‘ಉಳಿದು ಹೋದ ಶೂನ್ಯ’ ಕವನ

ಕೊರತೆ ಪ್ರೀತಿಯದಲ್ಲ, ನಮ್ಮ ಬದುಕಿನಲ್ಲಿ ಒಂಟಿಯಾಗಿ ಉಳಿದುಬಿಟ್ಟ ಆ ವ್ಯಕ್ತಿಯದ್ದು… ರಾಜಾಬಾಬು ಕಂಚರ್ಲ ಅವರ ತೆಲುಗು ಮೂಲದ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಧನಪಾಲ‌ ನಾಗರಾಜಪ್ಪ ಅವರು. ಪೂರ್ತಿಯಾಗಿ ಕವಿತೆಯನ್ನು ಓದಿ…

ತೆಲುಗು ಮೂಲ : ರಾಜಾಬಾಬು ಕಂಚರ್ಲ

ನಮ್ಮ ಸುತ್ತಲೂ
ಎಷ್ಟೇ ಜನರಿದ್ದರೂ
ಮನಸ್ಸು ಮಾತ್ರ
ಒಂಟಿ ಕೋಣೆಯಂತೆ
ನಿಶ್ಯಬ್ದವಾಗಿ ಬದಲಾಗಿಬಿಡುತ್ತದೆ

ಎಷ್ಟೇ ಮಾತುಗಳು ಕೇಳಿಸಿದರೂ
ಒಂದು ದನಿಗಾಗಿ
ಕಿವಿಗಳು ನಿಮಿರಿಕೊಂಡು
ಕಾಯುತ್ತಲೇ ಇರುತ್ತವೆ

ಕೆಲವೊಮ್ಮೆ…
ಕೊರತೆ ಪ್ರೀತಿಯದಲ್ಲ
ನಮ್ಮ ಬದುಕಿನಲ್ಲಿ
ಒಂಟಿಯಾಗಿ ಉಳಿದುಬಿಟ್ಟ
ಆ ವ್ಯಕ್ತಿಯದ್ದು

ಆ ಒಂದು ನಗು…
ಮತ್ತೆ ಎಂದಿಗೂ ಕೇಳಿಸದ ಹಾಡು
ಆ ಒಂದು ನೋಟ…
ಮತ್ತಾವ ನೋಟವೂ ತುಂಬಲಾರದ ಖಾಲಿತನ

ಕಾಲ ನಡೆಯುತ್ತಲೇ ಇರುತ್ತದೆ
ಜೀವನ ತನ್ನ ಕೆಲಸಗಳಲ್ಲಿ ಮುಳುಗಿಹೋಗುತ್ತದೆ
ನಮ್ಮ ಸುತ್ತಲೂ ಇರುವ ಜನರೊಂದಿಗೆ
ದಿನಗಳು ನಗುವಿನೊಂದಿಗೆ ಕಳೆದುಹೋಗುತ್ತವೆ

ಆದರೆ…
ಮನಸ್ಸಿನ ಒಂದು ಮೂಲೆಯಲ್ಲಿ
ಆ ಖಾಲಿತನ ಹಾಗೆಯೇ ಉಳಿದುಬಿಡುತ್ತದೆ
ಏಕೆಂದರೆ…
ಕೆಲವರು ನಮ್ಮ ಬದುಕಿನಲ್ಲಿ
ಕೇವಲ ಒಂದು ಜಾಗವಲ್ಲ;
ಒಂದು ಪ್ರಪಂಚವೇ ಆಗಿರುತ್ತಾರೆ

ಅವರು ಹೊರಟುಹೋದ ಮೇಲೆ
ಖಾಲಿಯಾಗುವುದು ಮನೆಯಲ್ಲ;
ನಮ್ಮೊಳಗಿನ ಒಂದು ಪ್ರಪಂಚ
ಅದೇ ಅಸಲಿ ವಿಷಾದ…
ತನ್ನ ಸುತ್ತಲೂ ಎಷ್ಟೇ ಜನರಿದ್ದರೂ
ಆ ಒಬ್ಬರಿಲ್ಲದ ಬದುಕು
ಎಂದೆಂದಿಗೂ ಉಳಿದುಹೋಗುವ ಶೂನ್ಯ


  • ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading