ಒಂದು ಮರೆಯಲಾಗದ ಸಾಹಸದ ಅನುಭವಕ್ಕೆ ನಾನು , ಪ್ರಕಾಶ ಎಚ್ ಅಘನಾಶಿನಿ ಕಣಿವೆಯ ಹುಲ್ಲುಗಾವಲಿನ ಬಯಲಿನೊಳಗೆ ಅಪೂರ್ವ ಅನುಭವಕ್ಕೆ ಸಾಕ್ಷಿಯಾಗಿದ್ದೆವು.- ಗಿರಿ ವಾಲ್ಮೀಕಿ ಅವರ ‘ಕಾಡಿನ ಸುತ್ತ’ ಕತೆಗಳನ್ನು ತಪ್ಪದೆ ಓದಿ…
ಕರ್ನಾಟಕದ ಕಾಡುಗಳಲ್ಲಿ ಅಲೆಯುವುದೊಂದು ಅಪೂರ್ವ ಅನುಭವ. ಬದುಕಿನ ಎಲ್ಲಾ ಔಪಚಾರಿಕ ಖುಷಿಗಿಂತ ತೀರ ವಿಭಿನ್ನವಾದ ಮೈನವಿರೇಳಿಸುವ ಸಾಹಸದ ಖುಷಿ ನಿಮ್ಮದಾಗುವುದರಲ್ಲಿ ಯಾವ ಸಂಶಯವು ಉಳಿದಿಲ್ಲ. ಅಂಥದ್ದೇ ಒಂದು ಮರೆಯಲಾಗದ ಸಾಹಸದ ಅನುಭವಕ್ಕೆ ನಾನು , ಪ್ರಕಾಶ ಎಚ್ ಅಘನಾಶಿನಿ ಕಣಿವೆಯ ಹುಲ್ಲುಗಾವಲಿನ ಬಯಲಿನೊಳಗೆ ಅಪೂರ್ವ ಅನುಭವಕ್ಕೆ ಸಾಕ್ಷಿಯಾಗಿದ್ದೆವು. ಸೂರ್ಯ ನಿಧಾನವಾಗಿ ಅಸ್ತಂಗತನಾಗುತ್ತ ಇಡೀ ಕಾನುವಿಗೆ ಬಂಗಾರದ ಅಭ್ಯಂಜನ ಮಾಡಿಸುತ್ತಿದ್ದ.ಗಸ್ತಿನ ಕಾರ್ಯ ಮುಗಿಸಿ, ಧೂಪ ಮರದ ನೆತ್ತಿಯ ಮೇಲೆ ದೈತ್ಯಾಕಾರದ ಮುಸುವಾವೊಂದು ಕೂತು ಗೂಕ್ss ಗೂಕ್sss ಎಂದು ಅರಚಿದೊಡನೆ ಇಡೀ ಗೊಧೂಳಿ ಹೊತ್ತಿನ ದಟ್ಟಡವಿಗೆ ಜೀವ ಬಂದಂತಾಗಿ, ಅದರ ಎಚ್ಚರಿಕೆಯ ಕೂಗು ಬಹುದೂರದ ಗಂಗಾವಳಿ ನದಿಯ ಬಯಲಿನವರೆಗೂ ಮಾರ್ದನಿಸುತ್ತಿತ್ತು.
ಕಾಲ ಮೆಲ್ಲನೆ ಸರಿಯುತ್ತದೆ, ಯಾವುದೋ ಮೃಗದ ಮುನ್ಸೂಚನೆಯ ಸುಳಿವು ದೊರೆತು, ದೇಹದಲ್ಲಿ ಅಡ್ರಿನಾಲಿನ್ ರಸದೂತಕ್ಕೆ ವೇಗ ಸಿಕ್ಕತೊಡಗಿತು. ಒಂಥರಾ ಅವ್ಯಕ್ತವಾದ ಅಡ್ವೆಂಚರಸ್ ಭಾವೋತ್ಸಾಹವನ್ನು ಇಬ್ಬರು ದಟ್ಟ ಪಶ್ಚಿಮ ಘಟ್ಟದ ಕಾಡಿನ ನಡುವೆ ಅನುಭವಿಸತೊಡಗಿದೆವು.ಆ ದಿನ ಸಂಜೆ ಬಹುಬೇಗ ಕಂದುತ್ತಿದ್ದ ಸೂರ್ಯನಿಗೆ ಗುಡ್ಡದ ಗರ್ಭದಲ್ಲಿ ಸೇರಲು ತವಕಿಸುತ್ತಿದ್ದರೆ, ನಮ್ಮಿಬ್ಬರ ನೆರಳುಗಳು ಉದ್ದವಾಗತೊಡಗಿದವು. ತೆರದ ಬಯಲಾದ್ದರಿಂದ ಆದಷ್ಟೂ ಬೇಗ ಸುರಕ್ಷಿತ ಜಾಗಕ್ಕೆ ಹೋಗಲು ಪ್ರಕಾಶ್ ಸರ್ ಅವಸರಿಸುತ್ತಿದ್ದರು.
ಕಾಡು ಸೇರದಾಗಿನಿಂದ ಎಷ್ಟೇ ಆಧುನಿಕತೆಯಿಂದ ಕೂಡಿದ ಕೈ ಗಡಿಯಾರ,ಮೊಬೈಲ್ ನಮ್ಮ ಬಳಿ ಇದ್ದರೂ ಪ್ರಕೃತಿ ಕೊಡುವ ಮುನ್ಸೂಚನೆ ಹಾಗೂ ವಾತವರಣದಲ್ಲಾಗುವ ಬದಲಾವಣೆಯನ್ನು ಗ್ರಹಿಸಿ ಸಮಯ ಕಂಡು ಹಿಡಿಯುವ,ಮಳೆ,ಗಾಳಿಯ ಆಧಾರದ ಮೇಲೆ ಸಮಯ ಗುರುತಿಸುವ, ಯಾವುದೇ ಕಾರಣಕ್ಕೂ ಕಾಡಿನಲ್ಲಿರುವಷ್ಟು ಹೊತ್ತು ಕೈ ಗಡಿಯಾರ ನೋಡಬಾರದೆಂದು ನನ್ನೊಳಗೆ ಅಘೋಷಿತ ಒಪ್ಪಂದಕ್ಕೆ ಒಪ್ಪಿ ಅರಣ್ಯ ಜ್ಞಾನದ ಕಡೆಗೆ ನಿಧಾನವಾಗಿ ಗಂಟು ಬೀಳತೊಡಗಿದೆ.
ಕತ್ತಲಾದ್ದರಿಂದ ನಿಶ್ಯಬ್ದ ಧರಿಸಿದ ಕಾಡಿನೊಳಗೆ ಆಗೊಮ್ಮೆ ಈಗೊಮ್ಮೆ ಇರುಳ ಹಕ್ಕಿಗಳ ಕೂಗು ಕೇಳಿಬರುತ್ತಿದ್ದರೆ,ಕತ್ತಲಲ್ಲಿ ನಮಗೆ ಎದುರಾಗುವ ಪ್ರಾಣಿ ಯಾವುದಿರಬಹುದು ಎಂಬ ಗುಮಾನಿ ಹೆಚ್ಚಾಗುತ್ತಿತ್ತು. ನೆತ್ತಿಯ ಮೇಲೆ ನಕ್ಷತ್ರಗಳು ಮಿಣುಕುತ್ತಿದ್ದರೆ, ನಾನು ಸರ್ ಈಗ ಇಲ್ಲಿ ನಮ್ಮಿಬ್ಬರಲ್ಲಿ ಯಾರೇ ಸತ್ತರೂ ಮೇಲೆ ಮಿಣುಕುವ ನಕ್ಷತ್ರವಾಗ್ತೀವಿ ನೋಡಿ ನಗತೊಡಗಿದರೆ, ಯಾವುದೋ ಕಾಡು ಕೋಳಿ ಕೂಗಿದಂತಾಯಿತು. ಎತ್ತರದ ದಿಬ್ಬದ ಮೇಲೆ ನಿಂತಿದ್ದ ನನ್ನ ಕಡೆ ನೋಡಿ ಗಾಬರಿಯಾಗುವಂಥದ್ದೇನೂ ಇಲ್ಲ ಮಾರಾಯ ಆರಾಮಾಗಿರು ಎಂದು ನಗುತ್ತಾ, ಸಾಧ್ಯವಾದಷ್ಟು ಬೇಗ ಇಲ್ಲಿಂದ ಹೊರಡುವ ಎಂದರು.
ಒಂದೇ ಒಂದು ಸಣ್ಣ ಕದಲಿಕೆಯನ್ನು ಬಿಟ್ಟುಕೊಡದ ಅಲ್ಲಿನ ಪೊದೆ ಸಸ್ಯಗಳ ಮೇಲೆ ನಮಗೆ ವೀಪರೀತ ಗುಮಾನಿ ಬರತೊಡಗಿತು. ಏನೋ ಒಂದು ತೆರನಾದ ಸಮಾಧಾನವಿಲ್ಲದಂತಹ, ಇಲ್ಲಿ ಯಾವುದು ಈಗ ಸರಿಯಿಲ್ಲ ಎನ್ನುವ ಭಾವ ಕಾಡತೊಡಗಿತು.ಅನುಭವಿ ಪ್ರಕಾಶ್ ಸರ್ ಯಾವುದೋ ಅನಾಮಿಕ ಮಿಸುಗಾಟದ ಸದ್ದಿಗೆ ಗಕ್ಕನೆ ನಡೆಯುತ್ತಿದ್ದ ನನಗೆ ಕೈ ಅಡ್ಡ ಹಾಕಿ ನಿಂತು, ಎದೆಗೆ ಸವರಿಕೊಂಡು ಹೋಗುತಿದ್ದ ಗಾಳಿ ಬೀಸುವ ದಿಕ್ಕಿಗೆ ಕಿವಿಯಾನಿಸಿ ಧೇನಿಸ ತೊಡಗಿದರು. ಇದ್ದಕ್ಕಿದ್ದಂತೆ ಕಾಡಿಗೆ ಕಾಡೇ ಎಚ್ಚರವಾಗುವಂತೆ ಕೂಗಿದ ಕಾವಲು ಮಂಗವೊಂದು ಅಪಾಯದ ಮುನ್ಸೂಚನೆಯನ್ನು ಸಹಜವಾಗಿಯೇ ನೀಡಿತ್ತು.
ಆ ಕೂಗಿನ ಆಳ ಅಂದಾಜಿಸದ ಪ್ರಕಾಶ್ ಸರ್ ವೇಗವಾಗಿ ನಡೆಯುವುದು ಈಗ ಅಪಾಯಕಾರಿ ಎಂದು ಭಾವಿಸಿ, ಸುರಕ್ಷಿತ ಜಾಗ ಹುಡುಕಿ ಕೂತುಕೊಂಡೆವು. ಸಾಕಷ್ಟು ಬೆವರಿದ್ದರಿಂದ ಈಗ ಅನುಮಾನ ಹುಟ್ಟಿಸಿರುವುದೋ ಚಿರತೆಯೋ,ಹುಲಿಯೋ ಎನ್ನುವ ತಾಕಲಾಟದಲ್ಲಿದ್ದರೆ, ನಿರ್ಜಲೀಕರಣಗೊಂಡ ಎದೆಯಿಂದ ಉಸಿರು ಸಾಕಷ್ಟು ವೇಗದಲ್ಲಿ ಬರುತ್ತಿತ್ತು.
ಪೊದೆಯಲ್ಲಿ ಕೇಳಿ ಬಂದ ಸದ್ದು ಇನ್ನಷ್ಟು ಹತ್ತಿರವಾಗತೊಡಗಿತು. ಸಾಕಷ್ಟು ಹೊತ್ತು ಕತ್ತಲಲ್ಲಿ ಇದ್ದದರಿಂದ ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಂಡಿದ್ದವು. ಸದ್ದು ಬಂದ ದಿಕ್ಕಿನೆಡೆಗೆ ಕಣ್ಣು ನೆಟ್ಟು ಕೂತೆವು.ಇಡೀ ನನ್ನ ಕಾಡಿನ ಜೀವಮಾನದಲ್ಲಿ ನಾನು ಒಂದು ಅಪೂರ್ವ ಅನುಭವಕ್ಕೆ ಸಾಕ್ಷಿಯಾಗಿದ್ದು ಈ ಸನ್ನಿವೇಶ. ವೇಗವಾಗಿ ನನ್ನ ಪಾದ ತಿವಿದ ಪ್ರಕಾಶ್ ಸರ್ ಗಿರಿ ನೋಡಲ್ಲಿ ಎಂದರು. ಕುತೂಹಲದಿಂದ ಅತ್ತ ದೃಷ್ಟಿ ನೆಟ್ಟರೆ ಅಬ್ಬಾ..! ಅದೆಂಥಾ ಗಾಂಭಿರ್ಯ, ಅದರ ಧೀಮಂತಿಕೆಗೆ ಇಡೀ ಕಾಡಿಗೆ ಕಾಡೇ ತಲೆಬಾಗಿ ಚಾಮರ ಬೀಸತೊಡಗಿದವು. ಆ ದೈತ್ಯ ನಡೆಯುತ್ತ ಕತ್ತೆತ್ತಿ ಗಾಳಿಯಲ್ಲಿ ಅನಾಮಿಕ ವಾಸನೆಯನ್ನು ಗ್ರಹಿಸುತ್ತ ಶಾಂತವಾಗಿ ಮ್ಲಾನವಾಗಿ ನಡೆಯುವದನ್ನ ಕಣ್ತುಂಬಿಕೊಳ್ಳುತ್ತಿದ್ದರೆ,ಅಪರೂಪದ ದೃಶ್ಯ ನೋಡಿದ ನನ್ನೊಳಗೆ ಸಾವಿರ ಕುದರೆಯ ಕೆನೆತದ ಉತ್ಸಾಹ ಕ್ಷಣ ಕ್ಷಣಕ್ಕೂ ಇಮ್ಮಡಿಯಾಗುತ್ತಿತ್ತು.
ಯಾವುದೇ ಒತ್ತಡಕ್ಕೆ ಒಳಗಾಗಗದ ಒಂದು ದೈತ್ಯ ಹುಲಿಯೊಂದು ಕಾಡಿನ ಎಲ್ಲಾ ಸದ್ದು ಗದ್ದಲಗಳನ್ನು ನಿರ್ಲಕ್ಷಿಸಿ ನಿಧಾನವಾಗಿ ಮೈ ಬಳುಕಿಸುತ್ತಾ ಠೀವಿಯಿಂದ ಮೆಲ್ಲನೆ ಕಣ್ಮರೆಯಾಗುತ್ತಿದ್ದರೆ ಕಾಡಿಗೆ ಕಾಡೇ ಜೀವಂತ ರೂಪಕವಾಗಿ ನಿಂತು ನೋಡತಿಡಗಿದ್ದಂತೆ ಭಾಸ.ಆ ದೈತ್ಯ ವ್ಯಾಘ್ರ ಮಹಶಾಯ ಕಣ್ಣೆದೆರುಗೆ ಇರುವವರೆಗೂ ಕಾಲ,ದೇಶ,ಅಸ್ತಿತ್ವವನ್ನೆ ಮರೆತು ನಿಂತುಕೊಂಡಿದ್ದೆವು.
ಇಡೀ ಜೀವಮಾನದಲ್ಲಿ ನೇರವಾಗಿ ಕಾಡಿನೊಳಗೆ ಯಾವ ನೀರಿಕ್ಷೆಗಳಿಲ್ಲದೆ ಕಾರ್ಯ ನಿಮಿತ್ತ ಸಂಚರಿಸುವಾಗ ಕೇವಲ ಮೂರ್ನಾಲ್ಕು ಬಾರಿ ಹುಲಿಯನ್ನ ನೋಡಿದ್ದ ನನಗೆ, ಸಂಜೆ ಹೊತ್ತಲ್ಲಿ ಕಂಡ ಹುಲಿರಾಯ ಶಾಶ್ವತವಾಗಿ ಸ್ಮೃತಿಯೊಳಗೆ ದಾಖಲಾಗಿ ನನ್ನ ಕಾಡಿನ ಅನುಭವಕ್ಕೆ ಮೆರಗು ತಂದಿದ್ದು ಮಾತ್ರ ಸೋಜಿಗ.
ಈ ಎಲ್ಲಾ ಶ್ರೀಮಂತ ಅನುಭವವನ್ನು ಮೆಲಕು ಹಾಕುತ್ತಾ ಹೆಬ್ಬಾವಿನಂತೆ ಮಲಗಿದ ಕಾಡಿನ ದಾರಿಯಲ್ಲಿ ಇಬ್ಬರು ನಡೆಯತೊಡಗಿದೆವು.ಅಕ್ಕ-ಪಕ್ಕ ಮಿಣುಕು ಹುಳಗಳು ಬೆಳಕು ಚೆಲ್ಲುತ್ತಾ ಮಿಂಚಿ ಮರೆಯಾಗತೊಡಗಿದರೆ, ನೆಟ್ವರ್ಕ್ ಸಿಕ್ಕು ಜಂಗಮವಾಣಿಯನ್ನು ತೆರೆದು ನೋಡಿದರೆ ಹೊರಜಗತ್ತಿನಿಂದ ಮನುಷ್ಯ ಸಾಯಿಸಿದ ಹುಲಿಯ ಹುಲಿಯುಗುರಿನ ಸದ್ದು ಜೋರಾಗಿ ಕೇಳಿ ಬಂದು ದಿಗ್ಬ್ರಮೆಯಾಯಿತು.
- ಗಿರಿವಾಲ್ಮೀಕಿ