ಅಂಗೈಯಲ್ಲಿ ಪ್ರಪಂಚ (ಭಾಗ- ೩೯)

ರೈತರಿಂದ ಕೊಂಡು ಗ್ರಾಹಕನಿಗೆ ಮಾರುವವನೇ ಮಧ್ಯವರ್ತಿ. ಆದರೆ ರೈತ ಭಾಷಾ ಸಮಸ್ಯೆಯಿಂದ ಅವನು ಮಧ್ಯವರ್ತಿಗಳ ಮೇಲೆ ಅವಲಂಬಿತನಾಗಿರುತ್ತಾನೆ. ಮಧ್ಯವರ್ತಿಗಳು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸುತ್ತಾರೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮಧ್ಯವರ್ತಿಗಳು’ ತಪ್ಪದೆ ಮುಂದೆ ಓದಿ…

ಇಬ್ಬರ ಮಧ್ಯದಲ್ಲಿ ಸಂವಹನೆ ನಡೆಸಲು ಅವಶ್ಯಕವಿರುವ ಮೂರನೇ ವ್ಯಕ್ತಿ ಎನ್ನಬಹುದು. ಇದು ಈಗ ವ್ಯಕ್ತಿಗೆ ಮಾತ್ರ ಸೀಮಿತವಾಗಿರದೇ ಸಹಕಾರ ಸಂಘಗಳು, ವಿವಿಧ ರೀತಿಯ ಸಂಸ್ಥೆಗಳವರೆಗೂ ವಿಸ್ತರಿಸಿದೆ. ಮಧ್ಯವರ್ತಿಗಳು, ದಲ್ಲಾಳಿ, ಬ್ರೋಕರ್ ಎಂದು ಕರೆಯಿಸಿಕೊಳ್ಳುವ ಇವರು ಸಮಾಜಕ್ಕೆ ಅವಶ್ಯಕತೆಯೂ ಹೌದು, ಅನಿವಾರ್ಯವೂ ಹೌದು.

ಬೆಳೆಗಾರರಿಗೂ ಗ್ರಾಹಕರಿಗೂ ಮಧ್ಯದಲ್ಲಿ ಸಂಪರ್ಕ ಕಲ್ಪಿಸುವುದು ಈ ಮಧ್ಯವರ್ತಿಗಳೇ. ಪ್ರತಿಯೊಬ್ಬ ಗ್ರಾಹಕನಿಗೂ ಮಾರುಕಟ್ಟೆಗೆ ಹೋಗಿ ತನ್ನ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಮಾರುಕಟ್ಟೆಯಲ್ಲಿ ಬೆಲೆಯಲ್ಲಿನ ಏರಿಳಿತ, ಅವಶ್ಯಕತೆ ಎಲ್ಲವನ್ನೂ ಗಮನಿಸಿ ವ್ಯಾಪಾರ ಮಾಡಬೇಕಾಗುತ್ತದೆ. ಅದರಂತೆ ಪ್ರತಿ ಗ್ರಾಹಕನು ಒಂದೊಂದು ಪದಾರ್ಥಕ್ಕೂ ಬೇರೆ ಬೇರೆ ರೈತರ ಬಳಿ ಹೋಗಿ ಕೊಂಡುಕೊಳ್ಳುವುದು ಅಸಾಧ್ಯದ ಮಾತು. ಇಲ್ಲಿ ಇವರಿಬ್ಬರನ್ನು ಬೆಸೆಯುವ ಕೊಂಡಿಯೇ ಮಾರುಕಟ್ಟೆ. ರೈತರಿಂದ ಕೊಂಡು ಗ್ರಾಹಕನಿಗೆ ಮಾರುವವನೇ ಮಧ್ಯವರ್ತಿ. ತಾನು ಮಾಡುವ ಕೆಲಸಕ್ಕೆ ಲಾಭವಿಟ್ಟುಕೊಂಡೇ ಅವನು ಕೆಲಸ ಮಾಡುವುದು. ಆ ಲಾಭದ ಮಟ್ಟ ಎಷ್ಟೆಂದರೆ ಎಷ್ಟೋ ಬಾರಿ ರೈತನಿಗಿಂತ ಹೆಚ್ಚಿನ ಲಾಭ ಮಧ್ಯವರ್ತಿಗೇ ಆಗುತ್ತದೆ. ಕೆಲವೊಮ್ಮೆ ಬೆಲೆ ಇಲ್ಲದೇ ಅನಿವಾರ್ಯವಾಗಿ ಮಧ್ಯವರ್ತಿಯ ಕೈಗೆ ಕೊಟ್ಟು ಹೋಗುವ ಸಂಭವ ರೈತನಿಗೆ ಬರುತ್ತದೆ. ಇನ್ನು ಅನೇಕ ಬಾರಿ ಈ ಮಧ್ಯವರ್ತಿಗಳು ತಮ್ಮಿಷ್ಟದಂತೆ ಹೆಚ್ಚಿಸುವ ಬೆಲೆಯಿಂದ ಗ್ರಾಹಕನ ಜೇಬಿಗೂ ಬರೆಯೇ. ಆದರೆ ವಿಧಿಯಿಲ್ಲದೇ ಕೊಂಡುಕೊಳ್ಳಲೇಬೇಕಾದ ಅನಿವಾರ್ಯತೆ. ಇದೆಲ್ಲಾ ಹೆಚ್ಚಾಗಿ ಗೋಚರಿಸುವುದು ಹಬ್ಬಗಳ ಸಮಯದಲ್ಲಿ. ಹೂವಿನಿಂದ ಹಿಡಿದು ಬಾಳೆಕಂದು, ಮಾವಿನೆಲೆಯವರೆಗೆ, ಬಿಲ್ಪತ್ರೆ, ವಿಧವಿಧದ ಪತ್ರೆಗಳು, ನೆಲ್ಲಿಹೆರೆ, ಹಣ್ಣು ಇತ್ಯಾದಿ. ಇದರಲ್ಲಿ ಕೆಲವೊಂದನ್ನು ಹಬ್ಬ ಮುಗಿದ ಮೇಲೆ ಕೊಂಡುಕೊಳ್ಳುವವರು ಇಲ್ಲದಿದ್ದರೂ, ಎರಡು ದಿನದ ನಂತರ ಬಾಡಿ ಹಾಳಾಗುತ್ತವಾದರೂ ಕಡಿಮೆಗಂತೂ ಕೊಡುವುದಿಲ್ಲ. ಎಷ್ಟೋ ಬಾರಿ ಬಾಳೆಕಂಬಗಳೆಲ್ಲಾ ಕೊಳೆತು ಮಾರುಕಟ್ಟೆಯಲ್ಲೇ ಬಿಸ್ಹಾಕಿ ಹೋಗಿರುವುದೂ ಇದೆ.

ಇಬ್ಬರು ಅಥವಾ ಎರಡು ಕುಟುಂಬದ, ಎರಡು ಸಂಸ್ಥೆಗಳ ಮಧ್ಯದಲ್ಲಿ ಮಾತನಾಡಿ ಅವರಲ್ಲಿ ಉಂಟಾದ ಜಗಳ, ಅಪಾರ್ಥ ಮನಸ್ತಾಪಗಳನ್ನು ಹೋಗಲಾಡಿಸಿಯೋ, ಭಾಷಾ ಸಮಸ್ಯೆಯಿಂದ ಆದ ಗೊಂದಲಗಳನ್ನು ಪರಿಹರಿಸಿಯೋ ಎಲ್ಲವನ್ನೂ ಸರಿ ಮಾಡುವ ಮಧ್ಯವರ್ತಿಗಳು ಅಲ್ಲಿ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸುತ್ತಾರೆ. ಹಾಗೆಯೇ ಇಬ್ಬರ ಮಧ್ಯ ಇಲ್ಲಸಲ್ಲದ್ದು ಹೇಳಿ ಜಗಳ ತಂದಿಟ್ಟು ಮಜಾ ತೆಗೆದುಕೊಳ್ಳುವ ಹೀನ ಮನಸ್ಥಿತಿಯವರೂ ಇದ್ದಾರೆ. ಭಾಷಾ ವಿಷಯಕ್ಕೂ ಇದು ಅನ್ವಯಿಸುತ್ತದೆ. ಭಾಷೆ ಬರದಿರುವ ಕಾರಣದಿಂದ ನಡೆಯಬೇಕಾದ ವ್ಯವಹಾರ, ಸಂಬಂಧ, ಸಿಗಬೇಕಾದ ಅವಕಾಶ, ಕೊಡಬೇಕಾದ ಗೌರವ, ಮನ್ನಣೆ, ಸ್ಥಾನ-ಮಾನ ಯಾವುದಾದರೂ ಸರಿ, ಎರಡೂ ಬದಿಯ ಭಾಷೆ ತಿಳಿದಿರುವ ಮಧ್ಯವರ್ತಿಗಳಿಂದ ಪೂರ್ತಿಗೊಳ್ಳುತ್ತದೆ.

ಮದುವೆಗೆ, ಮನೆ ಕೆಲಸಕ್ಕೆ, ಬೆಡ್ ರಿಡನ್ ಆದವರನ್ನು, ವಯಸ್ಸಾದವರನ್ನು, ಕಾಯಿಲೆಯವರನ್ನು ಶುಶ್ರೂಷೆ ಮಾಡಲು, ಬಾಣಂತಿ, ಮಗುವಿಗೆ ಎಣ್ಣೆ ನೀರು ಹಾಕಲು, ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹೀಗೆ ಎಲ್ಲವುದಕ್ಕೂ ಬೇಕಾದ ಸೇವೆಯನ್ನು ಒದಗಿಸಲು ಅಂದರೆ ಅದಕ್ಕೆ ಸಮರ್ಥರಾದವರನ್ನು ಒದಗಿಸುವ ಕೆಲಸವನ್ನು ಮಧ್ಯವರ್ತಿಗಳು ಸ್ವತಃ ಅಥವಾ ಅದಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳ ಮೂಲಕ ಮಾಡುತ್ತಾರೆ. ಇಲ್ಲಿಯೂ ಕೆಲವೊಮ್ಮೆ ನಿಜವಾಗಿ ಕೆಲಸ ಮಾಡಿದವರಿಗೆ ಸರಿಯಾದ ಹಣ ಕೊಡದೇ, ಅಂದರೆ ತಿಂಗಳಿಗೆ ತಾವು 13/14 ಸಾವಿರ ತೆಗೆದುಕೊಂಡು ಅವರಿಗೆ 6/8 ಸಾವಿರ ಕೊಡುವವರೂ ಇದ್ದಾರೆ. ಇದಲ್ಲದೇ ಕೆಲಸ ಕೊಡುಸ್ತೀವಿ, ಶಾಲಾ ಕಾಲೇಜುಗಳಲ್ಲಿ ಸೀಟು ಕೊಡುಸ್ತೀವಿ ಎಂದು ಹೇಳಿದವರನ್ನು ನಂಬಿ ಹಣ ಕಳೆದುಕೊಂಡು ಮೋಸ ಹೋದವರು ತುಂಬಾ ಜನ ಇದ್ದಾರೆ. ಈ ವಿಷಯದಲ್ಲಿ ಜನರು ಜಾಗೃತರಾಗಬೇಕು. ಸಂಘ-ಸಂಸ್ಥೆಗಳು, ಮಾಧ್ಯಮಗಳು, ಸರ್ಕಾರ ಇದಕ್ಕೆ ಹೆಚ್ಚಿನ ಒತ್ತುಕೊಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ಇಂತಹ ಸಂಘ-ಸಂಸ್ಥೆಗಳು ಸರ್ಕಾರದ ಅಧೀನದಲ್ಲಿದ್ದರೆ ಇನ್ನೂ ಒಳ್ಳೆಯದು.

ಹಿಂದೆಲ್ಲಾ ಮದುವೆಯ ಸಂಬಂಧ ಕಲ್ಪಿಸಲು ದಲ್ಲಾಳಿಗಳು ಇರ್ತಿದ್ರು. ಅವರಿಗೆ ಎರಡೂ ಮನೆಯವರ ಪರಿಚಯ, ಕುಲ, ಗೋತ್ರ ಎಲ್ಲಾ ಚೆನ್ನಾಗಿ ತಿಳಿದಿರುತ್ತಿತ್ತು. ಇಲ್ಲದಿದ್ದರೂ ಅವರಿಗೆ ಸಂಬಂಧಪಟ್ಟವರಿಂದ, ಊರವರಿಂದ ವಿಷಯ ಸಂಗ್ರಹಣೆ ಮಾಡಿ ನಂತರ ಸರಿ ಹೊಂದುವಂತಿದ್ದರೆ ಮಾತ್ರ ಹೇಳಿ ಸಂಬಂಧ ಕುದುರಿಸುತ್ತಿದ್ದರು. ಅವರ ಕೆಲಸದಲ್ಲಿ ಹೃದಯವಂತಿಕೆ, ನಿಯತ್ತು, ಶ್ರದ್ಧೆ ಎಲ್ಲಾ ಇರುತ್ತಿದ್ದುದರಿಂದ ಮೋಸ ಮಾಡುತ್ತಿರಲಿಲ್ಲ. ಹಾಗಾಗಿ ಅವರಿಗೆ ಒಳ್ಳೆಯ ಹೆಸರೂ ಕೂಡ ಇರುತ್ತಿತ್ತು. ಈಗಂತೂ ಇದು ಬರೀ ವ್ಯಾವಹಾರಿಕವಾಗಿ ಮಾರ್ಪಟ್ಟಿರುವುದರಿಂದ, ಅವರುಗಳು ಕೊಟ್ಟದ್ದೇ ಮಾಹಿತಿಯಾದ್ದರಿಂದ ಅವರ ಹಿನ್ನೆಲೆಯ ಬಗ್ಗೆ ಸರಿಯಾಗಿ ತಿಳಿಯದೇ ಮದುವೆ ಹೆಸರಿನಲ್ಲಿ ಮೋಸ ಹೋಗಿ ಜೀವನ ಹಾಳು ಮಾಡಿಕೊಂಡವರು, ದುಡ್ಡು, ಆಸ್ತಿ-ಪಾಸ್ತಿ ಕಳೆದುಕೊಂಡವರು, ಕೋರ್ಟು- ಕಛೇರಿ ಅಲೆದು ಹೈರಾಣಾದವರೂ ಇದ್ದಾರೆ.

ಮನೆ ಮಾರಾಟಕ್ಕೆ, ಬಾಡಿಗೆಗೆ, ಭೋಗ್ಯಕ್ಕೆ ಗ್ರಾಹಕರನ್ನು ಹುಡುಕುವುದಕ್ಕೂ, ಮನೆ ಮಾಲೀಕರ ಮತ್ತು ಗ್ರಾಹಕರ ಮಧ್ಯ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಮಧ್ಯವರ್ತಿಗಳು ಇದ್ದಾರೆ. ಮೊದಲೇ ನಿಗದಿಯಾದಂತೆ ಅವರಿಗೆ ಒಂದು ತಿಂಗಳ ಬಾಡಿಗೆಯೋ ಅಥವಾ ಇಂತಿಷ್ಟೆಂದು ಹಣ ಕೊಡಬೇಕಾಗುತ್ತದೆ. ಇದರಲ್ಲೂ ಮಧ್ಯವರ್ತಿಗಳ ಮಾತನ್ನು ನಂಬಿ ಮನೆಮಾಲಿಕರು/ಬಾಡಿಗೆದಾರರು ಮೋಸ ಹೋಗುವ ಸಂಭವವಿದೆ.

ತಮ್ಮ ಅವಶ್ಯಕತೆ ಹೆಚ್ಚಿದೆ ಎಂಬುದನ್ನು ಮನದಟ್ಟು ಮಾಡಿಕೊಂಡೇ ಕೆಲವು ಮಧ್ಯವರ್ತಿಗಳು ಜನರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಾರೆ. ಇದಕ್ಕೆ ಪರಿಹಾರವೆಂದರೆ ಕಾನೂನು ಬದ್ಧವಾಗಿ ಒಂದಷ್ಟು ನಿಯಮಗಳನ್ನು ಅಳವಡಿಸುವುದು. ಆಗ ಅದನ್ನು ಪಾಲಿಸುವ ಅನಿವಾರ್ಯತೆಯಿರುವುದರಿಂದ ಪಾರದರ್ಶಕತೆಗೆ ಹೆಚ್ಚಿನ ಒತ್ತು ಸಿಗುತ್ತದೆ. ಇದರಿಂದ ಯಾರೊಬ್ಬರಿಗೂ ಅತಿಯಾದ ನಷ್ಟ ಸಂಭವಿಸುವ ಅವಕಾಶ ಇರುವುದಿಲ್ಲ. ಈ ವಿಷಯದಲ್ಲಿ ಸಹಕಾರಿ ಸಂಘ-ಸಂಸ್ಥೆಗಳು ಸಹ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಸಮಾಜದ ಸ್ವಾಸ್ಥ್ಯವೂ ಚೆನ್ನಾಗಿರುತ್ತದೆ. ಏಕೆಂದರೆ, ಎಲ್ಲರೂ ಸಮಾಜದ ಒಂದು ಭಾಗವಾಗಿರುವುದರಿಂದ ಇಬ್ಬರ ಗೆಲುವು-ಗೆಲುವು (win – win) ನಿರ್ಮಾಣವಾಗಬೇಕು. ಇದು ದೇಶದ ಅಭಿವೃದ್ಧಿಗೆ ಪೂರಕ.

ಸರ್ಕಾರ ಮತ್ತು ಜನರ ನಡುವೆ ಮಾಧ್ಯಮಗಳೇ ಮಧ್ಯವರ್ತಿಗಳು. ಸರ್ಕಾರ ತೆಗೆದುಕೊಳ್ಳುವ ತೀರ್ಮಾನ, ಮಾಡುವ ರೀತಿನೀತಿಗಳು ಎಲ್ಲವೂ ತಕ್ಷಣ ಜನರಿಗೆ ತಲುಪುವುದು ವಿವಿಧ ಸಮೂಹ ಮಾಧ್ಯಮಗಳಿಂದಲೇ.

ಇನ್ನು ಕೆಲವೊಮ್ಮೆ ಮನೆಯಲ್ಲೂ ಮಧ್ಯವರ್ತಿಗಳ ಅವಶ್ಯಕತೆ ಇದೆ ಎಂದರೆ ತಪ್ಪಾಗಲಾರದು. ಹೆಚ್ಚಾಗಿ ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಅಪ್ಪ, ಮಕ್ಕಳ ಮಧ್ಯದಲ್ಲಿ ಅಮ್ಮನೇ ಮಧ್ಯವರ್ತಿಯ ಪಾತ್ರ ನಿರ್ವಹಿಸುವುದು. ಕೆಲವು ಮನೆಗಳಲ್ಲಿ ಅಪ್ಪಂದಿರು ಹಾಗೆ, ಏನಾದರೂ ಕೇಳಿದ ತಕ್ಷಣ ಮಕ್ಕಳಿಗೆ ಮೊದಲು ಬೇಡವೆಂದೇ ಹೇಳುವುದು, ಇಲ್ಲಾ ಬಯ್ಯುವುದು ಮಾಡುತ್ತಾರೆ. ಹಾಗಾಗಿ ಅಮ್ಮನ ಮೂಲಕ ಅಪ್ಪನಿಗೆ ವಿಷಯ ತಲುಪಿಸಿ ತಮಗೆ ಬೇಕಾದ್ದನ್ನು ಮಕ್ಕಳು ಪಡೆದುಕೊಳ್ಳುತ್ತಾರೆ.

ಏನೇ ಆದರೂ ಒಂದಲ್ಲಾ ಒಂದು ಸಮಯದಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಎಲ್ಲರಿಗೂ ಬರುತ್ತದೆ. ಹಾಗೇ ಮಧ್ಯವರ್ತಿಗಳ ಜೀವನಕ್ಕೂ ಗ್ರಾಹಕರೇ ಆಧಾರ. ಆದ್ದರಿಂದ ಮಧ್ಯವರ್ತಿಗಳು ಅವಕಾಶವಾದಿಗಳಾಗದೇ ಜನಸ್ನೇಹಿಯಾಗಿದ್ದರೆ ಸರ್ವತೋಮುಖ ವೃದ್ಧಿಗೆ ಇಂಬು ನೀಡಿದಂತಾಗುತ್ತದೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading