆ ತನ್ನ ನಾದಿನಿ ಸರಸ್ವತಿಯ ಮನೆಯಲ್ಲಿ ಕುಳಿತದ್ದು ಕೇವಲ ಅರ್ಧಗಂಟೆಯಾದರೂ ಮುಳ್ಳಿನ ಮೇಲೆ ಕುಳಿತಂತೆನಿಸಿತ್ತು. ಅದಕ್ಕೆ ಕಾರಣವೂ ಇದೆ. ಅಂದು ರತ್ನ ಗಂಡ ರಮೇಶನೊಡನೆ, ಮುಂದಿನವಾರ ತಮ್ಮ ಮನೆಯಲ್ಲಿ ನಡೆಯಲಿರುವ ಸತ್ಯನಾರಾಯಣ ಪೂಜೆಗೆ ಗಂಡನ ಒಡಹುಟ್ಟಿದವರನ್ನು ಕರೆಯಲು ಎಲ್ಲರ ಮನೆಗೂ ಹೋಗಿದ್ದಳು. ಇನ್ನಿಬ್ಬರ ಮನೆಗೆ ಕರೆದು ಕೊನೆಯಲ್ಲಿ ಅಲ್ಲೇ ಹತ್ತಿರದಲ್ಲಿದ್ದ ನಾದಿನಿ ಮನೆಗೆ ಹೋಗಿದ್ದಳು. ಬಾಗಿಲು ತೆಗೆದ ಸರಸ್ವತಿ ಇವರನ್ನು ಕಂಡೊಡನೆ ಫೋನ್ ಮಾಡ್ಕೊಂಡ್ ಬಂದಿದ್ರೆ ಆಗ್ತಿತ್ತು ಎಂದಾಗ ಮುಖದ ಮೇಲೆ ಹೊಡೆದಂತಾಗಿ ಗಂಡನೆಡೆಗೆ ನೋಡಿದಳು.
ಅವ್ನಿಗೆಷ್ಟಾದ್ರು ತಂಗಿ ಅಲ್ವಾ, ಎಲ್ಬಿಟ್ಕೊಡಕಾಗುತ್ತೆ? ಹಾಗಾಗಿ ಏನೂ ಮಾತನಾಡದೆ ಸುಮ್ಮನಿದ್ದ. ಕಾಫಿ ಕೊಡುವಾಗ, ನಾವು ಎಲ್ಲೋ ಹೋಗೋದಿತ್ತು, ನೀವು ಬರೋದು ಇನ್ನೊಂದೈದ್ನಿಮ್ಷ ತಡ ಆಗಿದ್ರೆ ನಾವ್ ಮನೇಲಿರ್ತಿರ್ಲಿಲ್ಲ. ನೀವ್ ಬರಕ್ಮುಂಚೆ ಒಂದ್ಸಲ ಫೋನ್ ಮಾಡಿದ್ರಾಗಿರೋದು, ಇದು ಎರಡನೇ ಬಾರಿ. ಮತ್ತೆ ಅಡಿಗೆ ಮನೆಯಲ್ಲಿ ಅದೂ ಇದೂ ಹುಡುಕುತ್ತಾ, ನೀವ್ಬರ್ತಿರಿ ಅಂತ ಮೊದ್ಲೇ ಗೊತ್ತಿದ್ದಿದ್ರೆ ನಾನು ಹೂವು, ವೀಳೆದೆಲೆ ಎಲ್ಲ ತಂದಿಟ್ಗಂಡಿರ್ತಿದ್ದೆ. ಈ ಬಾರಿ ರತ್ನ, ನಾನ್ ಹೇಳ್ದೆ ಫೋನ್ ಮಾಡಣ ಅಂತ. ನಿಮ್ಮಣ್ಣನೆ ಬೇಡ ಅಂದ್ರು. ಎಷ್ಟ್ಸಲ ಫೋನ್ ಮಾಡಿದ್ರು ನೀವ್ ರಿಸೀವ್ ಮಾಡಲ್ಲ , ಆಮೇಲಾದ್ರು ನೋಡ್ ಮಾಡ್ತೀರ ಅಂದ್ರೆ ಅದೂ ಇಲ್ಲ. ಹಾಗಾಗಿ ಇದ್ರೆ ಕರುದ್ಬರೋಣ, ಇಲ್ಲ ಅಂದ್ರೆ ಹಾಗೆ ಬಂದ್ರಾಯ್ತು ಅಂದ್ರು. ಅದ್ಕೆ ನಾನು ಫೋನ್ ಮಾಡ್ಳಿಲ್ಲ ಅಂತ್ಹೇಳಿ ಸರಸ್ವತಿ ಮುಖ ಊದಿಸಿದ್ದನ್ನೂ ನೋಡಿಯಾಯ್ತು. ಯಾಕಾದ್ರು ಬಂದ್ವಪ್ಪ ಇವ್ರ್ ಮನೇಗೆ, ಎಲ್ಲೂ ಹೋಗೋ ಲಕ್ಷಣ ಅಂತೂ ಅವ್ರುನ್ನೋಡಿದ್ರೆ ಕಾಣುಸ್ತಿರ್ಲಿಲ್ಲ. ಅದ್ರಲ್ಲೂ ಅವ್ರ್ ಅಕ್ಕ, ಅವ್ಳು ಮನೇಲೆ ಇದಾಳೆ, ನೀವ್ಬರೋಕ್ಮುಂಚೆ ಫೋನಲ್ಲಿ ಮಾತಾಡಿದ್ಲು ಅಂದಿದ್ದುಕ್ಕೆ ನಾವೂ ಹೋಗಿದ್ದು. ಅಂತೂ ಹೊರಟಾದ್ಮೇಲೂ ಬಾಗಿಲ ಬಳಿ , ಇನ್ನೊಂದ್ಸಲ ಬರೋ ಹೊತ್ತಿಗೆ ಮುಂಚೆನೆ ಫೋನ್ ಮಾಡಿ ಎಂಬ ಮಾತು ಕಿವಿಯೊಳಗೆ ಮೊಳಗಿದ್ದಂತೂ ಸತ್ಯ. ಅಂದೇ ರತ್ನ , ಇನ್ನು ನನ್ನುನ್ನ ಯಾರ್ ಮನೇಗು ಕರೀಬೆಡಿ. ಹೊರಡಕ್ಮುಂಚೆನೆ ಹೇಳ್ದೆ. ಯಾರ್ಯಾರಿಗ್ ಏನೇನ್ ಕೆಲ್ಸ ಇರುತ್ತೋ ಏನೋ . ಫೋನ್ ಮಾಡ್ದೆ ಹೋಗೋದ್ ಸರಿ ಅಲ್ಲ ಅಂತ. ನನ್ಮಾತ್ ಎಲ್ಕೇಳ್ತೀರ ನೀವು, ನಂಗಂತೂ ಯಾಕಾದ್ರೂ ಹೋದ್ವಾ ಅನ್ನುಸ್ತು. ಎಲ್ಲಾ ನಿಮ್ಮಿಂದಾನೆ ಆಗಿದ್ದು. ಆದ್ರೂ ಅಲ್ಲೊಂದ್ ಮಾತಾಡ್ಳಿಲ್ಲ ನೀವು ಎಂದು ತನ್ನ ಅಸಮಾಧಾನ ಹೊರಹಾಕಿದಳು. ಅಯ್ಯೋ ಬಿಡು, ಅವ್ಳ್ಹಂಗೆ ಫೋನ್ ಮಾಡಿದ್ರೆ ಫೋನ್ ಎತ್ತಲ್ಲ, ನೀನ್ ಅದ್ಕೆಲ್ಲ ತಲೆ ಕೆಡುಸ್ಗಂಬೆಡ ಎಂದ. ಅಲ್ಲ, ತವ್ರ್ ಮನ್ಯೋರು ಬಂದಿದಾರೆ ಅಂದ್ರೆ ಹೆಣ್ಮಕ್ಳು ಎಷ್ಟ್ ಖುಷಿಪಡ್ತಾರೆ. ಅದ್ರಲ್ಲೂ ಹೆಣ್ಮಕ್ಳು ಮನೇಗೆ ಹೋಗಿ ಕುಂಕ್ಮ ಕೊಟ್ಟು ಕರಿಬೇಕೂಂತ ತಾನೆ ಹೋಗಿದ್ದು. ಏನ್ ನಮ್ ಉದ್ಧಾರಕ್ ಹೋಗಿದ್ವಾ? ಬಂದಿದಾರೆಂತ ಒಂದ್ ಖುಷಿ ಇಲ್ಲ, ಒಂದ್ ನಗು ಇಲ್ಲ. ಬರೋ ತಂಕಾನು ಗೊಣುಗ್ತಾನೆ ಇದ್ರು. ಅವ್ರು ಫೋನ್ಮಾಡ್ದೆ ಯಾವ್ ಸಮ್ಯಕ್ ಬಂದ್ರೂ ನಾವ್ಚೆನಾಗ್ ಮಾತಾಡ್ಸಿ , ಏನಿರುತ್ತೋ ಅದುನ್ನ ಕೊಟ್ಟು ಕಳ್ಸಲ್ವಾ. ಇನ್ಮೇಲೇನಿದ್ರು ನನ್ಮನೇಲಿ ನಾನ್ ನೆಮ್ದಿಯಾಗಿರ್ತೀನಿ ಎಂದವಳು ಗಂಡನ ಮಾತಿಗೂ ಕಾಯದೆ ತನ್ನ ಮುಂದಿನ ಕೆಲಸಕ್ಕೆಂದು ಅಡುಗೆ ಮನೆಗೆ ಹೋದಳು.
ಇದೊಂದು ಉದಾಹರಣೆಯಷ್ಟೆ. ಎಷ್ಟೋ ಜನರಿಗೆ ಫೋನ್ ಮಾಡ್ದೆ ಯಾರಾದ್ರು( ತೀರಾ ಹತ್ತಿರದವರಾದರೂ ಸರಿ) ಮನೆಗ್ಹೋದ್ರೆ ಮುಖದಲ್ಲೇ ಅಸಹನೆ ತೋರುಸ್ತಾರೆ. ಯಾಕಪ್ಪಾ ಬಂದ್ರು ಅನ್ನೋ ತರ. ಇನ್ನು ಕೆಲವರಿಗೆ ಯಾರೂ ಬರೋದು ಇಷ್ಟ ಇರಲ್ಲ. ಯಾರೂ ಬೇಕಾಗೂ ಇರಲ್ಲ. ಇದಕ್ಕೆಲ್ಲ ಕಾರಣ ಹಲವಾರು. ಹಿಂದೆಲ್ಲ ಯಾರದ್ದಾದ್ರು ನೆಂಟರಿಷ್ಟರ ಮನೆಗೆ ಹೋಗ್ಬೇಕಾದ್ರೆ ಕಾಗದ ಬರೀತಿದ್ರು. ಇಂಥಾ ದಿನ ಬರ್ತೀವಿ ಅಂತ . ಅವರೂ ಸಂಭ್ರಮದಿಂದ ಇವರ ಬರುವಿಕೆಗೆ ಕಾಯ್ತಿದ್ರು . ಇನ್ನು ಅನೇಕರು ಕಾಗದ ಬರೀದೆನೆ ಹೋದ್ರು, ಅದು ಯಾವುದೇ ಸಮಯ ಆಗಿದ್ರೂ ಮನೆ- ಮಂದಿ ಎಲ್ಲಾ ( ದೊಡ್ಡವರು, ಚಿಕ್ಕವರೆನ್ನದೆ) ಬಂದು ಅವರನ್ನು ಖುಷಿಯಿಂದ ಮಾತಾಡುಸ್ತಿದ್ರು.

ಫೋಟೋ ಕೃಪೆ : ಅಂತರ್ಜಾಲ
ಇವರೂ ಚಿಕ್ಕ ಮಕ್ಕಳಿಗೆ ಚಾಕ್ಲೆಟ್ಟೋ, ಮನೆಯಲ್ಲಿ ಮಾಡಿದ ಉಂಡೆಯನ್ನೋ, ಬೆಳೆದ ತರಕಾರಿ, ಹಣ್ಣು, ದಿನಸಿ ಹೀಗೆ ತಮ್ಮ ಕೈಲಾಗಿದ್ದನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಆಗೆಲ್ಲ ಮನೆಗೆ ಯಾರಾದರೂ ಬಂದರೆ ಹಬ್ಬದ ವಾತಾವರಣ. ರಾತ್ರಿ ಊಟವಾದ ಮೇಲೆ ಎಲ್ಲರೂ ಒಟ್ಟಿಗೆ ಕೂತು, ಉಳಿದ ಸಂಬಂಧಿಕರ ವಿಷಯದಿಂದ ಹಿಡಿದು ಊರಲ್ಲಿ ನಡೆದ ವಿಷಯಗಳವರೆಗೂ ಅಂದರೆ, ಹಬ್ಬ-ಹರಿದಿನ, ಮದುವೆ ,ಜಾತ್ರೆ ಹೀಗೆ ಎಲ್ಲಾ ವಿಷಯಗಳ ಸುತ್ತ ಮಾತುಕತೆ ನಡೆಯುತ್ತಿತ್ತು. ಬೆಳಗ್ಗೆದ್ದು ತೋಟ, ಕೊಟ್ಟಿಗೆ, ಗದ್ದೆ ಎಂದು ಕೆಲಸವಿದ್ದರೂ , ಬಂದವರಿಗೂ ಖಂಡಿತ ಸಮಯ ಕೊಡುತ್ತಿದ್ದರು. ಒಂದು ವೇಳೆ ಇವರ ಮನೆಯವರು ಬೇರೆಲ್ಲಿಗಾದರೂ ಹೋಗಿದ್ದರೆ , ಓ ನನ್ನ ವೋರ್ಗಿತ್ತಿ ಅಣ್ಣ ಬಂದಿದಾರೆ, ನಮ್ ಸೊಸೆ ತಮ್ಮ ಬಂದಿದಾರೆ ಅಂತ ಮನೆಯಲ್ಲಿರುವ ಉಳಿದವರೆಲ್ಲ ಸಿಹಿ ಮಾಡಿ ಬಡಿಸುವುದರೊಂದಿಗೆ ತಮ್ಮ ಕೈಲಾದ ಆದರಾತಿಥ್ಯ ಮಾಡಿ ಕಳಿಸುತ್ತಿದ್ದರು. ಹೋದವರೂ ಅಷ್ಟೆ, ನನ್ತಂಗಿ ಅತ್ತೆ ಮನೆಯವ್ರು ತುಂಬ ಚೆನ್ನಾಗ್ ನೋಡ್ಕೊಂಡ್ರು ಅಂತ ಖುಷಿಯಿಂದ ಬಂದು ಹೇಳ್ತಿದ್ರು. ಇನ್ನು ಎಷ್ಟೋ ಬಾರಿ ದೂರದ ಊರಿಗೆ ಹೋದವರಿಗೆ, ಅವರೆಲ್ಲ ಮನೆಗೆ ಬೀಗ ಹಾಕಿ ಹೋಗಿದ್ದು ನೋಡಿ , ಇತ್ತ ಹಿಂದಿರುಗಲೂ ಬಸ್ಸಿಲ್ಲದೆ , ಊಟ , ತಿಂಡಿಯೂ ಇಲ್ಲದೆ ಅಂದೆಲ್ಲ ಅವರ ಮನೆಯ ಜಗುಲಿಯ ಮೇಲೋ( ಹಿಂದೆಲ್ಲ ಸಾಧಾರಣವಾಗಿ ಮನೆ ಮುಂದೆ ಎರಡೂ ಬದಿಯಲ್ಲೂ ಕೂರಲು, ಒಬ್ಬರು ಮಲಗಲು ಆಗುವಷ್ಟು ಅಗಲದ ಕಟ್ಟೆ ಇರುತ್ತಿತ್ತು) ಕಳೆದು ಮರುದಿನ ಬೆಳಗಾದ ನಂತರ ಮತ್ತೆ ಮೈಲುಗಟ್ಟಲೆ ನಡೆದು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬೇಸರದಲ್ಲೇ ಹಿಂದಿರುಗಿದ್ದೂ ಇದೆ. ಇನ್ನು ಕೆಲವರು ಅವರ ಅಕ್ಕಪಕ್ಕದ ಮನೆಯವರ ಆತಿಥ್ಯ ಸ್ವೀಕರಿಸಿ ಬಂದದ್ದೂ ಇದೆ.
ಆದರೆ, ಈಗ ಎಲ್ಲರ ಕೈಯಲ್ಲೂ ಫೋನ್ ಇರುವುದರಿಂದ, ಯಾರದ್ದಾದರೂ ಮನೆಗೆ ಹೋಗುವಾಗ ಮನೆಯಲ್ಲಿ ಇದ್ದಾರೋ, ಇಲ್ಲವೋ ಕೇಳಿಕೊಂಡು ಹೋಗುವುದು ಈಗಿನ ಪರಿಸ್ಥಿತಿಗೆ ತುಂಬಾ ಅವಶ್ಯಕ. ಬಹುಶಃ ನಾನಾದರೂ ಅದೇ ಮಾತನ್ನೇ ಹೇಳುತ್ತೇನೆ. ಆದರೆ ತೀರಾ ಹತ್ತಿರದ ಸಂಬಂಧಿಕರು ಹೇಳದೇ ಬಂದಾಗ( ಏಕೆಂದರೆ, ನನ್ನ ಅಕ್ಕನ ಮನೆ, ತಮ್ಮನ ಮನೆ, ಚಿಕ್ಕಪ್ಪನ ಮನೆ ಹೀಗೆ ಮೊದಲಿನಿಂದಲೂ ಒಂದು ಬಾಂಧವ್ಯ, ಸಲುಗೆ ಎಲ್ಲಾ ಇರುವುದರಿಂದ) ಅಸಮಾಧಾನ ತೋರಿಸದೆ , ಬಂದವರನ್ನು ನಗುಮುಖದಿಂದ ಸತ್ಕರಿಸುವುದು ಮನೆಯವರ ಕರ್ತವ್ಯ. ಯಾರೂ ಯಾರ ಮನೆಗೂ ಊಟಕ್ಕಿಲ್ಲದೆ ಹೋಗಿರುವುದಿಲ್ಲ. ಪ್ರೀತಿ-ವಿಶ್ವಾಸ ಬಯಸಿ ನಮ್ಮವರು, ತಮ್ಮವರು ಎಂಬ ಭಾವನೆ, ಬಂಧನ ಇರುವುದರಿಂದ ಹೋಗಿರುತ್ತಾರಷ್ಟೆ. ಅದು ಅವರಲ್ಲಿ ಇಲ್ಲದೆ ಹೋದಾಗ ಇವರ ಭಾವನೆಗೆ ಧಕ್ಕೆ ಉಂಟಾಗಿ ದುಃಖ ಪಡಬೇಕಾಗುತ್ತದೆ . ಅದೆಲ್ಲಕ್ಕಿಂತ ಫೋನ್ ಮಾಡಿ ಅವರು ಖುಷಿಯಿಂದ ಬನ್ನಿ ಎಂದರಷ್ಟೇ ಹೋಗುವುದು ಒಳ್ಳೆಯದು ಎಂದು ನನ್ನ ಅನಿಸಿಕೆ.
ಏಕೆಂದರೆ,
- ಹಿಂದಿನ ಕಾಲದ ತರ ಈಗ ಮನೆ ತುಂಬ ಜನರಿರುವುದಿಲ್ಲ. ದೊಡ್ಡ ದೊಡ್ಡ ಮನೆಯೂ ಇರುವುದಿಲ್ಲ. ಇರುವಷ್ಟು ಜಾಗದಲ್ಲೇ ಮಕ್ಕಳ ಓದು, ವಯಸ್ಸಾದವರಿದ್ದರೆ ಅಥವಾ ಅನಾರೋಗ್ಯ ಹೊಂದಿದವರಿದ್ದರೆ ಅವರಿಗೆ ಸದಾ ವಿಶ್ರಾಂತಿಗೆಂದು ಒಂದು ಹಾಸಿಗೆ (ಸ್ಥಳದ ಅಭಾವದಿಂದ ಹಾಲ್ ನಲ್ಲೇ ಒಂದು ದಿವಾನ್) ಇರಲೇಬೇಕಾಗುತ್ತದೆ . ಮನೆಯಲ್ಲಿರುವವರಿಗೆ ಬೇಕಾದ ಅಗತ್ಯಗಳನ್ನು ಪೂರೈಸಲೂ ಸಹ ಕೆಲವರಿಗೆ ಕಷ್ಟದ ಸಂದರ್ಭ, ಜಾಗದ ಕೊರತೆಯೂ ಸಹ ಇರುತ್ತದೆ.
- ಗಂಡನಿಗೆ ಅಥವಾ ಹೆಂಡತಿಗೆ ಯಾರಿಗಾದರೂ ಒಬ್ಬರಿಗೆ ಮನೆಗೆ ಹೊರಗಡೆಯವರು ಬರುವುದು ಇಷ್ಟವಿಲ್ಲದೆ ಇರಬಹುದು. ಹಾಗಾಗಿ ಅನೇಕರು ಯಾರಾದರೂ ಬರುತ್ತೇವೆಂದಾಗ ಅವರನ್ನು ಏನಾದರೂ ಕಾರಣ ಹೇಳಿ ತಡೆಯಬಹುದು. ಒಂದು ವೇಳೆ ಹೊರಗಿನವರು ಬಂದು ಹೋದ ಮೇಲೆ ಅವರ ಮನೆಯ ವಾತಾವರಣ ಕೆಡಬಹುದು (ಇದು ಕೆಲವೊಮ್ಮೆ ಮನೆಗೆ ಬಂದವರಿಂದಲೂ ಆಗುವ ಸಾಧ್ಯತೆ ಖಂಡಿತಾ ಇದೆ) ಇನ್ನು ಮನೆಯಲ್ಲಿ ಯಾರೊಬ್ಬರ ಸಂಕುಚಿತ ಮನೋಭಾವದಿಂದಲೂ ಆಗಬಹುದು.
- ಓದುವ ಮಕ್ಕಳಿದ್ದರೆ, ಯಾರಾದರೂ ಮನೆಗೆ ಬಂದು ಮಾತನಾಡುತ್ತಾ ಕುಳಿತರೆ ಅವರಿಗೆ ಓದಲು ಕಷ್ಟವಾಗುವುದಂತೂ ಸತ್ಯ. ದೊಡ್ಡ ದೊಡ್ಡ ಮನೆಯಾಗಿ ,ಪ್ರತ್ಯೇಕ ಕೋಣೆಗಳು ಇದ್ದಲ್ಲಿ ಈ ತೊಂದರೆ ಅಷ್ಟಾಗಿ ಆಗುವುದಿಲ್ಲ. ಮಕ್ಕಳಿಗೆ ಟೆಸ್ಟ್, ಎಕ್ಸಾಮ್ ಎಲ್ಲ ಇರುವಾಗ ಯಾರಾದರೂ ಬಂದರೆ , ತಂದೆ- ತಾಯಿಗೆ ಮಕ್ಕಳ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಕೊಡುವಷ್ಟು ಮಹತ್ವ ಇನ್ಯಾವುದಕ್ಕೂ ಇಲ್ಲ ಎಂಬಂತಾಗಿದೆ.
- ಮನೆಯವರು ಎಲ್ಲಿಗೋ ಹೊರಟಿರುತ್ತಾರೆ. ಸಡನ್ನಾಗಿ ಯಾರಾದರೂ ಬಂದರೆ ಇವರ ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅವಸರವೋ, ಅವಶ್ಯಕತೆಯೋ ಇದ್ದಾಗ ಬಂದವರನ್ನು ಹೋಗಿ ಎನ್ನಲೂ ಸಾಧ್ಯವಾಗದೆ, ಇತ್ತ ತಮ್ಮ ಕೆಲಸಕ್ಕೂ ಹೋಗಲಾಗದೆ ಮಧ್ಯದಲ್ಲಿ ಸಂಕಟಪಡುವುದಂತೂ ಸತ್ಯ.
- ಇನ್ನು ಕೆಲವರು ಯಾರದ್ದಾದರೂ ಮನೆಗೆ ಹೋಗಿ, ಅವರ ಮನೆಯ ಬಗ್ಗೆ ನೂರಾಯೆಂಟು ಕೊಂಕು ಮಾತುಗಳನ್ನು ಆಡಿ, ಯಾಕಾದ್ರು ಇವ್ರು ನಮ್ಮನೆಗ್ ಬಂದಿದ್ರಪ್ಪ ಅನ್ನುವಂತಹ ವಾತಾವರಣ ಉಂಟು ಮಾಡಿ, ಮುಂದೆ ಅವರು ಬರುತ್ತಾರೆಂದರೆ ಅವರನ್ನು ಇಲ್ಲಸಲ್ಲದ ಕಾರಣ ಹೇಳಿ ತಡೆಯುವ ಪರಿಸ್ಥಿತಿಯನ್ನು ಅವರೇ ತಂದುಕೊಂಡಿರುತ್ತಾರೆ.
- ಗಂಡ – ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಅನಿವಾರ್ಯತೆ ಇರುವಲ್ಲಿ ಅವರೇ ದಿನದ ಕೊನೆಗೆ ಸುಸ್ತಾಗಿರುತ್ತಾರೆ. ಜೊತೆಗೆ ಮಕ್ಕಳ ಕಡೆ ಗಮನ , ಮುರುದಿನದ ತಯಾರಿ. ಯಾರಾದರೂ ಹೋದರೆ ಅವರಿಗೆ ಕೆಲವೊಮ್ಮೆ ಕಷ್ಟವಾಗುವುದಂತೂ ಸತ್ಯ. ಅದನ್ನು ಹೇಳಿದರೆ ಬೇಸರಿಸುವವರೂ ಇದ್ದಾರೆ.
- ಕೆಲವೊಮ್ಮೆ ನೋಡುವವರಿಗೆ ಚಿಕ್ಕ ಪುಟ್ಟದೆನಿಸುವ ನೆಗಡಿ, ತಲೆನೋವು ಕೂಡ ತುಂಬಾ ಕಿರಿಕಿರಿ ಉಂಟು ಮಾಡಿ ಸದ್ಯಕ್ಕೆ ಏನೂ ಬೇಡ, ಯಾರೂ ಬೇಡ ಎನ್ನುವ ಮನಸ್ಥಿತಿಯನ್ನು ಉಂಟು ಮಾಡುತ್ತದೆ.
- ಇನ್ನು ಹೆಂಗಸರ ಮುಟ್ಟಿನ ದಿನಗಳಲ್ಲಿ ಅವರದ್ದೇ ಆದಂತಹ ಮಾನಸಿಕ, ದೈಹಿಕ ಕಿರಿಕಿರಿಗಳು ಅವರನ್ನು ಹೈರಾಣಾಗಿರಿಸುತ್ತವೆ. ಅಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಯಾರಾದರೂ ಮನೆಗೆ ಬಂದರೆ ಹೇಳಲೂ ಆಗದಂತಹ ಪರಿಸ್ಥಿತಿ. ಆ ದಿನಗಳಲ್ಲಿ ಊಟ, ತಿಂಡಿ ವಿಷಯದಲ್ಲಿ ಮನೆಯವರಾದರೆ ಏನಿದ್ದರೂ ಸುಧಾರಿಸಿಕೊಳ್ಳುತ್ತಾರೆ. ಹಾಗಂತ ಬಂದವರಿಗೂ ಹಾಗೆ ಮಾಡಲು ಸಾಧ್ಯವೇ? ಒಂದು ವೇಳೆ ಮಾಡಿದರೂ ಮುಂದೊಂದು ದಿನ, ಅವರ ಮನೆಗೆ ಹೋಗಿದ್ವಿ. ಕಾಟಾಚಾರಕ್ಕೆ ಏನೋ ಒಂದು ಅನ್ನ, ಸಾರು ಮಾಡ್ಹಾಕಿದ್ರು ಎಂಬ ಮಾತು ಹಿಂದಿಂದ ಬಂದರೂ ಆಶ್ಚರ್ಯವೇನಿಲ್ಲ. ಇದಲ್ಲದೆ, ಎಷ್ಟೇ ಆಧುನಿಕ ಬದುಕಿಗೆ ತೆರೆದುಕೊಂಡಿದ್ದರೂ ಇನ್ನೂ ಹಲವರ ಮನೆಯಲ್ಲಿ ಮಡಿ-ಮೈಲಿಗೆ ರೂಢಿಸಿಕೊಂಡು ಬಂದಿದ್ದಾರೆ. ಅಂತಹ ಸಮಯದಲ್ಲಿ ಅವರು ಯಾರ ಮನೆಗೆ ಹೋಗುವುದೂ ಇಲ್ಲ. ಯಾರನ್ನೂ ಮನೆಗೆ ಕರೆಯುವುದೂ ಇಲ್ಲ. ಒಂದು ವೇಳೆ ಯಾರಾದರೂ ಆ ಸಮಯದಲ್ಲಿ ಬಂದರೆ ಒಂದು ಕುಂಕುಮ ಕೊಡಕು ಆಗ್ಲಿಲ್ಲ ಅಂತ ಚಡಪಡಿಸುವವರೂ ಇದ್ದಾರೆ. ಇನ್ನು ಕೆಲವರು ಸಂಧ್ಯಾವಂದನೆ, ಜಪ ಮಾಡುವುದರಿಂದ ಮುಟ್ಟಾದವರು ಮಾಡಿದ ಅಡುಗೆಯನ್ನು ತಿನ್ನುವುದಿಲ್ಲ. ಇದೆಲ್ಲ ಅವರವರ ಮನೆಗೆ ಸಂಬಂಧಿಸಿದ್ದು. ಮೊದಲೇ ಫೋನ್ ಮಾಡಿದರೆ ಈ ಪರಿಸ್ಥಿತಿಯ ಸಂದಿಗ್ಧತೆಗೆ ಸಿಲುಕಿಕೊಂಡು ಯಾರೂ ಮುಜುಗರಪಡುವಷ್ಟಿರುವುದಿಲ್ಲ.
- ಹಳ್ಳಿಯಲ್ಲಿ ಹೆಚ್ಚಿನ ಮನೆಗಳಲ್ಲಿ ಈಗ ವಯಸ್ಸಾದ ಗಂಡ-ಹೆಂಡತಿ ಇಬ್ಬರೇ ಇರುತ್ತಾರೆ. ಮಕ್ಕಳೆಲ್ಲ ಪಟ್ಟಣ ಸೇರಿ ತಮ್ಮ ಜೀವನ ರೂಪಿಸಿಕೊಂಡಿರುತ್ತಾರೆ. ಹಳ್ಳಿ ಮನೆಗಳಲ್ಲಿ ಈಗಲೂ ವಿದ್ಯುತ್ ಸಮಸ್ಯೆ, ಮಳೆ ಜಾಸ್ತಿ ಇದ್ದರೆ ಪೇಟೆಗೆ ಹೋಗಿ ಬೇಕಾದ ವಸ್ತುಗಳನ್ನು ತರಲೂ ಸಹ ಸಾಧ್ಯವಾಗದಂತಹ ಪರಿಸ್ಥಿತಿ. ಅವರವರೇ ಆದರೆ ಹೇಗೋ ಇರುವುದರಲ್ಲೇ ಅಡ್ಜಸ್ಟ್ ಮಾಡುತ್ತಾರೆ . ಯಾರಾದರೂ ಮನೆಗೆ ಹೋದರೆ ಅತ್ತ ತಂದೂ ಮಾಡಲಾಗದಂತಹ ಪರಿಸ್ಥಿತಿಗೆ ಮನಸ್ಸು ಹಿಡಿಯಾಗುತ್ತದೆ. ಅತಿಥಿಗಳು ಬರುವ ಸೂಚನೆ ಮೊದಲೇ ಸಿಕ್ಕಿದ್ದರೆ ಅವರಿಗಾಗದಿದ್ದರೂ ಬೇರೆ ಯಾರಿಗಾದರೂ ಹೇಳಿಯಾದರೂ ಅಗತ್ಯದ ವಸ್ತುಗಳನ್ನು ತರಿಸಿಕೊಂಡಿರುತ್ತಾರೆ.
- ಇನ್ನು ಕೆಲವರು ಯಾರಾದರೂ ಬಂದ ತಕ್ಷಣ, ನೀವ್ ಮೊದ್ಲೇ ಹೇಳಿದ್ರೆ ನಿಮ್ಗಿಷ್ಟ ಆಗಿದ್ ಸ್ವೀಟು, ಅಡ್ಗೆನೆ ಮಾಡ್ತಿದ್ದೆ ಅಂತ ಹೇಳ್ತಾರೆ. ಇದೇನು ಅತಿಶಯೋಕ್ತಿ ಅಂತ ಖಂಡಿತ ಅನ್ಸಲ್ಲ . ಅನೇಕರು ಒಳ್ಳೆ ಮನಸ್ಸಿನಿಂದ , ಖುಷಿಯಿಂದ ಅತಿಥಿಗಳಿಗೆ ಅಡುಗೆ ಮಾಡಿ ಬಡಿಸುತ್ತಾರೆ. ಇನ್ನು ಕೆಲವರು ಮಾತಿಗೆ ಹೇಳುವವರೂ ಇದ್ದಾರೆ. ಅದೇನಾದ್ರು ಆಗ್ಲಿ. ಫೋನ್ ಮಾಡ್ಕೊಂಡ್ ಹೋದ್ರೆ ನಿಮ್ಮಿಷ್ಟದ ಅಡುಗೆಯನ್ನ ಸವಿದು ಬರೋ ಭಾಗ್ಯ ನಿಮ್ದಾದ್ರು ಆಗ್ಬೋದು.
ಒಂದು ವೇಳೆ ನೀವು ಫೋನ್ ಮಾಡಿದರೂ ನೀವು ಹೋಗುವುದು ಅವರಿಗೆ ಇಷ್ಟ ಇಲ್ಲ ,ಅದಕ್ಕೆ ಅವರು ನಿಮ್ಮನ್ನು avoid ಮಾಡ್ತಾ ಇದಾರೆ ಎಂದು ನಿಮಗೆ ಬಲವಾಗಿ ಅನ್ನಿಸಿ, ನಿಮ್ಮ ಅನಿಸಿಕೆಯೇ ನಿಜವಾಗಿದ್ದರೆ ಅಂಥವರಿಂದ ದೂರವಿರುವುದೇ ಲೇಸು. ಅವರಿಗಿಷ್ಟವಿಲ್ಲವೆಂದ ಮೇಲೆ ಹೋಗಲೇಬೇಕೆಂಬ ಹಠವೂ ಬೇಡ. ಹೀಗಲ್ಲದೆ ಅವರು ನಾವು ಆ ಸಮಯದಲ್ಲಿ ಹೋಗುವುದನ್ನು ಇಷ್ಟಪಡದೆ ಇದ್ರೆ ( avoid ಮಾಡಿದ್ರೆ) ಅವರ ಬಗ್ಗೆ ಇಲ್ಲಸಲ್ಲದ ಮಾತಾಡುವುದರ ಬದಲು ಏನಾದರೂ ವೈಯಕ್ತಿಕ ಕಾರಣವೂ ಇರುತ್ತದೆ ಎಂದು ಅರಿತರೆ ಒಳ್ಳೆಯದು.
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು
