ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆಂತರಾಳದ ಅಳಲು

ಆತ್ಮೀಯರೇ ನಾನು ಬೀದರ ಸಹಕಾರ ಸಕ್ಕರೆ ಕಾರ್ಖಾನೆ (BSSK). ನಾನು ನೆಲೆಸಿದ್ದು ಶ್ರೀ ಕ್ಷೇತ್ರ ಸೀಮಿನಾಗನಾಥ ಸ್ಥಿತ ಪವಿತ್ರ ಕ್ಷೇತ್ರ ತಾಣ ಹಳ್ಳಿಖೇಡ (ಬಿ) ಗ್ರಾಮದಲ್ಲಿ.  ಇಂತಹ ಪವಿತ್ರ ಕ್ಷೇತ್ರದ ನೆಲದಲ್ಲಿ ನಾನು ಉದಯಿಸಿದ್ದು ೧೯೭೦ರ ದಶಕದಲ್ಲಿ. ಓಂಕಾರ ಪಾಟೀಲ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ನಾನು ಹುಟ್ಟಿದ್ದು ಸರ್ಕಾರದ ದಯೆಯಿಂದ ಅಲ್ಲ, ಈ ಜಿಲ್ಲೆಯ ೨೫ ಸಾವಿರ ರೈತರು ತಮ್ಮ ಹೊಟ್ಟೆಬಟ್ಟೆ ಕಟ್ಟಿ, ಮಕ್ಕಳಿಗೆ ಒಂದು ಹೊತ್ತಿನ ತುತ್ತಿಗೂ ಕೊರತೆಯಾದರೂ ಮನೆ-ಮಾರು ಎನ್ನದೆ, ತಮ್ಮ ಕೊಟ್ಟಿಗೆಯಲ್ಲಿನ ದನ-ಕರು, ಎತ್ತುಗಳನ್ನು ಮಾರಿ ಬಂದ ಹಣದಿಂದ ಷೇರು ಖರೀದಿಸಿ ನನ್ನನ್ನು ಎತ್ತರ ಮಟ್ಟಕ್ಕೆ ಬೆಳೆಸಿದ ಶ್ರೇಯಸ್ಸು ಜಿಲ್ಲೆಯ ಸಮಸ್ತ ರೈತರಿಗೆ ಸಲ್ಲುತ್ತದೆ.

ಆಗ ರೈತನ ಬೆವರಿಗೆ, ಅವನ ಕನಸಿಗೆ ಬೆಲೆ ಸಿಗುವಂತೆ ಮಾಡುವ ಜವಾಬ್ದಾರಿ ನನ್ನ ಮೇಲಿತ್ತು. ಅದನ್ನು ನಾನು ರೈತನ ಮಗನಿಗೆ ನನ್ನ ಕಾರ್ಖಾನೆಯಲ್ಲೇ ಕೆಲಸ ಕೊಡುವ ಮೂಲಕ ಹಾಗೂ ರೈತನ ಕಬ್ಬು ಅರೆಯುವ ಮೂಲಕ ರೈತನ ಆ ಕನಸನ್ನು ನನಸು ಮಾಡಿದೆ. ದಿನಕ್ಕೆ ೨೫೦೦ ಟನ್ ಕಬ್ಬು ಅರೆದೆ. ನನ್ನಿಂದ ನೇರವಾಗಿ ಸಾವಿರ ಕಾರ್ಮಿಕ ಕುಟುಂಬಗಳಿಗೆ, ಪರೋಕ್ಷವಾಗಿ ೨೫ ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ, ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ, ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಅವರ ಬದುಕು ಕಟ್ಟಿಕೊಳ್ಳಲು ಆಸರೆಯಾದೆ. ಅಂದು ಎಲ್ಲರ ಪಾಲಿಗೆ ನನ್ನ ಕಾರ್ಖಾನೆ ಸಕ್ಕರೆ ಸಿಹಿಯಾಗಿತ್ತು. ಎಲ್ಲರೂ ತಿಂದು ತೇಗಿದರು. ಮಕ್ಕಳ ಮದುವೆ, ವಿವಿಧ ಸಭೆ-ಸಮಾರಂಭಗಳಲ್ಲಿ ನನ್ನನ್ನೇ ಬಳಸಿದರು. ಸಕ್ಕರೆ ಮಾರಾಟ ಮಾಡುವ ಉದ್ಯಮಿಗಳು ನನ್ನನ್ನು ಹೊರರಾಜ್ಯ, ಹೊರದೇಶಗಳಿಗೆ ಮಾರಾಟ ಮಾಡಿ ಕೋಟ್ಯಧಿಪತಿಗಳಾದರು. ಕಾರ್ಮಿಕರ ಮಕ್ಕಳು ನಾನು ಕೊಡುವ ಸಂಬಳದಿಂದ ವಿದ್ಯಾವಂತರಾಗಿ ವಿವಿಧ ಕ್ಷೇತ್ರಗಳಲ್ಲಿ ಡಾಕ್ಟರ್, ಇಂಜಿನಿಯರ್‌ಗಳಾಗಿ, ಸರ್ಕಾರಿ ಹುದ್ದೆಯಲ್ಲಿ ಉನ್ನತ ಅಧಿಕಾರಿಗಳಾಗಿ ದೇಶ-ವಿದೇಶದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಆದರೆ ಅಂದು ನನ್ನನ್ನು ದುಡಿಸಿಕೊಂಡು ಎಲ್ಲರ ಬದುಕಿಗೆ ಸಿಹಿ ಹಂಚಿದ ನಾನು, ಇಂದು ಎಲ್ಲರ ಪಾಲಿಗೆ ಕಹಿಯಾಗಿರುವುದು ನನ್ನ ಹಣೆಬರಹವೇ ಸರಿಯಿಲ್ಲ ಅನ್ನಬಹುದು.

ಒಂದು ಕಾಲದಲ್ಲಿ ನನ್ನ ಆವರಣಕ್ಕೆ ಬಂದರೆ ಹಬ್ಬದ ವಾತಾವರಣವಿರುತ್ತಿತ್ತು. ಹಗಲಿರುಳು ಗರಗರನೆ ತಿರುಗುವ ನನ್ನ ಯಂತ್ರಗಳ ಸದ್ದು, ಕಬ್ಬು ಹೊತ್ತು ಸಾಲಾಗಿ ನಿಲ್ಲುತ್ತಿದ್ದ ನೂರಾರು ಟ್ರ್ಯಾಕ್ಟರ್, ಎತ್ತಿನ ಬಂಡಿಗಳು, ರೈತರ ಮುಖದಲ್ಲಿನ ಮಂದಹಾಸ, ಕಾರ್ಮಿಕರ ಉತ್ಸಾಹದ ಮಾತುಗಳು – ಇವೆಲ್ಲವೂ ನನ್ನ ದೈನಂದಿನ ವೈಭವದ ದಿನಗಳಾಗಿದ್ದವು. ನನ್ನ ಒಡಲಲ್ಲಿ ಬೆಳೆದ ಸಕ್ಕರೆಯ ಸಿಹಿ ದೇಶದೆಲ್ಲೆಡೆ ಪಸರಿಸುತ್ತಿತ್ತು.

ಆದರೆ ಇಂದು ನನ್ನ ಆವರಣದಲ್ಲಿ ಸ್ಮಶಾನ ಮೌನ ಆವರಿಸಿದೆ. ನನ್ನ ಯಂತ್ರಗಳು ತುಕ್ಕು ಹಿಡಿಯುತ್ತಿವೆ, ಚಕ್ರಗಳು ನಿಂತುಹೋಗಿವೆ ಮತ್ತು ಚಿಮಣಿಗಳಿಂದ ಹೊಗೆ ಬರುವುದು ನಿಂತು ವರ್ಷಗಳೇ ಕಳೆದಿವೆ. ೨೦೧೬ಕ್ಕೆ ನನ್ನ ಉಸಿರು ನಿಲ್ಲಿಸಲಾಯಿತು. ಕಳೆದ ೯ ವರ್ಷದಿಂದ ನಾನು ಹೆಣವಾಗಿ ಬಿದ್ದಿದ್ದೇನೆ. ನನ್ನ ಶೆಡ್ಡಿನಲ್ಲಿ ಈಗ ಕಬ್ಬಿನ ವಾಸನೆ ಇಲ್ಲ, ಹಾವು-ಚೇಳುಗಳ ವಾಸ. ನನ್ನ ದೇಹದ ಶೇ.೬೦ರಷ್ಟು ಭಾಗ ಈಗಾಗಲೇ ಕೊಳೆತು ಹೋಗಿದೆ. ಇನ್ನೂ ಎರಡು ಮಳೆಗಾಲ ಕಳೆದರೆ ನನ್ನನ್ನು ಯಾವ ಗುಜರಿ ಅಂಗಡಿಯವರು ಹಾಕಿದರೂ ಕೊಳ್ಳುವುದಿಲ್ಲ.

ನನ್ನ ಈ ದುಸ್ಥಿತಿಗಿಂತಲೂ ನನ್ನನ್ನು ಹೆಚ್ಚು ಕಾಡುತ್ತಿರುವುದು “ನನ್ನವರ ನೋವು”. ನನ್ನ ಉಸಿರು ನಿಂತ ದಿನದಿಂದ ನನ್ನನ್ನು ನಂಬಿದ ಸಾವಿರಾರು ರೈತರು ಅನಾಥರಾಗಿದ್ದಾರೆ. ಹಗಲಿರುಳು ಕಷ್ಟಪಟ್ಟು ಬೆಳೆದ ಕಬ್ಬನ್ನು ಎಲ್ಲಿಗೆ ಸಾಗಿಸಬೇಕೆಂದು ತಿಳಿಯದೆ ಜಿಲ್ಲೆಯ ಅನ್ನದಾತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ದೂರದ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ, ಕಾರ್ಖಾನೆಯವರು ಕೊಟ್ಟಷ್ಟು ಬೆಲೆಗೆ, ಕೊಟ್ಟಾಗ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇನ್ನೊಂದೆಡೆ ನನ್ನ ಒಡಲನ್ನೇ ನಂಬಿ, ನಾನು ಕೊಡುವ ಸಂಬಳದಿಂದ ಬದುಕುತ್ತಿದ್ದ ನೂರಾರು ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ನೆನೆದರೆ ನನ್ನ ಅಂತರಾಳ ಕರಗುತ್ತದೆ. ವರ್ಷಗಟ್ಟಲೆಯಿಂದ ಸಂಬಳವಿಲ್ಲದೆ ಹಸಿವು ಮತ್ತು ಬಡತನದ ಬೇಗೆಯಲ್ಲಿ ಬೆಂದ ನೊಂದ ಕುಟುಂಬಗಳ ಆಕ್ರಂದನ ನನ್ನ ಕಿವಿಗಳಿಗೆ ದಿನವೂ ಅಪ್ಪಳಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ, ವೃದ್ಧ ಪೋಷಕರ ಔಷಧಿಗೆ ಪರದಾಡುತ್ತಿರುವ ಕಾರ್ಮಿಕರ ದುಸ್ಥಿತಿಗೆ ನಾನೇ ಕಾರಣವೇ ಎಂಬ ಅಪರಾಧ ಪ್ರಜ್ಞೆ ನನ್ನನ್ನು ದಿನವೂ ಕೊಲ್ಲುತ್ತಿದೆ.

ರೈತರ ಕಲ್ಯಾಣಕ್ಕಾಗಿ ಜನ್ಮತಾಳಿದ ನನ್ನ ಈ ದುಸ್ಥಿತಿಗೆ ಸ್ವಾರ್ಥ ರಾಜಕಾರಣ, ಆಡಳಿತ ಮಂಡಳಿಗಳ ತಪ್ಪು ನಿರ್ವಹಣೆ, ಹಣಕಾಸಿನ ದುರುಪಯೋಗ ಮತ್ತು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಸಹಕಾರ ತತ್ವದಡಿ ಹುಟ್ಟಿದ ನನ್ನನ್ನು ಕೆಲವರ ವೈಯಕ್ತಿಕ ಲಾಭಕ್ಕಾಗಿ ಬಲಿಪಶು ಮಾಡಲಾಯಿತು.

ನನ್ನನ್ನು ಸಹಕಾರಿ ರಂಗದಲ್ಲೇ ಇರುವ ರಾಜಕಾರಣಿಗಳು ಹಂತ ಹಂತವಾಗಿ ಲೂಟಿ ಮಾಡಿದರು. ಆಡಳಿತ ಮಂಡಳಿಯ ಹೆಸರಿನಲ್ಲಿ ಬಂದವರೆಲ್ಲಾ ನನ್ನನ್ನು ತಮ್ಮ ತಿಜೋರಿಯನ್ನಾಗಿ ಮಾಡಿಕೊಂಡರು. ನನ್ನ ಮೇಲೆಯೇ ಸವಾರಿ ಮಾಡಿ ಶಾಸಕರಾಗಿ, ಸಚಿವರಾಗಿ ತಮ್ಮ ರಾಜಕೀಯ ಭವಿಷ್ಯವನ್ನೇ ರೂಪಿಸಿಕೊಂಡರು. ಕೋಟ್ಯಂತರ ರೂಪಾಯಿ ಸಾಲ ಮಾಡಿದರು, ದುಡ್ಡು ನುಂಗಿದರು, ಕೊನೆಗೆ ನನ್ನನ್ನು DCC ಬ್ಯಾಂಕಿನಲ್ಲಿ ಅಡವಿಟ್ಟು ಪರಾರಿಯಾದರು.

ಇಂದು ಬೀದರ್ DCC ಬ್ಯಾಂಕ್ ನನಗೆ ಬೆಲೆ ಕಟ್ಟಿದೆ. ರೈತ ತನ್ನ ಬೆವರು ಹನಿಯಿಂದ ಷೇರು ಖರೀದಿಸಿ ಕಟ್ಟಿದ ನನ್ನ ಕಾರ್ಖಾನೆ ಎಂಬ ಮನೆಯನ್ನು ಇಂದು DCC ಬ್ಯಾಂಕಿನವರು ಹರಾಜು ಹಾಕಲು ತಯಾರಿ ನಡೆಸಿದ್ದಾರೆ. ಇದು ಸರ್ಕಾರಕ್ಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಉಸ್ತುವಾರಿ ಸಚಿವರಿಗೆ ಕಾಣುತ್ತಿಲ್ಲವೇ? ಅಥವಾ ಕಂಡೂ ಕಾಣದಂತೆ ಜಾಣ ಕುರುಡರಂತೆ ನಟಿಸುತ್ತಿದ್ದಾರೆಯೇ? ಅನ್ನುವ ಪ್ರಶ್ನೆ ನೊಂದ ಕಾರ್ಮಿಕ ಹಾಗೂ ರೈತರನ್ನು ಕಾಡುತ್ತಿದೆ.

ನನ್ನ ಸಾವಿರಾರು ಕಾರ್ಮಿಕರು ಕಳೆದ ಒಂಬತ್ತು ವರ್ಷಗಳಿಂದ ಒಂದು ರೂಪಾಯಿ ಸಂಬಳ ಪಡೆದಿಲ್ಲ. ಸುಮಾರು ೧೦೦ ಕೋಟಿ ರೂಪಾಯಿಗಿಂತ ಹೆಚ್ಚು ಅವರ ಬೆವರಿನ ಬೆಲೆ ಬಾಕಿ ಇದೆ. ಸುಮಾರು ೨೦ ಕೋಟಿ ರೂಪಾಯಿಗಿಂತ ಹೆಚ್ಚು EPF ಹಣವನ್ನು ಸಂಬಂಧಪಟ್ಟವರು ನುಂಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಿವೃತ್ತರಾದ ಕಾರ್ಮಿಕರು ಇದುವರೆಗೂ ತಮ್ಮ ಗ್ರಾಚ್ಯುಟಿ ಹಣ, ಪಿಂಚಣಿ ಇಲ್ಲದೆ ಪರದಾಡುತ್ತಿದ್ದಾರೆ.

ಕಳೆದ ಒಂಬತ್ತು ವರ್ಷದ ಅವಧಿಯಲ್ಲಿ ನಿವೃತ್ತರಾದ ಹಾಗೂ ಇನ್ನೂ ನನ್ನ ಸೇವೆಯಲ್ಲಿ ಮುಂದುವರೆದ ಸುಮಾರು ೧೦೦ಕ್ಕಿಂತ ಹೆಚ್ಚು ಕಾರ್ಮಿಕರು ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆಯಿಂದ ಔಷಧಿಗೆ ಹಣವಿಲ್ಲದೆ, ಮಕ್ಕಳ ಫೀಸು ಕಟ್ಟಲಾಗದೆ, ಸಾಲದ ಬಾಧೆ ತಾಳಲಾರದೆ ಹೃದಯಾಘಾತದಿಂದ, ಆತ್ಮಹತ್ಯೆಯಿಂದ ಸತ್ತಿದ್ದಾರೆ. ಅವರ ಸಾವಿಗೆ ಯಾರು ಹೊಣೆ? ಸರ್ಕಾರವೇ ಅಥವಾ ಆಡಳಿತ ಮಂಡಳಿಯವರು ಜವಾಬ್ದಾರರಾಗುತ್ತಾರೆಯೇ?

ಬೀದರ್‌ನಲ್ಲಿ ನನ್ನನ್ನು ಅಂದರೆ BSSK ಸೇರಿದಂತೆ ೩ ಸಹಕಾರಿ ಸಕ್ಕರೆ ಕಾರ್ಖಾನೆಗಳಿವೆ. ರಾಜ್ಯದಲ್ಲಿ ಒಟ್ಟು ೮೨ ಖಾಸಗಿ ಸಕ್ಕರೆ ಕಾರ್ಖಾನೆಗಳಿವೆ, ಅವುಗಳಲ್ಲಿ ಶೇ. ೮೦ರಷ್ಟು ಶಾಸಕರು, ಸಚಿವರು, ಸಂಸದರ ಒಡೆತನದಲ್ಲಿವೆ. ಅವರ ಕಾರ್ಖಾನೆಗಳಿಗೆ ಕಬ್ಬು ಬೇಕು. ಅದಕ್ಕೆ ನನ್ನಂತಹ ಸಹಕಾರಿ ಕಾರ್ಖಾನೆಗಳು ಸಾಯಬೇಕು. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದೆ ಅನಿಸುತ್ತದೆ.

ಇದು ನನ್ನ ರೈತರ, ಕಾರ್ಮಿಕರ ಕಾರ್ಖಾನೆ. ಇದನ್ನು ನನ್ನ ರೈತರಿಗಾಗಿ, ಕಾರ್ಮಿಕರಿಗಾಗಿ ಉಳಿಸಿ. ನನ್ನ ಚಿಮಣಿ ಮತ್ತೆ ಹೊಗೆ ಚೆಲ್ಲಿದರೆ, ಅದು ಕೇವಲ ಹೊಗೆಯಲ್ಲ, ಈ ಜಿಲ್ಲೆಯ ಸಾವಿರಾರು ಕುಟುಂಬಗಳ ಒಲೆಯ ಹೊಗೆ. ನನ್ನ ಯಂತ್ರಗಳು ಮತ್ತೆ ತಿರುಗಿದರೆ, ಅದು ಕೇವಲ ಯಂತ್ರವಲ್ಲ, ನಿಂತು ಹೋದ ನೂರು ಜೀವಗಳ ಹೃದಯ ಬಡಿತ. ನನ್ನನ್ನು ಉಳಿಸಿ, ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ.

  • ಇಂತಿ, ಸಾಯುತ್ತಲೇ ನಿಮ್ಮನ್ನು ಕಾಯುತ್ತಿರುವ, ನಿಮ್ಮ ಬೀದರ ಸಹಕಾರ ಸಕ್ಕರೆ ಕಾರ್ಖಾನೆ (BSSK)

  • ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading