ಜೀರುಂಡೆಯ ಅದ್ಭುತ ರಾಸಾಯನಿಕ ಶಕ್ತಿ

ಬೊಂಬಾರ್ಡಿಯರ್ ಜೀರುಂಡೆ ದೊಡ್ಡ ಪ್ರಾಣಿ ಅಲ್ಲ.ಲವು ಪ್ರಾಣಿಗಳು ಓಡಿ ತಪ್ಪಿಸಿಕೊಳ್ಳುತ್ತವೆ, ಕೆಲವು ಮರೆಯಾಗುತ್ತವೆ, ಕೆಲವು ಮುಳ್ಳಿನಿಂದ ರಕ್ಷಿಸಿಕೊಳ್ಳುತ್ತವೆ. ಆದರೆ ಈ ಜೀರುಂಡೆ ತನ್ನ ದೇಹದ ರಸಾಯನಶಾಸ್ತ್ರವನ್ನೇ ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿದೆ. ಬೊಂಬಾರ್ಡಿಯರ್ ಜೀರುಂಡೆ ವಿಶೇಷತೆಯ ಕುರಿತು ಪಶುವೈದ್ಯಕೀಯ ಪ್ರಾಧ್ಯಾಪಕರಾದ ಡಾ. ಎನ್.ಬಿ.ಶ್ರೀಧರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

(ಪ್ರಾಣಿ ಪಶು ಪಶು ಪಕ್ಷಿ ಪ್ರಪಂಚದ ವಿಸ್ಮಯಗಳು ಸರಣಿ )

ಬೊಂಬಾರ್ಡಿಯಾ ಜೀರುಂಡೆಯನ್ನು ವಿಶ್ವದ ಪ್ರಥಮ ರಾಸಾಯನಿಕ ಸಮರವೀರ ಎಂದು ಕರೆಯಬಹುದು. ತಾನೇ ತಯಾರಿಸಿದ ರಾಸಾಯನಿಕ ಆಯುಧವನ್ನು ಇದು ಬಳಸಿ ಶತ್ರುಗಳನ್ನು ವಿಸ್ಮಯಕಾರಿಯಾಗಿ ಓಡಿಸುತ್ತದೆ. ವಿಶ್ವದ ಅತ್ಯಂತ ಪ್ರಸಿದ್ಧ ಭೌತವಿಜ್ಞಾನಿಗಳು ಮತ್ತು ರಸಾಯನಶಾಸ್ತ್ರಜ್ಞರು ಸಹ ವಿಸ್ಮಯಗೊಂಡಿರುವ ಒಂದು ಅದ್ಭುತ. ಅತ್ಯಂತ ಬಿಸಿ, ವಿಷಕಾರಿ ರಾಸಾಯನಿಕಗಳ ಸ್ಫೋಟದ ಶಬ್ಧದೊಡನೆ ಹೊರ ಹಾಕುವ ವಿಶಿಷ್ಟ ರಾಸಾಯನಿಕ ರಕ್ಷಣಾ ವ್ಯವಸ್ಥೆಗಾಗಿ ಈ ಜೀರುಂಡೆಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಪ್ರಪಂಚದ ಅತ್ಯಂತ ಅತ್ಯಾಧುನಿಕ ರಕ್ಷಣಾ ಕಾರ್ಯವಿಧಾನಗಳಲ್ಲಿ ರಾಸಾಯನಿಕ ಸಮರವನ್ನು ಮಾನವ ಕಂಡುಹಿಡಿಯುವ ಲಕ್ಷಾಂತರ ವರ್ಷಗಳ ಮೊದಲೇ ಅದನ್ನು ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡಿರುವ ಸಣ್ಣ ಕೀಟ ಈ ಜೀರುಂಡೆ.

ಶತ್ರು ಹತ್ತಿರ ಬಂದಾಗ ಅದು ತನ್ನ ಹೊಟ್ಟೆಯ ಕೊನೆಯ ಭಾಗದಿಂದ ಬಿಸಿ, ಕಟುವಾಸನೆಯ ರಾಸಾಯನಿಕ ದ್ರವವನ್ನು ಸಣ್ಣ ಸಣ್ಣ ಹೊಡೆತಗಳನ್ನು “ಬಾಂಬ್” ರೂಪದಲ್ಲಿ ಹೊರಹಾಕುವ ಈ ಜೀರುಂಡೆಗೆ “ಬೊಂಬಾರ್ಡಿಯರ್” ಎಂಬ ಹೆಸರು ಬಂದಿದೆ. ಆದರೆ ವೈಜ್ಞಾನಿಕವಾಗಿ, ಇದು ಕೀಟದ ದೇಹದಲ್ಲಿ ನಿಯಂತ್ರಿತವಾಗಿ ನಡೆಯುವ ಸಹಜ ರಾಸಾಯನಿಕ ರಕ್ಷಣಾ ಪ್ರತಿಕ್ರಿಯೆ. ಶತ್ರುವನ್ನು ಕೊಲ್ಲುವುದಕ್ಕಿಂತ, ಅದನ್ನು ದೂರ ಸರಿಸುವುದು ಅಥವಾ ಹೆದರಿಸುವುದೇ ಇದರ ಮುಖ್ಯ ಉದ್ದೇಶ. ಕಾಡಿನ ನಿರ್ದಯ ಜಗತ್ತಿನಲ್ಲಿ, ಅತ್ಯಂತ ತನ್ನ ಗಾತ್ರಕ್ಕಿಂತ ಅತ್ಯಂತ ದೊಡ್ಡ ಕ್ರೂರ ಪರಭಕ್ಷಕಗಳನ್ನು ತನ್ನ ರಾಸಾಯನಿಕ ಸಮರದಿಂದ ಹಿಮ್ಮೆಟ್ಟಿಸುವ ಈ ಸಣ್ಣ ಜೀರುಂಡೆಯ ಜೀವ ಕ್ರಮ ಆಶ್ಚರ್ಯ ಹುಟ್ಟಿಸುತ್ತದೆ.

ಜೀವ ವಿವರ

ಬೊಂಬಾರ್ಡಿಯರ್ ಜೀರುಂಡೆಗಳು ಕ್ಯಾರಬಿಡೆ ಕುಟುಂಬಕ್ಕೆ ಸೇರಿದ ನೆಲದ ಜೀರುಂಡೆಗಳ ಗುಂಪಿಗೆ ಸೇರಿದ್ದು, ಬ್ರಾಚಿನಸ್, ಫೆರೋಪ್ಸೋಫಸ್ ಮತ್ತು ಸ್ಟೆನಾಪ್ಟಿನಸ್‌ನಂತಹ ಕುಲಗಳಡಿಯಲ್ಲಿ ವರ್ಗೀಕರಿಸಲಾಗಿದೆ. ಇವು ಕೀಟಭಕ್ಷಕಗಳು ಮತ್ತು ಇವು ಸಣ್ಣ ಕೀಟಗಳು, ಲಾರ್ವಾಗಳು, ಹುಳಗಳು ಮತ್ತು ಮೃದು ದೇಹದ ಹುಳಗಳನ್ನು ತಿನ್ನುತ್ತವೆ. ವಯಸ್ಕ ಜೀವಿಗಳು ಸಾಮಾನ್ಯವಾಗಿ 5 ರಿಂದ 15 ಮಿಮೀ ಉದ್ದವಿರುತ್ತವೆ. ಬೊಂಬಾರ್ಡಿಯರ್ ಜೀರುಂಡೆಗಳು ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಪ್ರಪಂಚದ ಎಲ್ಲಾ ಖಂಡಗಳಲ್ಲೂ ಕಂಡುಬರುತ್ತವೆ ಮತ್ತು ಇವು ಸಾಮಾನ್ಯವಾಗಿ ಕಾಡುಗಳು ಹಾಗೂ ನದಿತೀರಗಳಂತಹ ತೇವಾಂಶವುಳ್ಳ, ಸಮಶೀತೋಷ್ಣ ಪರಿಸರದಲ್ಲಿರುವ ಕಲ್ಲುಗಳು ಮತ್ತು ಮರದ ದಿಮ್ಮಿಗಳ ಅಡಿಯಲ್ಲಿ ಅಡಗಿರುತ್ತವೆ.

ರೂಪವಿಜ್ಞಾನದ ವಿಶೇಷತೆ

ಅವುಗಳ ಅಂಗರಚನಾ ಲಕ್ಷಣವೆಂದರೆ ಹೊಟ್ಟೆಯ ತುದಿಯಲ್ಲಿರುವ ಪ್ರತಿಕ್ರಿಯಾ ಕೋಣೆ. ಇದು ಹೆಚ್ಚಿನ ಒತ್ತಡದ ಸ್ಫೋಟಗಳನ್ನು ತಡೆದುಕೊಳ್ಳಲು ಕೈಟಿನ್ ಮತ್ತು ಸ್ಕ್ಲೆರೋಟಿನ್‌ನೊಂದಿಗೆ ಬಲಪಡಿಸಲ್ಪಟ್ಟಿದೆ. ಈ ಎರಡೂ ಕೋಣೆಗಳು ಒಂದು ಪದರದಿಂದ ಬೇರ್ಪಟ್ಟು ಯಾವತ್ತೂ ಸಹ ಮಿಶ್ರಣಗೊಳ್ಳುವುದಿಲ್ಲ.ಈ ಜೀರುಂಡೆಯ ದೇಹದೊಳಗೆ ಇರುವ ಪ್ರಕೃತಿಯ ಈ ಅದ್ಭುತವಾದ ಹೊಟ್ಟೆಯಲ್ಲಿ ಎರಡು ಪ್ರತ್ಯೇಕ ವಿಭಾಗಗಳಿವೆ. ಒಂದು ವಿಭಾಗದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಹೈಡ್ರೋಕ್ವಿನೋನ್‌ನಂತಹ ಶಕ್ತಿಶಾಲಿ ರಾಸಾಯನಿಕಗಳಿವೆ ಮತ್ತು ಇನ್ನೊಂದು ಭಾಗದಲ್ಲಿ ವಿಶೇಷ ಕಿಣ್ವಗಳನ್ನು ಹೊಂದಿರುತ್ತದೆ. ಈ ಎರಡು ರಾಸಾಯನಿಕಗಳನ್ನು ಪ್ರತ್ಯೇಕವಾಗಿ ಇರಿಸಿದಾಗ, ಸಂಪೂರ್ಣವಾಗಿ ಇವು ನಿರುಪದ್ರವಿಗಳು. ಆದರೆ ಅವು ಸೇರಿಕೊಂಡರೆ, ಅವು ಅತ್ಯಂತ ಅಪಾಯಕಾರಿ ಮತ್ತು ಸ್ಫೋಟಕದಂತ ಬಲ ಹೊಂದುತ್ತವೆ. ಶತ್ರು ಪರಭಕ್ಷಕವು ಅದರ ಮೇಲೆ ದಾಳಿ ಮಾಡಿದಾಗ, ಈ ಜೀರುಂಡೆ, ಒಂದು ಕ್ಷಣವೂ ವಿಳಂಬವಿಲ್ಲದೆ, ಎರಡೂ ಕೋಣೆಗಳಿಂದ ರಾಸಾಯನಿಕಗಳನ್ನು ಮೂರನೇ ದಹನ ಕೊಠಡಿಗೆ ತಳ್ಳುತ್ತದೆ. ಅವು ಮಿಶ್ರಣವಾಗುತ್ತಿದ್ದಂತೆ, ಶಕ್ತಿಯುತ ರಾಸಾಯನಿಕ ಕ್ರಿಯೆ ನಡೆಯುತ್ತದೆ. ರಾಸಾಯನಿಕದ ತಾಪಮಾನವು ತಕ್ಷಣವೇ 100 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ.

ಇದು ಕುದಿಯುವ ನೀರಿಗೆ ಸಮನಾಗಿರುತ್ತದೆ. ಈ ರೀತಿ ತಂತ್ರಜ್ಞಾನವನ್ನು ರಾಕೆಟ್ ಉಡಾಯಿಸುವಾಗ ಬಳಸಿಕೊಳ್ಳಲಾಗುತ್ತದೆ. ನಂತರ, ತನ್ನ ಹಿಂಭಾಗದಿಂದ, ಜೀರುಂಡೆ ಈ ಕುದಿಯುವ ಆಮ್ಲವನ್ನು ಶತ್ರು ಪರಭಕ್ಷಕನ ಮುಖದ ಮೇಲೆ ನೇರವಾಗಿ ಹಾರಿಸುತ್ತದೆ. ಅದರೊಂದಿಗೆ ಹೊಗೆಯ ಮೋಡ ಮತ್ತು ಪ್ರತಿಧ್ವನಿಸುವ ಸ್ಫೋಟವೂ ಇರುತ್ತದೆ. ಈ ಜೀರುಂಡೆ ತಾನು ಹೊಂದಿರುವ ನೈಸರ್ಗಿಕ ಗನ್‌ಪೈಪ್ ಅನ್ನು 270 ಡಿಗ್ರಿಗಳಷ್ಟು ತಿರುಗಿಸಿ ನಿಖರತೆಯನ್ನು ಸಾಧಿಸಿ ಪಿಚಕಾರಿಯಂತೆ ಪ್ರಭಲ ರಾಸಾಯನಿಕವನ್ನು ಚಿಮ್ಮಿಸುವ ರಭಸಕ್ಕೆ ಹೆದರಿಕೆಯೇ ಇಲ್ಲದ ಹನಿ ಬ್ಯಾಡ್ಜರಿನಂತ ಪ್ರಾಣಿಗಳೇ ಪಲಾಯನಗೈಯುತ್ತವೆ. ಬೊಂಬಾರ್ಡಿಯರ್ ಜೀರುಂಡೆಯ ಇನ್ನೊಂದು ವಿಶೇಷತೆಯೆಂದರೆ ಅದರ ನಿಖರ ಗುರಿ. ಇದು ದ್ರವವನ್ನು ಕೇವಲ ಹಿಂದಕ್ಕೆ ಮಾತ್ರ ಹೊರಹಾಕುವುದಿಲ್ಲ; ಹೊಟ್ಟೆಯ ತುದಿಯನ್ನು ತಿರುಗಿಸಿ, ಶತ್ರು ಯಾವ ದಿಕ್ಕಿನಿಂದ ಬರುತ್ತಿದೆಯೋ ಆ ದಿಕ್ಕಿಗೇ ದ್ರವವನ್ನು ಚಿಮ್ಮಿಸಬಲ್ಲದು.

ಸ್ವಯಂ ರಕ್ಷಣೆ

ಇದನ್ನು ಭಕ್ಷಿಸುವ ಪರಭಕ್ಷಕ ಮುಂಭಾಗದಿಂದ, ಹಿಂದಿನಿಂದ ಅಥವಾ ಎಡದಿಂದ ಬಂದರೂ, ಕುದಿಯುವ ರಾಸಾಯನಿಕವು ಅದನ್ನು ನೇರವಾಗಿ ಕಣ್ಣಿನಂತ ಸೂಕ್ಷ್ಮ ಅಂಗಗಳಿಗೆ ಎರಚಿ, ಭಯಭೀತರಾಗಿ ಓಡಿಹೋಗುವಂತೆ ಮಾಡುತ್ತದೆ. ಈ ಸಣ್ಣ ಜೀರುಂಡೆ ಅಕಸ್ಮಾತ್ತಾಗಿ ಹಿಸುಕಲ್ಪಟ್ಟರೆ ಈ ರಾಸಾಯನಿಕಗಳು ಆಕಾಸ್ಮಾತ್ತಾಗಿ ಮಿಶ್ರಣಗೊಂಡು ಅದು ಸ್ವತಃ ಸುಟ್ಟು ಬೂದಿಯಾಗುತ್ತದೆ. ಕೆಲವೊಮ್ಮೆ ಕಪ್ಪೆಗಳು ಈ ಜೀರುಂಡೆಯನ್ನು ನುಂಗಿದ ಬಳಿಕವೂ, ಹೊಟ್ಟೆಯೊಳಗೆ ಜೀರುಂಡೆ ಬಿಡುಗಡೆ ಮಾಡಿದ ಬಿಸಿ ರಾಸಾಯನಿಕದಿಂದಾಗಿ ಅದನ್ನು ಮತ್ತೆ ಹೊರಗೆ ಉಗುಳಿದಾಗ ಇವು ಓಡಿ ಬದುಕುಳಿಯುತ್ತವೆ.

ಪ್ರಕೃತಿಯ ಪಾಠ

ಬೊಂಬಾರ್ಡಿಯರ್ ಜೀರುಂಡೆ ದೊಡ್ಡ ಪ್ರಾಣಿ ಅಲ್ಲ. ಆದರೆ ಅದರ ದೇಹದೊಳಗಿನ ವ್ಯವಸ್ಥೆ ದೊಡ್ಡ ವೈಜ್ಞಾನಿಕ ಪಾಠವನ್ನು ಹೇಳುತ್ತದೆ. ಬದುಕುಳಿಯುವ ತಂತ್ರಗಳು ಕೇವಲ ಗಾತ್ರ, ಬಲ ಅಥವಾ ವೇಗದ ಮೇಲೆ ಮಾತ್ರ ಅವಲಂಬಿತವಲ್ಲ ಎಂಬುದನ್ನು ಇದು ಸಾರುತ್ತದೆ. ಕೆಲವು ಪ್ರಾಣಿಗಳು ಓಡಿ ತಪ್ಪಿಸಿಕೊಳ್ಳುತ್ತವೆ, ಕೆಲವು ಮರೆಯಾಗುತ್ತವೆ, ಕೆಲವು ಮುಳ್ಳಿನಿಂದ ರಕ್ಷಿಸಿಕೊಳ್ಳುತ್ತವೆ. ಆದರೆ ಈ ಜೀರುಂಡೆ ತನ್ನ ದೇಹದ ರಸಾಯನಶಾಸ್ತ್ರವನ್ನೇ ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿದೆ.

ಕೊನೆಯ ಮಾತು

ಜೀರುಂಡೆಯ ಈ ರಾಸಾಯನಿಕ ಅಸ್ತ್ರ ಶತ್ರುವಿನ ಮೇಲೆ ದಾಳಿ ಮಾಡಲು ನಿರ್ಮಿತವಾದ ಆಯುಧವಲ್ಲ. ಅದು ಕೇವಲ ಬದುಕುಳಿಯಲು ರೂಪುಗೊಂಡ ರಕ್ಷಣಾ ವ್ಯವಸ್ಥೆ. ಈ ಸಂಕೀರ್ಣ ರಾಸಾಯನಿಕ ಸ್ಥಾವರವನ್ನು ಅನಾದಿಕಾಲದಿಂದ ಜಗತ್ತಿನಲ್ಲಿರುವ ಈ ಸಣ್ಣ ಕೀಟ ತನ್ನೊಳಗೆ ತಾನು ಇರಿಸಿಕೊಂಡು ರಕ್ಷಸಿಕೊಳ್ಳುತ್ತದೆ. ಹೀಗೆಯೇ ಜೀವ ಜಗತ್ತಿನ ಅಸಂಖ್ಯ ಪಶು ಪಕ್ಷಿ ಪ್ರಾಣಿ ಪ್ರಪಂಚದಲ್ಲಿ ಸಾವಿರಾರು ವಿಸ್ಮಯಗಳು ಹುದುಗಿದ್ದು ಅದನ್ನು ಮನೋಡುವ ಆಸ್ವಾದಿಸುವ ಆಸಕ್ತಿ ಇರಬೇಕು.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ,ಶಿವಮೊಗ್ಗ .

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading