ಬದುಕಿಗೊಂದು ಸೆಲೆ (ಭಾಗ- ೬೫)

ಸ್ವಾತಂತ್ರ್ಯ ನಂತರದ ಭಾರತದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗುತ್ತಿದ್ದಾರೆ. ಶಿಕ್ಷಿತ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಹೆಣ್ಣು ಮಕ್ಕಳು ವಿವಿಧ ರಂಗಗಳಲ್ಲಿ ತಮ್ಮ ಪ್ರಾಬಲ್ಯವನ್ನು ತೋರುತ್ತಿದ್ದಾರೆ. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ ತಪ್ಪದೆ ಮುಂದೆ ಓದಿ…

ಭೂಗೋಳದಿಂದ ಖಗೋಳದವರೆಗೆ, ಸಮುದ್ರದ ಆಳದಿಂದ ಅಂತರಿಕ್ಷದವರೆಗೆ, ಅಡುಗೆ ಮನೆಯಿಂದ ಸಂಸತ್ ಭವನದವರೆಗೆ ಹೆಣ್ಣು ಮಕ್ಕಳು ದಾಪುಗಾಲಿಕ್ಕಿ ಮುನ್ನಡೆಯುತ್ತಿದ್ದಾರೆ. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಹೆಣ್ಣು ಮಕ್ಕಳ ಸಬಲೀಕರಣವಾಗುತ್ತಿದ್ದರೂ ಕೂಡ ಕೆಲವು ವಿಷಯಗಳಲ್ಲಿ ಮಾತ್ರ ಈ ಹಿಂದೆ ಇದ್ದ ರೀತಿಯಲ್ಲಿಯೇ ಮುಂದುವರೆಸಿಕೊಂಡು ಬರಲಾಗುತ್ತಿತ್ತು.

ಕಾನೂನು, ವೈವಾಹಿಕ ವ್ಯವಸ್ಥೆ, ಹೆಣ್ಣು ಮಕ್ಕಳ ಜನನ, ಹೆಣ್ಣು ಮಕ್ಕಳನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಭಾವಿಸುವ ಲಿಂಗ ಅಸಮಾನತೆ ಮುಂತಾದ ವಿಷಯಗಳಲ್ಲಿ ಇಂದಿಗೂ ಕೂಡ ಕೆಲ ಅಲಿಖಿತ ನಿಯಮಗಳನ್ನು ಪಾಲಿಸುತ್ತಿದ್ದು ಸಮಾಜದಲ್ಲಿ ಅವುಗಳ ನಿರ್ಮೂಲನೆಗೆ ಬಹಳ ಕಾಲದಿಂದಲೂ ಹೋರಾಟ ನಡೆದಿದೆ. ನಿಧಾನವಾಗಿಯಾದರೂ ಜನರು ಸಮಾನತೆಯ ಅರಿವನ್ನು ಹೊಂದುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳು ಕೂಡ ಅಷ್ಟೇ ಮುಖ್ಯವಾಗಿದ್ದು ಮಹಿಳಾ ಸಬಲೀಕರಣವನ್ನು ಕಾನೂನಾತ್ಮಕವಾಗಿ ಪುರಸ್ಕರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಬೆಳವಣಿಗೆಗಳನ್ನು ಪಟ್ಟಿ ಮಾಡಿದಾಗ ದೊರೆತ ಮಾಹಿತಿ ಹೀಗಿದೆ.

ಮನೆ ವಾರ್ತೆಯನ್ನು ನೋಡಿಕೊಳ್ಳುವ ಗೃಹಿಣಿ ಸೋಮಾರಿಯಲ್ಲ. ಆಕೆ ಮಾಡುವ ಗೃಹ ಕೃತ್ಯವು ಆಕೆಯ ಪತಿಯ ಕಚೇರಿ ಕಾರ್ಯನಿರ್ವಹಣೆಗೆ ಸಂಪೂರ್ಣವಾಗಿ ಅನುಕೂಲ ಮಾಡಿಕೊಡುತ್ತದೆ. ಕಾರ್ಯಕ್ಷೇತ್ರದಲ್ಲಿನ ಪುರುಷನ ಪ್ರಗತಿಗೆ ಆತನ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸುವ ಪತ್ನಿಯು ಕಾರಣ ಎಂಬುದನ್ನು ಕಾನೂನು ಮಾನ್ಯ ಮಾಡಿದೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅನ್ವಯ ಹೆಣ್ಣು ಮಕ್ಕಳು ನ್ಯಾಯಾಲಯದಲ್ಲಿ ಕುಟುಂಬದ ತಾತ್ಕಾಲಿಕ ನಿರ್ವಹಣೆಗಾಗಿ ತನ್ನ ಮತ್ತು ತನ್ನ ಮಕ್ಕಳ ಬದುಕಿನ ನಿರ್ವಹಣೆಗಾಗಿ ಪತಿಯಿಂದ ತಾತ್ಕಾಲಿಕವಾಗಿ ನಿರ್ವಹಣಾ ವೆಚ್ಚವನ್ನು ಕೇಳಬಹುದು ಎಂಬುದನ್ನು ಕೂಡ ಕಾನೂನು ಮಾನ್ಯ ಮಾಡಿದೆ.

ತಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕುಗಳು ಇವೆ. ವತಿಯಿಂದ ಬೇರ್ಪಟ್ಟ ಸಿಂಗಲ್ ಮದರ್ ಎಂದು ಕರೆಯಲ್ಪಡುವ ಹೆಣ್ಣು ಮಗಳು ತನ್ನ ಮಕ್ಕಳ ಹೆಸರಿನ ಮುಂದೆ ತನ್ನ ಪತಿಯ ಹೆಸರಿನ ಬದಲಾಗಿ ತನ್ನ ಹೆಸರನ್ನು ಹಾಕಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದ್ದು ಇದಕ್ಕೆ ಕಾನೂನಿನ ಮಾನ್ಯತೆ ಇದೆ.

ನಿಜವಾದ ಗಳಿಕೆ ಮಾಡುವುದು ಹಾಗೂ ಗಳಿಕೆಯ ಅರ್ಹತೆಯನ್ನು ಹೊಂದಿರುವುದು ಸಮನಲ್ಲ. ಓದಿಕೊಂಡಿದ್ದು ಆರ್ಥಿಕವಾಗಿ ಸಬಲಳಾಗಿರುವ ಹೆಣ್ಣು ಮಕ್ಕಳು ಪತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಆಕೆಗೆ ನಿರ್ವಹಣಾ ವೆಚ್ಚವನ್ನು ಪಡೆಯುವ ಎಲ್ಲಾ ಹಕ್ಕುಗಳು ಇವೆ. ಆಕೆ ಓದಿದ್ದಾಳೆ ನೌಕರಿ ಮಾಡಿ ಸಂಪಾದಿಸಿ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳಬಹುದು. ಎಂಬ ವಾದವನ್ನು ತಿರಸ್ಕರಿಸಲಾಗಿದೆ.

ಹೆಣ್ಣು ಮಗಳ ನಕಾರಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆ. ವೈವಾಹಿಕ ಸಂಬಂಧದಲ್ಲಾಗಲಿ ಮತ್ತಿತರ ಯಾವುದೇ ರೀತಿಯ ಸಂಬಂಧಗಳಾಗಲಿ ಆಕೆಯ ನಕಾರಕ್ಕೆ ಮಾನ್ಯತೆ ನೀಡಲಾಗತ್ತದೆ. ಯಾವುದೇ ರೀತಿಯ ದೈಹಿಕ ಸಂಬಂಧವನ್ನು ಹೊಂದುವುದಕ್ಕೂ ಮುನ್ನ ಆಕೆಯ ಸಮ್ಮತಿ/ಅನುಮತಿಯ ಅವಶ್ಯಕತೆ ಇದೆ.

ಲೈಂಗಿಕ ಕಿರುಕುಳಗಳು ಅಂತರ್ಜಾಲ ಸಂಪರ್ಕದ ಮೂಲಕ ಆನ್ಲೈನ್ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವ ಮೂಲಕ ನೀಡುವ ಕಿರುಕುಳವನ್ನು ಕೂಡ ಕಾನೂನು ಬಾಹಿರ ಎಂದು ಪರಿಗಣಿಸುತ್ತದೆ. ಈ ಕುರಿತು ದೂರನ್ನು ದಾಖಲಿಸಬಹುದು.

ಹೆಣ್ಣು ಮಕ್ಕಳನ್ನು ಮತ್ತಷ್ಟು ಸಶಕ್ತಗೊಳಿಸಲು ಕಳೆದ ವರ್ಷ ಮೇಲಿನ ಎಲ್ಲಾ ಕಾನೂನುಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದ್ದು ಇವುಗಳ ಮೂಲಕ ದುಷ್ಕೃತ್ಯಗಳನ್ನು ಮಟ್ಟ ಹಾಕಬಹುದು.. ಇವುಗಳ ದುರ್ಬಳಕೆಯಾಗದಂತೆ ತಡೆಯುವುದು ಕೂಡ ಅತ್ಯವಶ್ಯಕವಾಗಿದೆ.


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading