ಅನಂತ ಪದ್ಮನಾಭಸ್ವಾಮಿ ದೇವಾಲಯ ಸೌಂದರ್ಯ

ಕೇರಳ ರಾಜಧಾನಿ ಎನಿಸಿದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭಸ್ವಾಮಿ ಮೂರ್ತಿಯು ಸುಮಾರು ಹದಿನೆಂಟು ಅಡಿ ಉದ್ದದ ಬ್ರಹತ್ ಶಾಂತವಾದ ಮೂರ್ತಿಯಾಗಿದ್ದು, ಇದನ್ನು ಒಂದೇ ಸಲ ನೋಡುವಂತಿಲ್ಲ. ಮೂರು ಚಿಕ್ಕ ಬಾಗಿಲಗಳನ್ನಾಗಿ ವಿಭಾಗಿಸಿದ್ದಾರೆ. ಇದನ್ನು ನೋಡಿದರೆ ಪರಮಾತ್ಮನ ಮೂರು ಪುರುಷ ರೂಪವನ್ನು ಕಾಣಬಹುದು. ಈ ದೇವಾಲಯದ ಮಹತ್ವದ ಕುರಿತು ಲೇಖಕರಾದ ಸಂಧ್ಯಾ ಟಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಅನಂತ ಪದ್ಮನಾಭಸ್ವಾಮಿ
ನಾಹಂ ಕರ್ತಾ ಹರಿ: ಕರ್ತಾ
ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.

ಅನಂತ ಪದ್ಮನಾಭಸ್ವಾಮಿ ದೇವಾಲಯವು ಕೇರಳ ರಾಜಧಾನಿ ಎನಿಸಿದ ತಿರುವನಂತಪುರಂನಲ್ಲಿ ಇದೆ. ತಿರುವನಂತಪುರಂ ಅಂದರೆ ಪರಮಾತ್ಮನ ಅನಂತ ರೂಪ ನಗರ ಎಂದು ಅರ್ಥ. ಅನಂತಪದ್ಮನಾಭ ಸ್ವಾಮಿಯ ಮೂರ್ತಿಯು ಅತ್ಯಂತ ವಿಶಿಷ್ಟವಾಗಿದೆ.

ಇದು ಸುಮಾರು ಹದಿನೆಂಟು ಅಡಿ ಉದ್ದದ ಬ್ರಹತ್ ಶಾಂತವಾದ ಮೂರ್ತಿ ಒಂದೇ ಸಾರೆ ನೋಡುವಂತಿಲ್ಲ. ಮೂರು ಚಿಕ್ಕ ಬಾಗಿಲಗಳನ್ನಾಗಿ ವಿಭಾಗಿಸಿದ್ದಾರೆ. ಇದನ್ನು ನೋಡಿದರೆ ಪರಮಾತ್ಮನ ಮೂರು ಪುರುಷ ರೂಪವನ್ನು ಕಾಣಬಹುದು. ಮೊದಲನೇಯದು ಮಹತ್ತತ್ವ ಸೃಷ್ಟಿ ಎರಡನೇಯದು ಪ್ರಕೃತಿ ಮೂರನೇಯದು ಸರ್ವ ಜೀವರಲ್ಲಿ ನೆಲೆಸಿರವದು ಬ್ರಹ್ಮ, ರುದ್ರ ಇವರಿಬ್ಬರನ್ನೂ ಸೃಷ್ಟಿ ಮಾಡಿದ ಸರ್ವೋತ್ತಮನಾದ ಪುರುಷೋತ್ತಮನ ರೂಪ.

ಈ ರೂಪಗಳ ಪರಿಜ್ಞಾನವೆ ಮುಕ್ತಿ. ಸೃಷ್ಟಿ ಸ್ಥಿತಿ ಲಯ ಈ ಮೂರು ಅವಸ್ಥಾ ರೀತಿಯಲ್ಲಿ ಹಂತ ಹಂತವಾಗಿ ಜ್ಞಾನದಿಂದ ದರ್ಶನ ಮಾಡಬೇಕು.ಮೊದಲನೆ ಬಾಗಿಲಲ್ಲಿ ಪರಮಾತ್ಮನ ಶಿರಸ್ಸು ಮತ್ತು ಯೋಗನಿದ್ರೆಯಲ್ಲಿರುವ ಪ್ರಶಾಂತವಾದ ಮುಖ. ಆದಶೇಷನ ಹೆಡೆಗಳು ಅವು ಕೂಡಾ ಕೆಳಗೆ ಮುಖ ಮಾಡಿ ಪರಮಾತ್ಮನನ್ನು ಸ್ತುತಿಸುತ್ತಿವಂತೆ ಭಾಸವಾಗುತ್ತದೆ. ಅಲ್ಲಿಯೇ ಶಿವನ ಲಿಂಗದ ಮೇಲೆ ಪರಮಾತ್ಮನ ಬಲ ಹಸ್ತವನ್ನು ಆಶೀರ್ವದಿಸುವಂತೆ ಇಟ್ಟಿರುವ ದರ್ಶನ ಆಗುವುದು. ಎರಡನೆ ಬಾಗಿಲಲ್ಲಿ ಪರಮಾತ್ಮನ ಉದರ.

ನಾಭಿಯಲ್ಲಿ ಉದ್ಭವಿಸಿರುವ ತಾವರೆ ಹೂವಿನ ದೇಟಿನಲ್ಲಿ ಅರಳಿದ ಕಮಲದಲ್ಲಿ ಸೃಷ್ಟಿ ಕಾರಕ ಬ್ರಹ್ಮ ದೇವರ ದರ್ಶನ. ಮೂರನೆ ಬಾಗಿಲಲ್ಲಿ ದೋಷವರ್ಜಿತನಾದ ಕಾಲನಿಯಾಮಕನಾದ ಪರಮಾತ್ಮನ ಪವಿತ್ರವಾದ ಪಾದಗಳು ಅರಳಿದ ಕಮಲದಲ್ಲಿ ಇರುವ ದರ್ಶನ. ಶ್ರೀ ಮಹಾಲಕ್ಷ್ಮಿಗೆ ಪ್ರಾಕೃತ ದೇಹವಿಲ್ಲ ಅವಳು ಅಕ್ಷರ ಪುರುಷಳು ಆ ಅಕ್ಷರ ಜ್ಞಾನದಿಂದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಸಂದೇಶ. ಅದಕ್ಕೆ ಪರಮಾತ್ಮನನ್ನು ” (ಹರಿ ರೇವ ಜಗತ್ಪಿತೃಮಾತೃ ಗತಿ)” ಎಂದು ದ್ವಾದಶ ಸ್ತೋತ್ರದಲ್ಲಿ ಸ್ತೋತ್ರ ಮಾಡಿದ್ದಾರೆ. ಮುಖ್ಯವಾಗಿ ಈ ಕ್ಷೇತ್ರವು ಪರಶುರಾಮರ ಏಳು ಪುಣ್ಯ ಕ್ಷೇತ್ರಗಳಲ್ಲಿ ಇದು ಒಂದು.

ಈ ಮೂರ್ತಿಯನ್ನು ಪರಶುರಾಮರೆ ಪ್ರತಿಷ್ಠಾಪಿಸಿದ್ದಾರೆ ಎಂದು ನಂಬಿಕೆ. ಈ ದೇವಾಲಯದ ಪಕ್ಕದಲ್ಲಿ ಪದ್ಮಕೆರೆ ಎಂಬ ಕಲ್ಯಾಣಿ ಇದೆ.ಇದನ್ನು ಪರಶುರಾಮರು ಸೃಷ್ಟಿಸಿದ್ದಾರೆ ಎಂಬ ಉಲ್ಲೇಖ ಇದೆ. ಎಂಟನೇಯ ಶತಮಾನದಲ್ಲಿ ಸಂತರು ರಚಿಸಿದ ಕೃತಿಗಳಲ್ಲಿ ಈ ದೇವಾಲಯವು ಮತ್ತು ಈ ಕ್ಷೇತ್ರವು ದೈವೀ ಸ್ವರೂಪ ಹೊಂದಿದೆ ಎಂಬ ಉಲ್ಲೇಖವಿದೆ. ಅಲ್ಲದೇ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇವಾಲಯವಾಗಿದೆ.ವೈಷ್ಣವ ಧರ್ಮದ ಒಂದನೂರಾಎಂಟು ಪ್ರಮುಖ ದೇವಾಲಯಗಳಲ್ಲಿ ಇದು ಒಂದು.

ಪದ್ಮನಾಭ ಸ್ವಾಮಿಯು ತಿರುವಾಂಕೂರಿನ ರಾಜ ಮನೆತನದ ಕುಲದೇವರು. ಈ ರಾಜಮನೆತನದ ಮೂಲ ಪುರುಷ ತಿರುನಾಳ ರಾಮ ವರ್ಮ. ರಾಜಮನೆತನದವರೆ ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುವರು. ಇವತ್ತಿಗೂ ದೇವಾಲಯದ ಟ್ರಸ್ಟ್ ಆ ಮನೆತನದವರು ನಡೆಸುತ್ತಾರೆ. ಈ ದೇವಾಲಯ ಕೇರಳ ಹಾಗೂ ದ್ರಾವಿಡ ಶೈಲಿಯ ಮಿಶ್ರಣ ವಾಸ್ತುಶಿಲ್ಪದ್ದಾಗಿದೆ. ಗರ್ಭಗುಡಿಯ ಪೂರ್ವಭಾಗದಲ್ಲಿ ಮೂರನೂರಾಅರವತ್ತೈದು ಸ್ತಂಭಗಳನ್ನು ಹೊಂದಿರುವ ವಿಶಾಲವಾದ ಮೊಗಸಾಲೆ ಇದೆ. ಕಂಬಗಳ ಮೇಲೆ ಪರಮಾತ್ಮನ ಅನಂತ ರೂಪಗಳನ್ನು ಸುಂದರವಾಗಿ ಕೆತ್ತಲಾಗಿದೆ. ಧ್ವಜಸ್ತಂಭವು ಎಂಭತ್ತು ಅಡಿ ಎತ್ತರವಿದ್ದು ಬಂಗಾರ ಲೇಪಿತ ತಾಮ್ರದ ತಗಡುಗಳಿಂದ ಸುತ್ತಲ್ಪಟ್ಟಿದೆ.

ಆವರಣದಲ್ಲಿ ಬಲಿ ಪೀಠ ಮಂಟಪ, ಮುಖಮಂಟಪಗಳಿವೆ. ಇವುಗಳಲ್ಲಿ ದೇವತೆಗಳ ಚಿತ್ರಣ ಸುಂದರವಾಗಿವೆ.ನವಗ್ರಹ ಮಂಟಪವಿದೆ. ದೇವಾಲಯದ ನೆಲಮಾಳಿಗೆಯಲ್ಲಿ ಆರು ಕೋಣೆಗಳಿವೆ ಅವುಗಳಲ್ಲಿ ಬಂಗಾರ ವಜ್ರ ವೈಢೂರ್ಯ ಬಂಗಾರದ ನಾಣ್ಯಗಳು ರಾಜಮುದ್ರಿಕೆಗಳು, ಪೂಜೆಗೆ ಉಪಯೋಗಸುತ್ತಿದ್ದ ಬಂಗಾರದ ಪಾತ್ರೆ ಮೊದಲಾದ ಸಂಪತ್ತು ತುಂಬಿದೆ.

ತಿರುವಾಂಕುರ ರಾಜರಲ್ಲಿ ಸುಪ್ರಸಿದ್ಧ ರಾಜನಾದ ಮಾರ್ತಾಂಡ ವರ್ಮ ಎಂಬ ರಾಜನು ಈ ದೇವಾಲಯವನ್ನು ನವೀಕರಣ ಮಾಡಿ ಮುರಾ ಜಪಮ್ ಮತ್ತು ಭದ್ರದೀಪಮ್ ಎಂಬ ಹಬ್ಬಗಳನ್ನು ಪ್ರಾರಂಭಿಸಿದನು. ಅಲ್ಲದೆ ದೈವತ್ವವನ್ನು ಹೊಂದಿದ ದೇವಾಲಯವನ್ನು ಮತ್ತು ತಿರುವಾಂಕುರ ಸಾಮ್ರಾಜ್ಯವನ್ನು (೧೭೫೦) ರಲ್ಲಿ ಅನಂತ ಪದ್ಮನಾಭ ಸ್ವಾಮಿಗೆ ಮೀಸಲಾಗಿರಿಸಿ ರಾಜಮನೆತನದವರು ವಿಷ್ಣುವಿನ ದಾಸರು ಎಂದು ದೇವರ ಪರವಾಗಿ ರಾಜ್ಯ ಆಳಬೇಕೆಂದು ಪ್ರಸಿದ್ಧ ಪಡಿಸಿದನು. ಈ ದೇವಾಲಯದ ಮೂಲ ಸ್ಥಳ ಕಾಸರಗೂಡು ಎಂದು ಹೇಳುವರು ಕಾಸರಗೂಡಿನಲ್ಲಿ ಎನ್ನುವ ವಿಷ್ಣುವಿನ ಭಕ್ತರಾದ ಮುನಿಗಳು ವಿಷ್ಣು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕಾಗಿ ನಿರಂತರ ವಿಷ್ಣುವಿನ ಪೂಜೆಯನ್ನು ಭಕ್ತಿಯಿಂದ ಮಾಡುತ್ತಿದ್ದರು.

ಅವನ ಸ್ಮರಣೆಯಲ್ಲಿ ನಿರತರಾಗಿರುತ್ತಿದ್ದರು. ಒಂದು ದಿನ ವಿಷ್ಣು ಚಿಕ್ಕ ಬಾಲಕನ ರೂಪದಲ್ಲಿ ಮುನಿಗಳ ಬಳಿ ಬರುವನು. ಮಗುವನ್ನು ಕಂಡ ತಕ್ಷಣ ಇವರು ನೀನು ಯಾರು ಏಕೆ ಬಂದಿರುವಿ? ಎಂದು ಕೇಳಿದಾಗ ಬಾಲಕ ನನಗೆ ಯಾರೂ ಇಲ್ಲ ಹಾಗೆ ಅಲೆಯುತ್ತಾ ಬಂದೆ ಎಂದು ಹೇಳಿತು. ಹಾಗಾದರೆ ನನ್ನೊಂದಿಗೆ ಇರು ಎಂದರು. ಆಗ ಬಾಲಕ ನನ್ನ ಮೇಲೆ ಕೋಪಿಸಿದರೆ ನಾನು ಹೋಗುತ್ತೇನೆ, ಇಲ್ಲಾಂದರೆ ಇರುತ್ತೇನೆ ಎಂದು ಇಬ್ಬರು ಜೊತೆಯಾಗಿ ಇದ್ದರು. ಒಂದು ದಿನ ಆ ಬಾಲಕ ಮುನಿಗಳು ಪೂಜೆ ಮಾಡುತ್ತಿದ್ದ ವಿಷ್ಣು ಸಾಲಿಗ್ರಾಮವನ್ನು ಬಾಯಲ್ಲಿ ಹಾಕಿಕೊಂಡು ನುಂಗಿ ಬಿಡುತ್ತದೆ. ಆಗ ಮುನಿಗಳು ಕೋಪಮಾಡುತ್ತಾರೆ ತಕ್ಷಣ ಮಗು ಹೊರಟು ಹೋಗುತ್ತದೆ. ಮುನಿಗಳು ದುಃಖದಲ್ಲಿ ಇರುವಾಗ ನಾನು ಅನಂತಕಾಡಿನಲ್ಲಿ ಇರುವೆ ನನ್ನ ಕಾಣಬೇಕಾದರೆ ಅಲ್ಲಿಗೆ ಬಾ ಎಂದು ಅಶರೀರವಾಣಿ ಕೇಳಿಸಿತು. ಆಗ ಮುನಿಗಳು ಕಾಸರಗೂಡಿನಿಂದ ಅನಂತಕಾಡಿನವರೆಗೆ ವಿಷ್ಣುವಿನ ಸ್ಮರಣೆ ಮಾಡುತ್ತಾ ಬರುವರು.

ಅಲ್ಲಿ ಆ ಬಾಲಕ ಪ್ರತ್ಯಕ್ಷವಾಗಿ ಒಂದು ಮಾವಿನ ಮರದಲ್ಲಿ ಹೋಗುತ್ತದೆ ತಕ್ಷಣ ಮರ ಬಿದ್ದು ಅಲ್ಲಿ ಸುಮಾರು ೮೦ಅಡಿಯಷ್ಟು ಶೇಷ ಶಾಯಿ ವಿಷ್ಣುವಿನ ಮೂರ್ತಿ ಪ್ರತ್ಯಕ್ಷ ಕಾಣುತ್ತಾರೆ. ಅದನ್ನು ನೋಡಲು ಸಾಧ್ಯವಾಗದೆ ಪರಮಾತ್ಮನನ್ನು ಚಿಕ್ಕವನಾಗು ಎಂದು ಪ್ರಾರ್ಥನೆ ಮಾಡುತ್ತಾರೆ ಆಗ ಎಂಟು ಅಡಿ ಉದ್ದದ ಮೂರ್ತಿಯಾಗಿ ಸಾಕ್ಷಾತ್ಕಾರವಾಗುತ್ತದೆ. ನಂತರ ಆ ಮುನಿಗಳು ವಿಷ್ಣುಸ್ಮರಣೆ ಮಾಡುತ್ತ ಭೌತಿಕ ಶರೀರವನ್ನು ತ್ಯಜಿಸುತ್ತಾರೆ.ಆ ಕ್ಷೇತ್ರವನ್ನು ಪರಮಾತ್ಮನ ದಶಾವತಾರದ ಲ್ಲಿರುವ ಆರನೇ ಅವತಾರ ಪರಶುರಾಮ ದೇವರು ಪವಿತ್ರಗೊಳಿಸಿ ಅಲ್ಲಿ ಹನ್ನೆರಡು ಸಾವಿರದ ಎಂಟು ಸಾಲಿಗ್ರಾಮಗಳನ್ನೊಳಗೊಂಡ ವಿಶಿಷ್ಟವಾದ ಹದಿನೆಂಟು ಅಡಿ ಉದ್ದದ ಬ್ರಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು  ಉಲ್ಲೇಖಿಸಲಾಗಿದೆ.

ಅಂದಿನಿಂದ ಆ ಕ್ಷೇತ್ರವು ತಿರುವನಂತಪುರಂ ಎಂದು ಪ್ರಸಿದ್ಧಿ ಪಡೆಯಿತು. ಮುಂದೆ ತಿರುವಾಂಕೂರಿನ ರಾಜ ಮನೆತನದ ಮೂಲ ರಾಜನಾದ ತಿರುನಾಳ ರಾಮ ವರ್ಮನು ದೇವಾಲಯದ ಉಸ್ತುವಾರಿ ವಹಿಸಿಕೊಂಡರು. ಇವತ್ತಿಗೂರಾಜಮನೆತನದವರ ಟ್ರಸ್ಟ್ ವತಿಯಿಂದ ನಡೆಯುತ್ತದೆ.

ಈ ಮೂರ್ತಿಯು ವಿಶೇಷ ಆಯುರ್ವೇದದ ಮಿಶ್ರಣವಾದ “(ಕಟು ಶರ್ಕರ ಯೋಗಂ)” ಎಂಬ ಅಂಟು ಮೇಣದಿಂದ ಲೇಪಿತವಾಗಿದೆ. ಅನಂತ ಪದ್ಮನಾಭ ಮೂರ್ತಿಯು ಸೃಷ್ಟಿ, ಸ್ಥಿತಿ ಲಯಗಳ ಸಂಕೇತ ನಿಜ. ಆದರೆ ಆ ಪರಮಾತ್ಮನು ಕೊಟ್ಟ ಈ ಸಾಧನ ಶರೀರಕ್ಕೆ ಮುಕುಟದಂತಿರುವ ಶಿರಸ್ಸಿನಲ್ಲಿರುವ ಇಂದ್ರಿಯಗಳಾದ ಕಣ್ಣು, ಕಿವಿ, ನಾಸಿಕ ವದನಗಳಿಂದ ”(ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ ರಂಗಯ್ಯನ)”ಎಂಬ ದಾಸರ ಕೀರ್ತನೆಯಂತೆ ನಿರಂತರ ನಮ್ಮ ಉಸಿರಿನಲ್ಲಿ ಪದುಮನಾಭನ ಸ್ಮರಣೆ ಮಧ್ಯದಲ್ಲಿ ಬ್ರಹ್ಮ ಎಂದರೆ ಭಕ್ತಿಯಿಂದ ಮಾಡಿದರೆ ಯಾವ ಪಾಪದ ಫಲ ತಟ್ಟದೆ ಮನಸ್ಸು ಶುದ್ಧವಾಗಿರುತ್ತದೆ. ಕಾಲನಿಯಾಮಕ ಪರಮ ಆತ್ಮನಾದ ಪದ್ಮನಾಭನು ಲಯದಲ್ಲಿ ಆನಂದ ನೀಡಿ ತನ್ನ ಮಹಿಮೆಯ ಅಪರೋಕ್ಷ ಜ್ಞಾನವನ್ನು ನೀಡುವನೆಂದು ತಿಳಿಸುವ ಮೂರ್ತಿಯೇ ಅನಂತ ಪದ್ಮನಾಭ ಸ್ವಾಮಿ.

“(ಅಚ್ಯುತಾನಂತ ಗೋವಿಂದ ನಾಮೋಚ್ಛಾರಣ ಭೇಷಜೆ ನಶ್ಯಂತಿ ಸಕಲಾ ರೋಗ: ಸತ್ಯಂ ಸತ್ಯಂ ವದಾಮ್ಯಹಂ)”

ಸರ್ವೇ ಜನಾ: ಸುಖಿನೋ ಭವಂತು
ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.

ಅಚ್ಯುತಾನಂತ ಗೋವಿಂದ
ಸಚ್ಚಿದಾನಂದ ಜ್ಞಾನಾನಂದ
ಪದ್ಮನಾಭ ಪರಮಾನಂದ
ಅನಂತ ರೂಪ ಕಣ್ಣಿಗಾನಂದ

ಶುಭ ಪದ ಸೃಷ್ಟಿಗೆ ಆನಂದ
ಅಭಯ ಹಸ್ತ ಮನಕಾನಂದ
ಭಯ ನಿವಾರಕ ಕರುಣಾನಂದ
ಲಯಕೆ ನೀನೆ ಮೋಕ್ಷಾನಂದ

ಮಾತರಿಶ್ವಾಂತರ್ಗತ ಶ್ರೀಹರಿ
ಗುಣ ಪರಿಪೂರ್ಣಾನಂದ ಸಿರಿ
ಅಂತರಂಗದಲಿ ನಿನ್ನ ನಾಮ
ತುಂಬಿರಲಿ ಸದಾ ನಿನ್ನ ಧಾಮ

ಶ್ರೀ ಕೃಷ್ಣಾರ್ಪಣ ಮಸ್ತು


  •  ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading