ತಮ್ಮ, ತಂಗಿಗಾಗಿ ತನ್ನ ಓದನ್ನೇ ನಿಲ್ಲಿಸಿ ಬಾಳಬಂಡಿಗೆ ಹೆಗಲು ನೀಡಿದ ಅಮ್ಮನ ಕುರಿತು ಮಗಳು ಬರೆದ ಭಾವನಾತ್ಮಕ ಬರಹ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಓದನ್ನು ಬಿಡಿಸಿ ತಮ್ಮ, ತಂಗಿಯರನ್ನು ನೋಡಿಕೊಳ್ಳುವ ದೊಡ್ಡ ಜವಾಬ್ದಾರಿಯನ್ನು ಚಿಕ್ಕ ಹೆಗಲಿಗೆ ವಹಿಸಿ ಓದುವ/ಓಡುವ (ಓಡುವ – ಓಟ ಎಂದರೆ ಬಹಳ ಇಷ್ಟ, ಹಾಗೂ ಅದರಲ್ಲಿ ಮೊದಲು ಬರುತ್ತಿದ್ದಾಕೆ) ಕನಸಿಗೆ ತಣ್ಣೀರೆರಚಿದ ತಂದೆ-ತಾಯಿಯ ಆ ನತದೃಷ್ಟ ಮಗಳು ನನ್ನಮ್ಮ. ಕನ್ನಡ ಪದ್ಯವನ್ನು ಚಾಚೂ ತಪ್ಪದೇ ರಾಗವಾಗಿ ಹೇಳಿ ಸೈ ಎನಿಸಿಕೊಂಡವಳು. ಊರಿನ ಹಿರಿಯರು ಯಾರಾದರೂ ಶಾಲೆಗೆ ಬಂದರೆ ಶಿಕ್ಷಕರು ಅಮ್ಮನನ್ನು ಕರೆಸಿ, ಈ ಮಗು ಎಷ್ಟ್ ಚೆನ್ನಾಗ್ ಪದ್ಯ ಹೇಳುತ್ತೆ ಅಂತ ಹೇಳಿಸುತ್ತಿದ್ದರಂತೆ. ಸೋದರಮಾವನ ಮನೆಯಲ್ಲಿದ್ದು ತನ್ನ ಪಾಡಿಗೆ ತಾನು ಮಗ್ಗಿ ಹೇಳುವುದರಿಂದ ಎಲ್ಲವುದರಲ್ಲೂ ಮುಂದಿದ್ದವಳನ್ನು ಶಾಲೆ ಬಿಡಿಸಿ, ಮನೆಗೆ ಕರೆತರುವಾಗ ಸೋದರ ಮಾವ ಹೇಳಿದ್ದು ಚೆನ್ನಾಗಿ ಓದ್ತಿದ್ದಾಳೆ, ನಮ್ಮನೇಲಿ ಇರ್ಲಿ ಎಂದು. ಆದರೆ ವರ್ಷಕ್ಕೊಂದೊಂದು ಮಗು ಹೆರುವ ತಾಯಿಗೆ ತಮ್ಮ ಅವಶ್ಯಕತೆಗೆ ಬಳಕೆಯಾಗಿದ್ದು ಹಿರಿಯ ಮಗಳಾದ ನನ್ನಮ್ಮ.
ಬೆಳಕು ಹರಿಯುವ ಮುನ್ನವೇ ಏಳಿಸಿ ಒಲೆ ಮುಂದೆ ಕೂರಿಸುತ್ತಿದ್ದರಂತೆ. ನಿದ್ದೆಯಿಂದ ಕುಗುರಿ ಒಮ್ಮೆ ಅಲ್ಲೇ ಪಾತ್ರೆ ಮೇಲೆ ಬಿದ್ದಿದ್ದರಂತೆ. ತಮ್ಮ, ತಂಗಿಯರೆಲ್ಲಾ ಶಾಲೆಗೆ ಹೋಗುವಾಗ ಆಸೆ ಕಂಗಳಿಂದ ನೋಡಿ ಕಣ್ತುಂಬಿಕೊಂಡು ಮನೆಯ ಎಲ್ಲಾ ಜವಾಬ್ದಾರಿ ಮೈಮೇಲೆ ಹೊತ್ತುಕೊಂಡವಳು ನನ್ನಮ್ಮ. ಕಾಫಿ, ಕಷಾಯ, ಊಟ-ತಿಂಡಿ, ಪಾತ್ರೆ, ಬಟ್ಟೆ, ನೀರು ತರುವುದು, ಚಿಕ್ಕ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದರಿಂದ ಅವರ ಉಚ್ಚೆಬಟ್ಟೆ ಒಗೆಯುವುದು, ಅವರಿಗೆ ಸ್ನಾನ ಮಾಡಿಸುವುದು, ತಲೆ ಬಾಚುವುದು ಹೀಗೆ ಎಲ್ಲವನ್ನೂ ಮಾಡಿದಾಕೆ. ಏಕೆಂದರೆ, ವಯಸ್ಸಾದ ಅವರ ಅಜ್ಜಿ ಸ್ವಲ್ಪ ದಿನದ ಮಟ್ಟಿಗೆ ತಾಯಿಯ ಬಾಣಂತನಕ್ಕೆ ಬಂದಿರುತ್ತಿದ್ದುದು ಹಾಗೂ ಒಬ್ಬ ಅಣ್ಣನನ್ನು ಬಿಟ್ಟರೆ ಎಲ್ಲರೂ ಅಮ್ಮನಿಗಿಂತ ಕಿರಿಯರೇ. ಅಮ್ಮನ ಅಮ್ಮ ಎರಡು ತಿಂಗಳಾಗುವುದರೊಳಗೆ ಕಾಫಿ ಹಣ್ಣು ಕುಯ್ತೀನಿ ಎಂದು ತೋಟಕ್ಕೆ ಹೋದರೆ ಚಿಕ್ಕ ಮಗುವಿನ ಜವಾಬ್ದಾರಿಯೂ ಅಮ್ಮನ ಹೆಗಲಿಗೇ. ಕೊನೆಯ ತಮ್ಮ ಹುಟ್ಟುವಾಗ ಅಜ್ಜಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಾದ್ದರಿಂದ( ಮೊದಲೇ ಕತ್ತಲ ಕೋಣೆ ) ಅವರ ಮಾರ್ಗದರ್ಶನದಲ್ಲಿ ಅಮ್ಮನೇ ಹೊಕ್ಕಳ ಬಳ್ಳಿ ಕತ್ತರಿಸಿದ್ದರಂತೆ. ಹೀಗೆ ಚಿಕ್ಕವಯಸ್ಸಿನಿಂದಲೂ ತಂದೆ-ತಾಯಿ ಹೇಳಿದಂತೆ ಕೇಳಿಕೊಂಡು, ಎದ್ದಾಗಿನಿಂದ ಮಲಗುವವರೆಗೂ ಮನೆ ಕೆಲಸ, ಪೂಜೆ, ಪುನಸ್ಕಾರ, ಭಜನೆ ಇದಿಷ್ಟೇ ಅವಳ ಪ್ರಪಂಚ.
ಮದುವೆಯಾದ ಮೇಲೆ ಒಟ್ಟು ಕುಟುಂಬ. ಅಜ್ಜನ ದುಡಿಮೆಯ ಜೊತೆಗೆ ಅಪ್ಪನದೂ ಮನೆ ನಡೆಸಲಿಕ್ಕೇ ಸಾಕಾಗುವಷ್ಟು. ಅಲ್ಲಿಯೂ ಅಮ್ಮ ಪಟ್ಟಕಷ್ಟ ಅಷ್ಟಿಷ್ಟಲ್ಲ. ನಂತರ ಖಾಲಿ ಕೈಯ್ಯಲ್ಲಿ ಅಲ್ಲಿಂದ ಬೇರೆ ಬಂದ ಮೇಲೆ ಅಪ್ಪನೊಡನೆ ಹೆಗಲಾಗಿ ನಿಂತು ಪ್ರತಿಯೊಂದು ಕಷ್ಟದಲ್ಲೂ ತನ್ನ ಹೆಜ್ಜೆ ಜೊತೆಗಿರಿಸಿದವಳು ಅಮ್ಮ. ಟೈಲರಿಂಗ್ ಕಲಿಯಬೇಕೆಂಬ ಅವಳ ಆಸೆ ಮನದಲ್ಲೇ ಉಳಿದಿತ್ತು. ಬದುಕಿನ ಜಂಜಾಟದಲ್ಲಿ ಅದು ಸಾಧ್ಯವಾಗಲಿಲ್ಲ. ಆದರೂ ತನ್ನ ಸೀರೆಯಿಂದ ಕೈಹೊಲಿಗೆಯಲ್ಲೇ ನನಗೆ ಚೆಂದದ ಲಂಗ ಹೊಲಿದು ಕೊಟ್ಟಿದ್ದಳು. ಮೂರ್ನಾಲ್ಕು ಸೀರೆಗಳನ್ನು ಜೋಡಿಸಿ ದುಪ್ಪಟಿಯಾಗಿ ಹೊಲಿದು ಬೆಚ್ಚಗೆ ಹೊದಿಸಿ ಮಲಗಿಸಿದ್ದಳು. ಪುರಾಣ, ಪುಣ್ಯಕಥೆಗಳ (ಅಜ್ಜನ ಬಳುವಳಿ) ಹೇಳುತ್ತಿದ್ದಾಕೆ. ಪೂಜೆ, ಸಂಸ್ಕಾರ, ಭಜನೆ, ಕೆಲಸ, ಬೊಗಸೆ ಎಲ್ಲವನ್ನೂ ಕಲಿಸಿದಾಕೆ. ನನ್ನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಾಕೆ.
ತನ್ನ ತವರಿನಲ್ಲಿ ತಮ್ಮ, ತಂಗಿಯರ ಮದುವೆಯೆಂದರೆ, ಹದಿನೈದು ದಿನ ಮುಂಚೆಯೇ ಹೋಗಿ ಗೋಡೆಗೆ ಕಾರಣೆ ತೆಗೆಯುವುದರಿಂದ (ಗೋಡೆಯ ಉದ್ದಕ್ಕೂ ಬಿಳಿಯ ಬಣ್ಣದಲ್ಲಿ ಬಗೆ ಬಗೆಯ ಹೂವು, ಬಳ್ಳಿ, ಎಳೆಗಳನ್ನು ಎಳೆಯುವುದು) ಹಿಡಿದು ಮದುವೆಮನೆಯ ಎಲ್ಲಾ ಕೆಲಸದಲ್ಲೂ ಕೈಜೋಡಿಸಿದಾಕೆ.
ಹಿರಿಯ ಮಗಳಾಗಿ ತವರಿನಲ್ಲಿ ತನ್ನ ಕರ್ತವ್ಯಕ್ಕೆ ಎಂದೂ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಿದವಳು. ತಂದೆ-ತಾಯಿ ಮರಣ ಹೊಂದಿದಾಗ ಅವರು ಸಿಹಿ ಮಾಡುವ ಹಾಗಿಲ್ಲವೆಂದು, ಹೆಣ್ಣು ಮಕ್ಕಳು ಮಾಡಿಕೊಡಬೇಕೆಂದು ದೊಡ್ಡ ಡಬ್ಬಿ ತುಂಬಾ ರವೆ ಉಂಡೆ ಮಾಡಿ ತೆಗೆದುಕೊಂಡು ಹೋಗಿ ಕೊಟ್ಟವಳು. ಏಕೆಂದರೆ, ಒಡಹುಟ್ಟಿದವರೆಲ್ಲಾ ಸೇರಿ ಹದಿಮೂರು ಜನ. ಅವರ ಸಂಸಾರ ಹೀಗೆ ಮನೆ ತುಂಬಾ ಜನ. ಆಗ ಅವಳು ತನ್ನ ಕಷ್ಟ ಮರೆತು, ತನ್ನ ಕರ್ತವ್ಯಕ್ಕೆ ಮಾತ್ರ ಒತ್ತು ಕೊಟ್ಟವಳು.
ಅಜ್ಜ, ಆಗಿನ ಕಾಲದಲ್ಲೇ ಪುಸ್ತಕಗಳನ್ನು ತಂದಿಡುತ್ತಿದ್ದರಂತೆ. ಅದನ್ನು ಅಮ್ಮ ಓದುತ್ತಿದ್ದರಂತೆ. ಹಾಗೇ ಮನೆಯಲ್ಲಿ ಕೆಲವು ರೋಗಗಳಿಗೆ ಬೇರು, ನಾರಿನ ಔಷಧಿ ಕೊಡುತ್ತಿದ್ದ ಅಜ್ಜ, ರಟ್ಟಿನ ಬಾಕ್ಸಿನಲ್ಲಿ ಬೇರೆಡೆಯಿಂದ ಮಾತ್ರೆ, ಔಷಧಿಗಳನ್ನು ತರಿಸುತ್ತಿದ್ದರಂತೆ. ಅದನ್ನು ಸುತ್ತಮುತ್ತಲಿನವರಿಗೆಲ್ಲಾ ಸಣ್ಣಪುಟ್ಟ ಕಾಯಿಲೆಗಳಿಗೆ ಕೊಡುತ್ತಿದ್ದರಂತೆ. ಅವರು ಯಾರಿಂದಲೋ ಕಲಿತ ವಿದ್ಯೆ ಅದು. ಅವರ ಮಾರ್ಗದರ್ಶನದಲ್ಲಿ ಅಮ್ಮನೂ ಒಂದಷ್ಟು ಕಲಿತಿದ್ದಳು. ನೆಗಡಿ, ಕೆಮ್ಮು ಹೀಗೆ ಕೆಲವೊಂದಕ್ಕೆ ಕಷಾಯ, ಗಂಟಲು ನೋವಿಗೆ ಬೇರು ತೇಯ್ದು ಕೊಡುತ್ತಿದ್ದಳು. ಒಬ್ಬರಿಗೆ ಗಂಟಲು ನೋವು ಜಾಸ್ತಿಯಾಗಿ ವೈದ್ಯರಿಗೆ ತೋರಿಸಿದಾಗ ಆಪರೇಷನ್ ಮಾಡಬೇಕು ಎಂದಿದ್ದರಂತೆ. ಅದನ್ನು ಕೇಳಿದ ಅಮ್ಮ ತನಗೆ ತಿಳಿದ ಬೇರು ಕೊಟ್ಟು ಕಾದಾರಿದ ನೀರಿನಲ್ಲಿ ತೇಯ್ದು ತಿನ್ನಲು ಹೇಳಿದ್ದಳು. ಅದರಿಂದಲೇ ಅವರ ನೋವು ಕಡಿಮೆಯಾಗಿ ಮೊದಲಿನಂತಾಗಿದ್ದರು. ಹಾಗಾಗಿ ಅದನ್ನು ಹುಡುಕಿಕೊಂಡು ಅನೇಕರು ಬರುತ್ತಿದ್ದರು.
ಅವಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರೆ, ಅವಳ ಆಸಕ್ತಿಯ ವಿಷಯಗಳಿಗೆ ನೀರೆರೆದಿದ್ದರೆ, ಅವಳು ಇಂದು ಏನೋ ಒಂದು ಸಾಧಿಸಿರುತ್ತಿದ್ದಳು. ಅವಳ ಉತ್ಸಾಹ ಅಂಥದ್ದು. ಈ ಇಳಿ ವಯಸ್ಸಿನಲ್ಲೂ ಅವಳ ಚಟುವಟಿಕೆಯ ಮುಂದೆ ನಮ್ಮದೇನಿಲ್ಲ. ಚಿಕ್ಕ ವಯಸ್ಸಿನಿಂದ ಕೆಲಸ ಮಾಡೀ ಮಾಡೀ ಇಂದು ಸುಮ್ಮನೇ ಕುಳಿತುಕೊಳ್ಳಲು ಅವಳಿಗೆ ಬರುವುದಿಲ್ಲ. ಇನ್ನೊಂದು ವಿಷಯ, ನನಗೆ ಈಗಲೂ ಊರಿಗೆ ಹೋದಾಗ ಅವಳೇ ಕಾಫಿ ಮಾಡಿ ಕೊಡುವುದು. ಅದರಲ್ಲೂ ನನಗೆ ಹೇಗೆ ಬೇಕೋ ಹಾಗೆ( ಸ್ಟ್ರಾಂಗ್ ಕಾಫಿ. ಸಿಹಿ, ಕಹಿ ಎಲ್ಲಾ ಹದವಾಗಿರಬೇಕು) ಆಸ್ಥೆ ವಹಿಸಿ ಮಾಡಿಕೊಟ್ಟು ಸರಿ ಆಗಿದ್ಯಾ ಅಂತ ಕೇಳಿ ನಾನು ಚೆನ್ನಾಗಿದೆ ಎಂದಾಗಲೇ ಅವಳ ಮೊಗದಲ್ಲೂ ತೃಪ್ತಿ. ಚಿಕ್ಕಲ್ಲಿದ್ದಾಗಲೂ ಅಷ್ಟೇ. ಬೆಳಿಗ್ಗೆ ಎದ್ದು ಬೇರೆ ಎಲ್ಲಾ ಕೆಲಸ ಮಾಡುತ್ತಿದ್ದೆ. ಆದರೆ ಕಷಾಯ , ಕಾಫಿ ಏನಾದರೂ ಸರಿ ಅಮ್ಮನೇ ಬಂದು ಮಾಡಿಕೊಡಬೇಕು. ಅವಳಿಲ್ಲದಾಗ, ತಿಂಗಳ ಮೂರು ದಿನ ಹಾಗೆ ಮಾತ್ರ ನಾವು ಮಾಡಿಕೊಳ್ಳುತ್ತಿದ್ದುದು.
ನನ್ನ ಮೊದಲ ಹೆರಿಗೆ ಸಮಯದಲ್ಲಿ ಕೊಟ್ಟಿರುವ ದಿನಾಂಕವಾದರೂ ಹೆರಿಗೆ ನೋವು ಕಾಣಿಸಿಕೊಳ್ಳದಿದ್ದಾಗ ನೋವು ಬರಲೆಂದು ಮಾತ್ರೆ ಕೊಟ್ಟಿದ್ದರು. ನಂತರ ಶುರುವಾದ ನೋವು ಒಮ್ಮೊಮ್ಮೆ ವಿಪರೀತವಾಗಿ ತಡೆಯಲಾಗದೇ ಕಣ್ತುಂಬಿ ಬಂದಿತ್ತು. ಸೊಂಟ ನೋವೆಂದು ಕಷ್ಟಪಡುತ್ತಿರುವಾಗ ಅಮ್ಮ ನೋವಾದ ಜಾಗವನ್ನು ಮೆಲುವಾಗಿ ತಿಕ್ಕಿದ್ದಳು. ಅವಳ ಆ ಹಿತವಾದ ಸ್ಪರ್ಶ ನನಗೆ ಅಮೃತದಂತೆ. ಹೋದ ಜೀವ ಬಂದಷ್ಟು ಸಮಾಧಾನ ಕೊಟ್ಟಿತ್ತು. ಇಲ್ಲಿ, ಇಲ್ಲಿ ಎಂದು ನೋವಾದ ಕಡೆ ಮುಟ್ಟಿ ತೋರಿಸದಾಗೆಲ್ಲಾ ರಾತ್ರಿಯಿಡೀ ನಿದ್ದೆ ಬಿಟ್ಟು, ನನ್ನ ಬೆಡ್ ಹತ್ತಿರ ಬಗ್ಗಿ ನಿಂತು ತನ್ನ ನವಿರಾದ ಸ್ಪರ್ಶದಿಂದ ನನ್ನ ನೋವಿಗೆ ಉಪಶಮನ ನೀಡಿದ್ದಳು. ಆಗಾಗ ಮೇಲಿನ ಅಂತಸ್ತಿಗೆ ಹೋಗಿ ಡಾಕ್ಟರ್, ನರ್ಸ್ಗೆ ಹೇಳಿ ಬರುತ್ತಿದ್ದಳು. ಅವಳ ಆ ಕಾಳಜಿ, ಸೇವೆ ಇನ್ನಾರು ಮಾಡಲು ಸಾಧ್ಯ? ಎರಡನೇ ಬಾರಿಯೂ ಬಂದು ಎರಡು ತಿಂಗಳಿದ್ದು ಬಾಣಂತನ ಮಾಡಿ ಹೋಗಿದ್ದಳು. ನನಗೆ ಮಗುವಿಗೆ ದಿನಾ ಎಣ್ಣೆ ನೀರು, ಪಥ್ಯದ ಅಡುಗೆ, ಉಳಿದವರಿಗೂ ಊಟ, ತಿಂಡಿ, ಪೂಜೆ, ಹೀಗೆ ಮನೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ಮಾಡಿದ್ದನ್ನು ಹೇಗೆ ಮರೆಯಲು ಸಾಧ್ಯ?
ನನ್ನ ಮಕ್ಕಳಿಗೂ ಅಷ್ಟೇ. ರಜೆಯಲ್ಲಿ ಊರಿಗೆ ಹೋದರೆ ಎಣ್ಣೆನೀರು ಹಾಕುವುದರಿಂದ ಹಿಡಿದು ಸಿಹಿ ತಿಂಡಿ ಮಾಡಿಕೊಡುವುದು, ಬಟ್ಟೆ ಕೊಡಿಸುವುದು, ನಾನು ಎಲ್ಲಾದರೂ ಹೋದರೆ ಅಷ್ಟೇ ಕಾಳಜಿ ವಹಿಸಿ ಮಕ್ಕಳನ್ನು ನೋಡಿಕೊಳ್ಳುವುದು, ಕಥೆ ಹೇಳುವುದು, ತೋಟ, ಗದ್ದೆ, ಕಾಡಿಗೆ ಕರೆದುಕೊಂಡು ಹೋಗಿ ಹೂವಿನ ಗಿಡಗಳು, ಬೇರೆ ಬೇರೆ ಜಾತಿಯ ಗಿಡ-ಮರಗಳು ಎಲ್ಲವನ್ನೂ ತೋರಿಸಿ ಅದರ ಬಗ್ಗೆ ತಿಳಿಸಿ ಹೇಳುವುದು ಹೀಗೆ ಎಲ್ಲವನ್ನೂ ಮಾಡಿದಾಕೆ. ಇನ್ನು ಅವಳಿಗೆ ಅವಳ ತಂದೆ ಎಂದರೆ ಬಹಳ ಪ್ರೀತಿ, ಹೆಮ್ಮೆ ಎಲ್ಲಾ. ಅವರ ಬಗ್ಗೆ ಹೆಮ್ಮೆಯಿಂದ ಹೇಳುವಾಗ ಅವಳ ಮುಖ ಅರಳುತ್ತದೆ. ತನ್ನ ತಂದೆ ಏನೇನು ಮಾಡ್ತಿದ್ರು , ಎಷ್ಟು ಜನ ಮನೆಗೆ ಬರ್ತಿದ್ರು, ಎಷ್ಟು ಜನಕ್ಕೆ ಸಹಾಯ ಮಾಡಿದ್ರು, ಹೀಗೆ ಎಲ್ಲವನ್ನೂ ನೆನಪಿಸಿಕೊಂಡು ಹೇಳುತ್ತಾಳೆ.
ಊರಿಂದ ಹೊರಡುವಾಗ ಮನೆಯಲ್ಲಿ ಬೆಳೆದಿದ್ದನ್ನು ಅಪ್ಪ ಕೊಡುವಾಗ ಎಲ್ಲವನ್ನೂ ನೆನಪಿಸುವವಳು, ಮೊದಲೇ ತಿಳಿದಿರುತ್ತಿದ್ದುದರಿಂದ ಬೆಣ್ಣೆ ಕಾಯಿಸಿ ತುಪ್ಪ ಮಾಡಿ ಇಟ್ಟಿರುತ್ತಾಳೆ. ದುಡ್ಳೆಕಾಯಿ (ಹೇರಳೇಕಾಯಿ) ಉಪ್ಪಿನಕಾಯಿ ನನಗಿಷ್ಟ ಅಂತ ಹಾಕಿಟ್ಟಿರುತ್ತಾಳೆ. ಚಟ್ನಿಪುಡಿ, ಹೆಚ್ಚಿದ ಮಾವಿನಕಾಯಿ ಹೋಳುಗಳನ್ನು ಬೆಲ್ಲದ ಪಾಕದಲ್ಲಿ ಹಾಕಿಟ್ಟಿದ್ದು, ಹೂವಿನ ಗಿಡಗಳು, ಚೂಡಾದವಲಕ್ಕಿ, ಕೊಬ್ಬರಿ ಮಿಠಾಯಿ ಹೀಗೆ ಎಷ್ಟು ಕೊಟ್ಟರೂ ಅವಳಿಗೆ ಮುಗಿಯದು.
ಫೋನಲ್ಲಿ ಇಡೀ ಊರಿನ ವಿಷಯ ಎಲ್ಲಾ ಹೇಳುತ್ತಾಳೆ. ಅವರ ಮನೆಯಲ್ಲಿ ಮದುವೆ, ಮುಂಜಿ, ಗೃಹಪ್ರವೇಶ ಹೋಗಬೇಕು ಅಂತ. ಹೋಗಿಬಂದ ಮೇಲೂ ಅಲ್ಲಿಯ ಸಡಗರದ ಬಗ್ಗೆ , ಯಾರ್ಯಾರು ಬಂದಿದ್ದರು, ಏನು ಮಾಡಿದ್ರು, ಏನು ಕೊಟ್ರು ಹೀಗೆ. ಇನ್ಯಾರಿಗೋ ಹುಷಾರಿಲ್ಲ, ಅವರು ಗೊತ್ತಲ್ಲ ನಿಂಗೆ ಅನ್ನುತ್ತಾಳೆ (ಊರು ಬಿಟ್ಟು 25 ವರ್ಷವಾದ ಮೇಲೆ ಹೆಚ್ಚಿನವರ ಪರಿಚಯ ಇಲ್ಲ) ನನಗೆ ಗೊತ್ತಿರುವವರ ಹೆಸರು ಹೇಳಿ ಅವರ ಸೊಸೆಗೆ ಇವರು ಏನಾಗಬೇಕು ಹೀಗೆ ಸಂಬಂಧಗಳನ್ನು ಹೇಳೀ, ಹೇಳೀ ಅಂತೂ ನನಗೆ ಅವರ ಪರಿಚಯ ಮಾಡಿಸುತ್ತಾಳೆ. ಇದೆಲ್ಲಾ ಒಂದು ಕಡೆಯಾದರೆ, ಊರಿಗೆ ಹೋದಾಗ ಯಾವುದಾದರೂ ಒಂದು ಸಮಯ ಬಿಡುವು ಮಾಡಿಕೊಂಡು ಕರೆಯುತ್ತಾಳೆ. ನಂಗ್ ಆಮೇಲ್ ದನಕ್ಗಂಜಿಗಿಡ್ಬೇಕು, ಹಾಲು ಕರಿಬೇಕು, ಕೆಲಸದವರಿಗೆ ಕಾಫಿ ಕೊಡ್ಬೇಕು, ಈಗ ಒಂಚೂರು ಪುರ್ಸೊತ್ತಿದೆ ಬಾ ಇಲ್ಲಿ ಎಂದೇ ಕರೆಯುವುದು. ಇದು ಅವರ ಮನೆ ಮದುವೆಯಲ್ಲಿ ಕೊಟ್ಟಿದ್ಸೀರೆ, ಇನ್ನೊಬ್ಬರ ವೈಕುಂಠ ಸಮಾರಾಧನೆಯಲ್ಲಿ ಕೊಟ್ಟ ದೇವರನಾಮದ ಪುಸ್ತಕಗಳು, ಮತ್ತೊಬ್ಬರ ಮನೆಯ ಕಾರ್ಯಕ್ರಮದಲ್ಲಿ ಕೊಟ್ಟ ಅರಿಶಿನ-ಕುಂಕುಮದ ಬಟ್ಟಲು, ಪರ್ಸು, ಬ್ಯಾಗು ಹೀಗೆ ಎಲ್ಲವನ್ನೂ ತೋರಿಸಿ ನಿಂಗ್ ಏನಾದ್ರು ಬೇಕರ್ತಗೋ ಎನ್ನುವ ಅವಳ ನಿಷ್ಕಲ್ಮಶ ಪ್ರೀತಿಗೆ ಶರಣಾಗುವುದಷ್ಟೇ ನನ್ನ ಪಾಲಿಗೆ. ಏನೂ ಬೇಡ ಅಮ್ಮ , ಎಲ್ಲಾ ಚೆನ್ನಾಗಿದೆ. ನಿಂಗೆ ಅಂತ ಕೊಟ್ಟಿದಾರೆ, ಬ್ಲೌಸ್ ಹೊಲುಸ್ಕೋ, ಊರಿಗೆ ಹೋಗುವಾಗ ಈ ಬ್ಯಾಗ್ ತಗಂಡ್ಹೋಗು ಎಂದು ಹೇಳುತ್ತಿರುವಾಗಲೇ ಜಾತ್ರೆಯಿಂದ ನನಗೆ, ಮಕ್ಕಳಿಗೆ ಅಂತ ತಂದು ಇಟ್ಟಿದ್ದ ಬಳೆ, ಸರ , ಕ್ಲಿಪ್ಪು, ಇತ್ಯಾದಿ ತೆಗೆದುಕೊಡುತ್ತಾಳೆ. ಅಷ್ಟರಲ್ಲಾಗಲೇ ಅವಳಿಗೆ ಬೇರೆ ಕೆಲಸದ ಕರೆ ಬಂದಿರುತ್ತದೆ.
ವರ್ಷದಲ್ಲಿ ಒಂದೈದಾರು ವೈದಿಕ, ಪಿತೃಪಕ್ಷ , ಹೀಗೆ ಎಲ್ಲವೂ ಅಪ್ಪ- ಅಮ್ಮನ ಹೆಗಲಿಗೇ. ಎರಡು ದಿನದ ಮುಂಚೆ ಅಟ್ಟದಲ್ಲಿರುವ ದೊಡ್ಡ ಪಾತ್ರೆಗಳು, ಸೌಟುಗಳು ಹೀಗೆ ಎಲ್ಲವನ್ನೂ ತೆಗೆದು ತೊಳೆದು ಇಟ್ಟರೆ, ಹಿಂದಿನ ದಿನ ಬೇಕಾದ ಎಲ್ಲಾ ತಯಾರಿ, ಬರುವವರು-ಹೋಗುವವರ ಸಮಯಕ್ಕೆ ಸರಿಯಾಗಿ ಊಟ- ತಿಂಡಿ, ಒಬ್ಬರಿಗೆ ಕಷಾಯ, ಇನ್ನೊಬ್ಬರಿಗೆ ಟೀ, ಮಕ್ಕಳಿದ್ದರೆ ಹಾಲು, ಆಗಾಗ ಕಾಫಿ ಸರಬರಾಜು ಹೀಗೆ ಯಾವುದಕ್ಕೂ ಕೊರತೆ ಮಾಡುವುದಿಲ್ಲ. ವೈದಿಕ ಮುಗಿದ ನಂತರವೂ ಪ್ರಸಾದ, ಅಡುಗೆಯೆಂದು ಕೊಟ್ಟು ಕಳಿಸುತ್ತಾಳೆ .
ಇನ್ನೊಂದು ವಿಚಾರ ಹೇಳಲೇಬೇಕು ನಾನು. ತವರಿನ ಒಂದು ಕಾರ್ಯಕ್ರಮದಲ್ಲಿ ನಾವೆಲ್ಲಾ ಮನೆಯವರು ಕೊನೇ ಪಂಕ್ತಿ ಊಟಕ್ಕೆ ಕೂತಿದ್ದೆವು. ಅಮ್ಮನ ಪಕ್ಕದಲ್ಲೇ ಕುಳಿತಿದ್ದೆ. ಎದುರುಗಡೆ ಸಾಲಿನಲ್ಲಿ ಅಡುಗೆಭಟ್ಟರು ಕುಳಿತಿದ್ದರು. ಒಂದೊಂದು ಅಡುಗೆಯನ್ನು ತಿಂದು ಚೆನ್ನಾಗಿದೆ ಎಂದು ಹೇಳುತ್ತಿದ್ದೆ. ಆಗ ಅವರು, 15 ದಿನದಿಂದ ನಿಮ್ಮ ಅಮ್ಮಂದು ಒಂದೇ ಗಲಾಟೆ. ಮಗಳು ಬೆಂಗ್ಳೂರಿಂದ ಬರ್ತಾಳೆ, ಹಲಸಿನ ಕಾಯಿ ಪಲ್ಯ ಮಾಡ್ಳೇಬೇಕು ಅಂತ , ಕೊನೆಗೂ ಗಲಾಟೆ ಮಾಡಿ ಹಲಸಿನಕಾಯಿ ಕೆಡವಿಸಿ , ಇವತ್ತು ಪಲ್ಯ ಮಾಡ್ಸಿದ್ರು ಅಂತ ಹೇಳಿದ್ರು. ಅವಳ ಪ್ರೀತಿಗೆ, ಅದರ ರೀತಿಗೆ ಮಾತು ಮೂಕವಾಗಿತ್ತು. ಅವಳನ್ನು ಬಿಟ್ಟರೆ ಇನ್ಯಾರು ಆ ಪ್ರೀತಿ, ಕಾಳಜಿ ತೋರಿಸಲು ಸಾಧ್ಯ.
ಒಮ್ಮೆ ನಾನು ಪೇಟೆಗೆ ಹೊರಟಾಗ ಯಾವುದೋ ಒಂದು ಭಕ್ತಿಗೀತೆಯ ಪುಸ್ತಕ ಬೇಕು ಎಂದು ಕೇಳಿದಳು. ತಂದು ಕೊಟ್ಟಿದ್ದೆ, ಆಗ ಖುಷಿ ನೋಡಬೇಕು ಅವಳ ಮೊಗದಲ್ಲಿ. ಸಂಜೆ ದೇವರ ಮುಂದೆಯೋ, ಅಡುಗೆ ಮನೆಯಲ್ಲೋ ಕುಳಿತು ಒಂದಷ್ಟು ಹೊತ್ತು ಭಜನೆ ಮಾಡಿದರೇ ಅವಳಿಗೆ ಸಮಾಧಾನ. ಈಗಲೂ ಪುಸ್ತಕಗಳನ್ನು ನೋಡಿ ಹೊಸ ಹೊಸ ದೇವರ ನಾಮಗಳನ್ನು ಕಲಿತು ಅಷ್ಟೇ ಖುಷಿಯಿಂದ ತನ್ನ ಪಾಡಿಗೆ ತಾನು ಹಾಡಿಕೊಂಡು ಅದರಲ್ಲೇ ನೆಮ್ಮದಿ ಕಾಣುತ್ತಾಳೆ. ಹೀಗೆ ಅವಳ ಬಗ್ಗೆ ಹೇಳುತ್ತಾ ಹೋದರೆ ಒಂದು ಕಾದಂಬರಿಯಾದರೂ ಮುಗಿಯುವುದಿಲ್ಲ..
ಈಗ ಅನುಕೂಲವಾದ ಮನೆ, ಕೊಟ್ಟಿಗೆ, ಹಸು- ಕರು, ಗದ್ದೆ, ತೋಟ, ಭತ್ತ, ತೆಂಗಿನಕಾಯಿ, ಏಲಕ್ಕಿ, ಕಾಫಿ, ಮೆಣಸು ಕಾಳು, ಅನಾನಸ್, ಬಾಳೆಹಣ್ಣು , ಸಪೋಟ, ಆಳುಕಾಳು, ಕಾರು, ನಲ್ಲಿ ತಿರುಗಿಸಿದರೆ ಬೇಕಾದಷ್ಟು ಬಂದು ಬೀಳುವ ನೀರು, ಹೀಗೆ ಎಲ್ಲವೂ ಇದೆ. ಈ ಮೊದಲು ಕಷ್ಟದ ಹೊಡೆತ ತಿಂದದ್ದಕ್ಕೆ ಲೆಕ್ಕವಿಲ್ಲ. ಈಗಲಾದರೂ ನೆಮ್ಮದಿಯಿಂದ, ಅವಳಿಗೆ ಹೇಗೆ ಖುಷಿ ಕೊಡುತ್ತದೆಯೋ ಹಾಗೆ ಸುಖವಾಗಿರಲಿ ಎಂಬುದೇ ಮಗಳಾಗಿ ಮನದಾಳದ ಹಾರೈಕೆ ಹಾಗೂ ಆ ದೇವರಲ್ಲಿ ನನ್ನ ಬೇಡಿಕೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಮಂಗಳ ಎಂ ನಾಡಿಗ್ – ಲೇಖಕಿ, ಅಂಕಣಕಾರ್ತಿ, ಬೆಂಗಳೂರು.
