ಸೊನ್ನೆಯನ್ನೇ ಬೆಣ್ಣೆಯಂತೆ ಚಿತ್ರಿಸುವ ಜಿಎಂಬೊ

ಈಗಾಗಲೇ 25 ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಇವರು ರಚಿಸಿ, ವ್ಯಂಗ್ಯಚಿತ್ರಗಳ ದಾದಾ ಎನಿಸಿಕೊಂಡಿರುವ ಜಿ.ಎಂ.ಬೊಮ್ನಳ್ಳಿಯವರ ಮೂಲ ಹೆಸರು ಗಣಪತಿ. ಈಗ ಇಸಳೂರಿನ ಶ್ರೀನಿಕೇತನ ವಿದ್ಯಾಸಂಸ್ಥೆಯಲ್ಲಿ, ಭೈರುಂಬೆ ಹೈಸ್ಕೂಲಿನಲ್ಲಿ ಮತ್ತು ಶಿರಸಿಯ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಚಿತ್ರಕಲೆ ಕಲಿಸಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರ ಸಾಧನೆಯ ಕುರಿತು ಪತ್ರಕರ್ತರಾದ ರಾಜು ಅಡಕಳ್ಳಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪ್ಯಾಟೆ, ಪಟ್ಟಣದ ಥಳಕು ಬಳುಕಿಗೆ ಈಡಾಗದೇ, ಹಳ್ಳಿಯಲ್ಲೇ ಕಲೆಯ ಬಲೆ ಹೆಣೆಯುತ್ತ ತುಳುಕುತ್ತಿರುವ ನಮ್ಮ ಜಿಲ್ಲೆಯ ಅಭಿಜಾತ ಪ್ರತಿಭೆಗಳಲ್ಲಿ ಜಿ.ಎಂ.ಬೊಮ್ನಳ್ಳಿಯವರೂ ಒಬ್ಬರು. ಇವರು ದಿನದ ಸ್ವಲ್ಪ ಹೊತ್ತು ಕೈಯಲ್ಲಿ ಕತ್ತಿ ಹಿಡಿದು ಗದ್ದೆ ತೋಟಕ್ಕೆ ಹೋಗುವ ಕೃಷಿಕರು. ಉಳಿದ ಸಮಯ ಕೈಯಲ್ಲಿ ಕುಂಚ ಹಿಡಿದು ಕಲೆಯಲ್ಲೇ ಕೃಷಿ ಮಾಡುವ ಕಲಾವಿದರು.

ಈ ಜಿ.ಎಂ. ಅವರ ಮೂಲ ಹೆಸರು ಗಣಪತಿ. ಇವರು ಹಿಂದಿ ಚಿತ್ರದ ಮೊಗೆಂಬೊ ಹಾಗಲ್ಲ. ಇವರು ಪಕ್ಕಾ ಕನ್ನಡ ಮನಸ್ಸಿನ ಜಿಎಂಬೊ. ಅಪ್ಪ ಮಹಾಬಲೇಶ್ವರ ಹೆಗಡೆಯವರು. ಆಯಿ ನಾಗರತ್ನಕ್ಕ. ಮಗ ಈ ಜಿ.ಎಂ. ಚೌತಿ ಹಬ್ಬದ ದಿನವೇ ಹುಟ್ಟಿದ್ದರಿಂದ ಇವರಿಗೆ ಮೋದಕೇಶ್ವರ ಅಥವಾ ಕರ್ಜಿಕಾಯಿ ಕುಮಾರ ಎಂದು ಹೆಸರಿಡಿ ಎಂದು ಕೆಲವರು ಸೂಚಿಸಿದ್ದರೂ, ಆಂತಿಮವಾಗಿ ಗಣಪತಿ ಎಂದೇ ಹೆಸರಿಡಲಾಯಿತಂತೆ.

ಹೀಗಾಗಿ ಇವರ ಹುಟ್ಟುಹಬ್ಬಕ್ಕೆ ಕೇಕ್ ಬದಲು ಪ್ರತಿ ವರ್ಷವೂ ಪಂಚಕಜ್ಜಾಯವೇ ಕಡ್ಡಾಯವಾಗಿ ಪ್ರಾಪ್ತಿಯಾಗುತ್ತದೆ. ಆದರೆ ತಮ್ಮೂರು ಬೊಮ್ನಳ್ಳಿಯಲ್ಲಿ ಬಹುತೇಕ ಮನೆಗೊಬ್ಬರಂತೆ ಗಣಪತಿಯಿರುವುದರಿಂದ ಇವರು ಗಮ್ ಎಂದಾಗದೇ, ಜಿ.ಎಂ. ಎಂದು ನಾಮಧೇಯರಾದರು.

ನೋಡುವುದಕ್ಕೆ ಇವರು ಘಟೋತ್ಕಚನ ಹಾಗಿಲ್ಲ. ಎಲ್ಲೋ ನೀವು ಹಿಂದೆ ಕುರುಕ್ಷೇತ್ರದಲ್ಲಿ ಭೇಟಿಯಾದ ನಕುಲನೋ, ಸಹದೇವನೋ ಎಂಬಷ್ಟು ತೆಳ್ಳಗೆ, ಬೆಳ್ಳಗೆ ಇವರು ಸಿಂಪಲ್ಲಾಗಿದ್ದಾರೆ. ಆದರೆ ಇವರ ಪವರ್ ನೋಡಬೇಕೆಂದರೆ ಇವರ ಕೈಗೆ ಕೊಂಚ ಕುಂಚ ಕೊಟ್ಟು ಮಂಚದ ಮೇಲೆ ಕೂರಿಸಬೇಕು. ಕ್ಷಣಾರ್ಧದಲ್ಲಿ ಇವರು ನಿಮ್ಮನ್ನು ಹಿಗ್ಗಿದ ಕುಂಬಳಕಾಯಿಯಂತೆ ಚಿತ್ರಿಸಬಲ್ಲರು ಅಥವಾ ಬಡಿ ಬಕಣವಾಗಿ ಬಸವಳಿದ ಹಾಗಲಕಾಯಿಯಂತೆಯೋ, ಗಾಳಿಯಿಲ್ಲದ ಪುಗ್ಗಿಯಂತೆಯೋ ಬಿಡಿಸಬಲ್ಲರು.

ಜಿಎಂಬೋ ಶಿರಸಿಯಲ್ಲಿ ಬಿ.ಕಾಂ. ಮುಗಿಸಿ ಮುಂದೆ ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ವಿಷಯದಲ್ಲಿ ಆರ್ಟ್ ಮಾಸ್ಟರ್ ಪದವಿ ಪಡೆದವರು. ಆದರೆ ನಿರಂತರ ಸ್ವ ಪ್ರಯತ್ನದಿಂದ ನೋಡ ನೋಡುತ್ತಲೇ ನಾಡಿನ ಅಗ್ರ ಪಂಕ್ತಿಯ ವ್ಯಂಗ್ಯ ಚಿತ್ರಕಾರರಾಗಿ ಹೆಸರು ಮಾಡಿದ್ದಾರೆ. ಬಿಸಿಬಿಸಿ ಒಗ್ಗರಣೆ ಸೌಟಿನಿಂದ ಸಾಸಿವೆ ಕಾಳು ಚಟಿಪಿಟಿಗೊಂಡು ಚಿಮ್ಮುವಂತೆ, ಈ ಜಿ.ಎಂ. ಅವರಿಂದ ಸದಾ ವ್ಯಂಗ್ಯಚಿತ್ರಗಳು ಚಿಮ್ಮುತ್ತಿರುತ್ತವೆ. ಇವರೊಂಥರಾ ವ್ಯಂಗ್ಯ ಚಿತ್ರಗಳ ಜೀವಂತ ಕಾರ್ಖಾನೆ ಮತ್ತು ಖಜಾನೆ.

ಈಗಂತೂ ಇವರು ವ್ಯಂಗ್ಯಚಿತ್ರ ರಚನೆಯಲ್ಲಿ ವೀರ ಕೇಸರಿಯಂತೆ. ಕಾರಣ ಈಗಾಗಲೇ 25 ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಇವರು ರಚಿಸಿ, ವ್ಯಂಗ್ಯಚಿತ್ರಗಳ ದಾದಾ ಎನಿಸಿಕೊಂಡಿದ್ದಾರೆ. ಇವುಗಳಲ್ಲಿ ಹೆಚ್ಚಿನವು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಎಲ್ಲಾ ವ್ಯಂಗ್ಯ ಚಿತ್ರಗಳ ಮೇಲೆ ಹೀಗೇ ಸುಮ್ನೆ ಕಣ್ಣು ಹಾಯಿಸುವುದಕ್ಕೆ ನಿಮಗೆ ಮೂರು ಹಗಲು, ಮೂರು ರಾತ್ರಿ ಬೇಕಾಗಬಹುದು. ‘ನಗೆಗನ್ನಡಂ ಗೆಲ್ಗೆ’ ಎಂಬುದನ್ನು ಇವರು ತಮ್ಮ ವ್ಯಂಗ್ಯಚಿತ್ರಗಳ ಮೂಲಕವೇ ಹೇಳುತ್ತಾರೆ.

ಪ್ರತಿನಿತ್ಯ ಒಂದಷ್ಟು ವ್ಯಂಗ್ಯ ಚಿತ್ರಗಳನ್ನು ಗೀಚದಿದ್ದರೆ ಈ ಕಲಾವಿದರಿಗೆ ಬಹುಶ: ನಿದ್ದೆ ಬರಲಿಕ್ಕಿಲ್ಲ. ಹಳ್ಳಿ ಮೂಲೆಯ ಎಕ್ಕೆ ಗಿಡದ ಕೆಳಗೆ ಕುಳಿತು ಇವರು ಕ್ಯಾನ್ವಾಸಿನ ಮೇಲೆ ಬಣ್ಣ ಚೆಲ್ಲಿದರೂ ಸಾಕು, ಅಲ್ಲೊಂದು ರೆಕ್ಕೆ ಬಿಚ್ಚಿ ಚಕ್ಕಂದವಾಡೋ ಹಕ್ಕಿಯ ಅದ್ಭುತ ಕಲಾಕೃತಿ ತಂತಾನೇ ಹುಟ್ಟಿಕೊಳ್ಳುತ್ತದೆ. ಇವರು ಅಲ್ಲಿಯ ಸಂಪಿಗೆ ಎಲೆಯ ಮೇಲೆ ಕುಂಚದ ಹನಿ ಬಿಂದು ಇಟ್ಟರೂ ಸಾಕು, ಅದು ಮದುವಣಗಿತ್ತಿಯ ಹಣೆ ಮೇಲಿನ ಕುಂಕುಮದಂತೆ ಶೋಭಿಸುತ್ತದೆ.

ಏಕೆಂದರೆ ಈ ಕಲಾವಿದರ ಕೈಗುಣವೇ ಅಂಥದ್ದು. ನೇತ್ರದಾನ, ಶಯಾದಾನದಿಂದ ಹಿಡಿದು ಕನ್ಯಾದಾನದವರೆಗೆ, ಕೃಷಿಯಿಂದ ಹಿಡಿದು ಋಷಿಯವರೆಗೆ, ನೀರಿನಿಂದ ಹಿಡಿದು ಬಿಯರಿನವರೆಗೆ ಭೂಮಿ ಮೇಲಿನ ಬಹುತೇಕ ಎಲ್ಲಾ ವಿಷಯಗಳ ಮೇಲೆಯೂ ವ್ಯಂಗ್ಯಚಿತ್ರ ರಚಿಸಿರುವ ಸಾಧನೆ ಇವರದ್ದು. ಆದರೆ ಎಲ್ಲಾ ಗಂಡಂದಿರಂತೆ ಇವರು ಕೂಡಾ ತಮ್ಮ ಹೆಂಡತಿ ಅರ್ಚನಾರಿಗೆ ಸ್ವಲ್ಪ ಹೆದರುವುದರಿಂದ ಅವರ ಮೇಲೆ ಮಾತ್ರ ಇನ್ನೂ ವ್ಯಂಗ್ಯಚಿತ್ರ ಪ್ರಕಟಿಸುವ ಧೈರ್ಯ ಮಾಡಿರಲಿಕ್ಕಿಲ್ಲ. ಅರ್ಚನಾ ಕೂಡ ಪತಿ ಚಿತ್ರ ಬಿಡಿಸುವಾಗ ಅವರ ಹಸ್ತ ಮುಟ್ಟುತ್ತಾರೆ. ಈ ಚಿತ್ರ ಪ್ರೀತಿಯ ದಂಪತಿ ತಮ್ಮ ಮಗಳಿಗೂ ಚಿತ್ರಾ ಎಂದೇ ಹೆಸರಿಟ್ಟಿದ್ದಾರೆ. ಈ ದಂಪತಿಯ ಕಂದನ ಹೆಸರು ಸ್ಕಂದ.

ಯಾವತ್ತೂ ಬಾಯಿತುಂಬಾ ನಗದ ಯಡಿಯೂರಪ್ಪ, ದೇವೇಗೌಡ, ಖರ್ಗೆ ಅವರಂಥವರು ಕೂಡ ಜಿಎಂಬೊ ಅವರ ವ್ಯಂಗ್ಯಚಿತ್ರಗಳನ್ನು ನೋಡಿದರೆ ಬಿದ್ದುಬಿದ್ದು ನಗುತ್ತಾ ಸದಾನಂದ ಗೌಡರಂತಾಗುವುದು ಗ್ಯಾರಂಟಿ. ಆದರೆ ಯಾರೂ ವಿಪರೀತ ನಕ್ಕಿ ಹೊಟ್ಟೆ ಹುಣ್ಣು ಮಾಡಿಕೊಳ್ಳುವುದು ಬೇಡ, ಹೊಟ್ಟೆ ಹಣ್ಣಾಗುವಷ್ಟು ನಕ್ಕಿದರೆ ಸಾಕು ಎಂಬುದು ಈ ಜಿಎಂಬೋ ಅವರ ನಿಲುವು.

ನಗೆಯ ಬಗ್ಗೆ ಬೀಚಿಯವರು ಹೇಳಿದ ಮಾತು : ಕೆಲವರು ಹಲ್ಲುಜ್ಜುವಾಗ ಮತ್ತು ಹಲ್ಲಿನ ವೈದ್ಯರ ಬಳಿ ಹಲ್ಲು ಕೀಳಿಸುವಾಗ ಮಾತ್ರ ಬಾಯಿಬಿಚ್ಚಿ ಹಲ್ಲು ತೋರಿಸುತ್ತಾರೆ. ಉಳಿದ ಸಂದರ್ಭಗಳಲ್ಲಿ ಅವರು ಹಲ್ಲುಗಳನ್ನು ಗುಪ್ತ ನಿಧಿಯಂತೆ ಬಚ್ಚಿಟ್ಟುಕೊಂಡಿರುತ್ತಾರೆ.

ಆದರೆ ಇಂಥವರ ಬಾಯಲ್ಲೂ ಬೀಡುಬಿಸಾಡಾಗಿ ನಗೆಯುಕ್ಕಿಸುವ ತಾಕತ್ತು ಈ ಜಿ.ಎಂ. ಎಂಬ ಕಡ್ಡಿ ಪೈಲ್ವಾನರಿಗುಂಟು. ಇನ್ನು ಆರೋಗ್ಯ, ಕೃಷಿ, ರೈತರ ಬವಣೆ, ಸಮಾಜ ಸುಧಾರಣೆಯಂತಹ ಕೆಲವು ಗಂಭೀರ ವಿಷಯಗಳ ಬಗ್ಗೆಯೂ ಇವರು ಜಾಗೃತಿ ಮೂಡಿಸುವಂಥ ಚಿತ್ರಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

ಹಿಂದೆ ಲೋಕಧ್ವನಿಯಲ್ಲೂ ಇವರು ‘ಕಷಾಯ’ ಎಂಬ ಶೀರ್ಷಿಕೆಯಲ್ಲಿ ಅನೇಕ ವ್ಯಂಗ್ಯ ಚಿತ್ರ ಬಿಡಿಸಿದ್ದರು. ಪ್ರಜಾವಾಣಿಯಲ್ಲಿ ‘ಒಳಶುಂಠಿ’ ಎಂಬ ಇವರ ವ್ಯಂಗ್ಯಚಿತ್ರ ಅಂಕಣ ತುಂಬಾ ಜನಪ್ರಿಯವಾಗಿತ್ತು. ಇತರ ಕೆಲವು ಪತ್ರಿಕೆಗಳಿಗಂತೂ ಇವರು ನಿತ್ಯ ವ್ಯಂಗ್ಯಚಿತ್ರಗಳ ಟಾನಿಕ್ ನೀಡಿದ್ದೂ ಇದೆ.

ವ್ಯಂಗ್ಯಚಿತ್ರ ಕಲೆಯಲ್ಲಿ ಇವರದ್ದು ಇಷ್ಟೆಲ್ಲ ಅಪಾರ ಸಾಧನೆ ಎಂದಾಕ್ಷಣ ಅವರು ಇಡೀ ದಿನ ಅದೊಂದೇ ಕೆಲಸ ಮಾಡುತ್ತಿರುತ್ತಾರೆಂದು ಭಾವಿಸಬೇಡಿ. ಇವರು ಮೂಲತಃ ಚಿತ್ರಕಲಾವಿದರು, ಬರಹಗಾರರು ಮತ್ತು ಚಿತ್ರಕಲಾ ಶಿಕ್ಷಕರೂ ಹೌದು. ಹಿಂದೆ ಶಿರಸಿಯ ಲಯನ್ಸ್ ಹೈಸ್ಕೂಲಿನಲ್ಲಿ ಆರು ವರ್ಷ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದ ಇವರು, ಈಗ ಇಸಳೂರಿನ ಶ್ರೀನಿಕೇತನ ವಿದ್ಯಾಸಂಸ್ಥೆಯಲ್ಲಿ, ಭೈರುಂಬೆ ಹೈಸ್ಕೂಲಿನಲ್ಲಿ ಮತ್ತು ಶಿರಸಿಯ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಚಿತ್ರಕಲೆ ಕಲಿಸಿಕೊಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಹೀಗಾಗಿ ಆ ವಿದ್ಯಾಶಾಲೆಗಳ ಮಕ್ಕಳಿಗೆ ಇವರನ್ನು ಕಂಡರೆ ಪೆಪ್ಪರಮಂಟಿಗಿಂತಲೂ ಹೆಚ್ಚು ಇಷ್ಟ. ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುವುದೇನೆಂದರೆ ಈ ಜಿ.ಎಂ. ಅವರಿಗೂ ಎಲ್ಲಿಲ್ಲದ ಪ್ರೀತಿ. ಯಾವುದೇ ಶಾಲೆಯವರು ಕರೆದರೂ ಇವರು ಮಕ್ಕಳಿಗೆ ಉಚಿತವಾಗಿ ತೆರಳಿ ಚಿತ್ರಕಲೆಯ ತರಬೇತಿ ನೀಡಿ ಬರುತ್ತಾರೆ.

ಹೀಗೆ ಚಿತ್ರಕಲೆ ಉಪಾಸಕರಾಗಿ, ಉಪನ್ಯಾಸಕರಾಗಿ ಇವರು ದಾಸಯ್ಯನಂತೆ ಊರೂರು ತಿರುಗಿದ್ದಾರೆ. ಮುಂಜಾನೆ ಸುಬ್ಬುಲಕ್ಷ್ಮಿಯ ಸುಪ್ರಭಾತ ಕೇಳಿಬರುವ ಕಾಲದಲ್ಲಿ ಕಾನಗೋಡು ಗಣಪಕ್ಕ ನೆಲವನ್ನು ಸಗಣಿಯಿಂದ ತಿಕ್ಕಿತಿಕ್ಕಿ ಸಾರಿಸಿ ಚಂದಾಗಿ ರಂಗೋಲಿ ಬಿಡಿಸಿಟ್ಟಂತೆ ಈ ಜಿ.ಎಂ. ಬಿಳಿಪಟದ ಮೇಲೆ ಚಿತ್ರ ಬಿಡಿಸುತ್ತಾ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ.

ಹೇರೂರು, ಕಿಬ್ಬಳ್ಳಿ, ರಾಗಿಹೊಸಳ್ಳಿ, ಕಾನಸೂರು, ಮತ್ತಿಘಟ್ಟ, ವಾನಳ್ಳಿ, ಹಳಿಯಾಳ, ಜಡ್ಡಿಗದ್ದೆ, ಕಾರವಾರ ಹೀಗೆ ಅನೇಕ ಕಡೆ ಇವರಿಂದ ಶಾಲೆಗಳಲ್ಲಿ ಚಿತ್ರಕಲೆ ಕಲಿತ, ಚಿತ್ರಕಲೆಯಲ್ಲಿಯೇ ಬಲಿತ ಸಾವಿರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ. ಈಗಲೂ ಪ್ರತಿ ವರ್ಷ ಹೊನ್ನಾವರದ ರೋಟರಿ ಶಿಬಿರಕ್ಕೆ ಹೋಗಿ ಮಕ್ಕಳಿಗೆ ಚಿತ್ರಕಲೆ ಕಲಿಸಿ ಬರುವ ರೂಢಿಯನ್ನು ಇವರು ತಪ್ಪಿಸುವುದಿಲ್ಲ.

ಪರೀಕ್ಷೆಯಲ್ಲಿ ಸೊನ್ನೆ ಅಂಕ ಬಂತು ಎಂದು ಯಾರೂ ಹತಾಶರಾಗಬೇಕಿಲ್ಲ ಎಂಬುದು ಜಿ.ಎಂ.ಅವರ ಅಭಿಪ್ರಾಯ. ಏಕೆಂದರೆ ಇವರು ಸೊನ್ನೆಯನ್ನೇ ಸುತ್ತಿಸುತ್ತಿಸಿ ಚಿತ್ರ ಬಿಡಿಸುವ ಚಾಕಚಕ್ಯತೆ ಹೇಳಿಕೊಡುವಂಥವರು. ಇವರಿಗೆ ಚಕ್ಲಿ ಮುಟ್ಟನ್ನು ಕೊಟ್ಟರೆ ಇವರು ಕೇವಲ ಚಕ್ಲಿ ಮಾಡಿ ಸುಮ್ಮನೆ ಕುಳಿತುಕೊಳ್ಳುವ ಪೈಕಿಯಲ್ಲ. ಆ ಚಕ್ಲಿ ಮುಟ್ಟಿನಿಂದಲೇ ಒಂದಷ್ಟು ಚಿತ್ರಗಳನ್ನೂ ಸುತ್ತಿ, ಕೆತ್ತಿಡದೇ ಬಿಡುವುದಿಲ್ಲ.

ಸೊನ್ನೆಯಿಂದಲೇ ಚಿತ್ರ ಬಿಡಿಸುವುದು ಹೇಗೆ ಎಂಬ ಕುರಿತು ಇವರು ಮಕ್ಕಳಿಗಾಗಿ ಪುಸ್ತಕವನ್ನೇ ಬರೆದಿರುವುದು ವಿಶೇಷ. ಚಿತ್ರ ಪಾಠ, ಕಲಿಕೆಗಳಿರುವ ಈ ಪುಸ್ತಕ ಈಗಾಗಲೇ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ತಲುಪಿ ಅವರಲ್ಲಿ ಚಿತ್ರಕಲೆಯ ಅಭಿರುಚಿ ಬೆಳೆಯುವಂತಾಗಿದೆ. ಹೀಗಾಗಿ ಇವರದು ಸೊನ್ನೆಯಿಂದಲೇ ಬೆಣ್ಣೆ ಮಾಡುವ ಕಲೆ ಕಲಿಸಿಕೊಡುವ ಮಾಸ್ತರಿಕೆ ಎಂದರೂ ಅತಿಶಯೋಕ್ತಿಯಲ್ಲ.

ರೇಖಾಚಿತ್ರಗಳನ್ನು ಬಿಡಿಸುವುದರಲ್ಲಿಯೂ ಜಿ.ಎಂ. ಎತ್ತಿದ ಕೈ. ಅನೇಕ ಕಥೆ, ಕಾದಂಬರಿ, ಕವನ ಸಂಕಲನಗಳಿಗೆ ಇವರು ರೇಖಾಚಿತ್ರಗಳನ್ನು, ರಕ್ಷಾಪುಟಗಳನ್ನು, ಅಮೂರ್ತ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಗೆರೆಗಳಲ್ಲಿಯೇ ಕಲ್ಪನೆಗಳ ಗರಿ ಮೂಡಿಸುವ ಕಲೆಗಾರಿಕೆ ಇವರದ್ದು. ಇವರು ಹೇಗೆ ಬಿಡಿಸುತ್ತಾರೆ ಗೊತ್ತುಂಟಾ? ಅತ್ಯಂತ ದೇಖರೇಕೆಯಿಂದ ಈ ರೇಖೆಗಳನ್ನು ಇವರು ಎಳೆಯುತ್ತಾರಾದ್ದರಿಂದ ಅದನ್ನು ನೋಡುವುದೆಂದರೆ, ಹಳೆ ರೇಡಿಯೋದಲ್ಲಿ ಎಲ್ಲಾರೀಶ್ವರಿಯ ಚಿತ್ರಗೀತೆ ಕೇಳಿದಂತಹ ಸುಂದರ ಅನುಭೂತಿ.

ಮಲೆನಾಡಿನ ಹಳ್ಳಿ ಮನೆಗಳಲ್ಲಿ ಪ್ರಧಾನ ಬಾಗಿಲು ಚೌಕಟ್ಟು ಗಳನ್ನು ನೋಡುವುದೇ ಚೆಂದ. ಕಾರಣ ಅವು ಬಣ್ಣ ಬ್ಯಾಗಡೆಗಳಿಂದ ಬಾಸಿಂಗ ಕಟ್ಟಿಕೊಂಡಂತೆ, ಅಂದದ, ಬಣ್ಣ ಬಣ್ಣದ ಹೂ ಬಳ್ಳಿಗಳ ಕಲೆಗಾರಿಕೆಯನ್ನು ಕಟ್ಟಿಕೊಂಡಿರುತ್ತವೆ. ಇಂಥ ಬಾಗಿಲು ಬಳ್ಳಿ ಕಲೆ ಬಿಡಿಸುವುದರಲ್ಲಿಯೂ ಜಿ.ಎಂ. ನಿಷ್ಣಾತರು. ಶಿರಸಿ ಗುಡಿಗಾರರ ಬಳಿ ಇವರು ಈ ಕಲೆಯನ್ನು ಭಕ್ತಿಯಿಂದ ಕಲಿತುಕೊಂಡು ಬಂದಿದ್ದರು.

ಇವರು ಹೀಗೆ ವಾಸ್ತು ಬಾಗಿಲು ಬಳ್ಳಿ ಬರೆದಿದ್ದು ಒಟ್ಟಾರೆ ನೂರಕ್ಕೂ ಹೆಚ್ಚು ಮನೆಗಳಾಗಿರಬಹುದು. ಮದುವೆ, ಉಪನಯನ ಬಂದರೆ ಇಂಥ ಬಾಗಿಲ ಬಳ್ಳಿ ಚಿತ್ರ ಬಿಡಿಸಲು ಈ ಜಿ.ಎಂ.ಗೆ ಡಿಮಾಂಡಪ್ಪೋ ಡಿಮಾಂಡು. ಹುಕ್ಕಳಿಯ ರವಿ ಹಾಸ್ಯಗಾರ , ಕಬ್ನಳ್ಳಿಯ ಗಿರಿಧರ, ರಾಮ ಪಟಗಾರ ದೊಡ್ನಳ್ಳಿ, ಮಾದೇವ ನಾಯ್ಕ ನೀಡಗೋಡ, ಹಿತ್ತಲಗದ್ದೆ ಸುಕನ್ಯತ್ತಿಗೆ, ತಾರಗೋಡು ಶ್ರೀಧರ ಭಟ್ಟರು. ಹೀಗೆ ಹಲವು ಮಂದಿಯ ಮನೆ ಬಾಗಿಲು ಚೌಕಟ್ಟುಗಳಲ್ಲಿ ಈಗಲೂ ಜಿ.ಎಂ. ಕೈಚಳಕದ ತೈಲ ವರ್ಣದ ಬಳ್ಳಿ ಚಿತ್ರಗಳು ಆಕರ್ಷಿಸುತ್ತಿವೆ.

ಜಿ.ಎಂ. ಚಿತ್ರಕಲೆಯ ಪ್ರಯೋಗಶೀಲರೂ ಹೌದು, ಪ್ರಚಾರಕರೂ ಹೌದು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ತಮ್ಮೂರಿನ ವಿ. ಎನ್.ಹೆಗಡೆಯವರ ಮಗನ ಮದುವೆಯಲ್ಲಿಯೂ ಚಿತ್ರ ಪ್ರದರ್ಶನ ಏರ್ಪಡಿಸಿ, ಜನ ಸಾಮಾನ್ಯರಲ್ಲೂ ಕಲೆಯ ಜಾಗೃತಿ ಮೂಡಿಸಲು ಹೆಣಗಿದ್ದರು. ಉತ್ತರ ಕನ್ನಡ ಚಿತ್ರಕಲಾ ಪರಿಷತ್ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು.

2020 ರಲ್ಲಿ ಬನವಾಸಿಯ ಕದಂಬೋತ್ಸವದಲ್ಲಿ ಚಿತ್ರಕಲಾ ಪ್ರಾತ್ಯಕ್ಷಿಕೆಗಾಗಿಯೇ ಒಂದು ವಿಶೇಷ ಸ್ಟಾಲ್ ವ್ಯವಸ್ಥೆ ಮಾಡಿಕೊಂಡು ‘ ಕಲೆಯ ನೋಡಿರಣ್ಣ… ಕಲೆಯ ಗೀಳು ಬೆಳೆಸಿಕೊಳ್ಳಿರಣ್ಣ’ ಎಂದು ಸಾವಿರಾರು ಮಂದಿಯ ಕಿವಿಯಲ್ಲಿ ಇವರು ತುತ್ತೂರಿ ಊದಿದ್ದರು. ಆಗ ಸಹಾಯಕ ಆಯುಕ್ತರಾಗಿದ್ದ ರಾಜು ಮೊಗವೀರರು ಈ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ್ದನ್ನು ಇವರು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಕೆಲವರು ತಮ್ಮ ಸುತ್ತಲೂ ದಡ್ಡರೇ ತುಂಬಿರುವಾಗ ತಾವು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ಆದರೆ ಜಿ.ಎಂ. ಹಾಗಲ್ಲ. ತನ್ನ ಸುತ್ತಲೂ ಬುದ್ಧಿವಂತರು ತುಂಬಿರುವಾಗಲೂ ಕಲೆಯಲ್ಲಿ, ತಲೆಯಲ್ಲಿ ತಾನೇನೂ ಕಮ್ಮಿಯಿಲ್ಲವೆಂದು ತೋರಿಸಿ ಕೊಡುವಂಥವರು. ಇದಕ್ಕೆ ಅವರ ಕಲಾ ಸಾಧನೆಯೇ ಜೀವಂತ ಸಾಕ್ಷಿ. ಹೀಗಾಗಿ ಇವರ ಸಂಸಾರದ ತುಂಬೆಲ್ಲ ಕಲೆಯದ್ದೇ ಸಾರ, ಸ್ವಾದ. ಆಸ್ವಾದ. ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುವ ಬದುಕಿನಲ್ಲಿ ಸುಖ ಸಿಗುವುದು ಯಾವಾಗ ಎಂಬ ಸಮಸ್ಯೆ ಇರುವಂಥವರು ಈ ಜಿಎಂಬೊ ಅವರನ್ನು ನೋಡಿ ಕಲಿತುಕೊಳ್ಳಬೇಕು.

ಕೊನೆಗೊಂದು ಜೋಕ್ : ನಮ್ಮಲ್ಲಿ ಅನೇಕರು ಡೈನಿಂಗ್ ಕಲಾವಿದರಾಗಿ ಅಡುಗೆ ಮನೆಯಲ್ಲಿಯೇ ತಮ್ಮ ಅಮೂಲ್ಯವಾದ ಕಾಲ ಕಳೆಯುತ್ತಾರೆ, ಆದರೆ ಈ ಜಿ.ಎಂ. ಅವರಂತೆ ಡ್ರಾಯಿಂಗ್ ಕಲಾವಿದರಾಗಿ, ಆರ್ಟ್ ಅನ್ನು ಹಾರ್ಟ್ ನಲ್ಲಿಟ್ಟುಕೊಂಡವರು ಸಿಗುವುದು ಅಪರೂಪ.


  • ರಾಜು ಅಡಕಳ್ಳಿ – ಪತ್ರಕರ್ತರು, ಲೇಖಕರು, ಬೆಂಗಳೂರು

One thought on “ಸೊನ್ನೆಯನ್ನೇ ಬೆಣ್ಣೆಯಂತೆ ಚಿತ್ರಿಸುವ ಜಿಎಂಬೊ”

Leave a Reply

Home
Search
Menu
Recent
About
×