ಪ್ರೀತಿಯಿಂದ ಶುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುವ ಹೆಣ್ಣಿನ ಮೇಲೆ ಅತಿಯಾದ ನಿರೀಕ್ಷೆ ಶುರುವಾದರೆ ಅದೇ ಅವಳಿಗೆ ಉರುಳಾಗುತ್ತದೆ. ಚೆನ್ನಾಗಿ ಅಡುಗೆ ಮಾಡಿದ್ದೇ ಬದುಕಿಡೀ ಬಂಧನವಾಗಬಾರದು. ಹೆಣ್ಣಿನ ಮಾನಸಿಕ ತೊಳಲಾಟದ ಕುರಿತು ಕವಿತಾ ಹೆಗಡೆ ಅಭಯಂ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…..
“ನನ್ನ ಅಡುಗೆ ಅಂದ್ರೆ ನಮ್ಮೆಜಮಾನ್ರಿಗೆ ಪ್ರಾಣ. ಯಾವ ಹೋಟೆಲಿನಲ್ಲೂ ನಿನ್ನಷ್ಟು ಚೆನ್ನಾಗಿ ಅಡುಗೆ ಮಾಡಲ್ಲ ಕಣೇ ಅಂತ ದಿನಾ ಹೇಳ್ತಾರೆ. ಅವರು ಹೊಟ್ಟೆ ತುಂಬ ತಿಂದು ಆಫೀಸಿಗೆ ಹೋದ್ರೆ ಎಷ್ಟು ಖುಷಿ ಗೊತ್ತಾ?” ಅನ್ನುತ್ತಾಳೆ ಅನಿತಾ.
“ನಮ್ಮನೇಲಿ ಒಬ್ಬೊಬ್ಬರಿಗೆ ಒಂದೊಂಥರ ಮಾಡಿ ಮಾಡಿ ಸಾಕಾಗುತ್ತೆ.” ಅಂತಾಳೆ ವಿನಿತಾ.
“ನನ್ ಮಗ ಎಲ್ಲಾ ಚೈನೀಸ್ ಇಲ್ಲಾ ವೆಸ್ಟೆರ್ನ್ ಫುಡ್ ಬೇಕು ಅಂತಾನ್ರೀ.. ಮೂರು ಹೊತ್ತೂ ಅಡುಗೆ ಮಾಡೋದೇ,” ಅಂತಾಳೆ ಸಂಗೀತಾ.
ಫೋಟೋ ಕೃಪೆ : google
ಪರಿವಾರಕ್ಕಾಗಿ ಅಡುಗೆ ಮಾಡಿ ಹಾಕುವುದೇ ತಮ್ಮ ಜೀವನದ ಸಾರ್ಥಕ್ಯ ಎಂದುಕೊಂಡು ಬೆಳಗಿನಿಂದ ರಾತ್ರಿಯವರೆಗೂ ವೈವಿಧ್ಯಮಯ ಅಡುಗೆಮಾಡಿ ಬಡಿಸುತ್ತ, ಅವರ ಸಂತೋಷದಲ್ಲೇ ತಮ್ಮ ಸಂತೋಷವಿದೆ ಎಂದು ಭಾವಿಸಿ, “ಅಡುಗೆ ಸೂಪರ್ ಕಣೇ” ಎಂಬ ಒಂದು ಪ್ರಶಂಸೆಯ ಮಾತಿಗೆ ತಮ್ಮನ್ನು ತಾವೇ ಬಂಧಿಸಿಕೊಳ್ಳುವವರಿದ್ದಾರೆ.
ತಿನ್ನುವ ಬಾಯಿಗಳೆಂದರೆ ಒಂದು ರೀತಿ ಬ್ಲಾಕ್ ಹೋಲ್ ಇದ್ದಂತೆ. ಎಷ್ಟು ತುಂಬಿಸಿದರೂ ಕ್ಷಣದಲ್ಲಿ ಮಾಯವಾಗುತ್ತವೆ. ಹೊತ್ತು ಹೊತ್ತಿಗೂ ಸವಿ-ಸವಿಯಾಗಿ ಮಾಡಿ ಬಡಿಸುವ ಕೈಗಳಿದ್ದರೆ ಬೇಡಿಕೆಗಳೂ ನೂರಾರು. ಅದರಲ್ಲೂ ದೇಶ ವಿದೇಶಗಳ ಹೊಸ ಹೊಸ ರೆಸಿಪಿ ಕಲಿತು ಪ್ರಯೋಗಿಸುವ ಮಾಡಿದ್ದನ್ನು ಇನ್ನೊಮ್ಮೆ ರಿಪೀಟ್ ಮಾಡದ ಪ್ರವೀಣೆಯರಿಗೆ ಹೊಗಳಿಕೆಯ ಹೊನ್ನ ಶೂಲಕ್ಕೆ ಬೆನ್ನು ಸಿಕ್ಕಿಸಿ ನೇತಾಡುತ್ತಿರುವುದೇ ಬದುಕಾಗುತ್ತದೆ.
ಪ್ರೀತಿಯಿಂದ ಶುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುವ ಹೆಣ್ಣು ಎಲ್ಲರ ಮೆಚ್ಚುಗೆ ಗಳಿಸುತ್ತಾಳೆ. ಕ್ರಮೇಣ ಅವಳ ಮೇಲೆ ಅತಿಯಾದ ನಿರೀಕ್ಷೆ ಶುರುವಾದರೆ ಅದೇ ಅವಳಿಗೆ ಉರುಳಾಗುತ್ತದೆ. ಪ್ರತಿನಿತ್ಯ ಥರಥರದ ಭಕ್ಷ್ಯಭೋಜ್ಯಗಳನ್ನು ತಯಾರಿಸಿ, ರಮಣೀಯವಾಗಿ ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತ ತುಂಬ ಲೈಕ್ ಗಿಟ್ಟಿಸುತ್ತಿದ್ದ ಮಹಿಳೆ ಮೊನ್ನೆ ಇದ್ದಕ್ಕಿದ್ದಂತೆ ಕಾಯಿಲೆ ಬಿದ್ದಳು. ಅವಳು ಅಷ್ಟು ಗಂಭೀರಗೊಂಡಿದ್ದರೂ ತೂರಾಡಿಕೊಂಡೇ ಅಡುಗೆ ಮಾಡಿ ಸೈ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು. ಅವಳ ಗಂಡ ಕೂಡ ಒಂದೇ ಒಂದು ಹೊತ್ತೂ ಅವಳಿಗೆ ಸಹಾಯ ಮಾಡದೆ, “ನಿನ್ನ ಕೈಯಡುಗೇನೇ ಸೂಪರ್ ಕಣೇ,” ಎನ್ನುತ್ತ ಅವಳೇ ಅಡುಗೆ ಮಾಡುವ ಹಾಗೆ ಉಪಾಯವಾಗಿ ನೋಡಿಕೊಂಡ ಸ್ವಾರ್ಥವನ್ನು ತಿಳಿಯದೆ ಇನ್ನಷ್ಟು ಕೆಲಸ ಮಾಡಿ ಸೋಲುತ್ತಿದ್ದಳು! ವಿಶ್ರಾಂತಿಯೇ ಇಲ್ಲದೆ ದಣಿದ ಕಿಚನ್ ಕ್ವೀನ್ ಮೇಲೆ ಇಂದು ಅಸಹನೆಯ ನೋಟ ಹಾಯ್ದು ಅವಳನ್ನು ಸುಡುತ್ತಿದೆ.
ಅಡುಗೆ ಮನೆಯ ಉಸ್ತುವಾರಿಯನ್ನು ಸಂಪೂರ್ಣವಾಗಿ ತಾವೇ ಹೊತ್ತುಕೊಂಡವರು, ಬೇರೆಯವರಿಗೆ ತಮ್ಮ ಕಿಚನ್ನಲ್ಲಿ ಎಂಟ್ರಿಯೇ ಇಲ್ಲ ಎಂದು ಹೆಮ್ಮೆಯಿಂದ ಹೇಳುವವರಿಗೆ ಅನಿವಾರ್ಯ ಪರಿಸ್ಥಿತಿಯಲ್ಲಿ ಬಹಳ ಕಷ್ಟವಾಗಿಬಿಡುತ್ತದೆ. ಚೆನ್ನಾಗಿ ತಿನಿಸುವ ಹೆಣ್ಣೆಂದು ತಲೆಯ ಮೇಲೆ ಹೊತ್ತವರಂತಿರುವ ಎಷ್ಟೋ ಮಂದಿ ಅವಳು ಶಕ್ತಿ ಕಳೆದುಕೊಂಡರೆ ಕೂಡಲೇ ಸಿಡಿಮಿಡಿಗೊಳ್ಳುವುದು ನಿತ್ಯಸತ್ಯ.
ಫೋಟೋ ಕೃಪೆ : google
ನಿಮ್ಮ ಮೇಲೆ ಅತಿಯಾದ ನಿರೀಕ್ಷೆಗಳನ್ನಿಡದೆ ಹೊಂದಿಕೊಂಡು ಹೋದರೆ ಮನೆ ಮಂದಿ ನಿಮ್ಮ ನಿರ್ಧಾರಕ್ಕೆ ಗೌರವ ತೋರುತ್ತಿದ್ದರೆ ಆಗ ಅದು ನಿಮ್ಮ ಸತ್ವಯುತ ವ್ಯಕ್ತಿತ್ವವನ್ನೂ ನಿಮ್ಮ ಮನೆಯವರ ಹೊಂದಿಕೊಳ್ಳುವ ಗುಣವನ್ನೂ ತೋರುತ್ತದೆ. ಕೆಲವು ಮನೆಗಳಲ್ಲಿ ಊಟ ತಿಂಡಿಯ ವಿಷಯವೇ ಎಲ್ಲ ವಿರಸ, ಮನಸ್ತಾಪಗಳ ಬೀಜವಾಗುತ್ತದೆ. ಪ್ರತಿನಿತ್ಯ ತಮ್ಮಿಚ್ಛೆಯ ಅಡುಗೆಯೇ ಆಗಬೇಕು, ತನ್ನಮ್ಮ ಮಾಡಿದ ಹಾಗೇ ಇರಬೇಕು, ಪರ್ಫೆಕ್ಟ್ ಆಗಿಯೇ ಮಾಡಬೇಕು ಎಂಬ ಜನರಿದ್ದಲ್ಲಿ ಅನಿವಾರ್ಯವಾಗಿ ಅಡುಗೆಯೇ ಮುಖ್ಯವಾಗಿಬಿಡುತ್ತದೆ.
ಅಡುಗೆಯನ್ನು ಎಂಜಾಯ್ ಮಾಡಿಕೊಂಡು ಮಾಡುವವರಿಗೂ ಅದು ಕಾಡುವ ಹಾಗಾಗಬಾರದು. ಹೊರಗೆ ಹೋಗದ ಎಷ್ಟೋ ಹೆಣ್ಣುಗಳಿಗೆ ತಮ್ಮ ಒಳಗಿನ ನೋವಿಗೆ, ಬಂಧನಕ್ಕೆ ಅಡುಗೆ ಮಾಡುವುದರ ಮೂಲಕ, ಉಣಬಡಿಸುವುದರ ಮೂಲಕ ತುಸು ನೆಮ್ಮದಿ, ಬಿಡುಗಡೆ ಸಿಕ್ಕರೆ ಸಂತೋಷ.
ಆದರೆ ಚೆನ್ನಾಗಿ ಅಡುಗೆ ಮಾಡಿದ್ದೇ ಬದುಕಿಡೀ ಬಂಧನವಾಗಬಾರದು. ಹಠಮಾರಿ ಧೋರಣೆ ಹೊಂದಿರುವ ಅಥವಾ ಹೆಣ್ಣು ಅಡುಗೆ ಮಾಡಲೆಂದೇ ಹುಟ್ಟಿದ್ದು ಎಂದು ವಾದಿಸುವ ಮನೆಯಲ್ಲಿ ಹೆಣ್ಣಿಗೆ ಅದು ನಿಜಕ್ಕೂ ದಿಗ್ಬಂಧನ. ಆದರೆ ಎಲ್ಲ ಸ್ವಾತಂತ್ರ್ಯವಿದ್ದೂ ಅರಿವಿಲ್ಲದೆ ಅಡುಗೆ ಮನೆಯನ್ನು ಸೆರೆಮನೆಯನ್ನಾಗಿಸಿಕೊಂಡಿದ್ದರೆ ಒಮ್ಮೆ ಯೋಚಿಸಿ. ಅಡುಗೆಮನೆ ಎಂಬುದು ಸ್ತ್ರೀಗೆ ಬಿಡುಗಡೆಯ ಸ್ಥಾನವಾಗಬೇಕು.
ಫೋಟೋ ಕೃಪೆ : google
ಏನು ಮಾಡಬಹುದು:
• ಅಡುಗೆಯೇ ನಿಮ್ಮ ಆಸಕ್ತಿಯಾಗಿದ್ದಲ್ಲಿ ಶೀಘ್ರವಾಗಿ ಕೆಲಸ ಮುಗಿಸಿ, ನಂತರ ನಿಮ್ಮ ಕೌಶಲ್ಯವನ್ನು ಹೆಸರು ಹಾಗೂ ಹಣ ಗಳಿಕೆಯ ಮಾರ್ಗವನ್ನಾಗಿಸಿಕೊಳ್ಳಬಹುದು.
• ಸಮಯವಿದ್ದಾಗ ಚೆನ್ನಾಗಿ ಅಡುಗೆ ಮಾಡಿದರೂ ಅನಾರೋಗ್ಯ ಅಥವಾ ಇನ್ನಿತರ ಅನಿವಾರ್ಯ ಕಾರಣಗಳಿದ್ದಾಗ ಸಿಂಪಲ್ ಆಗಿರುವ ಅಡುಗೆಗೆ ಮನವೊಲಿಸಬೇಕು.
• ಮಕ್ಕಳು ಕಂಡಕಂಡಾಗ ಬೇಡಿದನ್ನೆಲ್ಲ ಮಾಡಿಕೊಟ್ಟು ಅಭ್ಯಾಸ ಮಾಡಿಸದೇ ಎಲ್ಲ ರೀತಿಯ ಅಡುಗೆಗೆ ಹೊಂದಿಕೊಳ್ಳುವುದನ್ನು ಕಲಿಸಬಹುದು.
• ಕಟ್ಟುನಿಟ್ಟಾಗಿ ಎಲ್ಲಾ ಪರಿಸ್ಥಿತಿಯಲ್ಲೂ ಒಂದೇ ರೀತಿಯ ಅಡುಗೆ ಮಾಡುವುದನ್ನು ನಿಮಗೆ ಕಡ್ಡಾಯಮಾಡತ್ತಿದ್ದರೆ ತಾಳ್ಮೆಯಿಂದ ಎಲ್ಲ ರೀತಿಯ ಶೈಲಿಗೆ ಒಗ್ಗಿಸುವ ಪ್ರಯತ್ನ ಮಾಡಬಹುದು.
• ಅಡುಗೆ ಮನೆಯಲ್ಲಿ ಎಲ್ಲಿ ಏನಿದೆ ಎಂದು ಎಲ್ಲರಿಗೂ ತಿಳಿಸಿದ್ದರೆ ಉತ್ತಮ. ಗಂಡ, ಮಕ್ಕಳು ಮೊದಲಿಂದಲೂ ಸಹಾಯ ಮಾಡುವುದನ್ನು ಅಥವಾ ಹೊರಗಿನಿಂದ ತರುವುದನ್ನು ರೂಢಿಮಾಡಿಸಬಹುದು.
• ಊಟದ ಸಮಯದಲ್ಲಿ ಅಡುಗೆಯನ್ನು ಅಮಾನವೀಯವಾಗಿ ಟೀಕಿಸಬಾರದೆಂದು ಮನದಟ್ಟು ಮಾಡಬಹುದು.
• ಊಟಕ್ಕೆ ಅಡುಗೆಗೆ ಅತಿಯಾದ ಮಹತ್ವ ನೀಡುವುದನ್ನು ನಿಧಾನವಾಗಿ ಕಡಿಮೆ ಮಾಡಿ ಆರೋಗ್ಯಕರ ಜೀವನಶೈಲಿಗೆ ಒತ್ತು ನೀಡುವುದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂದು ಮನವರಿಕೆ ಮಾಡಿಸಬಹುದು.
- ಕವಿತಾ ಹೆಗಡೆ ಅಭಯಂ