ಬದುಕಿಗೊಂದು ಸೆಲೆ (ಭಾಗ- ೭೯)

‘ಸಹಾನುಭೂತಿ, ಸಹಬಾಳ್ವೆ ಹಾಗೂ ಸಹಮತದಿಂದ ಜೀವಿಸಿದರೆ ಮಾತ್ರ ಬದುಕಿಗೆ ಹೆಚ್ಚಿನ ಅರ್ಥಪೂರ್ಣತೆ ದೊರೆಯುತ್ತದೆ. ನಮ್ಮ ವೈಯುಕ್ತಿಕ ಹಿತಾಸಕ್ತಿಯ ಭಾವಗಳನ್ನು ಗಮನದಲ್ಲಿ ಇಟ್ಟುಕೊಂಡೇ ಇನ್ನೊಬ್ಬರ ನೋವು, ನಿರಾಶೆ ಮತ್ತು ಸಂಕಟಗಳಿಗೆ ಕಿವಿಯಾಗಿ, ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಹೀಗೊಂದು ವ್ಯಾಪಾರ, ಬದುಕಿನ ವ್ಯವಹಾರ ’ ತಪ್ಪದೆ ಮುಂದೆ ಓದಿ…

ತರಕಾರಿ ಮಾರುವ ಹೆಣ್ಣು ಮಗಳು ‘ಅಕ್ಕಾವ್ರ… ಒಂದು ಸೌತೆಕಾಯಿ ತಿನ್ನಾಕ ಒಂದು ಸೌತೆಕಾಯಿ ಚೀಲಕ್ಕೆ ಅಂತ ಹಾಕೋಬ್ಯಾಡ್ರಿ ನೀವು. ಕಾಯಿಪಲ್ಲೆ ದುಬಾರಿ ಅದಾವು. ನಿಮ್ಮಂತಹ ಹತ್ತು ಜನ ಗಿರಾಕಿ ಬಂದ ಹಿಂಗ ಮಾಡಿದ್ರ ನಮಗ್ ಲುಕ್ಸಾನ್ ಅಕೈತಿ. ಅಣ್ಣಾರ ನಿಮಗೆ ಬ್ಯಾರೆ ಹೇಳಬೇಕನ್ರೀ…. ನೀವು ಹಿಂಗ ಒಂದೊಂದೇ ಹಾಕ್ಕೊಂತ ಹೋದರೆ ನಮಗೆ ಏನು ಗಿಟ್ಟತೈತ್ರಿ. ಇದರ ಮ್ಯಾಲ್ ಮತ್ತ ಹತ್ತಿಪ್ಪತ್ತು ಬಿಡುಸ್ಕೊಂತೀರಿ….. ಹಿಂಗಾದ್ರೆ ನಾವು ವ್ಯಾಪಾರ ಮಾಡೋದು ಹೆಂಗ್ರಿ ?’…

”ತರಕಾರಿ ಕೊಳ್ಳಲು ಬಂದ ಮಹಿಳೆ… ಒಂದು ರೂಪಾಯಿಗೆ ತಂದು ಹತ್ರುಪಾಯಿಗೆ ಮಾರ್ತಾರೆ ಎಷ್ಟು ಜೋರ ನೋಡ ಇವರ್ದು. ಏನೋ ಮೊದಲಿಂದ ಇವ್ರ್ ಹತ್ರ ತಗೊಂಡಿವಿ ಅಂತ ಬರ್ತೀವಿ ನಾವು.. ಒಂದೆರಡು ಮೇಲೆ ಹಾಕೊಂಡ್ರೆ ಏನಾತು ? ಪುಟ್ಟಿ ಲೆಕ್ಕದಾಗ ಖರೀದಿ ಮಾಡಿ ಕೆಜಿ ಲೆಕ್ಕದಾಗ್ ಮಾರಾಟ ಮಾಡ್ತಾರಾ !… ಲಾಭ ಆಗಲಾರದೆ ಇರ್ತದ ಏನು? ನಿನ್ನೆ ಬಾಜುಮನಿಯಾಕೆ ಹೇಳಿದ್ಲು… ಇಲ್ಲಿಗಿಂತ ಮಾಲನ್ಯಾಗ ಫ್ರೆಶ್ ಇರ್ತಾವು. ದುಬಾರಿಯಾದರೂ ಅಲ್ಲೇ ತಗೋಂತೀವಿ ನಾವು ಅಂತ. ಇಲ್ಲಿ ಒಂದಿಷ್ಟು ಚೌಕಾಸಿ ಮಾಡಿ ಹೆಚ್ಚು ಕಮ್ಮಿ ತಗೊಂತೀವಿ ಅಲ್ ಹಂಗ ಮಾಡಾಕ್ ಬರುವುದಿಲ್ಲ ಡಿಜಿಟಲ್ ಪೇಮೆಂಟ್ ಮಾಡಿ ಬರ್ತೀವಿ… ಇಲ್ಲಿ ಸಸ್ತಾದಾಗು ಸಿಗುತ್ತೆ ಮತ್ತೆ ಮ್ಯಾಲೆ ಹೆಚ್ಚು ಕಮ್ಮಿ ಚೌಕಾಸಿ ಮಾಡಾಕ್ ಬರ್ತೈತಿ …. ಹೌದಲ್ಲವಾ”.

ಖರೀದಿಸುವಾಕೆಯ ಗಂಡ (ಹೆಂಡತಿಯ ಕಿವಿಯಲ್ಲಿ ಮೆಲ್ಲಗೆ ಪಿಸುಗುಟ್ಟುತ್ತಾ ) ‘ಎಷ್ಟರ ಚೌಕಾಸಿ ಮಾಡ್ತೀ ನೀ. ಮುಂಜಾನಿಂದ ಸಂಜೀತನಕ ಅವರು ಕಾಯಿಪಲ್ಲೆ ಮಾರ್ತಾರಾ. ಅವರಿಗೂ ಒಂದೀಟು ಲಾಭ ಬೇಕ ಬ್ಯಾಡ. ನೀನ ಅಲ್ಲೊಂದ ನಾಲ್ಕು ರೂಪಾಯಿ, ಇಲ್ಲೊಂದೆರಡು ರೂಪಾಯಿ ಉಳಿಸಿ ಗಂಟ್ ಮಾಡಿ ಮನಿ ಕಟ್ಟಾಕ ಆಗತೈತೇನು ? ಸುಮ್ನೆ ಕೊಟ್ ಬರಬಾರದಾ ? ಏನ್ ಬೀದ್ಯಾಗ ನಿಂತ್ಕೊಂಡು ಬಾಯ್ ಮಾಡತೀ?’…

ಗಂಡನನ್ನು ದುರುಗುಟ್ಟಿ ನೋಡುತ್ತಾ ಹೆಣ್ಣು ಮಗಳು ನೀವು ಸುಮ್ನಿರ್ರಿ.. ಇದು ಹೆಣ್ಮಕ್ಕಳು ವ್ಯವಹಾರ ನಿಮಗ ಗೊತ್ತಾಗಂಗಿಲ್ಲ. ಹೋದ ವಾರ ಈ ಹೆಣ್ಣು ಮಗಳು ನನಗೆ 15 ರೂಪಾಯಿಗೆ 1/4 ಕೆಜಿ ಕೊಟ್ರ, ಹಿಂದಿನ ಓಣಿ ಕಮಲಾಗ ಹತ್ರುಪಾಯಿ ಕೊಟ್ಟಾಳ. ತಪ್ಪಲ್ಲನು ಇಕೀದು. ಮತ್ತೆ ಕಮಲಾ ಅಂತಾಳ ನಿಮಗೆ ವ್ಯಾಪಾರ ಮಾಡಾಕ್ ಬರಂಗಿಲ್ಲ ಅಂತ. ತರಕಾರಿ ಮಾರುವಾಕೆ … ಅವ್ವಾರ. ತಪ್ಪ ತಿಳಿಯಬ್ಯಾಡ್ರಿ ಎಲ್ಲಾ ಮಾರ್ಕೊಂತ ಅವರ ಮನೀಗೆ ಹೋದಾಗ ಎಲ್ಲ ಕಾಯಿಪಲ್ಲೆಗೋಳು ಪಾವ ಪಾವ ಕೆಜಿ ಉಳಿದಿದ್ದವ್ರಿ. ನಂಗೂ ಹೊಟ್ಟಿ ಭಾಳ ಹಸಿದಿತ್ತು. ಅದಕ್ಕೆ ಅವರಿಗೆ ಹತ್ತತ್ರೂಪಾಯಿಯಂಗ ಕೊಟ್ಟು ಪುಟ್ಟಿ ಖಾಲಿ ಮಾಡಿ ಮನೆಗೆ ಹ್ವಾದಿನ್ರಿ. ಅಷ್ಟಕ್ಕೂ.. ಅವರು ನೀವು ಒಂದೇ ಅನ್ರೀ ಅಕ್ಕಾರೆ. ನಿಮ್ದ ಲೆವೆಲ್ ಬ್ಯಾರೆ… ಅವರ ಲೆವಲ್ಲ ಬ್ಯಾರೆ ನೀವು ನೌಕರದಾರ ಮಂದಿ. ಅವರು ನಮ್ಮಂಗೆ ದುಡುಕೊಂಡ್ ತಿನ್ನಾಕ್ ಈ ಊರಿಗೆ ಬಂದಾರ್ರೀ… ಹೌದಿಲ್ಲರೀ ಅಣ್ಣಾರ.ನಾ ಹೇಳೋದ್ ಖರೆ ಐತಿಲ್ಲ.

ಖರೀದಿಸುವಾಕೆಯ ಗಂಡ ‘ನೀ ಹೇಳೂದ ನೂರ್ ಪಾಲ್ ಖರೆ ಐತಿ. ನಿಮ್ಮ ಅಕ್ಕಾರಿಗೆ ಚೌಕಾಸಿ ಮಾಡದಿದ್ದರೆ ವ್ಯಾಪಾರ ಮಾಡಿದಂಗ್ ಅನುಸೂದಿಲ್ಲ, ನಾ ಎಷ್ಟು ಸಲ ಹೇಳೇನಕೀಗೆ. ಅವರಿವರ ಜೋಡಿ ನಿನ್ನ ಹೋಲಿಸಿಕೋಬ್ಯಾಡ ಅಂತ…. ಕೇಳಂಗೆ ಇಲ್ಲ. ಇರ್ಲಿ ಬಿಡು, ಆಕೆ ಹೇಳಿದ ರೇಟಿಗೆ ಕೊಡು ಇಲ್ಲಾಂದ್ರೆ ಆಮೇಲೆ ನನ್ನ ಮುಖಕ್ಕೆ ಮಂಗಳಾರತಿ ಮಾಡ್ತಾಳ…. ಬಂದು ವ್ಯಾಪಾರ ಹಾಳು ಮಾಡಿದ್ರಿ ಅಂತ”.

ಖರೀದಿಸುವ ಹೆಣ್ಣುಮಗಳು ‘ಐ ಹಂಗೇನಿಲ್ಲವಾ. ವ್ಯಾಪಾರ ಮಾಡದಿದ್ದರೂ ಕೇಳಾಕ ಏನ್ ಆಗ್ತೈತಿ. ನಿನಗೆ ಗಿಟ್ಟಿದ್ದರೆ ಕೊಡ್ತೀದಿ.. ಇಲ್ಲಂದ್ರ ಇಲ್ಲ ಅಷ್ಟಕ್ಕೂ ಚೌಕಾಸಿ ಮಾಡ್ಲಾರ್ದ ಮಾಡಿದ ವ್ಯವಹಾರಾನ ವ್ಯಾಪಾರ ಅಂತಾರೇನು ?’.

ತರಕಾರಿ ಮಾರುವ ಹೆಣ್ಣುಮಗಳು ‘ಅವ್ವಾರ ನಮ್ದು ಅರ್ಧ ಎಕರೆ ಹೊಲ ಐತ್ರೀ. ಅದರಾಗ ಪ್ಲಾಟ್ ಮಾಡಿ ಬೆಂಡಿಕಾಯಿ, ಬದನೆಕಾಯಿ, ಸೌತಿಕಾಯಿ, ಹೀರಿಕಾಯಿ ಮತ್ತು ಟಮಾಟಿ ಅಂತ ಹಾಕಿರ್ತೀವಿ. ಕೆ ಇ ಬಿ ಅವ್ರ್ ಕರೆಂಟ್ ಕೊಟ್ಟಾಗ ನೀರು ಬಿಡಬೇಕು. ಇಲ್ಲಂದ್ರೆ ಬಾವೀಲಿಂದ ನೀರನ್ನ ಹೊತ್ತು ಹಾಕ್ಬೇಕು. ಊರ್ ಹತ್ರ ಹೊಲ ಇರೋದರಿಂದ ಅಡ್ಡಾಡೋ ಮಂದಿ ಕಣ್ಣಿಂದ ಕಾಯಿಪಲ್ಲೆ ಕಾಯ್ಬೇಕು… ಆಮೇಲ್ ಹರಿದು ತಂದು ಮನೆ ಮನೆ ಮಾರಬೇಕು. ಇಷ್ಟೆಲ್ಲ ಕಷ್ಟಪಟ್ಟು ಮೇಲೆ ತಿಂಗಳು ಎರಡು ತಿಂಗಳಿಗೆ ಒಮ್ಮೆ ರೊಕ್ಕ ಕಾಣ್ತೀವಿ. ನಮ್ ಬದುಕು ನಿಮ್ಮಂಗ ಸುಲಭ ಅಲ್ರೀ! ತಿಂಗಳ ಆಗಣ ನೀವು ಪಗಾರದ ಮಾರಿ ನೋಡತೀರಿ …. ನಮ್ಮದು ಇದರಾಗ ಬದುಕು.. ಸಿಕ್ಕಷ್ಟಕ್ಕ ಶಿವಾ ಅನ್ಬೇಕು’.

ಖರೀದಿಸುವ ಹೆಣ್ಣುಮಗಳು ‘ನೌಕರಿ ಅಂತ ಹೇಳಿದ್ದ ಖರೆ ಐತಿ… ಆದರೆ ನಿನ್ನಂಗೆ ಹೊಲ ಸೈತ ಇಲ್ಲವಾ ನಮಗ. ಬಾಡಿಗೆ ಮನೆ, ಕರೆಂಟ್ ಬಿಲ್ಲು, ಕಿರಾಣಿ ಮಕ್ಕಳ ಸಾಲಿ ಎಲ್ಲಾನೂ ಪಗಾರದಾಗ ಆಗಬೇಕು. ನೋಡು ನೀನು ಅರ್ಧ ಎಕರೆ ಹೊಲದ ಮಾಲಕ ಅದೀ.ನಮ್ದೇನ್ ಐತಿ… ಏನೇನೂ ಇಲ್ಲ’.

‘ಅಲಾ ಇವನ, ಇನ್ನ ಬಿಟ್ರ ಇಕಿ ನನ್ನ ಮರ್ಯಾದೆ ಇರೋ ಸಂತೆ ಹರಾಜ್ ಹಾಕ್ತಾಳ ಎಂದು ಮನದಲ್ಲಿ ಅಂದುಕೊಂಡ ಗಂಡ ಮುಂಜಾನೆದ್ದು ಏನ್ ಮಾತ್ ಹಚ್ಚಿ ನೀನು. ಹುಡ್ಗೂರ ಸಾಲಿಗೆ ಹೋಗಾಕ ಲೇಟ ಆಗೂದಿಲ್ಲಾ.. ಮತ್ತ ನನ್ನ ಆಫೀಸಿಗೂ ತಡ ಆಕ್ಕೆತಿ. ಬಡ ಬಡ ನಡಿ ಎಂದು ಜೋರಾಗಿ ಹೇಳುತ್ತಾ ಹಣವನ್ನು ಆಕೆಯ ಕೈಯಲ್ಲಿ ಇಟ್ಟು ಮುನ್ನಡೆದರು’.
ಇದು ಬದುಕು… ಇದೇ ಬದುಕು ಅಲ್ಲವೇ ಸ್ನೇಹಿತರೆ!

ಎಲ್ಲರ ಬದುಕಿಗೂ ಅವರವರದ್ದೇ ಆದ ಇತಿಮಿತಿಗಳಿವೆ ತೊಂದರೆಗಳಿವೆ, ಸಮಸ್ಯೆಗಳಿವೆ, ಅವರದ್ದೇ ಆದ ಏರಿಳಿತಗಳಿವೆ. ಯಾವ ರೀತಿ ಒಂದೇ ಕೈಯ ಎಲ್ಲಾ ಬೆರಳುಗಳು ಸಮನಾಗಿರುವುದಿಲ್ಲವೋ ಹಾಗೆಯೇ ಎಲ್ಲರ ಬದುಕು ಒಂದೇ ರೀತಿಯಲ್ಲಿ ಇರುವುದಿಲ್ಲ. ಎಲ್ಲ ಬೆರಳುಗಳನ್ನು ಮಡಚಿದಾಗ ಅವು ಸಮನಾಗಿ ತೋರುವಂತೆ ಒಟ್ಟಾರೆಯಾಗಿ ನಮ್ಮ ಬದುಕನ್ನು ನೋಡಿದಾಗ ಅಲ್ಲಿ ಯಾವುದೇ ಅತಿರಂಜಿತ ಬದಲಾವಣೆ ಕಾಣುವುದಿಲ್ಲ.

ಎಲ್ಲರೂ ಅವರವರ ದೃಷ್ಟಿಯಲ್ಲಿ ಸಂತ್ರಸ್ತರು ಹಾಗೂ ಸಂತೃಪ್ತರು ಕೂಡ. ಇರುವುದರಲ್ಲಿ ಚೆನ್ನಾಗಿ ಬದುಕಬೇಕು ಎಂದು ಆಶಿಸುತ್ತಲೇ ತುಸು ಹೆಚ್ಚಿನದಕ್ಕೆ ಕೈ ಚಾಚುವವರದ್ದು ಕೂಡ ತಪ್ಪಿಲ್ಲ. ‘ಏ ದಿಲ್ ಮಾಂಗೆ ಮೋರ್” ಎಂಬ ಮಾತಿನಂತೆ ಎಲ್ಲವನ್ನು ತುಸು ಹೆಚ್ಚು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಆ ಹೆಚ್ಚು ನಮ್ಮ ಬದುಕಿಗೆ ಕುತ್ತಾಗುವಷ್ಟು ಹೆಚ್ಚಾಗಬಾರದು… ಅಲ್ವೇ ? ಇಲ್ಲಿ ಪರಸ್ಪರ ಸಹಾನುಭೂತಿ, ಸಹಬಾಳ್ವೆ ಹಾಗೂ ಸಹಮತದಿಂದ ಜೀವಿಸಿದರೆ ಮಾತ್ರ ಬದುಕಿಗೆ ಹೆಚ್ಚಿನ ಅರ್ಥಪೂರ್ಣತೆ ದೊರೆಯುತ್ತದೆ. ನಮ್ಮ ವೈಯುಕ್ತಿಕ ಹಿತಾಸಕ್ತಿಯ ಭಾವಗಳನ್ನು ಗಮನದಲ್ಲಿ ಇಟ್ಟುಕೊಂಡೇ ಇನ್ನೊಬ್ಬರ ನೋವು, ನಿರಾಶೆ ಮತ್ತು ಸಂಕಟಗಳಿಗೆ ಕಿವಿಯಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಮಾಡಲಾಗದಿದ್ದರೆ ಪರವಾಗಿಲ್ಲ.. ಕೆಟ್ಟದಾಗಿ ಮಾತನಾಡಬಾರದು. ಏನಂತೀರಾ ಸ್ನೇಹಿತರೆ ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading