ಭರತನಾಟ್ಯವಿದು ದೈವೀಕ ಕಲಾಸಾಧನ…ಶ್ರದ್ಧಾಭಕ್ತಿಗಷ್ಟೆ ಒಲಿವ ಕಲೋಪಾಸನ.. ಸಾಂಸ್ಕೃತಿಕ ಪರಂಪರೆಯ ಕಲಾಗಾನಾ.!….ರಶ್ಮಿಪ್ರಸಾದ್ (ರಾಶಿ) ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ….
ಹೆಜ್ಜೆಗೆಜ್ಜೆಯ ದನಿಯು ಉಲಿದಿಹುದಿಲ್ಲಿ
ಘನವಾದ್ಯ ಕಂಚಿನತಾಳಕೆ ಗೆಜ್ಜೆನಾದವಿಲ್ಲಿ
ನೃತ್ಯಾಭಿನಯದ ಅಪೂರ್ವ ಸಂಗಮವಿಲ್ಲಿ
ನೋಡುಗರ ಕಣ್ತಣಿಪ ಭರತನಾಟ್ಯವಿಲ್ಲಿ.!!
ಸಂಗೀತ ಸಪ್ತಸ್ವರಗಳ ಆಲಾಪನ
ಸುಶ್ರ್ಯಾವ್ಯ ಸಪ್ಪಳವಿಲ್ಲಿ ಅನುರಣನ
ಅಂದದ ವಸ್ತ್ರವಿನ್ಯಾಸ ಅಲಂಕಾರಣ
ಮೋಹಕ ಭಾವಭಂಗಿ ಅತ್ಯಾಕರ್ಷಣ.!!
ನೆತ್ತಿಗೆ ಕೆಂಪುಮುತ್ತಿನ ಮಿಶ್ರತಿಲಕಾದರ
ಕೊರಳಿಗೆ ನಾಗಮುರಿ ಭವ್ಯ ಕಂಠೀಹಾರ
ಅಗಲವಾಗಿ ತಿದ್ದಿತೀಡಿದ ನಯನಾಲಂಕಾರ
ಕರಗಳಿಗೆ ಮದರಂಗಿ ಮೆರುಗು ಮನೋಹರ.!!
ತಾಳಧಾರಿಯ ತಂಜಾವೂರಿನ ಪಿಟೀಲುವಾದ್ಯ
ನಟ್ಟುವಾಂಗನ ತಟ್ಟುಮಣಿ ಗೋಟುವಾದ್ಯ
ಒಂದಕ್ಕೊಂದು ತಾಳಮೇಳ ತಾಂಡವನೃತ್ಯ
ಕಲಾರಸಿಕರ ಸೂರೆಗೊಳ್ಳುವ ಭಾರತನಾಟ್ಯ.!!
ಬಣ್ಣಿಸಲಸದಳ ಈ ನೃತ್ಯ ಭಾವಭಂಗಿಯ
ನೋಡಿದಷ್ಟು ಮನಸೆಳೆವ ವಿಶಿಷ್ಟಮೋಡಿಯ
ಅದೇನು ಸಂಭ್ರಮವೋ ಅದೆಷ್ಟು ಪುಳಕಿತವೋ
ಹೃನ್ಮನ ತಣಿಸುವ ಜೀವಭಾವಸೆಲೆಯೋ.!!
ಭರತನಾಟ್ಯವಿದು ದೈವೀಕ ಕಲಾಸಾಧನ
ಶ್ರದ್ಧಾಭಕ್ತಿಗಷ್ಟೆ ಒಲಿವ ಕಲೋಪಾಸನ
ಸಾಂಸ್ಕೃತಿಕ ಪರಂಪರೆಯ ಕಲಾಗಾನಾ.!
ಭವಬಂಧನದಿ ವಿಸ್ಮಿತಗೊಳಿಪ ಸಮ್ಮೋಹನ.!!
- ರಶ್ಮಿಪ್ರಸಾದ್ (ರಾಶಿ)