‘ಆಕೆಯ ಕೊನೆಯ ಭೇಟಿ’ ಪ್ರೇಮಕತೆ

8 ವರ್ಷಗಳ ಪ್ರೀತಿಸಿ, ಅನಂತರ ಕೊನೆಗೂ ಆಕೆ ಮದುವೆಯಾಗಲು ಮನಸ್ಸು ಮಾಡಲೇ ಇಲ್ಲ. ಮತ್ತೆಂದೂ ನಾನು ಪ್ರೀತಿ – ಪ್ರೇಮದ ವಿಚಾರದಿಂದಾಗಲೀ, ಮದುವೆಯ ವಿಚಾರದಿಂದಾಗಲೀ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಅವನು ನಿರ್ಧಾರ ಮಾಡಿ ಅಲ್ಲಿಂದ ಹೊರತು ಹೋದ. ಕತೆಗಾರ  ಅನಾಮಿಕ 💯 ಅವರ ಪ್ರೇಮಕತೆಯನ್ನು ಪೂರ್ತಿ ಓದಿ…

ಅದು ಚಿಕ್ಕಮಗಳೂರಿನ ಮಹಾತ್ಮ ಗಾಂಧೀ ಪಾರ್ಕ್. ಅವಳೊಟ್ಟಿಗಿನ ನನ್ನ ನಾಲ್ಕನೇ ಭೇಟಿ. ಕಲ್ಲಿನ ಹಲಗೆಯ ಮೇಲೆ ಭುಜಕ್ಕೆ ಭುಜ ತಾಗಿಸಿ ಕುಳಿತಿದ್ದೆವು. ನನ್ನ ಅವಳ ಕೈಯ ಬೆರಳುಗಳು ಒಂದಕ್ಕೊಂದು ಗಟ್ಟಿಯಾಗಿ ಆಲಂಗಿಸಿಕೊಂಡಿದ್ದವು. ನಾನು ಕೈ ಸಡಿಲ ಮಾಡಿದಷ್ಟೂ ಆಕೆ ತನ್ನ ಕೈ ಗಟ್ಟಿ ಮಾಡುತ್ತಾ ನನ್ನ ಕೈಯನ್ನು ಅವಳತ್ತ ಎಳೆದುಕೊಳ್ಳುತ್ತಿದ್ದಳು. ನಾನು ಶೂನ್ಯದತ್ತ ದೃಷ್ಟಿಹಾಯಿಸಿ ಕುಳಿತಿದ್ದೆ.

ಮೊದಲ, ಎರಡು-ಮೂರನೆಯ ಭೇಟಿಯಲ್ಲಿದ್ದ ನಮ್ಮಿಬ್ಬರ ಚುಂಬನದ ನೆನಪಾಗಲೀ, ಈ ಭೇಟಿಯಲ್ಲಿ ಅದನ್ನು ಮರು ಸೃಷ್ಟಿಸುವ ಕುತೂಹಲವಾಗಲೀ ನನ್ನಲ್ಲಿ ಇರಲಿಲ್ಲ. ಆಕೆ ಆಗಾಗ ಒಂದೆರಡು ಬಾರಿ ನನ್ನ ತುಟಿಯನ್ನು ಗಮನಿಸಿ ಅಸಹಾಯಕ ಮುಖದಲ್ಲಿ ತಲೆ ತಗ್ಗಿಸಿದ್ದು ನನ್ನ ಅರಿವಿಗೆ ಬಂತು. ನಾನು ಮೌನವಾಗಿಯೇ ಕುಳಿತಿದ್ದೆ. ಬಸ್ ಸ್ಟ್ಯಾಂಡಿನಿಂದ ಆಟೋ ಹತ್ತಿ ಪಾರ್ಕ್ ಗೆ ಬಂದು ಕುಳಿತು ಬಹಳ ಸಮಯ ಕಳೆದಿದ್ದರೂ ನನ್ನ ಬಾಯಿಂದ ಒಂದು ಮಾತೂ ಹೊರಡಿರಲಿಲ್ಲ. ಆಕೆ ದಾರಿಯುದ್ದಕ್ಕೂ ಸಮಾಧಾನದ ಮಾತುಗಳನ್ನೂ. ರಾಜಿಯ ಮಾತುಗಳನ್ನೂ ಆಡುತ್ತಾ ನನ್ನಿಂದ ಅದಾವುದಕ್ಕೂ ಪ್ರತ್ಯುತ್ತರ ಬರದಿರುವುದನ್ನು ಕಂಡು ತಾನೂ ಮೌನವಹಿಸಿದ್ದಳು.

ನಾನು ಹೀಗೆಯೇ ಮೌನವಹಿಸಿ ಕುಳಿತರೆ ಮೈಸೂರಿನಿಂದ 5 ಗಂಟೆಗಳ ಪ್ರಯಾಣ ಮಾಡಿ ಇಲ್ಲಿಯವರೆಗೆ ಬಂದದ್ದು ವ್ಯರ್ಥವಾಗುವುದೆಂದು ಮನಗಂಡು ಬಾಯಿ ತೆರೆದೆ. 5 ವರ್ಷಗಳಲ್ಲಿ ನಾನು ಮದುವೆ ವಿಚಾರ ಮಾತನಾಡಿದಾಗೆಲ್ಲಾ ಆಕೆ ಒಂದೊಂದು ರೀತಿಯ ಸಬೂಬುಗಳನ್ನು ಹೇಳುತ್ತಾ ಮದುವೆ ವಿಚಾರವನ್ನು ಮುಂದೆ ಹಾಕುತ್ತಾ ಬಂದಿದ್ದಳು. ಮನೆಯವರು ಒಪ್ಪುವುದು ಬಿಡುವುದು ಎರಡನೇ ಮಾತು, ಮೊದಲನೇದಾಗಿ ಆಕೆಗೆ ನಮ್ಮ ವಿಚಾರವನ್ನು ಅವಳ ಮನೆಯಲ್ಲಿ ಪ್ರಸ್ತಾಪಿಸುವ ಮನಸ್ಸೇ ಇರಲಿಲ್ಲ. ಇತರ ಕೆಲವು ಹುಡುಗಿಯರಂತೆ ಹುಡುಗನ ಹಣದಲ್ಲಿ ತಿಂದುಉಂಡು ಮಜಾಮಾಡುವ ವಿಭಾಗಕ್ಕೆ ಆಕೆ ಸೇರಿದವಳಲ್ಲ, ದೈಹಿಕ ವಿಷಯದಲ್ಲೂ ಆಕೆ ಎಲ್ಲೆ ಮೀರಿ ಮಾತನಾಡಿದವಳೂ ಅಲ್ಲ. ನನ್ನ ಜೀವನದಲ್ಲಿ ಆಟವಾಡುವ ಮನಸ್ಥಿತಿಯೂ ಅವಳಿಗಿರಲಿಲ್ಲ. ಮತ್ತ್ಯಾಕೆ ಈ ರೀತಿಯ ಬೇಜವಾಬ್ದಾರಿತನ? ಇದರಿಂದ ಬೇಸತ್ತ ನಾನು ಈಗ ಅಂತಿಮವಾಗಿ ತೀರ್ಮಾನಿಸಿಯೇ ಇಲ್ಲಿಂದ ಹೊರಡಬೇಕೆಂದು ನಿಶ್ಚಯಿಸಿಕೊಂಡಿದ್ದೆ.

ಆಕೆ ನಮ್ಮ ಮೂರನೇ ಭೇಟಿಯಲ್ಲಿ ನಮ್ಮ ಮನೆಯವರು ನಮ್ಮ ಮದುವೆಗೆ ಒಪ್ಪದಿದ್ದರೆ ನಾನು ನಿನ್ನೊಂದಿಗೆ ದೈಹಿಕವಾಗಿ ಸಂಪರ್ಕ ಹೊಂದಿದ್ದೇನೆಂದು ಸುಳ್ಳು ಹೇಳಿ ಅವರನ್ನು ಮದುವೆಗೆ ಒಪ್ಪಿಸಲು ಪ್ರಯತ್ನಿಸುತ್ತೇನೆ. ಒಂದುವೇಳೆ ಅವರು ಅದಕ್ಕೂ ಒಪ್ಪಿಲಿಲ್ಲವೆಂದರೆ ತಾನು ಮನೆಬಿಟ್ಟು ನನ್ನೊಂದಿಗೆ ಬರುವೆನೆಂದು ನನಗೆ ಆಣೆ ಮಾಡಿದ್ದಳು.

ಈಗ ಮತ್ತೆ ಮದುವೆಯಾಗದಿರುವುದಕ್ಕೆ ಅವಳಲ್ಲಿ ಇಲ್ಲದ ಹೊಸ ಹೊಸ ಸಬೂಬುಗಳು ಉತ್ಪತ್ತಿಯಾಗಿದ್ದವು. 8 ವರ್ಷಗಳ ನಂತರ ಕೊನೆಗೂ ಆಕೆ ಮದುವೆಯಾಗಲು ಮನಸ್ಸು ಮಾಡಲೇ ಇಲ್ಲ. ನನ್ನ ಅಂತಿಮ ನಿರ್ಧಾರ ಅವಳಿಗೆ ತಿಳಿಸಿ ಮತ್ತೆಂದೂ ನಾನು ಪ್ರೀತಿ-ಪ್ರೇಮದ ವಿಚಾರದಿಂದಾಗಲೀ, ಮದುವೆಯ ವಿಚಾರದಿಂದಾಗಲೀ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲವೆಂದು ಕಡ್ಡಿ ಎರಡು ತುಂಡಾದಂತೆ ನನ್ನ ನಿರ್ಧಾರ ತಿಳಿಸಿ ಅಲ್ಲಿಂದ ಹೊರಟು ಬಂದೆ.

8 ವರ್ಷ ಅವಳಿಗಾಗಿ ಕಾದಿದ್ದು ನನಗೆ ಬೇಸರವೇನು ಇಲ್ಲ. ಇತರ ಪ್ರೇಮಿಗಳ ಇತಿಹಾಸದ ಮುಂದೆ ಇದು ಯಾವ ಲೆಕ್ಕಕ್ಕೂ ಬರದು. ಆದರೆ ಪ್ರೀತಿಯನ್ನು ಪಡೆದುಕೊಳ್ಳಬೇಕೆಂಬ ಹಂಬಲ, ಕಳೆದುಕೊಳ್ಳಬಾರದೆಂಬ ಭಯ ಅವಳಲ್ಲಿ ಇಲ್ಲದ್ದನ್ನು ಗಮನಿಸಿ ನಾನು ಅವಳ ಬದುಕಿನಿಂದ ಹೊರನಡೆದೆ.

ಅದೆಷ್ಟು ನಿದ್ರೆಯಿರದ ರಾತ್ರಿಗಳಲ್ಲಿ ನಾನವಳಿಗಾಗಿ ರೋಧಿಸಿದ್ದು, ಗೋಳಾಡಿದ್ದು, ನೆನೆನೆನೆದು ಬಿಕ್ಕಳಿಸಿ ಅತ್ತಿದ್ದು? ಅಯ್ಯೋ… ಆಕೆಯೋ ಬೇರೊಬ್ಬನ ಬೆವರಿನಲ್ಲಿ ನೆನೆದು ಪ್ರೀತಿಯ ಪಾವಿತ್ರತೆಯನ್ನು ನಿಶ್ಶೇಷವಾಗುವಂತೆ ತೊಳಕೊಂಡಳು.


  • ಅನಾಮಿಕ 💯

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading