‘ದುಡ್ ಮಾಡಿ’ ಕವನ

ಸತ್ತೋರ ನೆನಪು ನಾಕೇ ದಿವ್ಸ, ದುಡ್ಡು ಮರೆಸುತ್ತೆ ಎಲ್ಲರ ಮನ್ಸ…ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ದುಡ್ ಮಾಡಿ ದುಡ್ ಮಾಡಿ
ಸರ್ ಸರ್ನೆ ಬಿರ್ ಬಿರ್ನೆ

ಸಾಯೋಕು ಮುಂಚೆ ದುಡ್ ಮಾಡಿ
ಯಾರಾದ್ರೂ ಹಾಳಾಗ್ಲಿ
ಯಾರಾದ್ರೂ ಸತ್ತೋಗ್ಲಿ
ಕಂಡೋರ ಯೋಚ್ನೆ ಬುಟ್ಬುಡಿ

ಮನ್ಸತ್ವ ಮರೆತ್ಬಿಟ್ಟು
ನಿಯತ್ತು ಬದಿಗಿಟ್ಟು
ಬದುಕೋಕೆ ಗಂಟು ಮಾಡ್ಬುಡಿ

ಮೈ ಬಗ್ಸಿ ದುಡಿಯೋನು
ನ್ಯಾಯ ನೀತಿ ಅಂದೋನು
ಸೋತೋದ ಬದುಕಲು ಹೋರಾಡಿ

ಅವನ್ಯಾರೋ ಅಡ್ದಾರಿ ಹಿಡಿದ್ಬುಟ್ಟ
ದುಡ್ ಮಾಡಿ ದೊಡ್ಡೋನು ಆಗ್ಬುಟ್ಟ
ಬೆಲೆ ಯಾರು ಕೊಟ್ಟಾರು ಗುಣ ನೋಡಿ

ಜೀವ್ನಾನೇ ಯಾಪಾರ
ದುಡ್ಡಿದ್ರೆ ಸಂಸಾರ
ಹೆಂಗಾರ ಮಾಡಿ ದುಡ್ ಮಾಡಿ

ದುಡ್ಡಿದ್ರೆ ದವಲತ್ತು
ಬಡತನಕಿಲ್ಲ ಕಿಮ್ಮತ್ತು
ಹಸಿದಾಗ ಪ್ರೀತಿ ಹುಟ್ಟಲ್ಲ ನೋಡಿ

ಹೆಂಡತಿ ಮಕ್ಳೆಲ್ರು
ಮರ್ವಾದೆ ಕೊಡವಲ್ರು
ಕಾಸಿಲ್ದೆ ಮನಿಯಾಗೆ ಕಾಲ್ಕಸ ಆಗ್ಬೇಡಿ

ಕಿಸೆ ಖಾಲಿ ಆದಾಗ
ಯಾರಿಲ್ಲ ಜೊತೆಯಾಗ
ದುಡ್ಡಿದ್ರೆ ಮಂದಿ ಇರ್ತಾರೆ ಜೋಡಿ

ದಡ್ಡಾನೂ ಬುದ್ವಂತ ದುಡ್ಡಿದ್ರೆ
ಕಡುಪಾಪಿನೂ ಗುಣವಂತ ದುಡ್ಡಿದ್ರೆ
ಕಲಿಗಾಲ ಸ್ವಾಮಿ ಸುಮ್ಕೆ ದುಡ್ ಮಾಡಿ

ಎಲ್ಲಾರೂ ನಮ್ಮೋರು ಪ್ರೀತಿ ತೋರ್ಸೋರು
ದುಡ್ಡನ್ನು ಮಾತ್ರ ಪ್ರೀತಿ ಮಾಡೋರು
ಮಾರಾಟಕ್ಕಿಲ್ಲ ಅವ್ವನ ಪ್ರೀತಿ ಮರಿಬೇಡಿ

ಮನ್ಸ ಬುದ್ಧಿಯ ಕೊಟ್ಟ ದುಡ್ಡಿನ ಕೈಗೆ
ಪರಪಂಚ ಈಗ ಉಳ್ಳೋರ ಕಾಲ್ಕೆಳಗೆ
ನೆಮ್ದೀಯ ಕಳ್ಕೊಂಡ ದುಡ್ಡಿಗೆ ಪರದಾಡಿ

ಹುಟ್ಟಿದ ಮನ್ಸ ಸಾಯಲೇಬೇಕು
ಸಾಯೋಗಂಟ ದುಡಿಯಲೇಬೇಕು
ಹೊತ್ತಾದ ಮ್ಯಾಕೆ ಹತ್ತಲೇಬೇಕು ಗಾಡಿ

ಸತ್ತೋರ ನೆನಪು ನಾಕೇ ದಿವ್ಸ
ದುಡ್ಡು ಮರೆಸುತ್ತೆ ಎಲ್ಲರ ಮನ್ಸ
ನಾಕ್ ದಿವ್ಸನಾದ್ರೂ ಪಟವಾಗಿ ನೇತಾಡಿ

ಹಿಂಗೇನೆ ಪರಪಂಚ
ಕಾಸಿದ್ದೋನೇ ಸರಪಂಚ
ಇರೋಗಂಟ ಹಿಂಗೆ ಬಡ್ದಾಡಿ
ದುಡ್ ಮಾಡಿ….


  • ರವಿನಾಗ್ ತಾಳ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading