ಬದುಕಿಗೊಂದು ಸೆಲೆ (ಭಾಗ- ೫೫)

ಕೆಲವು ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡ ಆ ಹೆಣ್ಣು ಮಗಳಿಗೆ ಓರ್ವ ಮಗ, ಸೊಸೆ ಹಾಗೂ ಓರ್ವ ಪುಟ್ಟ ಮೊಮ್ಮಗಳು ಇದ್ದರು. ಸಮಯ ಎಂದಿನಂತೆ ತನ್ನ ಗತಿಯಲ್ಲಿ ಸಾಗುತ್ತಿದ್ದು ಜೀವನ ತನ್ನದೇ ಆದ ರೀತಿಯಲ್ಲಿ ನಡೆಯುತ್ತಿತ್ತು. ವೀಣಾ ಹೇಮಂತಗೌಡ ಪಾಟೀಲ್ ಅವರ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ ಲೇಖನದಲ್ಲಿ ತಪ್ಪದೆ ಮುಂದೆ ಓದಿ…

ವರ್ಷಗಳು ಕಳೆದಂತೆ ನಿಧಾನವಾಗಿ ಆಕೆಯ ಕಣ್ಣಿನ ದೃಷ್ಟಿ ಮಂದವಾಗ ತೊಡಗಿತು. ಆಕೆಯ ಗ್ರಹಣ ಶಕ್ತಿ ಕುಂದತೊಡಗಿದ್ದು ದಿನದಿಂದ ದಿನಕ್ಕೆ ನಿಶ್ಯಕ್ತಿ ಆಕೆಯನ್ನು ಆವರಿಸುತ್ತಿತ್ತು. ಆಕೆಯ ಕೈಗಳಲ್ಲಿ ನಡುಕ ಉಂಟಾಗಿ ಆಕೆ ಊಟ ಮಾಡುವಾಗ ತಿಂಡಿ ತಿನ್ನುವಾಗ ಚಹಾ ಕುಡಿಯುವಾಗ ತನ್ನ ಮೈ ಮೇಲೆ ಆಹಾರವನ್ನು ಚೆಲ್ಲಿಕೊಳ್ಳುತ್ತಿದ್ದಳು. ಮೊದ ಮೊದಲು ಕುಟುಂಬದ ಸದಸ್ಯರಿಗೆ ಇದು ಅಯ್ಯೋ ಪಾಪ! ಎಂಬ ಮರುಕ ಭಾವವನ್ನು ಹುಟ್ಟಿಸಿದರೆ ನಂತರದ ದಿನಗಳಲ್ಲಿ ಆಕೆಯ ಈ ಕ್ರಿಯೆ ತೀವ್ರ ಅಸಹನೆಗೆ ಕಾರಣವಾಗಿ ರೇಜಿಗೆಯಾಗಿ ಪರಿಣಮಿಸಿತು.

ಅದೊಂದು ದಿನ ಆಕೆಯ ಮಗ ಮತ್ತು ಸೊಸೆಗೆ ತಾಯಿಯ ಈ ತೊಂದರೆ ಅತಿರೇಕ ಎನ್ನಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಡುಗೆ ಮನೆಯ ಮೂಲೆಯೊಂದರಲ್ಲಿ ಆಕೆಗೊಂದು ಪುಟ್ಟ ಮೇಜನ್ನು ಅಣಿ ಮಾಡಿದರು. ಆ ಮೂಲೆಯಲ್ಲಿ ಸೊಸೆ ಯಾವಾಗಲೂ ಕಸಬರಿಗೆ, ಕಸದ ಬುಟ್ಟಿ ಹಾಗೂ ಅಡುಗೆ ಮಾಡಿದ ಪಾತ್ರೆಗಳು ಮತ್ತು ತಿಂದುಳಿದ ತಟ್ಟೆ ಲೋಟಗಳನ್ನು ಹಾಕುವ ಮುಸುರೆ ಪುಟ್ಟಿಯನ್ನು ಇಡುತ್ತಿದ್ದಳು. ಅದರ ಜೊತೆ ಮನೆಯನ್ನು ಸ್ವಚ್ಛಗೊಳಿಸುವ ಸೋಪ್ಗಳು ಡಿಟರ್ಜೆಂಟ್ ಗಳು ಲಿಕ್ವಿಡ್ ಗಳು ಕೂಡ ಅಲ್ಲಿರುತ್ತಿದ್ದವು. ಇನ್ನು ಮುಂದೆ ತಾಯಿ ಅಲ್ಲಿಯೇ ಕುಳಿತು ಊಟ ಮಾಡಬೇಕು ಎಂದು ಮಗ ಸೊಸೆ ಆಕೆಗೆ ತಾಕೀತು ಮಾಡಿದರು. ಮುಂದಿನ ದಿನಗಳಲ್ಲಿ ತಾಯಿ ಹಾಗೆಯೇ ಊಟ ಮಾಡುವುದು ರೂಢಿಯಾಯಿತು. ಅವರೆಲ್ಲರೂ ಆಕೆ ಊಟ ಮಾಡುವಾಗ, ಆಹಾರವನ್ನು ತನ್ನ ಬಟ್ಟೆಯ ಮೇಲೆ ಚೆಲ್ಲಿಕೊಂಡಾಗ ಮಾತ್ರ ತುಸು ಅಸಹನೆಯಿಂದ ಮಾತನಾಡುತ್ತಿದ್ದರೇ ಹೊರತು ಸಾಮಾನ್ಯವಾದ ಮಾತು ಕತೆಗೆ ಅವಕಾಶವೇ ಇಲ್ಲದಂತೆ ತಮ್ಮ ಜಗತ್ತಿನಲ್ಲಿ ಮುಳುಗಿ ಹೋಗಿದ್ದರು.

ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡುವ ಸಮಯದಲ್ಲಿ ಕಂಬನಿ ತುಂಬಿದ ಕಣ್ಣುಗಳಿಂದ ತಾಯಿ ಮಗ ಮತ್ತು ಸೊಸೆಯನ್ನು ದಿಟ್ಟಿಸಿ ನೋಡುತ್ತಿದ್ದಳು. ಒಂದೊಮ್ಮೆ ಇಡೀ ಕುಟುಂಬದ ಅಸ್ತಿಭಾರವೇ ತಾನಾಗಿದ್ದರೂ ಕೂಡ ಇದೀಗ ತನ್ನ ಅಸ್ತಿತ್ವವನ್ನೇ ಮರೆತ ಕುಟುಂಬದ ನಡವಳಿಕೆ ಆಕೆಗೆ ನೋವನ್ನು ತರುತ್ತಿತ್ತು. ಆಕೆಯ ಬಾಯಿಂದ ಮಾತುಗಳು ಹೊರಡದಿದ್ದರೂ ಮೌನದಲ್ಲಿಯೇ ಆಕೆ ತನ್ನ ನೋವನ್ನು ಅನಾವರಣಗೊಳಿಸುತ್ತಿದ್ದಳು.

ಅದೊಂದು ದಿನ ಸಾಯಂಕಾಲದ ಹೊತ್ತಿನಲ್ಲಿ ಅವರ ಮೊಮ್ಮಗಳು ಡೈನಿಂಗ್ ಟೇಬಲ್ ಪಕ್ಕದಲ್ಲಿ ನೆಲದ ಮೇಲೆ ಕುಳಿತು ಅಪ್ಪ ತನ್ನ ಹುಟ್ಟು ಹಬ್ಬಕ್ಕೆ ತಂದುಕೊಟ್ಟ ಬಿಲ್ಡಿಂಗ್ ಬ್ಲಾಕ್ ಗಳನ್ನು ಇಟ್ಟುಕೊಂಡು ಆಡುತ್ತಿದ್ದಳು.

ಮಗಳ ಆಟವನ್ನು ನೋಡುತ್ತಿದ್ದ ತಂದೆ ಏನನ್ನು ಮಾಡುತ್ತಿರುವೆ ಮಗು? ಎಂದು ಕೇಳಿದ. ಆಟದಲ್ಲಿ ಮಗ್ನಳಾಗಿದ್ದ ಬಾಲಕಿ ನಿಧಾನವಾಗಿ ಅಪ್ಪನ ಕಡೆ ಮುಖ ಮಾಡಿ ನಾನು ನಿನಗಾಗಿ ಮತ್ತು ಅಮ್ಮನಿಗಾಗಿ ಪುಟ್ಟ ಮೇಜೊಂದನ್ನು ತಯಾರಿಸುತ್ತಿರುವೆ..ಮುಂದೆ ನಿಮ್ಮಿಬ್ಬರಿಗೂ ವಯಸ್ಸಾದ ನಂತರ ನೀವು ಅದನ್ನು ಬಳಸಲು ಬೇಕಲ್ಲವೇ ? ಎಂದು ಮುಗ್ಧವಾಗಿ ನುಡಿದಳು.
ಇಡೀ ಕೋಣೆಯಲ್ಲಿ ನಿಶ್ಯಬ್ದ ತಾಂಡವವಾಡುತ್ತಿತ್ತು. ಮಾತುಗಳಲ್ಲಿ ಹೇಳಲಾಗದ ಅತ್ಯಂತ ತೀಕ್ಷ್ಣವಾದ ವಿಷಯವನ್ನು ಮೌನದ ವಾತಾವರಣ ಅನಾವರಣಗೊಳಿಸುತ್ತಿತ್ತು.

ಬಾಲಕಿಯ ಅಪ್ಪ ಅಮ್ಮನ ಕಣ್ಣುಗಳಲ್ಲಿ ಕಂಬನಿ ತುಂಬಿ ಇನ್ನೇನು ಹರಿಯಲು ಸಿದ್ಧವಾಗಿದ್ದವು.ಅವರಿಬ್ಬರೂ ಪರಸ್ಪರ ಮುಖ ನೋಡಿಕೊಂಡರು.ಅದೇ ಸಮಯದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಮಗಳ ಕಣ್ಣಿನಲ್ಲಿ ತಮ್ಮ ಮುಂದಿನ ಬದುಕಿನ ಪ್ರತಿಬಿಂಬವನ್ನು ಅವರು ಕಂಡುಕೊಂಡರು.

ಮರುದಿನ ಪುಟ್ಟ ಮಗಳು ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಮೂಲೆಯ ಆ ಟೇಬಲ್ ಕಣ್ಮರೆಯಾಗಿತ್ತು. ಇಷ್ಟಗಲ ಕಣ್ಣುಗಳನ್ನು ತೆರೆದು ತನ್ನ ಬೊಚ್ಚು ಬಾಯಿಯನ್ನು ಅಗಲಿಸಿದ ಅಜ್ಜಿ ಅತ್ಯಂತ ನೆಮ್ಮದಿ ಹಾಗೂ ಸಂತೃಪ್ತ ಭಾವದಿಂದ ಮನೆಯ ಎಲ್ಲಾ ಸದಸ್ಯರು ಕುಳಿತುಕೊಳ್ಳುವ ಊಟದ ಮೇಜಿನ ಮೇಲೆ ಕುಳಿತುಕೊಂಡು ಊಟ ಮಾಡಿದಳು.

ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಮುಂದುವರೆಯಿತು. ಈಗಲೂ ಆಕೆಯ ಕೈಗಳು ನಡುಗುತ್ತಿದ್ದವು. ಆಕೆಯ ಕೈಯಿಂದ ಆಹಾರ ಚೆಲ್ಲುತ್ತಿತ್ತು. ಆದರೆ ಇದಾವುದನ್ನೂ ಮನೆಯ ಸದಸ್ಯರು ವಿಪರೀತವಾಗಿ ಯೋಚಿಸಲಿಲ್ಲ, ಪರಿಗಣಿಸಲಿಲ್ಲ. ಅಸಹನೆಯಿಂದ ಕೂಗಾಡಲಿಲ್ಲ. ಇದೊಂದು ವಯೋಸಹಜವಾದ ಸಾಮಾನ್ಯ ಪ್ರಕ್ರಿಯೆ ಎಂಬಂತೆ ನಡೆದುಕೊಳ್ಳಲು ಆರಂಭಿಸಿದರು.

ಮಗ ತಾನು ಆಫೀಸಿಗೆ ಹೋಗುವಾಗ ಹಾಗೂ ಆಫೀಸಿನಿಂದ ಬಂದ ಬಳಿಕ ರಾತ್ರಿ ಮಲಗುವ ಮುನ್ನ ತಾಯಿಗೆ ಕೇಳಲಿ ಬಿಡಲಿ ಒಂದಷ್ಟು ಹೊತ್ತು ಆಕೆಯ ಬಳಿ ಕುಳಿತು ಮಾತನಾಡತೊಡಗಿದ. ಸೊಸೆ ಕೂಡ ಅತ್ತೆಗೆ ಅನುಕೂಲವಾಗುವ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದಳು. ನಿಧಾನವಾಗಿ ಅಜ್ಜಿಯ ಆರೋಗ್ಯ ಕೂಡ ಸುಧಾರಿಸತೊಡಗಿತು. ಇದು ಔಷಧಿ ಮತ್ತು ಮಾತ್ರೆಗಳ ಚಮತ್ಕಾರವಲ್ಲ. ಬದಲಾಗಿ ಕುಟುಂಬದ ಸದಸ್ಯರ ಪ್ರೀತಿಪೂರ್ವಕ ನಡವಳಿಕೆ ಹಾಗೂ ಕಾಳಜಿಗಳು ಆಕೆಗೆ ಔಷಧಿಯಾಗಿ ಪರಿಣಮಿಸಿದವು.
ಪುಟ್ಟ ಬಾಲಕಿ ತನಗರಿವಿಲ್ಲದೆ ಹಿರಿಯರನ್ನು ಗೌರವಿಸಬೇಕು ಎಂಬ ಸಹಾನುಭೂತಿಯ ಅತಿ ದೊಡ್ಡ ಪಾಠವನ್ನು ತನ್ನ ಪಾಲಕರಿಗೆ ಕಲಿಸಿದ್ದಳು.

ಈ ಕಥೆಯನ್ನು ಓದಿದಾಗ ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ವಯಸ್ಸಾದ ತನ್ನ ಅಜ್ಜನಿಗೆ ತಂದೆ ತಾಯಿ ಮಣ್ಣಿನ ತಟ್ಟೆಯಲ್ಲಿ ಊಟ ಕೊಡುವುದನ್ನು ನೋಡಿದ ಪುಟ್ಟ ಬಾಲಕ ಒಂದು ದಿನ ತನ್ನ ತಂದೆ ತಾಯಿಗಾಗಿ ಮಣ್ಣಿನ ತಟ್ಟೆಗಳನ್ನು ಜೋಪಾನವಾಗಿ ಎತ್ತಿಟ್ಟು ತೋರುವ ಮೂಲಕ ತನ್ನ ಪಾಲಕರಿಗೆ ಪಾಠ ಕಲಿಸಿದ ಕಥೆ ನಮಗೆ ನೆನಪಿಗೆ ಬರುತ್ತದೆ ಅಲ್ಲವೇ ಸ್ನೇಹಿತರೆ?

ಇಂಗ್ಲಿಷಿನಲ್ಲಿ ಗಾದೆಯೊಂದಿಗೆ ಹಳೆಯ ಮಡಕೆಯಲ್ಲಿ ಹೊಸ ನೀರು ಎಂದು. ಇದು ಹಾಗೆಯೇ ಎಂದು ಮೂಗು ಮುರಿಯುವುದು ಬೇಡ. ಬದುಕಿನ ರೀತಿ ನೀತಿಗಳು ಬದಲಾದರೂ ಬದುಕು ಮಾತ್ರ ಅದೇ. ಪಾತ್ರೆಗಳು ಹಾಗೂ ಪಾತ್ರಗಳು ಬದಲಾಗಬಹುದು ಅಂತೆಯೇ ನಾವುಗಳು ಕೂಡಾ. ಬದುಕುತ್ತಿರುವವರು. ನಾವು ಹೊಸ ಜನರಾದರೂ ಬದುಕು ಅತ್ಯಂತ ಪುರಾತನವಾದದ್ದು. ಅದೆಷ್ಟೇ ಆವಿಷ್ಕಾರಗಳು ಬರಲಿ , ಅದೆಷ್ಟೇ ಬದುಕು ಬದಲಾಗಲಿ , ಅದೆಷ್ಟೇ ಆಧುನಿಕ ಚಿಂತನೆಗಳು ನಮ್ಮದಾಗಲಿ..ಆದರೆ ನಮ್ಮ ಬದುಕಿನಲ್ಲಿ ಮೌಲ್ಯಗಳು ಎಂದಿಗೂ ತಮ್ಮ ಸ್ಥಾನವನ್ನು ಬಿಟ್ಟು ಕೊಡಬಾರದು. ಪ್ರೀತಿ, ಪ್ರೇಮ, ಕರುಣೆ, ದಯೆ, ಸಹಾನುಭೂತಿ, ಅನುಕಂಪಗಳಂತಹ ಮಾನವೀಯ ಮೌಲ್ಯಗಳು ಹಿಂದಿನಿಂದಲೂ ಇದ್ದವು. ಈಗಲೂ ಇವೆ ಮುಂದೆಯೂ ಇರುತ್ತವೆ . ಅವುಗಳು ನಮಗೆ ಕಲಿಸುವ ಪಾಠಗಳು ಚಿರನೂತನ. ಜಗತ್ತಿನ ಮತ್ತಾವುದೇ ಸುಖ ಸೌಲಭ್ಯಗಳು ಐಶಾರಾಮಿ ವಸ್ತುಗಳು ಈ ಮೌಲ್ಯಗಳನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಮೌಲ್ಯಗಳು ಎಸ್, ದೇ ಆರ್ ಅಬ್ಸಲ್ಯೂಟ್ಲಿ ಇರ್ರಿಪ್ಲೇಸೇಬಲ್.

ಬದುಕಿನ ಕೆಲವು ಪಾಠಗಳನ್ನು ತಮ್ಮ ಪಾಲಕರಿಂದ ಮಕ್ಕಳು ಕಲಿತರೆ ಮತ್ತೆ ಕೆಲವು ಪಾಠಗಳನ್ನು ಮಕ್ಕಳಿಂದ ಬಾಲಕರು ಕಲಿಯುತ್ತಾರೆ. ಇಲ್ಲಿ ಯಾರು ಯಾರಿಗೆ ಬೇಕಾದರೂ ಗುರುವಾಗಬಹುದು ಶಿಷ್ಯರಾಗಬಹುದು. ಬದುಕಿನ ಪಾಠಗಳನ್ನು ಕಲಿಯಬಹುದು.

ಬದುಕೇ ಒಂದು ಪಾಠಶಾಲೆ. ನಮ್ಮ ಬದುಕಿನಲ್ಲಿ ಬಂದು ಹೋಗುವ ನೂರಾರು ಜನರು ನಮಗೆ ಶಿಕ್ಷಕರಾಗಿ ಪಾಠವನ್ನು ಕಲಿಸಬಹುದು. ಬದುಕಿನ ಪಾಠಶಾಲೆಯಲ್ಲಿ ನಾವು ಸದಾ ವಿದ್ಯಾರ್ಥಿಗಳಾಗಿ ಬದುಕು ನಮಗೆ ನೀಡುವ ಸವಾಲುಗಳು, ಏಳು ಬೀಳುಗಳು, ನೋವು ನಲಿವುಗಳು ಆಕಸ್ಮಿಕ ತಿರುವುಗಳು ಆಘಾತಗಳು, ಚಿತ್ರವಿಚಿತ್ರ ಸನ್ನಿವೇಶಗಳ ಸಮಯಗಳಲ್ಲಿ ನಮ್ಮ ಬದ್ಧತೆ ಹಾಗೂ ಸ್ಪಷ್ಟ ನಿಲುವನ್ನು ಉಳಿಸಿಕೊಳ್ಳಲು ಕಾರಣವಾಗುವ ಮೌಲ್ಯಗಳು ನಮ್ಮೊಂದಿಗೆ ಸದಾ ಇರಲೇಬೇಕು. ಅದುವೇ ಉತ್ತಮ ಬದುಕಿಗೆ ಅಸ್ತಿಭಾರ ಏನಂತೀರಾ ಸ್ನೇಹಿತರೆ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW