‘ಸಾವು ಬದುಕಲು ಕಲಿಸುತ್ತದೆ’

ನಾನು ಹೆಸರಿನ ಹಿಂದೆ ಬಿದ್ದು ಅದೆಷ್ಟು ಬದುಕಿನ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸದೆ ಉಳಿದುಬಿಟ್ಟೆ. ಏನೇ ಮಾಡಿದರೂ ಬದುಕು ಮರುಕಳಿಸದು. ಆದ್ದರಿಂದ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಜೊತೆ ನಗುತ್ತಾ ಬಾಳುವುದೇ ನಿಜವಾದ ಬದುಕು” ಎನ್ನುತ್ತಾನೆ. – ‘ಆಪಲ್ ಕಂಪನಿ’ಯ ಸಿಇಓ ‘ಸ್ಟೀವ್ ಜಾಬ್’. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಬದುಕಿನಲ್ಲಿ ಯಾರನ್ನೂ ಮೇಲು-ಕೀಳೆಂದು ತಾರತಮ್ಯ ಮಾಡಬಾರದಂತೆ ಆ ಸಾವಿನ ಹಾಗೆ. ಶ್ರೀಮಂತ-ಬಡವ, ಉಚ್ಛ-ನೀಚ ಯಾರೇ ಆಗಿರಲಿ ಸಾವು ಯಾರಲ್ಲಿಯೂ ಭೇದ ಎಣಿಸದು. ಬದುಕಿನ ಪಾಠ ಈ ಸಾವೇ ಹೇಳಿಕೊಡುತ್ತದೆ. ಅಲ್ಲವೇ!…

ಪ್ರಾರಂಭಕ್ಕೊಂದು ಅಂತ್ಯವಿರಲೇಬೇಕು. ಹುಟ್ಟಿದವ ಮರಣಿಸಲೇಬೇಕು. ಪ್ರತಿ ಜೀವಿ ಹುಟ್ಟಿದ ತಕ್ಷಣ ಮರಣದ ಕಡೆ ಪಯಣ ಪ್ರಾರಂಭಿಸುತ್ತದೆ. ದಿನ, ತಿಂಗಳು, ವರ್ಷಗಳು ಕಳೆದಂತೆ ಸಾವಿಗೆ ಸಮೀಪವಾಗುತ್ತಾ ಹೋಗುತ್ತೇವೆ. ಆದರೆ ಮರಣ ಯಾವಾಗ ಎಂಬುದು ಯಾರಿಗೂ ತಿಳಿದಿಲ್ಲವಾದ್ದರಿಂದ ಬದುಕಿನ ಮಧ್ಯದಲ್ಲಿ ಮನುಷ್ಯ ಸಾಯುವುದೇ ಇಲ್ಲವೇನೋ ಎನ್ನುವಂತೆ ಮತಿ ಹೀನನಾಗಿ ವರ್ತಿಸುತ್ತಾನೆ.

ಮತ್ತೆ ಕೆಲವರು ಸಾವು ನಿಶ್ಚಿತ ಎಂದಮೇಲೆ ಇರುವ ನಾಲ್ಕು ದಿನಗಳನ್ನು ಮನುಷ್ಯರಾಗಿ ಯಾರಿಗೂ ನೋವು ಕೊಡದಂತೆ ಬದುಕಿ ಹೆಜ್ಜೆ ಗುರುತು ಮೂಡಿಸಿ ಮರಣಿಸುತ್ತಾರೆ. ಅಂತವರೆಲ್ಲ ಇತಿಹಾಸದಲ್ಲಿ ಜೀವಂತವಾಗಿ ಉಳಿಯುತ್ತಾರೆ. ಬುದ್ಧ, ಬಸವ, ಮಹಾವೀರರ ಕಾಲ ಘಟ್ಟ ಯಾವುದು! ಇಂದಿಗೂ ಅವರನ್ನು ನೆನೆಯುತ್ತೇವೆಂದರೆ ಮರಣದಲ್ಲಿಯೂ ಜನಿಸಲು ಸಾಧ್ಯವಿದೆ ಎಂದು ಸಿದ್ಧಿಸಿದ್ದಾರೆ.

ಫೋಟೋ ಕೃಪೆ : google

ಏನೇ ಇರಲಿ ಮರಣ ಕಲಿಸುವ ಜೀವನದ ಪಾಠಗಳು ಮತ್ತಾರೂ ಕಲಿಸಲು ಸಾಧ್ಯವಿಲ್ಲ. ಇಡೀ ಜಗತ್ತನ್ನೇ ಗೆಲ್ಲ ಬಲ್ಲೆ ಎನ್ನುವ ಅಲೆಕ್ಸಾಂಡರ್ “ಸತ್ತ ಮೇಲೆ ನನ್ನ ಕೈಯನ್ನು ಶವ ಪೆಟ್ಟಿಗೆಯಿಂದ ಹೊರಗಿರಿಸಿ, ಜಗತ್ತನ್ನೇ ಗೆದ್ದವನ ಕೈಯು ಕೊನೆಗೆ ಖಾಲಿಯಾಗಿಯೇ ಉಳಿಯಿತು ಎಂಬ ಪಾಠ ಜಗತ್ತಿಗೆ ತಿಳಿಯಲಿ” ಎಂದು ಹೇಳಿದ್ದನಂತೆ. ಅಂತವನಿಗೂ ಅದೆಂತಹ ಪಾಠ ಕಲಿಸಿರಬೇಕು ಈ ಸಾವು!

ಪಾರ್ಥಿವ ಶರೀರವನ್ನು ಕಂಡು ಸಾಮ್ರಾಜ್ಯವನ್ನು ತ್ಯಜಿಸಿ ನಡುರಾತ್ರಿ ಹೊರಟುನಿಂತು “ಆಸೆಯೇ ದುಃಖಕ್ಕೆ ಮೂಲ” ಎಂಬ ಪಾಠ ಮಾಡಿದ ಗೌತಮನು ಬುದ್ಧನಾಗಿದ್ದು ಇದೆ ಸಾವಿನಿಂದ.

ಸಾವು ವಿಚಿತ್ರ. ಅದರ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿವರಿಸಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಹೀಗೆ ಸಾವೊಂದು ರಹಸ್ಯ. ಅದು ಒಮ್ಮೆ ಸೆಳೆಯಿತೆಂದರೆ ಸಾಕು ಈಗಿದ್ದ ಮನುಷ್ಯ ಕ್ಷಣ ಮಾತ್ರದಲ್ಲಿ ನೆನಪಾಗಿ ಉಳಿದುಬಿಡುತ್ತಾನೆ. ಇಷ್ಟೊಂದು ಅನಿಶ್ಚಿತ ಬದುಕನ್ನು ಮನುಷ್ಯ ಹೊಂದಿದ್ದರೂ ತನ್ನ ಅರಿಷಡ್ವರ್ಗಗಳನ್ನು ಮುಂದಿಟ್ಟುಕೊಂಡೆ ಬದುಕುತ್ತಾನೆಯೇ ಹೊರತು ಸರಳತೆಗೆ ವಾಲಲಾರ.

ತಮಾಷೆಯ ಮಾತೆಂದರೆ ಸತ್ತ ಶವ ಹೀಗೆ ವ್ಯಂಗ್ಯವಾಡುತ್ತದಂತೆ “ಈ ಕ್ಷಣ ನಾನು ಎದ್ದುಬಿಟ್ಟರೆ, ನನ್ನ ಮುಂದೆ ಅಳುತ್ತಿರುವವರೇ ಮತ್ತೆ ನನ್ನನ್ನು ಸಾಯಿಸುವವರೆಗೆ ಬಿಡಲಾರರು” ಎಂದು. ಪಾಠವಿಷ್ಟೇ ಬದುಕಿರುವವರೆಗೆ ಮಾತ್ರ ನಮ್ಮವರು. ಒಮ್ಮೆ ಉಸಿರು ಹೋದರೆ ಎಲ್ಲರೂ ದೂರವಾಗುತ್ತಾರೆ.

ಫೋಟೋ ಕೃಪೆ : google

‘ಸ್ಟೀವ್ ಜಾಬ್’ ಪ್ರಸಿದ್ಧ ‘ಆಪಲ್ ಕಂಪನಿ’ಯ ಸಿಇಓ, ಒಂದು ಕಾಲದ ಅತೀ ಶ್ರೀಮಂತ ವ್ಯಕ್ತಿಯು ‘ಪಾಂಕ್ರಿಯೇಟಿಕ್ ಕ್ಯಾನ್ಸರ್’ ನಿಂದ ಸಾಯುವ ಗಳಿಗೆಯಲ್ಲಿ ಹೇಳಿದ್ದಿಷ್ಠೆ ” ನಾನು ಗಳಿಸಿದ ಹಣ, ಹೆಸರು, ಐಷಾರಾಮಿ ಸವಲತ್ತುಗಳು ಈ ಸಾವಿನ ಹಾಸಿಗೆಯನ್ನು ಗೆಲ್ಲಲು ಅಸಮರ್ಥವಾಗಿವೆ. ನಾನು ಈ ಹೆಸರಿನ ಹಿಂದೆ ಬಿದ್ದು ಅದೆಷ್ಟು ಬದುಕಿನ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸದೆ ಉಳಿದುಬಿಟ್ಟೆ. ಏನೇ ಮಾಡಿದರೂ ಬದುಕು ಮರುಕಳಿಸದು. ಆದ್ದರಿಂದ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಜೊತೆ ನಗುತ್ತಾ ಬಾಳುವುದೇ ನಿಜವಾದ ಬದುಕು” ಎನ್ನುತ್ತಾನೆ.

ನಿನ್ನೆ ಮೊನ್ನೆ ನಮ್ಮನ್ನಗಲಿದ ‘ಅಪ್ಪು’ ಜನಮಾನಸದಲ್ಲಿ ಉಳಿದುಕೊಂಡಿದ್ದು ಅವನು ತನ್ನ ಜೀವಿತ ಅವಧಿಯಲ್ಲಿ ಮಾಡಿದ ಕೆಲವು ಪುಣ್ಯದ ಕೆಲಸಗಳಿಂದ ಮಾತ್ರ. ಅತೀ ಚಿಕ್ಕ ವಯಸ್ಸಲ್ಲಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನನಾದದ್ದು ಆ ಮರಣದ ಮೊದಲು ಮಾಡಿದ ಸತ್ಕಾರ್ಯಗಳಿಂದ. ಇದರರ್ಥ ಇಷ್ಟೇ ಸಾವಿಗೆ ಮುಂಚೆ ಸತ್ಕಾರ್ಯಗಳನ್ನು ಮಾಡು ಎಂದು.

ಫೋಟೋ ಕೃಪೆ : google

ನಾವೆಲ್ಲರೂ ನಮಷ್ಟಕ್ಕೆ ನಾವೇ ಕೇಳಿಕೊಳ್ಳಬೇಕಾದ ಒಂದೇ ಪ್ರಶ್ನೆ ಎಂದರೆ ನಾನು ಈಗ ಮಾತನಾಡಿದ್ದೇ ಕೊನೆಯ ಮಾತಾದರೆ..? ಈಗಲೇ ಸಾವು ಸಂಭವಿಸಿದರೆ ನಾವು ಮಾತನಾಡಿದ ನುಡಿಗಳು ಕೇಳಿದವರ ಕಿವಿಗಳಿಂದ ಅವರ ಹೃದಯದಲ್ಲಿ ಅವರ ಕೊನೆಯವರೆಗೂ ಉಳಿದು ಬಿಡುತ್ತವೆ. ಅಂದರೆ ಯಾವಾಗ ಸಾಯುತ್ತೇವೆ ನಮಗೆ ಗೊತ್ತಿಲ್ಲ ಆದರೆ ಸದಾ ಒಳ್ಳೆಯದನ್ನೇ ಮಾತನಾಡಬೇಕು ಎಂಬುದು ನಾವು ಈ ಸಾವಿನಿಂದ ಕಲಿಯುವ ಪಾಠವಾಗಿದೆ.

ಅದೆಷ್ಟೋ ಜನರು ನಾವು ಹೇಗೆ ಬದುಕಿ ಹೋಗುತ್ತೇವೆ ಎಂದರೆ ಹೋಗಿದ್ದು ಯಾರಿಗೂ ಗೊತ್ತೇ ಆಗಿರಲ್ಲ ಅಂದರೆ ನಮ್ಮ ನಿರ್ಗಮನ ಯಾರಿಗೂ ವ್ಯತ್ಯಾಸವನ್ನುಂಟು ಮಾಡಿರಲ್ಲ. ಅದನ್ನೇ ಬೆಂಜಮಿನ್ ಫ್ರಾಂಕ್ಲಿನ್ ಮಾರ್ಮಿಕವಾಗಿ ಹೇಳುತ್ತಾನೆ “ಬಹಳಷ್ಟು ಜನರು 25 ನೇ ವಯಸ್ಸಿಗೆ ಸತ್ತಿರುತ್ತಾರೆ ಆದರೆ 75 ನೇ ವಯಸ್ಸಿಗೆ ಹೂಳಲ್ಪಡುತ್ತಾರೆ”. ಅಂದರೆ ಸುಮ್ಮನೆ ನಿರರ್ಥಕವಾಗಿ ಬದುಕಿರುತ್ತಾರೆ. ಬದುಕು ಸಾರ್ಥಕತೆ ಮೆರೆಯಲು ಹೊರತು ಸುಖಾ ಸುಮ್ಮನೆ ಕಳೆಯಲು ಅಲ್ಲ.

ಹೀಗೆ ಸಾವನ್ನು ವಿಶ್ಲೇಷಿಸಿದಷ್ಟು ಬದುಕಲು ಕಲಿಯುವ ಪಾಠಗಳು ಸಿಗುತ್ತಾ ಹೋಗುತ್ತವೆ.

ಕೊನೆಯದಾಗಿ ಮರಣದ ಬಗೆಗೆ ನಾನೇ ಬರೆದ ಸ್ವರಚಿತ ಕವನದ ಮೂಲಕ ನನ್ನ ಬರಹವನ್ನು ಮುಕ್ತಾಯ ಗೊಳಿಸುತ್ತೇನೆ.

ಮರಣ ಮೃದಂಗ

ಮರಣ ಮೃದಂಗದ
ನಾದವಿದು
ಮಧುರವಲ್ಲದ್ದು.

ಮೇಲು ಕೀಳೆನ್ನದ
ರಾಗವಿದು
ಹಂಗಿಲ್ಲದ್ದು.

ತನ್ನ ತಾಳಕೆ
ಕುಣಿಸದೆ ಬಿಡದು
ನೃತ್ಯ ಮೃತ್ಯುವಿನದು.

ಇಹದಿಂದ ಪರಕೆ
ದಾರಿ ತೋರಲು
ಬಂದೇ ಬರುವುದು.

ಮರಣದಿ ಮಾತ್ರ
ಮನುಷ್ಯನಾಸೆಗೆ
ಮುಕ್ತಿ ದೊರಕುವುದು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW