‘ಬಿದಿರೆ ನೀನಾರಿಗಲ್ಲದವಳು’ ಕೃತಿ ಪರಿಚಯ

ಭಾರತೀಯ ವಿಜ್ಞಾನ ಸಂಸ್ಥೆಯ ಜಂಟಿ ರಿಜಿಸ್ಟ್ರರ್ ವೀರಣ್ಣ ಕಮ್ಮಾರ ಅವರು ಮಾಜಿ ಶಾಸಕರಾದ ಮೋಟಮ್ಮ ಅವರ ಕುರಿತು ಆತ್ಮಕಥನವನ್ನು ಹೊರ ತಂದಿದ್ದಾರೆ. ಕೃತಿಯ ಹೆಸರು ‘ಬಿದಿರು ನೀನ್ಯಾರಿಗಲ್ಲದವಳು’. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಬಿದಿರು ನೀನ್ಯಾರಿಗಲ್ಲದವಳು (ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ಆತ್ಮಕಥನ)
ನಿರೂಪಣೆ : ವೀರಣ್ಣ ಕಮ್ಮಾರ
ಪುಟ : 400
ಬೆಲೆ : ರೂ. 450
ಮುಖಪುಟ ವಿನ್ಯಾಸ: ವೀರನಾರಾಯಣ
ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು

ಕನ್ನಡ ಅಧ್ಯಯನ ಕೇಂದ್ರ ಜ್ಞಾನ ಭಾರತಿ ಬೆಂಗಳೂರು ವಿವಿ ಕೊಟ್ಟ ಕೊಡುಗೆಗಳು ಅನಂತ. ಅವರಲ್ಲಿ ಲೇಖಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಇವರೆಲ್ಲ ಇದ್ದಾರೆ. ಆದರೆ, ಅವರಲ್ಲಿ ರಾಜಕೀಯಕ್ಕೆ ಇಳಿದು ಅದರಲ್ಲಿ ಯಶಸ್ವಿಯೂ ಆದವರು ವಿರಳ. ಅದರಲ್ಲೂ ಹಿಂದುಳಿದ ದಲಿತ ವರ್ಗದ ಮಹಿಳೆಯರು ಇಲ್ಲವೇ ಇಲ್ಲ ಎನ್ನಬಹುದು. ಅಂತಹ ವಿರಳಾತಿವಿರಳ ಮಹಿಳೆಯರಲ್ಲಿ ಶ್ರೀಮತಿ ಮೋಟಮ್ಮನವರದು ಅದ್ವಿತೀಯ ಸಾಧನೆ.

ಇವರು ಇಟ್ಟ ಹೆಜ್ಜೆಗಳು, ಎದುರಿಸಿದ ಸವಾಲುಗಳು ಹಲವು. ಅವುಗಳಲ್ಲಿ ಜೀತಗಾರ ತಂದೆಯ ಮಗಳಾದ ಈಕೆ, ಕಿರಿಯ ವಯಸ್ಸಿನಲ್ಲೇ ತಂದೆತಾಯಿಗಳಿಂದ ದೂರ ಇದ್ದು, ವಿದ್ಯಾರ್ಥಿ ನಿಲಯದಲ್ಲಿ ವಾಸ ಮಾಡುತ್ತಾ , ತಮ್ಮ ಶಿಕ್ಷಣವನ್ನು ಮುಂದುವರೆಸಬೇಕಾಗಿ ಬಂದುದು ಒಂದು. ಅವರ ವಿದ್ಯಾರ್ಥಿನಿಲಯದಲ್ಲಿ ವಾಸ ಮಾಡುತ್ತಲೇ ಉನ್ನತ ಶಿಕ್ಷಣ ಪಡೆದು, ನಮ್ಮೆಲ್ಲರನ್ನೂ ರೂಪಿಸಿದ ಮಾತೃ ಶಿಕ್ಷಣ ಸಂಸ್ಥೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇರಿ, ಕನ್ನಡ ಎಂ.ಎ. ಯನ್ನು ಯಶಸ್ವಿಯಾಗಿ ಪೂರೈಸಿದ್ದು ಒಂದು ಅಪೂರ್ವ ಯಶೋಗಾಥೆಯೇ ಸರಿ. ಆಗ ಅವರಿಗೆ ಮೇಷ್ಟ್ರು ಆಗಿದ್ದ ಜಿ.ಎಸ್.ಎಸ್ ಅವರ ಪಾಠದ ಕುರಿತು ಬರೆಯುತ್ತ” ಅವರು ಬರಿ ಸಾಹಿತ್ಯ ಪಾಠ ಮಾತ್ರ ಮಾಡಲಿಲ್ಲ. ಜೀವನ ಪಾಠ ಕೂಡ ಮಾಡಿದರು” ಎಂದು ಬರೆದಿರುವುದು ಅಕ್ಷರಶಃ ಸತ್ಯ. ಯಾಕೆಂದರೆ ಇದು ಅವರಿಂದ ಕಲಿತ ನಮ್ಮ ಎಲ್ಲರ ಅನುಭವಕ್ಕೂ ಬಂದಿದೆ.

ಅವರ ನಮ್ಮ ಮೇಷ್ಟ್ರು ಡಾ.ಕಾಳೇಗೌಡ ನಾಗವಾರ ಅವರು, ನಂತರ ಅವರಿಗೆ ಬಿಡದಿಯ ಒಂದು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಕೊಡಿಸಿದರು. ನಂತರ ಅವರು ಈ ಮೊದಲೇ ಪರೀಕ್ಷೆ ಬರೆದಿದ್ದು ಅವರ ನೆರವಿಗೆ ಬಂದು, ಅಲ್ಲಿ ಸಬ್ ರಿಜಿಸ್ಟ್ರಾರ್ ಕೆಲಸ ದೊರೆಯಿತು. ಅದರಲ್ಲಿ ಅವರು ತೊಡಗಿರುವಾಗ, ಅಲ್ಲಿನ ಯಶಸ್ವಿ ರಾಜಕಾರಣಿ ಡಿ.ಬಿ.ಚಂದ್ರೇಗೌಡರು ಆ ಊರಿನ ದಲಿತ ವಿದ್ಯಾವಂತ ಮಹಿಳೆಯಾದ ಇವರನ್ನು , ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಿ, ಒತ್ತಾಯ ಮಾಡಿ, ಅದರಲ್ಲಿ ಪ್ರವೇಶ ಮಾಡಿಸುವಲ್ಲಿ ಯಶಸ್ವಿಯಾದರು.- ತನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದರೂ ಕೇಳದೆ . ಯಾವುದೇ ಬಗೆಯ ರಾಜಕೀಯ ಹಿನ್ನೆಲೆ ಇಲ್ಲದ ಇವರು , ಅದಕ್ಕೆ ಹಿಂಜರಿಯುತ್ತಾರೆ. ಇವರು ಅದಕ್ಕಾಗಿ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ.ಆಗ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸು ಅವರು ಐವತ್ತು ಸಾವಿರ ಕೊಟ್ಟರೆ, ದೇಣಿಗೆ ಸಂಗ್ರಹ ಇಪ್ಪತ್ತೈದು ಸಾವಿರ, ಇಷ್ಟರಲ್ಲೇ ಅವರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು ಎಂದರೆ ಈಗ ಅದು ಒಂದು ಪವಾಡವೇ. ಸರಿ.”ನಾನು ಹಣವನ್ನು ಮುಟ್ಟಲಿಲ್ಲ ” ಎನ್ನುವ ಅವರ ಮಾತನ್ನು ನಾವು ನಂಬಬೇಕು.ಇದಕ್ಕೆ ಸಾಕ್ಷಿ: ಇವರ ಮಗಳು ವಿದೇಶ ವಿವಿದಲ್ಲಿ ಉನ್ನತ ಶಿಕ್ಷಣ ಮಾಡುವೆನೆಂದು ಹಟ ಹಿಡಿದಾಗ, ಅದಕ್ಕೆ ಇವರ ಬ್ಯಾಂಕ್ ಖಾತೆಯಲ್ಲಿ, ಇಪ್ಪತ್ತೈದು ಲಕ್ಷ ಇರಬೇಕಾಗಿತ್ತು. ಅದು ಇಲ್ಲದ ಪ್ರಯುಕ್ತ ,ಇನ್ನೊಬ್ಬರು ಅಷ್ಟು ಹಣವನ್ನು ಇವರ ಖಾತೆಗೆ ತಾತ್ಕಾಲಿಕವಾಗಿ ತುಂಬಿಸಬೇಕಾಯಿತು. ನಂತರ ಇವರು ಅದನ್ನು ಚೆಕ್ ಮೂಲಕ ಹಿಂದುರುಗಿಸಿದರು.

ಅವರು ವಿದ್ಯಾರ್ಥಿನಿಲಯದಲ್ಲಿ ದೀರ್ಘ ಕಾಲ ತಮ್ಮ ವಿದ್ಯಾಭ್ಯಾಸದ ಸಲುವಾಗಿ ಇರಬೇಕಾಗಿ ಬಂದುದರಿಂದ, ಅವರು ಅದರಿಂದ ಕಲಿತ ಪಾಠಗಳು ಮುಂದಿನ ಅವರ ಜೀವನದ ನಿರ್ದೇಶಕ ಸೂತ್ರಗಳಾಗಿ ಪರಿಣಮಿಸಿದವು.ಅವು: ಸಹಬಾಳ್ವೆ, ಸಂಯಮ, ಶಿಸ್ತು , ಸಮಯಪಾಲನೆ ಮತ್ತು ಜಾತ್ಯತೀತ ನಿಲುವುಗಳು,ಅವರ ಕ್ರೀಡಾಸಕ್ತಿ ಅವರಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿತು. ಮುಂದೆ ಅವರು ರಾಜಕೀಯ ಪ್ರವೇಶ ಮಾಡಿ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ, ಅವುಗಳಲ್ಲಿನ ಸೋಲು ಗೆಲುವುಗಳು, ಇದನ್ನು ರೂಢಿಸಿಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡಿತು .

ಸ್ವತಃ ಮಹಿಳೆಯಾಗಿ ಗ್ರಾಮೀಣ ಹಿಂದುಳಿದ ಜಾತಿಯಿಂದ ಬಂದ ಅವರು, ಮಹಿಳಾ ಸಂಘಟನೆಗಳ ಪ್ರಾಮುಖ್ಯತೆಯನ್ನು ಅರಿತು, ಅವರ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡಿದರು.ಅದರಲ್ಲೂ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವೆಯಾಗಿ, ಮಹಿಳಾ ಸ್ವಸಹಾಯ ಗುಂಪುಗಳ ರಚನೆಗೆ ಒತ್ತು ನೀಡಿದರು. ಇದರ ಪರಿಣಾಮವಾಗಿ, ಒಂದು ಲಕ್ಷದ ಎಪ್ಪತ್ತೈದು ಸಾವಿರ ಮಹಿಳಾ ಗುಂಪುಗಳು ರೂಪುಗೊಂಡವು. ಇದೊಂದು ರಾಷ್ಟ್ರೀಯ ದಾಖಲೆಯೇ ಸರಿ.‌ ಅಂದಿನ ಪ್ರಧಾನಿ ಇಂದಿರಾ, ನಂತರದ ಸೋನಿಯಾ ಗಾಂಧಿ , ರಾಜೀವ್ ಗಾಂಧಿ,ಮುಖ್ಯಮಂತ್ರಿ , ದೇವರಾಜ್ ಅರಸು, ಎಸ್ ಎಂ ಕೃಷ್ಣ ಅವರ ಮೇಲೆ ಪ್ರಭಾವ ಬೀರಿತು. ಇದರಿಂದ ಅವರಿಂದ ತನಗೆ ಬೇಕಾದ ಹುದ್ದೆಯನ್ನು ಪಡೆಯಲು, ಬೇಡದೆ ಇರುವುದನ್ನು ನಿರಾಕರಿಸಲು ಸಾಧ್ಯವಾಯಿತು.

ಇವರು ಚಿಕ್ಕ ವಯಸ್ಸಿನಲ್ಲೇ ಕಲಿತ ಹಾಡುವ ಪ್ರವೃತ್ತಿ,ಜನಮನರಂಜನೆಯ ಸಾಧನವಾದಂತೆ, ಜನ ಜಾಗೃತಿಯ ಸಾಧನವೂ ಆಯಿತು. ಸಚಿವೆ ಆಗಿದ್ದಾಗಲೂ ಜನ ಕೇಳಿದಾಗಲೆಲ್ಲಾ, ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಹಾಡುತ್ತಿದ್ದರು.

ವೀರಣ್ಣ ಕಮ್ಮಾರ – ಭಾರತೀಯ ವಿಜ್ಞಾನ ಸಂಸ್ಥೆಯ ಜಂಟಿ ರಿಜಿಸ್ಟ್ರಾರ್

ಆದರೆ, ಅವರು ಮಾಡಿದ ಈ ಜನಪರ ,ಮಹಿಳಾ ಪರ ಕಾರ್ಯಗಳು, ಮತಗಳಾಗಿ ಪರಿವರ್ತನೆ ಹೊಂದಲಿಲ್ಲ. ಕೆಲವು ಸಲ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಆದರೆ ಅದರಿಂದ ಅವರು ಹತಾಶರಾಗದೆ , ಮತ್ತಷ್ಟು ಹುರುಪಿನಿಂದ ಮಹಿಳಾ ಸಂಘಟನೆಯಲ್ಲಿ ,ಸಕ್ರಿಯವಾಗಿ ತೊಡಗಿಸಿಕೊಂಡರು.ಎನ್ನುವುದು ಅವರ ಆರೋಗ್ಯಕರ ಚಿಂತನೆಗೆ ನಿದರ್ಶನ.
ದಲಿತ ಹಿನ್ನೆಲೆಯಿಂದ ಬಂದರೂ, ಅವರ ಜಾತಿಯವರು ಇವರ ಬಳಿಗೆ ದೂರು ತಂದಾಗ, “ಮೊದಲು ನಿಮ್ಮ ಕೆಲಸದ ಮೂಲಕ ನಿಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ” ಎಂದು ಅವರಿಗೆ ಸಲಹೆ ನೀಡುತ್ತಿದ್ದುದು, ಅವರ ಜಾತ್ಯತೀತ ನಿಲುವಿಗೆ ಕನ್ನಡಿ ಹಿಡಿಯುತ್ತದೆ.

ಸಮಯ ಪ್ರಜ್ಞೆಗೆ ಮಹತ್ವ ನೀಡುತ್ತಿದ್ದ ಇವರು, ಯಾವುದೇ ಕಾರ್ಯಕ್ರಮಕ್ಕೂ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಅಲ್ಲದೆ ಅದನ್ನು ಆಯೋಜಿಸುವವರಿಗೆ, “ನೀವು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ, ನಂತರ ಬಂದವರು ಆಮೇಲೆ ಸೇರಿಕೊಳ್ಳಲಿ” ಎಂದು ಸಲಹೆ ನೀಡಿದರು. ಇದು ಅವರ ಸಮಯಪ್ರಜ್ಞೆಗೆ ಸಾಕ್ಷಿ.

ಅಂತರ್ ಜಾತಿ ವಿವಾಹದ ಮೂಲಕ ಮಾತ್ರ ಜಾತಿ ವಿನಾಶ ಸಾಧ್ಯ ಎಂದು ಅಂಬೇಡ್ಕರ್ ಸಾರಿದ್ದನ್ನು, ಅಕ್ಷರಶಃ ತಮ್ಮ ಮನೆಯಲ್ಲಿ ಜಾರಿಗೆ ತಂದ ಶ್ರೇಯಸ್ಸು ಅವರದು.ತಮ್ಮ ಇಬ್ಬರೂ ಮಕ್ಕಳು ಅಂತರ ಜಾತಿ ವಿವಾಹ ಮಾಡಿಕೊಳ್ಳಲು ಸಿದ್ಧರಾದಾಗ, ಇವರು ಸಂತೋಷದಿಂದ ಮುಂದೆ ನಿಂತು ಅವನ್ನು ನಡೆಸಿಕೊಟ್ಟ ಧೀಮಂತೆ.

ಇಂದಿನ ಹಣಮಾಡುವುದನ್ನೇ ದಂಧೆಯನ್ನಾಗಿಸಿಕೊಂಡ, ರಾಜಕಾರಣಿಗಳ ನಡುವೆ, ಮೋಟಮ್ಮನಂತಹವರು ವಿರಳ.‌ಇವರನ್ನು ರಾಜಕಾರಣಕ್ಕೆ ತಂದ ಡಿ.ಬಿ.ಚಂದ್ರೇಗೌಡರೇ ಪಕ್ಷಾಂತರ ಮಾಡಿದಾಗ ಕೂಡ, ಇವರು ಅವರನ್ನು ಅನುಸರಿಸದೆ, ಮೂಲ ಪಕ್ಷದಲ್ಲೇ ಉಳಿದುಕೊಂಡಿದ್ದು ಇವರ ಪಕ್ಷ ನಿಷ್ಠೆಗೆ ಜೀವಂತ ಸಾಕ್ಷಿ.

ತರಗತಿಯಲ್ಲಿ ಶಿಕ್ಷಕರು ತನ್ನ ಹೆಸರು ಕರೆದಾಗ ಕೀಳರಿಮೆಯಿಂದ ಓಗೊಡಲು ಹಿಂಜರಿದ ಬಾಲೆಯೊಬ್ಬಳು, ಸದನದಲ್ಲಿ ಧ್ವನಿ ಎತ್ತಿ ತನ್ನ ಅಸ್ಮಿತೆಯನ್ನು ಸಾಬೀತು ಪಡಿಸುವ, ರಾಷ್ಟ್ರೀಯ ನಾಯಕರ ಜೊತೆ ಸಮಾನವಾಗಿ ವ್ಯವಹರಿಸುವ ಮಟ್ಟಕ್ಕೆ ಬೆಳೆದು ನಿಂತ ಯಶೋಗಾಥೆಗೆ ಮೋಟಮ್ಮ ನವರ ಈ ಆತ್ಮಕಥನ ನಿದರ್ಶನವಾಗಿದೆ.

ಮರಾಠಿಯಿಂದ ಕನ್ನಡಕ್ಕೆ ಬಂದಿರುವ ಮರಾಠಿ ದಲಿತ ಲೇಖಕಿಯ ಆತ್ಮಚರಿತ್ರೆಯ ಹೆಸರು ಕೂಡ ‘ಬಿದಿರಿನ ಬುಟ್ಟಿ ‘ – ಇದು ಆಕಸ್ಮಿಕ ಎನ್ನುವುದಕ್ಕಿಂತ ಸಮಕಾಲೀನ ಭಾರತೀಯ ದಲಿತ
ಮಹಿಳಾ ಆತ್ಮಚರಿತ್ರೆಗಳ ನಡುವಿನ ಸಮಾನತೆಗೆ ಸಾಕ್ಷಿ ನುಡಿಯುವುದಲ್ಲದೆ, ಅವುಗಳ ತೌಲನಿಕ ಅಧ್ಯಯನ ಕ್ಕೆ ಕಾಲ ಸನ್ನಿಹಿತವಾಗಿದೆ ಎಂಬುದನ್ನು ಸೂಚಿಸುತ್ತದೆ.

ಮೇಲೆ ಉಲ್ಲೇಖಿಸಿದ ಹಲವು ನಿದರ್ಶನಗಳು, ಅವರ ವ್ಯಕ್ತಿತ್ವದ ವೈಶಿಷ್ಟ್ಯವನ್ನು ಸಾಬೀತು ಪಡಿಸುತ್ತವೆ. ಕೆಲವು ಪುನರುಕ್ತಿಗಳನ್ನು, ಕೆಲವು ಕಡೆ ಅನಾವಶ್ಯಕವಾದ ಇಂಗ್ಲಿಷ್ ಬಳಕೆಯನ್ನು ತಪ್ಪಿಸಬಹುದಿತ್ತು.

ಈ ಪುಸ್ತಕವನ್ನು ಪ್ರಕಟಿಸುವ ಮತ್ತು ಕಳುಹಿಸಿಕೊಡುವ ಮೂಲಕ ನಮ್ಮ ಹಿರಿಯ ಸಹಪಾಠಿಯ ಸಾಧನೆಗಳನ್ನು ಪರಿಚಯ ಮಾಡಿಕೊಳ್ಳುವ, ಅವಕಾಶ ಕಲ್ಪಿಸಿದ ನಮ್ಮ ಹಿರಿಯಕ್ಕ ಆರ್. ಪೂರ್ಣಿಮಾ ಅವರಿಗೆ ಅವರ ಪ್ರಕಾಶನಕ್ಕೆ ವಂದನೆ. ವಸ್ತುನಿಷ್ಠವಾಗಿ ತಮ್ಮ ಆತ್ಮಚರಿತ್ರೆಯನ್ನು ನಿರೂಪಿಸಿದ ವೀರಣ್ಣ ಕಮ್ಮಾರ ಅವರಿಗೆ ಅಭಿನಂದನೆಗಳು. ಬಹುಶಃ ಇದೇ ಮೊದಲ ಬಾರಿಗೆ, ಕನ್ನಡ ಸಾಹಿತ್ಯದಲ್ಲಿ ದಲಿತ ಮಹಿಳಾ ರಾಜಕಾರಣಿಯ ಆತ್ಮಚರಿತ್ರೆ ಪ್ರಕಟವಾಗುತ್ತಿರುವುದು. ಆ ಶ್ರೇಯಸ್ಸು ಈ ಲೇಖಕಿಗೆ ಮತ್ತು ಪ್ರಕಾಶಕರಿಗೆ ಸಲ್ಲಬೇಕು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading