ಮುದುಡಿದ ಮನಸ್ಸುಗಳಿಗೆ ಸಂಜೀವಿನಿ ‘ಆದಿತ್ಯ ಕುಲಕರ್ಣಿ’

ಆದಿತ್ಯ ಕುಲಕರ್ಣಿಯವರು ನಮ್ಮ ನಾಡಿನ ಪ್ರಖ್ಯಾತ ರಸಾಯನ ಶಾಸ್ತ್ರದ ವಿಜ್ಞಾನಿ. ಜೀವ ರಕ್ಷಕ ಔಷಧಗಳ ಅನ್ವೇಷಕರು. ರೋಗ ನಿರೋಧಕಗಳ ಸಂಶೋಧಕರು. ಆರೋಗ್ಯ ಕ್ಷೇತ್ರದ ಯುವ ಕೈಗಾರಿಕೋದ್ಯಮಿ. ಈ ಬಹುಮುಖ ಪ್ರತಿಭಾನ್ವಿತರು ಹೊನ್ನಾವರ ಮೂಲದವರು ಎಂಬುದು ಹೆಮ್ಮೆಯ ವಿಚಾರ. ಅವರ ಸಾಧನೆಯ ಕುರಿತು ಪತ್ರಕರ್ತರಾದ ರಾಜು ಅಡಕಳ್ಳಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಜೈವಿಕ ತಂತ್ರಜ್ಞಾನದಲ್ಲಿ ಆಳ ಸಂಶೋಧನೆ, ಪ್ರಯೋಗ ನಡೆಸುತ್ತಾ ಹೊಸ ಸಂಚಲನ ಮೂಡಿಸುತ್ತಿರುವ ಅವೆಮ್ಯೂನ್ ತೆರಪೆಟಿಕ್ಸ್, ಒರಾಕ್ಷಿಯನ್ ತೆರಪೆಟಿಕ್ಸ್ ಮತ್ತು ಆಟೇನ್ ಪೋರಸ್ ಲೈಫ್ ಸೈನ್ಸಸ್ ಎಂಬ ಮೂರು ಸಂಸ್ಥೆಗಳನ್ನು ಸ್ಥಾಪಿಸಿ, ಜಾಗತಿಕ ಮಟ್ಟದಲ್ಲಿ ಇವುಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಆದಿತ್ಯ ಅವರ ಸಾಮರ್ಥ್ಯಕ್ಕೆ ನಿದರ್ಶನ.

ಕ್ಯಾನ್ಸರ್ ಎಂಬುದು ಕರುಣೆಯೇ ಇಲ್ಲದ ಜೀವ ವಿರೋಧಿ ರೋಗ. ಮನುಷ್ಯನಿಗೆ ಕ್ಯಾನ್ಸರ್ ಕೊಡುವ ಕಾಟವೆಂದರೆ ಅದು ಭಯಂಕರ ರಂಭಾರೂಢಿ. ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ ಎಂಬಂತೆ, ಈ ಕ್ಯಾನ್ಸರ್ ಮತ್ತಿತರ ಭಯಾನಕ ಕಾಯಿಲೆಗಳಿಗೆ ಆದಿತ್ಯ ಕುಲಕರ್ಣಿಯವರ ಸಂಸ್ಥೆಗಳಿಂದ ವಿವಿಧ ಔಷಧಗಳನ್ನು ತಯಾರಿಸಿ, ಮುದುಡಿದ ಮನಸ್ಸುಗಳಲ್ಲಿಯೂ ಮಂದಾರ ಪುಷ್ಪ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿರುವುದು ವಿಶೇಷ.

ಆದಿತ್ಯ ಅವರ ತಂದೆ ಸುರೇಂದ್ರ ಕುಲಕರ್ಣಿಯವರು ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ರಸಾಯನ ಶಾಸ್ತ್ರ ವಿಜ್ಞಾನಿ. ಬಾಲ್ಯದ ಬಡತನದಲ್ಲಿ ತಮ್ಮ ಕಣ್ಣೀರನ್ನೇ ಪನ್ನೀರಾಗಿಸಿಕೊಂಡು ಓದಿ, ಮುಂದೆ ಹೊಸ ಹೊಸ ಸಂಶೋಧನೆಗಳಲ್ಲೇ ಸಾರ್ಥಕತೆ ಕಂಡುಕೊಂಡವರು. ಆದಿತ್ಯ ಅವರ ತಾಯಿ ಪ್ರತಿಭಾ ಅವರು ಸಸ್ಯ ಶಾಸ್ತ್ರಜ್ಞೆ. ಹೀಗೆ ಸಾರಸ್ವತ ಸಮಾಜದಲ್ಲಿ ಸರಸ್ವತಿಯ ಪುತ್ರರಾಗಿ ಈ ಇಡೀ ಕುಟುಂಬದವರು ಸಾಧನೆಯ ಸರದಾರರಾಗಿರುವುದು ವಿಶೇಷ.

ಆದಿತ್ಯರ ಮೊದಲನೇ ಇನಿಂಗ್ಸಿನ ವಿದ್ಯಾಭ್ಯಾಸ ನಡೆದಿದ್ದು ಮುಂಬೈ ಮತ್ತು ಬೆಂಗಳೂರಿನಲ್ಲಿ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ. ಮುಗಿದ ನಂತರ ಮಾಸ್ಟರ್ ಡಿಗ್ರಿ ಓದಿದ್ದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ. ಕೆಮಿಕಲ್ ಬಯಾಲಜಿ ಇವರ ಸ್ನಾತಕೋತ್ತರ ಅಧ್ಯಯನದ ವಿಷಯವಾಗಿತ್ತು. ಈ ಸಂದರ್ಭದಲ್ಲಿಯೇ ಪ್ರಸಿದ್ಧ ಜೈವಿಕ ವಿಜ್ಞಾನಿ ಕಾಲಿನ್ ಫಿಶವಿಕ್ ಅವರ ಮಾರ್ಗದರ್ಶನದಲ್ಲಿ ಕ್ಷಯ ರೋಗಕ್ಕೆ ಹೊಸ ಔಷಧ ಕಂಡು ಹಿಡಿಯುವಲ್ಲಿಯೂ ಇವರು ತೊಡಗಿಕೊಂಡರು. ನಂತರ ಇವರು ಪಿಎಚ್. ಡಿ. ಮಾಡಿದ್ದು ಅಮೆರಿಕದ ಪ್ರತಿಷ್ಠಿತ ಪರಡು ವಿಶ್ವವಿದ್ಯಾಲಯದಲ್ಲಿ.

ಕೆಲವರು ಕಾಗೆ ಮೇಲೋ ಕೋಗಿಲೆ ಮೇಲೋ ಎಂಬಂತಹ ಕೆಲಸಕ್ಕೆ ಬಾರದ ವಿಷಯಗಳ ಮೇಲೆ ತವುಡು ಕುಟ್ಟುತ್ತಾ ಡಾಕ್ಟರೇಟ್ ಪಡೆದುಕೊಳ್ಳುತ್ತಾರೆ. ಆದರೆ ಆದಿತ್ಯ ಅವರು ಸುಮ್ಮನೆ ಕಾಟಾಚಾರಕ್ಕೆಂದು ಪಿಎಚ್. ಡಿ. ಮಾಡಿಲ್ಲ. ಅತ್ಯಂತ ಸವಾಲಿನ ವಿಷಯವಾದ ಬ್ಲೂರ್ಗಾನಿಕ್ ಬಯಾಲಜಿಯನ್ನು (ಜೈವಿಕ ಸಾವಯವ ಜೀವಶಾಸ್ತ್ರವನ್ನು ) ಆಯ್ಕೆ ಮಾಡಿಕೊಂಡು 2012ರಲ್ಲಿ ಪಿಎಚ್. ಡಿ. ಮುಗಿಸಿದರು. ಕ್ಯಾನ್ಸರ್ ಮತ್ತು ಅದಕ್ಕೆ ವ್ಯಾಕ್ಸಿನ್ ಪರಿಹಾರದ ಕುರಿತು ಇವರ ಅಧ್ಯಯನ ಆಗ ಕೇಂದ್ರೀಕೃತವಾಗಿತ್ತು. ತದನಂತರ ಇವರು ನೌಕರಿ ಹುಡುಕುತ್ತಾ ತ್ರಿಲೋಕ ಸಂಚಾರಿಯಾಗಲಿಲ್ಲ. ಬದಲಿಗೆ ತಾವೇ ಅನೇಕರಿಗೆ ನೌಕರಿ ಹುಟ್ಟುಹಾಕುವ ಸಾಹಸಕ್ಕೆ ಮುಂದಾದರು.

ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಇವರು ವಿದ್ಯಾಭ್ಯಾಸ ಮಾಡುತ್ತಿದ್ದರೂ ಇವರ ತಲೆಯಲ್ಲಿ ಮಾತ್ರ ತಮ್ಮ ತಾಯ್ನಾಡಾದ ಭಾರತದ ಜನರನ್ನು ಕಾಡುವ ದುಬಾರಿ ರೋಗಗಳದ್ದೇ ಚಿಂತೆಯಿತ್ತು. ಭಾರತದಲ್ಲಿ ಕೆಲವು ಕಾಯಿಲೆಗಳಿಗೆ ಔಷಧಗಳು ಸ್ಥಳೀಯವಾಗಿ ಸಿಗುವುದೇ ಕಷ್ಟ. ಇನ್ನು ಬೇರೆ ದೇಶಗಳಿಂದ ಬರುವ ಔಷಧಗಳಂತೂ ತುಂಬಾ ದುಬಾರಿ.

ಹೀಗಾಗಿ ಭಾರತದಲ್ಲಿ ಸ್ಥಳೀಯವಾಗಿಯೇ ಔಷಧಗಳನ್ನು ಉತ್ಪಾದಿಸಿಕೊಳ್ಳುವಂತಾದರೆ ಅದರಿಂದ ಸಮಾಜಕ್ಕೆ ತುಂಬಾ ಉಪಕಾರಿ ಎಂಬ ಹಿನ್ನೆಲೆಯಲ್ಲಿ ಇವರು ತಮಗೆ ವಿದೇಶಗಳಲ್ಲಿ ಕೆಲಸ ಮಾಡುವ ಉತ್ತಮ ಅವಕಾಶವಿದ್ದರೂ, ಅದನ್ನು ಬಿಟ್ಟು ಬೆಂಗಳೂರಿಗೆ ವಾಪಸ್ ಬಂದರು.

ಬೆಂಗಳೂರಿನ ಹೊರ ವಲಯದ ಬೊಮ್ಮನಹಳ್ಳಿಯಲ್ಲಿ ಇವರು ಸುಸಜ್ಜಿತ ಬೃಹತ್ ಪ್ರಯೋಗಾಲಯ ಪ್ರಾರಂಭಿಸಿ, ಸುಮಾರು 50 ಮಂದಿ ಸಂಶೋಧಕರಿಗೆ ಸಂಶೋಧನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಂತ ಇವರು ತಾವು ಕೋಲುಮೇಸ್ತ್ರಿ ಕೆಲಸ ಮಾಡುತ್ತಾ ಕಂಪನಿ ನಡೆಸುತ್ತಿಲ್ಲ. ತಾವು ಕೂಡ ಸ್ವತಃ ಸಂಶೋಧನೆಯಲ್ಲಿ ಸತತವಾಗಿ ತೊಡಗಿಕೊಂಡು ಔಷಧ ಕ್ಷೇತ್ರಕ್ಕೆ ಹೊಸಹೊಸ ಕೊಡುಗೆ ನೀಡುತ್ತಿದ್ದಾರೆ.

ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಲ್ಲಿ ಆದಿತ್ಯ ಅವರ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿ, ಕೆಲವು ಔಷದ ಅಭಿವೃದ್ಧಿ, ಸಂಶೋಧನೆ ನಡೆಸುತ್ತಿರುವ ಕಂಪನಿಗಳಿರುವುದರಿಂದ ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿನ ಸಾಧನೆ ನಡೆಸುವುದು ಇವರಿಗೆ ಸಾಧ್ಯವಾಗುತ್ತಿದೆ.

ಸಾಮಾನ್ಯವಾಗಿ ಹೆಚ್ಚಿನ ರೋಗಗಳಿಗೂ ಅವರ ಜೀನ್ಸಗಳಿಗೂ ಸಂಬಂಧವಿರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಕೈಗೊಂಡಿರುವುದು ಮತ್ತು ಕ್ಷಯರೋಗ ನಿರ್ಮೂಲನೆಯ ಮಾರ್ಗೋಪಾಯಗಳ ಬಗ್ಗೆ ಹಲವಾರು ಪ್ರಯೋಗ ನಡೆಸಿ ಯಶಸ್ವಿಯಾಗಿರುವುದು ಆದಿತ್ಯ ಅವರ ವೃತ್ತಿ ಜೀವನ ಪ್ರಾರಂಭಕ್ಕಿಂತ ಮುಂಚಿನ ದಿನಗಳ ಯಶಸ್ಸಾಗಿದೆ.

ತಮ್ಮ ಆಪ್ತ ಸ್ನೇಹಿತರಾದ ಅರುಣ್ ಪಾಪಯ್ಯ ಮತ್ತು ಶ್ರೀನಿವಾಸನ್ ನಮಲ ಅವರೊಂದಿಗೆ ಸೇರಿ ಜೈವಿಕ ತಂತ್ರಜ್ಞಾನಕ್ಕೆ, ಸಂಶೋಧನೆಗೆ ಮತ್ತು ಔಷಧ ತಯಾರಿಕೆ ಉದ್ದೇಶಕ್ಕೆ ಮೂರು ಪ್ರತ್ಯೇಕ ಸಂಸ್ಥೆಗಳನ್ನು ಪ್ರಾರಂಭಿಸಿ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ರಾಷ್ಟ್ರಗಳೂ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿರುವುದು ಆದಿತ್ಯರ ಕ್ರಿಯಾಶೀಲತೆಗೆ ಸಾಕ್ಷಿ. ಹಂದಿ ಜ್ವರದಂಥ (H1-N1) ಸಮಸ್ಯೆಗಳಿಗೂ ವ್ಯಾಕ್ಸಿನ್ ಕಂಡುಹಿಡಿದ ಹಿರಿಮೆ ಇವರದ್ದು.

ನಿಯಾಮ್ಯಾನ್ ಪಿಕ್ ಟೈಪ್ ಸಿ ಎಂಬುದು ಅಪರೂಪದ ಭಯಾನಕ ರೋಗ. ಸಾಮಾನ್ಯವಾಗಿ ಯುವ ವಯಸ್ಸಿನಲ್ಲೇ ಅಂದರೆ 16 ವರ್ಷ ಆಗುತ್ತಲೇ ಮೆದುಳಿಗೆ ಆಘಾತ ಅಥವಾ ಲಿವರ್ ಹಾನಿಗೊಳಗಾಗಿ ಮರಣ ತಂದೊಡ್ಡುವ ಈ ಕಾಯಿಲೆಗೆ ನಮ್ಮಲ್ಲಿ ಔಷಧವೇ ಇರಲಿಲ್ಲ. ಈ ಬಗ್ಗೆ ದೀರ್ಘ ಸಂಶೋಧನೆ ನಡೆಸಿ ಓಆರ್ ಎಕ್ಸ್ 301 ಎಂಬ ಹೊಸ ಇಂಜೆಕ್ಷನ್ ಕಂಡು ಹಿಡಿದಿದ್ದು ಆದಿತ್ಯ ಅವರ ಟೀಮಿನ ಬೃಹತ್ ಸಾಧನೆ. ರೋಗಿಯ ಸ್ಪೈನಲ್ ಕಾರ್ಡಿಗೆ ನೀಡಲಾಗುವ ಈ ಇಂಜೆಕ್ಷನ್ ರೋಗಿಗೆ ಯಾವುದೇ ಸೈಡ್ ಎಫೆಕ್ಟ್ ಅಪಾಯ ಉಂಟು ಮಾಡದಂತೆ ಅಭಿವೃದ್ಧಿಪಡಿಸಿರುವುದು ವಿಶೇಷ.

ಆದಿತ್ಯ ಕುಲಕರ್ಣಿ ಅವರ ನೇತೃತ್ವದಲ್ಲಿ ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರಿಗೆ ಇಮ್ಯೂನೊ ಥೆರಪಿಯ ಮಾತ್ರೆ ಕಂಡುಹಿಡಿದಿರುವುದು ಅದ್ಭುತ ಸಾಧನೆ. ಏಕೆಂದರೆ ಕ್ಯಾನ್ಸರ್ ಪೀಡಿತರಿಗೆ ಈವರೆಗೆ ಸಾಮಾನ್ಯವಾಗಿ ಕೀಮೋ ಮತ್ತು ರೇಡಿಯೇಷನ್ ಚಿಕಿತ್ಸೆ ನೀಡಲಾಗುತ್ತಿತ್ತು. ಇದು ರೋಗಿಗೆ ತುಂಬಾ ಸೈಡ್ ಎಫೆಕ್ಟ್ ಉಂಟು ಮಾಡುತ್ತಿತ್ತು ಮತ್ತು ದೇಹದ ತೀವ್ರ ಬಳಲಿಕೆಗೆ ಕಾರಣವಾಗುತ್ತಿತ್ತು.

ಇತ್ತೀಚಿಗೆ ಇಮ್ಯುನೊ ಥೆರಪಿ ಇಂಜೆಕ್ಷನ್ ಬಳಕೆಗೆ ಬಂದಿದ್ದು ಉಪಯೋಗವಾಯಿತಾದರೂ, ಆ ಇಂಜೆಕ್ಷನ್ ತುಂಬಾ ದುಬಾರಿಯಾಗಿದ್ದು, ಬಡವರಿಗಂತೂ ಅದು ನಿಲುಕದಂತಾಗಿತ್ತು. ಹೀಗಾಗಿ ಆದಿತ್ಯ ಅವರ ತಂಡವು ಹಗಲಿರುಳು ಕಷ್ಟಪಟ್ಟು ಮಾತ್ರೆಗಳ ರೂಪದಲ್ಲಿ ಇಮ್ಯುನೊ ಥೆರಪಿಯ ಔಷಧ ಕಂಡುಹಿಡಿದಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ವರದಾನವಾಗಿದೆ.

ಇಮ್ಯೂನೊ ಥೆರಪಿಯ ಇಂಜೆಕ್ಷನ್ನಿಗೆ ಹೋಲಿಸಿದರೆ ಈ ಮಾತ್ರೆಗಳ ಬೆಲೆ ತುಂಬಾ ಕಡಿಮೆಯಾಗಿದೆ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ರೋಗಿಗಳಿಗೆ ಇಂಜೆಕ್ಷನ್ ಹಾಕಿಸಿಕೊಳ್ಳುವುದಕ್ಕಿಂತ ಸುಲಭವಾಗಿರುವುದರಿಂದ ಇದು ಹೆಚ್ಚಿನ ಅನುಕೂಲವಾಗಿದೆ. ಕರುಳಿನ, ಮೂಳೆಗಳ, ರಕ್ತದ ಮತ್ತು ಸ್ತನಗಳ ಕ್ಯಾನ್ಸರ್ ನಿಗ್ರಹಕ್ಕೆ ಈ ಹೊಸ ಔಷಧಗಳು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಮೆದುಳು, ಮೂತ್ರಪಿಂಡ, ಚರ್ಮ ಮತ್ತು ಪ್ಯಾಂಕ್ರಿಯಾಟಿಕ್ ಅಂಗಗಳಿಗೆ ಕಾಡುವ ಕ್ಯಾನ್ಸರ್ ರೋಗಕ್ಕೂ ಸುಲಭ ಬೆಲೆಯ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಆದಿತ್ಯ ಅವರ ಸಂಸ್ಥೆಯು ಈಗ ಹೆಚ್ಚಿನ ಗಮನ ಕೇಂದ್ರೀಕರಿಸಿ ಸಂಶೋಧನೆ ನಡೆಸುತ್ತಿದೆ. ಮನುಷ್ಯನ ದೇಹದೊಳಕ್ಕೆ ಸೇರಿ ಅನಾಹುತ ಸೃಷ್ಟಿಸುವ ಕ್ಯಾನ್ಸರ್ ಕಾರಕ ಕೋಶಗಳನ್ನು ಹೊಡೆದೋಡಿಸುವ ಇತರ ತಂತ್ರಗಳನ್ನು ಕೂಡ ಅನ್ವೇಷಿಸುವ ಕಾಯಕದಲ್ಲಿ ಆದಿತ್ಯ ಅವರ ನೇತೃತ್ವದ ವಿಜ್ಞಾನಿಗಳ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.

ರೋಗಿಗೆ ಕ್ಯಾನ್ಸರ್ ಪತ್ತೆಯಾದಾಗ ರೇಡಿಯೋ ಥೆರಪಿ ಮೂಲಕ ಆತನ ಇಡೀ ದೇಹಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ಎಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆಯೋ, ಅಲ್ಲಿಗೇ ಗುರಿ ಇಟ್ಟು ಬಾಣದ ರೂಪದಲ್ಲಿ (ಮಿಸೈಲಿನಂತೆ) ಔಷಧ ಪ್ರವಹಿಸುವಂತೆ ಮಾಡುವ ವಿನೂತನ ಪ್ರಯೋಗದಲ್ಲೂ ಆದಿತ್ಯ ಅವರ ಸಂಸ್ಥೆಯು ಅದ್ವಿತೀಯ ಸಾಧನೆ ಮಾಡುತ್ತಿದೆ.

ಮೂತ್ರಪಿಂಡ ಕ್ಯಾನ್ಸರಿಗೆ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಸೂಕ್ತ ಔಷಧಿಗಳೇ ಕೊರತೆಯಾಗಿರುವುದರಿಂದ ಅವುಗಳ ಸಂಶೋಧನೆಗೂ ಆದಿತ್ಯ ಅವರು ಆದ್ಯತೆ ನೀಡಿರುವುದು ಅವರ ಸಾಮಾಜಿಕ ಕಳಕಳಿಗೆ ಮತ್ತೊಂದು ನಿದರ್ಶನ. ಆದಿತ್ಯರ ಪಾಲಿಗೆ ಹೆಂಡತಿ ಬಾಳ ಸಂಗಾತಿಯಾದರೆ ಸಂಶೋಧನೆ ಆತ್ಮ ಸಂಗಾತಿ. ಸಂಶೋಧನೆಗೂ ಆದಿತ್ಯ ಅವರಿಗೂ ಅಷ್ಟೊಂದು ಬೆಸೆದ ನಂಟು.

ಜೈವಿಕ ತಂತ್ರಜ್ಞಾನದ ಸಂಶೋಧನೆಗೆ ಹಿಂದೆಂದೂ ಇಲ್ಲದಂಥ ಉತ್ತೇಜನವನ್ನು ಮೋದಿಯವರ ಸರ್ಕಾರ ನೀಡುತ್ತಿರುವುದರಿಂದ ಅದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕೆಂಬುದು ತಮ್ಮ ಧ್ಯೇಯ ಎನ್ನುತ್ತಾರೆ ಇವರು.

ಆದಿತ್ಯ ಅವರಿಗೆ ಈಗ ಕೇವಲ 41 ವರ್ಷ. ಇವರ ಸಾಧನೆ ಈಗಲೇ ಇಷ್ಟೊಂದು ಅಪಾರ. ಈಗಾಗಲೇ 20ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಸಹ ಲೇಖಕರಾಗಿ ಇವರು ಹೆಸರು ಗಳಿಸಿದ್ದಾರೆ. ಪತ್ನಿ ಶೃತಿ ಮತ್ತು ಇಬ್ಬರು ಪುತ್ರಿಯರ ಜೊತೆಗಿನ ಸುಂದರ ಸಂಸಾರ ಇವರದ್ದು.

ಕ್ಯಾನ್ಸರ್ ಎಂಬುದು ಮನುಷ್ಯನ ಜೀವ ಚೈತನ್ಯಕ್ಕೆ ಕೊಡಲಿ ಪೆಟ್ಟು ಕೊಡುವ ಭಯಾನಕ ರೋಗ. ಇದರ ಯಾತನೆಯಿಂದ ಪಾರು ಮಾಡುವಂತಹ, ಈ ಕಾಯಿಲೆಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ಉಪಶಮನ ನೀಡುವ ಔಷಧಗಳನ್ನು ಕಂಡುಹಿಡಿದು, ಬಳಲುತ್ತಿರುವ ಅನೇಕರ ಪಾಲಿಗೆ ಆಪದ್ಭಾಂಧವನಂತೆ ಈ ಆದಿತ್ಯ ಕುಲಕರ್ಣಿಯವರು ಒದಗಿ ಬಂದಿದ್ದಾರೆ. ಹೀಗಾಗಿ ಇವರು ಆದಿತ್ಯ ಕುಲಕರ್ಣಿಯಾಗಿಯಷ್ಟೇ ಅಲ್ಲ, ಆರೋಗ್ಯ ಕುಲಕರ್ಣಿಯಾಗಿಯೂ ಸಮಾಜಕ್ಕೆ ಉಪಕೃತರಾಗಿದ್ದಾರೆ.

ಆದಿತ್ಯ ಅವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅಮೆರಿಕದ ಪರಡು ವಿಶ್ವವಿದ್ಯಾಲಯದ ಪ್ರತಿಷ್ಠಿತ ಬ್ರೌನ್ ಪ್ರಶಸ್ತಿಗೆ ಗೌರವ ಪಾತ್ರರಾಗಿದ್ದರು. ಕ್ಯಾಮ್ರಿಜ್ ವಿಶ್ವವಿದ್ಯಾಲಯದಲ್ಲಿ ಭಾರತ ಸರ್ಕಾರದ ಫೆಲೋ ಆಗಿ ಆಯ್ಕೆಯಾಗಿದ್ದರು. ಲೀಡ್ಸ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಬಯಾಲಜಿ ಸ್ಕಾಲರ್ಶಿಪ್ ಪಡೆದ ಪ್ರತಿಭಾವಂತರಲ್ಲಿ ಇವರು ಸೇರಿದ್ದಾರೆ.

ಇವರ ಸಂಸ್ಥೆಯ ಸಂಶೋಧನಾ ಸಾಮರ್ಥ್ಯಕ್ಕೆ ತಲೆದೂಗಿ ಕೆಲವು ವಿದೇಶಿ ಔಷಧ ಉತ್ಪಾದನಾ ಸಂಸ್ಥೆಗಳು ಮಿಲಿಯನ್ ಮಿಲಿಯನ್ ಡಾಲರುಗಳಷ್ಟು ಹಣವನ್ನು ಹಾಕಿದ್ದು, ಕ್ಯಾನ್ಸರ್ ಔಷಧ ಸಂಶೋಧನೆಗೆ ಇವರು ಅದನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆ. ಅತ್ಯಾಧುನಿಕ ಗುಣಮಟ್ಟದ ಇನಕ್ಯುಬೇಟರ್ ಸ್ಥಾಪಿಸಿರುವ ಹೆಗ್ಗಳಿಕೆಯೂ ಇವರದ್ದು.

ಮಾತು ಬೆಳ್ಳಿ. ಮೌನ ಬಂಗಾರ ಎನ್ನುತ್ತಾರೆ, ಆದರೆ ಆದಿತ್ಯ ಅವರನ್ನು ನೋಡಿದರೆ ಮೌನ ಬಂಗಾರ. ಜೊತೆಗೆ ಇವರ ಕೆಲಸ ವಜ್ರ ಎಂಬ ಭಾವನೆ ಬರುತ್ತದೆ. ಕಾರಣ ಮನುಕುಲದ ಆರೋಗ್ಯಕ್ಕೆ ಚೈತನ್ಯ ನೀಡುವ ಸಂಶೋಧನೆಯೆಂದರೆ ಇವರಿಗೆ ಹೊನ್ನಾವರ ಸಮುದ್ರದ ಬಂಗುಡೆ ಮೀನಿಗಿಂತ ಹೆಚ್ಚು ಇಷ್ಟ.

ಹೋಳಿಗೆಯ ರುಚಿ ನೋಡಲು ಇಡೀ ಹೋಳಿಗೆಯನ್ನು ತಿನ್ನಬೇಕೆಂದೇನಿಲ್ಲ. ಅದರಲ್ಲಿಯ ಹಿಡಿ ಹೂರ್ಣವನ್ನಷ್ಟೇ ತಿಂದರೂ ಸಾಕು. ಅಂತೆಯೇ ಆದಿತ್ಯ ಅವರ ಸದ್ಗುಣ ಸಂಪನ್ನ ಸಾಧನೆಗಳ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಲು ಅವರೊಂದಿಗೆ ದೀರ್ಘಕಾಲದ ಒಡನಾಟ ಬೇಕೆಂದೇನಿಲ್ಲ. ಅವರ ಬಯೋಡಾಟವನ್ನು ಒಮ್ಮೆ ಕಣ್ಣಾಡಿಸಿದರೂ ಸಾಕು. ಇವರು ಮಿತ ಭಾಷಿ, ಆದರೆ ಅಮಿತ ಸಾಹಸಿ.

ಕೊನೆಗೊಂದು ಜೋಕ್ : ಸರ್ವ ರೋಗಕ್ಕೂ ಸಾರಾಯಿ ಮದ್ದು ಎಂದು ಹೇಳುವವರಿದ್ದಾರೆ. ಇನ್ನೂ ಕೆಲವರು ಸಾರಾಯಿಯೇ ಮುದ್ದು ಎಂದು ಭಾವಿಸುತ್ತಾರೆ. ಆದಿತ್ಯ ಅವರು ಹಾಗಲ್ಲ. ರೋಗ ರುಜನೆಗಳಿಗೆ ತಮ್ಮ ಸಂಶೋಧನೆಗಳಿಂದ ಅಮೃತದಂಥ ಜೀವ ರಕ್ಷಕ ಔಷಧಿಗಳನ್ನು ಕಂಡುಹಿಡಿಯುವಂಥವರು. ಮನುಷ್ಯರ ಆಯುಷ್ಯವನ್ನೂ ಹೆಚ್ಚಿಸಿ, ಆ ಯಮನ ಲೆಕ್ಕಾಚಾರವನ್ನೇ ಬದಲಾಯಿಸುವವರು. ಹೀಗಾಗಿ ಆ ಯಮನಿಗೂ ಇವರಿಗೂ ಸಂಬಂಧ ಅಷ್ಟಕ್ಕಷ್ಟೇ.


  • ರಾಜು ಅಡಕಳ್ಳಿ – ಪತ್ರಕರ್ತರು, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading