ಕಾದಂಬರಿಗಾರ್ತಿ ಅಪರ್ಣ ಲಹರಿ ಅವರ ನಾಲ್ಕನೇ ಕಾದಂಬರಿಯೇ ‘ರುಧಿರ ತರಂಗ’. ಇದೊಂದು ಪತ್ತೇದಾರಿ ಕಾದಂಬರಿಯಾಗಿದೆ. ಈ ಕೃತಿಯ ಕುರಿತು ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ರುಧಿರ ತರಂಗ
ಲೇಖಕರು: ಅಪರಿಣಾ ಲಹರಿ
ಪ್ರಕಾಶಕರು: ಪುಸ್ತಕಾಗಾರ
ಮುದ್ರಣ: 2026
ಬೆಲೆ: ರೂ.225
ಪುಟಗಳು: 180
‘ರುಧಿರ ತರಂಗ’ – ಭಯ ಮತ್ತು ಮಮತೆಯ ಬೆಚ್ಚಿಬೀಳಿಸುವ ಕಥಾನಕ. ಅಪರ್ಣ ಲಹರಿ ಅವರ ಲೇಖನಿಯಿಂದ ಮೂಡಿಬಂದಿರುವ ‘ರುಧಿರ ತರಂಗ’ ಕಾದಂಬರಿಯು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಒಂದು ಅದ್ಭುತ ಹಾರರ್ ಹಾಗೂ ಇನ್ವೆಸ್ಟಿಗೇಶನ್ ಥ್ರಿಲ್ಲರ್. ‘ಪಂಚಮಲಿಂಗ’ದಂತಹ ವಿಶಿಷ್ಟ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದ ಲೇಖಕಿಯ ನಾಲ್ಕನೇ ಕಾದಂಬರಿಯಾಗಿ ಇದು ಪುಸ್ತಕ ರೂಪದಲ್ಲಿ ಹೊರಹೊಮ್ಮಿದೆ. ಕೇವಲ ಭಯ ಹುಟ್ಟಿಸುವ ರೋಮಾಂಚಕ ಸನ್ನಿವೇಶಗಳನ್ನಷ್ಟೇ ಅಲ್ಲದೆ, ಕಥೆಯ ಆಳದಲ್ಲಿ ಮನಕಲಕುವ ಮಮತೆಯ ಮತ್ತು ವಾತ್ಸಲ್ಯದ ಎಳೆಯೊಂದನ್ನು ಲೇಖಕಿ ಅತ್ಯಂತ ನಾಜೂಕಾಗಿ ಹೆಣೆದಿದ್ದಾರೆ ಎಂಬುದು ಕೃತಿಯ ಅಂತ್ಯದಲ್ಲಿ ಓದುಗರಿಗೆ ಅರಿವಾಗುತ್ತದೆ.
ಕಾದಂಬರಿಯು ಮೊದಲ ಪುಟದಿಂದಲೇ ಒಂದು ಅತ್ಯುತ್ತಮ ಹಾರರ್ ಚಲನಚಿತ್ರವನ್ನು ವೀಕ್ಷಿಸುತ್ತಿರುವಂತಹ ಅನುಭವವನ್ನು ಕಟ್ಟಿಕೊಡುತ್ತದೆ. ಕತ್ತನ್ನು ಹಿಂಡಿ ತಿರುಚಿದ ಸ್ಥಿತಿಯಲ್ಲಿರುವ, ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಭೀತಿಯನ್ನು ಹೊತ್ತ ನಿಗೂಢ ಕೊಲೆಯೊಂದರ ಮೂಲಕ ಕಥೆ ತೆರೆದುಕೊಳ್ಳುತ್ತದೆ. ಶವಪರೀಕ್ಷೆ ಮಾಡುವ ವೈದ್ಯರಿಗೂ ಸವಾಲಾಗುವ ಇಂತಹ ವಿಚಿತ್ರವಾದ ಸರಣಿ ಕೊಲೆಗಳು ನಗರದಲ್ಲಿ ಮೂರ್ನಾಲ್ಕು ಬಾರಿ ಒಂದೇ ಸಮನೆ ನಡೆದಾಗ, ಇಡೀ ವ್ಯವಸ್ಥೆಯೇ ಬೆಚ್ಚಿಬೀಳುತ್ತದೆ. ಈ ಸವಾಲಿನ ಬೆನ್ನತ್ತಿ ಹೊರಡುವ ದಕ್ಷ ಪೊಲೀಸ್ ಅಧಿಕಾರಿ, ಎಸಿಪಿ ಅರುದ್ರ ಈ ಕಾದಂಬರಿಯ ಮುಖ್ಯ ಕಥಾನಾಯಕಿ. ಅವಳ ತನಿಖೆಯ ಜಾಡು ಹಿಡಿದು ಕಥೆಯು ಮಹಾರಾಷ್ಟ್ರದ ನಿಗೂಢ ಹಳ್ಳಿಯಾದ ‘ಸುರ್ವಾಡಿ’ಯನ್ನು ತಲುಪುತ್ತದೆ.

ಈ ಸರಣಿ ಕೊಲೆಗಳಲ್ಲಿ ಎದ್ದು ಕಾಣುವ ಏಕೈಕ ಮತ್ತು ವಿಚಿತ್ರವಾದ ಸಾಮ್ಯತೆಯೆಂದರೆ, ಕೊಲೆ ನಡೆದ ಪ್ರತಿಯೊಂದು ಸ್ಥಳದಲ್ಲೂ ಆವರಿಸಿರುವ ಒಂದು ನಿರ್ದಿಷ್ಟವಾದ ಹೂವಿನ ಪರಿಮಳ! ಇದು ಯಾವ ಹೂವಿನ ಸುಗಂಧ? ಎಲ್ಲಾ ಕೊಲೆಗಳಲ್ಲೂ ಇದೇ ಪರಿಮಳವೇಕೆ ಇದೆ? ಇದನ್ನು ಶೇಖರಿಸಿಡಲು ಸಾಧ್ಯವೇ? ಎಂಬ ಪ್ರಶ್ನೆಗಳು ಎದುರಾದಾಗ, ಕಥಾನಾಯಕಿಗೆ ಬೆನ್ನೆಲುಬಾಗಿ ನಿಲ್ಲುವವನು ಶರ್ವ. ಹೂವಿನ ದಳಗಳ ಸುವಾಸನೆ ಹಾಗೂ ಅದರ ಹಿಂದಿರುವ ಸುಗಂಧ ವಿಜ್ಞಾನದ (Fragrance science) ಅಗಾಧತೆಯನ್ನು ಶರ್ವನ ಪಾತ್ರದ ಮೂಲಕ ಲೇಖಕಿ ಅತ್ಯಂತ ಕುತೂಹಲಕಾರಿಯಾಗಿ ಪ್ರಚುರಪಡಿಸಿದ್ದಾರೆ. ಇದರ ನಡುವೆ, ದೆವ್ವದ ‘ರೀಲ್ಸ್’ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಗಿಟ್ಟಿಸಿಕೊಳ್ಳುವ ಹುಚ್ಚಿಗೆ ಬಿದ್ದ ರಾಧೆ ಮತ್ತು ಚಿಂತನ ಎಂಬ ಪಾತ್ರಗಳು ಸುರ್ವಾಡಿಗೆ ಬಂದು ಪಡುವ ಪಜೀತಿಗಳು, ಈ ಬಿಗಿಯಾದ ಹಾರರ್ ಕಥೆಯ ನಡುವೆಯೂ ಓದುಗರಿಗೆ ಮುಗುಳ್ನಗು ತರಿಸುತ್ತವೆ.
ಸುರ್ವಾಡಿ ಹಳ್ಳಿಯೊಳಗೆ ಕಾಲಿಡುತ್ತಿದ್ದಂತೆ ಕಥೆಯ ವೇಗ ಮತ್ತು ನಿಗೂಢತೆ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲಿನ ಬಾಬಾಜಿಯನ್ನು ಅರುದ್ರ ಭೇಟಿಯಾದಾಗ, ಆಕೆಗೆ ತಿಳಿಯುವ ಮುನ್ನವೇ ಬಾಬಾಜಿಗೆ ಈ ಸಾವಿನ ಮೂಲಗಳ ಬಗ್ಗೆ ಅರಿವಿದ್ದಂತೆ ಭಾಸವಾಗುತ್ತದೆ.
ಊರವರ ಅಸಹಕಾರ, ಇದರ ಬೆನ್ನಲ್ಲೇ ನಡೆಯುವ ಬಾಬಾಜಿಯ ನಿಗೂಢ ಕೊಲೆ, ಮತ್ತೆ ಅದೇ ಹೂವಿನ ಪರಿಮಳ, ಅದರೊಟ್ಟಿಗೆ ಕೇಳಿಬರುವ ಹೆಣ್ಣಿನ ಗೆಜ್ಜೆಯ ನಾದ ಹಾಗೂ ಅವಳು ಸುಳಿದಲ್ಲೆಲ್ಲಾ ಸಣ್ಣಗೆ ಕೇಳುವ ಆ ಅನಾಮಿಕ ಹಾಡು—ಇವೆಲ್ಲವೂ ಸುರ್ವಾಡಿಯ ಆ ಬಂಗಲೆಯ ಅಭೇದ್ಯ ರಹಸ್ಯವನ್ನು ಮತ್ತಷ್ಟು ಕಗ್ಗಂಟಾಗಿಸುತ್ತವೆ.

ಎಸಿಪಿ ಅರುದ್ರ ಈ ಕೊಲೆಗಳ ಮೂಲವನ್ನು ಭೇದಿಸಲು ಶಕ್ತಳಾದಳೇ? ಆಕೆಯ ತಂದೆ ಅದೇ ಊರಿಗೆ ಬಂದು ಇಳಿದ ಹಿನ್ನೆಲೆಯಾದರೂ ಏನು? ಶರ್ವನ ಸುಗಂಧ ವಿಜ್ಞಾನದ ಪಾಂಡಿತ್ಯ ತನಿಖೆಗೆ ನೆರವಾಗುತ್ತದೆಯೇ? ಸುರ್ವಾಡಿಯ ಬಂಗಲೆಗೂ, ಆ ವಿಚಿತ್ರ ಹೂವಿನ ಪರಿಮಳಕ್ಕೂ ಮತ್ತು ಸರಣಿ ಕೊಲೆಗಳಿಗೂ ಇರುವ ನಂಟೇನು? ರಕ್ತಸಿಕ್ತವಾದ ಈ ಕೊಲೆಗಳ ಮೂಲಕ್ಕೆ ನಾಂದಿಯಾದ ಆ ಕಥೆಯಾದರೂ ಯಾವುದು?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಓದುಗರು ಈ ಕಾದಂಬರಿಯನ್ನು ಓದಲೇಬೇಕು. ನಿರ್ದೇಶಕ ಉಪೇಂದ್ರ ಅವರ ಸುಪ್ರಸಿದ್ಧ ‘ಶ್!’ ಚಿತ್ರದ ಅನುಭವವನ್ನು ನೆನಪಿಸುವ ಈ ಕೃತಿಯು, ಮೊದಲ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಕೂದಲು ನಿಮಿರುವಂತಹ ರೋಮಾಂಚನವನ್ನು ಉಂಟುಮಾಡುತ್ತದೆ. ಅಪರ್ಣ ಲಹರಿಯವರು ತಮ್ಮ ಅದ್ಭುತ ನಿರೂಪಣಾ ಶೈಲಿ ಹಾಗೂ ಬರವಣಿಗೆಯ ಅಗಾಧ ತಾಕತ್ತಿನಿಂದ ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಶ್ರೇಷ್ಠ ಇನ್ವೆಸ್ಟಿಗೇಶನ್ ಥ್ರಿಲ್ಲರ್ ಅನ್ನು ನೀಡಿದ್ದಾರೆ. ಪ್ರತಿಯೊಬ್ಬ ಓದುಗರ ಮನಸ್ಸನ್ನು ತಟ್ಟಿ, ಕೊಂಚ ಬೆಚ್ಚಿಬೀಳಿಸುವ ಈ ಪುಸ್ತಕ ಖಂಡಿತವಾಗಿಯೂ ಓದಲೇಬೇಕಾದ ಕೃತಿ. ಲೇಖಕಿಯಿಂದ ಇನ್ನೂ ಇದೇ ತರನಾದ ಹಲವು ಹತ್ತು ಅತ್ಯುತ್ತಮ ಕೃತಿಗಳು ಹೊರಹೊಮ್ಮಲಿ ಎಂದು ಆಶಿಸುತ್ತಾ, ಅವರಿಗೆ ತುಂಬು ಹೃದಯದ ಶುಭಾಶಯಗಳು.
- ಚೇತನ ಭಾರ್ಗವ – ಲೇಖಕರು, ಅರಮನೆತೋಟ
