ಆಕಾಶವಾಣಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರೂ ಖ್ಯಾತನಾಮರೂ ಆದ ಕನ್ಸೆಪ್ಟಾ ಫರ್ನಾಂಡೀಸ್ ಅವರು ಬರೆದ ‘ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದ ನಿರ್ಮಲಾ ಟ್ರಾವೆಲ್ಸ್’ ಪುಸ್ತಕವು ಕನ್ನಡ ಸಂಘ ಕಾಂತಾವರದ ‘ ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ಈ ಕೃತಿಯ ಕುರಿತು ಡಾ.ಪಾರ್ವತಿ ಜಿ.ಐತಾಳ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದ ನಿರ್ಮಲಾ ಟ್ರಾವೆಲ್ಸ್
ಲೇಖಕರು : ಕನ್ಸೆಪ್ಟಾ ಫರ್ನಾಂಡೀಸ್
ಪ್ರಕಾಶನ : ಕನ್ನಡ ಸಂಘ, ಕಾಂತಾವರ
ಪುಟಗಳು: ೫೬
ಬೆಲೆ : ರೂ.೬೦
ಸ್ವಂತ ಪ್ರತಿಭೆ ಹಾಗೂ ಪರಿಶ್ರಮಗಳ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಪ್ರವಾಸಪ್ರಿಯರ ಮನೆಮಾತಾಗಿರುವ ನಿರ್ಮಲಾ ಟ್ರಾವೆಲ್ಸ್ ಮಾಡಿರುವ ಸಾಧನೆಗಳು ಅಪರಿಮಿತ. ಇದು ಒಬ್ಬ ಮಹಿಳೆಯ ಯಶೋಗಾಥೆ. ಮಹಿಳಾ ಸಬಲೀಕರಣಕ್ಕೆ ಒಂದು ಪರ್ಯಾಯ ಅಭಿವ್ಯಕ್ತಿ. ಸಾವಿರ ಪುಟಗಳಷ್ಟು ಬರೆದರೂ ಮುಗಿಯದ ಅನುಭವ ಸಾಮ್ರಾಜ್ಯ. ಅದರ ಸ್ಥೂಲ ಪರಿಚಯವನ್ನಾದರೂ ಮಾಡುವ ಇಂತಹ ಒಂದು ಪುಟ್ಟ ಕೃತಿ ಕನ್ನಡದಲ್ಲಿ ಬಂದಿರುವುದು ಬಹಳ ಸಂತೋಷದ ವಿಷಯ.
ಈ ಪುಸ್ತಕದ ೪೮ ಪುಟಗಳಲ್ಲಿ ಕನ್ಸೆಪ್ಟಾ ಅವರು ಮಂಗಳೂರಿನ ನಿರ್ಮಲಾ ಪೈ ಮತ್ತು ಉಪೇಂದ್ರ ಕಾಮತರ ಮದುವೆ ನಿಶ್ಚಯವಾದ ದಿನದಿಂದ ತೊಡಗಿ ಬಡತನದ ನಡುವೆಯೂ ಅವರಿಬ್ಬರೂ ಸೇರಿ ತೀರಾ ಸಣ್ಣ ಮಟ್ಟದಲ್ಲಿ ‘ನಿರ್ಮಲಾ ಟ್ರಾವೆಲ್ಸ್’ ಎಂಬ ಸಂಸ್ಥೆಯನ್ನು ಆರಂಭಿಸಿ ಕ್ರಮೇಣ ಯಶಸ್ಸಿನ ಶಿಖರವನ್ನೇರಿ ಸುವರ್ಣೋತ್ಸವವನ್ನು ಆಚರಿಸುವ ತನಕದ ಆರಂಭದ ಏಳುಬೀಳುಗಳನ್ನೂ ನಂತರ ಗಳಿಸಿದ ಅಭೂತಪೂರ್ವ ಯಶಸ್ಸಿನ ಚಿತ್ರಣವನ್ನೂ ಅತ್ಯಂತ ಕ್ರಮಬದ್ಧವಾಗಿ ನೀಡುತ್ತಾರೆ. ಹಂತ ಹಂತವಾಗಿ ಅವರು ಮೇಲೇರುವ ಕಥೆ ಅತ್ಯಂತ ಚೇತೋಹಾರಿ.

ಉಪೇಂದ್ರ ಕಾಮತ್ ತಮ್ಮ ಉದ್ಯೋಗವನ್ನು ಆರಂಭಿಸಿದ್ದು ಮುಂಬಯಿನಲ್ಲಿ. ಅದು ಬೇರೆಯವರ ಕೈಕೆಳಗೆ. ಆದರೆ ಊರಿಗೆ ಬಂದು ಸ್ವತಂತ್ರವಾಗಿ ಏನಾದರೂ ಮಾಡುವುದು ಲೇಸು ಎಂದೆಣಿಸಿ ಅವರು ಮಂಗಳೂರಿಗೆ ಬಂದು ಮುಂಬಯಿನಲ್ಲಿ ಅವರು ಕೆಲಸ ಮಾಡುತ್ತಿದ್ದ Personal Services Beauro ಎಂಬ ಸಂಸ್ಥೆಯ ಸಹಕಾರ್ಒಂದಿಗೆ Personal Discount Card ಎಂಬ ಒಂದು ಸ್ಕೀಮ್ ಆರಂಭಸಿ. ಅದರಲ್ಲಿ ಸಣ್ಣ ಮಟ್ಟಿನ ಯಶಸ್ಸು ಸಾಧಿಸಿ ಯುವ ಉದ್ಯಮಿ ಎನ್ನುವ ಹೆಸರು ಗಳಿಸಿದರು. ಮದುವೆಯಾಗುವುದಕ್ಕೆ ಮೊದಲೇ ಕಾರು ಹಾಗೂ ಇತರ ಲಘು ವಾಹನಗಳನ್ನು ಬಾಡಿಗೆಗೆ ಕೊಡುವ ಒಂದು ಸಣ್ಣ ಉದ್ಯಮವನ್ನು ಆರಂಭಿಸಿದ್ದರು. ಬಿ.ಎಸ್.ಸಿ.ಪದವೀಧರೆಯಾದ ನಿರ್ಮಲಾ ಪೈ ಯವರನ್ನು ಮದುವೆಯಾದ ನಂತರ ೧೯೭೧ರಲ್ಲಿ ಅದಕ್ಕೆ ‘ನಿರ್ಮಲಾ ಟ್ರಾವೆಲ್ಸ್ ‘ ಎಂದು ಹೆಸರಿಟ್ಟರು. ಕೈಯಲ್ಲಿ ದುಡ್ಡಿಲ್ಲದ ದಿನಗಳಲ್ಲಿ ಅದೊಂದು ಹುಚ್ಚು ಸಾಹಸವಾಗಿತ್ತು. ಇವತ್ತಿನ ಹಾಗೆ ಜನರಿಗೆ ಪ್ರವಾಸದ ಖಯಾಲಿ ಏನೇನೂ ಇಲ್ಲದ ದಿನಗಳವು. ಹತ್ತು ರೂಪಾಯಿ ಖರ್ಚು ಮಾಡಲೂ ಜನರು ಹಿಂಜರಿಯುತ್ತಿದ್ದರು.ಆರಂಭದಲ್ಲಿ ಹತ್ತಿರದ ಸ್ಥಳಗಳಿಗೆ ಬಾಡಿಗೆ ಬಸ್ಸಿನಲ್ಲಿ ಪ್ರವಾಸಿಗರನ್ನು ಕರೆದೊಯ್ದರು. ಪ್ರವಾಸಿಗರೊಂದಿಗೆ ಗಂಡ-ಹೆಂಡತಿಯರಿಬ್ಬರೂ ಬಹಳ ಚೆನ್ನಾಗಿ ಸ್ನೇಹಪೂರ್ಣವಾಗಿ ವರ್ತಿಸುತ್ತಿದ್ದರು. ಎಲ್ಲರ ಅಗತ್ಯಗಳನ್ನು ಪ್ರೀತಿಯಿಂದ ಪೂರೈಸುತ್ತಿದ್ದರು. ಕ್ರಮೆಣ ಜನರಿಗೆ ಅವರಲ್ಲಿ ವಿಶ್ವಾಸ ಹುಟ್ಟಿತು. ದಕ್ಷಿಣ ಭಾರತದ ಪ್ರವಾಸಗಳನ್ನು ಕೈಗೊಂಡಾಗ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಕೊನೆಗೆ ರೈಲಿನಲ್ಲಿ ಉತ್ತರ ಭಾರತದ ತೀರ್ತಕ್ಷೇತ್ರಗಳು ಹಾಗೂ ಪ್ರೆಕ್ಷಣೀಯ ಸ್ಥಳಗಳಿಗೆ ಹೋಗಲಾರಂಭಿಸಿದರು. ಅತ್ಯಂತ ಪರಿಮಿತ ಸೌಕರ್ಯಗಳಿದ್ದ, ಸ್ಥಿರದೂರವಾಣಿಯ ವ್ಯವಸ್ಥೆಯೂ ಸಾಕಷ್ಟು ಇಲ್ಲದಿದ್ದ ಅಂದಿನ ದಿನಗಳಲ್ಲಿ ಪ್ರವಾಸದ ಸಂಯೋಜನೆ ಅನ್ನುವುದು ಒಂದು ಹರಸಾಹಸವಾಗಿತ್ತು. ಉತ್ತರಭಾರತದ ಪ್ರವಾಸಕ್ಕೆ ೪೫ ದಿನಗಳು ಹಿಡಿಯುತ್ತಿದ್ದವು. ಕರೆದುಕೊಂಡು ಹೋದ ಎಷ್ಟೋ ಮಂದಿಗೆ ಅಲ್ಲಿನ ಆಹಾರ ತಿಂಡಿ ತಿನಸುಗಳು ಸ್ವಲ್ಪವೂ ಹಿಡಿಸದಿರುವುದನ್ನು ಗಮನಿಸಿದ ಕಾಮತರು ಅಡುಗೆಯವರನ್ನು ಜತೆಗೆ ಕರೆದೊಯ್ದು ಊರಿನ ಅಡುಗೆಯನ್ನೇ ನೀಡುವ ವ್ಯವಸ್ಥೆ ಮಾಡಿದರು. ಹೀಗೆ ವರ್ಷದಿಂದ ವರ್ಷಕ್ಕೆ ನಿರ್ಮಲಾ ಟ್ರಾವೆಲ್ಸ್ ಜನಪ್ರಿಯವಾಗುತ್ತ ಹೋಯಿತು.
ಒಂದು ಬಾರಿ ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಒಬ್ಬ ಕಾಮತರ ಹತ್ತಿರದ ಬಂದುವೊಬ್ಬರ ಆಕಸ್ಮಿಕ ಮರಣದ ವಾರ್ತೆ ಬಂತು. ಕಾಮತರು ಊರಿಗೆ ಬರಲೇ ಬೇಕಾದ ಪರಿಸ್ಥಿತಿ. ಅವರು ಹೆಂಡತಿಗೆ ಧೈರ್ಯ ಹೇಳಿ ಪ್ರವಾಸವನ್ನು ಒಬ್ಬರೇ ನಿರ್ವಹಿಸಲು ಹೇಳಿದರು. ಅದು ಮೊದಲ ಅನುಭವವಾದರೂ ನಿರ್ಮಲಾ ಕಾಮತ್ ಆ ಕೆಲಸದಲ್ಲಿ ಯಶಸ್ವಿಯಾದರು. ಮುಂದೆ ಎಷ್ಟೋ ಬಾರಿ ಪ್ರವಾಸಿಗರನ್ನು ಕರೆದೊಯ್ಯುವ ಬಸ್ಸನ್ನು ಅವರೇ ಡ್ರೈವ್ ಮಾಡಿ ಎಲ್ಲರಿಂದ ಷಹಭಾಸ್ ಗಿರಿ ಪಡೆದಿದ್ದರು.
ಕೆಲವು ವರ್ಷಗಳ ನಂತರ ,೮೦ರ ದಶಕದ ಆರಂಭದಲ್ಲಿ ಸಂಸ್ಥೆಯು ಸಾಲ ಮಾಡಿ ಒಂದು ಐಷಾರಾಮಿ ಬಸ್ಸನ್ನು ಕೊಂಡುಕೊಂಡಿತು. ಆಗಿನ್ನೂ ಮನೆಮನೆಗಳಿಗೆ ಟಿ.ವಿ.ಬಂದಿರಲಿಲ್ಲ. ಬಸ್ಸಿನೊಳಗೆ ಟಿ.ವಿ.ಇರುವುದನ್ನು ಪ್ರವಾಸಿಗರು ತುಂಬಾ ಇಷ್ಟಪಟ್ಟರು. ಕ್ರಮೇಣ ಬಸ್ಸುಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಕಛೇರಿ ದೊಡ್ಡದಾಯಿತು. ಸಹಾಯಕರು ಮತ್ತು ಕೆಲಸಗಾರರೂ ಹೆಚ್ಚಾದರು. ಅಷ್ಟು ಹೊತ್ತಿಗೆ ವಿಮಾನ ಪ್ರಯಾಣವನ್ನು ಬಯಸುವವರೂ ವಿದೇಶ ಪ್ರವಾಸಗಳು ಬೇಕು ಅನ್ನುವವರೂ ಹೆಚ್ಚಾಗಿ ಬಿಟ್ಟಿದ್ದರಿಂದ ‘ನಿರ್ಮಲಾ ಇಂಟರ್ನ್ಯಾಷನಲ್ ಟ್ರಾವೆಲ್ಸ್’ ಕೂಡಾ ಅರಂಭವಾಯಿತು.
ಒಮ್ಮೆ ರೈಲಿನೊಳಗೆ ಒಬ್ಬರು ಹೃದಯಾಘಾತದಿಂದ ಮರಣ ಹೊಂದಿದಾಗ ಅವರು ತುಂಬಾ ಅಘಾತಕ್ಕೊಳಗಾದರು. ಎಲ್ಲ ವ್ಯವಸ್ಥೆ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಇನ್ನೊಮ್ಮೆ ಪ್ರವಾಸಿಗರ ದೊಡ್ಡ ಮೊತ್ತದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದರು. ಗುರುತು ಪರಿಚಯವಿಲ್ಲದ ಒಂದು ಊರಿನಲ್ಲಿ ಪೋಲಿಸ್ ಕಂಪ್ಲೇಂಟ್ ಕೊಟ್ಟು ಅವುಗಳನ್ನು ವಾಪಾಸು ಪಡೆಯಲು ಅವರು ತುಂಬಾ ಒದ್ದಾಡಬೇಕಾಯಿತು .
ಉಪೇಂದ್ರ ಕಾಮತರು ಹೆಂಡತಿಯು ಸ್ವತಃ ಓರ್ವ ಉದ್ಯಮಿಯಾಗಿ ಬೆಳೆಯಲು ತುಂಬಾ ಬೆಂಬಲ ನೀಡಿದರು. ಮಂಗಳೂರಿನಲ್ಲಿ ಆಗಿನ್ನೂ ಮಹಿಳಾ ಉದ್ಯಮಿಗಳು ಹೆಚ್ಚು ಇರಲಿಲ್ಲ. ಬಸ್ಸಿನಂಥ ಭಾರದ ವಾಹನಗಳನ್ನು ಚಲಾಯಿಸುವವರಂತೂ ಯಾರೂ ಇರಲಿಲ್ಲ. ನಿರ್ಮಲಾ ಅವರು ಪ್ರವಾಸದ ನಿರ್ವಾಹಕಿಯಾಗಿ ಬಸ್ ಚಲಾಯಿಸುವ ಸಾಮರ್ಥ್ಯವುಳ್ಳವರಾಗಿ ಬಹಳ ಪ್ರಸಿದ್ಧರಾಗಿ ಬಿಟ್ಟರು.
ಮಹಿಳಾ ಉದ್ಯಮಿ ಅನ್ನುವ ನೆಲೆಯಲ್ಲಿ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದವು.
ಸದಾ ಮಹಿಳಾ ಪರವಾಗಿ ಚಿಂತಿಸುತ್ತಿದ್ದ ನಿರ್ಮಲಾ ಅವರು ತಮ್ಮ ಕಛೇರಿಗೆ ಉದ್ಯೋಗಿಗಳನ್ನು ಅಯ್ಕೆ ಮಾಡುವಾಗಲೂ ಹೆಣ್ಣು ಮಕ್ಕಳಿಗೇ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಮಹಿಳಾ ಉದ್ಯೋಗಿಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸಿ ಕೊಟ್ಟರು. ಅವರ ಮಗಳು ವತಿಕಾ ಕಾಮತ್ ಎಂ.ಬಿ.ಎ..ಮಾಡಿ ತಾಯಿಯ ಹಾದಿಯನ್ನೇ ಹಿಡಿದರು. ಅವರು ಶಿಕ್ಷಣ ಮುಗಿಸಿ ಸಂಸ್ಥೆಗೆ ಬರುವ ಹೊತ್ತಿಗೆ ಸಂಸ್ಥೆಯು ಅದಾಗಲೇ ಇಂಟರ್ ನ್ಯಾಷನಲ್ ಪ್ರವಾಸಗಳನ್ನು ಆರಂಭಿಸಿತ್ತು. ವತಿಕಾ ಅದರ ಚುಕ್ಕಾಣಿ ಹಿಡಿದರು. ಅದು ‘ ವತಿಕಾ ಇಂಟರ್ನ್ಯಾಷನಲ್ ಟ್ರಾವೆಲ್ಸ್’ ಎಂದು ಪ್ರಸಿದ್ಧವಾಯಿತು.. ೨೦೨೪ರಲ್ಲಿ ನಿರ್ಮಲಾ ಕಾಮತ್ ತೀರಿಕೊಂಡ ನಂತರ ವತಿಕಾ ಅವರೇ ತಂದೆಯ ಮಾರ್ಗದರ್ಶನದಡಿ ಎಲ್ಲ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ಕನ್ಸೆಪ್ಟಾ ನಿರ್ಮಲಾ ಟ್ರಾವೆಲ್ಸ್ ಬೆಳೆದು ಬಂದ ಬಗೆಯನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆಕಾಶವಾಣಿಯ ಯೋಜನೆಗಳನ್ನು ಸದಾ ಶಿಸ್ತುಬದ್ಧತೆಯಿಂದ ಪರ್ಫೆಕ್ಷನಿಸ್ಟ್ ಆಗಿ ಸಿದ್ಧಪಡಿಸುತ್ತಿದ್ದ ಅವರ ದೋಷ ಮುಕ್ತವಾದ ಸುಂದರ ನಿರೂಪಣಾ ಶೈಲಿ ಪುಸ್ತಕದ ಆಕರ್ಷಣೆಯನ್ನು ಹೆಚ್ಚಿಸಿದೆ.
- ಡಾ.ಪಾರ್ವತಿ ಜಿ.ಐತಾಳ್.

ಪರಿಚಯ : ಖ್ಯಾತ ಲೇಖಕಿ ಪಾರ್ವತಿ ಜಿ.ಐತಾಳ್ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳಲ್ಲಿ ಪರಿಣತರು. ಈ ಎಲ್ಲ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪ್ರಸಿದ್ಧ ಲೇಖಕರ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಅನುವಾದ ಮತ್ತು ಸ್ವತಂತ್ರ ಕಥೆ-ಕಾದಂಬರಿ ವಿಮರ್ಶೆಗಳು ಸೇರಿದಂತೆ ಇದುವರೆಗೆ ನೂರಾ ಐದು ಕೃತಿಗಳನ್ನು ಪ್ರಕಟಿಸಿದ್ದಾರೆ.
ಕನ್ಸೆಪ್ಟಾ ಫರ್ನಾಂಡೀಸ್ :
ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಇವರ ಸಾಕ್ಷ್ಯ ರೂಪಕಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಕನ್ನಡ ನಾಟಕ ಮತ್ತು ರೂಪಕಗಳಿಗೆ ನಾಲ್ಕು ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅನುವಾದ ಇವರ ಆಸಕ್ತಿಯ ಕ್ಷೇತ್ರ. ಕೊಂಕಣಿ, ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ನೂರಾರು ಲೇಖನಗಳನ್ನು ಅನುವಾದ ಮಾಡಿದ್ದಾರೆ.