ಕಣ್ಣಿಗೆ ಹಚ್ಚಿದ ಕಾಡಿಗೆ, ಹೂನಗೆ ಚೆಂದ ಬಳುಕುವ ಹೆಣ್ಣಿಗೆ…ಕವಿ ಪ್ರೊ.ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ನಗು ಚೆಂದ ಬಳುಕುವ ಹೆಣ್ಣಿಗೆ
ಮಳೆ ವಾಸನೆ ಹೀರುವಾಸೆ ಮಣ್ಣಿಗೆ
ಮನ ತಣಿವ ಮೋಹಕ ನೋಟ ಕಣ್ಣಿಗೆ.
ಸಿರಿ ಕಂಠ ದಾನ ಕೋಗಿಲೆಗೆ
ಮೃದು ಮನಸು ಜಾಜಿ ಮಲ್ಲಿಗೆ
ಮನ ಮೋಹಕ ನಾಟ್ಯ ಕುಣಿವ ನವಿಲಿಗೆ.
ಕಣ್ಣಿಗೆ ಹಚ್ಚಿದ ಕಾಡಿಗೆ
ಮನಸು ಮರುಳು ಮೋಡಿಗೆ
ಹೂನಗೆ ಚೆಂದ ಬಳುಕುವ ಹೆಣ್ಣಿಗೆ.
ನಾದ ನೀನು ಕಾಲ್ಗೆಜ್ಜೆಗೆ
ಬೆಳ್ಳಕ್ಕಿ ಸಾಲು ಹಾರಿದಂತೆ ಬಾನಿಗೆ
ಹೃದಯ ಮುದಗೊಂಡಿದೆ ನಿನ್ನ ಹಾಡಿಗೆ.
ಬೆಳದಿಂಗಳು ಚೆಲ್ಲಿದ ಮಲ್ಲಿಗೆ
ತಂಗಾಳಿ ಸೋಕಿ ಅರಳಿದೆ ಮೆಲ್ಲಗೆ
ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ಹೊರಟಿದಿ ನೀನೆಲ್ಲಿಗೆ.
ಮನಸು ಬಣ್ಣಹಚ್ಚಿದೆ ಕಾಮನ ಬಿಲ್ಲಿಗೆ
ಅಂತರಂಗದ ನಿನಾದ ಕೇಳಿಸುತ್ತಿದೆ ಕಲ್ಲು ಕಲ್ಲಿಗೆ
ದುಂಬಿಯಂತೆ ಮನಸು ಹಾರುತ್ತಿದೆ ಹೂವಿಂದ ಹೂವಿಗೆ.
- ಪ್ರೊ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.
