ಬಿಗ್ ಬಾಸ್ ಸೀಸನ್ ೧೦ರ ಸ್ಪರ್ಧಿ ಹಾಗೂ ಅಲ್ಮಾ ಮೀಡಿಯಾ ಸ್ಕೂಲ್ ಸಂಸ್ಥಾಪಕರಾದ ಬಿ ಎಸ್ ಎಸ್ ಕೆ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಗೌರೀಶ್ ಅಕ್ಕಿ ಹಾಗೂ ಅವರ ಸ್ನೇಹಿತರು, ಶಿವಗಂಗಾ ಶಾಲೆಯ ಸಂಸ್ಥಾಪಕರಾದ ಶ್ರೀ ಶುಭಾಶ್ ಗಂಗಾ ಅವರ ಸಾರಥ್ಯದಲ್ಲಿ ‘ಗುರುವಂದನಾ ಹಾಗೂ ಕುಟುಂಬ ಮಿಲನ’ ಹಬ್ಬಕ್ಕೆ ಸಜ್ಜಾಗಿದೆ. ಅದರ ಸಂಪೂರ್ಣ ವರದಿ ಲೇಖಕರಾದ ಓಂಕಾರ ಪಾಟೀಲ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಾಲಚಕ್ರ ಉರುಳಿದಂತೆ ಬದುಕು ನಮ್ಮನ್ನು ಬೇರೆ ಬೇರೆ ದಿಕ್ಕುಗಳಿಗೆ ಕೊಂಡೊಯ್ಯಬಹುದು. ಹೊಸ ಜವಾಬ್ದಾರಿಗಳು, ವೃತ್ತಿಜೀವನದ ಧಾವಂತಗಳು ನಮ್ಮನ್ನು ಆವರಿಸಿಕೊಳ್ಳಬಹುದು. ಆದರೆ, ಎಷ್ಟು ಎತ್ತರಕ್ಕೆ ಬೆಳೆದರೂ ನಾವೆಲ್ಲರೂ ಒಮ್ಮೆ ತಿರುಗಿ ನೋಡುವ ಅತ್ಯಂತ ಸುಂದರ ತಾಣವೆಂದರೆ ನಮ್ಮ ‘ಬಾಲ್ಯ ಮತ್ತು ಶಾಲಾದಿನಗಳು’.
ಆ ಶಾಲೆಯ ಕಲ್ಲು ಕಟ್ಟಡ, ಬೆಳಗಿನ ಪ್ರಾರ್ಥನೆಯ ಸದ್ದು, ಆಟದ ಮೈದಾನದಲ್ಲಿ ಹರಿಸಿದ ಬೆವರು ಮತ್ತು ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ಸನ್ಮಾರ್ಗ ತೋರಿದ ದೇವಸ್ವರೂಪಿ ಗುರುಗಳು ನಮ್ಮ ಮನಸ್ಸಿನಲ್ಲಿ ಇಂದಿಗೂ ಹಚ್ಚಹಸಿರು. ಆ ದಿನಗಳು ಎಂದಿಗೂ ಮರೆಯಲಾಗದ ಸುಂದರ ನೆನಪುಗಳ ಬುತ್ತಿ.
ಇದೀಗ ಅಂತಹದ್ದೇ ಸುಂದರ ಬಾಲ್ಯದ ನೆನಪುಗಳನ್ನು ಮರುಕಳಿಸಲು ಮತ್ತು ತಮಗೆ ಅಕ್ಷರ ಕಲಿಸಿ ಬದುಕನ್ನು ರೂಪಿಸಿದ ಗುರುಗಳಿಗೆ ಗೌರವ ಸಲ್ಲಿಸಲು *ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಕೇಡ್ (ಬಿ) ಗ್ರಾಮದಲ್ಲಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (BSSK) ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ [Govt MPS BSSK Hallikhed (B)] ಯ ಹಳೆಯ ವಿದ್ಯಾರ್ಥಿ ಬಳಗ ಸಜ್ಜಾಗಿದೆ.
ಬರುವ ೨೫ ಅಕ್ಟೋಬರ್ ೨೦೨೬ ರಂದು BSSK ಕಾರ್ಖಾನೆ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗದಿಂದ ಭವ್ಯ “ಗುರುವಂದನಾ ಹಾಗೂ ಕುಟುಂಬ ಮಿಲನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆ ದಿನದ ಸಂಭ್ರಮ ಕೇವಲ ಒಂದು ಆಚರಣೆಯಲ್ಲ, ಅದೊಂದು ಭಾವನಾತ್ಮಕ ಪಯಣ. ಆ ದಿನ ಮಗು ತನ್ನ ತಾಯಿಯ ಮಡಿಲಿಗೆ ಮರಳುವ ಸಂತೋಷದ ದಿನವಾಗಿದೆ.
ಬಿ ಎಸ್ ಎಸ್ ಕೆ ಶಾಲೆಯು ಕೇವಲ ಒಂದು ಕಟ್ಟಡವಲ್ಲ, ಅದು ಅಕ್ಷರ ದಾಸೋಹ ನೀಡಿದ ದೇಗುಲ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದ ಪವಿತ್ರ ತಾಣ. ಕಲ್ಲು-ಮಣ್ಣಿನ ಗೋಡೆಗಳ ಮಧ್ಯೆ ಹುಟ್ಟಿಕೊಂಡ ಅದೆಷ್ಟೋ ಕನಸುಗಳಿಗೆ ಈ ಶಾಲೆ ರೆಕ್ಕೆಗಳನ್ನು ನೀಡಿದೆ. ಇಲ್ಲಿ ಓದಿ ಹೋದ ಎಷ್ಟೋ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಾವೆಷ್ಟೇ ಎತ್ತರಕ್ಕೆ ಬೆಳೆದರೂ, ತಾವು ಕಲಿತ ಶಾಲೆ ಮತ್ತು ತಿದ್ದಿ ತೀಡಿದ ಗುರುಗಳನ್ನು ಮರೆಯದ ಹಳೇ ವಿದ್ಯಾರ್ಥಿಗಳು ಒಟ್ಟಾಗಿ ಈ ಕಾರ್ಯಕ್ರಮವನ್ನು ರೂಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಗುರುವಂದನೆ:
ನಮ್ಮ ಬದುಕಿನ ಮೊದಲ ಶಿಲ್ಪಿಗಳಾದ ಗುರುಗಳಿಗೆ ನಾವು ನೀಡಬಹುದಾದ ಅತ್ಯುನ್ನತ ಗೌರವ ಎಂದರೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಪಾಲಿಸುವುದು. ಅಂದು ಅವರು ಬಿತ್ತಿದ ಜ್ಞಾನದ ಬೀಜ ಇಂದು ಹೆಮ್ಮರವಾಗಿದೆ ಎಂಬುದನ್ನು ತೋರಿಸಲು ಈ ವೇದಿಕೆ ಸಾಕ್ಷಿಯಾಗಲಿದೆ. ಇದು ಕೇವಲ ಸತ್ಕಾರವಲ್ಲ, ಬದಲಿಗೆ ಶಿಷ್ಯರು ತಮ್ಮ ಗುರುಗಳಿಗೆ ಸಲ್ಲಿಸುವ ಪರಮ ಭಕ್ತಿಯ ಕೃತಜ್ಞತಾ ಭಾವ.
“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ” ಎಂಬ ನುಡಿಯಂತೆ, ಪಠ್ಯದ ಜೊತೆಗೆ ಬದುಕಿನ ಮೌಲ್ಯ, ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸಿದ ನಿವೃತ್ತ ಗೌರವಾನ್ವಿತ ಶಿಕ್ಷಕ ಬಳಗವನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ, ಅವರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆಯಲು ಹಳೇ ವಿದ್ಯಾರ್ಥಿಗಳು ಕಾತರರಾಗಿದ್ದಾರೆ.
ಕುಟುಂಬ ಮಿಲನ:
ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ಇದು ಖ್ಯಾತ ನಿರೂಪಕರು, ಕನ್ನಡ ಮಾಧ್ಯಮ ಲೋಕದಲ್ಲಿ ಹೆಸರು ಮಾಡಿದವರು, ಬಿಗ್ ಬಾಸ್ ಸೀಸನ್ ೧೦ರ ಸ್ಪರ್ಧಿ ಹಾಗೂ ಅಲ್ಮಾ ಮೀಡಿಯಾ ಸ್ಕೂಲ್ ಸಂಸ್ಥಾಪಕರಾದ BSSK ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀ ಗೌರೀಶ್ ಅಕ್ಕಿ ಹಾಗೂ ಅವರ ಸ್ನೇಹಿತರು, ಶಿವಗಂಗಾ ಶಾಲೆಯ ಸಂಸ್ಥಾಪಕರಾದ ಶ್ರೀ ಶುಭಾಶ್ ಗಂಗಾ ಅವರ ಸಾರಥ್ಯದಲ್ಲಿ ನಡೆಯುತ್ತಿದೆ. ಅವರ ಇಡೀ ಸ್ನೇಹಿತರ ಬಳಗವೇ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದೆ.
ಪ್ರಮುಖವಾಗಿ ಇದನ್ನು ಕೇವಲ ಗುರುವಂದನಾ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಗೌರೀಶ್ ಅಕ್ಕಿ ಮತ್ತು ಶುಭಾಶ್ ಗಂಗಾ ಅವರ ದೂರದೃಷ್ಟಿಯಿಂದಾಗಿ ಗುರುವಂದನೆಯ ಜೊತೆಗೆ ಕುಟುಂಬ ಮಿಲನವನ್ನೂ ಹಮ್ಮಿಕೊಳ್ಳಲಾಗಿದೆ. ಇದು ನಿಜಕ್ಕೂ ಅಸ್ಮರಣೀಯ ಸಂತೋಷದ ಕ್ಷಣ.
ವಿದ್ಯಾರ್ಥಿಗಳು ತಮ್ಮ ಹೆಂಡತಿ, ಮಕ್ಕಳು ಸೇರಿದಂತೆ ಇಡೀ ಕುಟುಂಬದೊಂದಿಗೆ ಈ ಮಿಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಲವು ವರ್ಷಗಳ ನಂತರ ಭೇಟಿಯಾಗುತ್ತಿರುವ ಸ್ನೇಹಿತರು ಪರಸ್ಪರ ಕುಶಲೋಪರಿ ವಿಚಾರಿಸಲು, ಹಳೆಯ ತುಂಟಾಟಗಳನ್ನು ನೆನಪಿಸಿಕೊಳ್ಳಲು ಮತ್ತು ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಅದ್ಭುತ ವೇದಿಕೆಯಾಗಲಿದೆ.
ಈ ಕುಟುಂಬ ಮಿಲನದ ಮುಖ್ಯ ಉದ್ದೇಶ ತಮ್ಮ ಹಳೆಯ ಸ್ನೇಹವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು. ನಮ್ಮ ಮಕ್ಕಳಿಗೆ ನಮ್ಮ ಬಾಲ್ಯದ ಹಿನ್ನೆಲೆ, ನಮ್ಮ ಶಾಲೆಯ ಸರಳತೆ ಮತ್ತು ನಾವು ಬೆಳೆದು ಬಂದ ಹಾದಿಯನ್ನು ಪರಿಚಯಿಸುವ ವೇದಿಕೆಯಾಗಿದೆ.
ಇಂದಿನ ಯಾಂತ್ರಿಕ ಬದುಕಿನಲ್ಲಿ ಹಣ, ಅಂತಸ್ತು, ಕೀರ್ತಿಯ ಬೆನ್ನತ್ತಿ ಓಡುವ ನಮಗೆ ನಮ್ಮ “ಬೇರುಗಳು” (Roots) ನೆನಪಿರುವುದು ವಿರಳ. BSSK ಕಾರ್ಖಾನೆ ಶಾಲೆಯ ಹಳೇ ವಿದ್ಯಾರ್ಥಿಗಳ ಈ ಒಕ್ಕೂಟವು ಇಡೀ ಸಮಾಜಕ್ಕೆ ಒಂದು ಅದ್ಭುತ ಸಂದೇಶವನ್ನು ನೀಡುತ್ತಿದೆ: “ನಾವು ಎಲ್ಲೇ ಇರಲಿ, ಎಷ್ಟೇ ಎತ್ತರಕ್ಕೆ ಬೆಳೆಯಲಿ, ನಮಗೆ ಅಕ್ಷರ ಕಲಿಸಿದ ಶಾಲೆ ಮತ್ತು ಸಂಸ್ಕಾರ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು.”
ಇಷ್ಟು ವರ್ಷಗಳ ಕಾಲ ಹರಿದು ಹಂಚಿಹೋಗಿದ್ದ ಜ್ಞಾನದ ಕವಲುಗಳು ಮತ್ತೆ ತಾಯಿ ಬೇರಿನ ಮಡಿಲಿನಲ್ಲಿ ಒಂದಾಗುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು BSSK ಕಾರ್ಖಾನೆ ಶಾಲೆಯ ಇಡೀ ಹಳೇ ವಿದ್ಯಾರ್ಥಿ ಬಳಗವು ಒಟ್ಟಾಗಿ ಕೈಜೋಡಿಸಿದೆ. ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ತಾವೆಲ್ಲರೂ ಬನ್ನಿ, ನಮ್ಮ ಬಾಲ್ಯದ ಅಂಗಳಕ್ಕೆ ಮತ್ತೊಮ್ಮೆ ಮರಳಿ ಹೋಗೋಣ, ನಮಗೆ ಅಕ್ಷರಜ್ಞಾನ ನೀಡಿ ಬೆಳೆಸಿದ ಗುರುಗಳ ಆಶೀರ್ವಾದ ಪಡೆದು ಧನ್ಯರಾಗೋಣ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
