ಕ್ಯಾನ್ಸರ್ ಭೂತ ಓಡಿಸುವ ರಿಯಾಜ್

ಡಾ.ರಿಯಾಜ್ ಸಾಗರ್ ಅವರು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಕರು. ಕಳೆದ 15 ವರ್ಷಗಳಿಂದ ಶಿರಸಿಯಲ್ಲಿದ್ದುಕೊಂಡು ಹಲವು ಹದಿನೆಂಟು ಸಮಾಜಮುಖಿ ಕೆಲಸ ಮಾಡಿ ಈಗ ಸಂಪೂರ್ಣವಾಗಿ ತಮ್ಮನ್ನು ಕ್ಯಾನ್ಸರ್ ವಿರುದ್ಧ ಆಂದೋಲನ ಕೈಗೊಳ್ಳುವುದಕ್ಕೆ ತೊಡಗಿಸಿಕೊಂಡಿದ್ದಾರೆ. ಡಾ.ರಿಯಾಜ್ ಸಾಗರ್ ಅವರ ಸಾಧನೆಯ ಕುರಿತು ರಾಜು ಅಡಕಳ್ಳಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇರಂಕಿಯಿಂದ ಹೆಲ್ಸಂಕಿಯವರೆಗೂ, ಮುಂಡಗೋಡಿನಿಂದ ಮುಂಗೋಲಿಯಾ ತನಕವೂ ಮನುಕುಲವನ್ನು ಕಾಡುತ್ತಿರುವ ರೋಗವೆಂದರೆ ಕ್ಯಾನ್ಸರ್. ಈ ಮಹಾಮಾರಿಯ ವಿರುದ್ಧ ಸಂಘ ಕಟ್ಟಿಕೊಂಡು, ಸೊಂಟ ಗಟ್ಟಿ ಮಾಡಿಕೊಂಡು, ನಿರಂತರವಾಗಿ ಹೋರಾಡುತ್ತಿರುವ ಸ್ವಯಂ ಸೇವಕರೊಬ್ಬರಿದ್ದಾರೆ. ಅವರು ಡಾ.ರಿಯಾಜ್ ಸಾಗರ್.

ಇವರ ಹುಟ್ಟುಕ್ಷೇತ್ರ ಸಾಗರ. ಆದರೆ ಕಾರ್ಯಕ್ಷೇತ್ರ ಶಿರಸಿ. ಕಳೆದ 15 ವರ್ಷಗಳಿಂದ ಶಿರಸಿಯಲ್ಲಿದ್ದುಕೊಂಡು ಹಲವು ಹದಿನೆಂಟು ಸಮಾಜಮುಖಿ ಕೆಲಸ ಮಾಡಿ ಈಗ ಸಂಪೂರ್ಣವಾಗಿ ತಮ್ಮನ್ನು ಕ್ಯಾನ್ಸರ್ ವಿರುದ್ಧ ಆಂದೋಲನ ಕೈಗೊಳ್ಳುವುದಕ್ಕೆ ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇವರು ಪೂರ್ಣಾವಧಿಯಾಗಿ ಪೊರಕೆ ಹಿಡಿದು ಕ್ಯಾನ್ಸರನ್ನು ಗುಡಿಸಲು ಶ್ರಮಿಸುತ್ತಿದ್ದಾರೆ. ಆರೋಗ್ಯ ಸಿರಿಯೇ ಗೆಲ್ಗೆ ಎಂಬುದು ಇವರ ಧ್ಯೇಯ ವಾಕ್ಯ.

ಕ್ಯಾನ್ಸರ್ ಊರೂರಿಗೂ ವಕ್ಕರಿಸದಂತೆ ತಡೆಯಲು, ಕ್ಯಾನ್ಸರ್ ಭೂತದ ಬುಡಕ್ಕೆ ಬೆಂಕಿ ಇಡಲು ಇವರು ನಾಲ್ಕು ಸೂತ್ರ ಅನುಸರಿಸಿ ಕೆಲಸ ಮಾಡುತ್ತಿದ್ದಾರೆ. ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಜಾಗೃತಿ, ತಂಬಾಕು, ಸಿಗರೇಟು, ಬೀಡಿ ಬಿಡಿ ಚಳವಳಿ ನಡೆಸುವುದು, ರೋಗಿಗಳು ಮತ್ತು ವೈದ್ಯರ ನಡುವೆ ಸಂಪರ್ಕ ಸಂಬಂಧ ಸಾಧಿಸಿ ಕೊಡುವುದು ಮತ್ತು ಕ್ಯಾನ್ಸರಿನ ತಪಾಸಣೆ ಮತ್ತು ಚಿಕಿತ್ಸೆ ಏರ್ಪಡಿಸಿ ಅವಾಜ್ ಹಾಕುವುದು ರಿಯಾಜ್ ಅವರ ಕಾರ್ಯ ವಿಧಾನ.

ಈ ಎಲ್ಲ ಚಟುವಟಿಕೆಗಳಿಗಾಗಿಯೇ ಇವರು ಪ್ರತ್ಯೇಕವಾದ ಅಸ್ಮಿತೆ ಪ್ರತಿಷ್ಠಾನ ಎಂಬ ಸಂಸ್ಥೆಯನ್ನೇ ಹುಟ್ಟು ಹಾಕಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಆಶ್ರಯದಲ್ಲಿ ಆಯ್ದ ಕೆಲವು ಪ್ರದೇಶಗಳಲ್ಲಿ ಕ್ಯಾನ್ಸರ್ ವಿರುದ್ಧ ಸಮರ ಸಾರಿದೆ.

ಕ್ಯಾನ್ಸರ್ ಯಾವುದೇ ಜಾತಿ ಧರ್ಮ, ಬಡವರು ಶ್ರೀಮಂತರು, ಊರುಕೇರಿ ನೋಡಿ ಬರುವುದಿಲ್ಲ. ಇದು ಗಂಡಸರನ್ನು ಬಿಡುವುದಿಲ್ಲ. ಹೆಂಗಸರನ್ನೂ ಬಿಡುವುದಿಲ್ಲ. ಆದರೆ ಕ್ಯಾನ್ಸರಿಗೆ ಗುಟ್ಕಾ, ತಂಬಾಕು, ಜರ್ದಾ, ಸಿಗರೇಟಿಗೆ ಕಾಸು ಕೊಟ್ಟು ದಾಸರಾದವರನ್ನು ಕಂಡರೆ ಹೆಚ್ಚು ಪ್ರೀತಿ. ಇಂಥ ಚಟಗಳ ದಾಸಾನುದಾಸರೊಂದಿಗೆ ಲವ್ ಬೆಳೆಸುವುದು ಕ್ಯಾನ್ಸರಿನ ಖಯಾಲಿ. ಹಾಗಂತ ಉಳಿದವರಿಗೆ ಇದು ಭಾದಿಸುವುದೇ ಇಲ್ಲ ಎಂಬ ಅರ್ಥವಲ್ಲ. ಒಟ್ಟಾರೆ ಕ್ಯಾನ್ಸರಿಗೆ ಆಟ. ಸಾರ್ವಜನಿಕರಿಗೆ ಪ್ರಾಣ ಸಂಕಟ.

ಡ್ಯಾನ್ಸರ್ ಆಗಿರಲಿ, ಬೌನ್ಸರ್ ಆಗಿರಲಿ, ಸಿನ್ಸಿಯರ್ ಆಗಿರಲಿ ಕೆಲವೊಮ್ಮೆ ಈ ಕ್ಯಾನ್ಸರ್ ಎಂಬ ಕಬಂಧ ಬಾಹು ಬಿಡುವುದೇ ಇಲ್ಲ. ಹುಟ್ಟಾಪರ ಚುಟ್ಟಾ ಸೇದದವರು ಕೂಡ ಕ್ಯಾನ್ಸರಿನಿಂದಾಗಿಯೇ ಚಟ್ಟಾ ಹತ್ತಿದ ಅನೇಕ ಘಟನೆಗಳಿವೆ. ಇದಕ್ಕೆ ಕಾರಣ ಅವರ ಕುಟುಂಬದ ಜೀನ್ಸ್ ಅಥವಾ ಬೆಳೆದ ಕಲುಷಿತ ಪರಿಸರ ಅಥವಾ ಅನಾರೋಗ್ಯಕರ ಆಹಾರ ಕ್ರಮಗಳೂ ಕಾರಣವಾಗಿರಬಹುದು. ಒಟ್ಟಾರೆ ಅವರವರ ಹಣೆಬರಹ. ತಲೆಭಾರ ಎಂದು ನಾವಂದುಕೊಂಡರೂ ರಿಯಾಜ್ ಮಾತ್ರ ಇದನ್ನು ತಡೆಯುವ ಮನುಷ್ಯ ಪ್ರಯತ್ನ ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದವರು.

ಇಂಗ್ಲಿಷ್ ಕವಿ ಜಾಯ್ಸ್ ಕಿಲ್ಮರ್ ಒಬ್ಬ ವೃಕ್ಷಪ್ರೇಮಿ. ಒಂದು ಸುಂದರ ಕವಿತೆಗಿಂತಲೂ, ಒಂದು ಮರವೇ ಹೆಚ್ಚು ಸುಂದರ ಎಂದು ಆತ ಕವಿತೆಯಲ್ಲೇ ಹೇಳಿದ್ದಾನೆ. ಹಾಗೆಯೇ ಈ ರಿಯಾಜ್ ಕೂಡಾ ಸ್ವಯಂ ಸೇವಕರ ಪಡೆ ಕಟ್ಟಿಕೊಂಡು, ಸಾರ್ವಜನಿಕರ ಆರೋಗ್ಯ ಹಿತರಕ್ಷಣೆಗೆ ಕಂಕಣ ಕಟ್ಟಿಕೊಳ್ಳುವುದೇ ತಮ್ಮ ಬದುಕಿನ ಸುಂದರ, ಸಾರ್ಥಕ ಅನುಭವ ಎಂದು ಭಾವಿಸಿದ್ದಾರೆ.

ಕ್ಯಾನ್ಸರಿನ ವಿರುದ್ಧದ ಯುದ್ಧ ಎಂದರೆ ರಿಯಾಜ್ ಬಂದೂಕು ಕೈಗೆತ್ತಿಕೊಂಡು ಹೊರಡುತ್ತಾರೆಂದು ಅರ್ಥವಲ್ಲ. ಪೇಟೆ ಪಟ್ಟಣಗಳಲ್ಲಷ್ಟೇ ಅಲ್ಲ, ಹಳ್ಳಿಗಳಲ್ಲಿಯೂ ಕೂಡ ಇವರು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸುವ ಮೂಲಕ ಕ್ಯಾನ್ಸರ್ ಎಲ್ಲೆಲ್ಲಿ ಅಡಗಿಕೊಂಡಿದೆ ಎಂಬುದನ್ನು ಶೋಧಿಸುತ್ತಾರೆ.

ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿಕೊಂಡಂತೆ ಎಲ್ಲೋ ಹಳ್ಳಿ ಮೂಲೆಯ ನಾಗು ನಾಯ್ಕ, ಗುರುಪಾದ ಭಟ್ಟ, ಸುವರ್ಣತ್ತಿಗೆ, ತಿಮ್ಮಿಗೌಡರಂಥ ಮುಗ್ಧರ ದೇಹದಲ್ಲಿ ಕ್ಯಾನ್ಸರ್ ಲಂಗರು ಹಾಕಿರುತ್ತದೆ. ಇಂತಹ ಎಷ್ಟೋ ಪ್ರಕರಣಗಳನ್ನು ಈ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಪತ್ತೆ ಹಚ್ಚಿ ಮುಂದೆ ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಕಳುಹಿಸುವ ಏರ್ಪಾಡು ಮಾಡಿ ಪುಣ್ಯ ಕಟ್ಟಿಕೊಳ್ಳುವುದು ರಿಯಾಜ್ ಅವರ ಅಸ್ಮಿತೆ ಸಂಸ್ಥೆಯ ವಿಶೇಷ.

ಈ ಎಲ್ಲಾ ಚಟುವಟಿಕೆಗಳಿಗೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಕಲ ನೆರವು ನೀಡುತ್ತದೆ. ಇಂತಹ ಶಿಬಿರಗಳನ್ನು ಮತ್ತು ವೈದ್ಯಕೀಯ ಸೌಲಭ್ಯ ನೀಡಲು ಅಸ್ಮಿತೆಯ ಜೊತೆ ನುರಿತ ವೈದ್ಯರ ತಂಡವೇ ಕೆಲಸ ಮಾಡುತ್ತಿದೆ. ಡಾ. ಮಮತಾ ಹೆಗಡೆ, ಡಾ. ಸೌಭಾಗ್ಯ ಡಾ ಪೂಜಿತ ಹೆಗಡೆ, ಡಾ. ಮೇಘನಾ ಡಾ. ಸವಿತಾ ಪಾಂಚಾಲ್ ಮುಂತಾದವರು ನೆರವಾಗುತ್ತಿದ್ದಾರೆ.

ಈಗಾಗಲೇ ಇಂತಹ ತಪಾಸಣಾ ಶಿಬಿರಗಳು ಹುಲೇಕಲ್, ಮುಂಡಗೋಡ, ಬಿಸಲಕೊಪ್ಪ, ರೇವಣಕಟ್ಟಾ, ಹೆಗಡೆಕಟ್ಟಾ, ಯಲ್ಲಾಪುರ, ಸಾಲ್ಕಣಿ, ಬೆಂಗಳೆ, ಬನವಾಸಿ, ದಾಸನಕೊಪ್ಪ, ಉಂಚಳ್ಳಿ, ಮಂಜುಗುಣಿ, ಹನುಮಂತಿ, ನಾಣಿಕಟ್ಟಾ, ಸುಗಾವಿ, ಗುಡ್ನಾಪುರ, ಗಿಡಮಾವಿನಕಟ್ಟ, ಶಿರಸಿ, ಹಾರ್ಸಿಕಟ್ಟಾ, ಬಂಕನಾಳ, ಇಟಗುಳಿ, ಕಾನ್ಸೂರು, ಭೀಮನ ಗುಡ್ಡ ಮುಂತಾದ 60ಕ್ಕೂ ಹೆಚ್ಚು ಕಡೆಗಳಲ್ಲಿ ನಡೆದು ಆರೋಗ್ಯ ಜಾಗೃತಿ ಮೂಡಿಸಿವೆ. ಈಗಾಗಲೇ ಎರಡು ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಪರೀಕ್ಷಿಸಿದ ಸಾಧನೆ ಇವರದ್ದು.

ಇಂಥ ಶಿಬಿರಗಳಲ್ಲಿ ಶಂಕಿತ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದರೆ ಮುಂದೆ ಶಿರಸಿ, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಅಥವಾ ಬೆಂಗಳೂರುಗಳಲ್ಲಿ ಶಂಕಿತರಿಗೆ ಹೆಚ್ಚಿನ ಉಚಿತ ತಪಾಸಣೆಗೆ ವ್ಯವಸ್ಥೆ ಮಾಡುವ ಆಪದ್ಬಾಂಧವನಾಗುತ್ತಾರೆ ಇವರು. ಕ್ಯಾನ್ಸರ್ ಸೊಸೈಟಿ ನೆರವಿನೊಂದಿಗೆ ಡಾ. ಸಚಿನ್ ಮತ್ತು ಲಕ್ಷ್ಮಿ ಅವರ ಸಹಕಾರದೊಂದಿಗೆ ರಿಯಾಜ್ ಅತ್ಯಂತ ಶಿಸ್ತುಬದ್ಧವಾಗಿ ಈ ಎಲ್ಲ ಚಟುವಟಿಕೆಗಳನ್ನೆಲ್ಲ ನಡೆಸುತ್ತಾರೆ.

ಒಟ್ಟಾರೆ ಬಡವರಿಗೆ ಅಂಟಿಕೊಂಡಿರುವ ಕ್ಯಾನ್ಸರಿನ ಕಷ್ಟ ಸಂಕಷ್ಟಗಳ ದಾಬಿನ ಕಣ್ಣಿ ಬಿಚ್ಚಿ ಹೊಸ ಜೀವನೋತ್ಸಾಹ ಮೂಡಿಸುವುದು ಇವರ ಗುರಿ. ಇನ್ನು ಮಹಿಳೆಯರ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಅವರು ತಮಗೆ ಮುಜುಗರ ಆಗುತ್ತದೆ ಎಂಬ ದೃಷ್ಟಿಯಿಂದ ತಪಾಸಣೆಗೆ ಬರುವುದಕ್ಕೆ ಕಬೂಲಾಗುವುದೇ ಇಲ್ಲ. ಇಂತಹವರ ಮನವೊಲಿಸಿ ವೈದ್ಯರ ಬಳಿಗೆ ಕರೆತರುವ ಯಮ ಸಾಹಸವನ್ನೂ ಇವರೇ ಮಾಡುತ್ತಾರೆ. ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಪೂರ್ಣ ಚಟುವಟಿಕೆ ನಡೆಸುವ ಕುರಿತು ಇವರು ಅನೇಕ ತರಬೇತಿ ಶಿಬಿರ ನಡೆಸಿ ಆರೋಗ್ಯ ಮಿತ್ರರಾಗಿದ್ದಾರೆ.

ಕ್ಯಾನ್ಸರ್ ಬಾರದಂತೆ ಮುಂಜಾಗ್ರತಾ ಕ್ರಮ ಹೇಗೆಲ್ಲ ಕೈಗೊಳ್ಳಬಹುದು? ತಂಬಾಕು, ಧೂಮಪಾನ ಮತ್ತಿತರ ಚಟಗಳಿಂದ ಮುಕ್ತರಾದರೆ ಕ್ಯಾನ್ಸರನ್ನು ಯಾವ ರೀತಿ ತಡೆಗಟ್ಟಬಹುದು ಎಂಬ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಆಂದೋಲನವನ್ನು ಇವರು ಅನೇಕ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಕೈಗೊಂಡಿದ್ದಾರೆ.

ಉಪನ್ಯಾಸ, ಲಿಖಿತ ಪರೀಕ್ಷೆ, ಚರ್ಚಾ ಸ್ಪರ್ಧೆ ಮುಂತಾದ ಚಟುವಟಿಕೆಗಳೊಂದಿಗೆ ಈ ಆರೋಗ್ಯ ಜಾಗೃತಿ ನಡೆಯುವುದರಿಂದ ಮಕ್ಕಳು ಸಹಜವಾಗಿಯೇ ಆಸಕ್ತಿಯಿಂದ ಭಾಗವಹಿಸಿ, ದುಶ್ಚಟಗಳ ಅಪಾಯ ಗ್ರಹಿಸುತ್ತಾರೆ ಮತ್ತು ಮನೆಯಲ್ಲಿ ಪಾಲಕರಿಗೆ ಕೂಡ ಈ ಬಗ್ಗೆ ಬುದ್ಧಿವಾದ ಹೇಳಿ ಪರಿವರ್ತನೆ ಮೂಡಿಸುವಷ್ಟು ಸಕಾರಾತ್ಮಕ ಬದಲಾವಣೆ ಬರುವಂತಾಗುತ್ತದೆ. ಈ ವಿದ್ಯಾರ್ಥಿಗಳು ಮುಂದೆ ಯೌವನಕ್ಕೆ ಬಂದಾಗ ಕೆಟ್ಟ ಚಟಗಳ ದಾಸರಾಗುವುದನ್ನು ತಪ್ಪಿಸುವುದಕ್ಕೂ ಇದು ತುಂಬಾ ಅನುಕೂಲ ಎಂಬುದು ರಿಯಾಜ್ ಅವರ ಅಭಿಪ್ರಾಯ.

ಶಿರಸಿಯ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಬನವಾಸಿ, ನಿಲೇಕಣಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀದೇವಿ ಕಾಲೇಜು, ಹುಲೇಕಲ್, ಶ್ರೀದೇವಿ ಪ್ರೌಢಶಾಲೆ, ಹುಲೇಕಲ್, ಕೊಳಗಿಬೀಸ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ, ಪ್ರೌಢಶಾಲೆ, ದೇವನಳ್ಳಿ, ತೇಲಂಗ ಪ್ರೌಢಶಾಲೆ, ಶಿರಸಿ, ಗಜಾನನ ಪ್ರೌಢಶಾಲೆ, ಹೆಗಡೆಕಟ್ಟಾ, ಸರ್ಕಾರಿ ಪ್ರೌಢಶಾಲೆ, ಇಸಳೂರು ಎಂ.ಇ.ಎಸ್. ನರ್ಸಿಂಗ್ ಕಾಲೇಜು, ಶಿರಸಿ ಸರ್ಕಾರಿ ಪ್ರೌಢಶಾಲೆ, ಬಿಳೂರು ಮುಂತಾದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.

ಕೆಲವರು ಕಟ್ಟಿಕೊಂಡ ಹೆಂಡತಿಯನ್ನಾದರೂ ಬಿಡಲಿಕ್ಕೆ ತಯಾರು, ಆದರೆ ತಂಬಾಕು ಜರ್ದ, ಬೀಡಿ ಸಿಗರೇಟು ಬಿಡುವುದಕ್ಕೆ ತಯಾರಿರುವುದಿಲ್ಲ. ಕೆಲವರಂತೂ ತಮಗೆ ಪಿತ್ರಾರ್ಜಿತವಾಗಿ ಬಂದಿರುವಂಥ ತಂಬಾಕು, ಗುಟ್ಕಾ ಬಿಟ್ಟರೆ ಬದುಕಿನಲ್ಲಿ ಇನ್ನೇನಿದೆ ಎಂದು ವಾದಿಸುತ್ತಾರೆ. ಇಂಥವರನ್ನು ಕೂರಿಸಿಕೊಂಡು ಕೌನ್ಸಿಲಿಂಗ್ ನೀಡಿ, ಮನ: ಪರಿವರ್ತನೆ ಮಾಡಿರುವ ಶ್ರೇಯಸ್ಸು ಕೂಡ ಇವರ ಅಸ್ಮಿತೆಗೆ ಸಲ್ಲುತ್ತದೆ. ಶಿವಮೊಗ್ಗದ ಮಲೆನಾಡು ಕ್ಯಾನ್ಸರ್ ಆಸ್ಪತ್ರೆ, ಶಿರಸಿಯ ಮನು ವಿಕಾಸ, ಸ್ಕೊಡ್ ವೆಸ್, ಆದರ್ಶ ವನಿತಾ ಸಮಾಜ ಚಿಪಗಿ ಮುಂತಾದ ಸಂಘ ಸಂಸ್ಥೆಗಳ ಸಹಯೋಗವು ಇವರ ಚಟುವಟಿಕೆಗಳಿಗೆ ಸಿಗುತ್ತಿವೆ.

ಕುವೆಂಪು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿಷಯದಲ್ಲಿ ಪದವಿ ಮತ್ತು ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮುಗಿಸಿ, ಸಾಗರ ಪ್ರಾಂತ್ಯದಲ್ಲಿ ಸ್ಪಂದನ ರಂಗತಂಡದ ಮೂಲಕ ನಾಟಕ ಕಲೆಗಳಲ್ಲಿ ಸಕ್ರಿಯರಾಗಿದ್ದ ರಿಯಾಜ್, ಸಂಗೀತ ಪ್ರಿಯರು. ಹಾಗಂತ ತೋಡಿ ರಾಗದಲ್ಲೇ ಬಾವಿ ತೋಡುವ ಪೈಕಿ ಇವರಲ್ಲ. ರಿಯಾಜ್ 15 ವರ್ಷಗಳ ಹಿಂದೆ ಶಿರಸಿಗೆ ಬಂದು ಸ್ಕೋಡವೇಸ್ ಸಂಸ್ಥೆಯ ಆರೋಗ್ಯ ವಿಭಾಗದ ಅಧಿಕಾರಿಯಾಗಿ ಅನುಭವ ಸಂಪಾದಿಸಿಕೊಂಡು, ತಮ್ಮ ಅಸ್ಮಿತೆ ಸಂಸ್ಥೆ ಕಟ್ಟಿದರು.

ಇವರ ಪತ್ನಿ ರೇಷ್ಮಾ ಮಾರಿಕಾಂಬ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿರುವುದರಿಂದ ಇವರ ಕುಟುಂಬ ಶಿರಸಿಯಲ್ಲಿಯೇ ನೆಲೆ ನಿಲ್ಲುವಂತಾಯಿತು. ಕ್ಯಾನ್ಸರ್ ವಿರೋಧಿ ಆಂದೋಲನ ಕೈಗೊಳ್ಳುವ ಯಾವುದೇ ಸದಾವಕಾಶವನ್ನು ರಿಯಾಜ್ ಅವರು ಮಿಸ್ ಮಾಡಿಕೊಳ್ಳುವುದಿಲ್ಲ. ಶಿರಸಿ ಮಾರಿ ಜಾತ್ರೆ ನಡೆಯುವಾಗ ಇವರು ಜಾತ್ರೆಪೇಟೆ ಸುತ್ತಾಡದೇ,, ಮಾರಮ್ಮನ ಗದ್ದುಗೆಯ ಕೆಳಗೆ ನಿಂತು ಅಲ್ಲಿಗೆ ಬಂದವರಿಗೆಲ್ಲ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಕರಪತ್ರ ಹಂಚುವಲ್ಲಿಯೇ ನಿರತರಾಗಿದ್ದರು.

ಶಿರಸಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆದಾಗ ಇವರು ಅಲ್ಲಿಯ ಚಪ್ಪರದಲ್ಲಿ ನಿಂತು ಪಂಚಕಜ್ಜಾಯದ ಪುಡಿ ಹಂಚುತ್ತಿರಲಿಲ್ಲ, ಬದಲಿಗೆ ಕ್ಯಾನ್ಸರ್ ಅಪಾಯದ ಕರಪತ್ರದ ಪ್ರತಿ ಹಂಚುತ್ತಿದ್ದರು. ಹೀಗೆ ಕುಂತ್ರು ನಿಂತ್ರು ಇವರಿಗೆ ಕ್ಯಾನ್ಸರಿಗೆ ಗುದುಮುರಿಗೆ ಹಾಕುವುದು ಹೇಗೆಂಬ ಚಿಂತೆ.

 

ಬುಡಕಟ್ಟು ಜನಾಂಗದ ಅಧ್ಯಯನ ಇವರ ಮತ್ತೊಂದು ಅಪರೂಪದ ಆಸಕ್ತಿ. ಸಿದ್ದಿ ಸಮುದಾಯದ ಅಭಿವೃದ್ಧಿಗೆ ಇರುವ ಸವಾಲು, ಸಮಸ್ಯೆಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಇವರು ಡಾಕ್ಟರೇಟ್ ಪ್ರಬಂಧವನ್ನು ಬರೆದು ಪಿಎಚ್. ಡಿ ಸಂಪಾದಿಸಿದರು. ಯಲ್ಲಾಪುರ, ಉಮ್ಮಚಗಿ, ಮಂಚಿಕೇರಿ ಸುತ್ತಮುತ್ತ ಸುಮಾರು 800 ಸಿದ್ದಿ ಕುಟುಂಬಗಳನ್ನು ಪ್ರತ್ಯಕ್ಷ ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿ, ಪರಿಹಾರ ಸೂಚಿಸಿ ಇವರು ಸಿದ್ಧಪಡಿಸಿರುವ ಪಿಎಚ್. ಡಿ. ಮಹಾ ಪ್ರಬಂಧವು ಶೀಘ್ರದಲ್ಲಿಯೇ ಪುಸ್ತಕ ರೂಪವಾಗಿ ಪ್ರಕಟವಾಗಲಿದೆ.

ಮನುಷ್ಯನಾಗಿ ಹುಟ್ಟಿದ್ದು ಕೇವಲ ಬಿರಿಯಾನಿ ತಿನ್ನುವುದಕ್ಕಲ್ಲ, ಬದಲಿಗೆ ಸಮಾಜಕ್ಕೆ ಅನುಕೂಲವಾಗುವಂಥ ಒಂದಷ್ಟು ಕೆಲಸ ಮಾಡಬೇಕು ಎಂದು ನಂಬಿರುವ ರಿಯಾಜ್, ರಾಣಿ ಚೆನ್ನಮ್ಮ ಎಕ್ಸಪ್ರೆಸ್ ರೈಲಿನಂತೆ ವೇಗವಾಗಿ ಕೆಲಸ ಮಾಡುತ್ತಾರೆ.

ಕೊನೆಗೊಂದು ಜೋಕ್ : ಸ್ವಯಂ ಸೇವಾ ಸಂಸ್ಥೆ ನಡೆಸುವಾಗ ಲಾಭ ನಷ್ಟದ ಲೆಕ್ಕಚಾರ ಹಾಕುತ್ತಾ ಕುಳಿತುಕೊಳ್ಳುವುದಲ್ಲ. ಲಾಭ ನಷ್ಟ ನೋಡಿದರೆ ಕೋಳಿ ಮರಿ ವ್ಯಾಪಾರವನ್ನಾಗಲಿ ಅಥವಾ ಕೋತಿ ಮರಿ ಮಾರಾಟವನ್ನಾಗಲೀ ಮಾಡುತ್ತಾ ಕುಳಿತುಕೊಳ್ಳಬೇಕಾದೀತು… ಸ್ವಯಂ ಸೇವೆಯನ್ನಲ್ಲ!

ಕೆಲವರು ಜಿರಳೆ, ತಿಗಣೆ, ಸೊಳ್ಳೆ ಹೆಸರಿನಲ್ಲಿ ಕೆಲಸಕ್ಕೆ ಬಾರದ ಹೋರಾಟ, ಹಾರಾಟ, ಚೀರಾಟ, ತೂರಾಟ ಮಾಡುವವರಿದ್ದಾರೆ. ಆದರೆ ರಿಯಾಜ್ ಅವರಂತೆ ಕ್ಯಾನ್ಸರಿನಂಥ ಜೀವ ವಿರೋಧಿ ಪಿಡುಗಿನ ವಿರುದ್ಧವಾದರೂ ಹೋರಾಡಿ, ಜೀವನ್ಮರಣದ ಸ್ಥಿತಿಯಲ್ಲಿ ಹೋರಾಡುತ್ತಿರುವವರಿಗೆ ನೆರವಾಗಿದ್ದರೆ, ಆ ಶಿವನಾದ್ರೂ ಮೆಚ್ಚುತ್ತಿದ್ದನೇನೋ.


  • ರಾಜು ಅಡಕಳ್ಳಿ – ಪತ್ರಕರ್ತರು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading