‘ಕಥಾನಾಯಕ ಕಥೆಯೇ ನಾಯಕ’ ಕೃತಿ ಪರಿಚಯ

ಲೇಖಕರಾದ ಶ್ರೀದೇವಿ ಕೆ.ಹಂದ್ರಾಳ ಅವರ ‘ಕಥಾನಾಯಕ ಕಥೆಯೇ ನಾಯಕ’ ಕೃತಿಯ ಕುರಿತು ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕಥಾನಾಯಕ ಕಥೆಯೇ ನಾಯಕ
ಲೇಖಕರು : ಶ್ರೀದೇವಿ ಕೆ.ಹಂದ್ರಾಳ
ಬೆಲೆ : ೨೫೦
ಪುಟ : xii+204
ಪ್ರಕಾಶನ: ಐಸಿರಿ‌ ಪ್ರಕಾಶನ

ಮದುವೆ ಸ್ವರ್ಗದಲ್ಲೇ ನಡೆದಿರುತ್ತದೆ. ಮೇಡ್ ಫಾರ್ ಇಚ್ ಅದರ್ ಎಂಬುದನ್ನೆಲ್ಲ ನಾವು ಕೇಳಿದ್ದೇವೆ. ಕಥೆಯ ಮೊದಲಿನ ಹಂತದಲ್ಲಿ ರಾಘಣ್ಣನ ಮನೆ ನೋಡಲು ಬಂದ ಹುಡುಗ, ಹುಡುಗಿಯರಿಬ್ಬರಿಗೂ ಮನೆ ಇಷ್ಟವಾದರೆ ಆತನಿಗೆ ಯಾರಿಗೆ ಬಾಡಿಗೆ ನೀಡಬಹುದು ಎಂಬ ಗೊಂದಲನೀಗಿಸಲು ಹೇಗೂ ಮನೆಯಲ್ಲಿ ಎರಡು ಕೋಣೆಗಳಿರುವ ಕಾರಣ ಇಬ್ಬರೂ ಮನೆಬಾಡಿಗೆಗೆ ಬನ್ನಿ ಎಂದು ಹೇಳಿದ್ದೇ ಮುಂದೆ ಅವರಿಬ್ಬರ ಮದುವೆಗೆ ನಾಂದಿಯಾಯಿತೇನೋ.

ಶ್ರೀದೇವಿ ಕೆ.ಹಂದ್ರಾಳರವರ ‘ಕಥಾನಾಯಕ ಕಥೆಯೇ ನಾಯಕ’ ಕಾದಂಬರಿಯಲ್ಲಿ ಕಥೆಯ ನಾಯಕ ಚಲನಚಿತ್ರದಲ್ಲಿ ನಟಿಸಬೇಕು ಎಂಬ ಹಂಬಲದಿಂದ, ಅಪ್ಪನ ಶ್ರೀಮಂತಿಕೆಯನ್ನು ಉಪಯೋಗಿಸದೇ ತನ್ನದೇ ಶ್ರಮದಲ್ಲಿ ತನ್ನದೇ ಪ್ರತಿಭೆಯಿಂದ ಸಿನಿಮಾ ಮಾಡುವ ಪಣತೊಟ್ಟು,ತನ್ನ ಸಮಾನ ಮನಸ್ಸಿನ ಗೆಳೆಯ-ಗೆಳತಿಯರೊಂದಿಗೆ ಸಮಾಜಕ್ಕೆ ಉಪಯುಕ್ತ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಭ್ಯತೆಗೆ ಜಾಸ್ತಿ ಒತ್ತು ನೀಡಿ,ಎಲ್ಲರೂ ಕಥೆಯ ನಾಯಕರೇ ಎಂಬಂತೆ ಪ್ರಾಮುಖ್ಯತೆ ನೀಡುತ್ತಾ ಚಲನಚಿತ್ರವನ್ನು ನಿರ್ಮಿಸಿ ಡಾ.ರಾಜ್ ಕುಮಾರರ ಹಾದಿಯಲ್ಲಿ ಸಾಗುತ್ತಾ ಆದರ್ಶ ನಟನಾಗುವ ಕನಸು ಹೊತ್ತು ನಟನಾಕ್ಷೇತ್ರಕ್ಕೆ ಸೇರುವ ನಾಯಕನ ನಡೆ ಮಾದರೀಯ.

ಶ್ರೀಮಂತರಾಗಿದ್ದರೂ ಸರಳತೆಯನ್ನೇ ನೆಚ್ಚಿಕೊಂಡಿರುವ ನಾಯಕನ‌‌ ಕುಟುಂಬದವರ ಪರಸ್ಪರ ಪ್ರೀತಿ,ಒಬ್ಬರಿಗೊಬ್ಬರು ಗೌರವ ನೋಡಿಕೊಳ್ಳುವ ರೀತಿ,ಕೆಲಸಗಾರರಿದ್ದರೂ ಮನೆಯಲ್ಲಿ ಮಗ,ಅಳಿಯ ಇರುವಾಗ ವ್ಹೀಲ್ ಚೇರ್ ಮೇಲಿರುವ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದೇ.ರಾತ್ರಿ ೮ಗಂಟೆಯೊಳಗೆ ಮನೆಗೆ ಬಂದು ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವ,ಮನೆಯವರೊಂದಿಗೆ ಕಾಲಕಳೆಯುವ ಅವರ ನಿರ್ಧಾರ, ಮನೆಯಲ್ಲಿದ್ದು ದುಡಿಯುವ ಸದಸ್ಯರಿಗಾಗಿ ಒಳಿತು ಬಯಸುವವರೊಂದಿಗೆ ಕಾಲಕಳೆಯುವುದು ನಮ್ಮ ಕರ್ತವ್ಯ ಎಂದು ಎಚ್ಚರಿಸುವ ತಂದೆಯ ಮನಸು ನಮ್ಮನ್ನು ಸೆಳೆಯುತ್ತದೆ.

ಒಂದೇ ಮನೆಯಲ್ಲಿದ್ದರೂ, ಇಬ್ಬರೂ ಸಂಬಂಧಿಗಳೇ ಎಂದು ತಿಳಿಯಲು ರಾಕೇಶ್ ರಶ್ಮಿಯ ಫೋನ್ ನಲ್ಲಿ ನೋಡಿದ ಅತ್ತೆಯ ಚಿತ್ರ ಕಾರಣವಾಯಿತು ಅಂದುಕೊಂಡರೆ,ಅದನ್ನು ತಿಳಿಯದೇ ತಾನು‌ ರಾಕೇಶ್ ನನ್ನು ಪ್ರೀತಿಸುವ ವಿಷಯವನ್ನು ಅವನ‌ ಮುಂದೆ ಹೇಳಿದಾಗ, ಇಬ್ಬರ ಮನಸು ಬೆಸೆಯುವಂತಾಯಿತೇ?! ನಾಯಕಿಯಾಗಿ ಸರಳತೆ, ಮದುವೆಗೆ ಬ್ಯೂಟಿಷಿಯನ್ ಸಹಾಯವಿಲ್ಲದೇ ಅಲಂಕರಿಸಿಕೊಂಡ ಅವಳ‌ ಚೆಲುವು, ಮನೆಯವರೊಂದಿಗೆ ಸೇರಿ ಮನೆ ಅಳಿಯನನ್ನು ತನ್ನ ಅಣ್ಣನ ಸ್ಥಾನ‌ನೀಡುವ, ಹಿಂದೆ ನೆಲೆಸಿದ ಮನೆಯೊಡೆಯನಿಗೆ ದೊಡ್ಡಪ್ಪನ ಸ್ಥಾನ ನೀಡುವ ಅವಳ‌ ಹಿರಿಮೆ, ಮುಂದೆ ಕಂಪನಿಯ ಪಾರ್ಟನರ್ ಆಗಿ ಲಂಡನಿನಲ್ಲಿ ಹೊಟೆಲ್ ನಿರ್ಮಿಸಲು ಭಾರತೀಯ ಸಂಸ್ಕೃತಿಯ ಪ್ರತೀಕದಂತೆ ಅರಮನೆಯಂತೆ ಹೊಟೆಲ್ ತಯಾರಿಯಲ್ಲಿ ತಮ್ಮ‌ಹೊಸ ಹೊಸ ಐಡಿಯಾಗಳನ್ನು ನೀಡಿ ಆ ಹೊಟೆಲ್ ವ್ಯವಹಾರದ ಯಶಸ್ಸಿಗೆ ಕಾರಣವಾಗುವ ಅವಳ‌ ಬುದ್ಧಿ ಕ್ಷಮತೆ ಹೀಗೆ ನಾಯಕಿಯ ಪಾತ್ರ ನಮ್ಮನ್ನು ಆವರಿಸುತ್ತದೆ.

ನವೀನ್ ಅನಾಥ ಹುಡುಗನಾದರೂ, ವಿದ್ಯಾಭ್ಯಾಸದಲ್ಲಿ ಮುಂದಿದ್ದು,ಮುಂದೆ ನಾಯಕನ‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿ,ಉತ್ತಮ‌ಕಾರ್ಯನಿರ್ವಹಣೆ ಮಾಡುತ್ತಾ,ಅವರ ವ್ಯವಹಾರ ವೃದ್ದಿಗೆ ಕಾರಣವಾಗುತ್ತಾ ನಾಯಕನಿಗೆ ಉತ್ತಮ ಸ್ನೇಹಿತನಾಗಿ,ಮುಂದೆ ಮನೆಯ ಅಳಿಯನಾಗಿ, ನಾಯಕಿಯನ್ನು ಮಸುವೆಯಲ್ಲಿ ಧಾರೆಯೆರೆಯುವ ಪಾತ್ರ ನಮ್ಮನ್ನು ಕಾಡುತ್ತದೆ.ಕಾಲೇಜಿನಲ್ಲಿ‌ ಪ್ರಾಂಶುಪಾಲರು ರಶ್ಮಿಗೆ ಕೆಲಸಕ್ಕೆ ಸೇರಿ ಒಂದು ವರ್ಷದೊಳಗೆ ಬಿಟ್ಟರೆ ೫೦,೦೦೦ ನೀಡಬೇಕು ಎಂದಾಗ ಅವರ ನಡೆಯನ್ನು ಪ್ರಬಲವಾಗಿ ವಿರೋಧಿಸಿ ನಮ್ಮ‌ ಸಂಸ್ಥೆಯಲ್ಲಿ ಈ‌ ರೀತಿ ಮೋಸ ಮಾಡುವುದು ತಪ್ಪು ಎಂದು ಖಂಡನೆ ಮಾಡುವ ಅವರ ಗುಣ ಮಾದರೀಯ.

ಅಡುಗೆ ಮನೆಗೆ ಕಾಲೇ ಇಡದ ರಾಕೇಶ್, ರಶ್ಮಿಗೆ ಹೊಟ್ಟೆ ನೋವೆಂಬ ಕಾರಣಕ್ಕೆ ಅವಳಿಗೆ ಕಷಾಯ ಮಾಡಿಕೊಟ್ಟು, ಪಾತ್ರೆ ತೊಳೆದು, ಮನೆಕೆಲಸ ಮಾಡಿಟ್ಟು ರಶ್ಮಿಗೆ ಸಹಾಯ ಮಾಡುವ ನಾಯಕನ ಗುಣ ಮೆಚ್ಚಬೇಕಾದದ್ದೇ.ಹೆಣ್ಣಿನ ಮನಸ್ಸನ್ನು ಅರಿತುಕೊಂಡು,ಅವಳಿಗೆ ಬೇಕಾದಾಗ ಅದರಂತೆ ಸಹಾಯ ಮಾಡುವ ಪ್ರೀತಿಯ ಮನಸು ಅವನದು.ಹೊಟೆಲ್ ವ್ಯವಹಾರ ಅವಳಿಗೆ ಹೊಸತಾದರೂ ಅದರ ಕುರಿತು ಅವಳು ಅರಿತು,ಅವಳ ಅಭಿಪ್ರಾಯ ಹೇಳಲು ಅವಳಿಗೆ ಸಹಕಾರ ನೀಡುವ ಅವನ ಗುಣ ಶ್ಲಾಘನೀಯ.

ಮದುವೆಯಲ್ಲಿ ಸಂಬಂಧಿ, ಊರವರನ್ನೆಲ್ಲ ಕರೆದು ಆಡಂಬರದ ಪ್ರದರ್ಶನ ಮಾಡುವ ಬದಲು,ಅವರು ನಡೆಸುತ್ತಿರುವ ಅನಾಥಾಶ್ರಮ,ಹೊಟೆಲ್ ಸಿಬ್ಬಂದಿಯವರನ್ನೆಲ್ಲ ಆಹ್ವಾನಿಸಿ,ಅವರಿಗೆ ಹೊಸಬಟ್ಟೆ,ಬೋನಸ್ ಕೊಟ್ಟು ಅವರ ಹೊಟೆಲ್ ನಲ್ಲೇ ರಿಸೆಪ್ಷನ್,ಮನೆಯಲ್ಲೇ ಸರಳ ಮದುವೆ ಆಚರಿಸಿಕೊಳ್ಳುವ ಆಚರಣೆ ಅನುಕರಣೀಯ.

ಕೋಪದಲ್ಲಿ ಕೊಯ್ದ ಮೂಗು,ಕೋಪ‌ಆರಿದ ಮೇಲೆ ಸಿಗುವುದೇ? ಎಂಬಂತೆ ಸರಸು ಒಂದು ಕ್ಷಣ ಕೋಪಗೊಂಡು ಅಣ್ಣನ ಮನೆಯಲ್ಲಿ ಮಾಡಿದ ಗಲಾಟೆಯಿಂದ ಅತ್ತಿಗೆಯ ಅಬಾರ್ಷನ್,ನಂತರ ಕಾಲಿನ ಸ್ವಾಧೀನ ಕಳೆದುಕೊಳ್ಳುವಂತಾಯಿತು.ಆದರೂ ಇಬ್ಬರ ಮನಸಲ್ಲೂ ನೆಲೆಸಿರುವ ಕ್ಷಮಾಗುಣದಿಂದ ಬೇಗ ಒಬ್ಬರಿಗೊಬ್ಬರು ಕ್ಷಮಿಸಿಕೊಂಡು ಒಂದಾದರೆ ಅದಕ್ಕಿಂತ ಉತ್ತಮ‌ ಭಾಗ್ಯವುಂಟೆ!ಎಲ್ಲರೂ ಏನಾಗುವುದೋ ಎಂತಹ ಗಲಾಟೆಯಾಗುವುದೋ ಎಂಬೆಲ್ಲ‌ ಸಂಶಯದಿಂದಿದ್ದರೆ ಏನು ನಡೆದಿಲ್ಲವೆಂಬಂತೆ ಇಬ್ಬರ ಕುಟುಂಬವು ಒಂದಾದರೆ ಒಳ್ಳೆಯದೇ ಆಯಿತಲ್ಲವೇ?

ಹೀಗೆ ಪ್ರತಿ ಪಾತ್ರವೂ ನಮ್ಮನ್ನು ಕಾಡುತ್ತಾ,ಪ್ರತಿ ಪಾತ್ರವೂ ಕಥೆಯ ನಾಯಕರಂತೆ ನಿಭಾಯಿಸುತ್ತಾ ಸಾಗುವ ಈ‌ ಕಾದಂಬರಿ ಓದಿ ಮನಸ್ಸು ಪ್ರಫುಲ್ಲವಾಗುವುದರಲ್ಲಿ ಸಂಶಯವಿಲ್ಲ.ರಾಕೇಶ್,ರಶ್ಮಿ,ನವೀನ್,ರೇಖಾ,ಅವರ ತಂದೆ,ತಾಯಿ,ಅತ್ತೆ ಹೀಗೆ ಪ್ರತಿ ಪಾತ್ರವೂ ಅವರವರ ಆದರ್ಶಮಯ ಗುಣದೊಂದಿಗೆ ನಮ್ಮೊಂದಿಗೆ ಸಾಗುತ್ತಾರೆ.ನೀವೂ ಒಮ್ಮೆ‌ ಓದಿ ನೀವು ಕಥಾನಾಯಕರಾಗಬಹುದು.


  • ಸಾವಿತ್ರಿ ಶ್ಯಾನುಭಾಗ – ಪುಸ್ತಕ ವಿಮರ್ಶಕರು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×