ಮಹಾವಿಷ್ಣುವಿನ ರಾಣಿಯಾದ ಲಕ್ಷ್ಮಿಯು ಧರಿಸುವ ಓಲೆಯ ಭಾಗ್ಯವನ್ನು ಕರುಣಿಸುವವಳು ಈ ಪಾರ್ವತಿ ದೇವಿಯ ಪ್ರತಿರೂಪವಾದ ಪಂಪಾಂಬಿಕೆ. ರವೀಂದ್ರ ಕುಮಾರ್ ಎಲ್ವಿ ಅವರ ‘ಹರಿಶ್ಚಂದ್ರ ಕಾವ್ಯ ಸಂಗ್ರಹ’ ದ ಮುಂದಿನ ಭಾಗವನ್ನು ತಪ್ಪದೆ ಮುಂದೆ ಓದಿ…
ವಾಣಿಯರಿವಿನ ಬೆಳಗು ಮುಕುತಿವನಿತೆಯ ಮುಡಿಯ
ಮಾಣಿಕಂ ಸರ್ವಮಂತ್ರಾದಿ ಪಂಚಾಕ್ಷರಿಯ
ಪ್ರಾಣ ಮಂಗಳದ ಮನೆ ದೇವಲೋಕದ ಜನ್ಮ
ಭೂಮಿ ತಾವರೆಗಣ್ಣನ
ರಾಣಿಯೆಸೆವೋಲೆವಾಗ್ಯ0 ಸರ್ವ ಸಿದ್ಧಿಗಳ
ತಾಣ0 ವಿರೂಪಾಕ್ಷನುನ್ನತೈಶರ್ಯದ
ಕ್ಷೋಣಿ ಪಂಪಾಂಬಿಕೆ ಮದೀಯಮತಿಗೀಗೆ ಪ್ರ
ಸನ್ನತೆಯನುತ್ಸವದೊಳು. ll
ಪದ್ಯ ೨
ಮೊದಲನೆಯ ಪದ್ಯದಲ್ಲಿ ವಿರೂಪಾಕ್ಷನ ಕೃಪೆಯ ಹಲವು ಮುಖದ ವರ್ಣನೆ ಮಾಡಿ ಪಂಪಾಪತಿ ವಿರೂಪಾಕ್ಷನಿಂದ ಇಷ್ಟ ಸಿದ್ಧಿಯ ಅನುಗ್ರಹವನ್ನು ಕೋರಿದ ಕವಿ ರಾಘವಾಂಕನು ಎರಡನೆಯ ಪದ್ಯವನ್ನು ತಾಯಿ ಪಂಪಾಂಬಿಕೆಯ ಅನುಗ್ರಹಕ್ಕೆ ಮೀಸಲಿಟ್ಟಿದ್ದಾನೆ.
‘ವಾಣಿಯರಿವಿನ ಬೆಳಗು’–
ವಾಣಿಯ್ +ಅರಿವು + ಇನ
ಬೆಳಗು – ಬೆಳಕು – ಪ್ರಕಾಶ.
ವಾಣಿ, ಸರಸ್ವತಿಯ ಅರಿವು ತಿಳುವಳಿಕೆ, ಜ್ಞಾನ… ವಾಣಿಯರಿವಿನ ಬೆಳಗು.. ‘ಸರಸ್ವತಿಯ ಜ್ಞಾನದ ಬೆಳಕು’ – ಎಂದು ಈ ಪದ್ಯವನ್ನು ಆರಂಭಿಸುತ್ತಿದ್ದಾನೆ. ಪಂಪಾಪತಿಯ ಶಕ್ತಿ ಕೇಂದ್ರವಾದ ಪಂಪಾಂಬಿಕೆಯನ್ನು ಸರಸ್ವತಿಯ ಜ್ಞಾನದ ಪ್ರಕಾಶ ರೂಪಿಣಿ ಎಂದು ವರ್ಣಿಸುತ್ತಿದ್ದಾನೆ.
‘ಮುಕುತಿ ವನಿತೆಯ ಮುಡಿಯ ಮಾಣಿಕಂ’
ಮುಕ್ತಿವನಿತೆ… ಸಾಕ್ಷಾತ್ ಪರಶಿವನ ಅರ್ದ್ಧಾಂಗಿ ಪಾರ್ವತಿಯು ಮುಕ್ತಿದಾಯಕಳು,,,,ಅವಳೇ ಮುಕ್ತಿವನಿತೆ. ಅವಳಿಲ್ಲಿ ಪಂಪಾಂಬಿಕೆಯಾಗಿ ಆ ಮುಕ್ತಿವನಿತೆ ಪಾರ್ವತಿಯ ಮುಡಿಯ, ತಲೆಯ ಆಭರಣವಾದ ಮಾಣಿಕ್ಯದಂತಿದ್ದಾಳೆ.
‘ಸರ್ವ ಮಂತ್ರಾದಿ ಪಂಚಾಕ್ಷರಿಯ ಪ್ರಾಣ.’
ಪಂಚಾಕ್ಷರಿ – ನಮಃ ಶಿವಾಯ ಎಂಬ ಮಂತ್ರವು ಸರ್ವ ಮಂತ್ರಗಳ ಆದಿ ಅಥವಾ ಮೂಲ. ದೇವಿ ಪಂಪಾಂಬಿಕೆಯನ್ನು ಆ ಮೂಲ ಮಂತ್ರದ ಪ್ರಾಣ ಶಕ್ತಿ ಎಂದು ಕವಿಯು ವರ್ಣಿಸಿದ್ದಾನೆ.
ಪಂಪಾಂಬಿಕೆಯು ಇರುವ ತಾಣವು ಮಂಗಳದ ಮನೆ. ಆಕೆಯಿರುವೆಡೆಯಲ್ಲಿ ಎಲ್ಲವೂ ಮಂಗಳ ಎಂಬ ಭಾವ. ಅವಳಿರುವ ಸ್ಥಾನವೇ ದೇವಲೋಕದ ಜನ್ಮ ಭೂಮಿ.
‘ತಾವರೆಗಣ್ಣನ ರಾಣಿಯೆಸೆವೋಲ್ ಓಲೆ ವಾಗ್ಯ0’
ತಾವರೆಗಣ್ಣ ಎಂದರೆ ಕಮಲಾಕ್ಷ.. ಅರ್ಥಾತ್ ಮಹಾವಿಷ್ಣುವಿನ ರಾಣಿಯಾದ ಲಕ್ಷ್ಮಿಯು ಧರಿಸುವ ಓಲೆಯ ಭಾಗ್ಯವನ್ನು ಕರುಣಿಸುವವಳೂ ಈ ಪಾರ್ವತೀ ದೇವಿಯ ಪ್ರತಿರೂಪವಾದ ಪಂಪಾಂಬಿಕೆ ಯೇ.!
‘ಸರ್ವ ಸಿದ್ಧಿಗಳ ತಾಣ.’ –ಈಕೆ ಇರುವಲ್ಲಿ ಎಲ್ಲ ಸಿದ್ಧಿಗಳೂ ಇರುತ್ತವೆ.
ವಿರೂಪಾಕ್ಷನ ಉನ್ನತ ಐಶ್ವರ್ಯದ ಕ್ಷೋಣಿ… ನೆಲ, ತಾಣ.. ಇಂತಹ ನೆಲದಲ್ಲಿ ನೆಲೆಯಾಗಿ ನಿಂತಿರುವ ಪಂಪಾಂಬಿಕೆಯು ಸಂಪ್ರೀತಳಾಗಿ ನನ್ನ ಮತಿ, ಬುದ್ಧಿಗೆ, ಈಗೆ… ಈಗ ಪ್ರಸನ್ನತೆಯನ್ನು ಸಡಗರದಿಂದ ಕರುಣಿಸಲಿ ಎಂಬುದು ಕವಿಯ ಪ್ರಾರ್ಥನೆ.
ಮುಂದುವರೆಯುವುದು…
- ರವೀಂದ್ರ ಕುಮಾರ್ ಎಲ್ವಿ – ಮೈಸೂರು.
