ಕೌಶಿಕ ಋಷಿಯು ಭೂಲೋಕಕ್ಕೆ ಬಂದು ಹರಿಶ್ಚಂದ್ರ ಮತ್ತು ಅವನ ಕುಟುಂಬಕ್ಕೆ ಹಿಂಸೆ ಕೊಡುತ್ತಾನೆ., ಹರಿಶ್ಚಂದ್ರನು ತಾನು ನಂಬಿದ ಮೌಲ್ಯದಿಂದ ಹಿಂದೆ ಸರಿಯದೇ ಗಟ್ಟಿಯಾಗಿ ನಿಲ್ಲುತ್ತಾನೆ. ಲೇಖಕರಾದ ರವೀಂದ್ರ ಕುಮಾರ್ ಎಲ್ವಿ ಅವರು ಬರೆಯುತ್ತಿರುವ ‘ಹರಿಶ್ಚಂದ್ರ ಕಾವ್ಯ ಸಂಗ್ರಹದ’ ಕೃತಿಯ ಕುರಿತು ಬರೆಯುತ್ತಿರುವ ಅಂಕಣವನ್ನು ತಪ್ಪದೆ ಓದಿ…
ವಸುಧಾಧಿಪತಿ ಹರಿಶ್ಚಂದ್ರ ಘನಸತ್ಯನೆಂ
ದೊಸೆದು ವಾಸಿಷ್ಟನಿಂದ್ರಂಗೆನಲು ಕೌಶಿಕಂ
ಹುಸಿಮಾಳ್ಪೆನೆಂದು ಭಾಷೆಯನಿತ್ತು ಧರೆಗೆ ಬಂ
ದವನಿಪನ ಸತಿಪುತ್ರರ l
ಅಸುವಂತ್ಯವೆನೆ ನಿಗ್ರಹಂ ಮಾಡೆ ತಪ್ಪದಿರೆ
ಶಶಿಮೌಳಿ ಶ್ರೀ ವಿಶ್ವನಾಥ ಭೂಪಂಗೆ ಕರು
ಣಿಸಿ ಸಕಲ ಸಾಮ್ರಾಜ್ಯವಿತ್ತಾತನಂ ಮೆರೆದ
ಕೃತಿ ಪುಣ್ಯದಾಕೃತಿಯಿದು. ll
ವಸುಧೆ – ಭೂಮಿ, ಅಧಿಪತಿ = ಒಡೆಯ.. ವಸುಧಾಧಿಪತಿ – ಭೂಮಿಯೊಡೆಯ — ರಾಜ
ರಾಜಾ ಹರಿಶ್ಚಂದ್ರನು
ಘನ ಸತ್ಯನ್ –
ಘನ ಎಂದರೆ ಶ್ರೇಷ್ಠವಾದ, ಅಧಿಕವಾದ, ಅತಿಶಯವಾದ,
ಸತ್ಯನ್ = ಸತ್ಯವಂತನು…
ಎಂದು –
ಒಸೆ= ಮೆಚ್ಚು.. ಒಸೆದು – ಮೆಚ್ಚಿ
ವಾಸಿಷ್ಟನ್ +ಇಂದ್ರ0ಗ್ + ಎನಲು… ವಸಿಷ್ಟ ಮುನಿಯು ಇಂದ್ರನಿಗೆ ಹೇಳಲು ;
ಹುಸಿ ಮಾಳ್ಪೆನೆಂದು.. ವಸಿಷ್ಟನ ಮಾತನ್ನು ಸುಳ್ಳು ಮಾಡುವೆನೆಂದು,
ಕೌಶಿಕಂ ಭಾಷೆಯನಿತ್ತು
ಕೌಶಿಕನು ಭಾಷೆಯನ್ನು ಅಂದರೆ ಪ್ರತಿಜ್ಞೆಯನ್ನು ಮಾಡಿ ಮಾತು ಕೊಟ್ಟು,
ಧರೆಗೆ ಬಂದನ್ – ಭೂಮಿಗೆ ಬಂದನು..
ಬಂದು ಏನು ಮಾಡಿದ?
ಬಂದ್ + ಅವನಿಪನ
ಬಂದು ಅವನಿಪ – ಭೂಪತಿ = ರಾಜನ
ಸತಿ ಪುತ್ರರ = ಹೆಂಡತಿ ಮಕ್ಕಳ;

‘ಅಸುವಂತ್ಯವೆನೆ ನಿಗ್ರಹಂ ಮಾಡೆ ತಪ್ಪದಿರೆ’
ಅಸು – ಪ್ರಾಣ, ಜೀವ, ಅಂತ್ಯ – ಕೊನೆ, ಮುಗಿಸು, ಎನೆ – ಎನ್ನುವಂತೆ, ನಿಗ್ರಹಂ = ಶಿಕ್ಷಿಸು, ಪೀಡಿಸು, ಕಾಡು…ತಪ್ಪದಿರೆ – ತಪ್ಪದೇ
ಕೌಶಿಕನು ಭೂಮಿಗೆ ಬಂದು ಭೂಪತಿ ಹರಿಶ್ಚಂದ್ರನ ಹೆಂಡತಿ, ಮಕ್ಕಳ ಪ್ರಾಣವೇ ಕೊನೆಗೊಂಡಂತೆ, ಜೀವನವೇ ಮುಗಿದು ಹೋಗುವಂತೆ ಅವರನ್ನು ಕಾಡಿಸಿ, ಪೀಡಿಸಿ, ಶಿಕ್ಷಿಸುವುದನ್ನು ನೋಡಿ.
ಶಶಿಮೌಳಿ, ಚಂದ್ರ ಮೌಳಿ, ಚಂದ್ರಶೇಖರಾನಾದ ಶ್ರೀ ಕಾಶೀ ವಿಶ್ವನಾಥನು ಭೂಪ0ಗೆ, ರಾಜನಿಗೆ, ಕರುಣಿಸಿ, ಕರುಣೆಯಿಂದ ಸಕಲ ಸಾಮ್ರಾಜ್ಯವನ್, ಎಲ್ಲ ಸಾಮ್ರಾಜ್ಯ ಪದವಿಯನ್ನು
‘ಇತ್ತಾತಾತನಂ ಮೆರೆದ’ ಇತ್ತು ಆತನಂ ಮೆರೆದ ಕೊಟ್ಟು ಆತನನ್ನು ಖ್ಯಾತಿಗೊಳಿಸಿದ ಕೃತಿ = ಕಾವ್ಯ, ಪುಣ್ಯದಾಕೃತಿಯಿದು. ಓದಿದವರಿಗೆ ಕೇಳಿದವರಿಗೆ ಪುಣ್ಯವನ್ನು ಕೊಡಿಸಿ ಕೊಡುವಾ ಕಾವ್ಯವಿದು.
ಈ ಕಥೆ ನಮಗೆಲ್ಲ ಗೊತ್ತಿದೆ. ಈ ಭೂಮಿಯಲ್ಲಿ ರಾಜಾ ಹರಿಶ್ಚಂದ್ರನು ಬಹಳ ಸತ್ಯಸಂಧನೆಂದೂ, ತನ್ನ ನಡೆ ನುಡಿಗಳಿಂದ ಅತಿಶಯವಾದ ಸತ್ಯವಂತನೆಂದೂ ವಶಿಷ್ಟ ಋಷಿಯು ದೇವೇಂದ್ರನ ಮುಂದೆ ಹಾಡಿ ಹೊಗಳಿದಾಗ, ಕೌಶಿಕ ಋಷಿಯು ವಸಿಷ್ಟರ ಮಾತನ್ನು ಸುಳ್ಳು ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿ ಭೂಲೋಕಕ್ಕೆ ಬಂದು ಹರಿಶ್ಚಂದ್ರನಿಗೆ ಮತ್ತು ಅವನ ಹೆಂಡತಿ ಮಗನಿಗೆ ನಾನಾ ರೀತಿಯ ಹಿಂಸೆ, ಕಾಡಿಸುವಿಕೆ, ಪೀಡಿಸುವುದನ್ನು ಮಾಡಿ ಹೆಂಡತಿ ಮಗನ ಪ್ರಾಣಕ್ಕೇ ಕುತ್ತನ್ನು ತಂದರೂ, ಹರಿಶ್ಚಂದ್ರನು ತಾನು ನಂಬಿದ ಮೌಲ್ಯದಿಂದ ಹಿಂದೆ ಸರಿಯದೇ ಗಟ್ಟಿಯಾಗಿ ನಿಂತಿದ್ದರ ಪರಿಣಾಮವಾಗಿ ಕಾಶಿಯ ಅಧಿದೇವತೆ ಶ್ರೀ ವಿಶ್ವನಾಥನು ಹರಿಶ್ಚಂದ್ರನ ಮೇಲೆ ತನ್ನ ಕರುಣಾ ಕಟಾಕ್ಷವನ್ನು ಬೀರಿ ಅವನಿಗೆ ಅವನು ಕಳೆದು ಕೊಂಡಿದ್ದ ಸಕಲವನ್ನೂ, ಪತ್ನೀ, ಸುತನನ್ನೂ ಹಿಂದಿರುಗಿಸಿ ಕೊಟ್ಟು ಅವನ ಖ್ಯಾತಿಯನ್ನು ಭೂಲೋಕದಲ್ಲಿ ಶಾಶ್ವತವಾಗಿಸಿದ ಕಥೆಯಿದು. ತಾನು ನಂಬಿ, ಆಚರಿಸಿಕೊಂಡು ಬಂದ ಮೌಲ್ಯಕ್ಕೆ ಬದ್ಧನಾಗಿ ಖ್ಯಾತನಾದವನ ಪುಣ್ಯದಾಯಕ ಕೃತಿ, ಈ ಕಾವ್ಯ.
ಮುಂದುವರೆಯುವುದು.
ಹಿಂದಿನ ಸಂಚಿಕೆ:
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೧)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೨)
- ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೩)
- ರವೀಂದ್ರ ಕುಮಾರ್ ಎಲ್ವಿ – ಮೈಸೂರು.
