ಪುಂಡಲೀಕ ಬಸನಗೌಡ ಧುತ್ತರಗಿ ಎಂಬ ಕನ್ನಡದ ಹೆಸರಾಂತ ಕವಿ ಅರ್ಥಾತ್ ವೃತ್ತಿ ರಂಗಭೂಮಿ ನಾಟಕಕಾರ “ಸಂಪತ್ತಿಗೆ ಸವಾಲ್” ನಾಟಕ ರಚಿಸಿ ಅಜಮಾಸು ಅರವತ್ತು ವರುಷಗಳೇ ಗತಿಸಿವೆ. ವರನಟ ಡಾ. ರಾಜಕುಮಾರ್, ನಾಯಕ ನಟನಾಗಿ ಅಭಿನಯಿಸಿದ ಇದೇ ಹೆಸರಿನ ಸಿನೆಮಾ ಬಂದಮೇಲೆ ಅದರ ಜನಪ್ರಿಯತೆ ಹೆಚ್ಚಿತು. ಇದು ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ತರ್ಜುಮೆಯಾಗಿದೆ. ಸೋಜಿಗವೆಂದರೆ ಸಿನೆಮೋತ್ತರ ಕಾಲದಲ್ಲಿ ಮುರ್ನಾಲ್ಕು ದಶಕಗಳಿಂದ ‘ಸಂಪತ್ತಿಗೆ ಸವಾಲ್’ ನಾಟಕ ಹೆಚ್ಚು ಹೆಚ್ಚಾಗಿ ರಂಗಪ್ರದರ್ಶನ ಕಾಣಲಿಲ್ಲ.
ಸಿದ್ದನಕೊಳ್ಳದ ಸಿದ್ದಪ್ಪಜ್ಜನ ಸನ್ನಿಧಾನದಲ್ಲಿ ವಾಸ್ತವ್ಯ ಮಾಡಿ ನಾಟಕ ರಚನೆ ಮಾಡಿದರೆಂಬ ಪ್ರತೀತಿ. ಊಳಿಗಮಾನ್ಯ ವ್ಯವಸ್ಥೆ, ವರ್ಗ ಸಂಘರ್ಷ, ಜೀತಪದ್ದತಿ ಮತ್ತು ಅವಿಭಜಿತ ಕುಟುಂಬ ಪ್ರೀತಿ ಕುರಿತು ಆರು ದಶಕಗಳಷ್ಟು ಹಿಂದೆಯೇ ಇಂತಹದ್ದೊಂದು ಸಶಕ್ತತೆಯ ನಾಟಕ ರಚನೆ ಮಾಡಿದ್ದು ಐತಿಹಾಸಿಕ ದಾಖಲೆ.
ವರ್ತಮಾನದ ಜೆನ್ ಝೀ – ಆಲ್ಫಾ ಜಮಾನಾದಲ್ಲೂ ಈ ನಾಟಕ ಭಾವ ಸ್ಪಂದನದ ಗುಣಸಂವೇದನೆಗಳನ್ನು ಹುಟ್ಟಿಸ ಬಲ್ಲದು.ಅಂದರೆ ಫ್ಯುಡಲ್ ವ್ಯವಸ್ಥೆ ಮತ್ತು ಅದರ ವಿರುದ್ಧದ ಹೋರಾಟ, ಬದಲಾದ ರೂಪಗಳೊಂದಿಗೆ ಕಾಲಾತೀತವಾಗಿ ಸಾಗಿ ಬರುತ್ತಿರುವ ರಂಗೇತಿಹಾಸವೇ ಈ ನಾಟಕದ ಹೂರಣ. ಅಂತೆಯೇ “ಸಿರಿಯ ಗರ ಬಡಿದವರ ನುಡಿಸಲಾಗದು” ಎನ್ನುವ ವಚನ ದೀಪ್ತಿಯನು ಸುದೀಪ್ತಗೊಳಿಸುವುದು ಸಹಿತ ಸಂಪತ್ತಿಗೆ ಸವಾಲ್.
ವರನಟ ಡಾ. ರಾಜಕುಮಾರ್, ನಾಯಕ ನಟನಾಗಿ ಅಭಿನಯಿಸಿದ ಇದೇ ಹೆಸರಿನ ಸಿನೆಮಾ ಬಂದಮೇಲೆ ಅದರ ಜನಪ್ರಿಯತೆ ಹೆಚ್ಚಿತು. ಇದು ದಕ್ಷಿಣ ಭಾರತದ ನಾಲ್ಕು ಭಾಷೆಗಳಿಗೆ ತರ್ಜುಮೆಯಾಗಿದೆ. ಸೋಜಿಗವೆಂದರೆ ಸಿನೆಮೋತ್ತರ ಕಾಲದಲ್ಲಿ ಮುರ್ನಾಲ್ಕು ದಶಕಗಳಿಂದ ‘ಸಂಪತ್ತಿಗೆ ಸವಾಲ್’ ನಾಟಕ ಹೆಚ್ಚು ಹೆಚ್ಚಾಗಿ ರಂಗಪ್ರದರ್ಶನ ಕಾಣಲಿಲ್ಲ. ಅಷ್ಟೆಯಾಕೆ ಜಾಗತೀಕರಣ ಮತ್ತು ಕಾರ್ಪೋರೇಟೀಕರಣದ ಸೆಖೆಗೆ ಸಿಲುಕಿ ಪರಂಪರಾಗತ ಕನ್ನಡ ವೃತ್ತಿ ರಂಗನಾಟಕಗಳು ದಿಕ್ಕು ತಪ್ಪಿದವು. ಬಹುತೇಕ ಫುಲ್ ಕಾಮೆಡಿ ಎಂಬ ಅತಿಸಾರದ ದಿಕ್ಕುದೆಸೆಯ ಬಾಧೆಗೆ ಬಲಿಯಾದವು.
ರಂಗಸಂಸ್ಕೃತಿಯ ಬಹುದೊಡ್ಡ ಪರಂಪರೆಯ ನಾಟಕಗಳನ್ನು ವಿಕ್ಷಿಪ್ತಗೊಳಿಸಿ ವಿರೂಪದ ಹೆಸರುಗಳೊಂದಿಗೆ ರಂಗ ಪ್ರದರ್ಶನಗಳ ಸಂಪ್ರದಾಯವೇ ಬೃಹದಾಕಾರ ಬೆಳೆಯಿತು. ಅದೆಷ್ಟು ಪ್ರಮಾಣದಲ್ಲಿ ಎಂದರೆ ನಾಟಕದ ಒರಿಜಿನಲ್ ಹೆಸರು ಮತ್ತು ಮೂಲ ಆಶಯದ ರಂಗಪಠ್ಯಗಳೊಂದಿಗೆ ಪ್ರದರ್ಶನ ಮಾಡಿದರೆ ನೆಲಕಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿಯೇ ಕಮರ್ಷಿಯಲ್ ರಂಗಭೂಮಿಯ ಪ್ರಬೇಧವು ಗಿಮಿಕ್ಸ್ ಎಂಬಂತೆ ರಿಮಿಕ್ಸ್ ಹಾಸ್ಯದ ಪದ್ಧತಿಯೊಂದು ಚಾಲತಿಗೆ ಬಂದಿದೆ. ಮೌಲಿಕ ವಿನೋಧದ ರಂಗಪ್ರಜ್ಞೆಯಿಂದ ದೂರ ಉಳಿದಿದೆ. ಅದು “ಫುಲ್ ಕಾಮೆಡಿ” ಎಂಬ ಟ್ಯಾಗ್ ಲೈನ್ ಹೊತ್ತ ಹೊಸದೊಂದು ಪರಿಪಾಠವೇ ಪ್ರಚಲಿತಗೊಂಡು ದಶಕಗಳೇ ಗತಿಸುತ್ತಲಿವೆ.

ಪುಂಡಲೀಕ ಬಸನಗೌಡ ಧುತ್ತರಗಿ ಭಾವಚಿತ್ರ
ಇದೆಲ್ಲ ಸೇರಿದಂತೆ ಇತರೆ ಎಲ್ಲ ಬಗೆಯ ಬೆಳವಣಿಗೆಗಳ ಒಳಗನ್ನು ಕುರಿತು ಗಂಭೀರ ಚಿಂತನೆಯ ತೀಕ್ಷ್ಣಗಮನ ಇಟ್ಟುಕೊಂಡೇ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ತನ್ನ ಸ್ವರೂಪ ಕಂಡುಕೊಳ್ಳುತ್ತಲಿದೆ. ಈ ನಿಟ್ಟಿನಲ್ಲಿ ನಮ್ಮ ರಂಗಾಯಣ ನಿರ್ಮಾಣ ಮಾಡಿದ ಡಾ. ರಾಜಪ್ಪ ದಳವಾಯಿ ವಿರಚಿತ “ಪ್ರತಿಗಂಧರ್ವ” ಎಂಬ ಪ್ರಥಮ ನಾಟಕ ಪ್ರಯೋಗದ ಮೂಲಕ ನಮ್ಮ ರಂಗಾಯಣ ಸ್ವರೂಪದ ಮಾದರಿಯೊಂದನ್ನು ಸಾಬೀತು ಪಡಿಸಿತು.
ಇಂತಹ ಮಾದರಿಯೊಂದರ ಸೂಕ್ಷ್ಮತೆಯ ಮುಂದುವರಿಕೆ. ಇದೀಗ ನಮ್ಮ ಎರಡನೇ ನಾಟಕ ಸಂಪತ್ತಿಗೆ ಸವಾಲ್. ಇದನ್ನು ಒಂದು ಸವಾಲಿನಂತೆ ರಂಗಪ್ರಯೋಗಕ್ಕೆ ಸಿದ್ಧ ಗೊಳಿಸಲಾಯಿತು. ಅದಕ್ಕಾಗಿ ಹೊಸದೊಂದು ಕ್ರಿಯಾಯೋಜನೆಯನ್ನೇ ರೂಪಿಸಲಾಯಿತು. ಕ್ರಿಯಾಶೀಲ ನಾಟಕ ಕಂಪನಿಗಳಿಗೆ ತೆರಳಿ ಉಚ್ಛ್ರಾಯ ಕಾಲದ ವೃತ್ತಿರಂಗ ನಾಟಕಗಳನ್ನು ಕಲಿಸುವುದು. ಅಂತಹ ಕಲಿಕೆಗೆ ಆಧುನಿಕತೆಯ ಸ್ಪರ್ಶ ನೀಡುವುದು. ಇದು ನೂತನ ಯೋಜನೆಯ ಸಿಂಗಲ್ ಲೈನ್ ಸ್ಟೋರಿ.
ಹುಡುಕುವ ಬಳ್ಳಿ ಕಾಲಿಗೆ ತೊಡಕಿತು ಎನ್ನುವಂತೆ ನಮ್ಮ ಯೋಜನೆಗೆ ಪೂರಕವಾಗಿ ದಾವಣಗೆರೆಯಲ್ಲೇ ನಾಟಕ ಕಂಪನಿಯೊಂದು ಮೊಕ್ಕಾಂ ಮಾಡಿದ್ದು. ಅದು ಶ್ರೀಗುರು ಹೊಳೆ ಹುಚ್ಚೇಶ್ವರ ನಾಟಕ ಸಂಘ, ಕಮತಗಿ ಎಂಬ ನಾಟಕ ಕಂಪನಿ. ನಮ್ಮ ಈ ಕಾಲದ ಅದು ತರುಣ ಕಲಾವಿದರ ಕ್ರಿಯಾಶೀಲತೆ ಮತ್ತು ಹೊಸತನಕ್ಕೆ ಅನುಸ್ಪಂದಿಸುವ ವಿನೂತನ ರಂಗತಂಡ. ಈ ರಂಗತಂಡವನ್ನೇ ನಮ್ಮ ನೂತನ ಯೋಜನೆಗೆ ಆಯ್ಕೆ ಮಾಡಿಕೊಂಡೆ. ನಮ್ಮ ನಡುವಿನ ಸಜ್ಜನ ರಂಗನಿರ್ದೇಶಕ ಕೆ.ಎಸ್.ಡಿ.ಎಲ್. ಚಂದ್ರು ಸದರಿ ಸಂಪತ್ತಿಗೆ ಸವಾಲ್ ನಾಟಕದ ನಿರ್ದೇಶಕರೆಂತಲೂ ಆಯ್ಕೆ ಮಾಡಿಕೊಂಡೆ. ಚಂದ್ರು ಅವರಿಂದ ರಂಗತಂಡಕ್ಕೆ ತಿಂಗಳೊಪ್ಪತ್ತು ತಾಲೀಮು. ಚಂದ್ರು ರಂಗನಿರ್ದೇಶನ ಕಾಯಕದ ಬಹುತೇಕ ಸಾಧ್ಯತೆಗಳೊಂದಿಗೆ ಸಂಪತ್ತಿಗೆ ಸವಾಲ್ ಅನುಸಂಧಾನಗೊಂಡಿದೆ.
ಧುತ್ತರಗಿ ಕವಿಗಳ ಮೂಲ ನಾಟಕ ಮತ್ತು ರಾಜಕುಮಾರ ಅಭಿನಯದ ಜನಪ್ರಿಯ ಸಿನೆಮಾದ ನಾಟಕೀಯ ರಂಗಾಂಶಗಳನ್ನು ಅನುಲಕ್ಷಿಸುತ್ತಲೇ ರಂಗಪ್ರಯೋಗ ಇನ್ನೋವೆಟಿವ್ ರಿಜಲ್ಟ್ ನೀಡುತ್ತದೆ. ಚಲನಚಿತ್ರದ ದುರ್ಗಿಗಿಂತ ನಮ್ಮನಾಟಕದ ದುರ್ಗಿಯ ರಂಗೋಲ್ಲಾಸ ದುಪ್ಪಟ್ಟು ಉಮೇದು ಉಕ್ಕಿಸುತ್ತದೆ. ಭದ್ರಿ, ಭದ್ರಿಯ ಅಣ್ಣ ಸಿದ್ದಪ್ಪ, ಸಾವುಕಾರ ಮರಿಯಪ್ಪ, ಕುಲಕರ್ಣಿ ವೆಂಕಪ್ಪ, ಪಾರ್ವತಿ, ಸಂಗವ್ವ ಸೇರಿದಂತೆ ಎಲ್ಲ ಪಾತ್ರಗಳ ಪರ್ಫಾರ್ಮನ್ಸ್ ನಿಜಕ್ಕೂ ಮನೋಜ್ಞ. ಹಾಗೆಯೇ ಅಪ್ರಮೇಯವಾದ ಸಂಗೀತ. ಪ್ರತಿನಿತ್ಯವೂ ಮುಂಜಾನೆ ಮುಂಚಿತವಾಗಿ ಹತ್ತು ಗಂಟೆಗೇ ಬಂದು ಕಾರಿಡಾರ್ ಕುರ್ಚಿಯಲ್ಲಿ ಕುಂತು ನೋಟ್ಸ್ ಮಾಡಿಕೊಳ್ಳುತ್ತಿದ್ದ ನಿರ್ದೇಶಕ ಕೆಎಸ್ಡಿಎಲ್ ಚಂದ್ರು ಅವರ ಸಜ್ಜನಿಕೆಗೊಂದು ಸಲಾಮು ಸಲ್ಲಬೇಕು. ಒಂದು ಸಿದ್ಧಸೂತ್ರಕ್ಕೆ ಬದ್ಧರಾದ ಕಂಪನಿ ಕಲಾವಿದರಿಗೆ ರಂಗಾಯಣದಂತಹ ರೆಪರ್ಟರಿ ಶೈಲಿಯ ರಂಗ ತರಬೇತಿ ನೀಡುವುದು ನಮಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿದ್ದು ಮಾತ್ರ ಖರೇ.

ಪುಂಡಲೀಕ ಬಸನಗೌಡ ಧುತ್ತರಗಿ ಭಾವಚಿತ್ರ
ನಾಟಕದ ತಾಲೀಮು ಮಾಡುವಾಗ ಕಂಪನಿ ಆವರಣದಲ್ಲಿ ನಮಗೆಲ್ಲ ಟೀ ಕಾಫಿ ಮತ್ತೆ ಕೆಲವರಿಗೆ ಹಾಲುರಹಿತ ಕರಿಕಾಫಿ ನೀಡಿದವರು ಅನ್ನಪೂರ್ಣೇಶ್ವರಿ ಬೇಬಿಜಾನ್. ತಾಲೀಮಿನ ಯಾವುದೇ ಕೆಲಸಕ್ಕೂ ಅನುಕ್ಷಣವೂ ತಾನು ಸಿದ್ದ ಎನ್ನುವಂತಿರುವ ವಾಮನ ಶರೀರ ಮತ್ತು ನಿಷ್ಕಲ್ಮಶ ಹೃನ್ಮನದ ಸೇವಾಧಾರಿ ಸೆಕ್ಯುರಿಟಿ ಚಂದ್ರು. ಮನುಷ್ಯ ಸಂಬಂಧಗಳಿಂದ ಸಹಜ ಮುಗ್ದತೆಯೇ ಕಣ್ಮರೆಯಾಗುತ್ತಿರುವ ದುರಿತಕಾಲವಿದು. ಅವನಲ್ಲಿರುವ ಮುದ್ದಾದ ಮುಗ್ದತೆಗೆ ಸಂಪ್ರೀತಿಯ ಸೆಲ್ಯೂಟ್. ಮಗುವಿನ ನಗೆಯ ಈ ಪುಟ್ಟ ಚಂದ್ರುವಿನಿಂದ ಹಿಡಿದು ಇಲ್ಲಿ ಹತ್ತು ಹಲವು ವಿಭಿನ್ನ ಪ್ರತಿಭೆಗಳಿವೆ. ಅವು ಗ್ರಾಮ್ಯಜನ್ಯ ದೇಸೀಯ ಪ್ರತಿಭೆಗಳೇ ಆಗಿವೆ. ಆ ಕುರಿತು ಇನ್ನೊಮ್ಮೆ ಬರೆಯುವೆ. ಮೇಲಾಗಿ ವೃತ್ತಿ ರಂಗಭೂಮಿ ಎಂಬುದು ಜನಸಾಮಾನ್ಯರ ವಿಶ್ವವಿದ್ಯಾಲಯ. ಅಷ್ಟಕ್ಕೂ ಅದು ಹಚ್ಚಿಟ್ಟ ಕರ್ಪೂರ ಅಲ್ಲಿ ಇದ್ದಿಲು ಹುಡುಕಲಾಗದು.
ಏಕೆಂದರೆ ಅದು ವಿಸ್ತೃತಗೊಂಡು ಕಲಾವಿದ ಮತ್ತು ಮಾಲೀಕರವರೆಗೆ ಹರಿಗಡಿಯದೇ ಹರಿದ ರಂಗಧಾರೆ. ಇದೇ ಬಗೆಯ ಅಪರಿಮಿತ ರಂಗಸಂಪನ್ನತೆ ಉಕ್ಕಿಸುವ ಕಮತಗಿ ಕಂಪನಿ ಎಂದರೆ ಅದೊಂದು ಅವಿಭಜಿತ ಕುಟುಂಬದ ವಾತ್ಸಲ್ಯ ವಾರಿಧಿ.ಅಲ್ಲಿ ನ್ಯುಕ್ಲಿಯರ್ ಫ್ಯಾಮಿಲಿಯ ಸ್ವಾರ್ಥತೆಗೆ ಅವಕಾಶವಿಲ್ಲ. ಪ್ರಾಯಶಃ ಹೀಗಂತಲೇ ಕಂಪನಿಗೆ ಮೊದಲ ಪಂಕ್ತಿಯ ಯಶಸ್ಸು ಪ್ರಾಪ್ತಿ. ಅದು ಲೋಕಪ್ರೀತಿಯ ಪ್ರಮಾಣ ಪತ್ರ.ಅವರ ಕಂಪನಿ ನಾಟಕಗಳ ಕುರಿತು ಅಂತಹದೇ ಲೋಕಮೀಮಾಂಸೆ. ಹೀಗಂತಲೇ ಕಮತಗಿ ಕಂಪನಿಯ ಈ ರಂಗತಂಡವನ್ನು ಆಯ್ಕೆ ಮಾಡಿಕೊಂಡದ್ದು.

ರಂಗಸಂಸ್ಕೃತಿಯ ಇಂತಹ ಆಯ್ಕೆಯ ಸುಶೀಲ ರಂಗಪ್ರಯೋಗದ ಉದ್ಘಾಟನೆಗೆ ಯಾರು ಸೂಕ್ತ ಎಂದು ಆಲೋಚಿಸುತ್ತಿದ್ದರೆ ಚಕ್ಕಂತ್ ಹೊಳೆದ ಹೆಸರು ಉಮಾಶ್ರೀ.ಮಾಜಿ ಸಚಿವೆ ಮತ್ತು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಡೆಪ್ಯುಟಿ ಸ್ಪೀಕರ್ ಆಗಿರುವ ಅಭಿನೇತ್ರಿ ಉಮಾಶ್ರೀ.ಅವರು ಎಂಬತ್ತರ ದಶಕದ ಆರಂಭಕ್ಕೆ ನಾಟಕ ಕಂಪನಿಗಳಲ್ಲಿ ಬಿಡುವಿಲ್ಲದೇ ಅಭಿನಯಿಸಿದ ರಂಗತಾರೆ. ಕಂಪನಿ ನಾಟಕಗಳ ಹೀರೋಯಿನ್ ಪಾತ್ರಗಳಿಗೆ ಸಿಜಿಕೆ ಮತ್ತು ದೇವನೂರರ ”ಒಡಲಾಳ”ದ ಸಾಕವ್ವಳಷ್ಟೇ ತಾರಾ ವರ್ಚಸ್ಸು ತಂದುಕೊಟ್ಟವರು ಉಮಾಶ್ರೀ. ಅಂತೆಯೇ ವೃತ್ತಿ ರಂಗಭೂಮಿ ಅಂದರೆ ಸಾಕು ಉಮಾಶ್ರೀ ಅವರಿಗೆ ತಾಯ್ತನದ ಮಮತೆ ತುಂಬಿ ಹರಿಯುತ್ತದೆ.
ನಮ್ಮ ರಂಗಾಯಣ ಸಿದ್ದಗೊಳಿಸಿರುವ ಸಂಪತ್ತಿಗೆ ಸವಾಲ್ ರಂಗಪ್ರಯೋಗದ ಉದ್ಘಾಟನೆಗೆ ಉಮಾಶ್ರೀ ಅವರು ಒಪ್ಪಿ ಆಗಮಿಸುತ್ತಿರುವುದು ನಮಗೆಲ್ಲ ಹೆಮ್ಮೆ. ಅವರ ಆಗಮನ ನಮ್ಮೆಲ್ಲರ ಉಮೇದು ದ್ವಿಗುಣಗೊಳಿಸಿದೆ.ಅದರಲ್ಲೂ ಇದೇ ಕಂಪನಿಯ ತೊಂಬತ್ತಾರರ ಏರುಪ್ರಾಯದ ರಂಗತಾರೆ ಕಲ್ಲೂರ ಜಯಮ್ಮ ಅವರಂತೂ ಟೀನೇಜ್ ಯುವತಿಯಂತೆ ಉಮಾಶ್ರೀ ಆಗಮನ ಸಂಭ್ರಮಿಸಿದ್ದು ನನಗೆ ಹೇಳದೇ ಇರಲಾಗುತ್ತಿಲ್ಲ.
ಉಮಾಶ್ರೀ ಅವರು ಜಯಮ್ಮ ಅವರ ಮಗ ಲಿಂಗರಾಜ ಕಲ್ಲೂರಗೆ ಇಪ್ಪತ್ತೈದು ಸಹಸ್ರ ಹಣದ ನೆರವು ನೀಡಿದ್ದನ್ನು ಈ ಹಿರಿಯ ಜೀವ ಸ್ಮರಿಸಿಕೊಂಡಿತು. ಇದಕ್ಕಿಂತ ಅಧಿಕತಮದ ಅಂತಃಕರಣ ಇನ್ನೇನು ಬೇಕು.?ಇಂತಹ ಹತ್ತಾರು ರಂಗಕಥನಗಳು ಕೇಳಿಬಂದವು. ನಾಟಕ ಪ್ರದರ್ಶನದ ಸಂದರ್ಭಕ್ಕೆ ಧುತ್ತರಗಿ ಅವರ ಮಗಳು ಶ್ರೀದೇವಿ, ಕುಟುಂಬದ ಸದಸ್ಯರ ಆಗಮನ ಖುಷಿ ತಂದಿದೆ. ಧುತ್ತರಗಿ ಟ್ರಸ್ಟ್ ಅಧ್ಯಕ್ಷರಾದ ಎಸ್. ಕೆ. ಕೊನೆಸಾಗರ ಆಗಮಿಸಿ ಶುಭ ಕೋರಿದ್ದಾರೆ. ನಾಟಕದ ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕರಿಸಿದ ಶ್ರೀಗುರು ಹೊಳೆ ಹುಚ್ಚೇಶ್ವರ ನಾಟಕ ಸಂಘದ ಎಲ್ಲರಿಗೂ ಹೃದಯಪೂರ್ವಕ ವಂದನೆಗಳು.
ಈ ನಾಟಕದ ಸಿದ್ದತೆಯ ಸಮಯದಲ್ಲೇ ನಮ್ಮ ರಂಗಾಯಣದ ಪ್ರಮುಖ ಕಾರ್ಯಕ್ರಮವೊಂದು ಜರುಗಿದೆ. ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ವೃತ್ತಿ ರಂಗಭೂಮಿ ರಂಗಾಯಣದ “ರಂಗಸಮುಚ್ಛಯ ಮತ್ತು ಥಿಯೇಟರ್ ಮ್ಯುಜಿಯಮ್” ನಿರ್ಮಾಣದ ಶಂಕುಸ್ಥಾಪನೆ ಸಮಾರಂಭ ನೆರವೇರಿದೆ.ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಜಲಸಾರಿಗೆ ಸಚಿವರಾದ ಕೆ. ಎಸ್. ಬಸವಂತಪ್ಪ,ದಾವಣಗೆರೆ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಆಗಮಿಸಿ, ಭೂಮಿಪೂಜೆ ಮತ್ತು ಶಿಲಾನ್ಯಾಸ ನೇರವೇರಿಸಿದರು.ಹದ್ದುಬಸ್ತಿನ ಬೇಲಿಹಾಕಿದ ಹತ್ತೆಕರೆ ಜಮೀನಿನಲ್ಲಿ ರಂಗಮಂದಿರ ಸಮೇತದ ರಂಗಸಮುಚ್ಛಯದ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ಜರುಗಿತು.
ಸರ್ಕಾರದ ಶಿಷ್ಟಾಚಾರದಂತೆ ನೆರವೇರಿದ ಆ ಕಾರ್ಯಕ್ರಮ ನಮ್ಮ ರಂಗಾಯಣದ ಮಹತ್ವದ ಮೈಲಿಗಲ್ಲು. ಅದು ವೃತ್ತಿ ರಂಗಸಂಸ್ಕೃತಿಯ ಕನಸುಗಳು ಸಾಕಾರಗೊಳ್ಳುವ ಸಮಯ. ಅದಕ್ಕೆ ವಾರವೊಪ್ಪತ್ತು ಮುನ್ನ ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಅಭಿನಯ ಸಮೇತದ ರಂಗಸಂಗೀತ ಕಲಿಕಾ ತರಬೇತಿ ಶಿಬಿರ ಮತ್ತು ರಂಗಪ್ರದರ್ಶನ ಯಶಸ್ವಿಯಾಗಿ ಜರುಗಿತು. ಈ ಎಲ್ಲ ಸಾಮಯಿಕ ನೆನಪುಗಳನ್ನು ಹಂಚಿಕೊಳ್ಳುತ್ತಾ ಸಹಕರಿಸಿದ ಎಲ್ಲರಿಗೂ ಮತ್ತೊಮ್ಮೆ ಮನದುಂಬಿದ ಕೃತಜ್ಞತೆಗಳು.
- ಮಲ್ಲಿಕಾರ್ಜುನ ಕಡಕೋಳ – ನಿರ್ದೇಶಕರು, ವೃತ್ತಿರಂಗಭೂಮಿ ರಂಗಾಯಣ, ದಾವಣಗೆರೆ
