ಅಂಕೋಲಾದ ಸಿಹಿಕಬ್ಬು ಈ ಹಬ್ಬು

ಪ್ರೊ.ಮೋಹನ ಹಬ್ಬು ಅವರು ಗಾಂಧಿ ಜಯಂತಿಯ ದಿನವೇ ಹುಟ್ಟಿದ್ದರಿಂದ ಇವರಿಗೆ ಮೋಹನದಾಸ ಎಂದು ಹೆಸರಿಡಲಾಗಿತ್ತಂತೆ. ಆದರೆ ಇವರೀಗ ಕಥೆ ಕವನ ಹಾಗೂ ಸಾಹಿತ್ಯದ ವ್ಯಾಸ. ಅವರ ಸಾಧನೆಯ ಕುರಿತು ಪತ್ರಕರ್ತರಾದ ರಾಜು ಅಡಕಳ್ಳಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನೀಗ ಯಾವೊಬ್ಬ ಶೂನ್ಯ ಸಿಂಹಾಸನಾಧೀಶ್ವರನ ಬಗ್ಗೆ ಬರೆಯುತ್ತಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಭೌತಶಾಸ್ತ್ರಿ ಮತ್ತು ಸಾಹಿತ್ಯ ಮಹಾ ಮಹಿಮರೊಬ್ಬರ ಬಗ್ಗೆ. ಅವರೇ ಅಂಕೋಲಾ ವಾಸಿ ಪ್ರೊ.ಮೋಹನ ಹಬ್ಬು.

ಬಾಲ್ಯದಲ್ಲಿ ಈ ಹಬ್ಬು ಅವರು ಮಲೆನಾಡಿನಲ್ಲೆಲ್ಲ ಹಬ್ಬಿ ಪ್ರಸ್ತುತ ಕರಾವಳಿಯೇ ಸಾರಾವಳಿ ಎಂದುಕೊಳ್ಳುತ್ತ ಅಂಕೋಲಾವನ್ನೇ ತಮ್ಮ ಕರ್ಮಭೂಮಿ ಮತ್ತು ವಾಸಭೂಮಿಯನ್ನಾಗಿ ಮಾಡಿಕೊಂಡಿರುವವರು. ಇವರ ತಂದೆ ಸಗುಣ ಶಂಕರ ಹಬ್ಬು ಶಾನುಭೋಗರಾಗಿದ್ದರಿಂದ ಇವರು ಆವರ್ಸಾ, ಮಂಚಿಕೇರಿ, ಧಾರವಾಡ ಅಲ್ಲಿಲ್ಲಿ ಎನ್ನುತ್ತಾ ಶಾಲೆ ಕಾಲೇಜುಗಳಿಗೆ ಓಡಾಡಿದ್ದೇ ಓಡಾಡಿದ್ದು. ಮಂಚಿಕೇರಿಯಲ್ಲಿದ್ದಾಗಂತೂ ಅಲ್ಲಿಯ ‘ಚಿಕ್ಕಮ್ಮನ ಖಾನಾವಳಿ’ಯ ಮಾಳಿಗೆ ಮೇಲೆಯೇ ಇವರ ಶಾಲೆಯಾಗಿತ್ತು.

ಈಗ ಮೋಹನರಿಗೆ 83 ವರ್ಷ. ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಮತ್ತು ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಒಟ್ಟು ಸೇರಿ ಐವತ್ತು ವರ್ಷ ಇವರು ಭೌತಶಾಸ್ತ್ರ ಪಾಠ ಮಾಡಿದ ಮೇಷ್ಟ್ರು, ಅಷ್ಟೇ ಅಲ್ಲ ನಾಲ್ಕಾರು ವರ್ಷ ಪ್ರಾಚಾರ್ಯರೂ ಆಗಿದ್ದರು. ನಿವೃತ್ತಿ ನಂತರ ಅಂಕೋಲೆಯಲ್ಲಿ ಕೋಲೆ ಬಸವನಂತೆ ಸುಮ್ಮನೆ ಓಡಾಡಿಕೊಂಡಿರದೇ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದು, ತಾವು ವಿಜ್ಞಾನಕ್ಕೊಂದೇ ಸಲ್ಲುವವರಲ್ಲ, ಸಾಹಿತ್ಯವನ್ನೂ ಬಲ್ಲವರು ಎಂದು ತೋರಿಸಿಕೊಟ್ಟವರು.

ಇವರು ಗಾಂಧಿ ಜಯಂತಿಯ ದಿನವೇ ಹುಟ್ಟಿದ್ದರಿಂದ ಇವರಿಗೆ ಮೋಹನದಾಸ ಎಂದು ಹೆಸರಿಡಲಾಗಿತ್ತಂತೆ. ಆದರೆ ಇವರೀಗ ಆಗಿದ್ದು ಕಥೆ ಕವನಗಳ ದಾಸ. ಸಾಹಿತ್ಯದ ವ್ಯಾಸ.

ಯಾವ ಮೋಹನ ಮುರಳಿ ಕರೆಯಿತೋ… ಅಂಕೋಲಾ ತೀರಕೆ.. ಎಂದು ಈ ಮೋಹನರಿಗೆ ಕೇಳಬೇಕೆಂದೇನಿಲ್ಲ. ಕಾರಣ ಅವರು ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಉಪನ್ಯಾಸಕರಾಗಿ ಸೇರಿದ್ದು ಅಂಕೋಲಾ ಕಾಲೇಜಿನಲ್ಲಿ.

ಹಬ್ಬು ಅವರ ಸಾಹಿತ್ಯ, ಸಂಗೀತ, ರಂಗಭೂಮಿ, ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳೆಲ್ಲ ಉಬ್ಬು, ತಗ್ಗಿಲ್ಲದೇ, ಹಿಗ್ಗಿನಿಂದ ನಡೆದಿದ್ದು ಇದೇ ಅಂಕೋಲೆಯಲ್ಲಿ. ಹೀಗಾಗಿ ಇಲ್ಲಿಯ ಸಮುದ್ರದ ಬ್ಯಾಲೆಯಲ್ಲಿರುವ ಮರಳಿನ ಕಣಕಣಕ್ಕೂ ಹಬ್ಬು ಚಿರಪರಿಚಿತ. ಕಾಲೇಜಿನಲ್ಲಿ ಉತ್ತಮ ಮೇಷ್ಟ್ರಾಗಿದ್ದರಿಂದ ವಿದ್ಯಾರ್ಥಿಗಳಿಗೂ ಹಬ್ಬು ಎಂದರೆ ಹಬ್ಬ. ಕರಾವಳಿ ಅಂಚಲ್ಲಿದ್ದ ಅಂಕೋಲೆಗೆ ಸಾಂಸ್ಕೃತಿಕ ಹಿರಿಮೆ, ಗರಿಮೆ, ಮಹಿಮೆ ಕಡಿಮೆಯಾಗದಂತೆ ನೋಡಿಕೊಂಡ ಆಚಾರ್ಯರಾಗಿ ಈ ನಿವೃತ್ತ ಪ್ರಾಚಾರ್ಯ ಹಬ್ಬು ಅವರ ಕೊಡುಗೆಯಿದೆ. ಒಂಥರಾ ಈ ಹಬ್ಬು ಸಜ್ಜನಿಕೆಯ ಸಿಹಿ ಕಬ್ಬು.

ಮೋಹನ ಹಬ್ಬು ಅವರು 18 ವರ್ಷದಲ್ಲಿದ್ದಾಗಲೇ ಇವರ ತಂದೆ ನಿಧನರಾಗಿದ್ದರಿಂದ ಇವರಿಗೆದುರಾದ ಕಷ್ಟಗಳು, ಬಂದ ಜವಾಬ್ದಾರಿಗಳು ಒಂದಲ್ಲ ಎರಡಲ್ಲ. ಕಾರಣ ಇವರದ್ದು ಸಪ್ತರ್ಷಿ ಮಂಡಲದ ಕುಟುಂಬ, ಅಂದರೆ ಇವರು ಆರು ಮಂದಿ ಸಹೋದರರು ಮತ್ತು ಒಬ್ಬ ಸಹೋದರಿ. ಇವರೇ ಹಿರಿ ಅಣ್ಣನಾಗಿದ್ದರಿಂದ ಕಿರಿಯರ ಕೈ ಬಿಡುವಂತೆಯೂ ಇಲ್ಲ. ಬಡತನವಂತೂ ಫೆವಿಕಾಲಿನಂತೆ ಅಂಟಿಕೊಂಡೇ ಇತ್ತು. ಹೀಗಾಗಿ ಎಷ್ಟೋ ದಿನ ಇವರಿಗೆ ಊಟಕ್ಕಿಂತ ಉಪವಾಸವೇ ಹೆಚ್ಚಿನ ರುಚಿಯಾಯಿತು. ಶಾಲೆಗೆ ಹೋಗುವಾಗ ಟೂಥ್ ಪೇಸ್ಟಿಗೂ ಹಣವಿಲ್ಲದೇ ಉಮಿಕರಿ, ಇದ್ದಿಲುಗಳನ್ನೇ ಪೇಸ್ಟನ್ನಾಗಿ ಮಾಡಿಕೊಂಡು, ಬೇವಿನ ಕಡ್ಡಿಯನ್ನೇ ಬ್ರಷ್ ಆಗಿ ಉಪಯೋಗಿಸಿಕೊಂಡು ಕಲಿತ ಕಟು ಅನುಭವದ ವಟು ಇವರಾಗಿದ್ದರು.

ಬಡತನಕ್ಕೂ ನೆಂಟರಿಷ್ಟರಿಗೂ ಅಷ್ಟಕ್ಕಷ್ಟೇ ಎಂಬ ಮಾತಿದೆ. ಆದರೆ ಸುಧಾಮನಿಗೆ ಶ್ರೀಕೃಷ್ಣನಂಥ ದೋಸ್ತ ಸಿಕ್ಕಂತೆ, ಈ ಹಬ್ಬು ಅವರಿಗೆ ಗೊರ್ಸಗದ್ದೆಯ ವಿ.ವಿ. ಹೆಗಡೆಯವರು ಸಿಕ್ಕಿದ್ದರಿಂದ ಬಳುಕುವ ಬಳ್ಳಿಗೆ ಗಟ್ಟಿ ಗೂಟ ಸಿಕ್ಕಂಥ ಆಧಾರವಾಯಿತು. ಮುಂದೆ ಈ ಹಬ್ಬು ಎಂಬ ಬಳ್ಳಿ ತನ್ನ ಸ್ವಂತ ಪರಿಶ್ರಮದಿಂದ ಹಬ್ಬಿ, ಧಾರವಾಡದಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಉತ್ತಮ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮುಗಿಸುವಂತಾಯ್ತು.

ಇದರಿಂದಾಗಿ ಅಂಕೋಲೆಯ ಕಾಲೇಜಿನಲ್ಲಿ ಇವರಿಗೆ ಉಪನ್ಯಾಸಕರಾಗಿ ಉದ್ಯೋಗವೂ ದೊರೆತಿದ್ದರಿಂದ ಮೊಗ್ಗಿನಲ್ಲಿಯೇ ಮುದುಡಿದ್ದ ಇವರ ಬದುಕು ಕ್ರಮೇಣ ಅರಳಲಾರಂಭಿಸಿತು. ಮುಂದೆ ಸುಮಾರು ಐದು ದಶಕ ನಿರಂತರವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರಿಂದ ಇವರ ಅನುಭವ ಮತ್ತಷ್ಟು ಮಾಗಿ, ಅಂಕೋಲೆಯ ಈಶಾಡಿ ಮಾವಿನ ಹಣ್ಣಿನಂತೆ ರಸಪೂರಿತವಾಯಿತು.

ಅನೇಕರು ಭೌತಶಾಸ್ತ್ರವೆಂದರೆ ಭೂತಶಾಸ್ತ್ರವೆಂಬಂತೆ ಭಯ ಪಡುತ್ತಾರೆ. ಆದರೆ ಮೋಹನ ಹಬ್ಬು ಅವರು ಬದುಕಿನ ಭೌತಿಕ ಪ್ರಕ್ರಿಯೆಯಲ್ಲಿಯೂ ಭೌತಶಾಸ್ತ್ರದ ಗುಣ ದ್ರವ್ಯಗಳ ಸಾಂದ್ರತೆ ಕಾಣುತ್ತಾ, ಅದರಲ್ಲಿಯೇ ತಲ್ಲೀನರಾಗಿ ಪಾಠ ಮಾಡಿದ್ದರಿಂದ ಜನಪ್ರಿಯ ಮೇಷ್ಟ್ರಾದರು. ಭೌತ ಶಾಸ್ತ್ರದಲ್ಲಿ ದೇವರನ್ನು ಕಾಣಲು ಸಾಧ್ಯವಿಲ್ಲದಿರಬಹುದು, ಆದರೆ ಭೌತಶಾಸ್ತ್ರವೇ ದೇವರು ಎಂಬಂತೆ ಅದನ್ನು ತಮ್ಮ ವೃತ್ತಿಗೆ ಆವಾಹಿಸಿಕೊಂಡು ಇವರು ಪುರೋಹಿತರಾದರು.

ಮೀಸೆ, ಗಡ್ಡವಿಲ್ಲದ ಇವರ ಕ್ಲೀನಾದ ಮುಖವೇ ವಿದ್ಯಾರ್ಥಿಗಳಿಗೆ ಶಿಸ್ತಿನ ಮೊದಲ ಪಾಠ ಕಲಿಸುವ ಅಸ್ತ್ರವಾಗಿತ್ತು. ಕಾಲೇಜಿನಲ್ಲಿ ಪುಂಡು ವಿದ್ಯಾರ್ಥಿಗಳ ತುಂಡುಗುಪ್ಪಳ, ಉಪಟಳ ಹೆಚ್ಚಾದರೆ ಇವರು ತಮ್ಮ ಬಾಯಿಯನ್ನೇ ಬೆತ್ತದಂತೆ ಮಾಡಿಕೊಂಡು ಅವರನ್ನು ಸರಿಯಾಗಿ ಬಗ್ಗಿಸುತ್ತಿದ್ದರು. ಹೀಗಾಗಿ ಆಗ ಅಡ್ನಾಡಿ ಲಕ್ಷಣ ಹೊಂದಿದ್ದ ವಿದ್ಯಾರ್ಥಿಗಳೂ ಸರಿ ದಾರಿಗೆ ಬಂದು ಈಗ ಸಾಧನೆಯ ಬಾನಾಡಿಯಾಗಿರುವುದು ಹಬ್ಬು ಅವರ ಶ್ರಮಕ್ಕೆ ಸಾರ್ಥಕತೆ ತಂದಿದೆ.

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣುವಂತಾದರೆ ಆ ಮೇಷ್ಟ್ರು ಗೆದ್ದಂತೆಯೇ ! ಇಂಥ ಗೆಲುವಿನ ಸರದಾರರಾಗಿ ಹಬ್ಬು ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ, ಮುಂದೆ ಒಂದು ದಶಕದ ಕಾಲ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದಲ್ಲೇ ತಲ್ಲೀನರಾದರು. ಆದರೆ ಒಮ್ಮೆ ಓದು ಬರಹಗಳಲ್ಲಿ ತೊಡಗಿ ಸರಸ್ವತಿಯ ಪುತ್ರರಾದರೆ ಅದನ್ನು ಬಿಡುವುದುಂಟೇ?

ಹೀಗಾಗಿ ಉಪನ್ಯಾಸಕರಾಗಿ ನಿವೃತ್ತರಾದ ನಂತರ ಹಬ್ಬು ಅವರು ಸೃಜನಶೀಲ ಬರವಣಿಗೆಯ ವಿಲಾಸದ ಬೆನ್ನೇರಿ, ಸಾಹಿತ್ಯದ ಸಮಸ್ತ ಆಯಾಮ, ಆರಾಮ ಹುಡುಕುತ್ತಾ ಹೊರಟು ಈಗ ಬಹುದೂರ ಸಾಗಿ ಬಂದಿದ್ದಾರೆ. ಈ ಸಾಹಿತ್ಯ ಸಾಧನೆಯ ಹಾದಿಯಲ್ಲಿ ಹಬ್ಬು ಅವರು 38ನೆಯ ಮೈಲುಕಲ್ಲನ್ನು (ಕೃತಿಗಳನ್ನು) ಕೂಡ ಈಗಾಗಲೇ ದಾಟಿ, ಕನ್ನಡ ಸಾದರ ಲೋಕದಲ್ಲಿ ಸದರಾಗದೇ ದಿಟ್ಟ ಹೆಜ್ಜೆ ಪಡಿಮೂಡಿಸಿದ್ದಾರೆ. ಹೀಗಾಗಿ ಇವರ ಜೋಳಿಗೆ ತುಂಬಾ ಹೋಳಿಗೆ ರುಚಿಯಂಥ ವೈವಿಧ್ಯಮಯ ಸಾಹಿತ್ಯ ಕೃತಿಗಳೇ ಸದಾ ತುಂಬಿಕೊಂಡಿರುವಂತಾಗಿದೆ.

ಇವರ ಮನೆಯಲ್ಲಿ ಸಮಾರಾಧನೆಯ ಊಟ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಿರಂತರವಾಗಿ ಸಾಹಿತ್ಯ ಸಮಾರಾಧನೆಯ ಭರ್ಜರಿ ಭೋಜನವಂತೂ ಸಾಂಗೋಪಾಂಗವಾಗಿ ನಡೆಯುತ್ತಲೇ ಇರುತ್ತದೆ. ಪುಸ್ತಕಗಳನ್ನೇ ತನ್ನ ಬಂಧು ಬಳಗ ಮಾಡಿಕೊಂಡು ಬಾಳಿನ ಮುಸ್ಸಂಜೆಯಲ್ಲೂ ಕರಾವಳಿಯ ಕಡಲ ತೀರದಲ್ಲಿ ತಮ್ಮದೇ ಆದ ಸ್ವಂತ ಕಾಮನಬಿಲ್ಲನ್ನು ಕಟ್ಟಿಕೊಂಡು ರಸ ಋಷಿಯಂತೆ ಖುಷಿ ಜೀವನ ನಡೆಸುತ್ತಿದ್ದಾರೆ.

ಜೀವನ ಪ್ರೀತಿಯೇನೆಂಬುದನ್ನು ಅರ್ಥ ಮಾಡಿಕೊಳ್ಳಲು ಈ ಹಬ್ಬು ಅವರು ಬರೆದ ಮುಸ್ಸಂಜೆಯ ಆಲಾಪ ಎಂಬ ಅವರ ಆತ್ಮಕಥೆಯನ್ನು ಓದಿದರೂ ಸಾಕು. ತಾಯಿ ಮಗುವಿನ ಬಗ್ಗೆ ಹೊಂದಿರುವ ಶುದ್ಧ ಅಂತ:ಕರಣದ ಪ್ರೀತಿ, ಪೂರ್ವಗ್ರಹವಿಲ್ಲದ ಸಮಾಜಿಕ ನೀತಿ, ಪ್ರಾಮಾಣಿಕ ಬದುಕಿನ ಪಲ್ಲವಿ, ಯಾವುದೇ ಬೆರಕೆಯಿಲ್ಲದ ಸಾತ್ವಿಕ ಶ್ರಮ ಇವೆಲ್ಲವೂ ಇವರ ಆತ್ಮಕಥೆಯಲ್ಲಿ ಕೆನೆಗಟ್ಟಿದೆ. ಹಬ್ಬು ಎಂಬ ಪುಟ್ಟ ಸಾತ್ವಿಕ ಸಮುದಾಯದ ಇತಿಹಾಸವನ್ನು ಇವರು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ.

ತಮ್ಮ ಆತ್ಮಕಥೆಯನ್ನೇ ಹರಿಕಥೆಯನ್ನಾಗಿಸಬೇಕೆಂಬ ಭ್ರಮೆಯಲ್ಲಿ ಇವರು ಬರೆಯದೇ ಇರುವುದರಿಂದ ಇದು ವಾಸ್ತವಕ್ಕೆ ಹತ್ತಿರವಾಗಿ ಓದುಗರ ಮನಸ್ಸಿಗೆ ನಾಟುವಲ್ಲಿ ಯಶಸ್ವಿಯಾಗುತ್ತದೆ. ಇವಿನಿಂಗ್ ಮೆಲೋಡಿ ಎಂಬ ಹೆಸರಿನಲ್ಲಿ ಈ ಆತ್ಮಕಥೆಯ ಇಂಗ್ಲಿಷ್ ಅನುವಾದವನ್ನೂ ಇವರು ಅಷ್ಟೇ ಸಮರ್ಥವಾಗಿ ಮಾಡಿ ಪ್ರಕಟಿಸಿರುವುದು ವಿಶೇಷ.

ವೈಶಾಖದ ಮಳೆ, ವೃತ್ತದೊಳಗೊಂದು ವೃತ್ತ, ಚಯನ, ಸತ್ಯದ ಕದಪಿಗೆ ಸುಳ್ಳಿನ ಮಚ್ಚೆ ಮುಂತಾದವು ಇವರ ಪ್ರಮುಖ ಕಥಾ ಸಂಕಲನಗಳು. ತೆಂಕನ ಹಸಿರು ನಿಶಾನೆ, ಉಸುರಿಯೊಳಗಣ ಕಸರು, ನಾಗಮುರಿ, ವ್ಯಕ್ತ ಮಧ್ಯ ಮುಂತಾದವು ಇವರ ಕವನ ಸಂಕಲನಗಳು. ಇನ್ನೆರಡು ವಿಜ್ಞಾನ ಕೃತಿಗಳು. ಬಡತನದಿಂದ ಸಿರಿತನಕ್ಕೆ, ವಿದ್ಯಾರ್ಥಿ ತನದಿಂದ ಮೇಷ್ಟ್ರಗಿರಿಗೆ ಇವರ ಬದುಕಿನ ದಿಟ್ಟ ಪಯಣ ಸಾಗಿದ್ದರಿಂದ, ಇವರ ಸಾಹಿತ್ಯದಲ್ಲಿ ಜೊಳ್ಳನ್ನು ಹುಡುಕುವುದು ಕಷ್ಟ. ಗಟ್ಟಿ ಜೋಳದ ಕಾಳು ಸಿಗುವುದು ಸುಲಭ. ಭೌತಶಾಸ್ತ್ರದಿಂದ ಪ್ರಾರಂಭಿಸಿ, ಸಾಹಿತ್ಯದ ರಸಾಯನಕ್ಕೆ ಇವರು ಒಲಿದು ಬಂದಿರುವುದರಿಂದ ಸವಿದು ನಲಿದು ಓದುವ ಭಾಗ್ಯ ಓದುಗರದ್ದು.

ಕತೆಗಾರರನ್ನು ನಂಬಬೇಡ, ಅವನು ಹೇಳುವ ಕಥೆಯನ್ನಷ್ಟೇ ನಂಬು ಎಂದು ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಡಿ. ಎಚ್. ಲಾರೆನ್ಸ್ ಹೇಳುತ್ತಾರೆ. ಆದರೆ ಕಥೆಗಾರ ಮೋಹನ ಹಬ್ಬು ಅವರ ವಿಷಯದಲ್ಲಿ ಹಾಗೇನಿಲ್ಲ. ಇವರನ್ನೂ ನಂಬಬಹುದು. ಇವರ ಕಥೆಗಳನ್ನೂ ನಂಬಬಹುದು, ಏಕೆಂದರೆ ಸ್ವಂತ ಲಾಭಕ್ಕಾಗಿ ಹಿಂದೊಂದು ಮುಂದೊಂದು ನಟನೆ ಮಾಡುವ ಜಾಯಮಾನ ಇವರದ್ದಲ್ಲ. ಇವರದ್ದೇನಿದ್ದರೂ ನೇರ- ದಿಟ್ಟ- ನಿರಂತರ.

ಮೋಹನ ಹಬ್ಬು ಅವರು ಮನೆಯಿಂದ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ಕೇವಲ ಸೈಕಲ್ ಹೊಡೆಯುತ್ತಾ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅಂಕೋಲಾವನ್ನು ತಮ್ಮ ಕರ್ಮಭೂಮಿ ಜೊತೆಗೆ ಧರ್ಮಭೂಮಿ ಮತ್ತು ಮರ್ಮಭೂಮಿಯನ್ನಾಗಿಯೂ ಮಾಡಿಕೊಂಡು ಅನೇಕ ಚಟುವಟಿಕೆಗಳನ್ನು, ಸಂಘ ಸಂಸ್ಥೆಗಳನ್ನು ಸಂಘಟಿಸಿದರು. ಹೀಗಾಗಿ ಆ ಪೇಟೆ ಕೇವಲ ಮೀನಿನ ವಾಸನೆಗೊಂದೇ ಅಲ್ಲ, ಕಲೆ, ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳ ಸುವಾಸನೆಯಿಂದಲೂ ಮತ್ತಷ್ಟು ಕಳೆ ಕಟ್ಟಿಕೊಂಡಿತು.

ಇಂಡಿಯನ್ ಜೆಸಿಸ್ ಅಂಕೋಲಾ ಘಟಕದ ಅಧ್ಯಕ್ಷರಾಗಿ, ಫಿಲಂ ಸೊಸೈಟಿ ಅಧ್ಯಕ್ಷರಾಗಿ, ಎರಡು ಬಾರಿ ಅಂಕೋಲಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಎರಡು ಬಾರಿ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಇವರು ಕೆಲಸ ಮಾಡಿ ಅಲ್ಲಿಯ ಸಾಹಿತ್ಯ, ಕಲೆಗಳಿಗೆ ಹೊಸ ಖದರು ಮೂಡಿಸಿದರು. ಗೋಕಾಕ್ ಚಳವಳಿಯಲ್ಲಿ ಮತ್ತು ಸಾಕ್ಷರತಾ ಆಂದೋಲನದಲ್ಲಿ ಭಾಗವಹಿಸಿದ ಅನುಪಮ ಅನುಭವವೂ ಇವರದ್ದು.

ಸ್ವತಃ ನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆಯಲ್ಲಿಯೂ ಮೋಹನ ಹಬ್ಬು ಪಳಗಿದವರು. ಏಕಲವ್ಯ, ಕಿಟ್ಟಿ ಕಥೆ, ಮಾನಿಷಾದ, ಈಡಿಪಸ್, ಎಚ್ಚರಿಕೆ, ಒಂದು ಕತ್ತೆಯ ಕಥೆ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರು. ಏಕಲವ್ಯ, ಕರ್ಣ ಉತ್ತರಣ ಮುಂತಾದ ವಿಚಾರ ಪ್ರಚೋದಕ ನಾಟಕಗಳನ್ನೂ ಇವರು ರಚಿಸಿದ್ದಾರೆ. ಅನೇಕ ಗ್ರಂಥಗಳ ಸಂಪಾದನೆಯಲ್ಲಿಯೂ ಇವರ ಕೊಡುಗೆಯಿದೆ. ಕೆಲವು ನಾಟಕಗಳಲ್ಲಿ ಸ್ವತಃ ಬಣ್ಣ ಹಚ್ಚಿ ನಟಿಸಿದ ಅನುಭವವೂ ಇವರಿಗಿದೆ.

ಮೋಹನರಂತೆ ಅವರ ಸಹೋದರರೆಲ್ಲರೂ ಸಾರಸ್ವತ ಲೋಕದ ಸುಪುತ್ರರೇ. ಇವರ ಅಣ್ಣ ದಿವಂಗತ ಸುಭಾಷ್ ಚಂದ್ರ ಶಿಕ್ಷಕರಾಗಿದ್ದರು. ತಮ್ಮ ರಾಮಚಂದ್ರ ಹಬ್ಬು ಕಾರವಾರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರು. ಇನ್ನೊಬ್ಬ ತಮ್ಮ ಅರುಣ್ ಕುಮಾರ್ ಹಬ್ಬು ಪ್ರಜಾವಾಣಿ, ಉದಯವಾಣಿ ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಹೆಸರು ಮಾಡಿದವರು. ಮತ್ತೊಬ್ಬ ತಮ್ಮ ಉದಯ ಕುಮಾರ್ ಹಬ್ಬು ಕೂಡ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಮತ್ತು ಅನೇಕ ಕೃತಿಗಳ ಲೇಖಕರಾಗಿ ಕ್ರಿಯಾಶೀಲರು. ಕೊನೆಯ ತಮ್ಮ ಜಯಪ್ರಕಾಶ್ ಹಬ್ಬು ಈಗ ಶಿರಸಿ ಸಮೀಪ ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನೂ ಹುಲುಸಾಗಿ ಮಾಡುತ್ತಾ, ಪುಸ್ತಕಗಳ ಮೇಲೆ ಪುಸ್ತಕ ಪ್ರಕಟಿಸುತ್ತಾ ಸೃಜನಶೀಲರಾಗಿದ್ದಾರೆ.

ಈ ಎಲ್ಲಾ ಸಹೋದರರು ಆಗಾಗ ಒಂದೆಡೆ ಸೇರಿದಾಗ ಇಸ್ಪೀಟಿನ ಮಂಡಲ ಮಾಡುತ್ತಾ ಕಾಲ ಕಳೆಯುವುದಿಲ್ಲ, ಬದಲಿಗೆ ಎಲ್ಲರೂ ಜೊತೆಯಾಗಿ ಸಾಹಿತ್ಯದ ಕಮಂಡಲದಲ್ಲಿ ತಮ್ಮ ವಿಚಾರಧಾರೆ ಹನಿಸುತ್ತಾ, ಹೊಸ ಸಾಧನೆಯ ಕ್ಷಿತಿಜ ಶೋಧನೆಗೆ ಹೊರಡುತ್ತಾರೆ. ಈ ಸಹೋದರರ ಸಮಾಗಮವೆಂದರೆ ಅದು ಸಾಹಿತ್ಯದ ಘಮಘಮ. ಹೀಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿಯಲ್ಲಿಯೇ ಸಾರ್ಥಕತೆ ಕಾಣುತ್ತಿರುವ ಅಪರೂಪದ ಕುಟುಂಬ ಇವರದ್ದು. ಸಂಸಾರದಲ್ಲಿ ಭ್ರಮೆಯಿಲ್ಲದೇ ಸದಾ ಪ್ರಭೆಯೇ ತುಂಬಿಕೊಂಡಿರುವಂತೆ ನೋಡಿಕೊಳ್ಳುತ್ತಿರುವವರು ಮೋಹನರ ಪತ್ನಿ ಪ್ರಭಾ.

‘ತರಂಗಿಣಿ’ ಎಂಬ ಇವರ ಅಭಿನಂದನಾ ಗ್ರಂಥವು ಹುಳಗೋಳದ ನಾಗಪತಿ ಹೆಗಡೆ ಮತ್ತು ದೇವಿದಾಸ ಸುವರ್ಣ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ.

ಮೋಹನರಿಗೆ ವಯಸ್ಸಾಯ್ತು ಎಂದು ನಾವೇನೂ ಆತಂಕ ಪಡಬೇಕಾಗಿಲ್ಲ. ಕಾರಣ ಹಂಚು ಹಳತಾದರೇನು… ಅದು ಮನೆಗೆ, ಮನಕ್ಕೆ ನೀಡುವುದು ಮತ್ತಷ್ಟು ತಂಪು !
.
ಮೋಹನ ಮಾಸ್ತರರು ಬರೆದ ಒಂದು ಜೋಕ್: ಭಯ ಭಕ್ತಿಯಲ್ಲಿ ವ್ಯತ್ಯಾಸ ಏನು ಅಂದ್ರೆ – ವಿದ್ಯಾರ್ಥಿಗೆ ಮಾಸ್ತರ್ರನ್ನು ಕಂಡ್ರೆ ಭಕ್ತಿ ಇರಬೇಕು. ಮಾಸ್ತರರಿಗೆ ವಿದ್ಯಾರ್ಥಿಯನ್ನು ಕಂಡ್ರೆ ಭಯ ಇರಬೇಕು !


  • ರಾಜು ಅಡಕಳ್ಳಿ – ಹಾಸ್ಯ ಲೇಖಕರು, ಪತ್ರಕರ್ತರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading