ಅಖಂಡ ಧಾರವಾಡ ಜಿಲ್ಲೆಯ ಗ್ರಾಮೀಣ ಕೃಷಿ ಸಂಸ್ಕೃತಿಯಲ್ಲಿ ಸೀಗೆ ಹುಣ್ಣಿಮೆಗೆ ವಿಶಿಷ್ಟ ಸ್ಥಾನವಿದೆ. ಈ ದಿನ ರೈತರು ತಮ್ಮ ಹೊಲಗಳಿಗೆ ತೆರಳಿ, ಬೆಳೆದು ನಿಂತಿರುವ ಪೈರಿಗೆ ಪೂಜೆ ಸಲ್ಲಿಸುತ್ತಾರೆ. ಇದನ್ನು ‘ಭೂಮಿತಾಯಿಗೆ ಸೀಮಂತ ಮಾಡುವುದು’ ಎಂದೂ ಕರೆಯುತ್ತಾರೆ. ಸೀಗೆ ಹುಣ್ಣಿಮೆಯ ದಿನದ ವಿಶೇಷತೆಯ ಕುರಿತು ಡಾ. ನದಾಫ ಎಚ್.ಎಚ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಳೆ ಬಂದು ಮಣ್ಣು ತೋಯುತ್ತದೆ.
ಮಣ್ಣಿನ ಎದೆಯಲ್ಲಿ ಬೀಜ ಮೊಳೆಯುತ್ತದೆ.
ಮೊಳಕೆ ಹಸಿರಾಗುತ್ತದೆ.
ಹಸಿರು ಪೈರು ತೆನೆ ಕಟ್ಟುತ್ತದೆ.
ತೆನೆಯೊಳಗೆ ಕಾಳು ತುಂಬಿಕೊಳ್ಳುತ್ತದೆ.
ಈ ದೃಶ್ಯ ರೈತನ ಪಾಲಿಗೆ ಕೇವಲ ಕೃಷಿಯ ಬೆಳವಣಿಗೆಯಲ್ಲ; ಅದು ಭೂಮಿತಾಯಿಯ ಗರ್ಭದಲ್ಲಿ ನಡೆಯುವ ಜೀವಸೃಷ್ಟಿಯ ಅದ್ಭುತ ಪ್ರಕ್ರಿಯೆ. ಈ ಜೀವಸೃಷ್ಟಿಗೆ ನಮಸ್ಕರಿಸಿ, ತನ್ನನ್ನು ಸಾಕುತ್ತಿರುವ ಮಣ್ಣಿಗೆ ಕೃತಜ್ಞತೆ ಸಲ್ಲಿಸುವ ಒಂದು ಅಪೂರ್ವ ಜನಪದ ಆಚರಣೆಯೇ ಸೀಗೆ ಹುಣ್ಣಿಮೆ.
ಅಖಂಡ ಧಾರವಾಡ ಜಿಲ್ಲೆಯ ಗ್ರಾಮೀಣ ಕೃಷಿ ಸಂಸ್ಕೃತಿಯಲ್ಲಿ ಸೀಗೆ ಹುಣ್ಣಿಮೆಗೆ ವಿಶಿಷ್ಟ ಸ್ಥಾನವಿದೆ. ಈ ದಿನ ರೈತರು ತಮ್ಮ ಹೊಲಗಳಿಗೆ ತೆರಳಿ, ಬೆಳೆದು ನಿಂತಿರುವ ಪೈರಿಗೆ ಪೂಜೆ ಸಲ್ಲಿಸುತ್ತಾರೆ. ಇದನ್ನು ‘ಭೂಮಿತಾಯಿಗೆ ಸೀಮಂತ ಮಾಡುವುದು’ ಎಂದೂ ಕರೆಯುತ್ತಾರೆ. ಗರ್ಭಿಣಿ ಹೆಣ್ಣಿಗೆ ಸೀಮಂತ ಮಾಡುವಂತೆ, ತನ್ನ ಒಡಲಲ್ಲಿ ಬೆಳೆ ಎಂಬ ಜೀವವನ್ನು ಹೊತ್ತು ನಿಂತಿರುವ ಭೂಮಿತಾಯಿಗೂ ಸೀಮಂತ ಮಾಡುವ ಕಲ್ಪನೆ ಇಲ್ಲಿ ರೂಪುಗೊಂಡಿದೆ.
ಇದು ಒಂದು ಆಚರಣೆ ಮಾತ್ರವಲ್ಲ; ಮಣ್ಣು ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಜನಪದ ಅಭಿವ್ಯಕ್ತಿ. ಭೂಮಿ ತಾಯಿ, ಬೆಳೆ ಮಗು
ಜನಪದ ಬದುಕಿನಲ್ಲಿ ಪ್ರಕೃತಿಯನ್ನು ಮನುಷ್ಯನಿಂದ ಪ್ರತ್ಯೇಕವಾಗಿ ನೋಡುವ ಪರಿಪಾಠ ಕಡಿಮೆ. ಭೂಮಿ ತಾಯಿ, ನದಿ ತಾಯಿ, ಗೋವು ತಾಯಿ, ತುಳಸಿ ತಾಯಿ ಎಂಬ ಮಾತುಗಳು ಕೇವಲ ಗೌರವ ಸೂಚಕ ಪದಗಳಲ್ಲ; ಅವುಗಳ ಹಿಂದೆ ಜೀವನದರ್ಶನವಿದೆ.
ರೈತನಿಗೆ ಭೂಮಿ ಎಂದರೆ ಹೊಲದ ಗಡಿ ಗುರುತಿಸಿದ ಒಂದು ತುಂಡು ಜಾಗವಲ್ಲ. ಅವನ ಮನೆಯ ಅನ್ನ, ಮಕ್ಕಳ ಭವಿಷ್ಯ, ಕುಟುಂಬದ ಬದುಕು ಮತ್ತು ಸಮಾಜದ ಆಹಾರ ಭದ್ರತೆ—ಎಲ್ಲವೂ ಭೂಮಿಯೊಂದಿಗೆ ಬೆಸೆದುಕೊಂಡಿವೆ. ಆದ್ದರಿಂದಲೇ ಬೆಳೆದು ನಿಂತ ಪೈರನ್ನು ಕಂಡಾಗ ರೈತನ ಮನಸ್ಸಿನಲ್ಲಿ ಕೇವಲ ಆರ್ಥಿಕ ಲೆಕ್ಕಾಚಾರ ಮೂಡುವುದಿಲ್ಲ. ಅದರೊಂದಿಗೆ ಒಂದು ಭಾವನಾತ್ಮಕ ಬಂಧವೂ ಮೂಡುತ್ತದೆ. ಆ ಬಂಧವೇ ಸೀಗೆ ಹುಣ್ಣಿಮೆಯ ಆಚರಣೆಯಲ್ಲಿ ಪೂಜೆಯ ರೂಪ ಪಡೆಯುತ್ತದೆ.
ಪಂಚ ಪಾಂಡವರು ಮತ್ತು ಕರ್ಣ: ಕಲ್ಲಿನಲ್ಲಿ ಜೀವಂತವಾಗುವ ಪೌರಾಣಿಕ ಸ್ಮೃತಿ
ಸೀಗೆ ಹುಣ್ಣಿಮೆಯಂದು ಹೊಲದಲ್ಲಿ ಸಣ್ಣ ಸಣ್ಣ ಐದು ಬೆನಚು ಕಲ್ಲುಗಳನ್ನು ಇಟ್ಟು ಅವುಗಳನ್ನು ಪಾಂಡವರ ಪ್ರತೀಕಗಳೆಂದು ಭಾವಿಸಲಾಗುತ್ತದೆ. ಅವುಗಳ ಹಿಂದೆ ಮತ್ತೊಂದು ಕಲ್ಲನ್ನು ಇಟ್ಟು ಅದನ್ನು ಕರ್ಣನ ಪ್ರತೀಕವೆಂದು ಪೂಜಿಸಲಾಗುತ್ತದೆ. ಈ ಕಲ್ಲುಗಳಿಗೆ ವಿಭೂತಿ ಮತ್ತು ಚಂದ್ರಬಂಡಾರ ಹಚ್ಚಲಾಗುತ್ತದೆ. ನಂತರ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ.
ಇಲ್ಲಿ ಒಂದು ಮಹತ್ವದ ಜನಪದ ಅಂಶವನ್ನು ಗುರುತಿಸಬಹುದು. ಲಿಖಿತ ಪುರಾಣ ಅಥವಾ ಮಹಾಕಾವ್ಯದಲ್ಲಿರುವ ಪಾಂಡವರು ಮತ್ತು ಕರ್ಣರು ಗ್ರಾಮೀಣ ಜನರ ಬದುಕಿನಲ್ಲಿ ಸ್ಥಳೀಯ ಆಚರಣೆಯ ಪ್ರತೀಕಗಳಾಗಿ ಪುನರ್ಸೃಷ್ಟಿಯಾಗುತ್ತಾರೆ. ಅಂದರೆ ಜನಪದ ಸಂಸ್ಕೃತಿ ಪುರಾಣವನ್ನು ಕೇವಲ ಕೇಳುವುದಿಲ್ಲ; ಅದನ್ನು ತನ್ನ ಬದುಕಿಗೆ ತಕ್ಕಂತೆ ಅನುಭವಿಸುತ್ತದೆ, ರೂಪಾಂತರಿಸುತ್ತದೆ ಮತ್ತು ಆಚರಣೆಯಾಗಿ ಉಳಿಸಿಕೊಳ್ಳುತ್ತದೆ.
ನೈವೇದ್ಯದಲ್ಲಿ ಕೃಷಿ ಸಂಸ್ಕೃತಿಯ ಸಂಪೂರ್ಣ ಚಿತ್ರ
ಸೀಗೆ ಹುಣ್ಣಿಮೆಯ ನೈವೇದ್ಯ ಪದ್ಧತಿಯೇ ಈ ಆಚರಣೆಯ ಅತ್ಯಂತ ಸೊಗಸಾದ ಭಾಗಗಳಲ್ಲಿ ಒಂದು. ಕರಿಕಡಬು, ಕರ್ಚಿಕಾಯಿ, ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಎಣ್ಣಿ ಹೋಳಿಗೆ, ಗಾರಿಗಿ, ಪುಂಡಿ ಪಲ್ಲೆ, ಉಂಡೆಗಡುಬು ಮೊದಲಾದ ಸಿಹಿ ಪದಾರ್ಥಗಳೊಂದಿಗೆ ಸಜ್ಜಿರೊಟ್ಟಿ, ಜೋಳದ ರೊಟ್ಟಿ, ಚಪಾತಿ, ವಿವಿಧ ಬಗೆಯ ಕಾಳು ಮತ್ತು ತರಕಾರಿ ಪಲ್ಲೆಗಳು, ಮೊಸರನ್ನ, ಪಲಾವು ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ.
ಈ ಆಹಾರಪಟ್ಟಿಯನ್ನು ಕೇವಲ ರುಚಿಕರ ತಿನಿಸುಗಳ ಪಟ್ಟಿಯೆಂದು ನೋಡುವಂತಿಲ್ಲ. ಇದು ಉತ್ತರ ಕರ್ನಾಟಕದ ಆಹಾರ ಜನಪದದ ಜೀವಂತ ದಾಖಲೆ. ಜೋಳ, ಸಜ್ಜೆ, ಎಳ್ಳು, ಕಡಲೆಕಾಯಿ, ವಿವಿಧ ಕಾಳುಗಳು, ತರಕಾರಿಗಳು—ಇವೆಲ್ಲವೂ ಗ್ರಾಮೀಣ ಕೃಷಿ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿವೆ. ಹೀಗಾಗಿ ಸೀಗೆ ಹುಣ್ಣಿಮೆಯ ನೈವೇದ್ಯದಲ್ಲಿ ಆ ಪ್ರದೇಶದ ಸ್ಥಳೀಯ ಕೃಷಿ, ಆಹಾರ ಪದ್ಧತಿ ಮತ್ತು ಅಡುಗೆ ಸಂಸ್ಕೃತಿ ಒಂದೇ ಕಡೆ ಕಾಣಿಸಿಕೊಳ್ಳುತ್ತದೆ.
ಚರಗಾ ಪ್ರಕೃತಿಯೊಂದಿಗೆ ಆಹಾರ ಹಂಚಿಕೊಳ್ಳುವ ಮನಸ್ಸು
ಪೂಜೆಯ ನಂತರ ನೈವೇದ್ಯದ ಆಹಾರವನ್ನು ಹೊಲದ ತುಂಬಾ ಚರಗಾವಾಗಿ ಚೆಲ್ಲುವ ಪದ್ಧತಿ ಇದೆ.ಇದು ಅತ್ಯಂತ ಅರ್ಥಪೂರ್ಣ ಜನಪದ ಸಂಕೇತ. ಮನುಷ್ಯನು ತನ್ನ ಆಹಾರವನ್ನು ತನ್ನೊಬ್ಬನೇ ಅನುಭವಿಸದೆ, ಹೊಲದ ಜೀವಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾನೆ. ಪಕ್ಷಿ, ಕೀಟ, ಸಣ್ಣ ಜೀವಿಗಳು ಸೇರಿದಂತೆ ಪ್ರಕೃತಿಯ ಅನೇಕ ಜೀವಿಗಳ ಬದುಕು ಕೃಷಿಯೊಂದಿಗೆ ಸಂಬಂಧ ಹೊಂದಿದೆ ಎಂಬ ಅರಿವು ಜನಪದ ಮನಸ್ಸಿನಲ್ಲಿ ಸಹಜವಾಗಿಯೇ ಇತ್ತು. ಇದನ್ನು ಆಧುನಿಕ ಪರಿಸರಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಜೀವವೈವಿಧ್ಯ ಮತ್ತು ಸಹಜೀವನದ ಜನಪದ ಕಲ್ಪನೆಯೊಂದು ಇಲ್ಲಿ ಗೋಚರಿಸುತ್ತದೆ. ಇದರಿಂದ ಜನಪದ ಆಚರಣೆಗಳನ್ನು ಕೇವಲ ಮೂಢನಂಬಿಕೆಗಳೆಂದು ತಳ್ಳಿಹಾಕುವ ಮೊದಲು, ಅವುಗಳೊಳಗಿನ ಸಾಮಾಜಿಕ ಮತ್ತು ಪರಿಸರಾತ್ಮಕ ಅರ್ಥಗಳನ್ನು ಅರ್ಥಮಾಡಿಕೊಳ್ಳಬೇಕೆಂಬ ಅಗತ್ಯವೂ ಸ್ಪಷ್ಟವಾಗುತ್ತದೆ.
ಕರ್ಣನ ಯಡಿ ಮಣ್ಣಿಗೆ ಮರಳುವ ಅರ್ಪಣೆ
ಕರ್ಣನಿಗೆ ನೈವೇದ್ಯ ಮಾಡಿದ ಯಡಿಯನ್ನು ಹೊಲದ ನೆಲದಲ್ಲಿಯೇ ಹೂಳುವುದು ಈ ಆಚರಣೆಯ ಮತ್ತೊಂದು ವಿಶಿಷ್ಟ ಅಂಶ. ಭೂಮಿಯಿಂದ ಪಡೆದು, ಭೂಮಿಗೇ ಅರ್ಪಿಸುವುದು ಎಂಬ ತಾತ್ತ್ವಿಕ ಅರ್ಥವನ್ನು ಇದರಲ್ಲಿ ಕಾಣಬಹುದು.ಮಣ್ಣಿನಲ್ಲಿ ಬೀಜ ಬಿತ್ತಲಾಗುತ್ತದೆ. ಮಣ್ಣಿನಿಂದ ಬೆಳೆ ಪಡೆಯಲಾಗುತ್ತದೆ. ಆ ಬೆಳೆಯಿಂದ ಆಹಾರ ತಯಾರಿಸಲಾಗುತ್ತದೆ. ಪೂಜೆಯ ನಂತರ ಅದರ ಒಂದು ಭಾಗವನ್ನು ಮತ್ತೆ ಮಣ್ಣಿನ ಮಡಿಲಿಗೇ ಒಪ್ಪಿಸಲಾಗುತ್ತದೆ. ಈ ಚಕ್ರದಲ್ಲಿ ಮಣ್ಣು–ಬೀಜ–ಬೆಳೆ–ಆಹಾರ–ಮಣ್ಣು ಎಂಬ ಜೀವನಚಕ್ರದ ಸಂಕೇತವನ್ನು ಗುರುತಿಸಬಹುದು. ಇದು ವೈಜ್ಞಾನಿಕವಾಗಿ ನೇರವಾದ ಕೃಷಿ ತಂತ್ರಜ್ಞಾನವಲ್ಲದಿದ್ದರೂ, ಮಣ್ಣಿನೊಂದಿಗೆ ಮನುಷ್ಯನ ಪರಸ್ಪರ ಅವಲಂಬನೆಯ ಕುರಿತು ಜನಪದ ಮನಸ್ಸು ಹೊಂದಿದ್ದ ಆಳವಾದ ಅರಿವನ್ನು ಸೂಚಿಸುತ್ತದೆ.
ದೇವರಮರ ಪ್ರಕೃತಿಯ ಪವಿತ್ರ ರೂಪ
ಹೊಲದ ಅಕ್ಕಪಕ್ಕದಲ್ಲಿ ದೇವಸ್ಥಾನ ಅಥವಾ ದೇವರಮರವಿದ್ದರೆ ಅಲ್ಲಿಯೂ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.ಗ್ರಾಮೀಣ ಪ್ರದೇಶಗಳಲ್ಲಿ ದೇವರಮರಗಳು ಕೇವಲ ಮರಗಳಲ್ಲ. ಅವು ಸಮುದಾಯದ ಸ್ಮೃತಿ, ನಂಬಿಕೆ ಮತ್ತು ಪರಿಸರದ ಭಾಗ. ಒಂದು ಮರವನ್ನು ದೇವರೊಂದಿಗೆ ಜೋಡಿಸಿ ಪವಿತ್ರಗೊಳಿಸುವುದರಿಂದ ಅದನ್ನು ಕಡಿದುಹಾಕುವುದರಿಂದ ಜನರು ಹಿಂದೆ ಸರಿಯುತ್ತಾರೆ. ಹೀಗಾಗಿ ಧಾರ್ಮಿಕ ನಂಬಿಕೆಯ ಮೂಲಕವೂ ಪ್ರಕೃತಿಯ ಸಂರಕ್ಷಣೆ ಸಾಧ್ಯವಾಗುತ್ತಿತ್ತು. ಈ ದೃಷ್ಟಿಯಿಂದ ದೇವರಮರ ಪರಂಪರೆಯನ್ನು ಜನಪದ ಪರಿಸರ ಸಂರಕ್ಷಣೆಯ ಒಂದು ಸಾಂಸ್ಕೃತಿಕ ರೂಪವೆಂದು ಅಧ್ಯಯನ ಮಾಡಬಹುದು.
ಸೀಗೆ ಹುಣ್ಣಿಮೆ ದುಡಿಮೆಯ ಗೌರವದ ಹಬ್ಬ
ಸೀಗೆ ಹುಣ್ಣಿಮೆಯ ವಿಶೇಷತೆಯೆಂದರೆ ಪೂಜೆ ಮಾಡಿದ ನಂತರ ರೈತನು ತನ್ನ ಸಂತೋಷವನ್ನು ತನ್ನ ಕುಟುಂಬದೊಳಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಬಂಧು-ಬಾಂಧವರು, ಸ್ನೇಹಿತರು, ಹಿತೈಷಿಗಳು, ಒಡನಾಡಿಗಳು ಮತ್ತು ತನ್ನ ಜಮೀನಿನಲ್ಲಿ ದುಡಿಯುವ ಕೂಲಿಕಾರರನ್ನು ಕರೆದು ಒಟ್ಟಿಗೆ ಊಟ ಮಾಡಿಸುತ್ತಾನೆ. ಇಲ್ಲಿ ‘ಬೆಳೆ ನನ್ನದು’ ಎಂಬ ವೈಯಕ್ತಿಕ ಭಾವಕ್ಕಿಂತ ‘ಬೆಳೆ ನಮ್ಮದು’ ಎಂಬ ಸಾಮೂಹಿಕ ಭಾವನೆ ಮುಖ್ಯವಾಗುತ್ತದೆ.
ಒಂದು ಬೆಳೆ ರೈತನೊಬ್ಬನ ಶ್ರಮದಿಂದ ಮಾತ್ರ ಸಿದ್ಧವಾಗುವುದಿಲ್ಲ. ಹೊಲ ಹದಗೊಳಿಸುವವನು, ಬಿತ್ತುವವನು, ಕಳೆ ತೆಗೆಯುವವನು, ನೀರು ಹಾಯಿಸುವವನು, ಕೊಯ್ಲು ಮಾಡುವವನು—ಅನೇಕ ಕೈಗಳ ಬೆವರು ಅದರಲ್ಲಿ ಬೆರೆತಿರುತ್ತದೆ. ಆದ್ದರಿಂದ ಸೀಗೆ ಹುಣ್ಣಿಮೆಯ ಸಾಮೂಹಿಕ ಭೋಜನವು ಕೃಷಿ ದುಡಿಮೆಯ ಸಮೂಹ ಸ್ವರೂಪವನ್ನು ಗೌರವಿಸುವ ಒಂದು ಜನಪದ ಸಾಮಾಜಿಕ ಆಚರಣೆಯಾಗಿದೆ.
ಮಹಿಳೆಯರ ಪಾತ್ರ ಮತ್ತು ಆಹಾರ ಪರಂಪರೆ
ಸೀಗೆ ಹುಣ್ಣಿಮೆಯಂತಹ ಕೃಷಿ ಆಚರಣೆಗಳಲ್ಲಿ ಮಹಿಳೆಯರ ಪಾತ್ರವನ್ನು ಕಡೆಗಣಿಸಲಾಗದು. ಮನೆಯಲ್ಲಿನ ವಿವಿಧ ಬಗೆಯ ನೈವೇದ್ಯ ಪದಾರ್ಥಗಳನ್ನು ಸಿದ್ಧಪಡಿಸುವುದು, ಪೂಜೆಯ ಸಿದ್ಧತೆ, ಆಹಾರ ಸಂಸ್ಕರಣೆಯ ಜ್ಞಾನ ಮತ್ತು ಕುಟುಂಬ–ಸಮುದಾಯದ ಆತಿಥ್ಯ—ಇವೆಲ್ಲವೂ ಮಹಿಳೆಯರ ಜನಪದ ಜ್ಞಾನಕ್ಕೆ ಸಂಬಂಧಿಸಿದವು. ಹೀಗಾಗಿ ಸೀಗೆ ಹುಣ್ಣಿಮೆಯ ಅಧ್ಯಯನವು ಕೇವಲ ರೈತನ ಆಚರಣೆಯ ಅಧ್ಯಯನವಲ್ಲ; ಗ್ರಾಮೀಣ ಮಹಿಳೆಯರ ಆಹಾರ ಜ್ಞಾನ ಮತ್ತು ಸಾಂಸ್ಕೃತಿಕ ಪಾತ್ರದ ಅಧ್ಯಯನವೂ ಹೌದು.
ಕೃಷಿ ವಿಜ್ಞಾನ ಮತ್ತು ಜನಪದ ಜ್ಞಾನ
ಆಧುನಿಕ ವಿಜ್ಞಾನ ಇಂದು ಮಣ್ಣಿನ ಆರೋಗ್ಯ, ಜೀವವೈವಿಧ್ಯ, ಸ್ಥಳೀಯ ಆಹಾರ, ಪರಿಸರ ಸಮತೋಲನ, ಸುಸ್ಥಿರ ಕೃಷಿ ಮುಂತಾದ ವಿಚಾರಗಳಿಗೆ ಮಹತ್ವ ನೀಡುತ್ತಿದೆ. ನಮ್ಮ ಜನಪದ ಆಚರಣೆಗಳು ಇವೆಲ್ಲವನ್ನೂ ವೈಜ್ಞಾನಿಕ ಪದಗಳಲ್ಲಿ ವಿವರಿಸದಿದ್ದರೂ, ಅವುಗಳೊಳಗೆ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಕೆಲವು ಮೂಲಭೂತ ಮೌಲ್ಯಗಳು ಅಡಕವಾಗಿವೆ.
ಭೂಮಿಯನ್ನು ತಾಯಿಯಾಗಿ ನೋಡುವುದು—ಮಣ್ಣಿನ ಬಗ್ಗೆ ಗೌರವ ಬೆಳೆಸುತ್ತದೆ. ಬೆಳೆದು ನಿಂತ ಪೈರಿಗೆ ಪೂಜೆ ಸಲ್ಲಿಸುವುದು—ಬೆಳೆಯ ಮೌಲ್ಯವನ್ನು ಮನಸ್ಸಿನಲ್ಲಿ ಗಟ್ಟಿಗೊಳಿಸುತ್ತದೆ. ಸ್ಥಳೀಯ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡುವುದು—ಸ್ಥಳೀಯ ಆಹಾರ ಪರಂಪರೆಯನ್ನು ಉಳಿಸುತ್ತದೆ. ಚರಗಾ ಚೆಲ್ಲುವುದು—ಪ್ರಕೃತಿಯೊಂದಿಗೆ ಹಂಚಿಕೊಳ್ಳುವ ಮನೋಭಾವವನ್ನು ಸೂಚಿಸುತ್ತದೆ. ದೇವರಮರಕ್ಕೆ ಪೂಜೆ ಮಾಡುವುದು—ಮರವನ್ನು ಪವಿತ್ರವೆಂದು ಪರಿಗಣಿಸುವ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸುತ್ತದೆ. ಎಲ್ಲರನ್ನೂ ಊಟಕ್ಕೆ ಸೇರಿಸುವುದು—ಸಾಮಾಜಿಕ ಬಂಧವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಸೀಗೆ ಹುಣ್ಣಿಮೆ ಆಚರಣೆಯಲ್ಲಿ ಪರಿಸರ, ಆಹಾರ, ಕೃಷಿ ಮತ್ತು ಸಾಮಾಜಿಕ ಜೀವನ ಪರಸ್ಪರ ಬೆರೆತಿರುವುದನ್ನು ಕಾಣುತ್ತೇವೆ.
ಜನಪದ ನಂಬಿಕೆ ಮತ್ತು ವೈಜ್ಞಾನಿಕ ದೃಷ್ಟಿ
ಜನಪದ ಆಚರಣೆಯಲ್ಲಿರುವ ಪ್ರತಿಯೊಂದು ಅಂಶವನ್ನೂ ಆಧುನಿಕ ವಿಜ್ಞಾನದ ನಿಖರ ನಿಯಮವೆಂದು ಘೋಷಿಸುವುದು ಸರಿಯಲ್ಲ. ಹಾಗೆಯೇ ವೈಜ್ಞಾನಿಕ ವಿವರಣೆ ಇಲ್ಲವೆಂದು ಹೇಳಿ ಇಡೀ ಆಚರಣೆಯನ್ನು ಮೂಢನಂಬಿಕೆ ಎಂದು ತಳ್ಳಿಹಾಕುವುದೂ ಸೂಕ್ತವಲ್ಲ. ಜನಪದ ಅಧ್ಯಯನದ ಸರಿಯಾದ ಮಾರ್ಗವೆಂದರೆ ಆಚರಣೆಯ ಹುಟ್ಟಿಗೆ ಕಾರಣವಾದ ಸಾಮಾಜಿಕ, ಪರಿಸರಾತ್ಮಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವುದು. ಸೀಗೆ ಹುಣ್ಣಿಮೆ ಈ ದೃಷ್ಟಿಯಿಂದ ಅಧ್ಯಯನಕ್ಕೆ ಯೋಗ್ಯವಾದ ಕೃಷಿ ಜನಪದ ಆಚರಣೆಯಾಗಿದೆ. ಬದಲಾಗುತ್ತಿರುವ ಕಾಲದಲ್ಲಿ ಯಂತ್ರಗಳು ಕೃಷಿಗೆ ಬಂದಿವೆ. ರಾಸಾಯನಿಕ ಕೃಷಿ ಹೆಚ್ಚಾಗಿದೆ. ಗ್ರಾಮೀಣ ಆಹಾರ ಪದ್ಧತಿಗಳು ಬದಲಾಗಿವೆ. ನಗರೀಕರಣದ ಪರಿಣಾಮವಾಗಿ ಹೊಲ ಮತ್ತು ಮನುಷ್ಯನ ನೇರ ಸಂಬಂಧವೂ ಕೆಲವು ಕಡೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಅನೇಕ ಹಳೆಯ ಆಚರಣೆಗಳು ಕ್ರಮೇಣ ಮರೆಯಾಗುವ ಅಪಾಯದಲ್ಲಿವೆ. ಆದ್ದರಿಂದ ಸೀಗೆ ಹುಣ್ಣಿಮೆಯಂತಹ ಆಚರಣೆಗಳನ್ನು ಕೇವಲ ಆಚರಿಸುವುದಷ್ಟೇ ಅಲ್ಲ, ದಾಖಲಿಸುವುದು, ಅಧ್ಯಯನ ಮಾಡುವುದು ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಗತ್ಯ. ಹಿರಿಯ ರೈತರ ಮಾತುಗಳನ್ನು ದಾಖಲಿಸಬೇಕು. ಆಚರಣೆಯ ಹಾಡುಗಳು, ಪದ್ಧತಿಗಳು, ಆಹಾರಗಳು, ಪೂಜಾ ವಿಧಾನಗಳು ಮತ್ತು ಸ್ಥಳೀಯ ಹೆಸರುಗಳನ್ನು ಸಂಗ್ರಹಿಸಬೇಕು. ಬೇರೆ ಬೇರೆ ಗ್ರಾಮಗಳಲ್ಲಿ ಆಚರಣೆಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸಬೇಕು. ಈ ಮೂಲಕ ಧಾರವಾಡ ಜಿಲ್ಲೆಯ ಕೃಷಿ ಜನಪದ ಸಂಸ್ಕೃತಿಯ ಸಮಗ್ರ ದಾಖಲೆಯನ್ನು ಸಿದ್ಧಪಡಿಸಬಹುದು. ಅದೇ ನಮ್ಮ ಜನಪದ ಸಂಸ್ಕೃತಿಯ ನಿಜವಾದ ಸಂರಕ್ಷಣೆ.
- ಡಾ. ನದಾಫ ಎಚ್.ಎಚ್ – ಹತ್ತಿಮತ್ತೂರು, ಅಧ್ಯಾಪಕರು ಮತ್ತು ಕಲಾವಿದರು, ಹುಬ್ಬಳ್ಳಿ.
