ಪ್ರಕಾಶಕರಾದ ನಿಡುಸಾಲೆ ಪುಟ್ಟಸ್ವಾಮಯ್ಯ ಅವರ ಪ್ರಕಾಶನದಲ್ಲಿ ಮೂಡಿದ ಡಾ.ಎಚ್ .ಗಿರಿಜಮ್ಮ ಅವರ ಆತ್ಮಕಥನ ‘ಕಾಡುತಾವ ನೆನಪುಗಳು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಾಡುತಾವ ನೆನಪುಗಳು
ಲೇಖಕರು : ಡಾ.ಎಚ್ .ಗಿರಿಜಮ್ಮ
ಪ್ರಕಾಶಕರು : ನಿಡುಸಾಲೆ ಪುಟ್ಟಸ್ವಾಮಯ್ಯ
ಪ್ರಕಾಶನ : ಗೀತಾಂಜಲಿ
ಪ್ರಕಾಶಕರಾದ ನಿಡುಸಾಲೆ ಪುಟ್ಟಸ್ವಾಮಯ್ಯ ಅವರು ಈ ಕೃತಿಯನ್ನು ಮುಂದೆ ಬಂದು ಪ್ರಕಟಿಸಿರುವುದಲ್ಲದೆ, ಅದರ ಅಂತರಂಗವನ್ನು ಬಯಲು ಮಾಡುವ ಪುಟ್ಟ ಬೆನ್ನುಡಿಯನ್ನು ಕೂಡಾ ಬರೆದಿದ್ದಾರೆ ಎಂಬುದು ಈ ಕೃತಿಯ ಮಹತ್ವವನ್ನು ಸಾರುತ್ತದೆ.
ಈ ಕೃತಿ ಅವರ ಆತ್ಮಾವಲೋಕನದ ಬರಹವಾಗಿ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿರುವ ಆತ್ಮಚರಿತ್ರೆಗಳಿಗಿಂತ ಭಿನ್ನವಾಗಿದೆ. ಇದಕ್ಕೆ ಕಾರಣ ಇದು ಪ್ರಸಿದ್ದ ವೈದ್ಯೆಯೊಬ್ಬರ ಅಂತರಂಗದ ನಿವೇದನೆಯಾಗಿರುವುದು. ಇವರ ವ್ಯಕ್ತಿತ್ವಕ್ಕೆ ಹಲವು ಮುಖಗಳಿವೆ. ಅವು ಜನಪ್ರಿಯ ಪ್ರಸಿದ್ದ ಪ್ರಸೂತಿ ತಜ್ಞೆ, ಜನಪ್ರಿಯ ಲೇಖಕಿ, ಟೆಲಿಫಿಲ್ಮ್ ನಿರ್ದೇಶಕಿ, ವೈದ್ಯಕೀಯ ಬರಹಗಾರ್ತಿ, ಕೌಟುಂಬಿಕ ವ್ಯಕ್ತಿ.

ಜನಪ್ರಿಯ ಪ್ರಸಿದ್ದ ಪ್ರಸೂತಿ ತಜ್ಞೆಯಾದ ಇವರು ತಾವು ಪ್ರಸೂತಿ ಮಾಡಿಸಿದ ಮಗುವೊಬ್ಬರನ್ನು ಹಲವು ವರ್ಷಗಳ ಕಾಲ ಸಾಕಿಕೊಂಡು, ಅವಳಿಗೆ ಹೇಳಿದಂತೆ ಈ ಬರಹವಿದೆ. ಆಕೆಯೂ ಈಗ ವೈದ್ಯೆಯಾಗಿರುವುದರಿಂದ , ತಮ್ಮ ಅಂತರಂಗವನ್ನು ಬಯಲುಗೊಳಿಸಿದರೆ, ಅದನ್ನು ಅರ್ಥಮಾಡಿಕೊಳ್ಳಬಹುದೆಂಬ ವಿಶ್ವಾಸವೇ , ಈ ಕೃತಿ ಈ ರೂಪದಲ್ಲಿ ಮೈದಳೆಯಲು ಕಾರಣವಾಗಿದೆ.
ಅವರು ತನ್ನ ದಾದಿಯಾದ ಅಮ್ಮನ ಕನಸನ್ನು ಈಡೇರಿಸಲೆಂದು, ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಓದಿ, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ನೇಮಕಾತಿ ಪಡೆದಾಗ , ತಾನು ತನ್ನ ಅಮ್ಮನ ಕನಸನ್ನು ಈಡೇರಿಸಿದೆ ಎಂದು ಸಂಭ್ರಮ ಪಡುತ್ತಾರೆ. ಅಲ್ಲಿ ಹಗಲಿರುಳೆನ್ನದೆ ಕರ್ತವ್ಯದ ಕರೆಗೆ ಓಗೊಟ್ಟು ದುಡಿಯುತ್ತಾರೆ. ಅಲ್ಲಿಂದ ಅವರ ಹುಟ್ಟೂರಾದ ದಾವಣಗೆರೆಗೆ ವರ್ಗವಾದಾಗ ತನ್ನ ತಾಯಿಯ ಜತೆಗೆ ಇರಬಹುದೆಂದು ಸಂಭ್ರಮ ಪಡುತ್ತಾರೆ. ಅಲ್ಲಿ ಪಡೆದ ಯಶಸ್ಸಿನಿಂದಾಗಿ, ತಮ್ಮದೆ ಆದ ಒಂದು ನರ್ಸಿಂಗ್ ಹೋಮನ್ನು ಆರಂಭಿಸುತ್ತಾರೆ. ಅಲ್ಲದೆ ಖಾಸಗಿಯಾಗಿ ನರ್ಸಿಂಗ ಹೋಮ್ ನಡೆಸುವಾಗ ಸರಕಾರದ ವೃತ್ತಿಯಲ್ಲಿ ಮುಂದುವರೆಯುವುದು ಸರಿಯಲ್ಲ ಎಂದು ಅದಕ್ಕೆ ರಾಜೀನಾಮೆ ನೀಡುತ್ತಾರೆ. ಅಲ್ಲಿ ಎದುರಿಸಿದ ರಾಜಕೀಯ ಒತ್ತಡ ಅವರ ವೃತ್ತಿಯಲ್ಲಿನ ನೆಮ್ಮದಿಯನ್ನು ಕಸಿಯುತ್ತದೆ. ಆಗ ಅವರು ಮುಂದೆ ಬಂದ ಖಾಸಗಿಯವರಿಗೆ ಅದನ್ನು ಮಾರುತ್ತಾರೆ. ಇವರು ಕೊಟ್ಟ ರಾಜೀನಾಮೆ ಅಂಗೀಕೃತವಾಗದೆ. ಇವರನ್ನು ಕನಕಪುರದ ಸರಕಾರಿ ಆಸ್ಪತ್ರೆಗೆ ನೇಮಿಸಲಾಗುತ್ತದೆ. ಆಗ ದಾವಣಗೆರೆಯಿಂದ ಮರಳಿ ಬಂದು ಕನಕಪುರದ ಆಸ್ಪತ್ರೆಗೆ ಸೇರುತ್ತಾರೆ.
ಅಲ್ಲೆ ಇರಲು ಅವರಿಗೆ ಆಸ್ಪತ್ರೆಯವರಿಂದ ಮನೆ ಕೂಡಾ ದೊರೆಯುತ್ತದೆ. ಆದರೂ ಆಗಾಗ ಬೆಂಗಳೂರಿನ ಮನೆಗೆ ಬಂದು ಹೋಗುತ್ತಿರುತ್ತಾರೆ. ಕೌಟುಂಬಿಕ ವೃತ್ತಿಯಲ್ಲಿ ತೃಪ್ತಿಯಿದ್ದರೂ, ಕೌಟುಂಬಿಕ ನೆಮ್ಮದಿಯಿಲ್ಲದೆ, ಅದಕ್ಕೆ ರಾಜೀನಾಮೆ ನೀಡಿ, ಬೆಂಗಳೂರಿನ ಮನೆಯನ್ನು ಮಾರಿ, ಮತ್ತೆ ದಾವಣೆಗೆರೆಯಲ್ಲಿ ದೊಡ್ಡ ಮನೆ ಮಾಡಿ, ತನ್ನ ರೋಗಿಷ್ಠ ಅಮ್ಮನನ್ನು ಕರೆದುಕೊಂಡು ಬಂದು ಇಟ್ಟುಕೊಂಡು, ಅವರ ಸೇವೆಯಲ್ಲಿ ತೊಡಗುತ್ತಾರೆ. ಅವರಿಗೆ ಹೃದಯದ ತೊಂದರೆ ಇದ್ದುದರಿಂದ ಅವರಿಗೆ ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ. ಅದರಲ್ಲಿ ಯಶಸ್ವಿಯಾಗಿ ಚೇತರಿಸಿಕೊಳ್ಳುತ್ತಲೆ ಮತ್ತೆ ಮಂಚದಿಂದ ಕೆಳಗೆ ಬಿದ್ದು ಮೂಳೆ ಮುರಿದುಕೊಳ್ಳುತ್ತಾರೆ. ಮತ್ತೆ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವೆಂದು ತಿಳಿದಾಗ, ಅವರಿಗೆ ಪ್ರತ್ಯೇಕ ಖಾಸಗಿ ಕೋಣೆಯನ್ನು ಹೊಂದಿಸಿಕೊಟ್ಟು ಅವರ ಸೇವೆಯಲ್ಲಿ ತೊಡಗಿದರೂ, ಚೇತರಿಸಿಕೊಳ್ಳದೆ ಕಡೆಗೂ ಮೃತ ಹೊಂದುತ್ತಾರೆ. ಇದು ಇವರು ಮೇಲೆ ಅನನ್ಯವಾದ ಆಘಾತವನ್ನುಂಟು ಮಾಡಿ ಖಿನ್ನತೆಗೆ ಜಾರುತ್ತಾರೆ. ಪ್ರಸಿದ ಮನೋವೈದ್ಯರಾದ ಡಾ.ಸಿ.ರ್ ಚಂದ್ರಶೇಖರ್ (ನಮ್ಮ ಪುಸ್ತಕ ಬಿಡುಗಡೆ ಮಾಡಿದ) ಅವರ ಮೊರ ಹೋಗುತ್ತಾರೆ. ಅವರು ಇವರಿಗೆ ಧೈರ್ಯ ಹೇಳಿ, ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ತಿಳಿಸುತ್ತಾರೆ. ಅದರಂತೆ ಮಾತ್ರೆಗಳನ್ನು ತೆಗೆದುಕೊಂಡರೂ ಖಿನ್ನತೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ.
ಕೌಟುಂಬಿಕ ಸಮಸ್ಯೆಯ ಇನ್ನೊಂದು ಮುಖವೆಂದರೆ ಇವರ ಖಾಸಗಿ ಸಂಬಂಧಗಳಿಗೆ ಸಂಬಂಧಿಸಿದ್ದು. ಮೊದಲಿಗೆ ಇವರು ವೈದ್ಯಕೀಯ ಓದುವಾಗಲೆ ಇವರಿಗೆ ಪಾಠಮಾಡುತ್ತಿದ್ದ ಪ್ರಾಧ್ಯಾಪಕರ ಮೋಹಕ್ಕೆ ಒಳಗಾಗಿ ಅವರು ಅದನ್ನು ತಿರಸ್ಕರಿಸಿದಾಗ ಉಂಟಾದ ವಿಷಾದ ಇವರನ್ನು ಜರ್ಜರಿತನ್ನಾಗಿಸುತ್ತದೆ. ನಂತರ ಇನ್ನೊಬ್ಬ ಅನರ್ಹ ವ್ಯಕ್ತಿಯ ಮೋಹಕ್ಕೆ ಒಳಗಾಗಿ, ಅವನಿಗೆ ಇಡಿಯಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಅವನು ಉಂಡ ಬಾಳೆಲೆಯನ್ನು ಎಸೆದಂತೆ ಇವರನ್ನು ಎಸೆಯುತ್ತಾನೆ. ನಂತರ ಇವರ ಜತೆಗೆ ಸಹಕರಿಸಲು ಬಂದ ಅವರ ತಮ್ಮನ ಜೊತೆಗೆ ಸಮಾಜಕ್ಕೆ ಹೆದರಿ ಮದುವೆಯಾಗುತ್ತಾರೆ. ಅವನು ಕೂಡ ಲಂಪಟ ಮತ್ತು ಕುಡುಕನಾಗಿ ಇವರ ವಿಶ್ವಾಸಕ್ಕೆ ಅಪಾತ್ರನಾಗುತ್ತಾನೆ. ಕಡೆಗೆ ಇವರು ಅವರ ದುರ್ನಡತೆಯಿಂದ ರೋಸಿ ಹೋಗಿ, ಅವನಿಗೆ ವಿಚ್ಛೇದನೆ ಕೊಡುವ ಮೂಲಕ ಅವನಿಂದ ಬಿಡುಗಡೆ ಪಡೆಯುತ್ತಾರೆ. ಅವರೆ ಒಂದು ಕಡೆ ಉಪ್ಪು, ಹುಳಿ, ಖಾರ ತಿನ್ನುವ ತನ್ನ ದೇಹದ ತೆವಲುಗಳಿಗೆ ಮಾರು ಹೋಗಿ ತಾನು ಇಂತಹ ತಪ್ಪುಗಳನ್ನು ಮಾಡಬೇಕಾಯಿತು ಎಂದು ಸಂಬಂಧಗಳ ವೈಫಲ್ಯಗಳ ಹೊಣೆಯನ್ನು ಅವರೆ ಹೊತ್ತುಕೊಳ್ಳುವುದು. ಇದರಿಂದಾಗಿ ಮನೆಯವರ ಜೊತೆಗಿನ ಸಂಬಂಧಗಳಿಗೆ ಅವರು ಎರವಾಗಬೇಕಾಯಿತು. ಇದು ಅವರ ಆತ್ಮಾವಲೋಕನಕ್ಕೆ ಕೂಡಾ ಕಾರಣವಾಗುತ್ತದೆ.
ಲೇಖಕಿಯಾಗಿ ಇವರು ಓದಿದ ಹಲವಾರು ಕನ್ನಡ ಇಂಗ್ಲಿಷ್ ಸಾಹಿತ್ಯ ಕೃತಿಗಳನ್ನು ಇವರಿಗೆ ಲೇಖಕಿಯಾಗಿ ರೂಪುಗೊಳ್ಳಲು ಪ್ರೇರಣೆ ನೀಡುತ್ತದೆ. ಅದರ ಪರಿಣಾಮವೋ ಎನ್ನುವಂತೆ ಇವರು ಹಲವಾರು ಕತೆ, ನೀಳ್ಗತೆ, ಕಾದಂಬರಿ ಬರೆದು ಯಶಸ್ವಿಯಾಗುತ್ತಾರೆ. ಅದಕ್ಕೆ ಅಂದಿನ ವಿವಿಧ ಜನಪ್ರಿಯ ಪತ್ರಿಕೆಗಳಾದ ಸುಧಾ, ಮಯೂರ, ತರಂಗ ಪತ್ರಿಕೆಗಳ ಸಂಪಾದಕರು ಮತ್ತು ತನ್ನ ಕಾದಂಬರಿಗಳನ್ನು ಪ್ರಕಟಿಸಲು ಮುಂದೆ ಬಂದ ಗೀತಾಂಜಲಿ ಪಬ್ಲಿಕೇಷನ್ಸ್ ನ ನಿಡುಸಾಲೆ ಪುಟ್ಟಸ್ವಾಮಯ್ಯರಂತಹ ಪ್ರಕಾಶಕರೆ ಕಾರಣ ಎಂದು ಕೃತಜ್ಞತೆಯಿಂದ ಸ್ಮರಿಸಿ, ತಮ್ಮ ಋಣಸಂದಾಯ ಮಾಡಿರುವುದು ಅವರ ಕೃತಜ್ಞತೆಯ ದ್ಯೋತಕವಾಗಿದೆ.

ಟೆಲಿಫಲ್ಮ್ ನಿರ್ದೇಶಕರಾಗಿ ರೇಡಿಯೋ ನಾಟಕಗಳನ್ನು ಬರೆಯುತ್ತಿದ್ದ ಇವರನ್ನು, ನೀವು ಯಾಕೆ ಟೆಲಿಫಿಲ್ಮ್ ನಿರ್ದೇಶಿಸಬಾರದು ಎಂದಾಗ ಇವರು ದೂರದರ್ಶನಕ್ಕೆ ಟೆಲಿಫಿಲ್ಮನ್ನು ಕೂಡಾ ನಿರ್ದೇಶಿಸಿ ಯಶಸ್ವಿಯಾಗುತ್ತಾರೆ.( ಮಯೂರದಲ್ಲಿ ಪ್ರಕಟವಾಗಿದ್ದ ಅವರ ಕತೆ ಹತ್ಯೆ) ಇದರಿಂದಾಗಿ ಅವರಿಗೆ ಒಳ್ಳೆಯ ಮಾಧ್ಯಮಗಳ ಸ್ನೇಹಿತರು ದೊರೆತದ್ದಲ್ಲದೆ, ಜನಪ್ರಿಯತೆ , ಪ್ರಸಿದ್ದಿ ಮತ್ತು ಹಣಗಳನ್ನು ಕೂಡಾ ತಂದುಕೊಡುತ್ತದೆ.
ಆದರೆ ಇವು ಯಾವುದೂ ಕೂಡಾ ಅವರಿಗೆ ಬೇಕಾದ ಕೌಟುಂಬಿಕ ನೆಮ್ಮದಿ ಮತ್ತು ಪ್ರೀತಿಗಳನ್ನು ತಂದುಕೊಡಲು ಸಾಧ್ಯವಾಗುವುದಿಲ್ಲ.
ಶಿಕ್ಷಣ: ಶಿಕ್ಷಣದಲ್ಲಿ ಭದ್ರ ಬುನಾದಿ ಹಾಕಿದ ಶ್ರೇಯಸ್ಸು ದಾದಿಯಾದ ಅವರ ಅಮ್ಮನಿಗೆ ಸಲ್ಲುತ್ತದೆ. ಎಸ್ ಎಸ. ಎಲ್ ಸಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಇವರ ದ್ವಿತೀಯ ಭಾಷೆ ಸಂಸ್ಕೃತವಾದ್ದರಿಂದ, ಇವರು ವೈದ್ಯಕೀಯ ಶಿಕ್ಷಣ ಪಡೆದ ವೈದ್ಯೆಯಾದರೂ ಸರಕಾರಿ ವೈದ್ಯಯಾಗಿ ನೇಮಕಗೊಳ್ಳಲು ಕನ್ನಡ ಜ್ಞಾನ ಅಗತ್ಯವಾದುದರಿಂದ, ಇವರು ಮೈಸೂರು ವಿಶ್ವವಿದ್ಯಾಲಯದಿಂದ ಅಂಚೆ ತೆರಪಿನ ಶಿಕ್ಣಣದಲ್ಲಿ ಕನ್ನಡ ಎಂ ಎ. ಮಾಡುತ್ತಾರೆ ಮತ್ತು ಇಂಗ್ಲಿಷನಲ್ಲಿ ಡಿಪ್ಲೊಮಾ ಪಡೆಯುತ್ತಾರೆ. ಇವರು ಡಿ.ಲಿ.ಟ್ ಮಾಡಬೇಕು ಎಂದಾಗ ಇವರ ಪರಿಚಯದ ನನ್ನ ಮೇಷ್ಟ್ರು ಚಂದ್ರಶೇಖರ ಕಂಬಾರರು ಮನೋವಿಜ್ಞಾನದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ಮಾಡಲು ಹೇಳುತ್ತಾರೆ. ಅವರ ಸಲಹೆಯಂತೆ ಪ್ರಬಂಧ ಬರೆದು ಒಪ್ಪಿಸಿ ಅಲ್ಲಿಂದ ಡಿ.ಲಿ.ಟ್ ಪದವಿ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಸಾಮಾನ್ಯವಾಗಿ ತಮ್ಮ ತಪ್ಪುಗಳನ್ನು ಇತರರ ಮೇಲೆ ಇಲ್ಲವೆ ವಿಧಿ, ಹಣೆಬರಹ, ಕರ್ಮ ಇತ್ಯಾದಿಗಳ ಮೇಲೆ ಹೊರೆಸಿ ಪಾರಾಗುವ ಪಲಾಯನವಾದವನ್ನು ಬಿಟ್ಟು, ತಮ್ಮ ತಪ್ಪುಗಳಿಗೆ ತಾವೇ ಹೊಣೆ ಹೊತ್ತುಕೊಳ್ಳುವುದು. ಇವರ ಆತ್ಮಚರಿತ್ರೆಯ ವೈಶಿಷ್ಟ್ಯ.

ಇಷ್ಟೆಲ್ಲಾ ಡಿಗ್ರಿಗಳನ್ನು ಪಡೆದ ನಂತರ ಕೂಡಾ ತಾನು ಕೌಟುಂಬಿಕ ಬದುಕಿನಲ್ಲಿ ಯಶಸ್ವಿಯಾಗದಿರಲು ಕಾರಣ ತಾನು ಬದುಕಲು ಬೇಕಾದ ಜಾಣ್ಮೆ , ಸ್ಪೂರ್ತಿ, ಪ್ರೀತಿಗಳನ್ನು ಸರಿಯಾಗಿ ಬೆಳೆಸಿಕೊಳ್ಳದೆ ಹೋದದ್ದು ಎಂದು ಸರಿಯಾದ ನಿರ್ಧಾರಕ್ಕೆ ಬಂದು ತನ್ನ ಬದುಕಿನ ವೈಫಲ್ಯಕ್ಕೆ ತನ್ನ ತಪ್ಪು ನಿರ್ಧಾರಗಳೆ ಕಾರಣ ಎಂದು ಮನವರಿಕೆಯಾಗುತ್ತದೆ. ತಾನು ಮಾಡಿದ ತಪ್ಪುಗಳನ್ನು ಇತರರು ಮಾಡದಿರಲಿ ಎಂದೇ ತಾನು ಈ ಆತ್ಮಕತೆಯನ್ನು ಬರೆದಿರುವುದು ಎಂದು ಒಪ್ಪಿಕೊಂಡಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಚಿತ್ರಗಳು ಅವರ ಸಾಧನೆಗೆ ಕನ್ನಡಿ ಹಿಡಿಯುತ್ತವೆ.
ಇಂತಹ ಅಪರೂಪದ ಆತ್ಮಚರಿತ್ರೆಯನ್ನು ಬರೆದ ಲೇಖಕಿಗೂ, ಪ್ರಕಟಿಸಿದ ಮತ್ತು ಚಂದದ ಬೆನ್ನುಡಿಯನ್ನು ಕೂಡಾ ಬರೆದಿರುವ ಪ್ರಕಾಶಕರಾದ ನಿಡುಸಾಲೆ ಪುಟ್ಟಸ್ವಾಮಯ್ಯನವರಿಗೆ ಅಭಿನಂದನೆ
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
