ಕಿವಿಕೊಡದಿರು ಚಾಡಿ ಮಾತಿಗೆ, ಹುಳಿಯ ಹಿಂಡದಿರು ಕುಡಿವ ಹಾಲಿಗೆ… ಕವಿ ಪ್ರೊ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಹಚ್ಚ ಹಸಿರಾಯಿತು ಕಾಡಿಗೆ
ಹಸಿರುಸಿರಾಯಿತು ಜೀವನಾಡಿಗೆ
ಹೃದಯದಲ್ಲಿ ಪ್ರೀತಿಗಿಲ್ಲ್ಯಾವ ಬಾಡಿಗೆ.
ಚಿಂತೆಯೇಕೆ ತಮ್ಮ ನಾಳಿಗೆ
ಕಿತ್ತಾಡಬೇಡ ಹೊಟ್ಟೆ ಕೂಳಿಗೆ
ಬೆವರು ಬೆಳಕಾಗಲಿ ನಿನ್ನ ಬಾಳಿಗೆ.
ಕಿವಿಕೊಡದಿರು ಚಾಡಿ ಮಾತಿಗೆ
ಮಿಥ್ಯ ನುಡಿಯದಿರಲಿ ನಿನ್ನ ನಾಲಿಗೆ
ಹುಳಿಯ ಹಿಂಡದಿರು ಕುಡಿವ ಹಾಲಿಗೆ.
ನುಗ್ಗದಿರು ಕರಿಯ ಹಾಗೆ
ತಲೆ ತಗ್ಗಿಸದಿರು ಕುರಿಯ ಹಾಗೆ
ಅಂಬೆಗಾಲಿಡಬೇಡ ಮರಿಯ ಹಾಗೆ.
ಆಹಾರವಾಗದಿರು ಕೆರೆಗೆ
ರಾಗ ದ್ವೇಷ ಕಕ್ಕದಿರು ಹೊರಗೆ
ಪರರಾಡುವುದು ಕೇಳಬೇಡ ನಿಂತು ಮರೆಗೆ.
ಹಕ್ಕಿ ಮರಳಿ ತನ್ನ ಗೂಡಿಗೆ
ಹರುಷದ ಹೊನಲು ಹೊಸ ಜೋಡಿಗೆ
ಮನವು ತಣಿಯಿತು ಅನುರಾಗದ ಹಾಡಿಗೆ.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
