‘ವಿಷಕನ್ಯೆ’ ಕೃತಿ ಪರಿಚಯ

ಯಾರಿವಳು ವಿಷಕನ್ಯೆ? ವಿಷವನ್ನೇ ಉಸಿರಾಗಿಸಿಕೊಂಡವಳೇ… ಕ್ರೂರತೆಯ ಪ್ರತೀಕವೇ.. ರಾಕ್ಷಸಿಯೇ.. ಇದೆಲ್ಲ ಪ್ರಶ್ನೆಗಳ ನಡುವೆ ಸಿಗುವ ಉತ್ತರ ಒಂದೇ. ವಿಷವನ್ನು ದೇಹದಲ್ಲಿ ತುಂಬಿಕೊಂಡ ಮಮತೆಯ ಮಡಿಲಿನ ಕಥೆ.ಇದು ಒಬ್ಬ ರಾಕ್ಷಸಿಯ ಕಥೆಯಲ್ಲ.. ಲೋಕಕ್ಕೆ ಕ್ರೂರಿಯಂತೆ ಕಂಡ ಒಬ್ಬ ಸ್ತ್ರೀಯ ಕಥೆ. ಸುಮಾ ಕಿರಣ್ ಅವರ ‘ವಿಷಕನ್ಯೆ’ ಕೃತಿಯ ಕುರಿತು ಆಶಾ ಮಯ್ಯ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಶೀರ್ಷಿಕೆ : ವಿಷಕನ್ಯೆ
ಪ್ರಕಾಶಕರು : ಕಾವೇರಿ ಸಾಹಿತ್ಯ ವೇದಿಕೆ
ಲೇಖಕರು : ಸುಮಾ ಕಿರಣ್
ಬೆಲೆ : 120₹
ದೂರವಾಣಿ : 8892533914

ವಿಷಂ ವಹಂತೀ ವಪುಷಾ ಪ್ರಸಿದ್ಧಾ,
ಸ್ನೇಹಂ ವಹಂತೀ ಹೃದಯೇ ತು ನಿತ್ಯಮ್।
ಲೋಕಃ ಸ್ಮರತ್ಯೇವ ವಿಷಕನ್ಯಕಾಂ ತಾಂ,
ಮಾತುಃ ಸ್ವರೂಪಂ ನ ತು ಪಶ್ಯತೀಹ॥

ಮೇಲ್ನೋಟಕ್ಕೆ ಕಠಿಣವಾಗಿ ವಿಷದಂತೆ ಕಂಡರೂ, ಆಕೆಯ ಹೃದಯದಲ್ಲಿ ಸದಾ ಪ್ರೀತಿ ಮತ್ತು ವಾತ್ಸಲ್ಯವಿರುತ್ತದೆ. ಆದರೆ ಜಗತ್ತು ಆಕೆಯ ಹೊರರೂಪವನ್ನು ಮಾತ್ರ ಗಮನಿಸಿ ದೂರಬಹುದು, ದೂರುತ್ತದೆ ಕೂಡಾ. ಆದರೆ ಆಕೆಯ ಎದೆಯಾಂತರಾಳದಲ್ಲಿ ಹುದುಗಿರುವ ಮಾತೃತ್ವದ, ಪ್ರೀತಿಯ ಒರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎನ್ನುವ ಆರಂಭದ ಸಂಸ್ಕೃತ ಶ್ಲೋಕದಂತೆ ಸಾಮಾನ್ಯರಂತೆ ಬದುಕಬೇಕಿದ್ದ ಸ್ತ್ರೀಯೊಬ್ಬಳು ವಿಧಿಲೀಲೆಗೆ ಸಿಲುಕಿ ತನ್ನದಲ್ಲದ ಬದುಕಿಗೆ ಶರಣಾಗಿ ಲೋಕಕ್ಕೆ ಕಂಟಕಪ್ರಾಯಳಾಗಿ ಗೋಚರಿಸಿದ್ದು ಮಾತ್ರ ಅವಳ ಹಿಂದಿನ ಜನ್ಮದ ಯಾವುದೋ ಈಡೇರದೆ ಉಳಿದ ಬೇಡಿಕೆಯ ಫಲವಾಗಿತ್ತೋ ಏನೋ.

ಹೌದು… ಇತಿಹಾಸವು ಗೆದ್ದವರ ಕಥೆಗಳನ್ನು, ಕೆಲವೊಂದು ಘಟನೆಗಳನ್ನು ದಾಖಲಿಸಿ ಬಿಡುತ್ತದೆ. ಪುರಾಣಗಳು ದೈವತ್ವವನ್ನು ಸಾರಿ ಹೇಳುತ್ತವೆ. ಇತಿಹಾಸ ಮತ್ತು ಪುರಾಣ ಕೆಲವೊಮ್ಮೆ ಕೆಲವು ಪಾತ್ರಗಳಿಗೆ ಶಾಶ್ವತವಾದ ಒಂದು ಮುಖವನ್ನಷ್ಟೇ ನೀಡಿ ಬಿಡುತ್ತವೆ. ಆ ಮುಖದ ಹಿಂದಿನ ನೋವು, ಅದರ ಹಿಂದಿನ ಹೋರಾಟ, ಮನದಾಳದ ಮಾತುಗಳನ್ನು ಕಾಲನ ಮಡಿಲಲ್ಲಿ ಹುದುಗಿಸಿಬಿಡುತ್ತದೆ. ಅಂತಹ ಮೌನದ ನೆರಳಿನಲ್ಲಿ ನಿಂತಿರುವ ಒಂದು ಪಾತ್ರವೇ ಈ “ವಿಷಕನ್ಯೆ”.

ಯಾರಿವಳು ವಿಷಕನ್ಯೆ? ವಿಷವನ್ನೇ ಉಸಿರಾಗಿಸಿಕೊಂಡವಳೇ… ಕ್ರೂರತೆಯ ಪ್ರತೀಕವೇ.. ರಾಕ್ಷಸಿಯೇ.. ಇದೆಲ್ಲ ಪ್ರಶ್ನೆಗಳ ನಡುವೆ ಸಿಗುವ ಉತ್ತರ ಒಂದೇ.. ವಿಷವನ್ನು ದೇಹದಲ್ಲಿ ತುಂಬಿಕೊಂಡ ಮಮತೆಯ ಮಡಿಲಿನ ಕಥೆ. ಇದು ಒಬ್ಬ ರಾಕ್ಷಸಿಯ ಕಥೆಯಲ್ಲ.. ಲೋಕಕ್ಕೆ ಕ್ರೂರಿಯಂತೆ ಕಂಡ ಒಬ್ಬ ಸ್ತ್ರೀಯ ಕಥೆ.

ಲೋಕವು ಅವಳಲ್ಲಿ ಅಡಗಿದ್ದ ವಿಷವನ್ನು ಮಾತ್ರ ಕಂಡಿತು. ಆದರೆ ಅವಳೊಳಗಿನ ಒಬ್ಬ ತಾಯಿಯನ್ನು, ತಾಯಿಯ ವಾತ್ಸಲ್ಯ, ಮಮತೆಯನ್ನು ಕಾಣಲಿಲ್ಲ. ಹೆಣ್ಣೆಂದರೆ ಅವಳು ಸುಂದರಿಯಾಗಿರಲಿ, ಕುರೂಪಿಯಾಗಿರಲಿ ಎದೆ ಹಾಲು ಉಣಿಸುವ ಸಂದರ್ಭಗಳಲ್ಲಿ ಆಕೆ ಎಲ್ಲರಿಗೂ ತಾಯಿಯೇ ಆಗಿರುತ್ತಾಳೆ. ಆ ಸ್ಥಾನವನ್ನು ಭಗವಂತ ಕರುಣಿಸಿರುವುದು ಕೇವಲ ತಾಯಿಗೆ ಮಾತ್ರ.

ಹೌದು.. ಅವಳು ಬೇರಾರೂ ಅಲ್ಲ.. ಬಾಲಗೋಪಾಲನ ಜೀವಕ್ಕೆ ಕುತ್ತು ತರಲು ಕಂಸ ನೇಮಿಸಿದ ವಿಷಕನ್ಯೆ, ಅವಳೇ ಪೂತನಾ. ವಿಧಿಯ ಲೀಲೆ ಎನ್ನುವ ಜಾಲದಲ್ಲಿ ಸಿಲುಕಿದ್ದ ಓರ್ವ ಸ್ತ್ರೀಯ ವಿಷದ ಆವರಣದೊಳಗೆ ಅಡಗಿದ್ದ ತಾಯ್ತನದ ಅನಾವರಣ. ಇದು ತೀರ್ಪು ಮತ್ತು ಕರುಣೆ, ವಿಧಿ ಮತ್ತು ಮನುಷ್ಯತ್ವ, ವಿಷ ಮತ್ತು ಮಮತೆಗಳ ನಡುವಿನ ಮೌನ ಸಂಭಾಷಣೆ. ಒಂದು ಮಗುವಿನ ಜೀವವನ್ನು ಕಸಿಯಲು ಬಂದಂತಹ ಕ್ರೂರ ರಾಕ್ಷಸಿ ಎನಿಸಿಕೊಂಡ ಹೆಣ್ಣು ಮಗಳ ಹೃದಯದ ಮಾತು. ಇವೆಲ್ಲದರ ಮರುಹುಟ್ಟು ಎಂಬಂತೆ ಮೂಡಿಬಂದಿದೆ….. ಸುಮಾಕಿರಣ್ ಅವರು ಬರೆದಿರುವ ಕಾದಂಬರಿ “ವಿಷಕನ್ಯೆ”.

ಅವಳು… ಎಲ್ಲರಂತೆಯೇ ಬಣ್ಣ ಬಣ್ಣದ ಕನಸುಗಳನ್ನು ಕಂಡವಳು. ಮಗಳಾಗಿ, ಪ್ರೇಯಸಿಯಾಗಿ, ಮಡದಿಯಾಗಿ ಬದುಕಬೇಕೆನ್ನುವ ಹಂಬಲವನ್ನು ಹೊತ್ತು ನಡೆದವಳು. ಎಲ್ಲದಕ್ಕಿಂತ ಹೆಚ್ಚಾಗಿ ಓರ್ವ ತಾಯಿಯಾಗಿ ಮಮತೆಯ ಜೀವಜಲವನ್ನು ಹರಿಸಲು ಬಯಸಿದವಳು. ಆದರೆ.. ವಿಧಿಯ ಕೈಯಲ್ಲಿ ಅವಳು ಸುಂದರ ಹೂವಾಗಿ ಅರಳಿ ಸೆಳೆಯದೆ ವಿಷದ ದುಃಸ್ವಪ್ನವಾಗಿ ಕಾಡುವಂತಾದಳು.. ಜೋಗುಳ ಹಾಡಬೇಕಿದ್ದ ಅವಳ ಆ ಬಾಯಿ ಮರಣದೆಡೆಗೆ ಕೊಂಡೊಯ್ಯುವ ಕಂದಕವಾಗಿ ಪರಿಣಮಿಸಿತು. ಇತರರ ಬಾಳು ಬೆಳಗಬೇಕಾಗಿದ್ದ ಆ ಹೆಣ್ಣು ಸುಡುವ ಬೆಂಕಿಯ ಜ್ವಾಲೆಯಾಗಿ ಬದಲಾಗಿದ್ದು ಮಾತ್ರ ವಿಪರ್ಯಾಸ. ಜಗದ ನಿಯಾಮಕನ ಆಟವನ್ನು ಯಾರು ತಾನೇ ಬಲ್ಲರು. ಒಳಿತಿಗೋ ಕೆಡುಕಿಗೋ ಕೆಲವರ ಬದುಕು ಹೂವಾಗಿ ಅರಳದೇ ಬೆಂಕಿಯಾಗಿ ಜ್ವಲಿಸುವುದು ಇದೆಯಲ್ಲ.. ಅದು ಸೃಷ್ಟಿಯ ಒಡಲಿನಲ್ಲಿ ಅಡಗಿರುವ ಭಯಂಕರ ರಹಸ್ಯ. ಇಲ್ಲಿಯೂ ನೀವೆಲ್ಲರೂ ಪರಿಸ್ಥಿತಿಗೆ, ಅಧಿಕಾರದ ಆದೇಶಕ್ಕೆ, ಸ್ವಾಮಿ ನಿಷ್ಠೆಗೆ ಸಿಲುಕಿ ತನ್ನತನವನ್ನು ಸಂಪೂರ್ಣವಾಗಿ ತ್ಯಜಿಸಿ ಆಜ್ಞಾಪಾಲಕಿಯಾದ ಹೆಣ್ಣಿನ ಜೀವನದ ಪ್ರತಿಯೊಂದು ಮಜಲುಗಳನ್ನು ಕಾಣಬಹುದು.

ವಿಷಕನ್ಯೆ ಹೆಸರನ್ನು ಕೇಳಿದಾಗ ನಮ್ಮ ಮನಸ್ಸಿನ ಮುಂದೆ ಮೂಡುವುದು ಒಂದೇ ಚಿತ್ರ. ವಿಷವನ್ನು ತನ್ನ ಎದೆಯಲ್ಲಿ ಹೊತ್ತುಕೊಂಡ ರಾಕ್ಷಸಿಯ ರೂಪ. ಕ್ರೌರ್ಯ, ದ್ವೇಷ ಮತ್ತು ಪಾಪದ ಪ್ರತೀಕವಾಗಿ ಶತಮಾನಗಳಿಂದ ಆ ಹೆಸರು ನಮ್ಮ ನೆನಪಿನಲ್ಲಿ ಉಳಿದುಕೊಂಡಿದೆ. ಆದರೆ ಆ ಕಥೆಯ ಇನ್ನೊಂದು ಮುಖವನ್ನು ನೋಡುವ ಪ್ರಯತ್ನ ನಾವು ಎಂದಾದರೂ ಮಾಡಿದ್ದೇವೆಯೇ? ವಿಷವನ್ನು ಹೊತ್ತ ಆ ಹೆಣ್ಣು ಒಮ್ಮೆಯಾದರೂ ಪ್ರೀತಿಯನ್ನು ಬಯಸಲಿಲ್ಲವೇ.. ಆ ಕಣ್ಣುಗಳಲ್ಲಿ ಕನಸುಗಳು ಚಿಗುರಿರಲಿಲ್ಲವೇ? ಆ ಹೃದಯದಲ್ಲಿ ತಾಯಿತನದ ಮಮತೆ ಮೊಳಕೆಯೊಡೆಯಿರಲಿಲ್ಲವೇ? ಅಥವಾ ಅವಳು ಹುಟ್ಟಿನಿಂದಲೇ ವಿಷಕನ್ಯೆಯಾಗಿದ್ದಳೇ.. ಇದಕ್ಕೆಲ್ಲ ಉತ್ತರ ನಮ್ಮಲ್ಲಿದೆಯೇ?

ಖಂಡಿತ ಇಲ್ಲ.. ಅಂದರೆ, ಅವಳ ಒಳಗಡೆಯೂ ಎಲ್ಲರಿಗೂ ಇರುವಂತೆಯೇ ಸಹಜ ಆಸೆಗಳನ್ನು ಹೊತ್ತ ಸುಂದರ ಪ್ರಪಂಚ ಒಂದಿತ್ತು. ಅಲ್ಲಿಯೂ ವಯೋಸಹಜವಾದ ಬಯಕೆಗಳ ಬಳ್ಳಿಗಳು ಚಿಗುರಲು ಸಜ್ಜಾಗಿ ಕುಳಿತಿದ್ದವು. ಕನಸುಗಳನ್ನು ಹೊತ್ತ ಪುಟ್ಟ ಮಹಲು ಅವಳೊಂದಿಗಿತ್ತು. ಆದರೆ.. ವಿಧಿಯ ಮುಂದೆ ಎಲ್ಲವೂ ಅಂದುಕೊಂಡಂತೆ ನಡೆಯಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಕಾದಂಬರಿ “ವಿಷಕನ್ಯೆ”.

ಪುಟ ತೆರೆದು ಓದುತ್ತಾ ಹೋದಂತೆಲ್ಲ ಸಾಮಾನ್ಯ ಹುಡುಗಿಯಾಗಿ ಆಟವಾಡಿಕೊಂಡು ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೂತನಾ, ಕಂಸನ ಕಂಗಳಿಗೆ ಬಿದ್ದು, ಮತ್ತಷ್ಟು ಕನಸುಗಳನ್ನು ಹೊತ್ತು ರಾಜನ ಅಪೇಕ್ಷೆಯಂತೆ ಅರಮನೆಯತ್ತ ಸಾಗಿದವಳಿಗೆ ಮುಂದಿನ ಬದುಕಿನ ಚಿತ್ರಣದ ಅರಿವೇ ಇರಲಿಲ್ಲ. ಹಿಂದಿನ ಕಾಲದಿಂದಲೂ ಒಂದು ಮಾತು ರೂಢಿಯಲ್ಲಿದೆ. ಹೆಣ್ಣಿನ ಬದುಕನ್ನು ಯಾವ ರೀತಿ ರೂಪಿಸುತ್ತೇವೆಯೋ ಅವಳು ಅದಕ್ಕೆ ತಕ್ಕಂತೆ ರೂಪುಗೊಳ್ಳುತ್ತಾಳೆ ಎನ್ನುವುದು. ಇದಕ್ಕೆ ಪೂತನಿಯ ಬದುಕು ಹೊರತಾಗಿಲ್ಲ.

ತನ್ನ ಪುಟ್ಟ ಪ್ರಪಂಚದಿಂದ ಅರಮನೆಯತ್ತ ಸಾಗಿದವಳಿಗೆ ಅಲ್ಲಿನ ವೈಭೋಗ ಮೊದ ಮೊದಲು ಖುಷಿ ಕೊಟ್ಟರೂ ನಂತರದ ಬದಲಾವಣೆಯ ಜೀವನ ಅವಳಲ್ಲಿ ಪ್ರಶ್ನೆಗಳನ್ನೇ ಹುಟ್ಟು ಹಾಕಿದ್ದವು. ಮೊದಲಿಗೆ ಎಲ್ಲವೂ ಸುಂದರವಾಗಿಯೇ ಕಂಡರೂ ನಂತರದ ಯಾತನೆಯ ದಿನಗಳು ಮಾತ್ರ ಅವಳಿಗೆ ಬದುಕಿನ ಮೇಲಿದ್ದ ಭರವಸೆಗಳನ್ನು ಅಳಿಸಿಹಾಕಲು ಪ್ರಾರಂಭಿಸಿದ್ದವು. ಅಲ್ಲಿ ಅವಳಿಗೇನೂ ಕೊರತೆಯಿರಲಿಲ್ಲ. ಕಂಸ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದರೂ ಕೂಡ ಒಂದು ರೀತಿಯ ಪಂಜರದ ಪಕ್ಷಿಯಾಗಿದ್ದಳು ಆ ಹೆಣ್ಣು. ಅವಳ ಅರಿವಿಗೆ ಬರುವ ಹೊತ್ತಿಗೆಲ್ಲ ಕಾಲ ತನ್ನ ಆಟವನ್ನು ಆರಂಭಿಸಿ ಬಹಳ ಸಮಯವೇ ಆಗಿತ್ತು. ಈ ಎಲ್ಲ ಸನ್ನಿವೇಶಗಳನ್ನು ಸುಮಾ ಕಿರಣ್ ಅವರು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಇಲ್ಲಿ ಒಂದು ಹೆಣ್ಣಿನ ಜೀವನದ ಪ್ರತಿ ಹಂತಗಳನ್ನು ತನ್ನ ಸರಳ ಸುಂದರ ಪದಗಳನ್ನು ಬಳಸಿ ಕಲ್ಪನೆಯ ಹಕ್ಕಿಗೆ ಬಣ್ಣ ಹಚ್ಚಿ ಎಲ್ಲರ ಮನಸ್ಸಿಗೆ ಹತ್ತಿರವಾಗುವಂತೆ ಬರೆದಿರುವುದನ್ನು ಓದುತ್ತಾ ಹೋದಂತೆ ನಮಗೆ ಗೋಚರವಾಗುತ್ತದೆ.

ಪುರಾಣಗಳಲ್ಲಿ ಕಾಣ ಸಿಗುವ ಪೂತನಿಯ ಪಾತ್ರ ಕೆಲವೇ ಸಾಲುಗಳಲ್ಲಿ ಮುಗಿದುಹೋಗುತ್ತದೆ. ಆದರೆ ಆ ಕೆಲವೇ ಸಾಲುಗಳ ಹಿಂದೆ ಎಷ್ಟೋ ವರ್ಷಗಳ ಬದುಕು, ಕನಸುಗಳು, ಗಾಯಗಳು ಮತ್ತು ಎಷ್ಟೋ ಕಣ್ಣೀರು ಅಡಗಿರಬಹುದು ಎನ್ನುವ ಕಲ್ಪನೆಯೇ ಈ ಕೃತಿಗೆ ಮೂಲ ಪ್ರೇರಣೆ.

ಈ ಕಾದಂಬರಿಯಲ್ಲಿ ನೀವು ಕಾಣುವ ಪೂತನಿ, ಪುರಾಣಗಳಲ್ಲಿ ಓದಿದ ಪೂತನಿಗಿಂತ ಭಿನ್ನಳಾಗಿ ಕಾಣುತ್ತಾಳೆ. ಅಳುವ, ನಗುವ, ಕನಸು ಕಾಣುವ, ಪ್ರೀತಿಸುವ, ರೋಧಿಸುವ ಮತ್ತು ಒಬ್ಬ ತಾಯಿಯಂತೆ ತನ್ನ ಮಗುವಿಗಾಗಿ ಹಂಬಲಿಸುವವಳು. ಏಕೆಂದರೆ ತಾಯಿತನಕ್ಕೆ ರಕ್ತಸಂಬಂಧಗಳ ಅವಶ್ಯಕತೆ ಇಲ್ಲ. ಒಮ್ಮೆ ಮನಸ್ಸು ಮಮತೆಯಿಂದ ತುಂಬಿದರೆ ಸಾಕು, ಅಲ್ಲೊಬ್ಬಳು ತಾಯಿ ಕಾಣಸಿಗುತ್ತಾಳೆ.

ಅವಳ ಬದುಕು ಸಮಾಜಕ್ಕೆ ವಿಷದ ಪಾತ್ರೆಯಂತೆ ಕಂಡಿರಬಹುದು, ಆದರೆ ಅವಳ ಹೃದಯದಲ್ಲಿ ಹರಿದಿದ್ದು ಮಮತೆಯ ಅಮೃತವೇ. ಇಲ್ಲಿ ಮೌನದಲ್ಲಿ ಅಳುತ್ತಿದ್ದ ಒಂದು ಪಾತ್ರದ ಹೃದಯದೊಳಗೆ ಇಳಿದು ನೋಡುವ ಸಾಹಸವನ್ನು ಮಾಡಿದ್ದಾರೆ ಲೇಖಕಿ ಸುಮಾ ಕಿರಣ್ ಅವರು.

ಬಹುಶಃ ಈ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನೀವು ಪೂತನಿಯನ್ನು ಹಿಂದಿನಂತೆ ನೋಡಲಾರಿರಿ. ಅವಳ ಹೆಸರನ್ನು ಕೇಳಿದಾಗ ನಿಮಗೆ ಕೇವಲ ರಾಕ್ಷಸಿ ಅಷ್ಟೇ ನೆನಪಾಗದೆ ಅವಳೊಳಗಿನ ತಾಯಿಯ ಹೃದಯವೂ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಅವಳ ಕಣ್ಣೀರು ನಿಮ್ಮ ಕಣ್ಣನ್ನೂ ತೇವಗೊಳಿಸಬಹುದು.ಅವಳ ಮೌನ ನಿಮ್ಮ ಮನಸ್ಸನ್ನೂ ಕದಡಬಹುದು.

ಲೋಕಪಾಲಕನಾದ ಭಗವಂತನ ಒಂದು ಕರೆಗಾಗಿ ಯುಗಯುಗಗಳಿಂದ ಕಾದಿರುವ “ವಿಷಕನ್ಯೆ” ಎಂದು ಕರೆಯಲ್ಪಟ್ಟ ಆ ಹೆಣ್ಣಿನ ಅಂತರಂಗದಲ್ಲಿ, ಅಮೃತದಂತೆ ಹರಿಯುತ್ತಿದ್ದ ಮಾತೃತ್ವದ ಸ್ಪರ್ಶವನ್ನು ಕಾಣಬಹುದು.

ಯಾಕೆಂದರೆ…

ಲೋಕವು ಅವಳನ್ನು ವಿಷಕನ್ಯೆಯೆಂದು ಕರೆದಿರಬಹುದು ಆದರೆ ದೇವರು ಅವಳನ್ನು ಒಬ್ಬ ತಾಯಿಯಾಗಿ ಅಪ್ಪಿಕೊಂಡಿದ್ದಾನೆ. ಇದು ಅವಳ ಹಿಂದಿನ ಜನ್ಮದ ಬೇಡಿಕೆಯ ಫಲವೆನ್ನುವುದು ತಿಳಿದಾಗ ಪೂತನಿಯ ಮೇಲಿನ ನಮ್ಮ ಅಭಿಪ್ರಾಯಗಳು ಬದಲಾಗುವುದರಲ್ಲಿ ಸಂದೇಹವೇ ಇಲ್ಲ.

ಇಂತಹ ಕಾದಂಬರಿಯನ್ನು ಓದುಗರ ಮುಂದಿಡುತ್ತಿರುವ ಆತ್ಮೀಯ ಗೆಳತಿ ಶ್ರೀಮತಿ ಸುಮಾ ಕಿರಣ್ ಅವರಿಂದ ಮುಂದೆಯೂ ಅತ್ಯುತ್ತಮ ಕೃತಿಗಳು ಮೂಡಿಬಂದು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಾಗಲಿ.. ತಾಯಿ ಶಾರದೆ ಹರಸಿ, ಕೀರ್ತಿ, ಯಶವನ್ನು ದಯಪಾಲಿಸಲಿ ಎಂದು ತುಂಬು ಮನದಿಂದ ಹಾರೈಸುತ್ತೇನೆ.

ಶುಭಹಾರೈಕೆಯೊಂದಿಗೆ,


  •  ಆಶಾ ಮಯ್ಯ – ಕವಯಿತ್ರಿ , ಪುತ್ತೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading