ಕರಾವಳಿಯ ಸಂಸ್ಕೃತಿ ಮತ್ತು ಕಂಬಳದ ಹಿನ್ನೆಲೆಯ ಕತೆಯುಳ್ಳ, ಗುರುದತ್ತ ಗಾಣಿಗ ಅವರ ನಿರ್ದೇಶನದ ‘ಕರಾವಳಿ’ ಸಿನಿಮಾ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…
ಕಷ್ಟ ಪಟ್ಟು ಸಿನಿಮಾ ಮಾಡಿದ್ದೀವಿ, ದಯವಿಟ್ಟು ಥಿಯೇಟರ್ ಗೆ ಬನ್ನಿ…ಅಂತ ನಿರ್ಮಾಪಕರು ನಿರ್ದೇಶಕರು ಥಿಯೇಟರ್ ಮುಂದೆ ಅತ್ರೆ ಯಾರು ಕನಿಕರ ತೋರಸೋಲ್ಲ. ಎಲ್ಲರ ಜೀವನದಲ್ಲಿಯೂ ಸಾಕಷ್ಟು ಗೋಳಾಟ ಇರುತ್ತೆ. ಯಾರದೋ ಗೋಳಾಟ ನೋಡಿ ಸಿನಿಮಾ ನೋಡೋಕೆ ಹೋಗ್ತಾರಾ! ಚಾನ್ಸ್ ಇಲ್ಲಾ. ಇದು ಸ್ವಾರ್ಥ ಜಗತ್ತು. ಪಾಪ ಸಿನಿಮಾ ತಂಡದವರು ಅಳ್ತಿದ್ದಾರೆ, ಹೋಗ್ಲಿ ಸಿನಿಮಾ ನೋಡಿ ಸಹಾಯ ಮಾಡೋಣ ಅಂತ ಯಾರು ಅನುಕಂಪಕ್ಕೆ ಸಿನಿಮಾ ಹೋಗಿ ನೋಡೋಲ್ಲ. ಯಾಕoದ್ರೆ ಗಾಂಧಿ ಕ್ಲಾಸ್ ನಲ್ಲಿ ಕೂತು ಸಿನಿಮಾ ನೋಡೋರು ಈಗ ಇಲ್ಲಾ. ಎಲ್ಲ ಮಲ್ಟಿಫ್ಲೆಕ್ಸ್ ನಲ್ಲಿ ಕೂತು ನೋಡೋರೇ ಜಾಸ್ತಿ. ಮಲ್ಟಿಫ್ಲೆಕ್ಸ್ ನಲ್ಲಿ ಸಿನಿಮಾ ನೋಡೋಕೆ ಹೋದ್ರೆ ಕನಿಷ್ಠ ಒಂದು ಸೀಟ್ ಗೆ ನಾನೂರು ರೂಪಾಯಿ ಇರುತ್ತೆ. ಥಿಯೇಟರ್ ಒಳಗೆ ಹೋದ್ಮೇಲೆ ಪಾಪ್ ಕಾರ್ನ್, ಅದು ಇದು ತಗೊಂಡ್ರೆ ಕನಿಷ್ಠ ಒಬ್ಬರಿಗೆ ಸಾವಿರ ರೂಪಾಯಿ, ಅದರ ಮೇಲೆ ಪ್ಲಸ್ ಟ್ಯಾಕ್ಸ್. ಹೀಗಿದ್ದಾಗ ಯಾಕೆ ಜನ ಹೋಗ್ತಾರೆ.
ಒಳ್ಳೆ ಕತೆ ಇದ್ದು, ಚನ್ನಾಗಿದೆ, ಕುಟುಂಬ ಸಮೇತ ನೋಡುವ ಸಿನಿಮಾ ಇದ್ರೆ, ಸಿನಿಮಾದವರು ಧಿಮಾಕ್ ಮಾಡಿದ್ರು ಖಂಡಿತ ಥಿಯೇಟರ್ ಗೆ ಹೋಗಿ ಸಿನಿಮಾ ನೋಡ್ತಾರೆ.
ಮೊನ್ನೆ “ಕರಾವಳಿ”ಸಿನಿಮಾ ನೋಡೋಕೆ ಹೋಗಿದ್ದೆ ಅದು ವಾರದ ಮಧ್ಯೆದಲ್ಲಿ. ಸಿನಿಮಾ ಹಾಲ್ ಫುಲ್ ಇತ್ತು. ವಾರದ ಮಧ್ಯೆದಲ್ಲಿ ಸೀಟು ಭರ್ತಿ ಇದ್ದದ್ದು ನೋಡಿ ನಿರ್ಮಾಪಕರ ಜೇಬು ಭರ್ತಿ ಆಗಿರಬೇಕು ಅನ್ಕೊಂಡೆ.

ಫೋಟೋ ಕೃಪೆ : ಅಂತರ್ಜಾಲ
ಸಿನಿಮಾ ನೋಡೋಕೆ ಬಂದ ಪ್ರೇಕ್ಷಕರಲ್ಲಿ ಮಕ್ಕಳಿಂದ, ವಯಸ್ಸಾದವರವರೆಗೂ ಇದ್ರು. ಇದರರ್ಥ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಕರಾವಳಿ ಅನ್ಕೊಂಡು ಧೈರ್ಯವಾಗಿ ಸೀಟ್ ಮೇಲೆ ಕೂತೆ.
ಸಿನಿಮಾ ಶುರುವಾಯ್ತು ಆರಂಭದಲ್ಲಿಯೇ ಯಕ್ಷಗಾನ, ಕಂಬಳದ ದೃಶ್ಯಗಳು ವಾವ್ ಅನ್ನಿಸಿತು. ಈ ಸಿನಿಮಾ ಶೀರ್ಷಿಕೆ ನೋಡಿ ಸಿನಿಮಾ ನೋಡೋಲು ನಾನು ಮೊದಲು ಒಪ್ಪಿದ್ದು. ಕರಾವಳಿ ಎಂದಾಗ ಕರಾವಳಿ ಜನರ ಬದುಕಿನ ಚಿತ್ರಣ ಈ ಸಿನಿಮಾದಲ್ಲಿ ಕಾಣಸಿಗುತ್ತೆ ಅನ್ನುವ ನಂಬಿಕೆ ಇತ್ತು. ಹಾಗೆ ಸಿನಿಮಾ ಶುರುವಾಯ್ತು.
ಶೀರ್ಷಿಕೆ ಬಗ್ಗೆ ನಿರ್ದೇಶಕರು, ನಿರ್ಮಾಪಕರಿಗೆ ಎರಡು ಮಾತನ್ನು ಹೇಳಲೇ ಬೇಕು. ಮೊದಲು ಶೀರ್ಷಿಕೆಗಳನ್ನ ಕತೆಗೆ ತಕ್ಕಂತೆ ಅರ್ಥಪೂರ್ಣವಾಗಿ ಆಯ್ದುಕೊಳ್ಳಿ. ಆಗ ಪ್ರೇಕ್ಷಕರು ಸಿನಿಮಾ ಕಡೆ ಒಲವು ತೋರಿಸುತ್ತಾನೆ. ಅದನ್ನು ಬಿಟ್ಟು ಟಗರು ಪಲ್ಯ, ಬಡವ ರಾಸ್ಕಲ್, ಪೊಗರು ಹೀಗೆ ಕೇಳೋಕೆ ಹಿಂಸೆಯಾಗುವ ಶೀರ್ಷಿಕೆಯನ್ನ ಸಿನಿಮಾಕ್ಕೆ ಇಟ್ಟರೆ ಸಿನಿಮಾ ನೋಡುವುದು ದೂರದ ಮಾತು, ಥಿಯೇಟರ್ ಹತ್ರಕ್ಕೂ ಕುಟುಂಬ ಸಮೇತ ಯಾರು ಬರೋಲ್ಲ.
“ಕರಾವಳಿ ” ಸಿನಿಮಾದ ವಿಷಯಕ್ಕೆ ಬರುವುದಾದರೆ ಕತೆಯಲ್ಲಿ ಕಂಬಳದ ಸುತ್ತ ಹೆಣೆದ ಕತೆಯಾಗಿದೆ. ಕತೆಯಲ್ಲಿ ನಾಯಕನ ಪಾತ್ರ ಪ್ರಜ್ವಲ್ ದೇವರಾಜ್ ವಹಿಸಿದ್ದಾರೆ. ಆದರೆ ಅವರಿಗಿಂತ ಹಿರಿಯ ನಟರಾದ ಮಿತ್ರಾ, ಶ್ರೀಧರ್ ಮತ್ತು ರಾಜ್ ಬಿ ಶೆಟ್ಟಿ ಹೆಚ್ಚು ಮಿಂಚಿದ್ದಾರೆ. ಮಿತ್ರಾ ಮತ್ತು ಶ್ರೀಧರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ವರ್ಷ ಬೆವರು ಹರಿಸಿದ್ದಾರೆ. ಅವರ ಶ್ರಮ, ಶ್ರದ್ದೆ ತೆರೆಯ ಮೇಲೆ ನೋಡಬಹುದು. ಮಿತ್ರಾ ಅವರನ್ನು ಈ ಹಿಂದೆ ಎಲ್ಲಿಯೂ ಗಂಭೀರ ಪಾತ್ರದಲ್ಲಿ ನೋಡಿರಲಿಲ್ಲ. ಆದರೆ ಈ ಚಿತ್ರತಂಡ ಮಿತ್ರ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿದೆ. ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಚಿತ್ರರಂಗದ ಪಾದರಸವಿದ್ದಂತೆ. ಯಾವುದೇ ಪಾತ್ರ ಕೊಡಲಿ ಅವರು ಆ ಪಾತ್ರದಲ್ಲಿ ಸಂಪೂರ್ಣವಾಗಿ ಬೆರೆತು ಹೋಗುತ್ತಾರೆ. ಎಂ ಕೆ ಮಠ ಅವರು ಒಳ್ಳೆಯ ಕಲಾವಿದರು. ಅವರ ಪ್ರತಿಭೆಯನ್ನು ಎತ್ತಿ ಹಿಡಿಯುವ ಪ್ರಮುಖ ಪಾತ್ರದ ಸಿನಿಮಾಗಳು ಅವರ ಕೈಗೆ ಬಂದರೇ ಕರಾವಳಿ ಭಾಗದಲ್ಲಿ ಮತ್ತೊಬ್ಬ ಬ್ಯುಸಿ ಕಲಾವಿದನನ್ನು ನೋಡಬಹುದು. ಗೋವಿಂದ ಗೌಡ ಅವರು ಉತ್ತರ ಕರ್ನಾಟಕ ಭಾಷೆಯ ಮೆರಗು ಅಂತಲೇ ಹೇಳಬಹುದು. ಅವರ ಪಾತ್ರ ಚಿಕ್ಕದಾದರೂ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಅವರ ಅಭಿನಯ ಸೂಪರ್. ಉಳಿದೆಲ್ಲ ಪಾತ್ರಗಳು ತೆರೆಯ ಮೇಲೆ ಚನ್ನಾಗಿ ಮೂಡಿ ಬಂದಿದೆ.

ಫೋಟೋ ಕೃಪೆ : ಅಂತರ್ಜಾಲ
ಕರಾವಳಿ ಸಿನಿಮಾ ಬಿಡುಗಡೆ ಮುಂಚೆಯೇ ಗದ್ದಲ ಎಬ್ಬಿಸಿತ್ತು. ಪ್ರಜ್ವಲ್ ಅವರ ಪಾತ್ರಕ್ಕೆ ಚಿತ್ರತಂಡ ಗಮನ ಹರಿಸಿಲ್ಲ, ಅವರ ಧ್ವನಿಯಿಲ್ಲ, ಬೇರೆ ಯಾರದ್ದೋ ಧ್ವನಿ ಇದೆ ಹೀಗೆ ಏನೇನೋ ಇತ್ತು. ಸಿನಿಮಾ ನೋಡಿದ ಮೇಲೆ ನನಗೆ ವೈಯಕ್ತಿಕವಾಗಿ ಅನ್ನಿಸಿದ್ದು, ಪ್ರಜ್ವಲ್ ಅವರ ಪಾತ್ರದಲ್ಲಿ ಯಾಕೋ ನಿರಾಸೆಯಿತ್ತು . ಅವರೊಬ್ಬ ಸ್ಫುರದ್ರೂಪಿ ನಟ ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರನ್ನು ಕರಾವಳಿ ಸಿನಿಮಾದಲ್ಲಿ, ಅದರಲ್ಲಿಯೂ ಕಂಬಳದಂತಹ ಕ್ರೀಡಾ ಕಥೆಯುಳ್ಳ ಪಾತ್ರದಲ್ಲಿ ನೋಡುವಾಗ ಪ್ರಜ್ವಲ್ ಅವರು ಸ್ವಲ್ಪ ದೇಹ ದಂಡಿಸಬೇಕಿತ್ತೇನೋ, ಅವರ ಪಾತ್ರದಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತೇನೋ ಅಂತ ಅನ್ನಿಸಿದ್ದು ಸತ್ಯ.
ಕೆಲವು ಆಡು ಭಾಷೆಗಳು ಬಾಯಲ್ಲಿ ಸುಲಲಿತವಾಗಿ ಹೊರಳದೇ ಇದ್ದಾಗ ಅಲ್ಲಿಯ ಪ್ರಾದೇಶಿಕ ಭಾಷೆಯ ಕಲಾವಿದರಿಂದ ಡಬ್ಬಿಂಗ್ ಮಾಡಿಸುವುದು ತಪ್ಪಲ್ಲ. ಹಿಂದೆ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ನಟಿಸಿದ್ದಾಗ ಅವರ ನಟನೆ ಚನ್ನಾಗಿತ್ತು. ಆದರೆ ಉತ್ತರಕರ್ನಾಟಕ ಭಾಷೆ ಹೇಳುವಲ್ಲಿ ಅವರು ಕಷ್ಟ ಪಟ್ಟಿದ್ದು ತೆರೆಯ ಮೇಲೆ ಕಾಣಬಹುದು. ಡಬ್ಬಿಂಗ್ ಕಲಾವಿದರು ಕೂಡಾ ಕಲಾವಿರೇ ಅಲ್ಲವೇ?…ಹಾಗಾಗಿ ನಾಯಕನ ಧ್ವನಿ ಇಲ್ಲಾ ಎಂದು ಬೇಸರ ಮಾಡಿಕೊಳ್ಳುವ ಬದಲು, ಇದೊಂದು ನಾಯಕನ ಸುತ್ತ ಕತೆ ಸುತ್ತಿಲ್ಲ, ಕತೆಯ ಸುತ್ತ ಪಾತ್ರಗಳು ಹುಟ್ಟಿಕೊಂಡಿವೆ ಎಂದು ಸಂತೋಷ ಪಡಬೇಕು. ಅಭಿಮನ್ಯು ಅವರ ಕ್ಯಾಮೆರಾ ಕೆಲಸ ಇಷ್ಟವಾಯಿತು. ಗುರುದತ್ತ ಗಾಣಿಗ ಅವರ ನಿರ್ದೇಶನ ಚನ್ನಾಗಿದೆ. ಆದರೆ ಕತೆ ವಿಷಯದಲ್ಲಿ ಇನ್ನಷ್ಟು ಗಟ್ಟಿಗೊಳಿಸಬಹುದಿತ್ತು ಎಂದನ್ನಿಸಿತು.
ಒಟ್ಟಿನಲ್ಲಿ ಈ ಸಿನಿಮಾಕ್ಕೆ ನಾನು ಕೊಡುವ ರೇಟಿಂಗ್ : ಹತ್ತಕ್ಕೆ ಏಳು .
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.
