ಲೇಖಕರಾದ ಅಪರ್ಣ ಲಹರಿ ಅವರ ‘ರುಧಿರ ತರಂಗ’ ಕೃತಿ ಪರಿಚಯ ಕುರಿತು ಲೇಖಕರಾದ ಆಶ್ರಿತಾ ಕಿರಣ್ ರಾವ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ರುಧಿರ ತರಂಗ
ಲೇಖಕರು : ಅಪರ್ಣ ಲಹರಿ
ಪ್ರಥಮ ಮುದ್ರಣ : 2026
ಪ್ರಕಾಶಕರು : ಪುಸ್ತಕಾಗಾರ
ಪುಟಗಳು : 180
ಬೆಲೆ : 225/-
“ರುಧಿರ ತರಂಗ” ಹೆಸರು ಓದಿದಾಗ ದ್ವೇಷದ ಕಥೆ ಇರಬಹುದು ಎಂದನಿಸುವಂತಿದೆ. ಬರಿ ದ್ವೇಷವಲ್ಲ ದ್ವೇಷದ ಹಿಂದಿನ ಕಾರಣ ಮನುಷ್ಯನ ಸಣ್ಣತನವನ್ನು ಎತ್ತಿತೋರುವ ಕಥೆ ಇಲ್ಲಿದೆ. ರಕ್ತದ ಹಿಂದಿನ ಕಲೆ ಕುಟುಂಬದ ಅಂತರಂಗವನ್ನು ತೆರೆದಿಡುತ್ತದೆ. ಬದುಕಿನ ಆಸರೆಯಾಗಿದ್ದ ಆ ಪರಿಮಳ ಸಾಲು ಸಾಲು ಕೊಲೆಗಳಿಗೆ ಕಾರಣವಾಗುತ್ತದೆ. ಆ ಕೊಲೆಯ ರಹಸ್ಯವನ್ನು ಬೆನ್ನುಹತ್ತುವವಳು ಆರುಧ್ರ. ರುಧಿರದ ತರಂಗ ಅವಳನ್ನು ತಲುಪುವ ಪರಿಯನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
“ಒಡಲ ಅಣು ಅಣುವಿನಲ್ಲೂ ಭಯವನ್ನು ತುಂಬಿ ಬಿಡುವಷ್ಟು ದಾರಾಳಿ. ಈ ಕತ್ತಲು ಮತ್ತು ಮೌನ.” ಮನಸ್ಸು ಮತ್ತು ಬುದ್ಧಿಯ ತಳಮಳವನ್ನು ಸೊಗಸಾಗಿ ವಿವರಿಸಿರುವ ಈ ಸಾಲು ಆರಂಭದಲ್ಲೇ ಗಮನ ಸೆಳೆಯುತ್ತದೆ.

ಕಥೆ ಒಂದು ಸಾವಿನಿಂದ ಆರಂಭವಾಗುತ್ತದೆ. ಸಾವಿನ ತನಿಖೆ ಕಾದಂಬರಿಯ ಮುಖ್ಯ ಪಾತ್ರದ ಬೆನ್ನೇರುತ್ತದೆ. ಈ ವಿಷಯ ತಿಳಿಯುವುದು ಅಪ್ಪ ಮಗಳ ಸಂಭಾಷಣೆಯಿಂದ. ಇಬ್ಬರ ನಡುವಿನ ಪ್ರೀತಿ, ಕಾಳಜಿ ಖುಷಿ ಕೊಡುವ ಜೊತೆಗೆ ಕೂತುಹಲ ಹೆಚ್ಚಿಸುತ್ತದೆ. ಈ ಹಂತದಲ್ಲಿ ಒಂದೇ ರೀತಿಯಲ್ಲಿ ನಾಲ್ಕು ಕೊಲೆಗಳಾಗಿರುವುದು ತಿಳಿಯುತ್ತದೆ. ಸೀರಿಯಲ್ ಕಿಲ್ಲಿಂಗ್ ಅಥವಾ ಸೈಕೋ ಕಿಲ್ಲಿಂಗ್ ಅನ್ನೋ ಅನುಮಾನ ಪೋಲಿಸರ ಜೊತೆ ಓದುಗರಲ್ಲೂ ಮೂಡುತ್ತದೆ.
ಕೊಲೆಗಾರ ಯಾರು? ಎನ್ನುವ ಹುಡುಕಾಟವೇ ಕಥೆ. ಆದರೆ ಕೊಲೆಯ ಹಿಂದಿನ ವ್ಯಕ್ತಿಯನ್ನು ತಲುಪಲು ಪರಿಮಳದ ಹಿಂದೆ ಹೋಗಬೇಕು. ಪರಿಮಳದ ಮೂಲವೇ ಈ ಕೃತಿಯ ಕಥೆಯ ಅಂತ್ಯ. ಹಾಗಂತ ಅಂತ್ಯವನ್ನು ಮೊದಲು ಓದಿದರೆ ಖಂಡಿತ ಯಾವುದೂ ಅರ್ಥವಾಗುವುದಿಲ್ಲ. ಆರಂಭದಿಂದ ಅಂತ್ಯದವರಿಗೂ ಸಾಕಷ್ಟು ಕುತೂಹಲವನ್ನು ಕಾಯ್ದಿರಿಸಕೊಂಡಿರುವ ಕಥೆ ಇದು.
ಶರ್ವ ಈ ಕಥೆಯ ಮುಖ್ಯ ಪಾತ್ರದಲ್ಲಿ ಒಂದು. ಪರ್ಫ್ಯೂಮ್ ಮತ್ತು ಆಲ್ತರ್ ಎನ್ನುವ ಎರಡು ವಿಷಯಗಳನ್ನು, ಅದರ ವಿವರಗಳನ್ನು ಬಹಳಾ ವಿಸ್ತಾರವಾಗಿ ಅರ್ಥವಾಗುವಂತೆ ಹೇಳುತ್ತಾನೆ. ಕೊಲೆಯ ಹಿಂದಿನ ಪರಿಮಳದ ಜಾಡು ಇವನಿಂದ ತಿಳಿಯಬಹುದು ಎಂದು ಓದುತ್ತಾ ಸಾಗಿದಂತೆ ಕೊಲೆಗಾರ ಇವನೇನಾ ಅನ್ನುವ ಅನುಮಾನ ಮೂಡುತ್ತದೆ. ಆದರೆ ಕೊಲೆಗಾರ ಇವನಲ್ಲ. ಕೊಲೆಗಳಿಗೂ ಇವನಿಗೂ ಸಂಬಂಧವೇ ಇರುವುದಿಲ್ಲ ಎನ್ನುವುದು ತಿಳಿದಾಗ ಮತ್ತಷ್ಟು ಪ್ರಶ್ನೆಗಳು ಮೂಡುತ್ತದೆ.
ರಾಧಾ ಹಾಗು ಚಿಂತನ ಕಥೆಯಲ್ಲಿ ಒಂದಿಷ್ಟು ನಗು ಮೂಡಿಸುವ ಪಾತ್ರಗಳು. ಇವರಿಬ್ಬರ ದೆವ್ವದ ಸಂದರ್ಶನ ಬಾಲ್ಯದಿಂದಲೂ ನಮ್ಮ ಮನದಲ್ಲಿದ್ದ ಪ್ರಶ್ನೆಗಳಲ್ಲವೇ ಎಂದನಿಸುವ ಜೊತೆಗೆ ಅಲ್ಲೊಂದಿಷ್ಟು ದೊರಕುವ ತುಂಟ ಉತ್ತರಗಳನ್ನು ಆಗಾಗ ಮೆಲುಕು ಹಾಕುವಂತಿದೆ.
ಆರುದ್ರ ಜೊತೆಗೆ ಕೊಲೆಯ ತನಿಖೆಯು ದಳ-೧ ರಿಂದ ಆರಂಭವಾಗುವ ಪಯಣ ಮಾಲೆ- 9 ರವರೆಗೂ ಉಸಿರು ಬಿಗಿ ಹಿಡಿದು ಓದಿಸುತ್ತದೆ. ಭಾವನೆಗಳನ್ನು ಏರುಪೇರಾಗಿಸುವ ಕಥಾಹಂದರವಿದೆ. ಕಡೆಯ ಎರಡು ವಿಭಾಗಗಳು ತಿರುವುಗಳಿಗೆ ಉತ್ತರ ನೀಡುತ್ತದೆ. ಆ ಅಧ್ಯಾಯದ ಹೆಸರು ಕೂಡ ಬಹಳಾ ಆಕರ್ಷಕವಾಗಿದ್ದು ಅದನ್ನು ಓದಿ ಸವಿದರೆ ಚೆನ್ನ.

ಪ್ರತಿ ಪಾತ್ರದಲ್ಲಿ ಒಳಿತು ಕೆಡುಕುಗಳಿವೆ. ಪಾತ್ರದ ಹೆಸರುಗಳು ವಿಭಿನ್ನವಾಗಿ ಗಮನಸೆಳೆಯುತ್ತವೆ. ಕೋಪದ ಪ್ರತಾಪ, ದ್ವೇಷದ ಜ್ವಾಲೆ, ಪ್ರೀತಿಯ ಸೆಳೆತ , ಸ್ನೇಹದ ಶಕ್ತಿ, ಸಂಬಂಧಗಳ ಬಂಧ, ತಪ್ಪು ತಿಳುವಳಿಕೆಯ ಪ್ರಮಾದ, ಮಿಡಿಯುವ ಹೃದಯ, ತಾಯಿಯ ಮಮತೆ, ತಂದೆಯ ಕಾಳಜಿ, ಅಪಾರ ನಂಬಿಕೆ, ತಾತ್ಸಾರ, ಸ್ನೇಹದ ಒಡನಾಟ, ಒಂದು ಶಕ್ತಿ, ಕೆಲಸದಲ್ಲಿನ ಶ್ರದ್ಧೆ ಎಲ್ಲವನ್ನು ಸೊಗಸಾಗಿ ಹೆಣೆದು ರೋಚಕವಾಗಿ ಪ್ರಸ್ತುತ ಪಡಿಸುತ್ತಾ ಅದ್ಭುತವಾಗಿ ನಿರೂಪಿಸಲಾಗಿದೆ.
ವಿಶೇಷವಾಗಿ ಗಮನ ಸೆಳೆದ ಅಂಶ :
- ಪ್ರತಿ ಅಧ್ಯಾಯಗಳನ್ನು ದಳ ಹಾಗು ಮಾಲೆ ಎಂದು ಹೆಸರಿಸಿ ವಿಭಜಿಸಿರುವುದು ಇಲ್ಲಿನ ಒಂದು ವಿಶೇಷ.
- ಪ್ರತಿ ಹಂತದಲ್ಲೂ ಎದುರಾಗುವ ಪಾತ್ರಗಳ ಮೇಲೆ ಅನುಮಾನ ಮೂಡಿಸುವಂತಹ ಸನ್ನಿವೇಶಗಳಿವೆ.
- ಪ್ರತಿ ಪಾತ್ರಕ್ಕೂ ಒಂದು ಆರಂಭ, ತಿರುವು ಹಾಗು ಅಂತ್ಯ ನೀಡಲಾಗಿದ್ದು ಪಾತ್ರ ಪೋಷಣೆಯ ಕೌಶಲ್ಯವನ್ನು ಎತ್ತಿ ಹಿಡಿದಿದೆ.
- ಸರಳ ಭಾಷೆ, ಸುಂದರ ನಿರೂಪಣೆಯ ಜೊತೆಗೆ ಒಂದಿಷ್ಟು ಹೊಸ ಕಲಿಕೆಗೆ ವಿಚಾರಗಳಿವೆ. ಪರ್ಫ್ಯೂಮ್ ಬಗೆಗಿನ ಮಾಹಿತಿ, ಪೋಲೀಸ್ ತನಿಖೆಯ ಹಂತದ ಕೆಲವು ವಿಷಯಗಳು ಕುತೂಹಲದ ಜೊತೆಗೆ ಮಾಹಿತಿಪೂರ್ಣವಾಗಿದೆ.
- ಇಲ್ಲಿ ಉಲ್ಲೇಖವಾಗಿರುವ ಒಂದು ಹೂವು ಕೆಲವರಲ್ಲಿ ಅದನ್ನು ನೋಡುವ ಕೂತುಹಲ ಮೂಡಿದರೆ ಹೂವಿನ ಬಗ್ಗೆ ತಿಳಿದಿರುವವರ ನೆನಪಿನ ಬುತ್ತಿ ಬಾಯಿ ತೆರೆಯುವುದು ನಿಶ್ಚಿತ. ನೆನಪುಗಳ ಮೆಲುಕಿಗೆ ಈ ಕಾದಂಬರಿಯಲ್ಲಿ ಬರುವ ಹೂವು ಪ್ರಮುಖ ಪಾತ್ರ ವಹಿಸುತ್ತದೆ. ಗುಲಾಬಿ ಸಂಪಿಗೆ ಚಂಪಕ ಪಾರಿಜಾತ ಕೇದಿಗೆ ಇವ್ಯಾವುದೂ ಅಲ್ಲ. ಕಾದಂಬರಿಯ ಓದು ಉತ್ತರ ನೀಡುತ್ತದೆ.
- ಮುಖಪುಟ ವಿನ್ಯಾಸ ಆಕರ್ಷಕವಾಗಿದ್ದು ಪುಸ್ತಕದ ಅಕ್ಷರಗಳ ಗಾತ್ರ ಕಣ್ಣಿಗೆ ಹೆಚ್ಚು ಶ್ರಮ ನೀಡುವುದಿಲ್ಲ. ಮನೆಯನ್ನು ಆವರಿಸಿರುವ ಕೆಂಪು ಆಕೃತಿ. ಅದರ ಮುಂದಿರುವ ಕಪ್ಪು ಆಕೃತಿ. ಆದರೆ ಮುಂದೆ ಪೋಲೀಸ್ ಬಟ್ಟೆಯಲ್ಲಿ ನಿಂತಿರುವ ಹುಡುಗಿಯ ಮುಖ ಮನೆಯ ಚಿತ್ರದಿಂದ ಆವರಿಸಿದೆ. ಮನೆಯ ಮುಂದಿರುವ ಮರದ ಬೇರುಗಳು ಅವಳನ್ನು ಸುತ್ತಿದೆ. ಉದುರಿರುವ ಹೂವುಗಳು. ಪೂರ್ತಿ ಪುಸ್ತಕವನ್ನು ಓದಿ ಈ ಚಿತ್ರ ನೋಡಿದಾಗ ವಾವ್ ಎಂಬ ಉದ್ಗಾರ ಮೂಡದೆ ಇರದು. ಏಕೆಂದರೆ ಈ ಚಿತ್ರ ಪೂರ್ತಿ ಕಥೆಯನ್ನು ಹೇಳುವಂತಿದೆ. ಆದರೆ ಕಥೆಯನ್ನು ಓದದೆ ಅಂದಾಜಿಸಲಾಗದು.
- ಅರಿಷಡ್ವರ್ಗದ ಅಂಶಗಳು ಇಲ್ಲಿನ ಕೆಲವು ಪಾತ್ರಗಳಲ್ಲಿ ಗಮನಿಸಬಹುದು. ಪ್ರೇಮದ ಕಥೆಯ ಜೊತೆಗೆ ಪ್ರೀತಿಯ ವ್ಯಥೆ ಬೆಸೆದುಕೊಂಡಿರುವ ರೀತಿ, ಅನಾಥ ಪ್ರಜ್ಞೆಯನ್ನು ದೂರವಾಗಿಸುವ ಕಾಳಜಿ-ಪ್ರೀತಿ, ಮನದ ಮಾತಿಗೆ ಕಿವಿಯಾಗುವ ಸ್ನೇಹಿತನ ಆಸರೆ, ಗೆಳತಿಯರ ನಡುವಿನ ಹುಸಿಮುನಿಸಿನ ಸ್ನೇಹ- ತುಂಟಾಟಗಳು ಬದುಕಿನ ಭಾಗವೆಂದು ಹೇಳುವಂತಿರುವ ಒಂದೊಳ್ಳೆ ಕುತೂಹಲದ ಓದಿದು.
‘ರುಧಿರ ತರಂಗ’ ಇನ್ನಷ್ಟು ಅಭಿಪ್ರಾಯಗಳು :
- ಆಶ್ರಿತಾ ಕಿರಣ್ ರಾವ್
