ಕತ್ತರಿಸಿದ್ದ ಗಿಡದ ಟೊಂಗೆಯನ್ನು ಮರು ಜೋಡಿಸಲು ಸಾಧ್ಯವೇ?… ಎಂದು ಬುದ್ಧನು ಅಂಗುಲಿ ಮಾಲಾನಿಗೆ ಕೇಳಿದ. ಅದು ಹೇಗೆ ಸಾಧ್ಯವೆಂದು ಬುದ್ಧನಿಗೆ ಅಂಗುಲಿ ಮಾಲಾ ಮರು ಉತ್ತರ ಕೊಟ್ಟ. ಡಾ. ರಾಜಶೇಖರ ನಾಗೂರ ಅವರು ‘ಸ್ಫೂರ್ತಿ ಸಿಂಚನ’ ಅಂಕಣದ ಮೂಲಕ ಜೀವನಕ್ಕೊಂದು ನೀತಿ ಪಾಠವನ್ನು ಓದುಗರ ಮುಂದೆ ಹಂಚಿಕೊಳ್ಳಲಿದ್ದಾರೆ, ತಪ್ಪದೆ ಓದಿ…
ಅಂಗುಲಿ ಮಾಲಾ, ಒಂದು ಸಾವಿರ ಜನರನ್ನು ಕೊಲ್ಲುವ ಪ್ರತಿಜ್ಞೆ ಮಾಡಿದ್ದ. 999 ಜನರನ್ನು ಕೊಂದು ಅವರ ಬೆರಳುಗಳನ್ನು ಮಾಲೆಯಾಗಿಸಿಕೊಂಡು ತನ್ನ ಕೊರಳಲ್ಲಿ ಧರಿಸಿ ವಿಕೃತಿಯನ್ನು ಮೆರೆದಿದ್ದ. ಇನ್ನು ಕೇವಲ ಒಬ್ಬನನ್ನು ಕೊಂದರೆ ಅವನ ಸಾವಿರ ಜನರ ಪ್ರತಿಜ್ಞೆ ಈಡೇರುತ್ತಿತ್ತು. ಹೀಗಾಗಿ ಆ ಸಾವಿರದ ವ್ಯಕ್ತಿಯ ಕಗ್ಗೊಲೆ ಯಾರದು ಎಂಬುದು ಎಲ್ಲರ ಕುತೂಹಲವಾಗಿತ್ತು. ಈ ಹಿನ್ನೆಲೆಯಲ್ಲಿ ಆ ಅಂಗುಲಿಮಾಲಾನ ಹೆಸರು ಕೇಳಿದರೆ ಸಾಕು ಆ ಭಾಗದ ರಾಜನು ಕೂಡ ಬೆಚ್ಚಿ ಬೀಳುತ್ತಿದ್ದ. ಈ ಆತಂಕದಿಂದ ಆ ಅಂಗುಲಿಮಾಲಾ ಇರುವ ಕಾಡಿನ ಒಳಗೆ ಸಾರ್ವಜನಿಕರು ಹೋಗದಂತೆ ನಿಷೇಧಿಸಿ ಎಚ್ಚರಿಕೆಯನ್ನು ಬರಹದ ರೂಪದಲ್ಲಿ ರಾಜನು ನೇತು ಹಾಕಿಸಿದ್ದ.
ಫೋಟೋ ಕೃಪೆ : google
ಸಾರ್ವಜನಿಕರಂತೂ ಅವನ ಹೆಸರು ಕೇಳಿದರೆ ಸಾಕು ಗಡಗಡ ನಡುಗುತ್ತಿದ್ದರು. ಅಪ್ಪಿ ತಪ್ಪಿಯು ಅಂಗುಲಿಮಾಲ ಇರುವ ಪ್ರದೇಶದ ಕಡೆ ಯಾರೊಬ್ಬರೂ ಸುಳಿಯುತ್ತಿರಲಿಲ್ಲ. ಅಲ್ಲಿಯವರೆಗೆ ಅಂಗುಲಿ ಮಾಲಾನ ಹತ್ತಿರ ಅವನ ತಾಯಿ ಮಾತ್ರ ಹೋಗುತ್ತಿದ್ದಳು. ಆದರೆ 999 ಜನರನ್ನು ಸಾಯಿಸಿದ ಮೇಲೆ ಸ್ವತ: ಮಗನ ಹತ್ತಿರ ಹೋಗಲು ಅವನ ತಾಯಿಯೇ ಭಯಪಡಲಾರಂಭಿಸಿದಳು. ಸೂರ್ಯ ಮುಳುಗಿದರೆ ಸಾಕು ಜನರೆಲ್ಲ ಬೆಚ್ಚಿಬಿದ್ದು ಮನೆ ಸೇರಿಕೊಳ್ಳುತ್ತಿದ್ದರು.
ಇಂತಹ ಭಯದ ಪರಿಸ್ಥಿತಿ ಇರುವಾಗ ಆ ಮಾರ್ಗವಾಗಿ ಗೌತಮ ಬುದ್ಧ ತನ್ನ ಶಿಷ್ಯನೊಂದಿಗೆ ಹೊರಟು ಬಂದ. ಶಿಷ್ಯನು ಬುದ್ಧನಿಗೆ ಹೇಳಿದ “ಗುರುಗಳೇ, ಈ ಮಾರ್ಗದಲ್ಲಿ ಅಂಗುಲಿಮಾಲ ಎಂಬ ಕುಖ್ಯಾತ ನರಹಂತಕ ಇದ್ದಾನೆ. ಮಾರ್ಗವನ್ನು ಬದಲಿಸೋಣ”.
ತಕ್ಷಣವೇ ಬುದ್ಧ ನಗುತ್ತಾ “ಓ, ಶಿಷ್ಯನೇ ನೀನು ಈ ಅಂಗುಲಿಮಾಲ ಇರುವ ಮಾಹಿತಿಯನ್ನು ಹೇಳಿರದಿದ್ದರೆ ನಾನು ಮಾರ್ಗವನ್ನು ಬದಲಿಸುತ್ತಿದ್ದೆನೆನೋ. ಆದರೆ ನೀನು ಅವನ ಉಲ್ಲೇಖ ಮಾಡಿದ ಮೇಲೆ ನಾನು ಈ ಮಾರ್ಗವನ್ನು ಬದಲಿಸಲಾರೆ. ಅವನಿಗೆ ನನ್ನ ಅವಶ್ಯಕತೆ ಇದೆ ಎಂದೆನಿಸುತ್ತದೆ. ಹೀಗಾಗಿ ನಾನು ಈ ಮಾರ್ಗದಲ್ಲಿಯೇ ಹೋಗುತ್ತೇನೆ. ನೀನು ಬೇಕಿದ್ದರೆ ಬೇರೆ ಮಾರ್ಗದಿಂದ ತೆರಳಬಹುದು” ಎಂದು ಹೇಳಿ ಆ ಕಾಡಿನೊಳಗೆ ಪ್ರವೇಶ ಮಾಡುತ್ತಾನೆ.
ಬುದ್ಧನು ಆ ದಟ್ಟ ಕಾಡಿನ ಮಧ್ಯಭಾಗಕ್ಕೆ ತಲುಪಿದ ಮೇಲೆ ದೂರದಲ್ಲಿ ಅಲ್ಲೆಲ್ಲೋ ಮರೆಯಲ್ಲಿದ್ದ ನರಹಂತಕ ಅಂಗುಲಿಮಾಲ ಬುದ್ಧನನ್ನು ನೋಡಿ ‘ಸಾವಿರ ಜನರನ್ನು ಕೊಲ್ಲುವ ನನ್ನ ಗುರಿ ಇಂದು ಪೂರ್ಣವಾಗುತ್ತದೆ’ ಎಂದು ಖುಷಿ ಪಟ್ಟ. ಅಲ್ಲಿಂದ ನಡೆಯುತ್ತಾ ಬಂದವನೇ, ಅಂಗುಲಿಮಾಲಾನನ್ನು ನೋಡಿಯೂ ಮುಂದೆ ಸಾಗುತ್ತಿದ್ದ ಬುದ್ಧನನ್ನು ನೋಡುತ್ತಾ ‘ಏ ಸನ್ಯಾಸಿ ನಿಲ್ಲು’ ಎಂದ.
ಬುದ್ಧ ಅಂಗುಲಿ ಮಾಲಾನನ್ನು ನೋಡಿ ನಗುತ್ತಾ ಹಸನ್ಮುಖಿಯಾಗಿ ನಿಲ್ಲದೆ ಮುಂದೆ ಹೆಜ್ಜೆ ಹಾಕಿದ. ಅಂಗುಲಿ ಮಾಲಾನಿಗೆ ಅತೀವ ಕೋಪ ಬಂದಿತು. “ಏ ಸನ್ಯಾಸಿ ನಿನ್ನನ್ನು ಕೊಲ್ಲುತ್ತೇನೆ. ಅಲ್ಲಿಯೇ ನಿಲ್ಲು” ಎನ್ನುತ್ತಾನೆ. ಅವನ ಮಾತನ್ನು ಲೆಕ್ಕಿಸದೆ ಹಸನ್ಮುಖಿಯಾಗಿ ಬುದ್ಧ ಮತ್ತೆ ಮುಂದೆ ನಡೆದ. ಬುದ್ಧನ ತೇಜಸ್ಸನ್ನು ನೋಡಿ ಅವನ ಕೈ ನಡುಗಲು ಪ್ರಾರಂಭವಾದವು.
ಫೋಟೋ ಕೃಪೆ : google
ಬುದ್ಧ : (ನಗುತ್ತಾ) ಹೆದರುವೆ ಏಕೆ? ಯಾರಿಗೆ ಹೆದರುತ್ತಿರುವೆ?
ಅಂಗುಲಿ ಮಾಲಾ : ನಾನು ಹೆದರುವುದೇ? ನಿನ್ನನ್ನು ಈಗಲೇ ಕೊಲ್ಲುತ್ತೇನೆ.
ಬುದ್ಧ: ನೀನೂ ಕ್ಷತ್ರಿಯ, ನಾನೂ ಕ್ಷತ್ರಿಯ. ಯಾರು ಯಾರನ್ನು ವಧೆ ಮಾಡುತ್ತಾರೆ ನೋಡಿಯೇ ಬಿಡೋಣ. ನನ್ನನ್ನು ಕೊಲ್ಲು ನೋಡೋಣ.
ಅಂಗುಲಿ ಮಾಲಾ: ಏ ಸನ್ಯಾಸಿ ಮುಂದೆ ಹೆಜ್ಜೆ ಇಡಬೇಡ. ಅಲ್ಲಿಯೇ ನಿಲ್ಲು.
ಬುದ್ಧ: ಐವತ್ತು ವರ್ಷಗಳ ಹಿಂದೆಯೇ ನಾನು ನಿಂತಿದ್ದೇನೆ. ಈಗ ನೀನು ನಿಲ್ಲು (ನಗುತ್ತ ಅಂಗುಲಿಮಾಲಾನ ಮುಂದೆಯೇ ಬಂದು ಬುದ್ಧ ನಿಲ್ಲುತ್ತಾನೆ).
ಅಂಗುಲಿ ಮಾಲಾ: ಸನ್ಯಾಸಿ ನೀನು ಮರಳಿ ಹೋಗು. ಮುಂದೆ ಬರಬೇಡ.
ಬುದ್ಧ: ನಿನ್ನನ್ನು ಮರಳಿ ಕಳುಹಿಸಲು ನಾನು ಇಲ್ಲಿಗೆ ಬಂದಿರುವೆ. ನಾನು ಮರಳಿ ಹೋಗಲು ಅಲ್ಲಾ.
ಅಂಗುಲಿ ಮಾಲಾ: ಸನ್ಯಾಸಿ ನಿನಗೆ ಹೆದರಿಕೆಯಾಗುತ್ತಿಲ್ಲವೇ?!
ಬುದ್ಧ: ಹೆದರಿಕೆಯೇ! ಹೆದರಿಕೆ ಏನಕ್ಕೆ? ನೋಡು ಅಂಗುಲಿಮಾಲ, ನನ್ನನ್ನು ಕೊಲ್ಲುವೆಯಾದರೆ ಕೊಂದುಹಾಕು ಆದರೆ ಒಂದು ಶರತ್ತು.
ಅಂಗುಲಿ ಮಾಲಾ: ಏನದು
ಬುದ್ಧ: ನಿನ್ನ ಕೈಯಲ್ಲಿರುವ ಖಡ್ಗದಿಂದ ಅಲ್ಲಿ ನೇತಾಡುತ್ತಿರುವ ಆ ಗಿಡದ ಟೊಂಗೆಯನ್ನು ಕತ್ತರಿಸು.
ಅಂಗುಲಿ ಮಾಲಾ : ತನ್ನ ಖಡ್ಗದಿಂದ ಒಂದೇ ಏಟಿಗೆ ಆ ಗಿಡದ ಟೊಂಗೆಯನ್ನು ಕತ್ತರಿಸಿಯೇ ಬಿಟ್ಟ.
ಇಲ್ಲಿಯವರೆಗೂ ಯಾರ ಮಾತನ್ನೂ ಕೇಳದ ಈ ನರಹಂತಕ, ಇಂದು ಹೇಳಿದಂತೆ ಕೇಳುತ್ತಿದ್ದಾನಲ್ಲ ಎಂದು ಬುದ್ಧ ತನ್ನೊಳಗೆ ನಸು ನಕ್ಕ. ಈತ ಪರಿವರ್ತನೆಯಾಗುವ ಎಲ್ಲಾ ಸಂಭವಗಳಿವೆ ಎಂದು ಕಿರುನಗೆ ಬೀರಿದ.
ಫೋಟೋ ಕೃಪೆ : facebook
ಅಂಗುಲಿ ಮಾಲಾ: ಸನ್ಯಾಸಿ, ನೀ ಹೇಳಿದಂತೆ ಗಿಡದ ಟೊಂಗೆಯನ್ನು ಕತ್ತರಿಸಿದೆ. ಮುಂದೇನು!?
ಬುದ್ಧ: ಈಗ ಕತ್ತರಿಸಿದ ಗಿಡದ ಟೊಂಗೆಯನ್ನು ಮರು ಜೋಡಿಸು.
ಅಂಗುಲಿ ಮಾಲಾ: ಸನ್ಯಾಸಿ, ನಿನಗೆ ಹುಚ್ಚು ಹಿಡಿದಿದೆ ಏನು!. ಕತ್ತರಿಸಿದ್ದನ್ನು ಮರು ಜೋಡಿಸಲು ಸಾಧ್ಯವೇ!
ಬುದ್ಧ: ನಾನು ನಿನಗೆ ಅದನ್ನೇ ಹೇಳುತ್ತಿದ್ದೇನೆ. ಕತ್ತರಿಸುವುದು ಸುಲಭ. ಕತ್ತರಿಸಿದ ಮೇಲೆ ಜೋಡಿಸುವುದು ಕಠಿಣ. ನೀನು ಇಲ್ಲಿಯವರೆಗೆ 999 ಜನರನ್ನು ಕತ್ತರಿಸಿರುವೆಯಲ್ಲ ಅವರಲ್ಲಿ ಒಬ್ಬನಿಗೆ ಅವರ ಬೆರಳನ್ನು ಮರು ಜೋಡಿಸಿ ತೋರಿಸು ನೋಡೋಣ.
ಒಂದು ಕ್ಷಣಕ್ಕೆ ಅಂಗುಲಿಮಾಲಾ ಸ್ಥಬ್ದನಾದ. ಕಣ್ಣುಗಳು ನೀರಿನಿಂದ ತುಂಬಿದವು. ಕೈಗಳು ನಡುಗಲು ಪ್ರಾರಂಭವಾದವು. ತಪ್ಪಿನ ಅರಿವಾಯಿತು. ತನ್ನ ಕೊರಳಲ್ಲಿ ಇರುವ ಕತ್ತರಿಸಿದ ಬೆರಳುಗಳ ಮಾಲೆಯನ್ನು ಹೊರ ತೆಗೆದು ಬುದ್ಧನ ಪಾದದ ಬಳಿ ಇಟ್ಟು “ನೀ ನನ್ನ ಮನ್ನಿಸು ತಂದೆ’ ಎಂದ.
ಬುದ್ಧ ತಿರುಗಿ ಮುಂದೆ ಹೊರಟ. ಅಂಗುಲಿ ಮಾಲಾ ಬುದ್ಧನನ್ನು ಹಿಂಬಾಲಿಸಿದ. ಬುದ್ಧನಂತೆ ಸನ್ಯಾಸಿಯಾದ. ಮುಂದೆ ಬುದ್ಧನ ಮಾತಿನಂತೆ ಭಿಕ್ಷೆಗೆ ಅವನು ಕೊಂದ ವ್ಯಕ್ತಿಗಳ ಮನೆಗೆ ಭಿಕ್ಷೆಗೆ ಹೋದ. ಜನ ಕಲ್ಲುಗಳಿಂದ ಹೊಡೆದರು. ರಕ್ತ ಸುರಿಯುತ್ತಿತ್ತು. ಗಾಯಗೊಂಡು ಬುದ್ಧನ ಬಳಿ ಬಂದ.
“ನೋವಾಗುತ್ತಿದೆಯೇ” ಎಂದು ಬುದ್ಧ ಕೇಳಿದಾಗ “ಇಲ್ಲಾ ಗುರುವೇ, ನೋವು ದೇಹಕ್ಕೆ ಆಗುತ್ತಿದೆ. ಮನಸ್ಸನ್ನು ನಿನ್ನ ಬಳಿಯೇ ಬಿಟ್ಟುಹೋಗಿರುವಾಗ ನೋವಿನ ಮಾತೇ ಇಲ್ಲಾ” ಎನ್ನುತ್ತಾನೆ.
ಸ್ನೇಹಿತರೆ :
999 ಜನರನ್ನು ಕೊಂದ ಒಬ್ಬ ನರಹಂತಕ ಕ್ಷಮೆ ಕೇಳಿ ಪರಿವರ್ತನೆಯಾಗಿ ಒಬ್ಬ ಸಂತನಾಗಬಹುದಾದರೆ, ನಾವು ನೀವು ಮಾಡಿರುವ ಸಣ್ಣ ಪುಟ್ಟ ತಪ್ಪುಗಳಿಗೆ ‘ನೀ ನನ್ನ ಮನ್ನಿಸು’ ಎಂದು ಸಂಬಂಧಿಸಿದ ವ್ಯಕ್ತಿಗೆ ಕೇಳಿಕೊಂಡರೆ ಹಾಳಾಗುವ ಸಂಬಂಧ ಅರಳಿ ನಿಲ್ಲಬಹುದಲ್ಲವೇ!
‘ನೀ ನನ್ನ ಮನ್ನಿಸು’ ಎಂಬ ಒಂದೇ ಒಂದು ನಿವೇದನೆ ಏನೆಲ್ಲಾ ಬದಲಾವಣೆಗಳನ್ನು ತರಬಹುದು ಅಲ್ವಾ! ಮರೆತ ನಗು ಮರಳಬಹುದು. ಸತ್ತ ಸಂಬಂಧ ಜೀವಂತವಾಗಬಹುದು. ಭಾರವಾದ ಮನಸುಗಳು ಹಗುರವಾಗಿ ಒಂದಾಗಬಹುದು. ಒಡೆದ ಕುಟುಂಬಗಳು, ಸ್ನೇಹ ಸಂಬಂಧಗಳು ಮರು ಜೀವ ಪಡೆಯಬಹುದು. ಅಲ್ವಾ..!
ಹಾಗಾದರೆ ಸಂದರ್ಭಕ್ಕೆ ತಕ್ಕಂತೆ ಮನ್ನಿಸಲು ಮುಂದಾಗೋಣ, ಮನ್ನಿಸು ಎಂದು ಕೇಳಿಕೊಳ್ಳೋಣ. ಎರಡು ದಿನದ ಬದುಕಲ್ಲಿ, ಕ್ಷಮೆ ಕೇಳಿ, ಕತ್ತರಿಸಿದ ಮನಸುಗಳನ್ನು ಮರು ಜೋಡಿಸಿಕೊಳ್ಳೋಣ. ಬದುಕನ್ನು ಸಾರ್ಥಕವಾಗಿಸೋಣ.
- ಡಾ. ರಾಜಶೇಖರ ನಾಗೂರ