ನಾವು ಉಸಿರಾಡುವ ಗಾಳಿ ಒಂದೇ, ತಿನ್ನುವ ಅನ್ನ ಒಂದೇ, ಕುಡಿಯುವ ನೀರು ಒಂದೇ, ನೆಲೆಸುವ ನೆಲ ಒಂದೇ ಇರುವಾಗ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕೋಣ ಅದನ್ನು ಬಿಟ್ಟು ನಮ್ಮ ಧರ್ಮಗಳನ್ನು ಮುಂದಿಟ್ಟುಕೊಂಡು ಕಿಡಿಕಾರುವುದನ್ನು ನಿಲ್ಲಿಸೋಣ. ಲೇಖಕರಾದ ಓಂಕಾರ ಪಾಟೀಲ್ ಅವರ ಭಾವೈಕ್ಯತೆ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಬಹುತ್ವದಲ್ಲಿ ಏಕತೆಯನ್ನು ಕಾಣುವುದೇ ನಮ್ಮ ಭಾರತೀಯತೆಯ ಸಂಸ್ಕೃತಿ. ಭಾಷೆ ಮತ್ತು ಸಂಸ್ಕೃತಿಯಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯ ಮತ್ತು ಗೌರವವನ್ನು ಬಿಂಬಿಸುವುದೇ ಭಾರತೀಯ ಭಾವೈಕ್ಯತೆಯ ಪ್ರತೀಕ.
ನಮ್ಮ ಭಾರತ ದೇಶವು ವಿವಿಧ ಧರ್ಮಗಳ ಸಂಗಮವಾಗಿದೆ, ವಿವಿಧ ಭಾಷೆ, ಸಂಸ್ಕೃತಿ, ಆಚರಣೆಗಳ ತವರೂರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಹೀಗೆ ಅನೇಕ ಧರ್ಮಗಳ ಜನರು ಸೌಹಾರ್ದತೆಯಿಂದ ಒಟ್ಟಾಗಿ ಬಾಳುತ್ತಿದ್ದಾರೆ. ಅವರವರ ಧರ್ಮ ಆಚರಣೆಗಳು ಬೇರೆಯಾಗಿದ್ದರೂ ಮಾನವೀಯತೆ ಎಂಬ ನೆಲೆಗಟ್ಟು ಒಂದೇ ಎನ್ನುವ ಭಾವದಲ್ಲಿ ಬದುಕುವುದು ಮುಖ್ಯವಾಗಿದೆ.
ಭಾವೈಕ್ಯತೆ ಎಂದರೆ ಎಲ್ಲಾ ಧರ್ಮಗಳ ಮೂಲತತ್ವ ಒಂದೇ ಎಂದರ್ಥ. ಇದನ್ನು ಅರಿತು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ ಬಾಳುವುದಾಗಿದೆ. ಪ್ರತಿಯೊಂದು ಧರ್ಮವೂ ಶಾಂತಿ, ಕರುಣೆ ಮತ್ತು ಪರೋಪಕಾರದ ಮಾರ್ಗವನ್ನು ಬೋಧಿಸುತ್ತದೆ. ನದಿಗಳು ಬೇರೆ ಮಾರ್ಗಗಳಲ್ಲಿ ಹರಿದರೂ ಕೊನೆಗೆ ಸೇರುವುದು ಸಮುದ್ರವನ್ನೇ, ಹಾಗೆಯೇ ಧರ್ಮ ಆಚರಣೆಗಳು ಬೇರೆ ಬೇರೆಯಾದರೂ ಎಲ್ಲಾ ಧರ್ಮಗಳ ಆಶಯವೂ ಒಂದೇ ಆಗಿದೆ, ಅದುವೇ “ಮಾನವ ಕಲ್ಯಾಣ”.
ಧರ್ಮಗಳ ಭಿನ್ನತೆ ಕುರಿತು ಆಳವಾಗಿ ಚಿಂತನೆ ಮಾಡಿದರೆ ಕಂಡುಬರುವುದು – ಎಲ್ಲಾ ಧರ್ಮಗಳು ಹೇಳುವ ರೀತಿ ಬೇರೆ ಬೇರೆಯಾದರೂ ಅವು ಹೇಳುವುದು ಮಾನವ ಮೌಲ್ಯದ ಭಾವೈಕ್ಯತೆಯ ತತ್ವವನ್ನೇ.
ಹಿಂದೂ ಧರ್ಮ “ವಸುಧೈವ ಕುಟುಂಬಕಂ” ಮತ್ತು “ಸರ್ವೇ ಜನಾಃ ಸುಖಿನೋ ಭವಂತು” ಎಂದು ಹೇಳಿದರೆ, ಇಸ್ಲಾಂ ಅಂದರೆ ಶಾಂತಿ ಎಂದು ಕುರಾನ್ ಹೇಳುತ್ತದೆ. “ನಿನ್ನ ನೆರೆಯವರನ್ನು ನಿನ್ನಂತೆ ಪ್ರೀತಿಸು” ಎಂದು ಕ್ರೈಸ್ತ ಧರ್ಮ ಹೇಳಿದರೆ, ಬೌದ್ಧ ಧರ್ಮ “ಅಹಿಂಸಾ ಪರಮೋ ಧರ್ಮಃ” ಎಂದು ಹೇಳುತ್ತದೆ. ಸಿಖ್ ಧರ್ಮ “ಸರಬತ್ ದಾ ಭಲಾ” – ಎಲ್ಲರ ಒಳಿತನ್ನು ಬಯಸು ಎಂಬುದನ್ನು ಬೋಧಿಸಿದರೆ, ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮವಾವುದಯ್ಯ” ಎಂದು ಸಾರುತ್ತಾರೆ.
ಒಂದೇ ಮಣ್ಣಿನ ಮಕ್ಕಳಾದ ನಾವು ಉಸಿರಾಡುವ ಗಾಳಿ ಒಂದೇ, ತಿನ್ನುವ ಅನ್ನ ಒಂದೇ, ಕುಡಿಯುವ ನೀರು ಒಂದೇ, ನೆಲೆಸುವ ನೆಲ ಒಂದೇ ಇರುವಾಗ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುವುದನ್ನು ಬಿಟ್ಟು ನಮ್ಮ ನಮ್ಮ ಧರ್ಮಗಳನ್ನು ಮುಂದಿಟ್ಟುಕೊಂಡು ಜಗಳವಾಡಿ ಶಾಂತಿಯನ್ನು ಕದಡುವುದು ಯಾವ ಪುರುಷಾರ್ಥಕ್ಕಾಗಿ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

“ಒಂದು ದೇಶವನ್ನು ನಾಶಗೊಳಿಸಬೇಕಾದರೆ ಆ ದೇಶದ ಜನರು ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವಂತೆ ಮಾಡಿದರೆ ಆ ದೇಶ ತನ್ನಿಂತಾನೇ ನಾಶವಾಗುತ್ತದೆ” ಎಂದು ಲಿಯೋ ಟಾಲ್‌ಸ್ಟಾಯ್ ಹೇಳಿದ್ದಾರೆ. ಅದನ್ನೇ ನಮ್ಮ ಸ್ವಾರ್ಥ ಸಾಧಕ ರಾಜಕಾರಣಿಗಳು ಹಾಗೂ ಧರ್ಮಾಂಧರು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮ ಧರ್ಮಗಳಲ್ಲಿ ವಿಷಬೀಜವನ್ನು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ಭಾರತ ಶತಶತಮಾನಗಳಿಂದಲೂ ಸಾಮರಸ್ಯ ಭಾವವನ್ನು ತನ್ನ ಆತ್ಮದೊಂದಿಗೆ ಬೆಸೆದುಕೊಂಡು ಬಂದಿರುವ ದೇಶ. ಅಖಂಡ ಭಾರತವನ್ನು ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ನೂರಾರು ವರ್ಷಗಳ ಕಾಲ ಆಳಿ ಹೋಗಿರುವ ನೆಲದಲ್ಲಿ ಇಂದು ನಮ್ಮ ದುರದೃಷ್ಟವೋ ಏನೋ ಎಂಬಂತೆ ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ರಾಜಕೀಯ ಪುಢಾರಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಧರ್ಮಗಳನ್ನು ಬಳಸಿಕೊಂಡಾಗ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಿ ದೇಶ ಜರ್ಜರಿತವಾಗುತ್ತದೆ ಎಂಬುದನ್ನು ಟಾಲ್‌ಸ್ಟಾಯ್ ಅವರ ಮೇಲಿನ ಮಾತು ಸತ್ಯವೆನಿಸುತ್ತದೆ.
ಇಂತಹ ಸಂದರ್ಭಗಳಲ್ಲಿ ನಮಗೆ ಭಾವೈಕ್ಯತೆಯ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಕುರಿತು ಚಿಂತನೆ ಮಾಡುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಿಭಿನ್ನ ಧರ್ಮದ ಮುಖಂಡರು ತಮ್ಮ ಧರ್ಮ ಆಚರಣೆ, ಬೋಧನೆಯ ಜೊತೆಗೆ ಯುವ ಪೀಳಿಗೆಯಲ್ಲಿ ಪ್ರತಿಯೊಬ್ಬರ ಧರ್ಮಕ್ಕಿಂತ ಮಾನವ ಧರ್ಮ ದೊಡ್ಡದು ಎಂಬ ಸಂದೇಶವನ್ನು ನೀಡಬೇಕಾಗಿದೆ. ಮಾನವೀಯತೆಗೆ ಯಾವುದೇ ಧರ್ಮದ ಬೇಲಿ ಇಲ್ಲ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ. “ಇವನಾರವ ಇವನಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ” ಎನ್ನುವ ಬಸವಣ್ಣನವರ ಶರಣ ಸಂದೇಶವನ್ನು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಬಿತ್ತುವ ಕೆಲಸ ಮಾಡಬೇಕಾಗಿದೆ.
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂದ ಕುವೆಂಪು ಅವರೇ ನಮ್ಮ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ. ಈ ತೋಟದಲ್ಲಿ ಎಲ್ಲಾ ಧರ್ಮದ ಹೂವುಗಳು ಒಟ್ಟಿಗೆ ಅರಳಿದಾಗ ಮಾತ್ರ ಸಮಾಜ ಎಂಬ ಹೂದೋಟವು ಸುಂದರವಾಗಿ ಕಾಣುತ್ತದೆ ಎಂಬುದನ್ನು ಅರಿತು, ಧರ್ಮದ ಹೆಸರಿನಲ್ಲಿ ದ್ವೇಷ, ಅಸೂಯೆ, ಮದ, ಮತ್ಸರವನ್ನು ಸಾಧಿಸದೆ “ನಾವೆಲ್ಲರೂ ಒಂದು, ನಾವೆಲ್ಲರೂ ಬಂಧು, ಮಾನವ ಕುಲ ಒಂದೇ” ಎಂಬ ಉದಾತ್ತ ಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಜಗತ್ತಿನಲ್ಲಿ ನಿಜವಾದ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
