ರಸ್ತೆಯಲ್ಲಿ ಬಿದ್ದ ಸೆಗಣಿಯನ್ನು ಸಂಗ್ರಹಿಸಲು ಕೆಲವರು ಪುರ ಸಭೆಯಿಂದ ಗುತ್ತಿಗೆ ಹಕ್ಕನ್ನು ಪಡೆದಿದ್ದರು. ಅವರು ಸೆಗಣಿಯಿಂದ ಗೊಬ್ಬರ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ನನ್ನ ಊಹೆ. ಅವರು ನಮಗೆ ಸೆಗಣಿ ಸಂಗ್ರಹಿಸಲು ಬಿಡದೆ ಗದರಿಸಿ ಕಳಿಸುತ್ತಿದ್ದರು. ಆದರೂ ನಾವು ಕದ್ದು ಮುಚ್ಚಿ ಸೆಗಣಿ ಸಂಗ್ರಹ ಮಾಡಿ ಬೆರಣಿ ತಟ್ಟುವುದನ್ನು ಬಿಡಲಿಲ್ಲ. ಲೇಖಕರಾದ ಲಕ್ಷ್ಮಣ್ ಗೊರ್ಲಕಟ್ಟೆ ಅವರ ಸೆಗಣಿ ಕುರಿತು ಹಂಚಿಕೊಂಡಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ದಿನ ಬೆಳಗಾದೊಡನೆಯೇ ಕೈಯಲ್ಲಿ ಬಿದಿರಿನ ಬುಟ್ಟಿ ಹಿಡಿದು ನಾನು ನನ್ನ ಅಣ್ಣ ಪಟ್ಟಣದ ಬೀದಿ ಬೀದಿ ತಿರುಗಿ ದನ ಕರುಗಳು, ಎಮ್ಮೆಗಳು ಹಾಕಿದ ಸೆಗಣಿಯನ್ನು ಕೈಯಿಂದ ಬಾಚಿ ಬುಟ್ಟಿಗೆ ತುಂಬಿಸಿಕೊಳ್ಳುವುದು ನಮ್ಮ ದಿನಚರಿಯಾಗಿತ್ತು.
ಸೆಗಣಿ ಗಟ್ಟಿ ಉಂಡೆ ರೀತಿ ಇದ್ದರೆ ಕೈಯಿಂದ ಎತ್ತಿ ಬುಟ್ಟಿಗೆ ಹಾಕಿಕೊಳ್ಳುವುದು ಸುಲಭವಾಗಿತ್ತು. ಆದರೆ ಕಪ್ಪು ಮೊಸರಿನ ತರಹ ಇರುವ ಸೆಗಣಿಯನ್ನು ಕೈಯಿಂದ ಬಾಚಿ ಬುಟ್ಟಿಗೆ ತುಂಬಿಸಿಕೊಳ್ಳುವುದು ತ್ರಾಸದಾಯಕವಾಗಿತ್ತು. ಅದನ್ನು ಬುಟ್ಟಿಗೆ ತುಂಬಿಸುವಾಗ ನಮ್ಮ ಮೈ, ಕೈ, ಬಟ್ಟೆಗಳಿಗೂ ಸೆಗಣಿ ಪ್ರೋಕ್ಷಣೆ ಆಗಿಬಿಡುತ್ತಿತ್ತು. ಸೆಗಣಿ ಹಾಕುವ ಮುನ್ನ ದನ ಕರುಗಳು ತಮ್ಮ ಬಾಲವನ್ನು ಮೇಲಕ್ಕೆ ಎತ್ತುತ್ತಿದ್ದವು. ಅದನ್ನೇ ಕಾಯುತ್ತಿದ್ದ ನಾವು ಓಡಿ ಹೋಗಿ ನಮ್ಮ ಬುಟ್ಟಿಯನ್ನು ಅವುಗಳ ಬಾಲದ ಕೆಳಗೆ ಹಿಡಿದು ಸೆಗಣಿ ನಮ್ಮ ಬುಟ್ಟಿಗೆ ನೇರವಾಗಿ ಬೀಳುವಂತೆ ಹಿಡಿದಿಟ್ಟು ಕೂಳ್ಳುತ್ತಿದ್ದೆವು.

ಸೆಗಣಿಯಿಂದ ಭರ್ತಿಯಾದ ಮೇಲೆ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಮನೆಯ ಹಾದಿ ಹಿಡಿದು ಬಂದು ಕುರುಳು ತಟ್ಟುವ ಕಾಯಕ ಶುರು ಮಾಡುತ್ತಿದ್ದೆವು. ಸೆಗಣಿಯನ್ನು ಒಂದು ಕೈ ತುಂಬ ತೆಗೆದುಕೊಂಡು ಮನೆಯ ಮುಂದಿದ್ದ ಕಲ್ಲಿನ ಮೇಲೆ ದುಂಡಗಿನ ಬೆರಣಿ ತಟ್ಟಿ ಬಿಸಿಲಿಗೆ ಹರಡು ತ್ತಿದ್ದೆವು. ಕಲ್ಲಿನ ಮೇಲೆ ಜಾಗ ಸಾಲದಾದಾಗ ಸೆಗಣಿ ಉಂಡೆ ಮಾಡಿಕೊಂಡು ಕೈಯಲ್ಲಿ ಹಿಡಿದು ಮನೆಯ ಗೋಡೆಗೆ ಜೋರಾಗಿ ಅಪ್ಪಳಿಸಿದಾಗ ಸೆಗಣಿ ಉಂಡೆ ತನ್ನಷ್ಟಕ್ಕೆ ತಾನೇ ಕುರುಳಿನ (ಬೆರಣಿಯ) ರೂಪ ಪಡೆದು ಗೋಡೆಗೆ ಅಂಟಿಕೊಳ್ಳುತ್ತಿತ್ತು. ಮನೆಯ ಗೋಡೆ ತುಂಬಾ ದುಂಡನೆಯ ಕಪ್ಪು ಸೆಗಣಿಯ ಬೆರಣಿಗಳು ರೂಪುಗೊಳ್ಳುತ್ತಿದ್ದವು. ಕೆಲವು ಸಲ ಒಣ ಹುಲ್ಲು ಅಥವಾ ಭತ್ತದ ತೌಡನ್ನು ಕುರುಳುಗಳ ಮೇಲೆ ಅಂಟಿಸಿ ತಟ್ಟಿ ಒಣಗಿಸುತ್ತಿದ್ದೆವು. ಹುಲ್ಲು ಅಂಟಿದ ಬೆರಣಿಗಳು ಒಲೆಯಲ್ಲಿ ಚೆನ್ನಾಗಿ ಹತ್ತಿ ಉರಿಯುತ್ತಿದ್ದವು. ಬಯಲು ಸೀಮೆಯ ಬಿಸಿಲಿನ ನಮ್ಮ ಊರಿನಲ್ಲಿ ಬೆರಣಿಗಳು ಒಣಗಲು ಎರಡೇ ದಿನಗಳು ಸಾಕಿತ್ತು. ಒಣಗಿ ತಯಾರಾಗುತ್ತಿದ್ದ ಹಾಗೆ ಒಂದೊಂದನ್ನೇ ಕಿತ್ತು ಬಿಡಿಸಿಕೊಂಡು ಮನೆಯ ಬಚ್ಚಲಿನ ಒಲೆಯ ಹತ್ತಿರ ಒಟ್ಟಿ ಇಡುತ್ತಿದ್ದೆವು. ಸ್ನಾನಕ್ಕೆಂದು ನೀರು ಕಾಯಿಸುವಾಗ ಬಚ್ಚಲು ಮನೆಯ ಒಲೆಯಲ್ಲಿ ಕಟ್ಟಿಗೆ ಜೊತೆ ನಾವು ತಟ್ಟಿದ ಬೆರಣಿಗಳು ಹತ್ತಿ ಉರಿದಾಗ ನಮಗೆ ಏನೋ ಒಂದು ದೊಡ್ಡ ಸಾಹಸ ಮಾಡಿದ ತರಹ ಖುಷಿ.
ನಮ್ಮ ಖುಷಿಗೆ ಒಂದು ಅಡ್ಡಿಯೂ ಇತ್ತು. ರಸ್ತೆಯಲ್ಲಿ ಬಿದ್ದ ಸೆಗಣಿಯನ್ನು ಸಂಗ್ರಹಿಸಲು ಕೆಲವರು ಪುರ ಸಭೆಯಿಂದ ಗುತ್ತಿಗೆ ಹಕ್ಕನ್ನು ಪಡೆದಿದ್ದರು. ಅವರು ಸೆಗಣಿಯಿಂದ ಗೊಬ್ಬರ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ನನ್ನ ಊಹೆ. ಅವರು ನಮಗೆ ಸೆಗಣಿ ಸಂಗ್ರಹಿಸಲು ಬಿಡದೆ ಗದರಿಸಿ ಕಳಿಸುತ್ತಿದ್ದರು. ಆದರೂ ನಾವು ಕದ್ದು ಮುಚ್ಚಿ ಸೆಗಣಿ ಸಂಗ್ರಹ ಮಾಡಿ ಬೆರಣಿ ತಟ್ಟುವುದನ್ನು ಬಿಡಲಿಲ್ಲ.
ನಾವು ಸಂಗ್ರಹಿಸಿದ ಸೆಗಣಿ ಬೆರಣಿಗಷ್ಟೇ ಅಲ್ಲದೇ, ನೀರು ಸೇರಿಸಿ ಮನೆಯ ನೆಲವನ್ನು ಸಾರಿಸಲು ಬಳಸುತ್ತಿದ್ದೆವು. ಆಗ ಮನೆಗಳ ನೆಲಗಳು ಸೆಗಣಿ ಸಾರಿಸಿದ ನೆಲಗಳು. ಆ ದಿನಗಳಲ್ಲಿ ಮೊಸಾಯಿಕ್ , ವಿಟ್ರಿಫೈಡ್ ನೆಲ ಕಂಡು ಕೇಳರಿಯದ ಸಂಗತಿಗಳು. ಅನುಕೂಲಸ್ಥರು ತಮ್ಮ ಮನೆಗಳಲ್ಲಿ ನೆಲಕ್ಕೆ “ರೆಡ್ ಆಕ್ಸೈಡ್” ಹಾಕಿಸಿಕೊಂಡಿದ್ದರು. ಕಾಲ ಕ್ರಮೇಣ ಈ ಸೆಗಣಿ ನೆಲಗಳು ಮತ್ತು ರೆಡ್ ಆಕ್ಸೈಡ್ ನೆಲಗಳು ಕಣ್ಮರೆಯಾದವು.

ಆಗ ನಾವು ನೆಲದ ಮೇಲೆ ಕುಳಿತು ಊಟ ಮಾಡುವುದು ಕಟ್ಟು ನಿಟ್ಟಾದ ನಿಯಮ. ಊಟ ಮಾಡಿದ ಜಾಗದಲ್ಲಿ (ಸೆಗಣಿ ಸಾರಿಸಿದ ನೆಲ) ಗೋಮಯ ಮಾಡಲೂ ಸೆಗಣಿಯ ಅವಶ್ಯಕತೆ ಇತ್ತು. ಊಟದ ನಂತರ ಊಟದ ಎಲೆ ಅಥವಾ ತಟ್ಟೆಯನ್ನು ತೆಗೆದ ನಂತರ ಆ ಜಾಗದಲ್ಲಿ ಸ್ವಲ್ಪ ಸೆಗಣಿಯನ್ನು ನೀರಿನಲ್ಲಿ ಕಲೆಸಿ ಸಾರಿಸಿ, “ಗೋಮಯ” ಅಥವಾ ಗೋಮ ಹಾಕುವುದು ಕಡ್ಡಾಯವಿತ್ತು. ಹೀಗೆ ಪ್ರತಿ ನಿತ್ಯ ನಾವು ಸೆಗಣಿಯೊಡನೆ ಸರಸವಾಡುತ್ತಿದ್ದೆವು.
ಇದೀಗ ಡೈನಿಂಗ್ ಟೇಬಲ್ ಮೇಲೆ ತಟ್ಟೆಯಿಟ್ಟು ಅಥವಾ ತೊಡೆಯ ಮೇಲೆ ಊಟದ ತಟ್ಟೆ ಇಟ್ಟುಕೊಂಡು ಟಿವಿ ನೋಡುತ್ತಾ ಊಟ ಮಾಡುವ ಪರಿಪಾಠ ಬಂದು ಬಿಟ್ಟಿದೆ. ಹಾಗಾಗಿ ಇಂದಿನ ಪೀಳಿಗೆಯವರಿಗೆ ಗೋಮ/ಗೋಮಯ ಎನ್ನುವುದೇ ಗೊತ್ತಿಲ್ಲ. ನಾನು ನನ್ನ ಮೊಮ್ಮಗನಿಗೆ ಹೇಳಿದಾಗ ಅವನು ಸೆಗಣಿಯಂತೆ ಮುಖ ಮಾಡಿ ನನ್ನನ್ನು ನೋಡಿ ನಕ್ಕ.
- ಲಕ್ಷ್ಮಣ್ ಗೊರ್ಲಕಟ್ಟೆ
