‘ನಡುಗುವ ಬೆಳಕಿನೊಳಗೆ’ ಕವನ

‘ ಸಾಧನೆಯೆಂದರೆ ಗಾಳಿಯನ್ನು ನಿಲ್ಲಿಸುವುದಲ್ಲ, ಜ್ವಾಲೆಯನ್ನು ಉಳಿಸುವುದು’… ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಮನೆಯ
ದೀಪವನ್ನು ಹಚ್ಚಿದಾಗ
ಗಾಳಿ ಬೀಸಿದರೆ
ಅದು ಅಲುಗಾಡುತ್ತದೆ!
ಆದರೂ
ನಂದಿಬಿಡುವುದಿಲ್ಲ ತಕ್ಷಣ!

ಮತ್ತೆ
ಗಾಳಿಯ ನಡುವೆಯೇ
ಅದನ್ನು ಇಟ್ಟಾಗ
ಮತ್ತೆ ನಡುಗುತ್ತದೆ ದೀಪದ ಜ್ವಾಲೆ
ಆದರೂ
ಬೆಳಗಲು ಯತ್ನಿಸುತ್ತಲೇ ಇರುತ್ತದೆ!

ನಮ್ಮ ಕನಸುಗಳು
ಹೀಗೆಯೇ ನಡುಗುತ್ತವೆ
ಸಂದೇಹಗಳ ಗಾಳಿಯಲ್ಲಿ
ಭಯಗಳ ನೆರಳಿನಲ್ಲಿ
ಆಗಂತುಕರ ಊಹೆಯಲ್ಲಿ
ಆದರೂ
ನಂದಿಹೋಗಲು ಬಯಸುವುದಿಲ್ಲ ಆ ಕ್ಷಣ!

ನಾವು ಯೋಚಿಸುತ್ತೇವೆ
ಅದೊಂದು ದಿನ
ಶಾಂತವಾದ ಸ್ಥಳ ಸಿಕ್ಕರೆ
ದೀಪದಂತೆ ಸ್ಥಿರವಾಗುತ್ತೇವೆಂದು!
ಜೀವನದ ಎಲ್ಲವೂ ಸರಿಯಾಗುತ್ತದೆಂದು!

ಆದರೆ
ದೀಪವನ್ನು
ಗಾಳಿಯಿಲ್ಲದ ಸ್ಥಳದಲ್ಲಿ ಮಾತ್ರ
ಬೆಳಗಿಸಬೇಕೆಂದರೆ
ಅದು ದೀಪದ ಕಾರ್ಯವಲ್ಲ!
ಬೆಳಗಿಸಿಕೊಳ್ಳುವ ನಮ್ಮ ದಾರಿಯೆಲ್ಲ!

ನಮ್ಮೊಳಗೂ
ಶಾಂತಿಯ ಜ್ವಾಲೆ ಇದೆ
ಇದು ನಮಗೆ ಬೆಳಕು ಕೊಡುತ್ತದೆ!
ಆದರೆ ನಮ್ಮೊಳಗೇ
ಗಾಳಿಯ ಅಸ್ಥಿರತೆಯೂ ಇದೆ!

ಸಾಧನೆಯೆಂದರೆ
ಗಾಳಿಯನ್ನು ನಿಲ್ಲಿಸುವುದಲ್ಲ
ಜ್ವಾಲೆಯನ್ನು ಉಳಿಸುವುದು!

ಶಾಂತಿ ಎಲ್ಲೋ ದೂರದಲ್ಲಿಲ್ಲ
ಅದು ಇಲ್ಲೇ ಇದೆ!
ನಡುಗುವ ಬೆಳಕಿನೊಳಗೆ!
ಜಂಗಮ ಮನದೊಳಗೆ!
ಸ್ಥಾವರ ಮನೆಯೊಳಗೆ!


  • ಟಿ.ಪಿ.ಉಮೇಶ್ –  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಚಿತ್ರದುರ್ಗ.

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading