‘ತಿತ್ತಬ್ವಾಸನ ಟೈಟಾನ್ ವಾಚು’ ಕೃತಿ ಪರಿಚಯ

ದಿಲೀಪ್ ಎನ್ಕೆ  ಅವರ ತಿತ್ತಬ್ವಾಸನ ಟೈಟಾನ್ ವಾಚು ಕೃತಿಯಲ್ಲಿ 9 ಕಥೆಗಳಿವೆ.ಮೂಲತಃ ಕೊಳ್ಳೆಗಾಲದವರಾದ ಲೇಖಕರು ಇಲ್ಲಿಯವರೆಗೆ ನಾಲ್ಕು ಪುಸ್ತಕಗಳನ್ನು ಬರೆದಿದ್ದು ” ತಿತ್ತಿಬ್ವಾಸನ ಟೈಟಾನ್ ವಾಚು” ಇವರ ಎರಡನೇ ಕಥಾಸಂಕಲನ. ಈ ಕೃತಿಯ ಕುರಿತು ಆಶ್ರಿತಾ ಕಿರಣ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ತಿತ್ತಬ್ವಾಸನ ಟೈಟಾನ್ ವಾಚು
ಲೇಖಕರು : ದಿಲೀಪ್ ಎನ್ಕೆ 
ಪ್ರಥಮ ಮುದ್ರಣ : 2025
ಪ್ರಕಾಶಕರು : ಈಶ್ವರಿ ಪ್ರಕಾಶನ
ಪುಟಗಳು : 148
ಬೆಲೆ : 178/-

ಇಲ್ಲಿನ ಕಥೆಗಳಲ್ಲಿ ಹಳ್ಳಿ ಭಾಷೆ, ಜನಜೀವನ, ಜಾನಪದ ಸಂಸ್ಕೃತಿ ಬೆರೆತಿರುವುದನ್ನು ಗಮನಿಸಬಹುದು. ಪ್ರಾದೇಶಿಕ ಭಾಷೆಯಲ್ಲಿ ಕಥೆ ಹೇಳುವ ಪ್ರಯತ್ನ ಗಮನಸೆಳೆಯುತ್ತದೆ. ಈ ಭಾಷೆಯನ್ನು ಮೊದಲ ಬಾರಿ ಓದುವವರಾದರೆ ತುಸು ಹೆಚ್ಚು ತಾಳ್ಮೆಯನ್ನು ಕೇಳುತ್ತದೆ.

ಮುಖಪುಟ ಶೀರ್ಷಿಕೆಯ ಕಥೆ “ತಿತ್ತಿಬ್ವಾಸನ ಟೈಟಾನ್ ವಾಚು” ಗದ್ಯ ಹಾಗೂ ಪದ್ಯದ ರೂಪದಲ್ಲಿರುವ ವಿಶೇಷ ಪ್ರಯೋಗ ಎನ್ನಬಹುದು. ಈ ಕಥಾವಸ್ತು ಒಂದು ಸ್ನೇಹದ ಸೆಳೆತದ ಜೊತೆಗೆ ಕುಟುಂಬದ ಶ್ರಮ, ತ್ಯಾಗ, ಸಿಗಲಾರದ ತಾಯಿ ಪ್ರೀತಿ, ಒಂದು ಆರೋಪ, ತಂದೆಯ ಸಾವು ಹೀಗೆ ಅನೇಕ ಚಿಕ್ಕ ಚಿಕ್ಕ ಪ್ರಸಂಗಗಳನ್ನು ಸೇರಿಸಿ ಒಂದು ಕಥೆಯಾಗಿ ಪ್ರಸ್ತುತ ಪಡಿಸಲಾಗಿದೆ. ಆರಂಭದಲ್ಲಿ ಕಥೆಯ ಹಿಡಿತ ತುಸು ಕಷ್ಟ ಎನಿಸಿದರೂ ನಂತರದ ಓದು ಕಣ್ಣಿಗೆ ಕಟ್ಟುವಂತಿದೆ.

ಬಡಕುಟುಂಬದ ಚಿತ್ರಣ, ಬಡತನದ ನಡುವೆಯೂ ಕಷ್ಟಪಟ್ಟು ಮಗನನ್ನು ಓದಿಸುವ ಕನಸು ಕಾಣುವ ತಂದೆ ತಾಯಿಯ ನೋವು, ಪರಿಶ್ರಮ, ತ್ಯಾಗ, ಅವಮಾನವನ್ನು ಅರಿಯದ ಹುಡುಗ ಓದುವುದರ ಕಡೆ ಗಮನ ಕೊಡದೆ ಕಡೆಗೊಂದು ದಿನ ಒಂದು ಘಟನೆ ಅವನ ಕಣ್ತೆರೆಸುತ್ತದೆ. ಈ ಪರಿವರ್ತನೆಯ ಕಥೆಯೇ ” ಸುಟ್ಟಿರದೇ ಮೂರ್ ದ್ವಾಸ”.

“ದೊಡ್ಡ ಸಂಪಿಗೆಯ ತಿರುವು” ಕಥೆಯು ಗಂಡ ಹೆಂಡತಿಯ ಬಾಂಧವ್ಯ, ಗಂಡನ ಅಗಲಿಕೆಯ ನೋವಿನಿಂದಾಗುವ ಖಿನ್ನತೆ, ಅಮಾಯಕನ ಸಾವಿಗೆ ಕಾರಣವಾಗುವ ವ್ಯವಸ್ಥೆಯ ಕಥೆಯನ್ನು ಹೇಳುತ್ತದೆ. ಆಕಸ್ಮಿಕವಾಗಿ ನಡೆಯುವ ಅಪಘಾತದಿಂದ ಪಶ್ಚಾತ್ತಾಪ ಪಡುವ ಕಥಾನಾಯಕ ಕುಟುಂಬ ಸಮೇತ ಅಪಘಾತಕ್ಕೀಡಾದ ವ್ಯಕ್ತಿಯನ್ನು ಭೇಟಿ ಮಾಡಲು ಹೋಗುತ್ತಾನೆ. ಅಲ್ಲಿಯ ಭೇಟಿ ಒಂದು ಸತ್ಯವನ್ನು ತೆರೆದಿಡುತ್ತದೆ. ಆ ಕಥೆಯೇ “ಅಂಬಾಸಿಡರ್ ಕಾರ್”. ಈ ಎರಡು ಕಥೆಗಳು ಮನಕಲುಕುವಂತಿವೆ.

“ವಿಕಾರಿ, ಬೈರೂಪ” ಎನ್ನುವ ಎರಡು ಕಥೆಗಳ ಕಥಾವಸ್ತು ಕೊಂಚ ಯೋಚಿಸುವಂತಿರುವ ವಿಷಯವನ್ನು ಒಳಗೊಂಡಿದ್ದು ಸರಿಯೋ ತಪ್ಪೋ ಎನ್ನುವ ಗೊಂದಲವನ್ನು ಮೂಡಿಸುತ್ತದೆ. “ಕಾಕ್ಟೇಲ್” ಒಂದು ಪತ್ರದ ಸುತ್ತ ಹೆಣೆಯಲಾಗಿರುವ ಕಥೆ. ಈ ಕಥೆ ಬದುಕಿನ ನಿರ್ಧಾರಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದಂತಿದೆ.

ಹಳ್ಳಿ ಸೊಗಡಿನ ಭಾಷೆ, ಹಳ್ಳಿಯ ಪರಿಸರ, ಕಥಾವಸ್ತು, ಕಥೆಯನ್ನು ಪ್ರಸ್ತುತ ಪಡಿಸಿರುವ ರೀತಿ, ಕಥೆಯ ನಿರೂಪಣೆ, ಪಾತ್ರ ಚಿತ್ರಣ, ಕಥೆಯಾಳದಲ್ಲಿನ ವಿಷಯಗಳು ನಮ್ಮ ಸುತ್ತ ಮುತ್ತ ನಡೆದ/ನಡೆಯುವ ಘಟನೆಯಂತೆ ಅನ್ನಿಸುತ್ತದೆ. 9 ಕಥೆಗಳು ವಿಭಿನ್ನ ಅನುಭವ ನೀಡುತ್ತವೆ. ಒಟ್ಟಾರೆಯಾಗಿ ಕಥೆಗಳ ಭಾವನೆಗಳು ಮನಸ್ಸಿಗೆ ಆಪ್ತವೆನಿಸುವಂತಿವೆ.


  • ಆಶ್ರಿತಾ ಕಿರಣ್ – ವಿಮರ್ಶಕರು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×